Uncategorizedಚಾವಡಿಚಿಂತನೆ

ಚಿಂತನೆ/ ಮದುವೆಯೇ ಹರೆಯದ ಗುರಿಯಲ್ಲ – ದೀಪಾ ಜಿ.ಎಸ್.

ಹೆಣ್ಣುಮಕ್ಕಳು ಬೆಳೆಯುತ್ತಿದ್ದ ಹಾಗೆ ಮದುವೆಯೇ ಅವರ ಗುರಿ ಎನ್ನುವಂಥ ಒತ್ತಡ ನಮ್ಮ ಕುಟುಂಬಗಳಲ್ಲಿ ಸಾಮಾನ್ಯ. ಆದರೆ ಅವರಿಗೂ ಓದು, ಶಿಕ್ಷಣ, ವೃತ್ತಿ, ಸಾಧನೆ ಇವೆಲ್ಲವೂ ಮದುವೆ ಮತ್ತು ಸಂಸಾರಗಳಂತೆಯೇ ಅಥವಾ ಅನೇಕ ಬಾರಿ ಅವುಗಳಿಗಿಂತ ಮುಖ್ಯ ಎನ್ನುವ ಚಿಂತನೆ ಬೆಳೆಯಬೇಕು. ತಾವು ಚೆನ್ನಾಗಿ ಓದುತ್ತಿದ್ದರೂ ತಮ್ಮ ಕನಸುಗಳಿಗೆ ತಣ್ಣೀರು ಎರಚುವುದು ಎಷ್ಟು ಸರಿ ಎನ್ನುವುದು ಹಲವು ಹೆಣ್ಣುಮಕ್ಕಳ ತಳಮಳ.

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ದೊಡ್ಡ ತಿರುವು ಎಂದು ಬಹಳ ಮಂದಿ ನಂಬುತ್ತಾರೆ. ಆದರೆ ಮದುವೆಯಾಗುವುದು ಅಥವಾ ಮದುವೆ ಮಾಡುವುದೇ ಜೀವನವಲ್ಲ. ನಾನು ಕಂಡಂತೆ ಹಲವಾರು ಕಡೆ ಹದಿನೇಳು ತುಂಬಿ ಹದಿನೆಂಟು ಹತ್ತಿರ ಬಂದರೆ ಸಾಕು ವರ ಹುಡುಕಲು ಶುರು ಮಾಡುತ್ತಾರೆ. ಈ ಜನರಿಗೆ ಬುದ್ಧಿ ಎಲ್ಲಾದರು ಮಂಕಾಯಿತೇ ಎಂದು ಖೇದವಾಗುತ್ತದೆ. ನಿಮ್ಮ ಮಗಳು ಚೆನ್ನಾಗಿ ಓದುತ್ತಿದಲ್ಲಿ ಅವಳ ಕನಸುಗಳಿಗೆ ತಣ್ಣೀರು ಎರಚುವುದು ಎಷ್ಟು ಸರಿ ನೀವೇ ಹೇಳಿ…..? ಅವಳಿಗೂ ತಾನೂ ಎಲ್ಲರಂತೆ ಓದಬೇಕು, ತಾನು ತನ್ನ ಕಾಲಮೇಲೆ ನಿಂತುಕೊಳ್ಳಬೇಕು ಅನ್ನುವ ಆಸೆ ಇರುತ್ತದೆ. ಆದ್ದರಿಂದ ಈ ಮದುವೆ ಎನ್ನುವ ವಿಚಾರವನ್ನ ಅವಳಿಂದ ದೂರವಿಡಿ. ಏಕೆಂದರೆ ಅವಳ ಆಸೆಗಳನ್ನ ಪೂರ್ಣ ಮಾಡಿಕೊಳ್ಳಲು ಅವಳಿಗೆ ಒಂದು ಅವಕಾಶ ಕೊಟ್ಟರೆ ಸಾಕು ಈ ಮದುವೆ ಎನ್ನುವ ವಿಚಾರದಿಂದ ಅವಳು ಒಳಒಳಗೆ ನೋವನ್ನ ಅನುಭವಿಸುವುದು ತಪ್ಪುತ್ತದೆ.

ಕೆಲವು ಸಂಸಾರಗಳಲ್ಲಿ ಎಂಥ ಮೂರ್ಖತನ ಮಾಡುತ್ತಿದ್ದಾರೆ ಎಂದರೆ ಮಗಳಿಗೆ 18 ವರ್ಷವಾಗಿದೆ ಅಂದರೆ ಸಾಕು. “ನಮ್ಮ ಮಗಳಿಗೆ ವರವನ್ನ ಹುಡುಕುತ್ತಿದ್ದೇವೆ ನಿಮ್ಮ ಕಡೆ ಯಾವುದಾದರೂ ಸಂಬಂಧ ಇದ್ದರೆ ತಿಳಿಸಿ“ ಎಂದು ಹೇಳತೊಡಗುತ್ತಾರೆ. ಆದರೆ “ಅವಳಿಗೆ ಇಷ್ಟವಾದಾಗ ಅವಳ ಮದುವೆ” ಅಂತ ಹೇಳುವುದಿಲ್ಲ. ಅವಳ ಮುಂದಿನ ಭವಿಷ್ಯಕ್ಕಾಗಿ ಇಂದೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಥವಾ ಮಗಳಿಗೆ ಯಾವ ಗಂಡೂ ಸಿಗುವುದಿಲ್ಲವೋ ಎಂಬ ಅವಿಶ್ವಾಸ ಬೆಳೆಯುತ್ತದೆ. “ಮಗಳನ್ನು ನಿಮ್ಮ ಮನೆಗೆ ಕೊಡುತ್ತೇನೆ” ಎಂದು ಅವರವರೇ ಒಪ್ಪಂದ ಮಾಡಿಕೊಂಡು ಅವಳು ತನ್ನ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನ ಮಾಡುವುದನ್ನು ತಪ್ಪಿಸಿಬಿಡುತ್ತಾರೆ. ಅವಳ ಕನಸನ್ನು ಸಮಾಧಿ ಮಾಡುತ್ತಾರೆ.

ಆದರೆ ಅವಳ ಕನಸುಗಳಿಗೆ ಮನೆಯ ಬೆಂಬಲ ಸಿಕ್ಕರೆ ಅವಳು ಸಮಾಜದಲ್ಲಿ ಹಕ್ಕಿಯಂತೆ ಅತಿ ಎತ್ತರಕ್ಕೆ ಹಾರುತ್ತಾಳೆ. ಅದನ್ನ ಬಿಟ್ಟು ಮದುವೆ ಮಾಡಿಕೋ ಅಂತ ಹಿಂಸೆ ಕೊಟ್ಟರೆ! ಅವಳನ್ನು ಸಂಸಾರಕ್ಕೆ ಕಟ್ಟಿ ಹಾಕಿ ಹೊರ ಜಗತ್ತಿನಲ್ಲಿ ಹಕ್ಕಿಯಂತೆ ಹಾರು ಎಂದರೆ ಹೇಗೆ ತಾನೇ ಅವಳು ಹಾರುತ್ತಾಳೆ.? ಮದುವೆ ಅನ್ನುವ ಒತ್ತಡದಿಂದ ಅವಳನ್ನ ಕಟ್ಟಿ ಹಾಕಿದರೆ ಅವಳ ಹೇಗೆ ತಾನೇ ಹಾರುವಳು ? ಹೇಗೆ ತಾನೇ ಖುಷಿ ಇಂದ ಇರುವಳು. ಅದಕ್ಕಾಗಿ ಅವಳ ಕನಸುಗಳಿಗೆ ಮೊದಲು ಅವಕಾಶವನ್ನ ಮನೆಯವರು ಕೊಡಬೇಕು.

ತನಗೆ ಬೇಕಾದ ಶಿಕ್ಞಣ ಪಡೆದು ತನ್ನ ವೃತ್ತಿ, ಉದ್ಯೋಗವನ್ನು ಆರಿಸಿಕೊಂಡು ತನ್ನ ಕನಸನ್ನು ನನಸು ಮಾಡಿಕೊಳ್ಳಬೇಕಾದ ಹೊತ್ತಿನಲ್ಲಿ ನಮ್ಮ ಅನೇಕ ಹೆಣ್ಣುಮಕ್ಕಳು ಮದುವೆಯ ಒತ್ತಡಕ್ಕೆ ಒಳಗಾಗಿ ಇನ್ನೊಬ್ಬರ ಮನೆಗೆ ಹೋಗಿ ಪಾತ್ರೆ ತೊಳಿಯುವುದಕ್ಕೆ ಸೀಮಿತರಾಗುವ ಅನೇಕ ಉದಾಹರಣೆಗಳು ನಮ್ಮ ಕಣ್ಣೆದುರಿಗಿದೆ. ನಮ್ಮ ಸುತ್ತಮುತ್ತಲಿನ ನೂರಾರು ಕುಟುಂಬಗಳ ಹುಡುಗಿಯರು ಇಂಥ ಮದುವೆ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅವಕಾಶಗಳೇ ಇಲ್ಲದೆ, ಜೀವನದಲ್ಲಿ ಸಾಧನೆ ಮಾಡುವ ಸಾಧ್ಯತೆಗಳಿಂದ ವಂಚಿತರಾ ಗುತ್ತಿದ್ದಾರೆ.

ಹಾಗಾಗಿ ಒಮ್ಮೆ ಯೋಚಿಸಿ ನೋಡಿದರೆ ಈ ಮದುವೆ ವಯಸ್ಸನ್ನು 18 ರಿಂದ 21 ಕ್ಕೆ ಏರಿಸುವುದು ಕಡ್ಡಾಯವಾದರೆ, ಹುಡುಗಿಯರಿಗೆ ಓದು, ತರಬೇತಿ, ಕೌಶಲ ಅಭಿವೃದ್ಧಿ ಇವುಗಳಿಗೆ ಹೆಚ್ಚಿನ ಅವಕಾಶ ಸಿಗುತ್ತದೆ ಅನ್ನಿಸುತ್ತದೆ. ಅವರ ಕನಸುಗಳು ಅರಳಲು ಕೊಂಚವಾದರೂ ಬೆಂಬಲ ಸಿಗುತ್ತದೆ ಅನ್ನಿಸುತ್ತದೆ. ನನ್ನ ಈ ಮಾತುಗಳಿಗೆ ನನ್ನ ಓರಗೆಯ ಸಾವಿರಾರು ಹೆಣ್ಣುಮಕ್ಕಳ ಸಹಮತ ಇದೆ ಎಂಬ ಭರವಸೆ ನನಗಿದೆ.

– ದೀಪಾ ಜಿ.ಎಸ್.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *