Latestಚಿಂತನೆ

ಚಿಂತನೆ / ಮನುವಿನ ದೃಷ್ಟಿಯಲ್ಲಿ ಮಹಿಳೆಯರು- ರಂಜಾನ್ ದರ್ಗಾ

ಮನುಸ್ಮೃತಿಯಲ್ಲಿ ಮನು ಮಹರ್ಷಿ ಮಹಿಳೆಯರ ಕುರಿತು ಬರೆದದ್ದನ್ನು ಅರ್ಥೈಸಿಕೊಂಡರೆ ಸುಸ್ತಾಗಿ ಸಂಕಟಪಡುವುದು ಗ್ಯಾರಂಟಿ. ಹೆಣ್ಣಿನ ಬಗ್ಗೆ ಒಂದು ಕ್ರೂರ ಮತ್ತು ಅತಿಭಯಾನಕ ಚಿಂತನಾಕ್ರಮವನ್ನು ಮನು ತನ್ನ ಧರ್ಮಗ್ರಂಥದಲ್ಲಿ ಕೆತ್ತಿಟ್ಟಿದ್ದಾನೆ. ಸಹಸ್ರ ಸಹಸ್ರ ವರ್ಷಗಳ ನಂತರವೂ ಈ ಮನೋಭಾವ ಮತ್ತು ಪುರುಷಪಾರಮ್ಯ ನಮ್ಮ ಸಮಾಜದಲ್ಲಿ ಉಳಿದುಕೊಂಡಿವೆ ಎನ್ನುವುದನ್ನು ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯಗಳು ಎತ್ತಿ ತೋರಿಸುತ್ತಿವೆ. ಇದನ್ನು ಬದಲಿಸುವ ಅಗತ್ಯವನ್ನು ನಮ್ಮ ಯುವಜನತೆ ಮನಗಾಣಬೇಕು.

ಮೂಲನಿವಾಸಿಗಳು ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬಂದಂಥ ಮಾತೃಪ್ರಧಾನ ವ್ಯವಸ್ಥೆಯ ಬುಡಕಟ್ಟುಗಳನ್ನು ಮತ್ತು ಮೊಹೆಂಜೊದಾರೊದಂಥ ಮಾತೃಪ್ರಧಾನ ನಾಗರಿಕತೆಯನ್ನು ಪಿತೃಪ್ರಧಾನ ನಾಗರಿಕತೆಗಳು ಮೊದಲಿಗೆ ಹಾಳುಮಾಡಿದವು. ನಂತರ ಹೆಣ್ಣನ್ನು ಮಣ್ಣು ಹೊನ್ನಿಗೆ ಸಮನಾಗಿ ಕಾಣತೊಡಗಿದವು. ಅರ್ಧ ಜಗತ್ತಿನ ಪ್ರತೀಕವಾದ ಹೆಣ್ಣಿನ ಅಸ್ಮಿತೆಯನ್ನು ಹಾಳುಮಾಡುವುದರಲ್ಲೇ ತಲ್ಲೀನವಾಗುತ್ತ ಇಡೀ ಜಗತ್ತನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದವು.

ಭರತಖಂಡದ ನಾಲ್ಕೂ ವರ್ಣಗಳ ಹೆಣ್ಣುಮಕ್ಕಳು ಅದು ಹೇಗೆ ಸಹಸ್ರಾರು ವರ್ಷಗಳಿಂದ ತಮ್ಮ ವ್ಯಕ್ತಿತ್ವ ಕಾಪಾಡಿಕೊಂಡು ಬದುಕಿದ್ದಾರೆ ಎಂಬುದಕ್ಕೆ ಯಾರಿಂದಲೂ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಅನಿಸುತ್ತದೆ. “ಸ್ತ್ರೀ ಶಕ್ತಿಯೇ ಅಂಥದ್ದು” ಎಂದು ಸಮಾಧಾನಪಟ್ಟುಕೊಂಡು ಸುಮ್ಮನಿರುವುದೊಂದೇ ನಮಗೆ ಉಳಿದಿರುವ ಮಾರ್ಗ ಅಂದುಕೊಂಡಿರಬಹುದು.

“ಅಬಲಾವೃಂದ ಸಮಸುಖ ದುಃಖಿಗಳ್” ಎಂದು ಕುಮಾರವ್ಯಾಸನ ದ್ರೌಪದಿ ಹೇಳಿದ್ದು ಜಗತ್ತಿನ ಎಲ್ಲ ದೇಶಗಳಿಗೆ, ಧರ್ಮಗಳಿಗೆ ಮತ್ತು ನಾಗರಿಕತೆಗಳಿಗೆ ಅನ್ವಯಿಸುವಂಥದ್ದು.

ಹೆಣ್ಣನ್ನು ತಹಬಂದಿಗೆ ತರುವ ಹುಚ್ಚು ಪ್ರಯತ್ನದಲ್ಲೇ ಸಮಯ ವ್ಯರ್ಥ ಮಾಡಿಕೊಳ್ಳುವ ಮೂಲಕ ಜಗತ್ತಿನ ಎಲ್ಲ ಪಿತೃಪ್ರಧಾನ ನಾಗರಿಕತೆಗಳು ಕುಂಟುತ್ತ ಸಾಗಬೇಕಾಯಿತು.

ಸವರ್ಣಾಗ್ರೇ ದ್ವಿಜಾತೀನಾಂ ಪ್ರಶಸ್ತಾ ದಾರಕರ್ಮಣಿ|
ಕಾಮತಸ್ತು ಪ್ರವೃತ್ತಾನಾಮಿಮಾಃ ಸ್ಯುಃ ಕ್ರಮಶೋ ವರಾಃ|

(ದ್ವಿಜಾತಿಯವರಿಗೆ [ಬ್ರಾಹ್ಮಣ, ಕ್ಷತ್ರಿಯ, ವೈಶ್ಯ] ಮೊದಲ ವಿವಾಹದಲ್ಲಿ ತಮ್ಮ ತಮ್ಮ ಜಾತಿಯ ಕನ್ಯೆಯೇ ಆಗಬೇಕು. ದೇಹಸುಖಕ್ಕಾಗಿ ನಂತರ ಮಾಡಿಕೊಳ್ಳುವ ವಿವಾಹದಲ್ಲಿ ಬೇಕಾದ ಜಾತಿಯವಳನ್ನು ಮದುವೆಯಾಗಬಹುದು.) – ಮನುಸ್ಮೃತಿ 3 – 12

ಸವರ್ಣೀಯರಾದ ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಸಂತಾನೋತ್ಪತ್ತಿಗಾಗಿ ತಮ್ಮ ವರ್ಣದ ಹೆಣ್ಣನ್ನೇ ಮೊದಲ ಪತ್ನಿಯಾಗಿ ಸ್ವೀಕರಿಸಬೇಕು. ಆ ಸವರ್ಣೀಯ ಪತ್ನಿಗೆ ಹುಟ್ಟಿದ ಮಕ್ಕಳೇ ವರ್ಣಸಂಕರವಾಗದಂತೆ ನೋಡಿಕೊಳ್ಳುವ ಕುಲೋದ್ಧಾರಕರು. ನಂತರ ಕಾಮಕ್ಕಾಗಿ ಮದುವೆಯಾಗುವ ಶೂದ್ರ ಸ್ತ್ರೀಯರಿಗೆ ಮಕ್ಕಳಾದರೆ ಅವರು ಆ ಮನೆತನದ ಕುಲೋದ್ಧಾರಕರಾಗುವುದಿಲ್ಲ. ಹೀಗೆ ಮನು ವರ್ಣಗಳ ಪರಿಶುದ್ಧತೆಯನ್ನು ಉಳಿಸಿಕೊಳ್ಳುವ ಸಲಹೆ ನೀಡುತ್ತಾನೆ.

ಸವರ್ಣೀಯರು ತಮ್ಮ ಅಸ್ತಿತ್ವಕ್ಕಾಗಿ ವರ್ಣವ್ಯವಸ್ಥೆಯನ್ನು ಉಳಿಸಿಕೊಳ್ಳಲೇಬೇಕು. ಆದರೆ ಲೈಂಗಿಕತೃಷೆಯನ್ನು ಈಡೇರಿಸಿಕೊಳ್ಳಲು ಶೂದ್ರರ ಹೆಣ್ಣುಗಳನ್ನು ಬಳಸಿಕೊಳ್ಳಬಹುದು.
ವರ್ಣಸಂಕರವಾಗದಂತೆ ನೋಡಿಕೊಳ್ಳುವುದಕ್ಕೆ ಮಾತ್ರ ಸವರ್ಣೀಯ ಮಹಿಳೆಯರು ಮುಖ್ಯವೇ ಹೊರತು ಇನ್ನಾವ ಕಾರಣಕ್ಕೂ ಅಲ್ಲ ಎಂಬುದು ಮನು ಮಹರ್ಷಿಯ ತಾತ್ಪರ್ಯ.

ಶೂದ್ರೈವ ಭಾರ್ಯಾ ಶೂದ್ರಸ್ಯ ಸಾ ಚ ಸ್ವಾ ಚ ವಿಶಃ ಸ್ಮೃತೇ|
ತೇ ಚ ಸ್ವಾ ಚೈವ ರಾಜ್ಞಶ್ಚ ತಾಶ್ಚ ಸ್ವಾ ಚಾಗ್ರ ಜನ್ಮನಃ||

(ಶೂದ್ರನಿಗೆ ಶೂದ್ರಳೇ ಹೆಂಡತಿಯಾಗಬೇಕು. ವೈಶ್ಯನಿಗೆ ವೈಶ್ಯ ಜಾತಿಯ ಹಾಗೂ ಶೂದ್ರ ಜಾತಿಯ ಹೆಣ್ಣಾಗಬಹುದು. ಕ್ಷತ್ರಿಯನಿಗೆ ಕ್ಷತ್ರಿಯ ಜಾತಿಯವಳು, ವೈಶ್ಯ ಜಾತಿಯವಳು ಹಾಗೂ ಶೂದ್ರಳು ಹೆಣ್ಣಾಗಬಹುದು. ಬ್ರಾಹ್ಮಣನಿಗೆ ಬ್ರಾಹ್ಮಣ ಸ್ತ್ರೀಯೂ ಕ್ಷತ್ರಿಯಳೂ ವೈಶ್ಯಳೂ ಶೂದ್ರಳೂ ಹೆಂಡತಿಯಾಗಬಹುದು.) – ಮನುಸ್ಮೃತಿ 3 – 13

ಶೂದ್ರರು ಯಾವ ಕಾಲಕ್ಕೂ ಶೂದ್ರಳನ್ನೇ ಮದುವೆಯಾಗಬೇಕು. ಅವರಿಗೆ ಸವರ್ಣೀಯರ ಹೆಣ್ಣನ್ನು ಮದುವೆಯಾಗುವ ಹಕ್ಕಿಲ್ಲ. ಆದರೆ ಬ್ರಾಹ್ಮಣನಾದವನು ಇತರ ಹೆಂಡಂದಿರರಾಗಿ ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಹೆಣ್ಣುಗಳನ್ನು ಮದುವೆಯಾಗಬಹುದು.

ಕ್ಷತ್ರಿಯರು ತಮ್ಮ ವರ್ಣದವಳನ್ನು ಮದುವೆಯಾದನಂತರ ವೈಶ್ಯ ಹಾಗೂ ಶೂದ್ರ ವರ್ಣದವಳನ್ನು ಮದುವೆಯಾಗಬಹುದು. ಆದರೆ ಬ್ರಾಹ್ಮಣ ಕನ್ಯೆಯನ್ನು ಮದುವೆ ಆಗುವಹಾಗಿಲ್ಲ!

ವೈಶ್ಯರು ತಮ್ಮ ವರ್ಣದವಳನ್ನು ಮದುವೆಯಾದನಂತರ ಶೂದ್ರ ಕನ್ಯೆಯನ್ನು ಮದುವೆಯಾಗಬಹುದು. ಆದರೆ ಬ್ರಾಹ್ಮಣ ಹಾಗೂ ಕ್ಷತ್ರಿಯ ಹೆಣ್ಣುಗಳನ್ನು ಮದುವೆಯಾಗುವಹಾಗಿಲ್ಲ!

ಹೀಗೆ ಮನು ಮೊದಲಿಗೆ ಬ್ರಾಹ್ಮಣನ ಮಹತ್ವವನ್ನು ಸಾರುತ್ತಾನೆ. ನಂತರ ಕ್ಷತ್ರಿಯನ ಮಹತ್ವ ಸಾರುತ್ತಾನೆ. ಕೊನೆಗೆ ವೈಶ್ಯನ ಮಹತ್ವವನ್ನೂ ಸಾರುತ್ತಾನೆ. ಆದರೆ ಸವರ್ಣೀಯನಲ್ಲದ ಶೂದ್ರನನ್ನು ಕಡೆಗಣಿಸುತ್ತಾನೆ. ಈ ಪ್ರಕಾರ ಶ್ರೇಣೀಕೃತ ವರ್ಣವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಾನೆ.

ನ ಬ್ರಾಹ್ಮಣ ಕ್ಷತ್ರಿಯಯೋರಾಪದ್ಯಪಿ ತಿಷ್ಠತೋಃ|
ಕಸ್ಮಿಂಶ್ಚಿದಪಿ ವೃತ್ತಾಂತೇ ಶೂದ್ರಾ ಭಾರ್ಯೋಪದಿಶ್ಯತೇ||

(ಎಂಥ ಅನಿವಾರ್ಯವಾದ ಸಂದರ್ಭದಲ್ಲೂ ಬ್ರಾಹ್ಮಣ ಹಾಗೂ ಕ್ಷತ್ರಿಯ ವರಗಳು ಶೂದ್ರ ಸ್ತೀಯನ್ನು ಪ್ರಥಮ ಹೆಂಡತಿ ಎಂದು ವಿವಾಹ ಮಾಡಿಕೊಳ್ಳಬಾರದು.) ಮನುಸ್ಮೃತಿ 3 – 14

ಯಾವಕಾಲಕ್ಕೂ ಸವರ್ಣೀಯರು ಶೂದ್ರ ಸ್ತ್ರೀಯರನ್ನು ಪ್ರಥಮ ಹೆಂಡತಿಯಾಗಿ ಸ್ವೀಕರಿಸಬಾರದು ಎಂದು ಕಟ್ಟಪ್ಪಣೆ ಮಾಡುತ್ತಾನೆ. ತಮ್ಮ ತಮ್ಮ ವರ್ಣಗಳ ಕನ್ಯೆಯರನ್ನೇ ಪ್ರಥಮ ಹೆಂಡತಿಯಾಗಿ ಸ್ವೀಕರಿಸಲು ಆದೇಶಿಸುತ್ತಾನೆ. ಇದು ಆಯಾ ವರ್ಣಗಳ ಪುರುಷರು ತಮ್ಮ ವರ್ಣಗಳ ಸ್ತ್ರೀಯರಿಗೆ ಮತ್ತು ವಂಶ ಪರಿಶುದ್ಧತೆಗೆ ಕೊಡುವ ಗೌರವ ಎಂಬುದು ಮನುವಿನ ತರ್ಕವಾಗಿದೆ.

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ|
ಯತ್ತೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ||

(ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಯಜ್ಞ ಪೂಜೆಗಳು ನಿಷ್ಫಲವಾಗುತ್ತವೆ.) – ಮನುಸ್ಮೃತಿ 3 – 56

ಹೀಗೆ ವರ್ಣಪ್ರಜ್ಞೆಯೊಂದಿಗೆ ತಮ್ಮ ತಮ್ಮ ಸವರ್ಣೀಯ ನಾರಿಯರಿಗೆ ಮದುವೆಯಲ್ಲಿ ಪ್ರಥಮ ಆದ್ಯತೆ ಕೊಡುವ ಮೂಲಕ ಗೌರವ ಸನ್ಮಾನ ದೊರೆತಾಗ ವರ್ಣಸಂಕರ ಆಗುವುದಿಲ್ಲ. ಆಗ ದೇವತೆಗಳು ಪ್ರಸನ್ನರಾಗುತ್ತಾರೆ.

ಆದರೆ ಸವರ್ಣೀಯ ಸ್ತ್ರೀಯರಿಗೆ ಪ್ರಥಮ ಪತ್ನಿಯಾಗಿ ಸ್ವೀಕರಿಸಿ ಗೌರವಿಸದೆ ಹೋದರೆ, ವರ್ಣವ್ಯವಸ್ಥೆಯನ್ನು ಹಾಳುಮಾಡಿದಂತಾಗುವುದರಿಂದ ಆ ಮನೆಯ ಯಜ್ಞಪೂಜೆಗಳು ನಿಷ್ಫಲವಾಗುತ್ತವೆ.

ಇಲ್ಲಿ ನಾರಿಯರು ಎಂದರೆ ಪ್ರಥಮ ಪತ್ನಿಯಾಗಿ ಬರುವ ಸವರ್ಣೀಯ ನಾರಿಯರು. ಇವರು ಪ್ರಥಮ ಪತ್ನಿಯಾಗಿ ಬರುವುದರಿಂದ ವರ್ಣಸಂಕರವಾಗದ ಕಾರಣ ಇವರು ಪೂಜನೀಯರು (ಗೌರವಾರ್ಹರು). ಈ ಪ್ರಕಾರ ಹೆಣ್ಣಿನ ಮೂಲಕ ವರ್ಣವ್ಯವಸ್ಥೆ ಕುಂದುಂಟಾಗದೆ ಮುಂದುವರಿಯುವ ಕಾರಣ ದೇವತೆಗಳು ಅವರ ಬಗ್ಗೆ ಖುಷಿಪಟ್ಟು ಪ್ರಸನ್ನರಾಗುತ್ತಾರೆ.

ಬಾಲ್ಯೇ ಪಿತುರ್ವಶೇ ತಿಷ್ಠೇತ್ಪಾಣಿಗ್ರಾಹಸ್ಯ ಯೌವನೇ|
ಪುತ್ರಾನಾಂ ಭರ್ತರಿ ಪ್ರೇತೇ ನ ಭಜೇತ್ ಸ್ತ್ರೀ ಸ್ವತಂತ್ರ ತಾಂ|

(ಬಾಲ್ಯದಲ್ಲಿ ಸ್ತ್ರೀಯು ತಂದೆಯ ವಶದಲ್ಲಿ, ಯೌವನದಲ್ಲಿ ಗಂಡನ ಅಧೀನದಲ್ಲಿ, ಗಂಡ ಸತ್ತನಂತರ ಪುತ್ರನ ಅಧೀನದಲ್ಲಿ ಬಾಳಬೇಕಲ್ಲದೆ ತಾನೇ ಸ್ವತಂತ್ರವಾಗಿ ವ್ಯವಹರಿಸಬಾರದು.) -ಮನುಸ್ಮೃತಿ 5 – 148

ಕುಲಗೌರವ ಕಾಪಾಡುವ ಸವರ್ಣೀಯ ಮಹಿಳೆಯರನ್ನು ಇಷ್ಟೆಲ್ಲ ಹೊಗಳಿದನಂತರ ಮನು ಎಲ್ಲ ವರ್ಣಗಳ ಸ್ತ್ರೀಯರ ಮೇಲೆ ಸಮಾನ ನಿರ್ಬಂಧ ಹೇರುತ್ತಾನೆ. ವರ್ಣವ್ಯವಸ್ಥೆಯನ್ನು ಮುಂದುವರಿಸುವಲ್ಲಿ ತಮ್ಮ ತಮ್ಮ ಸವರ್ಣಗಳಲ್ಲಿನ ಹೆಣ್ಣುಗಳ ಪಾತ್ರ ಮುಗಿದ ಕೂಡಲೇ ಎಲ್ಲ ವರ್ಣಗಳ ಹೆಣ್ಣುಗಳಿಗೆ ಇರುವ ಏಕರೂಪವಾದ ಕೆಳದರ್ಜೆಯ ಸ್ಥಾನವನ್ನು ಮನು ತೋರಿಸಿಬಿಡುತ್ತಾನೆ!

ಯಾವುದೇ ವರ್ಣದ ಹೆಣ್ಣಿಗೆ ಸ್ವಾತಂತ್ರ್ಯವಿಲ್ಲವೆಂದು ಸಾರುತ್ತಾನೆ. ಆಕೆ ಕಾಲಕ್ರಮೇಣ ತಂದೆ, ಗಂಡ ಮತ್ತು ಮಕ್ಕಳ ಅಧೀನದಲ್ಲೇ ಇರಬೇಕು. ಅವಳಿಗೆ ಸ್ವತಂತ್ರವಾಗಿ ವ್ಯವಹರಿಸುವ ಹಕ್ಕಿಲ್ಲ ಎನ್ನುತ್ತಾನೆ.

ವಿಶೀಲಃ ಕಾಮವೃತ್ತೋ ವಾ ಗುಣೈರ್ವಾ ಪರಿಪರ್ಜಿತಃ|
ಉಪಚರ್ಯಃ ಸ್ತ್ರೀಯಾ ಸಾಧ್ವ್ಯಾ ಸತತಂ ದೇವವತ್ಪತಿಃ||

(ಪತಿಯ ನಡತೆಯು ಚೆನ್ನಾಗಿರದಿದ್ದರೂ ಕಾಮಾತುರನಾಗಿ ಅವನು ಅನ್ಯ ಹೆಂಗಸರಲ್ಲಿ ಮನಸ್ಸಿಟ್ಟರೂ ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಹೆಂಡತಿಯು ತನ್ನ ಪತಿಯನ್ನು ದೇವರೆಂದೇ ಭಾವಿಸಿ ಸೇವೆ ಮಾಡಬೇಕು.) -ಮನುಸ್ಮೃತಿ 5 – 154

ಶ್ರೇಣೀಕೃತ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಯಾವುದೇ ವರ್ಣದ ಹೆಣ್ಣಿಗೆ ಯಾವುದೇ ಸ್ಥಾನಮಾನಗಳಿಲ್ಲ! ಒಳ್ಳೆಯವನೋ ಕೆಟ್ಟವನೋ ಪತಿಯು ಪತಿಯೇ. ಆತ ವಿಷಯಲಂಪಟನಾದರೂ ಸರಿ, ಕುಲೋದ್ಧಾರಕ ಮತ್ತು ವರ್ಣವ್ಯವಸ್ಥೆಯನ್ನು ಕಾಪಾಡುವ ಹೆಂಡತಿಯ ಪಾಲಿಗೆ ದೇವರೇ ಆಗಿರುತ್ತಾನೆ. ಹೀಗೆ ಮನು ಎಲ್ಲ ವರ್ಣಗಳ ಹೆಣ್ಣುಮಕ್ಕಳನ್ನು ನಿಕೃಷ್ಟವಾಗಿ ಕಂಡಿದ್ದಾನೆ.

ನಾಸ್ತಿ ಸ್ತ್ರೀಣಾಂ ಪೃಥಗ್ಯಜ್ಞೋ ನ ವ್ರತಂ ನಾಪ್ಯುಪೋಷಿತಂ|
ಪತಿಂ ಶುಶ್ರೂಷತೇ ಯೇನ ತೇನ ಸ್ವರ್ಗೇ ಮಹೀಯತೇ||

(ಪತಿಯನ್ನು ಬಿಟ್ಟು ಸ್ತ್ರೀಗೆ ಇನ್ನಾವ ಬೇರೆ ಯಜ್ಞವೇ ಇಲ್ಲ. ಪತಿ ಸೇವೆಯನ್ನು ಬಿಟ್ಟು ಇನ್ನಾವ ವ್ರತವೂ ಇಲ್ಲ. ಉಪವಾಸವೂ ಇಲ್ಲ. ಪತಿವ್ರತಾ ಭಾವದಿಂದ ಪತಿಸೇವೆ ಮಾಡುವುದರಿಂದಲೇ ಸ್ತ್ರೀಯು ಸ್ವರ್ಗಲೋಕದಲ್ಲಿ ಗೌರವ ಪಡೆಯುತ್ತಾಳೆ.) -ಮನುಸ್ಮೃತಿ 5 – 155

ಮನುವಿನ ದೃಷ್ಟಿಯಲ್ಲಿ ಬ್ರಾಹ್ಮಣನ ಸವರ್ಣ ಸಂರಕ್ಷಣೆಯ ಮೊದಲ ಸ್ವಜಾತಿ ಪತ್ನಿಗೆ ಕೂಡ ಯಾವುದೇ ಧಾರ್ಮಿಕ ಹಕ್ಕುಗಳಿಲ್ಲ. ಪತಿಯ ಗುಲಾಮಗಿರಿ ಮಾಡುವುದೇ ಅವಳ ಪಾಲಿನ ಯಜ್ಞ ಮತ್ತು ವ್ರತ. ಪತಿಯ ಸೇವೆ ಬಿಟ್ಟು ಅವಳಿಗೆ ಬೇರೆ ಯಾವುದೇ ವಿಧಿವಿಧಾನಗಳಿಲ್ಲ. ಗಂಡ ಹೇಳಿದಂತೆ ಪ್ರಸಂಗ ಬಂದಾಗ ಧರ್ಮಕಾರ್ಯಗಳಲ್ಲಿ ಪಾಲ್ಗೊಳ್ಳುವುದೊಂದೇ ಅವಳ ಕರ್ತವ್ಯವಾಗಿರುತ್ತದೆ.

ಏಕೋsಲುಬ್ಧಸ್ತು ಸಾಕ್ಷೀ ಸ್ಯಾದ್ಬಹ್ವ್ಯಃ ಶುಚ್ಯೋsಪಿ ನ ಸ್ತ್ರೀಯಃ|
ಸ್ತ್ರೀಬುದ್ಧೇರಸ್ಥಿರತ್ವಾತ್ತು ದೋಷೈಶ್ಚಾನ್ಯೇsಪಿ ಯೇ ವೃತಾಃ|

(ದುರಾಶೆಯಿರದ ಪುರುಷನೊಬ್ಬನೇ ಸಾಕ್ಷಿಯಾದರೂ ಸಾಕಾಗಬಹುದು. ಆದರೆ ಶುದ್ಧಾಚರಣೆಯುಳ್ಳವರಾದರೂ ಸ್ತ್ರೀಯರು ಸ್ವಭಾವತಃ ಚಂಚಲೆಯರಾದ್ದರಿಂದ ಅವರು ನುಡಿಯುವ ಸಾಕ್ಷಿಯು ವಿಶ್ವಾಸಾರ್ಹವಲ್ಲ. ಹಾಗೆಯೇ ದುಷ್ಟರೂ ಪಾಪಿಗಳು ಕೂಡ ವಿಶ್ವಾಸಾರ್ಹರಾದ ಸಾಕ್ಷಿಗಳಲ್ಲ.) -ಮನುಸ್ಮೃತಿ 8 – 77

ಮನುಮಹರ್ಷಿಗೆ ಹೆಣ್ಣುಮಕ್ಕಳ ಬಗ್ಗೆ ಹೇಳತೀರದಷ್ಟು ಅಪನಂಬಿಕೆ ಮತ್ತು ದ್ವೇಷಭಾವವಿದೆ. ಪರಿಶುದ್ಧ ಮಹಿಳೆ ಕೂಡ ಪ್ರವೃತಿಯಿಂದಲೇ (bಥಿ iಟಿsಣiಟಿಛಿಣ) ಚಂಚಲೆ ಆಗಿರುತ್ತಾಳೆ ಎಂಬುದು ಆತನ ದೃಢ ನಿಲವು. ಆದ್ದರಿಂದ ಯಾವುದೇ ಮಹಿಳೆ ನುಡಿಯುವ ಸಾಕ್ಷಿ ವಿಶ್ವಾಸಾರ್ಹವಲ್ಲ ಎಂಬುದು ಆತನ ವಾದವಾಗಿದೆ. ಅಷ್ಟೇ ಅಲ್ಲದೆ ಸಾಧ್ವಿಯರನ್ನು ಕೂಡ, ದುಷ್ಟರು ಮತ್ತು ಪಾಪಿಗಳ ಮಟ್ಟಕ್ಕೆ ಇಳಿಸುತ್ತಾನೆ!

ಕನ್ಯಾಂ ಭಜಂತೀಮುತ್ಕೃಷ್ಟಂ ನ ಕಿಂಚಿದಪಿ ದಾಪಯೇತ್|
ಜಘನ್ಯಂ ಸೇವಮಾನಾಂ ತು ಸಂಯತಾಂ ವಾಸಯೇದ್ಗೃಹೇ||

(ತನಗಿಂತ ಮೇಲುಜಾತಿಯವನೊಡನೆ ಸಂಭೋಗ ಬಯಸಿ ಕೂಡಿಕೊಂಡ ಕನ್ಯೆಗೆ ದಂಡ ಹಾಕಬಾರದು. ತನಗಿಂತ ಕೀಳುಜಾತಿಯವನೊಡನೆ ಸಂಭೋಗ ಬಯಸಿದ ಕನ್ಯೆಯನ್ನು ಗೃಹಬಂಧನದಲ್ಲಿರಿಸಬೇಕು.) -ಮನುಸ್ಮೃತಿ 8 -365

ಈಗ ಹೆಣ್ಣಿನ ಕಾಮಾತುರತೆಯ ವಿಚಾರ ಬಂದಾಗ ಮೇಲುಜಾತಿ ಮತ್ತು ಕೀಳುಜಾತಿಯ ಪುರುಷರನ್ನು ಪ್ರತ್ಯೇಕಿಸುತ್ತಾನೆ. ಒಂದು ಹೆಣ್ಣು ಮೇಲುಜಾತಿಯವನ ಕಡೆ ಸಂಭೋಗ ಬಯಸಿ ಬಂದರೆ ದಂಡ ಕಟ್ಟುವ ಹಾಗಿಲ್ಲ. ಆದರೆ ಅದೇ ಹೆಣ್ಣು ಕೆಳಜಾತಿಯವನ ಕಡೆ ಸಂಭೋಗ ಬಯಸಿ ಹೋದರೆ ದಂಡಕ್ಕೆ ಅರ್ಹಳಾಗುತ್ತಾಳೆ. ಅವಳಿಗೆ ಗೃಹಬಂಧನದ ಶಿಕ್ಷೆ ವಿಧಿಸಬೇಕು ಎಂದು ಆದೇಶಿಸುತ್ತಾನೆ.

ಮನುವಿನ ಮನಸ್ಸು ಸದಾ ಮೇಲ್ಜಾತಿ ಪುರುಷ ಪ್ರಧಾನ ವ್ಯವಸ್ಥೆಯ ಉಳಿವಿಗಾಗಿ ಧ್ಯಾನಿಸುವ ಮನಸ್ಸಾಗಿದೆ.

ಭಾರ್ಯಾ ಪುತ್ರಶ್ಚ ದಾಸಶ್ಚ ತ್ರಯ ಏವಾಧನಾಃ ಸ್ಮೃತಾಃ|
ಯತ್ತೇ ಸಮಧಿಗಚ್ಛಂತಿ ಯಸ್ಯ ತೇ ತಸ್ಯ ತದ್ಧನಂ||

(ಹೆಂಡತಿ, ಮಗ ಮತ್ತು ದಾಸ ಈ ಮೂವರು ನಿರ್ಧನಿಕರು ಎನಿಸಿಕೊಳ್ಳುತ್ತಾರೆ. ಇವರ ಹಣವೆಲ್ಲ ಇವರ ಮೇಲೆ ಅಧಿಕಾರ ಹೊಂದಿದ ಒಡೆಯನಿಗೆ ಸಲ್ಲತಕ್ಕದ್ದು.) -ಮನುಸ್ಮೃತಿ 8-416

ಮನುಧರ್ಮಶಾಸ್ತ್ರದ ಪ್ರಕಾರ ಹೆಂಡತಿಗೆ ಯಾವುದೇ ರೀತಿಯ ಆರ್ಥಿಕ ಸ್ವಾತಂತ್ರ್ಯ ಕೂಡ ಇಲ್ಲ. ಈ ವಿಚಾರದಲ್ಲಿ ಕೂಡ ಆಕೆ ದಾಸಿಯೇ ಆಗಿದ್ದಾಳೆ. ದಾಸನಿಗೆ ಕೂಡ ಯಾವುದೇ ತೆರನಾದ ಆರ್ಥಿಕ ಸ್ವಾತಂತ್ರ್ಯವಿಲ್ಲ. ಆರ್ಥಿಕ ಅಧಿಕಾರವೂ ಸೇರಿದಂತೆ ಎಲ್ಲ ಅಧಿಕಾರ ಒಡೆಯನ ಕೈಯಲ್ಲೇ ಇರುವಂಥದ್ದು.

ನಾಸ್ತಿ ಸ್ತ್ರೀಣಾಂ ಕ್ರಿಯಾ ಮಂತ್ರೈರಿತಿ ಧರ್ಮೇ ವ್ಯವಸ್ಥಿತಿಃ|
ನಿರಿಂದ್ರಿಯಾ ಹ್ಯಮಂತ್ರಾಶ್ಚ ಸ್ತ್ರೀಯೋsನೃತಮಿತಿ ಸ್ಥಿತಿಃ||

(ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮಸಂಸ್ಕಾರಗಳಿಲ್ಲ ಎಂದು ಶಾಸ್ತ್ರವು ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸುವ ಮಂತ್ರಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ.) -ಮನುಸ್ಮೃತಿ 9 – 18

ಸ್ತ್ರೀಯರಿಗೆ ಧರ್ಮ ಸಂಸ್ಕಾರಗಳೇ ಇಲ್ಲವೆಂದು ಮನುಧರ್ಮಶಾಸ್ತ್ರ ಸ್ಪಷ್ಟಪಡಿಸಿದೆ. ಸ್ತ್ರೀಯರು ಕಾಮಾತುರತೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವಂಥ ಯಾವುದೇ ಮಂತ್ರಗಳು ಧರ್ಮಶಾಸ್ತ್ರದಲ್ಲಿ ಇಲ್ಲದ ಕಾರಣ ಅವರು ಸಂಸ್ಕಾರವಿಹೀನವಾಗಿರುವುದರಿಂದ ಅಶುದ್ಧರಾಗೇ ಇರುತ್ತಾರೆ ಎಂಬುದು ಮನುವಿನ ಕುತರ್ಕವಾಗಿದೆ.

ಸ್ಶಭಾವ ಏಷ ನಾರೀಣಾಂ ನರಾಣಾಮಿಹ ದೂಷಣಂ|
ಅತೋsರ್ಥಾನ್ನ ಪ್ರಮಾದ್ಯಂತಿ ಪ್ರಮದಾಸು ವಿಪಶ್ಚಿತಃ||

(ಪುರುಷರ ಮನಸ್ಸನ್ನು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ. ಆದ್ದರಿಂದ ಪ್ರಾಜ್ಞರು ಸ್ತ್ರೀಯರ ವಿಷಯದಲ್ಲಿ ಎಚ್ಚರದಪ್ಪಿ ನಡೆಯುವುದಿಲ್ಲ.) -ಮನುಸ್ಮೃತಿ 2 – 213

ಕಾಮವನ್ನು ತಹಬಂದಿಗೆ ತರುವ ವಿಚಾರವಾಗಿ ಧರ್ಮಶಾಸ್ತ್ರದಲ್ಲಿ ಸ್ತ್ರೀಯರಿಗೆ ಯಾವುದೇ ತೆರನಾದ ಸಂಸ್ಕಾರ ಮಂತ್ರ ಹೇಳಿಕೊಡದ ಕಾರಣ ಅವರು ಸ್ವಭಾವಿಕವಾಗಿಯೆ ಕಾಮಾತುರರಾಗಿ ಪುರುಷರನ್ನು ಆಕರ್ಷೀಸುವ ಸ್ವಭಾವದವರಾಗಿರುತ್ತಾರೆ. ಆದ್ದರಿಂದ ತಿಳಿವಳಿಕೆಯುಳ್ಳವರು ಎಚ್ಚರದಿಂದ ಇರುತ್ತಾರೆ ಎಂದು ಹೇಳುವ ಮೂಲಕ ಮನು ಮಹಿಳೆಯನ್ನು ಕೀಳಾಗಿ ನೋಡುತ್ತಲೇ ಪುರುಷ ಪ್ರಾಧಾನ್ಯವನ್ನು ಎತ್ತಿಹಿಡಿದಿದ್ದಾನೆ.

ಮಾತ್ರಾ ಸ್ವಸ್ರಾ ದುಹಿತ್ರಾ ವಾ ನ ವಿವಿಕ್ತಾಸನೋ ಭವೇತ್|
ಬಲವಾನಿಂದ್ರಿಯಗ್ರಾಮೋ ವಿದ್ವಾಂಸಮಪಿ ಕರ್ಷತಿ||

(ತಾಯಿಯೊಡನೆ, ಸಹೋದರಿಯೊಡನೆ, ಮಗಳೊಡನೆ ಕೂಡ ನಿರ್ಜನ ಪ್ರದೇಶದಲ್ಲಿ ಗಂಡಸು ಒಂಟಿಯಾಗಿರಬಾರದು. ಏಕೆಂದರೆ ಬಲಿಷ್ಠವಾದ ಇಂದ್ರಿಯಗಳ ಸಮೂಹವು ಎಂಥ ವಿದ್ವಾಂಸನನ್ನೂ ಸೆಳೆದುಕೊಳ್ಳುತ್ತದೆ.) -ಮನುಸ್ಮೃತಿ 2 – 215

ಮನು ಇಷ್ಟಕ್ಕೇ ನಿಲ್ಲುವುದಿಲ್ಲ. ಮಹಿಳೆಯರ ಕಾಮತೃಷೆಯ ಬಗ್ಗೆ ಇರುವ ತನ್ನ ಕೀಳು ವಿಚಾರಗಳನ್ನು ಹರಡುತ್ತಲೇ ಹೋಗುತ್ತಾನೆ. ಮಹಾ ವಿದ್ವಾಂಸ ಕೂಡ ಜನಸಂಪರ್ಕವಿಲ್ಲದ ಪ್ರದೇಶದಲ್ಲಿ ತಾಯಿ, ಸಹೋದರಿ ಅಥವಾ ಮಗಳ ಜೊತೆ ಒಂಟಿಯಾಗಿ ಇರಬಾರದು ಎಂದು ಎಚ್ಚರಿಸುತ್ತಾನೆ. ಏಕೆಂದರೆ ಸ್ತ್ರೀಯರ ಕಾಮದ ಸೆಳೆತಕ್ಕೆ ಎಂಥ ವಿದ್ವಾಂಸನೂ ಬಲಿಯಾಗುತ್ತಾನೆ ಎಂದು ಹೇಳುವ ಮೂಲಕ ಮನು ಅತ್ಯಂತ ಕೀಳುಮಟ್ಟಕ್ಕೆ ಇಳಿಯುತ್ತಾನೆ.

ತಥಾ ಚ ಶ್ರುತಯೋ ಬಹ್ವ್ಯೋ ನಿಗಿತಾ ನಿಗಮೇಷ್ಟಪಿ|
ಸ್ವಾಲಕ್ಣ್ಯ ಪರೀಕ್ಷಾರ್ಥಂ ತಾಸಾಂ ಶೃಣುತ ನಿಷ್ಕೃತೀಃ||

(ಸ್ತ್ರೀಯರು ಸಾಮಾನ್ಯವಾಗಿ ಚಪಲಚಿತ್ತವುಳ್ಳವರು , ವ್ಯಭಿಚಾರ ಮನಸ್ಕರು ಎಂಬುದರ ಬಗ್ಗೆ ವೇದಗಳಲ್ಲೇ ಅನೇಕ ಪ್ರಮಾಣಗಳಿವೆ. ಅವರ ವ್ಯಭಿಚಾರ ಸ್ವಭಾವದ ಲಕ್ಷಣಗಳನ್ನು ಮತ್ತು ಆ ವ್ಯಭಿಚಾರವೆಂಬ ಪಾಪಕ್ಕೆ ಪ್ರಾಯಶ್ಚಿತ್ತಗಳನ್ನು ಈಗ ಕೇಳಿರಿ.) -ಮನುಸ್ಮೃತಿ 9 – 19

ಮನು ತನ್ನ ಕುತರ್ಕವನ್ನು ಹೀಗೇ ಮುಂದುವರಿಸುತ್ತಾನೆ.

ಹೆಂಗಸರು ಚಂಚಲಚಿತ್ತದವರು, ವ್ಯಭಿಚಾರ ಭಾವದವರು ಎಂಬುದಕ್ಕೆ ವೇದಪ್ರಮಾಣದ ಮಾತುಗಳನ್ನಾಡುತ್ತಾನೆ. ಮಹಿಳೆಯರ ವ್ಯಭಿಚಾರ ಸ್ವಭಾವದ ಪ್ರಕಾರಗಳ ಮತ್ತು ಅವುಗಳ ಲಕ್ಷಣಗಳ ಕುರಿತು ಮನುಸ್ಮೃತಿಯಲ್ಲಿ ವಿವರಿಸುತ್ತ ಹೋಗುತ್ತಾನೆ. ಹಾಗೆಯೆ ವಿವಿಧ ರೀತಿಯ ವ್ಯಭಿಚಾರಗಳ ಪಾಪಕ್ಕೆ ಪ್ರಾಯಶ್ಚಿತ್ತಗಳನ್ನು ಹೇಳುತ್ತ ಹೋಗುತ್ತಾನೆ.

ಉತ್ಪಾದನಮಪತ್ಯಸ್ಯ ಜಾತಸ್ಯ ಪರಿಪಾಲನಂ|
ಪ್ರತ್ಯಹಂ ಲೋಕಯಾತ್ರಾ ಯಾಃ ಪ್ರತ್ಯಕ್ಷಂ ಸ್ತ್ರೀನಿಬಂಧನಂ||

(ಮಕ್ಕಳನ್ನು ಹಡೆಯುವುದು, ಹಡೆದ ಮಕ್ಕಳನ್ನು ಸಾಕುವುದು, ಸಂಸಾರವನ್ನು ಪ್ರತಿನಿತ್ಯವೂ ಚೆನ್ನಾಗಿ ನಿರ್ವಹಿಸಿಕೊಂಡು ಹೋಗುವುದು; ಇವು ಸ್ತ್ರೀಯರ ಕರ್ತವ್ಯಗಳಾಗಿವೆ.)-ಮನುಸ್ಮೃತಿ 9 -27

ಯಾಂತ್ರಿಕವಾಗಿ ಮಕ್ಕಳನ್ನು ಹಡೆಯುವುದು, ಅವುಗಳನ್ನು ಸಾಕುವುದು ಮತ್ತು ಸಂಸಾರವನ್ನು ನಿಭಾಯಿಸುವುದು ಮಾತ್ರ ಮಹಿಳೆಯರ ಕರ್ತವ್ಯಗಳಾಗಿವೆ ಎಂದು ಮನು ಮತ್ತೆ ಮತ್ತೆ ಹೇಳಿದ್ದಾನೆ.

ನ ದತ್ವಾ ಕಸ್ಯಚಿತ್ ಕನ್ಯಾಂ ಪುನರ್ದದ್ಯಾದ್ವಿಚಕ್ಷಣಃ|
ದತ್ವಾ ಪುನಃ ಪ್ರಯಚ್ಛನ್ಹಿ ಪ್ರಾಪ್ನೋತಿ ಪುರುಷಾನೃತಂ||

(ವಾಗ್ದಾನ ಮಾಡಿದನಂತರ ನಿಶ್ಚಿತಾರ್ಥವಾದಮೇಲೆ ಆ ಭಾವೀ ಪತಿಯು ಮೃತನಾದರೆ ಆ ಕನ್ಯೆಯನ್ನು ಮತ್ತೊಬ್ಬ ವರನಿಗೆ ಕನ್ಯಾದಾನ ಮಾಡಕೂಡದು. ಹಾಗೆ ಮಾಡಿದರೆ ಅವನು ಪುರುಷಾನೃತವೆಂಬ ದೋಷವನ್ನು ಹೊಂದುತ್ತಾನೆ.) -ಮನುಸ್ಮೃತಿ 9 – 71

ಇದು ಇನ್ನೂ ಭಯಂಕರವಾದುದು. ಮದುವೆ ನಿಶ್ಚಿತಾರ್ಥವಾದಮೇಲೆ ಪತಿಯಾಗುವಾತ ಸತ್ತರೆ, ಆ ಕನ್ಯೆಗೆ ಇನ್ನೊಬ್ಬನ ಜೊತೆ ಮದುವೆ ಮಾಡಬಾರದಂತೆ. ಹಾಗೆ ಮಾಡಿದರೆ ಆ ಮದುವೆಯಾದವನಿಗೆ “ಪುರುಷಾನೃತ” ಎಂಬ ದೋಷ ಅಂಟಿಕೊಳ್ಳುವುದು ಎಂದು ಮತ್ತೆ ಪುರುಷ ಪ್ರಾಧಾನ್ಯದ ಮಾತುಗಳನ್ನಾಡುತ್ತಾನೆ.

ಆ ಮುಗ್ಧ ಕನ್ಯೆಯ ಬಗ್ಗೆ ಆತನಿಗೆ ಸ್ವಲ್ಪವೂ ಕನಿಕರ ಇಲ್ಲ. ಪುರುಷರ ಅದಾವುದೋ ದೋಷ ನಿವಾರಣೆಗಾಗಿ ಇಂಥ ಮುಗ್ಧ ಕನ್ಯೆಯರು ಜೀವನವಡೀ ಮದುವೆಯಾಗದೇ ಉಳಿಯಬೇಕಂತೆ?
ಹೀಗೆ ಮನು ಎಲ್ಲ ವರ್ಣಗಳ ಮಹಿಳೆಯರ ಮಹಾ ದ್ವೇಷಿಯಾಗಿದ್ದಾನೆ.

ಸಮಾಜೋ ಧಾರ್ಮಿಕವಾಗಿ ಬಸವಣ್ಣ, ಸಾಮಾಜಿಕವಾಗಿ ಜ್ಯೋತಿಬಾ ಫುಲೆ ಮತ್ತು ಸಂವಿಧಾನಾತ್ಮಕವಾಗಿ ಬಾಬಾಸಾಹೇಬ ಅಂಬೇಡ್ಕರ್ ಮಹಿಳೆಯರ ಹಕ್ಕು ಮತ್ತು ಘನತೆಯನ್ನು ಎತ್ತಿಹಿಡಿದ ಭಾರತೀಯ ಮಹಾಪುರುಷರಲ್ಲಿ ಪ್ರಮುಖರಾಗಿದ್ದಾರೆ. (ಫೇಸ್ ಬುಕ್ ಬರಹ)

ರಂಜಾನ್ ದರ್ಗಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಚಿಂತನೆ / ಮನುವಿನ ದೃಷ್ಟಿಯಲ್ಲಿ ಮಹಿಳೆಯರು- ರಂಜಾನ್ ದರ್ಗಾ

  • SHADAKSHARY

    Vichara prachodaka lekhana.Dhanyavadagalu.

    Reply

Leave a Reply

Your email address will not be published. Required fields are marked *