Uncategorizedಚಿಂತನೆ

ಚಿಂತನೆ/ ಫ್ರೆಡೆರಿಕ್ ಏಂಗೆಲ್ಸ್ – 200 “ಕುಟುಂಬ ಅಂದು ಇಂದು” _ ಡಾ. ಎಚ್.ಜಿ.ಜಯಲಕ್ಷ್ಮಿ

ವಿಜ್ಞಾನಿ, ತತ್ವಜ್ಞಾನಿ ಮತ್ತು ದಾರ್ಶನಿಕರಾಗಿದ್ದ ಫ್ರೆಡರಿಕ್ ಏಂಗೆಲ್ಸ್ ವಿಶ್ವಚರಿತ್ರೆಯಲ್ಲಿ ಮರೆಯಲಾಗದ ಹೆಸರು. ಅವರು ಹುಟ್ಟಿ ಇಂದಿಗೆ ೨೦೦ ವರ್ಷಗಳಾಗಿವೆ. ೧೮೮೪ರಲ್ಲಿ ಫ್ರೆಡರಿಕ್ ಏಂಗೆಲ್ಸ್ ಬರೆದಿರುವ “ಕುಟುಂಬ, ಖಾಸಗಿ ಆಸ್ತಿ ಹಾಗೂ ರಾಜ್ಯ – ಇವುಗಳ ಉಗಮ ” ಪುಸ್ತಕವು ಚಾರಿತ್ರಿಕ ಭೌತವಾದದ ದೃಷ್ಟಿಕೋನದಿಂದ ಮಹಿಳಾ ಶೋಷಣೆಯ ಬೇರುಗಳನ್ನು ವಿವರವಾಗಿ ಚರ್ಚಿಸುತ್ತದೆ.

ಬದಲಾವಣೆ ವಿಶ್ವದ ನಿಯಮ. ಬದಲಾಗದಿರುವುದು ಯಾವುದೂ ಇಲ್ಲ. ಹಾಗೆ ಬದಲಾಗದಿರುವುದು ಅಂತ ಯಾವುದಾದರೂ ಇದ್ದರೆ ಅದು ‘‘ಎಲ್ಲವೂ ಬದಲಾಗುತ್ತವೆ ಎಂಬ ತೀರ್ಮಾನ ಮಾತ್ರ !’’ ಇದು ನಮ್ಮ ಕುಟುಂಬ ವ್ಯವಸ್ಥೆಗೂ ಅನ್ವಯಿಸುವುದೋ? ಹೌದು ಎನ್ನುತ್ತದೆ ಪ್ರಾಕ್ತನ ಶಾಸ್ತ್ರ , ಮಾನವ ಶಾಸ್ತ್ರಗಳು.


ಹತ್ತೊಂಬತ್ತನೆಯ ಶತಮಾನದ ಆರನೆಯ ದಶಕದವರೆಗೂ ಕುಟುಂಬದ ಪರಿಕಲ್ಪನೆ ಎಂದರೆ ಅದು ಪಿತೃಪ್ರಧಾನ ಕುಟುಂಬದ ಪರಿಕಲ್ಪನೆಯೇ ಆಗಿತ್ತು. ಪಿತೃಪ್ರಧಾನ ಕುಟುಂಬವೇ ಅತ್ಯಂತ ಪುರಾತನ ಕುಟುಂಬದ ಪರಿಕಲ್ಪನೆ ಎಂದೂ, ಆಧುನಿಕ ಬೂeóÁ್ರ್ವ ಕುಟುಂಬದ ಪರಿಕಲ್ಪನೆಯೂ ಸಹ ಅದರ ಮುಂದುವರಿಕೆಯೇ ಎಂದೂ ವಾದಿಸುತ್ತಿದ್ದರು.ಅಲ್ಲದೆ ಕುಟುಂಬ ವ್ಯವಸ್ಥೆಯು ಹಿಂದಿನಿಂದ ಇಂದಿನವರೆಗೂ ಒಂದೇ ಸಮನಾಗಿ ಉಳಿದು ಬಂದಿದೆಯೆಂದೂ ಅದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದೂ ಭಾವಿಸಲಾಗಿತ್ತು. ಆದರೆ ಮಾನವ ಸಮಾಜದ ಇತಿಹಾಸದ ಬಗ್ಗೆ ಸಂಶೋಧನೆಗಳು ನಡೆದಂತೆ, ಕುಟುಂಬ ವ್ಯವಸ್ಥೆಯೂ ಸಹ ಒಂದು ಕಾಲದಲ್ಲಿ ಉಗಮವನ್ನು ಹೊಂದಿದ್ದು, ಕ್ರಮೇಣ ವಿಕಸನಗೊಳ್ಳುತ್ತಾ ಇಂದಿನ ಹಂತಕ್ಕೆ ಬಂದು ತಲುಪಿದೆ ಎಂದು ತಿಳಿದುಬಂದಿದೆ. ಅದರ ಇತಿಹಾಸವನ್ನೊಮ್ಮೆ ಇಣುಕಿ ಹಾಕಿ ನೋಡೋಣ ಬನ್ನಿ.
ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಕುಟುಂಬದ ಇತಿಹಾಸದ ಬಗ್ಗೆ ಕ್ರಾಂತಿಕಾರಕವೆನಿಸುವಂತಹ ಸಂಶೋಧನೆಗಳು ನಡೆದವು. ಅಲ್ಲಲ್ಲಿ ಕಂಡುಬರುತ್ತಿದ್ದ ಬಹುಪತ್ನಿತ್ವಕ್ಕೆ ವಿನಾಯಿತಿ ಕೊಟ್ಟರೆ, ಅಂದಿನ ಸಮಾಜದ ಕುಟುಂಬ ಪದ್ಧತಿಯಾಗಿದ್ದ ಏಕಪತ್ನಿ ಕುಟುಂಬವೇ ಎಲ್ಲ ಕಾಲಕ್ಕೂ ಸಲ್ಲುವಂಥಾದ್ದು ಎಂದು ಭಾವಿಸಿದ್ದರೂ, ಆದಿಮ ಸಮಾಜದಲ್ಲಿ ಮುಕ್ತ ಲೈಂಗಿಕ ಸಂಬಂಧಗಳ ಕಾಲಾವಧಿಯೊಂದು ಇದ್ದಿರಬಹುದು ಎಂದು ಒಪ್ಪಿಕೊಳ್ಳಲಾಗಿತ್ತು.ಜೊತೆಗೆ ಪೂರ್ವದ ರಾಷ್ಟ್ರಗಳಲ್ಲಿದ್ದ ಬಹುಪತಿತ್ವ ಪದ್ಧತಿ ಹಾಗೂ ಇಂಡೋ – ಟಿಬೆಟನ್ ಬಹುಪತಿ ಪದ್ಧತಿಗಳೂ ಸಂಶೋಧಕರಿಗೆ ತಿಳಿದುಬಂದಿದ್ದವು. ಆದರೆ ಇವುಗಳ ಅಂತಃಸಂಬಂಧಗಳು ಏನು ಎಂಬುದು ತಿಳಿದಿರಲಿಲ್ಲ. ಪ್ರಾಚೀನ ಕಾಲದಲ್ಲಿ ಕೆಲವು ಜನಸಮುದಾಯಗಳಲ್ಲಿ ವಂಶಾವಳಿಯನ್ನು ತಂದೆಯಿಂದಲ್ಲದೆ ತಾಯಿಯ ಮೂಲಕ ಗುರುತಿಸಲಾಗುತ್ತಿತ್ತು ಎಂದೂ ಮತ್ತು ನಿರ್ದಿಷ್ಟವಾದ ದೊಡ್ಡ ವೃಂದಗಳ ಒಳಗೆ ವಿವಾಹವನ್ನು ನಿಷೇಧಿಸಲಾಗಿತ್ತು ಎಂಬ ವಾಸ್ತವಾಂಶಗಳೂ ತಿಳಿದಿದ್ದವು. ಮತ್ತು ಇವುಗಳನ್ನು ಜಗತ್ತಿನ ಎಲ್ಲ ಭಾಗಗಳಲ್ಲೂ ಕಾಣಬಹುದು ಎಂದೂ ತಿಳಿದಿತ್ತು.ಆದರೆ ಇವುಗಳ ಮಧ್ಯದ ಸಂಬಂಧವೇನು, ಇವುಗಳನ್ನು ಹೇಗೆ ಅರ್ಥೈಸಬೇಕು ಎಂಬುದು ಮಾತ್ರ ಗೋಜಲು ಗೋಜಲಾಗೇ ಉಳಿದಿತ್ತು.


ಬಾಹೊಫೆನ್ ಮತ್ತು ಮಾರ್ಗನ್‍ರವರ ಕೊಡುಗೆಗಳು
ಕುಟುಂಬದ ಇತಿಹಾಸದ ಅಧ್ಯಯನ 1861ರಿಂದ, ಎಂದರೆ ಬಾಹೊಫೆನ್‍ರ ‘ಮಾತೃ ಅಧಿಕಾರ’ ಎಂಬ ಗ್ರಂಥವು ಪ್ರಕಟವಾದಂದಿನಿಂದ ಆರಂಭವಾಗುತ್ತದೆ. ಸ್ವಿಟ್ಜರ್ಲೆಂಡಿನವರಾದ ಜೋಹಾನ್ ಜಾಕಬ್ ಬಾಹೊಫೆನ್ ಈ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ ಮಾನವಶಾಸ್ತ್ರಜ್ಞರು.ಅವರು ಕುಟುಂಬ ಪದ್ಧತಿಯು, ಸ್ವಚ್ಫಂದ ಲೈಂಗಿಕತೆಯ ಹಂತದಿಂದ ಏಕಪತ್ನಿ ಪದ್ಧತಿ ವಿಕಾಸವಾಯಿತೆಂದು, ಮಾತೃ ಅಧಿಕಾರದಿಂದ ಪಿತೃ ಅಧಿಕಾರವು ವಿಕಾಸವಾಯಿತೆಂದು ಗುರುತಿಸುತ್ತಾರೆ.ಮತ್ತು ಅವರು ಅಸಾಧಾರಣ ಶ್ರದ್ಧೆಯಿಂದ, ಪ್ರಾಚೀನ ಅಭಿಜಾತ ಸಾಹಿತ್ಯ ಕೃತಿಗಳ ಅಸಂಖ್ಯಾತ ಭಾಗಗಳಲ್ಲಿ ತಮ್ಮ ಪ್ರತಿಪಾದನೆಗಳನ್ನು ಬೆಂಬಲಿಸುವ ಸಾಕ್ಷ್ಯವನ್ನು ಕಂಡುಕೊಳ್ಳುತ್ತಾರೆ.ಸಮಾಜದಲ್ಲಿ ಮೂಡಿಬಂದ ಈ ಬದಲಾವಣೆಗಳಿಗೆ ಅವರು ಧಾರ್ಮಿಕ ಕಾರಣಗಳನ್ನು ಕೊಡುತ್ತಾರೆ ಎಂಬ ದೋಷಕ್ಕೆ ವಿನಾಯಿತಿ ನೀಡಿದರೆ ಅವರು ಮಾಡಿರುವ ಕೆಲಸ ಅತ್ಯಂತ ಉಪಯುಕ್ತವಾದುದು. ಒಂದು ಸಮಾಜದ ರೀತಿ-ರಿವಾಜುಗಳು, ನೀತಿ ನೈತಿಕತೆಗಳು, ಮೌಲ್ಯಪ್ರಜ್ಞೆ , ಮಾನವ ಸಂಬಂಧಗಳು, ಗಂಡು ಹೆಣ್ಣಿನ ಸಂಬಂಧಗಳು ಹೇಗಿದ್ದಿರಬಹುದು ಎಂದು ಊಹಿಸಿಕೊಳ್ಳಲು ಆಯಾ ಕಾಲಘಟ್ಟದಲ್ಲಿ ಬರೆಯಲಾಗಿರುವ ಅಭಿಜಾತ ಕೃತಿಗಳು ಒಳ್ಳೆಯ ಆಕರಗಳಾಗುತ್ತವೆ ಎಂಬುದು ಸರ್ವವಿದಿತ. ಈ ನಿಟ್ಟಿನಲ್ಲಿ ಬಾಹೊಫೆನ್‍ರು ಮಾಡಿರುವ ಕೆಲಸ ಸ್ತುತ್ಯರ್ಹವಾದುದು.
ಕಮ್ಯುನಿಸ್ಟ್ ಸಿದ್ಧಾಂತವನ್ನು ಪ್ರತಿಪಾದಿಸಿದ ದಾರ್ಶನಿಕರಾದ ಮಾಕ್ರ್ಸ್ ಮತ್ತು ಎಂಗೆಲ್ಸ್‍ರವರ ಸಮಕಾಲೀನರಾಗಿದ್ದ ಲೂಯಿಸ್ ಹೆನ್ರಿ ಮಾರ್ಗನ್‍ರವರು ಅಮೆರಿಕಾದ ಅಗ್ರಗಣ್ಯ ಮಾನವಶಾಸ್ತ್ರಜ್ಞರು. ಇವರು ಅಮೆರಿಕಾದ ನ್ಯೂಯಾರ್ಕ್ ಸಂಸ್ಥಾನದಲ್ಲಿ ವಾಸಿಸುತ್ತಿದ್ದ ಇರಾಕೆಸ್ ಎನ್ನುವ ಬುಡಕಟ್ಟು ಜನಾಂಗದವರ ಮಧÉ್ಯ ನಲವತ್ತು ವರ್ಷಗಳಷ್ಟು ಸುದೀರ್ಘ ಕಾಲ ಪ್ರಾಚೀನ ಸಮಾಜದ ಇತಿಹಾಸದ ಬಗ್ಗೆ ಅಧ್ಯಯನ ಮಾಡಿದವರು. ವೃತ್ತಿಯಿಂದ ವಕೀಲರಾಗಿದ್ದ ಮಾರ್ಗನ್‍ರವರು ಇರಾಕೆಸ್ ಜನರಿಗೆ ಸೇರಿದ್ದ ಭೂಮಿಯನ್ನು ಅಮೆರಿಕನ್ ಸರ್ಕಾರ ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ, ಅವರ ಪರ ವಕಾಲತ್ತು ಮಾಡಿ ಅವರ ಭೂಮಿ ಅವರಲ್ಲೇ ಉಳಿಯುವುದಕ್ಕೆ ಕಾರಣರಾದರು. ಇರಾಕೆಸ್‍ನ ಜನ ಕೃತಜ್ಞತೆಯಿಂದ ಇವರನ್ನು ತಮ್ಮವರೆಂದೇ ಬಗೆದು ಅವರನ್ನು ತಮ್ಮ ಪಂಗಡದವನೆಂದು ದತ್ತು ತೆಗೆದುಕೊಂಡರು! ಇರಾಕೆಸ್ ಜನರ ಮಧ್ಯೆ ಚಾಲ್ತಿಯಲ್ಲಿದ್ದ ಕುಟುಂಬ ಪದ್ಧತಿಯನ್ನು ಹಾಗೂ ಅದರ ಜೊತೆಗೆ ತಾಳೆಯಾಗದಿದ್ದ ಆದರೆ ಅಸ್ತಿತ್ವದಲ್ಲಿದ್ದ ರಕ್ತಬಾಂಧವ್ಯ ಪದ್ಧತಿಯನ್ನು ಮಾರ್ಗನ್‍ರವರು ಆಳವಾಗಿ ಅಭ್ಯಾಸ ಮಾಡಿದ ಫಲವಾಗಿ ಈ ಹಿಂದೆ ಒಗಟೊಗಟಾಗಿ ಬಿಡಿಬಿಡಿಯಾಗಿ ಕಾಣುತ್ತಿದ್ದ ಸಂಗತಿಗಳಿಗೆಲ್ಲ ಉತ್ತರ ಸಿಗುವಂತಾಗಿ, ಅವುಗಳನ್ನು ವ್ಯವಸ್ಥಿತವಾಗಿ ಕಟ್ಟಿಕೊಡಲು ಅವರಿಗೆ ಸಾಧ್ಯವಾಯಿತು.ಇದರ ಜೊತೆಗೆ ಆದಿಕಾಲದ ಸಾಮಾಜಿಕ ಸಂಘಟನೆಯ ಆಧಾರವಾಗಿದ್ದ ‘ಗೋತ್ರ’ಗಳ ಬಗ್ಗೆ ಬೆಳಕು ಚೆಲ್ಲಿದ್ದು ಅವರ ಮತ್ತೊಂದು ಮಹತ್ವದ ಆವಿಷ್ಕಾರ.ಗೋತ್ರವೆಂದರೆ ಪ್ರಾಣಿಗಳ ಹೆಸರುಗಳಿಂದ ಸೂಚಿತವಾಗುವ ರಕ್ತಸಂಬಂಧವಿರುವ ಜನರ ಸಮೂಹ.ನಾಗರಿಕಾವಸ್ಥೆಯ ಮುಂಚಿನ ಹಂತವಾದ ಅನಾಗರಿಕಾವಸ್ಥೆಯ ಹಂತದಲ್ಲಿ ವಿಶ್ವದಾದ್ಯಂತ ಒಂದೇ ತೆರನಾದ ಗೋತ್ರ ಆಧಾರಿತ ಸಾಮಾಜಿಕ ಸಂಘಟನೆಗಳಿದ್ದವು ಹಾಗೂ ಆ ಗೋತ್ರಗಳು ತಾಯಂದಿರ ಮೂಲಕ ರೂಪುಗೊಳ್ಳುತ್ತಿದ್ದವು ಎಂದು ಮಾರ್ಗನ್‍ರವರು ಸಮರ್ಥವಾಗಿ ಪ್ರತಿಪಾದಿಸುತ್ತಾರೆ.ಡಾರ್ವಿನ್ನರ ವಿಕಾಸ ಸಿದ್ಧಾಂತವು ಜೀವಶಾಸ್ತ್ರಕ್ಕೆ, ಮಾಕ್ರ್ಸ್‍ರವರ ಮಿಗುತಾಯ ಮೌಲ್ಯ ಸಿದ್ಧಾಂತವು ರಾಜಕೀಯ ಅರ್ಥಶಾಸ್ತ್ರಕ್ಕೆ ಎಷ್ಟು ಮಹತ್ವದ್ದಾದವೋ ಮಾರ್ಗನ್ನರ ಈ ಆವಿಷ್ಕಾರಗಳು ಆದಿಕಾಲದ ಸಮಾಜದ ಇತಿಹಾಸಕ್ಕೆ ಅಷ್ಟೇ ಮಹತ್ವದ್ದಾಗಿದ್ದವು. ಎಂಗೆಲ್ಸ್‍ರವರು ಮಾರ್ಗನ್ ಅವರ ‘‘ಏನ್ಶಿಯೆಂಟ್ ಸೊಸೈಟಿ’’ ಪುಸ್ತಕವನ್ನು ಬಹಳ ಮೆಚ್ಚಿಕೊಂಡು ಅದರಿಂದ ಅನೇಕ ಮುಖ್ಯ ವಿಷಯಗಳನ್ನು ತೆಗೆದುಕೊಂಡರು.


ಎಂಗೆಲ್ಸ್‍ರವರ ಮೇರುಕೃತಿ ದ್ವಂದ್ವಾತ್ಮಕ ಭೌತವಾದವನ್ನು ಮಾನವ ಸಮಾಜಕ್ಕೆ ಅನ್ವಯಿಸಿ ಮಾನವ ಸಮಾಜವೂ ಸಹ ಹೇಗೆ ನಿಯಮಬದ್ಧವಾಗಿ ಬದಲಾವಣೆಗೊಳಪಟ್ಟಿದೆ ಎಂದು ಚಾರಿತ್ರಿಕ ಭೌತವಾದದ ಮೂಲಕ ಮಾಕ್ರ್ಸ್ ಮತ್ತು ಎಂಗೆಲ್ಸ್ ಪ್ರತಿಪಾದಿಸಿದರು. ಇದನ್ನು ತಮ್ಮದೇ ಆದ ರೀತಿಯಲ್ಲಿ ಮಾರ್ಗನ್‍ರವರು ಅಮೆರಿಕಾದಲ್ಲಿ ಸಾಕ್ಷಿ ಪುರಾವೆಗಳೊಂದಿಗೆ ನಲವತ್ತು ವರ್ಷಗಳ ನಂತರ ಸಾಬೀತುಪಡಿಸಿದರು.ಈ ವಿವರಗಳನ್ನು ಸ್ವೀಕರಿಸಿ, ತಮ್ಮದೇ ಅಧ್ಯಯನ, ಸಂಶೋಧನೆಗಳಿಂದ ಕಂಡುಬಂದ ಸಂಗತಿಗಳನ್ನೂ ಸೇರಿಸಿ ಎಂಗೆಲ್ಸ್ ‘‘ಕುಟುಂಬ, ಖಾಸಗಿ ಆಸ್ತಿ ಹಾಗೂ ರಾಜ್ಯದ ಉಗಮ’’ ಎಂಬ ಮೇರುಕೃತಿಯನ್ನು ರಚಿಸಿದರು.ಅದರಲ್ಲಿ ಅವರು ಖಾಸಗಿ ಆಸ್ತಿಯ ಉಗಮ, ವರ್ಗ ವಿಭಜನೆ, ವಿವಿಧ ಪ್ರದೇಶಗಳಲ್ಲಿ ಪ್ರಭುತ್ವವು ರಚನೆಯಾದ ಪ್ರಕ್ರಿಯೆಗಳು ಇವುಗಳನ್ನೆಲ್ಲಾ ಚರ್ಚಿಸಿದ್ದಾರೆ.ನಾವು ಪ್ರಸ್ತುತ ಲೇಖನಕ್ಕೆ ಸಂಬಂಧಿಸಿದಂತೆ ಕುಟುಂಬದ ಬಗ್ಗೆ ಅದು ಏನು ಹೇಳುತ್ತದೋ ನೋಡೋಣ ಬನ್ನಿ.

ಕುಟುಂಬ ವಿಕಾಸದ ಶೋಧನೆ
ಮಾರ್ಗನ್‍ರು ಇರಾಕೆಸ್ ಜನರ ಮಧ್ಯೆ ತಮ್ಮ ಅಧ್ಯಯನವನ್ನು ಕೈಗೊಂಡರು.ಅವರ ಮಧ್ಯೆ ಇದ್ದ ಸಂಬಂಧಗಳನ್ನು ಹತ್ತಿರದಿಂದ ನೋಡಿದರು.ಅವರ ಮಧ್ಯೆ ಒಂದು ಗಂಡು ಒಂದು ಹೆಣ್ಣಿನ ನಡುವೆ ಮದುವೆಯಾಗುವ ಯುಗ್ಮ ಕುಟುಂಬ ಪದ್ಧತಿ ಇತ್ತು.ಈ ಸಂಬಂಧದಿಂದ ಹುಟ್ಟುವ ಮಕ್ಕಳನ್ನು ತಮ್ಮ ಮಕ್ಕಳು ಎಂದು ಆ ತಾಯಿ ತಂದೆ ಕರೆಯುತ್ತಿದ್ದರು.ಜೊತೆಗೇ ಆ ತಾಯಿಯು ತನ್ನ ಅಕ್ಕ ತಂಗಿಯರ ಮಕ್ಕಳನ್ನೂ ತನ್ನ ಮಕ್ಕಳೆಂದು ಕರೆಯುತ್ತಿದ್ದಳು. ಆ ತಂದೆಯು ಸಹ ತನ್ನ ಅಣ್ಣ ತಮ್ಮಂದಿರ ಮಕ್ಕಳನ್ನೂ ತನ್ನ ಮಕ್ಕಳೆಂದು ಕರೆಯುತ್ತಿದ್ದನು.ಆದರೆ ಆ ತಾಯಿಯು ತನ್ನ ಅಣ್ಣ-ತಮ್ಮಂದಿರ ಮಕ್ಕಳನ್ನು ಮಾತ್ರ ಸೋದರ ಅಳಿಯ, ಸೋದರ ಸೊಸೆಯರೆಂದು ಕರೆಯುತ್ತಿದ್ದಳು.ಆ ತಂದೆಯು ಸಹ ತನ್ನ ಅಕ್ಕ-ತಂಗಿಯರ ಮಕ್ಕಳನ್ನು ಸೋದರ ಅಳಿಯ, ಸೋದರ ಸೊಸೆಯರೆಂದು ಕರೆಯುತ್ತಿದ್ದನು.ಇದು ಏಕೆ ಹೀಗೆ ಎನ್ನುವ ಪ್ರಶೆÉ್ನ ಮಾರ್ಗನ್‍ರವರನ್ನು ಕಾಡಲಾರಂಭಿಸಿತು.ಇಂಗ್ಲೆಂಡಿನ ಖ್ಯಾತ ವಕೀಲರೂ, ಮಾನವಶಾಸ್ತ್ರಜ್ಞರೂ ಆದ ಮ್ಯಾಕ್‍ಲೆನ್ನಾನ್‍ರವರು ಇವು ಕೇವಲ ಆತ್ಮೀಯತೆಗೋಸ್ಕರ, ಶಿಷ್ಟಾಚಾರಕ್ಕೋಸ್ಕರ ಬಳಸುವ ಪದಗಳು.ನಾವು ಪಾದ್ರಿಯೊಬ್ಬರನ್ನು ‘ತಂದೆ’ ಎನ್ನುತ್ತೇವೆ, ಸನ್ಯಾಸಿಯನ್ನು ‘ಸೋದರಿ’ ಎಂದು ಕರೆಯುತ್ತೇವೆ. ಇದು ಹಾಗೆಯೇ ಎಂದು ವಾದಿಸಿದರು.ಆದರೆ ಮಾರ್ಗನ್‍ರಿಗೆ ಇದು ಒಪ್ಪಿಗೆಯಾಗಲಿಲ್ಲ. ಇದಕ್ಕೆ ಬೇರೆ ಕಾರಣವಿರಬೇಕು ಎಂದು ಅವರು ತಮ್ಮ ಹುಡುಕಾಟವನ್ನು ಮುಂದುವರಿಸಿದರು. ವಿಶ್ವದ ಇತರ ಭಾಗಗಳಲ್ಲಿ ಜನಗಳ ಮಧ್ಯೆ ಇರಬಹುದಾದ ವಿವಾಹ ಸಂಬಂಧಗಳು, ರಕ್ತಸಂಬಂಧಗಳ ಬಗ್ಗೆ ತಿಳಿದು ಕೊಳ್ಳಲು ಮುಂದಾದರು.ಈ ಕುರಿತು ಮಾಹಿತಿ ಸಂಗ್ರಹಿಸಲು ಅಮೆರಿಕದ ಫೆಡರಲ್ ಸರಕಾರವನ್ನು ಕೇಳಿಕೊಂಡರು.ಅದಕ್ಕಾಗಿ ಅವರೇ ಒಂದು ಪ್ರಶ್ನಾವಳಿಯನ್ನು ಸಿದ್ಧಪಡಿಸಿಕೊಟ್ಟರು.

ಈ ಮಾಹಿತಿಗಳಿಂದ ಸಿಕ್ಕ ಉತ್ತರದಿಂದ ಮಾರ್ಗನ್‍ರವರು ಈ ಕೆಳಗಿನ ಅಂಶಗಳನ್ನು ಕಂಡುಕೊಂಡರು.
(1) ಇರಾಕೆಸ್ ಬುಡಕಟ್ಟಿನ ಜನರ ಮಧ್ಯೆ ಇದ್ದಂತಹುದೇ ರಕ್ತಸಂಬಂಧ ಪದ್ಧತಿಯು ಏಷ್ಯಾದಲ್ಲೂ ಅನೇಕಾನೇಕ ಬುಡಕಟ್ಟುಗಳ ಮಧ್ಯೆ ಇತ್ತು. ಮತ್ತು ಸ್ವಲ್ಪ ಮಾರ್ಪಡಿಸಿದ ರೀತಿಯಲ್ಲಿ ಆಫ್ರಿಕಾ, ಆಸ್ಟ್ರೇಲಿಯಾಗಳಲ್ಲೂ ಇತ್ತು.
(2) ಹವಾಯ್‍ನಲ್ಲೂ, ಆಸ್ಟ್ರೇಲಿಯಾದ ಬಳಿಯ ದ್ವೀಪಗಳಲ್ಲೂ ಇದ್ದ ಒಂದು ವಿಧವಾದ ಗುಂಪು ವಿವಾಹ ಪದ್ಧತಿಯು, ಇರಾಕೆಸ್‍ನ ಜನರ ಮಧ್ಯೆ ಇದ್ದ ರಕ್ತಸಂಬಂಧ ಪದ್ಧತಿಯನ್ನು ಹೋಲುತ್ತಿತ್ತು. ಆದರೆ ಆ ಪದ್ಧತಿಯು ಅಳಿದು ಹೋಗುತ್ತಿತ್ತು.
(3) ಈ ರೀತಿಯ ಗುಂಪು ವಿವಾಹ ಪದ್ಧತಿಯ ಜೊತೆಗೇ ಈ ದ್ವೀಪಗಳಲ್ಲಿ ಇನ್ನೊಂದು ರೀತಿಯ ರಕ್ತಸಂಬಂಧ ಪದ್ಧತಿಯೂ ಅಸ್ತಿತ್ವದಲ್ಲಿತ್ತು. ಅದಕ್ಕೆ ಈ ಗುಂಪು ವಿವಾಹ ಪದ್ಧತಿಗೂ ಮುನ್ನ ಇದ್ದ ಮತ್ತು ಈಗ ಅಳಿಸಿಹೋಗಿರುವ ಮತ್ತೊಂದು ಪದ್ಧತಿಯು ಕಾರಣವಾಗಿದ್ದಿರಬೇಕು.ಮಾರ್ಗನ್‍ರು ತಾವು ಸಂಗ್ರಹಿಸಿದ್ದ ಅಂಕಿ-ಅಂಶಗಳನ್ನು, ಅವುಗಳನ್ನು ಸೂಕ್ತವಾಗಿ ವ್ಯಾಖ್ಯಾನಿಸುವುದರಿಂದ ಬಂದ ತೀರ್ಮಾನಗಳನ್ನು 1871ರಲ್ಲಿ ‘ರಕ್ತಸಂಬಂಧದ ಹಾಗೂ ನೆಂಟಸ್ತನದ ಪದ್ಧತಿಗಳು’ ಎಂಬ ತಮ್ಮ ಕೃತಿಯಲ್ಲಿ ಪ್ರಕಟಿಸಿದರು. ಇದು ಕ್ರಾಂತಿಕಾರಕ ಆವಿಷ್ಕಾರವಾಗಿತ್ತು ಹಾಗೂ ಕುಟುಂಬದ ಇತಿಹಾಸಕ್ಕೆ ಸಂಬಂಧಿಸಿದ ಚರ್ಚೆಗೆ ವಿಶಾಲವಾದ ವ್ಯಾಪ್ತಿಯನ್ನು ಒದಗಿಸಿತು. ಈಗ ರಕ್ತಸಂಬಂಧದ ಪದ್ಧತಿಯನ್ನು ಆರಂಭ ಬಿಂದುವಾಗಿಟ್ಟುಕೊಂಡು ಮಾರ್ಗನ್‍ರು ವಿವಿಧ ಕುಟುಂಬದ ರೂಪಗಳನ್ನು ಪುನರ್ ರಚಿಸಿದರು.

ಕುಟುಂಬದ ವಿಕಸನ
ಮಾನವ ಸಮಾಜದ ತೀರ ಆರಂಭದ ಹಂತದಲ್ಲಿ ಸ್ವೇಚ್ಫಾ ಲೈಂಗಿಕ ಸಂಬಂಧಗಳ ಕಾಲಾವಧಿಯೊಂದು ಇತ್ತು.ಈ ಕಾಲಾವಧಿಯು ಮಾನವನು ಪ್ರಾಣಿಯ ಅವಸ್ಥೆಯಿಂದ ಮನುಷ್ಯನ ಅವಸ್ಥೆಗೆ ಸ್ಥಿತ್ಯಂತರಗೊಂಡ ಕಾಲಾವಧಿಗೆ ತಾಳೆಯಾಗುತ್ತದೆ.ಇಲ್ಲಿ ಸ್ವೇಚ್ಫಾ ಲೈಂಗಿಕ ಸಂಬಂಧ ಎಂದರೆ ನಂತರದ ಕಾಲಾವಧಿಯಲ್ಲಿ ಕಂಡುಬರುವ ನಿರ್ಬಂಧಗಳು ಅಸ್ತಿತ್ವದಲ್ಲಿರಲಿಲ್ಲ ಎಂದು ಅರ್ಥ.ಅದೊಂದು ವಿಕೃತಿ ಅಲ್ಲ. ಅದನ್ನು ಇಂದಿನ ಮಾನದಂಡಗಳಿಂದ ಅಳೆಯಬಾರದು.
ಮಾರ್ಗನ್‍ರವರ ಪ್ರಕಾರ, ಸ್ವಚ್ಫಂದ ಲೈಂಗಿಕತೆಯ ಈ ಮೂಲ ಪರಿಸ್ಥಿತಿಯಿಂದ, ಬಹುಶಃ ಅತ್ಯಂತ ಆರಂಭಿಕ ಘಟ್ಟದಲ್ಲಿ, ಈ ಕೆಳಗಿನವು ವಿಕಾಸಗೊಂಡವು.

  1. ರಕ್ತಸಂಬಂಧಿ ಕುಟುಂಬ
    ಇದು ಕುಟುಂಬದ ಮೊದಲ ಘಟ್ಟ .ಇಲ್ಲಿ ತಲೆಮಾರುಗಳಿಗೆ ಅನುಗುಣವಾಗಿ ವಿವಾಹಗಳು ಜರುಗುತ್ತವೆ. ಇಲ್ಲಿ ಒಂದು ಕುಟುಂಬದ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಜ್ಜ ಅಜ್ಜಿಯರು ಗಂಡಹೆಂಡತಿಯರು.ಅವರ ಮಕ್ಕಳಾದ ತಂದೆ ತಾಯಂದಿರು, ಪರಸ್ಪರ ಗಂಡ ಹೆಂಡತಿಯರು.ಇವರ ಮಕ್ಕಳು ಪರಸ್ಪರ ಗಂಡ-ಹೆಂಡಿರಾಗುತ್ತಾರೆ.ಇಲ್ಲಿ ಒಂದು ತಲೆಮಾರಿನ ಜನ ಇನ್ನೊಂದು ತಲೆಮಾರಿನ ಜನರೊಂದಿಗೆ ವಿವಾಹವಾಗುವುದಕ್ಕೆ ಅವಕಾಶವಿಲ್ಲ. ಅದನ್ನು ನಿಷೇಧಿಸಲಾಗಿದೆ.ಈ ರೀತಿಯ ರಕ್ತಸಂಬಂಧಿ ಕುಟುಂಬವು ಅಳಿದುಹೋಗಿದೆ.ಈ ರೀತಿಯ ಕುಟುಂಬಕ್ಕೆ ಯಾವುದೇ ನಿದರ್ಶನ ಈಗ ಕಂಡುಬರುವುದಿಲ್ಲ. ಆದರೆ ಹವಾಯ್‍ನ ರಕ್ತಸಂಬಂಧ ಪದ್ಧತಿಯು ತಾನು ನೀಡುವ ಕೆಲವೊಂದು ಪುರಾವೆ ಗಳಿಂದಾಗಿ ಈ ರೀತಿಯ ಕುಟುಂಬ ಪದ್ಧತಿಯು ಅಸ್ತಿತ್ವದಲ್ಲಿ ಇದ್ದಿರಲೇಬೇಕು ಎಂಬ ತೀರ್ಮಾನಕ್ಕೆ ಬರುವಂತೆ ಒತ್ತಾಯಿಸುತ್ತದೆ.
  2. ಪುನಾಲುಆನ್ ಕುಟುಂಬ
    ತಂದೆ ತಾಯಿಯರೂ ಮಕ್ಕಳೂ ಪರಸ್ಪರ ಲೈಂಗಿಕ ಸಂಬಂಧ ಹೊಂದಿರುವುದನ್ನು ನಿಷೇಧಿಸಿದುದು ಕುಟುಂಬ ಸಂಘಟನೆಯಲ್ಲಾದ ಮೊದಲ ಮಹಾನ್ ಮುನ್ನಡೆ. ಸೋದರ ಸೋದರಿಯರು ಲೈಂಗಿಕ ಸಂಬಂಧ ಹೊಂದಿರುವುದನ್ನು ನಿಷೇಧಿಸಿದ್ದು ಎರಡನೆಯ ಮುನ್ನಡೆ.ಯಾವ ಬುಡಕಟ್ಟುಗಳಲ್ಲಿ ಸೋದರ ಸೋದರಿಯರ ಮಧ್ಯೆ ವಿವಾಹವನ್ನು ನಿಷೇಧಿಸಲಾಯಿತೋ ಆ ಬುಡಕಟ್ಟುಗಳು ಬಹಳ ಬೇಗ ಬೆಳೆಯಲು ಸಾಧ್ಯವಾಯಿತು.ಯಾವ ಬುಡಕಟ್ಟುಗಳಲ್ಲಿ ಸೋದರ ಸೋದರಿಯರ ಮಧ್ಯದ ವಿವಾಹಗಳು ಮುಂದುವರಿದಿದ್ದವೋ ಅವು ಕುಂಟುತ್ತಾ ಸಾಗಿದವು.
    ಆಧುನಿಕ ವಿಜ್ಞಾನವು ಬೆಳೆದಿರುವಂತಹ ಈ ಕಾಲದ ಜನರಿಗೆ ರಕ್ತಸಂಬಂಧಿಗಳ ಮಧ್ಯೆ ನಡೆಯುವ ಮದುವೆಗಳ ಅಪಾಯ ಗೊತ್ತು.ಈ ಸಂಬಂಧದಿಂದ ಹುಟ್ಟುವ ಮಕ್ಕಳು ವಿಕಲಾಂಗರಾಗಬಹುದು, ಅಪೂರ್ಣ ಬೆಳವಣಿಗೆ ಹೊಂದಿದವರಾಗಬಹುದು.ತಂದೆ ತಾಯಿ ಇಬ್ಬರ ವಂಶವಾಹಿಗಳಲ್ಲೂ ಇರುವ ದೌರ್ಬಲ್ಯಗಳು ಇಮ್ಮಡಿಯಾಗಿ ಮಗುವಿನಲ್ಲಿ ಕಾಣಿಸಿಕೊಳ್ಳಬಹುದು, ಇತ್ಯಾದಿ. ಆದರೆ ಈ ಅಪಾಯಗಳ ಕುರಿತು ಪರಿಪೂರ್ಣ ಜ್ಞಾನ ಇಲ್ಲದಿದ್ದರೂ ಅಂದಿನವರು ಅನುಭವಜನ್ಯ ತಿಳಿವಳಿಕೆಯಿಂದಲೇ ಇದನ್ನು ಗ್ರಹಿಸಿದ್ದಿರಬೇಕು. ಹಾಗಾಗಿಯೇ ಮೊದಲು ಹಲವಾರು ಪೀಳಿಗೆಗಳ ಮಧ್ಯೆ ಇದ್ದ ಸಂಬಂಧಗಳನ್ನು ನಿಷೇಧಿಸಿದರು. ನಂತರ ಒಂದೇ ಪೀಳಿಗೆಯಲ್ಲೂ ಸೋದರ ಸೋದರಿಯರ ಮಧÉ್ಯ ಲೈಂಗಿಕ ಸಂಬಂಧಗಳನ್ನು ನಿಷೇಧಿಸಿದರು.
    ಮತ್ತೆ ನಾವು ಪುನಾಲುಆನ್ ಕುಟುಂಬ ವ್ಯವಸ್ಥೆಗೆ ಹೋಗೋಣ.ಒಬ್ಬಳೇ ತಾಯಿಯ ಮಕ್ಕಳ ನಡುವೆ ಲೈಂಗಿಕ ಸಂಬಂಧವು ಅಯುಕ್ತವಾದುದು ಎಂಬ ಕಲ್ಪನೆ ಹುಟ್ಟಿದ ಮೇಲೆ ಅದು ಹೊಸ ರೀತಿಯ ಕುಟುಂಬಗಳಿಗೆ ಜನ್ಮ ನೀಡಿತು.ಇಲ್ಲಿ ಅನೇಕ ಅಕ್ಕ ತಂಗಿಯರು ತಮ್ಮ ಅಣ್ಣ ತಮ್ಮಂದಿರಲ್ಲದ ಬೇರೆ ಗಂಡಸರನ್ನು ಮದುವೆಯಾಗುತ್ತಾರೆ.ಮತ್ತು ಎಲ್ಲರಿಗೂ ಸೇರಿದವರಾಗುತ್ತಾರೆ.ಅಂದರೆ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ.ಈ ಗಂಡಸರು ಬೇರೆ ತಾಯಿಯ ಮಕ್ಕಳಿರಬಹುದು ಅಥವಾ ಇನ್ಯಾವುದೇ ಗಂಡಸರಾಗಿರಬಹುದು.ಆದರೆ ಈ ಗಂಡಸರು ಆ ಅಕ್ಕ ತಂಗಿಯರ ಅಣ್ಣ ತಮ್ಮಂದಿರು ಮಾತ್ರ ಆಗಿರಬಾರದು.ಇದು ಕಡ್ಡಾಯ ನಿಯಮ.ಈ ಗಂಡಸರು ಒಬ್ಬರು ಇನ್ನೊಬ್ಬರಿಗೆ ‘ಪುನಾಲುಆ’ ಅಂದರೆ ನಿಕಟ ಸಂಬಂಧಿಗಳು.ಇದೇ ತರಹ ಅನೇಕ ಅಣ್ಣ ತಮ್ಮಂದಿರು, ತಮ್ಮ ಅಕ್ಕ ತಂಗಿಯರಲ್ಲದ ಅನೇಕ ಹೆಂಗಸರನ್ನು ಮದುವೆಯಾಗುತ್ತಾರೆ.ಮತ್ತು ಎಲ್ಲರೊಂದಿಗೂ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ.ಈ ಹೆಂಗಸರು ಒಬ್ಬರಿನ್ನೊಬ್ಬರನ್ನು ‘ಪುನಾಲುಆ’ ಎಂದು ಕರೆದುಕೊಳ್ಳುತ್ತಾರೆ.ಈ ಕುಟುಂಬ ರೂಪವು ಈಗ ನಮಗೆ ಇರಾಕೆಸ್ ಜನರ ಮಧ್ಯೆ ಅಸಂಗತವೆಂದು ಕಂಡುಬರುವ ರಕ್ತ ಸಂಬಂಧದ ವ್ಯವಸ್ಥೆಗೆ ಅತ್ಯಂತ ಸಮರ್ಪಕವಾದ ಉತ್ತರ ಕೊಡುತ್ತದೆ.
    ಈ ಕುಟುಂಬ ಪದ್ಧತಿಯಲ್ಲಿ ನನ್ನ ತಾಯಿಯ ಅಕ್ಕ ತಂಗಿಯರ ಮಕ್ಕಳು ಅವಳ ಮಕ್ಕಳೇ ಆಗುತ್ತಾರೆ.ಏಕೆಂದರೆ ನನ್ನ ತಾಯಿಯ ಅಕ್ಕ ತಂಗಿಯರ ಗಂಡಂದಿರು ಅವಳ ಗಂಡಂದಿರೂ ಆಗಿರುತ್ತಾರೆ.ಅದೇ ರೀತಿ ನನ್ನ ತಂದೆಯ ಅಣ್ಣ ತಮ್ಮಂದಿರ ಮಕ್ಕಳು ಅವನ ಮಕ್ಕಳೇ ಆಗುತ್ತಾರೆ.ಏಕೆಂದರೆ ನನ್ನ ತಂದೆಯ ಅಣ್ಣ ತಮ್ಮಂದಿರ ಹೆಂಡತಿಯರು ಅವನ ಹೆಂಡತಿಯರು ಆಗಿರುತ್ತಾರೆ.ವಾಸ್ತವದಲ್ಲಿ ಯಾವಾಗಲೂ ಹಾಗಾಗದಿದ್ದರೂ ಅವರಿಗೆ ಆ ಹಕ್ಕು ಇತ್ತು.
    ನನ್ನ ತಾಯಿಯ ಅಣ್ಣತಮ್ಮಂದಿರ ಮಕ್ಕಳು ಈಗ ಅವಳಿಗೆ ಸೋದರಳಿಯ, ಸೋದರ ಸೊಸೆಯರು ಮತ್ತು ಅವರೆಲ್ಲ ನನ್ನ ಭ್ರಾತೃಸಂಬಂಧಿಗಳು (ಕಸಿನ್ಸ್). ಹಾಗೆಯೇ ನನ್ನ ತಂದೆಯ ಅಕ್ಕತಂಗಿಯರ ಮಕ್ಕಳು ಅವರಿಗೆ ಸೋದರಳಿಯ, ಸೋದರಸೊಸೆಯರು ಮತ್ತು ನನಗೆ ಭ್ರಾತೃಸಂಬಂಧಿಗಳು (ಕಸಿನ್ಸ್).
    ಏಕ ಪತಿ/ಪತ್ನಿ ವಿವಾಹದ ಮೇಲೆ ಆಧರಿಸಿದಂತಹ ಎಲ್ಲ ಮಾದರಿಯ ಕುಟುಂಬ ಪದ್ಧತಿಗಳಲ್ಲೂ ಅಸಂಗತವೆಂದು ಕಂಡುಬರುವ ರಕ್ತಸಂಬಂಧ ಪದ್ಧತಿಗೆ ಪುನಾಲುಆನ್ ಕುಟುಂಬ ಪದ್ಧತಿಯು ವಿವೇಕಯುತವಾದ ವಿವರಣೆ ಒದಗಿಸುತ್ತದೆ.
    ಈಗ ಪುನಾಲುಆನ್ ಕುಟುಂಬದ ವಿಶಿಷ್ಟ ಲಕ್ಷಣಗಳನ್ನುಳ್ಳ ಒಂದು ಗುಂಪನ್ನು ತೆಗೆದುಕೊಳ್ಳೋಣ.ಒಬ್ಬ ತಾಯಿಯ ಎಲ್ಲ ಸಹೋದರಿಯರು, ಅವರ ಮಕ್ಕಳು ಹಾಗೂ ಅವಳ ಅಣ್ಣ ತಮ್ಮಂದಿರು ಆ ಗುಂಪಿನ ಸದಸ್ಯರಾಗುತ್ತಾರೆ.ಇವರೆಲ್ಲಾ ಎಲ್ಲರಿಗೂ ಸಾಮಾನ್ಯಳಾದ ಪೂರ್ವಜಳನ್ನು, ತಾಯಿಯನ್ನು ಹೊಂದಿರುತ್ತಾರೆ.ಈ ತಾಯಿಯ ಮೂಲಕ ಹುಟ್ಟುವ ಬೇರೆ ಬೇರೆ ತಲೆಮಾರುಗಳ ಹೆಣ್ಣುಮಕ್ಕಳು ಈ ವಂಶಕ್ಕೆ ಸೇರಿರುತ್ತಾರೆ.ಆದರೆ ಅವರ ಗಂಡಂದಿರು ತಾಯಿಯ ವಂಶದಿಂದ ಬಂದವರಾಗಿರಲು ಸಾಧ್ಯವಿಲ್ಲ. ಆದ್ದರಿಂದ ಈ ರಕ್ತಸಂಬಂಧದ ಗುಂಪಿಗೆ ಸೇರಿದವರಾಗಿರುವುದಿಲ್ಲ. ಆದರೆ ಈ ಹೆಣ್ಣುಮಕ್ಕಳ ಮಕ್ಕಳು ಇದೇ ಗುಂಪಿಗೆ ಸೇರಿರುತ್ತಾರೆ.ಏಕೆಂದರೆ ಎಲ್ಲೆಲ್ಲಿ ಸಮೂಹ ವಿವಾಹವು ಅಸ್ತಿತ್ವದಲ್ಲಿರುತ್ತದೋ ಅಲ್ಲಿ ವಂಶಾವಳಿಯನ್ನು ತಾಯಿಯ ಕಡೆಯಿಂದಷ್ಟೇ ಗುರುತಿಸಲು ಸಾಧ್ಯ.
    ಹೀಗೆ ಪರಸ್ಪರ ವಿವಾಹವಾಗಲು ಅವಕಾಶ ವಿರದಂಥ, ತಾಯಿಯ ಕಡೆಯ ರಕ್ತಸಂಬಂಧಿಗಳ ಕಟ್ಟುನಿಟ್ಟಾಗಿ ಸೀಮಿತವಾದ ಗುಂಪು, ಗೋತ್ರವಾಗಿ ಪರಿವರ್ತನೆಗೊಳ್ಳುತ್ತದೆ.ಈ ಗೋತ್ರಗಳೇ ಮುಂದೆ ಸಾಮಾಜಿಕ ಸಂಘಟನೆಯ ಘಟಕಗಳಾದವು.ಬಹಳ ವ್ಯವಸ್ಥಿತವಾಗಿ ಅಂದಿನ ಸಮಾಜವನ್ನು ನಡೆಸಿಕೊಂಡು ಹೋದವು.ಇದು ಇನ್ನೊಂದು ವಿಸ್ತøತ ಚರ್ಚೆಗೆ ಕಾರಣ ವಾಗುತ್ತದೆ.ಆದರೆ ಇದು ಈ ಲೇಖನದ ವ್ಯಾಪ್ತಿಯನ್ನು ದಾಟುತ್ತಿರುವುದರಿಂದ ಅದನ್ನು ಇಲ್ಲಿಗೆ ಬಿಡೋಣ.
  3. ಯುಗ್ಮ ಕುಟುಂಬ (ಪೇರಿಂಗ್ ಫ್ಯಾಮಿಲಿ)
    ಒಬ್ಬ ಗಂಡಸು ಒಬ್ಬ ಹೆಂಗಸಿನೊಂದಿಗೆ ವಿವಾಹವಾಗುವ ಪದ್ಧತಿ ಇದು.ರಕ್ತಸಂಬಂಧಿಗಳ ಮಧ್ಯೆ ವಿವಾಹವನ್ನು ತಪ್ಪಿಸಲು ಗೋತ್ರ ಪರಿಸ್ಥಿತಿಯು ನೀಡಿದ ಪ್ರಚೋದನೆಯು ಯುಗ್ಮ ಕುಟುಂಬಕ್ಕೆ ಎಡೆಮಾಡಿಕೊಟ್ಟಿತು.ಈ ವಿವಾಹ ಸಂಬಂಧವನ್ನು ಪತಿ-ಪತ್ನಿ ಇಬ್ಬರಲ್ಲಿ ಯಾರು ಬೇಕಾದರೂ ಮುರಿಯ ಬಹುದಾಗಿತ್ತು.ಮತ್ತು ಮಕ್ಕಳು ಹಿಂದಿನಂತೆಯೇ ತಾಯಿಗಷ್ಟೇ ಸೇರಿದವರಾಗುತ್ತಿದ್ದರು.ಬೇರೆಯಾದ ಗಂಡು ಹೆಣ್ಣುಗಳಿಬ್ಬರೂ ಮತ್ತೆ ಮದುವೆಯಾಗಲು ಸ್ವತಂತ್ರರಾಗಿರುತ್ತಿದ್ದರು.
    ಹೊಸ ಸಾಮಾಜಿಕ ಶಕ್ತಿಗಳು, ಎಂದರೆ ಉತ್ಪಾದನಾ ಶಕ್ತಿಗಳು ಚಾಲನೆಗೆ ಬರದೆ ಇದ್ದಲ್ಲಿ, ಈ ಯುಗ್ಮ ಕುಟುಂಬ ಪದ್ಧತಿಯಿಂದ ಹೊಸ ಕುಟುಂಬ ರೂಪವು ಉದ್ಭವಿಸುವುದಕ್ಕೆ ಯಾವುದೇ ಕಾರಣವಿರಲಿಲ್ಲ. ಆದರೆ ಈ ಚಾಲಕ ಶಕ್ತಿಗಳು ಬೆಳೆದುಬಂದವು.
    ಪ್ರಾಣಿಗಳ ಪೆÇೀಷಣೆಯೂ ಪ್ರಾಣಿಗಳ ಮಂದೆಗಳನ್ನು ಬೆಳೆಸುವುದೂ ಅದುವರೆವಿಗೂ ತಿಳಿದಿರಲಿಲ್ಲ. ಇದು ಸಂಪತ್ತಿನ ಆಕರವನ್ನು ವಿಕಾಸಗೊಳಿಸಿದವು.ಕೇವಲ ಅತ್ಯಲ್ಪ ಆರೈಕೆಯಿಂದ ಪ್ರಾಣಿಗಳ ಸಂಖ್ಯೆ ಸತತವಾಗಿ ಹೆಚ್ಚಾಗುತ್ತಿತ್ತು.ಅತ್ಯಂತ ಪುಷ್ಟಿದಾಯಕವಾದ ಮಾಂಸ ಹಾಗೂ ಹಾಲು ಲಭ್ಯವಾಗುತ್ತಿತ್ತು.ಇದಕ್ಕೆ ಮುಂಚೆ ಆಹಾರವನ್ನು ಪಡೆದುಕೊಳ್ಳಲು ಬಳಸುತ್ತಿದ್ದ ವಿಧಾನಗಳೆಲ್ಲ ಈಗ ಹಿಂದೆ ಸರಿದವು.
    ಅಲ್ಲಿಯವರೆಗೂ ಸಂಪತ್ತು ಎಂದರೆ ತೀರಾ ಸಾಧಾರಣವಾದ ಹಾಗೂ ಸ್ವಂತ ಉಪಯೋಗಕ್ಕೆ ಬೇಕಾದ ಮನೆ, ಉಡುಗೆ, ಆಹಾರವನ್ನು ಪಡೆದು ಕೊಳ್ಳಲು ನೆರವಾಗುವ ಸಲಕರಣೆಗಳು ಅಂದರೆ ಒರಟಾದ ಆಯುಧಗಳು, ಮಡಿಕೆ ಕುಡಿಕೆಗಳು.ಈಗ ಅಪಾರ ಸಂಪತ್ತನ್ನು ಸೃಷ್ಟಿಸಬಲ್ಲ ಕುದುರೆ, ಕತ್ತೆ, ಎತ್ತು, ಕುರಿ, ಮೇಕೆ, ಒಂಟೆ, ಹಂದಿಗಳ ಹಿಂಡು ಆಸ್ತಿಯಾದವು.ಮತ್ತು ಅಷ್ಟು ಹೊತ್ತಿಗೆ ಮಹಿಳೆ ಕಂಡುಹಿಡಿದಿದ್ದ ಕೈತೋಟದಿಂದಾಚೆಗೆ ಫಲವತ್ತಾದ ಭೂಮಿಯಲ್ಲಿ ಪ್ರಾಣಿಗಳನ್ನು ಉಪಯೋಗಿಸಿಕೊಂಡು ಮಾಡುವ ಬೇಸಾಯ ಆರಂಭವಾಗಿತ್ತು.ಎಂದರೆ ಸ್ಥಿರಾಸ್ತಿಯ ಉಗಮವೂ ಆಗಿತ್ತು.ಹಿಂದಿನ ಪದ್ಧತಿಯಂತೆ ಅದು ಗೋತ್ರಕ್ಕೆ ಎಂದರೆ ತಾಯಿಯ ಕಡೆಯ ರಕ್ತಸಂಬಂಧಿಗಳಿಗೆ ಸೇರುತ್ತಿತ್ತು.ಮಕ್ಕಳು ತಾಯಿಯ ಆಸ್ತಿಗೆ ಹಕ್ಕುದಾರರಾಗುತ್ತಿದ್ದರು, ಆದರೆ ಅವರು ತಮ್ಮ ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳುವ ಹಾಗಿರಲಿಲ್ಲ. ಅವನ ಆಸ್ತಿ ಅವನ ಗೋತ್ರದಲ್ಲೇ ಉಳಿಯಬೇಕಾಗಿತ್ತು.ಆದ್ದರಿಂದ ಅವನ ಆಸ್ತಿ, ಅವನ ನಂತರ ಅವನ ಸೋದರ ಸೋದರಿಯರಿಗೂ, ಅವನ ಸೋದರಿಯರ ಮಕ್ಕಳಿಗೂ ಸೇರುತ್ತಿತ್ತು.
  4. ಏಕಪತ್ನಿ – ಏಕಪತಿ ಕುಟುಂಬ (ಮಾನೊಗೆಮಿ)
    ಆದರೆ ಕುಟುಂಬದ ಸಂಪತ್ತು ಹೆಚ್ಚಾದಂತೆ ಅದು ಕುಟುಂಬದಲ್ಲಿ ಹೆಂಡತಿಗಿಂತ ಹೊಲದಲ್ಲಿ ದುಡಿಯುವ ಗಂಡನಿಗೆ ಹೆಚ್ಚು ಮುಖ್ಯವಾದ ಸ್ಥಾನಮಾನವನ್ನು ಒದಗಿಸಿಕೊಟ್ಟಿತು.ಸಂತಾನಾಭಿವೃದ್ಧಿ ಮತ್ತಿತರ ಕಾರಣಗಳಿಂದ ಹೊರಗಿನ ಪ್ರಯಾಸಕರ ಕೃಷಿಯಲ್ಲಿ ಮಹಿಳೆಯ ಪಾತ್ರ ಕಡಿಮೆಯಾಗಿತ್ತು.ಇಲ್ಲಿಯವರೆಗೂ ಹೆಂಗಸಿನ ಸ್ಥಾನಮಾನ ಕುಟುಂಬದಲ್ಲಿ, ಸಮಾಜದಲ್ಲಿ ಹೆಚ್ಚಿತ್ತು ಎನ್ನುವುದನ್ನು ಗಮನಿಸಬೇಕು.ಈಗ ತನ್ನ ಆಸ್ತಿಯನ್ನು ತನ್ನ ಸ್ವಂತ ಮಕ್ಕಳ ಪರವಾಗುವಂತೆ ಬದಲಿಸಲು ಅವನ ಹೆಚ್ಚಿದ ಸ್ಥಾನಮಾನ ಅವನಿಗೆ ಉತ್ತೇಜನ ನೀಡಿತು.ಆದರೆ ವಂಶಾವಳಿಯನ್ನು ಎಲ್ಲಿಯವರೆಗೆ ತಾಯಿಯ ಮೂಲಕ ಗುರುತಿಸ ಲಾಗುತ್ತಿತ್ತೋ ಅಲ್ಲಿಯವರೆಗೆ ಇದು ಅಸಾಧ್ಯವಾಗಿತ್ತು.ಆದ್ದರಿಂದ ಅದನ್ನು ಕಿತ್ತೊಗೆಯಲಾಯಿತು.ಇನ್ನು ಮುಂದೆ ಗಂಡಸಿನ ವಂಶಜರು ಗೋತ್ರದಲ್ಲಿ ಉಳಿಯ ತಕ್ಕದ್ದು ಮತ್ತು ಹೆಂಗಸಿನ ವಂಶಜರನ್ನು ಗೋತ್ರದಿಂದ ಹೊರಹಾಕತಕ್ಕದ್ದು ಎಂಬ ಸರಳ ನಿರ್ಧಾರ ಮಾಡುವುದರಿಂದ ಇದನ್ನು ಸಾಧಿಸಲಾಯಿತು.ಇದರಿಂದಾಗಿ ಸ್ತ್ರೀ ಸಂತತಿಯ ಮೂಲಕ ವಂಶ ನಿರ್ಧಾರ ಮಾಡುವುದನ್ನು ಹಾಗೂ ತಾಯಿಯಿಂದ ಉತ್ತರಾಧಿಕಾರ ಪಡೆದುಕೊಳ್ಳುವ ಹಕ್ಕನ್ನೂ ತೊಡೆದು ಹಾಕಲಾಯಿತು.ತಂದೆಯಿಂದ ಉತ್ತರಾಧಿಕಾರ ಪಡೆದುಕೊಳ್ಳುವ ಹಕ್ಕನ್ನು ಸ್ಥಾಪಿಸಲಾಯಿತು.
    ತಾಯಿಯ ಅಧಿಕಾರದ ಪತನವು ಸ್ತ್ರೀ ಸಂಕುಲದ ಐತಿಹಾಸಿಕ ಪರಾಭವವಾಗಿತ್ತು. ಗಂಡಸು ಮನೆಯಲ್ಲೂ ಆಡಳಿತ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡನು.ಮಹಿಳೆಯನ್ನು ಕೆಳದರ್ಜೆಗೆ ಇಳಿಸಲಾಯಿತು.ಮಕ್ಕಳನ್ನು ಹೆರುವ ಸಾಧನವನ್ನಾಗಿ ಮಾಡಲಾಯಿತು.ಈಗ ಮಕ್ಕಳ ತಂದೆ ಆತನೇ ಎಂದು ಖಚಿತಪಡಿಸಿಕೊಳ್ಳಲು ಹೆಂಗಸನ್ನು ಸಂಪೂರ್ಣವಾಗಿ ಗಂಡಸಿನ ಆಧಿಪತ್ಯದಲ್ಲಿರಿಸಲಾಯಿತು.ಹೀಗೆ ಯುಗ್ಮ ಕುಟುಂಬ ಪದ್ಧತಿಯಿಂದ ಏಕಪತ್ನಿ-ಏಕಪತಿ ಕುಟುಂಬ (ಮಾನೊಗೆಮಿ) ಉದ್ಭವಿಸಿತು.
    ಇಲ್ಲಿ ವಿವಾಹ ಬಂಧನವನ್ನು ಹೆಚ್ಚು ದೃಢಗೊಳಿಸಲಾಯಿತು.ಸುಲಭವಾಗಿ ಅದನ್ನು ಮುರಿಯಲಾಗುತ್ತಿರಲಿಲ್ಲ. ಸಾಮಾನ್ಯವಾಗಿ ಗಂಡಸು ಮಾತ್ರ ಅದನ್ನು ಮುರಿಯಬಲ್ಲ. ಅವನು ಹೆಂಡತಿಯನ್ನು ಹೊರಹಾಕಬಲ್ಲ ಸಹ.ಇಲ್ಲಿ ವಿವಾಹದ ಮುಖ್ಯ ಗುರಿ ನಿರ್ವಿವಾದದಿಂದ ಪಿತೃತ್ವವುಳ್ಳ ಮಕ್ಕಳನ್ನು ಪಡೆಯುವುದೇ ಆಗಿದೆ.ಆ ಮಕ್ಕಳು ತಮ್ಮ ತಂದೆಯ ಆಸ್ತಿಯನ್ನು ಅವನ ಸಹಜ ವಾರಸುದಾರರಾಗಿ ಪಡೆದುಕೊಳ್ಳಲು ಈ ಖಚಿತ ಪಿತೃತ್ವ ಅವಶ್ಯಕವಾಗಿರುತ್ತದೆ.ಆದ್ದರಿಂದ ಹೆಂಡತಿಯಿಂದ ಕಟ್ಟುನಿಟ್ಟಾದ ನಿಷ್ಠೆಯನ್ನು ಗಂಡ ಅಪೇಕ್ಷಿಸುತ್ತಾನೆ. ಆದರೆ ಅದು ಅವನಿಗೆ ಅನ್ವಯಿಸುವುದಿಲ್ಲ. ಹೆಂಡತಿಗೆ ಸಣ್ಣಪುಟ್ಟ ತಪ್ಪಿಗೂ ಉಗ್ರವಾದ ಶಿಕ್ಷೆ ನೀಡಲಾಗುತ್ತದೆ.ಇದು ನಾಗರಿಕಾವಸ್ಥೆಯ ಕುಟುಂಬದ ಲಕ್ಷಣ.ಇಲ್ಲಿ ಏಕಪತ್ನಿ-ಪತಿ ಕುಟುಂಬದ ಬೆಳವಣಿಗೆಯ ಜೊತೆಗೆ ಉಪಪತ್ನಿತ್ವ ಹಾಗೂ ವೇಶ್ಯಾವೃತ್ತಿ ಬೆಳೆದು ಬಂದುದನ್ನು ಕಾಣುತ್ತೇವೆ.
    ನಮ್ಮ ಇಂದಿನ ಸಮಾಜದಲ್ಲಿ ಈ ವ್ಯವಸ್ಥೆಯ ಎಲ್ಲಾ ಕುರೂಪಗಳನ್ನೂ ಕಾಣುತ್ತೇವೆ. ಇದು ಸಂಕ್ಷಿಪ್ತವಾಗಿ ಕುಟುಂಬವು ಆದಿಕಾಲದಿಂದ ಈವರೆವಿಗೂ ಬೆಳೆದುಬಂದಿರುವ ಇತಿಹಾಸ. ಇದನ್ನು ಎಂಗೆಲ್ಸ್‍ರು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
    ಉತ್ಪಾದನಾ ಶಕ್ತಿಗಳು ಹೆಚ್ಚಿ ಸಮಾಜದಲ್ಲಿ ಸಂಪತ್ತು ಅಭಿವೃದ್ಧಿಯಾದಾಗ ಮಹಿಳೆ ಹೇಗೆ ಗಂಡಸಿನ ಅಡಿಯಾಳಾದಳು ಎಂಬುದನ್ನು ನೋಡಿದ್ದೇವೆÉ.ಇದರ ಜೊತೆಗೆ ಸಮಾಜದಲ್ಲಿ ಮತ್ತೊಂದು ವಿದ್ಯಮಾನವೂ ಜರುಗಿತು.ಅದೆಂದರೆ ಇದುವರೆಗೂ ಬುಡಕಟ್ಟುಗಳ ಮಧ್ಯೆ ನಡೆಯುತ್ತಿದ್ದ ಯುದ್ಧಗಳಲ್ಲಿ ಸೋತ ಬುಡಕಟ್ಟುಗಳ ಸದಸ್ಯರನ್ನು ಗೆದ್ದ ಬುಡಕಟ್ಟುಗಳ ಜನರು ತಮ್ಮ ಬುಡಕಟ್ಟಿಗೆ ಸೇರಿಸಿಕೊಳ್ಳುತ್ತಿದ್ದರು.ಅಥವಾ ನಿರ್ನಾಮ ಮಾಡುತ್ತಿದ್ದರು.ಏಕೆಂದರೆ ಅವರಿಂದ ಹೆಚ್ಚಿನ ಪ್ರಯೋಜನವಾಗುತ್ತಿರಲಿಲ್ಲ. ಉತ್ಪಾದನಾ ಶಕ್ತಿಗಳ ಬೆಳವಣಿಗೆ ಕೆಳಗಿನ ಹಂತದಲ್ಲಿದ್ದಾಗ ಒಬ್ಬಾತ ದುಡಿದದ್ದು ಅವನನ್ನು ಪೆÇೀಷಿಸಲು ಸಾಕಾಗುತ್ತಿತ್ತು ಅಷ್ಟೇ.ಈಗ ಉತ್ಪಾದನಾ ಶಕ್ತಿಗಳು ಬೆಳೆದಂತೆ, ಪರಿಸ್ಥಿತಿ ಬದಲಾಯಿಸಿತು.ಒಬ್ಬ ಮನುಷ್ಯನು ಹೊಸ ಉತ್ಪಾದನಾ ಸಲಕರಣೆಗಳು ಮತ್ತು ಜ್ಞಾನದಿಂದಾಗಿ ತಾನು ತಿನ್ನುವುದಕ್ಕಿಂತ ಹೆಚ್ಚು ಉತ್ಪಾದಿಸುತ್ತಿದ್ದ.ಈಗ ಸೋತ ಬುಡಕಟ್ಟಿನ ಜನರನ್ನು ಬಳಸಿಕೊಂಡು ಸಂಪತ್ತನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅವಕಾಶ ತೆರೆಯಿತು.ಇಲ್ಲಿಂದ ಇನ್ನೊಬ್ಬರ ಶ್ರಮವನ್ನು ಬಳಸಿ, ಶೋಷಿಸಿ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಹೊಸ ಘಟ್ಟ ಪ್ರಾರಂಭವಾಯಿತು.ವರ್ಗ ಶೋಷಣೆ ಪ್ರಾರಂಭವಾಯಿತು.ಗುಲಾಮಗಿರಿ ವ್ಯವಸ್ಥೆಗೆ ಇದು ಜನ್ಮ ನೀಡಿತು.
    ಇದರ ಜೊತೆಗೆ ಪರಸ್ಪರ ವಿರುದ್ಧ ಆಸಕ್ತಿಗಳಿರುವ ಎರಡು ವರ್ಗಗಳ ಮಧ್ಯೆ ಹಿತಾಸಕ್ತಿ ಸಂಘರ್ಷ ಉಂಟಾಗುವುದು ಸಹಜ.ಈಗ ಮೇಲ್ನೋಟಕ್ಕೆ ಇದನ್ನು ನಿಯಂತ್ರಿಸುವ ನಿಷ್ಪಕ್ಷಪಾತವಾದ ಒಂದು ಸಂಸ್ಥೆ ಎನ್ನುವಂತೆ ಕಾಣುವ ರಾಜ್ಯ (ಸ್ಟೇಟ್) ಅಥವಾ ಪ್ರಭುತ್ವ ಹುಟ್ಟಿಕೊಂಡಿತು. ವಾಸ್ತವದಲ್ಲಿ ಅದು ಆಸ್ತಿವಂತರ, ಬಲಾಢ್ಯರ ಪರವಾದ ಪ್ರಭುತ್ವವಾಗಿದ್ದು ದಬ್ಬಾಳಿಕೆಯ, ಬಲಾತ್ಕಾರದ ಉಪಕರಣವಾಗಿ ಹೊರಹೊಮ್ಮಿತು.
    ಎಂಗೆಲ್ಸ್‍ರವರು ಇವುಗಳನ್ನು ವಿವರಿಸುತ್ತಾ ಏನನ್ನು ತೋರಿಸಿ ಕೊಡುತ್ತಾರೆಂದರೆ ಕುಟುಂಬ, ಖಾಸಗಿ ಆಸ್ತಿ ಹಾಗೂ ಪ್ರಭುತ್ವಗಳಿಗೆ ಹುಟ್ಟು ಎಂಬುದಿದೆ, ಹಾಗೇ ಸಾವೂ ಇದೆ.ಮಾನವ ಸಮಾಜದ ಬೆಳವಣಿಗೆಯ ಒಂದು ಕಾಲಘಟ್ಟದಲ್ಲಿ ಹುಟ್ಟಿದ ಕುಟುಂಬ ವ್ಯವಸ್ಥೆ ಇದುವರೆಗೂ ಬದಲಾಗುತ್ತಾ ಬಂದಿದ್ದು, ಇನ್ನು ಮುಂದೆ ಬರುವ ಸಮಾಜದಲ್ಲಿ ಸಕಾರಾತ್ಮಕವಾಗಿ ಇನ್ನಷ್ಟು ಬದಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಉತ್ಪಾದನಾ ಶಕ್ತಿಗಳ ಮೇಲಿನ ವ್ಯಕ್ತಿಗತ ಒಡೆತನದ ಜಾಗದಲ್ಲಿ ಸಾಮೂಹಿಕ ಒಡೆತನ, ಸಾಧ್ಯವಾಗುವಷ್ಟು ಉತ್ಪಾದನಾ ಶಕ್ತಿಗಳು ಬೆಳೆದಿವೆ. ಈಗ ಕುಟುಂಬದಲ್ಲಿ ಆಸ್ತಿಯನ್ನು ತನ್ನ ವಂಶದಲ್ಲಿ ಮುಂದುವರಿಸುವ ಸಲುವಾಗಿ ಹೆಣ್ಣನ್ನು ನಿಯಂತ್ರಿಸುವ ಪರಿಸ್ಥಿತಿ ಇಲ್ಲವಾಗಿ ಹೆಣ್ಣಿನ ಶೋಷಣೆ ಅಂತ್ಯವಾಗುವ, ಮಹಿಳಾ ವಿಮೋಚನೆಯ ಕಾಲ ಪಕ್ವವಾಗುತ್ತದೆ. ಜೊತೆಗೆ ಪ್ರಭುತ್ವವೂ ವಿಸರ್ಜನೆಯಾಗುವ ಕಾಲ ಸನ್ನಿಹಿತವಾಗುತ್ತದೆ.
    ಇದನ್ನು ಸಮಾಜದ ಕುರಿತಾದ ತಮ್ಮ ವೈಜ್ಞಾನಿಕ ವಿಶ್ಲೇಷಣೆಯಿಂದ ಮಾಕ್ರ್ಸ್-ಎಂಗೆಲ್ಸ್ ಕಂಡುಕೊಂಡಿದ್ದರು.ಶೋಷಣೆ ರಹಿತ ಸಮಾಜವನ್ನು ಗಂಡು ಹೆಣ್ಣಿನ ಸಮಾನತೆಯನ್ನು ಬಯಸುವ ಎಲ್ಲರಿಗೂ ಎಂಗೆಲ್ಸ್‍ರವರ ಈ ಚಿಂತನೆಗಳು ಮಾರ್ಗದರ್ಶಕವಾಗುತ್ತವೆ. ಈ ದಿಶೆಯಲ್ಲಿ ಹೋರಾಟ ಮಾಡುವವರೆಲ್ಲರೂ ಅವರಿಗೆ ಕೃತಜ್ಞರಾಗಿರುತ್ತಾರೆ.ಈ ಲೇಖನ ಕೇವಲ ಪರಿಚಯಾತ್ಮಕ ಲೇಖನ. ಮೂಲ ಅಭಿಜಾತ ಕೃತಿಯನ್ನು ಓದುವುದು ಆಸಕ್ತಿದಾಯಕ ಮತ್ತು ಲಾಭದಾಯಕ.ಈ ಲೇಖನ ಅದಕ್ಕೆ ಪ್ರೇರಕವಾಗಲಿ.

ಡಾ. ಎಚ್.ಜಿ.ಜಯಲಕ್ಷ್ಮಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *