ಚಿಂತನೆ / ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಿಳಾ ವಿಮೋಚನೆ – ಎನ್. ಗಾಯತ್ರಿ
ಇಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 130 ನೇ ಜನ್ಮದಿನ. ಈ ದೇಶದ ಎಲ್ಲ ಪ್ರಜೆಗಳಿಗೂ ಸರ್ವ ಸಮಾನತೆಯನ್ನು ದೊರಕಿಸುವ ಸಂವಿಧಾನವನ್ನು ರೂಪಿಸಿದ ಆ ದಿವ್ಯ ಚೇತನಕ್ಕೆ ಎಲ್ಲರೂ ನಮನ ಸಲ್ಲಿಸಬೇಕಾದ್ದು ಉಚಿತವಾದರೂ, ಮಹಿಳೆಯರ ವಿಮೋಚನೆಯ ಆಶಯಗಳನ್ನು ಸಂವಿಧಾನದಲ್ಲಿ ಅಳವಡಿಸಿದ ಆ ಮಹಾನ್ ಚೈತನ್ಯಕ್ಕೆ ವಿಶೇಷವಾಗಿ ಈ ದೇಶದ ಇಡೀ ಮಹಿಳಾ ಸಮುದಾಯ ಕೃತಜ್ಞವಾಗಿರಬೇಕು.
“ಯಾವುದೇ ಸಮಾಜದ ಪ್ರಗತಿಯನ್ನು ಮಾಪನ ಮಾಡಬೇಕಾದರೆ, ನಾನು ಆ ಸಮಾಜದ ಅರ್ಧ ಭಾಗವಾದ ಮಹಿಳೆಯರ ಪ್ರಗತಿಯ ಮೇಲಿನಿಂದಲೇ ಮಾಪನ ಮಾಡುತ್ತೇನೆ” ಎಂದ ಡಾ.ಅಂಬೇಡ್ಕರ್ ಅವರು ದಲಿತರ ಮತ್ತು ಮಹಿಳೆಯರ ಜಾಗೃತಿಗೆ ವಿಶೇಷವಾಗಿ ಶ್ರಮಿಸಿದರು.
ಸಮಾಜದಲ್ಲಿ ಮಹಿಳೆಯರ ಅಸ್ತಿತ್ವವನ್ನು ಗಮನಾರ್ಹವಾಗಿ ಗುರುತಿಸಿದ ಅಂಬೇಡ್ಕರ್ ಶಿಕ್ಷಣವು ಅವರೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲುದು ಎಂದು ಭಾವಿಸಿದರು. 1914ರ ಜುಲೈ 18-19ರಂದು ಅಖಿಲ ಭಾರತ ಪರಿಶಿಷ್ಟ ಜಾತಿ ಫೆಡರೇಷನ್‍ನ ಮಹಾ ಸಮ್ಮೇಳನದಲ್ಲಿ ವಿಶೇಷ ಮಹಿಳಾ ಸಮ್ಮೇಳನವೊಂದರಲ್ಲಿ ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ಅವರು ಹೀಗೆ ನುಡಿದಿದ್ದರು: “ಮಹಿಳೆಯರು ಒಟ್ಟು ಸಮಾಜದ ಮುಂಚೂಣಿಗೆ ಬಂದಲ್ಲಿ ಆ ಸಮಾಜ ಬಹುಬೇಗ ಸುಧಾರಿಸುತ್ತದೆ........ ಹುಡುಗರು ಮತ್ತು ಹುಡುಗಿಯರ ಮಧ್ಯೆ ತಾರತಮ್ಯ ಮಾಡುವುದು ಅನ್ಯಾಯ. ಹುಡುಗರಿಗಿರುವಷ್ಟೇ ಹುಡುಗಿಯರಿಗೂ ಶಿಕ್ಷಣದ ಅವಶ್ಯಕತೆ ಇದೆ. ಬೇಗ ಮದುವೆ ಮಾಡುವುದು ತರವಲ್ಲ.” ಎಂದು ಬುದ್ಧಿವಾದವನ್ನು ಹೇಳಿದುದಲ್ಲದೆ, ಸಭೆಯಲ್ಲಿದ್ದವರಿಗೆಲ್ಲಾ ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕೆಂದು ಕಿವಿ ಮಾತು ಹೇಳಿದರು. ಮುಂದುವರಿದು “ದೇಶದ ಹೆಣ್ಣು ಮಕ್ಕಳು ಗುಡಿ ಗುಂಡಾರಗಳಲ್ಲಿ ಕೈ ಮುಗಿದು ಸಾಲು ನಿಲ್ಲುವ ಬದಲು ಎಂದು ಗ್ರಂಥಾಲಯಗಳಲ್ಲಿ ಸಾಲು ನಿಲ್ಲುವರೋ ಅಂದು ಈ ದೇಶ ಉದ್ಧಾರವಾಗುತ್ತದೆ.” ಎಂದಿದ್ದರು.
ಮಹಿಳೆಯರ ಸಾರ್ವಜನಿಕ ಜೀವನವೂ ತುಂಬಾ ಮುಖ್ಯ ಎಂದು ಭಾವಿಸಿದ ಅಂಬೇಡ್ಕರ್ “ಮಹಿಳೆಯರ ಸಂಘಟನೆ ಅತ್ಯಗತ್ಯ. ಅವರಿಗೆ ಪ್ರತ್ಯೇಕ ಸಮಸ್ಯೆಗಳಿವೆ. ಅವನ್ನು ಮಹಿಳಾ ಸಂಘಟನೆಯೇ ಹೆಚ್ಚು ಸಮರ್ಥವಾಗಿ ನಿಭಾಯಿಸಬಲ್ಲುವು. ಮಹಿಳೆಯರು ಒಟ್ಟು ಸಮಾಜದ ಮುಂಚೂಣಿಗೆ ಬಂದಲ್ಲಿ ಆ ಸಮಾಜ ಬಹುಬೇಗ ಸುಧಾರಿಸುತ್ತದೆ……. ಅಸ್ಪೃಶ್ಯತೆ, ಜಾತೀಯತೆ, ಜನಸಂಖ್ಯಾ ಹೆಚ್ಚಳ, ಶಿಕ್ಷಣದ ಮಹತ್ವ, ಧರ್ಮಾಂತರ, ವತನ್ ಪದ್ಧತಿಯ ರದ್ಧತಿ ಮುಂತಾದ ವಿಷಯಗಳ ಕುರಿತು ಬರೀ ಪುರುಷರು ಮಾತ್ರ ಚರ್ಚಿಸಿದರೆ ಸಾಲದು, ಮಹಿಳೆಯರೂ ಪಾಲ್ಗೊಳ್ಳುವಂತಾಗಬೇಕು. ಇದು ಪುರುಷರು ಮತ್ತು ಮಹಿಳೆಯರ ಒಟ್ಟು ಜವಾಬ್ದಾರಿ.” ಎಂದು ಮಹಿಳೆಯರ ಸಾರ್ವಜನಿಕರಂಗದ ಚಟುವಟಿಕೆಗೆ ಹೆಚ್ಚು ಒತ್ತುಕೊಟ್ಟರು.
ಆದರ್ಶ ಕುಟುಂಬವೊಂದರ ಚಿತ್ರಣವನ್ನು ತಮ್ಮ ಭಾಷಣದಲ್ಲಿ ಸಭಿಕರ ಮುಂದಿಟ್ಟರು: “ಕೌಟುಂಬಿಕ ಹೊಣೆಗಾರಿಕೆಯನ್ನು ಪೂರ್ತಿಯಾಗಿ ಮಹಿಳೆಯರಿಗೆ ಹೊರಿಸಬಾರದು. ಗಂಡಸರೂ ಸಹ ಹೊಣೆಯನ್ನು ಹೊರಬೇಕು. ಕುಟುಂಬವೆಂದರೆ ಸಮುದಾಯದ ಕಣ್ಣು….. ಮಕ್ಕಳನ್ನು ಹೆರುವುದಷ್ಟೇ ಅಲ್ಲ, ಅವರಿಗೆ ಒಳ್ಳೆಯ ದಿಕ್ಕನ್ನು ತೋರುವುದು ಇಬ್ಬರಿಗೂ ಸೇರಿದ ಹೊಣೆ. ಪತಿ-ಪತ್ನಿಯರು ಉತ್ತಮ ಮಿತ್ರರಂತಿರಬೇಕು. ಪರಸ್ಪರ ಶ್ರೇಯಸ್ಸಿಗೆ ಇಬ್ಬರೂ ನೆರವಾಗಬೇಕು. ಮನುಷ್ಯ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟರೆ ಕುಟುಂಬದ, ಸಮುದಾಯದ ಮತ್ತು ದೇಶದ ಗೌರವವನ್ನು ಎತ್ತಿ ಹಿಡಿಯಲು ಸಾಧ್ಯವಾಗುತ್ತದೆ.” – ಹೀಗೆ ಅಂಬೇಡ್ಕರ್ ಅವರು ಕೌಟುಂಬಿಕ ಅಧಿಕಾರದ ಶ್ರೇಣೀಕರಣದ ವಿರುದ್ಧ ಸಿಡಿದೆದ್ದ ಆರಂಭದ ಸ್ತ್ರೀವಾದಿ ನಾಯಕರಲ್ಲೊಬ್ಬರಾಗಿದ್ದಾರೆ.
ಹೆಣ್ಣಿನ ದೇಹದ ಮೇಲಾಗುತ್ತಿದ್ದ ಲೈಂಗಿಕ ಹಿಂಸೆ ಬಾಬಾಸಾಹೇಬ್ ಅವರನ್ನು ಅತಿಯಾಗಿ ವ್ಯಾಕುಲಗೊಳ್ಳುವಂತೆ ಮಾಡುತ್ತಿತ್ತು. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಆಚರಣೆಯಲ್ಲಿದ್ದ ದೇವದಾಸಿ, ಬೆತ್ತಲೆ ಸೇವೆಯಂತಹ ಆಚರಣೆಗಳನ್ನು ಕೆಳಜಾತಿ ಹೆಣ್ಣುಮಕ್ಕಳ ಮೇಲೆಯೇ ಹೇರಲಾಗಿತ್ತು. ದೇವದಾಸಿ ನಿರ್ಮೂಲನದ ಬಗ್ಗೆ ವಿಶೇಷ ಒತ್ತುಕೊಟ್ಟ ಬಾಬಾಸಾಹೇಬ್ ಅದರ ವಿರುದ್ಧ ಚಳುವಳಿಯನ್ನು ಹಮ್ಮಿಕೊಂಡರು. ಪ್ರಖ್ಯಾತ ತಮಾಷಾ ನಟ ಪತ್ತೆಬಾಬುರಾವ್ ಅವರು ಮಹರ್ ತಮಾಷಾ ತಂಡಗಳನ್ನು ರಚಿಸಲು ಕಾರಣಕರ್ತರಾಗಿದ್ದರು. ಅವರು ದಲಿತ ಸಮ್ಮೇಳನಕ್ಕೆಂದು ತಮಾಷಾ ಸಹಾಯಾರ್ಥ ಪ್ರದರ್ಶನವನ್ನು ನೀಡಲು ಮುಂದೆ ಬಂದಾಗ ಅಂಬೇಡ್ಕರ್ ಅಂತಹ ಸಹಾಯವನ್ನು ತಿರಸ್ಕರಿಸಿದ್ದರು. ಅದಕ್ಕೆ ಅವರು ಕೊಟ್ಟ ವಿವರಣೆ: “ಈ ಬ್ರಾಹ್ಮಣ ಮಹರ್ ಹೆಂಗಸರನ್ನು ತಮಾಷಾದಲ್ಲಿ ಕುಣಿಸಿ ದುಡ್ಡು ಮಾಡುತ್ತಾನೆ; ನಾನು ಆ ಹಣವನ್ನು ತೆಗೆದುಕೊಳ್ಳಬೇಕೆಂದು ನೀವು ನಿರೀಕ್ಷಿಸುತ್ತೀರ. ನಿಮಗೆ ಆತ್ಮಗೌರವದ ಅರ್ಥವೇ ಗೊತ್ತಿಲ್ಲವೆ!” ಎಂದು ಅವರನ್ನು ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸುತ್ತಾರೆ.
1942ರಲ್ಲಿ ನಾಗಪುರದ ಮೋಹನ ಪಾರ್ಕ್‍ನಲ್ಲಿ ಅಖಿಲ ಭಾರತ ದಲಿತ ಪರಿಷತ್ತಿನ ಸಮಾವೇಶ ನಡೆಯಿತು. ವಿವಿಧ ರಾಜ್ಯಗಳಿಂದ ಸುಮಾರು 25,000 ಮಹಿಳೆಯರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆಗ ಅಲ್ಲಿ ದಲಿತ ಮಹಿಳಾ ಫೆಡರೇಷನ್ ರಚನೆಯಾಯಿತು. ಆ ಸಂದರ್ಭದಲ್ಲಿ ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಹೇಳಿದ ಮಾತುಗಳು ಸರ್ವ ಕಾಲಕ್ಕೂ ಪ್ರಸ್ತುತವಾದವು: “ಮಹಿಳೆಯರು ಹೋರಾಟಗಳಲ್ಲಿ ಸಮಾನರಾಗಿ ಪಾಲ್ಗೊಳ್ಳಬೇಕು. ತಂದೆ, ಸಹೋದರ, ಪತಿ ಹೋರಾಟದಲ್ಲಿದ್ದಾರೆಂಬ ಕಾರಣಕ್ಕಾಗಿ ಅಲ್ಲ. ಆತನ ಗುಲಾಮಳಾಗಿಯೋ, ಅನುಯಾಯಿಯಾಗಿಯೋ ಅಲ್ಲ. ಆಕೆ ಸಮಾನಳಾಗಿರಬೇಕು, ಸ್ನೇಹಿತೆಯಂತಿರಬೇಕು……..”
ಮಹಿಳೆಯರ ಸಬಲೀಕರಣಕ್ಕಾಗಿ “ಹಿಂದೂ ಕೋಡ್ ಬಿಲ್” ನ ಕರಡನ್ನು ಅಂಬೇಡ್ಕರ್ ಸಿದ್ಧಪಡಿಸಿದರು. ಈ ಕರಡು ಮಸೂದೆಯಲ್ಲಿ ಮುಖ್ಯವಾಗಿ ಏಳು ಪ್ರಸ್ತಾವಗಳನ್ನು ಮಂಡಿಸಲಾಗಿತ್ತು. ಅದರಲ್ಲಿ ಮಹಿಳೆಯರಿಗೆ ಆಸ್ತಿ ಹಕ್ಕು, ವಿಧವೆಯರಿಗೆ ತಮ್ಮ ಆಸ್ತಿಯ ಮೇಲೆ ಸಂಪೂರ್ಣ ಅಧಿಕಾರ, ಬಹುಪತ್ನಿತ್ವದ ನಿರಾಕರಣೆ, ದತ್ತು ಸ್ವೀಕಾರದ ಹಕ್ಕು ಮತ್ತು ವಿವಾಹ ವಿಚ್ಛೇದನದ ಹಕ್ಕುಗಳಿಗೆ ಸಂಬಂಧಪಟ್ಟಂತೆ ಕಾಯಿದೆ ಮಾಡಲು ಪ್ರಸ್ತಾವಗಳನ್ನು ಸಿದ್ಧಗೊಳಿಸಿದ್ದರು. ಈ ಮಸೂದೆಯನ್ನು 1949ರಂದು ಫೆಬ್ರವರಿ 24ರಂದು ಅಂಬೇಡ್ಕರ್ ಸದನದಲ್ಲಿ ಮಂಡಿಸಿದಾಗ ಸದನದ ಒಳಗೂ ಹೊರಗೂ ಸಾಕಷ್ಟು ಪ್ರತಿಭಟನೆ ನಡೆಯಿತು. ಇದು “ಹಿಂದೂ ಸಂಸ್ಕೃತಿ ಹಾಗೂ ಸಂಪ್ರದಾಯ”ಗಳ ನಾಶಕ್ಕೆ ಕಾರಣವಾಗುತ್ತದೆ, ಎಂಬ ನಿಲುವನ್ನಿಟ್ಟುಕೊಂಡು 1949ರ ವರ್ಷಾವಧಿಯಲ್ಲಿ ದೆಹಲಿಯೊಂದರಲ್ಲೇ ಸುಮಾರು 79 ಪ್ರತಿಭಟನಾ ಸಭೆಗಳನ್ನು ಆರ್.ಎಸ್.ಎಸ್. ಆಯೋಜಿಸಿತ್ತು. ಆ ಸಭೆಗಳಲ್ಲಿ ಅಂಬೇಡ್ಕರ್ ಮತ್ತು ನೆಹರೂ ಅವರ ಪ್ರತಿಕೃತಿಗಳನ್ನು ಸುಡುವುದು ಸರ್ವೇ ಸಾಮಾನ್ಯವಾಗಿತ್ತು. ಸದನದ ಒಳಗೆ ಕಾಂಗ್ರೆಸ್ಸಿನ ಬಾಬು ರಾಜೇಂದ್ರ ಪ್ರಸಾದ್, ಗೋವಿಂದ ವಲ್ಲಭ ಪಂತ್ ಮತ್ತು ಸರೋಜಿನಿ ನಾಯ್ಡು ಅಂತಹ ನಾಯಕರೂ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದರು. ಮಹಿಳೆಗೆ ಆಸ್ತಿ ಹಕ್ಕು, ವಿವಾಹ ಮತ್ತು ವಿಚ್ಛೇದನದ ಹಕ್ಕು ಹಾಗೂ ಮಕ್ಕಳನ್ನು ದತ್ತು ಪಡೆಯುವ ಹಕ್ಕುಗಳಲ್ಲಿ ವಿಸ್ತರಿಸಿಕೊಂಡಿದ್ದ ಈ ಮಸೂದೆ ನೆನೆಗುದಿಗೆ ಬಿದ್ದಿದ್ದು 1951ರಲ್ಲಿ ಅದನ್ನು ಹಿಂತೆಗೆದುಕೊಳ್ಳಲಾಯಿತು. ನೆಹರೂ ಮತ್ತು ಕಾಂಗ್ರೆಸ್ ಮಸೂದೆಯ ಪರವಾಗಿ ನಿಲ್ಲಲಿಲ್ಲ, ಎಂಬ ಅವರ ನಿಲುವಿಗೆ ಬೇಸತ್ತು ಅಂಬೇಡ್ಕರ್ ನೆಹರೂ ಮಂತ್ರಿ ಮಂಡಳಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದರು.
ಅಂಬೇಡ್ಕರ್ ನೇತೃತ್ವದ ಎಲ್ಲ ಸತ್ಯಾಗ್ರಹ ಮತ್ತು ಚಳುವಳಿಗಳಲ್ಲಿ ದಲಿತ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದುದು ದಲಿತ ಚಳುವಳಿಗೆ ಒಂದು ಹೊಸ ಆಯಾಮ ಮತ್ತು ರೂಪ ಕೊಟ್ಟಿತಲ್ಲದೆ ಅದು ದಲಿತರಿಗೆ ಹೆಮ್ಮೆಯ ಸಂಗತಿಯಾಗಿತ್ತು. ಹೆಣ್ಣನ್ನು ಸಮಾಜದ ಪ್ರಮುಖ ಘಟಕವಾಗಿ ಪರಿಗಣಿಸಿದ ಅಂಬೇಡ್ಕರ್ ರವರ ವಿಚಾರಗಳಿಂದ ಪ್ರಭಾವಿತರಾದ ದಲಿತ ಮಹಿಳೆಯರು ತಮ್ಮ ಆಚಾರ-ವಿಚಾರಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತಂದುಕೊಂಡುದಲ್ಲದೆ, ಅದನ್ನು ಸಮಾಜದ ಇತರ ಮಹಿಳೆಯರಿಗೂ ತಲುಪಿಸುವಲ್ಲಿ ಸಂಘಟನಾತ್ಮಕವಾಗಿ ದುಡಿದರು. ತಂದೆತಾಯಿಯರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಡಬೇಕು, ಎಂಬ ಬಾಬಾಸಾಹೇಬರ ವಿಚಾರಗಳನ್ನು ತತ್ವಶಃ ಪಾಲಿಸಿದ್ದಲ್ಲದೆ, ಹಲವಾರು ಮಹಿಳೆಯರು ಶಾಲೆಗಳನ್ನು ತೆರೆದರು ಮತ್ತು ಸ್ವತಃ ಶಿಕ್ಷಕಿಯರಾಗಿ ತಮ್ಮ ವೃತ್ತಿಗೆ ಸಾಮಾಜಿಕ ಬದ್ಧತೆಯ ಕವಚ ತೊಡಿಸಿದರು.
ದಲಿತ ಮಹಿಳೆಯರ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ದಲಿತ ಮಹಿಳಾ ಪರಿಷತ್ತು ಪ್ರಮುಖ ಪಾತ್ರವಹಿಸಿತ್ತು. ಪರಿಷತ್ತಿನ ಸಭೆಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಗಂಭೀರ ವಿಷಯಗಳನ್ನು ಚರ್ಚಿಸಲಾಗುತ್ತಿತ್ತು. ಅಂತಹ ಸಭೆಗಳಲ್ಲಿ ಬಾಲ್ಯವಿವಾಹವನ್ನು ಖಂಡಿಸಿದ್ದಲ್ಲದೆ ಅದರ ದುಷ್ಟ ಪರಿಣಾಮಗಳನ್ನು ಕುರಿತು ಚರ್ಚಿಸುತ್ತಿದ್ದರು. ಹೆಣ್ಣಿಗೆ 16 ಮತ್ತು ಗಂಡಿಗೆ 22 ವರ್ಷ ವಯಸ್ಸನ್ನು ವಿವಾಹ ಯೋಗ್ಯ ವಯಸ್ಸಾಗಿ ನಿರ್ಧರಿಸಲಾಗಿತ್ತು. ವಿವಾಹ ಸಂದರ್ಭದಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದನ್ನು ನಿರ್ಧರಿಸಿದ್ದರು. ಸರಳ ವಿವಾಹಕ್ಕೆ ಒತ್ತು ನೀಡಿ ಆ ಸಂದರ್ಭದಲ್ಲಿ ಖರ್ಚು ಮಾಡಬೇಕಾದ ಮೊತ್ತವನ್ನು 16ರೂಗಳಿಗೆ ಮಿತಿಗೊಳಿಸಿದ್ದರು. ಆ ಮೊತ್ತವನ್ನು ಯಾವ ರೀತಿಯಲ್ಲಿ ಖರ್ಚು ಮಾಡಬೇಕೆಂಬುದರ ವಿವರಗಳನ್ನು ನೀಡಿದ್ದರು. ಮಹಾಡ್‍ನ ಚೌದಾ ತಲೆ ಕೆರೆಯ ನೀರಿನ ಪ್ರವೇಶ, ಕಾಳಾರಾಂ ದೇವಾಲಯ ಪ್ರವೇಶ, ಮನುಸ್ಮೃತಿ ದಹನ ಕಾರ್ಯಕ್ರಮ- ಈ ಎಲ್ಲ ಕಾರ್ಯಕ್ರಮಗಳಲ್ಲೂ ಮಹಿಳೆಯರು ತುಂಬು ಉತ್ಸಾಹದಿಂದ ಭಾಗವಹಿಸಿದರು.
ಮಹಿಳಾವಾದ ಮತ್ತು ಮಹಿಳಾಚಳುವಳಿಗೆ ಅವರ ಕೊಡುಗೆ ಅಪಾರ. ಭಾರತದಲ್ಲಿ ಜಾತಿ ಮತ್ತು ಜೆಂಡರ್ ಹೇಗೆ ಸ್ವಜಾತಿ ವಿವಾಹದಲ್ಲಿ ತಳುಕು ಹಾಕಿಕೊಂಡಿದೆಯೆಂಬುದನ್ನು ವಿಶದವಾಗಿ ತಿಳಿಸಿದವರು. ಹೆಣ್ಣಿನ ಸಮಸ್ಯೆಗಳಿಗೆ ಮೂಲ ಮನುವಾದ ದಲ್ಲಿದೆಯೆಂಬುದನ್ನು ಕಂಡು ಹಿಡಿದರು. 1927ರ ಡಿಸೆಂಬರ್ 25ರಂದು ರಾತ್ರಿ 9 ಗಂಟೆಗೆ ಮನುಸ್ಮೃತಿ ದಹನವನ್ನು ಬಾಪುಸಾಹಿಬ್ ಸಹಸ್ರಬುದ್ಧೆಯವರಿಂದ ಮಾಡಿಸಿದರು. ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುವ ಬ್ರಾಹ್ಮಣಶಾಹಿಯ ವಿರುದ್ಧದ ಪ್ರತಿಭಟನೆಯ ಅಸ್ತ್ರವಾಗಿ ಅವರು ನಡೆಸಿದ “ಮನುಸ್ಮೃತಿ ದಹನ” ಕಾರ್ಯಕ್ರಮ ಚರಿತ್ರಾರ್ಹವಾದುದು ಮತ್ತು ದಲಿತ ಹಾಗೂ ಮಹಿಳಾ ಚಳುವಳಿಯಲ್ಲಿ ಒಂದು ಮಹತ್ವದ ಮೈಲಿಗಲ್ಲೆಂದು ಕರೆಸಿಕೊಂಡಿದೆ. ಅಂದಿನಿಂದ ಇಂದಿನವರೆಗೂ ಈ ಘಟನೆಯ ವಾರ್ಷಿಕೋತ್ಸವವನ್ನು ಆಚರಿಸಲು ಹಲವಾರು ಮಂದಿ ಈ ಸ್ಥಳಕ್ಕೆ ಬಂದು ಮನುಸ್ಮೃತಿಯ ಪ್ರತಿಗಳನ್ನು ಸುಡುತ್ತಾರೆ. ದಲಿತರಿಗೆ ಮಾತ್ರವಲ್ಲ, ಮನುವಾದದಿಂದ ಶೋಷಿತರಾದ ಭಾರತದ ಇಡೀ ಮಹಿಳಾ ಸಮುದಾಯಕ್ಕೂ ಇದೊಂದು ಮಹತ್ವದ ದಿನ. ಇಲ್ಲಿ ಬಂದು ಈ ದಿನವನ್ನು ‘ನಾರೀ ಮುಕ್ತಿ ದಿನ’ವನ್ನಾಗಿಯೂ ಕೆಲವು ಹೆಂಗೆಳೆಯರು ಆಚರಿಸುತ್ತಾರೆ.
ಸಂವಿಧಾನವನ್ನು ಬದಲಿಸುತ್ತೇವೆಂದು ಮನುವಾದಿಗಳು ಅಬ್ಬರಿಸುತ್ತಿರುವ ಈ ಹೊತ್ತಿನಲ್ಲಿ ಸಂವಿಧಾನವನ್ನು ರಕ್ಷಿಸಬೇಕಾದ್ದು ಮತ್ತು ಅದರ ಮಹತ್ವವನ್ನು ಪ್ರಚಾರ ಮಾಡಬೇಕಾದ್ದು ಅತ್ಯಂತ ಅಗತ್ಯವಾಗಿದೆ ಮತ್ತು ಈ ಸಂಕಲ್ಪ ನಾವು ಮಹಿಳೆಯರು ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ನೀಡುವ ಗೌರವವಾಗಿದೆ.
- ಎನ್. ಗಾಯತ್ರಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
Thanks. Please look into para 10, line 5 the word NIRDHARISIDDARU, is it correct or the word NISHEDHISIDDARU correct.