ಚಿಂತನೆ/ ಗಂಟಲಲ್ಲಿ ಮುರಿದ ಮುಳ್ಳು! – ಎಂ.ಆರ್. ಕಮಲ
ಎಷ್ಟೆಲ್ಲಾ ಕಷ್ಟವನ್ನು ಅನುಭವಿಸಿದರೂ ಸರಿಯೇ, ತಾಯಿಯ ಎದುರಿಗೆ ಒಂದು ಪೊಳ್ಳು ವ್ಯಕ್ತಿತ್ವವನ್ನು ಕಟ್ಟಿಕೊಂಡೇ ಬದುಕುತ್ತೀವಿ ಎಂದು ಹೊರಡುವ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚು. ತಾಯಂದಿರು ಅಷ್ಟೇ, ಹೆಣ್ಣುಮಕ್ಕಳ ಯೌವನದ ಸಾಹಸಗಳನ್ನು, ಅರಿವಿಲ್ಲದೆ ನೂರೆಂಟು ಸಮಸ್ಯೆಗಳ ಒಳ ಸುಳಿಯಲ್ಲಿ ಸಿಕ್ಕಿ ಒದ್ದಾಡುವುದನ್ನು ಕಂಡಾಗ ಅದು ಬದುಕಿನ ಸಹಜ ಗತಿ ಎಂದು ಒಪ್ಪಿಕೊಳ್ಳುವಷ್ಟು ಪ್ರಬುದ್ಧರೇ? ನಮ್ಮ ಸಮಾಜದಲ್ಲಿ ಗಂಡಸರ ನಡೆಗಳನ್ನು ಸ್ವೀಕರಿಸಿದಷ್ಟೇ ಸಹಜವಾಗಿ ಹೆಣ್ಣುಮಕ್ಕಳ ನಡೆಗಳನ್ನು ಸ್ವೀಕರಿಸುವ ಕಾಲ ಬರುವವರೆಗೂ ಪ್ರತಿ ಹೆಣ್ಣುಮಗಳ ಗಂಟಲಿನಲ್ಲಿ ಒಂದು ಮುಳ್ಳು ಮುರಿದೇ ಇರುತ್ತದೆ!
Women like me
do not know how to speak
A word remains in their throat
like a thorn.
ಅರಬ್ ಹೆಣ್ಣುಮಕ್ಕಳ ಕವಿತೆಗಳನ್ನು ಅನುವಾದಿಸಿದಾಗ ಈ ಪುಟ್ಟದೊಂದು ಕವಿತೆ ಕಟ್ಟಿ ಹಿಡಿದು ನಿಲ್ಲಿಸಿತು. ಜಗತ್ತಿನ ಯಾವ ಮೂಲೆಗೆ ಹೋದರೂ ಹೆಣ್ಣುಮಕ್ಕಳ ಸ್ಥಿತಿಯಲ್ಲಿ ಅಂತಹ ವ್ಯತ್ಯಾಸವೇ ಇಲ್ಲ. ಒಳಗಿನದೆಲ್ಲ ಹೇಳಿಯೇ ಬಿಡುತ್ತೇನೆ ಎಂದು ಹೊರಟವರು, ಆತ್ಮಕಥೆಗಳನ್ನು ಬರೆದವರು ಎಲ್ಲವನ್ನೂ ಹೇಳಿದ್ದಾರೆಯೇ? ಅತ್ಯಂತ ಪಾರದರ್ಶಕ ವ್ಯಕ್ತಿತ್ವ ಎಂದು ನಾವು ಪರಿಭಾವಿಸುವ ಹೆಣ್ಣುಮಕ್ಕಳು ಸಹ ಎಷ್ಟೊಂದು ಹಾಡುಗಳನ್ನು, ನೋವುಗಳನ್ನು ಎದೆಯಲ್ಲಿ ಮುಚ್ಚಿಟ್ಟುಕೊಂಡಿಲ್ಲ! ಎಷ್ಟು ಪದಗಳು, ವಾಕ್ಯಗಳು ಗಂಟಲಲ್ಲಿ ಮುಳ್ಳಿನಂತೆ ಮುರಿದಿಲ್ಲ. ಅವನ್ನು ತೆಗೆಯಲೂ ಆಗದೆ, ಉಳಿಸಿಕೊಳ್ಳಲೂ ಆಗದೆ ಒದ್ದಾಡುವಾಗ ಆಗುವ ನೋವು ಮುಳ್ಳು ಮುರಿದು ಒಳಗುಳಿದವರಿಗೇ ಗೊತ್ತು!
ಹೇಳಿಕೊಳ್ಳಬಹುದಾದ ವ್ಯಕ್ತಿಗಳು ಸಿಗುತ್ತಾರೆ ಎನ್ನುವುದೇ ತಪ್ಪು ಕಲ್ಪನೆ. ಅವರು ಹೇಳುವ ವಿಷಯಗಳನ್ನು ಹೇಗೆಲ್ಲ ಬಳಸಿಕೊಳ್ಳಬಹುದು, ಯಾವ ರೀತಿಯಲ್ಲಿ ಅವರ ವ್ಯಕ್ತಿತ್ವವನ್ನು ಮುರಿದು ಬಿಸಾಕಬಹುದು ಎಂದೇ ಇತರರು ಆಲೋಚನೆ ಮಾಡುತ್ತಿರುತ್ತಾರೆ. ಅಂತಹ ಆದರ್ಶದ ಗೆಳೆತನ ಬಹಳ ಕಡಿಮೆ ಎಂದು ಕಾಲೇಜಿನಲ್ಲಿ ನಡೆಯುತ್ತಿದ್ದ ರಂಪ ರಾದ್ಧಾಂತಗಳನ್ನು ನೋಡಿದಾಗ ತಿಳಿದುಹೋಗುತ್ತಿತ್ತು. ಹೆಚ್ಚಿನವರು ಪೊಸೆಸಿವ್ ಆಗಿ ವರ್ತಿಸುತ್ತಿದ್ದರು. ಅವರ ಹಿಡಿತ ತಪ್ಪುತ್ತಿದೆ ಅನ್ನಿಸಿದ ತಕ್ಷಣ ತೀರಾ ಹತ್ತಿರದ ಗೆಳೆಯ, ಗೆಳತಿಯರ ವ್ಯಕ್ತಿತ್ವವನ್ನು ವಿರೂಪಗೊಳಿಸಿಬಿಡುತ್ತಿದ್ದರು.
ಕಾಲೇಜಿನಲ್ಲಿದ್ದಾಗ ಹೆಣ್ಣುಮಕ್ಕಳು ಅಳುತ್ತಾ ಬಂದರೆ, “ಯಾರಿಗಾದರೂ ಹೇಳಿಕೊಂಡು ಹಗುರಾಗಿ" ಎಂದು ಕೌನ್ಸಿಲಿಂಗ್ ಮಾಡುತ್ತಿರಲಿಲ್ಲ.
“ಯಾರಿಗೆ ಹೇಳಬಹುದು ಎನ್ನುವುದನ್ನು ಹತ್ತಾರು ಬಾರಿ ಯೋಚಿಸಿ, ಎಷ್ಟೇ ಕಷ್ಟವಾದರೂ ಸರಿಯೇ, ನಿಮ್ಮ ತಾಯಿಯೊಂದಿಗೆ ಮಾತನಾಡಿ, ಅವರಿಗೆ ನೋವಾದರೂ ಚಿಂತೆಯಿಲ್ಲ” ಎನ್ನುವ ಸಲಹೆ ಕೊಡುತ್ತಿದ್ದೆ.
“ಈ ವಿಷಯ ಕೇಳಿದರೆ ಹುಚ್ಚು ಹಿಡಿದವರಂತೆ ಆಡ್ತಾರೆ, ತಲೆ ಚಚ್ಕೋತಾರೆ” ಎಂದೆಲ್ಲ ವಿದ್ಯಾರ್ಥಿನಿಯರು ಹೇಳಿದರೂ ತಾಯಿಯ ಬಳಿ ಮಾತಾಡುವುದೇ ಒಳ್ಳೆಯದೆಂದು ಸೂಚಿಸುತ್ತಿದ್ದೆ. ಮಕ್ಕಳ ಎಲ್ಲ ಕೃತ್ಯಗಳನ್ನು ಹೊಟ್ಟೆಗೆ ಹಾಕಿಕೊಳ್ಳುವ ಧಾರಣ ಶಕ್ತಿ ತಾಯಿಗಿದೆ ಎನ್ನುವುದು ನನ್ನ ನಂಬಿಕೆ, ಅದಕ್ಕೆ ಒಪ್ಪದಿದ್ದರೆ ನಾನೇ ಕಿವಿಯಾಗುತ್ತಿದ್ದೆ.
ಆದರೆ ಆಗಿನಿಂದಲೂ ಒಂದು ಪ್ರಶ್ನೆ ನನ್ನನ್ನು ಕಾಡುತ್ತಲೇ ಇದೆ. ಈ ಸಮಾಜ ತಾಯಿಯನ್ನು ಗೆಳತಿಯೆಂದು ಕಾಣುವ ವಿವೇಕವನ್ನು ಬೆಳೆಸಿದೆಯೇ? ಎಷ್ಟೆಲ್ಲಾ ಕಷ್ಟವನ್ನು ಅನುಭವಿಸಿದರೂ ಸರಿಯೇ, ತಾಯಿಯ ಎದುರಿಗೆ ಒಂದು ಪೊಳ್ಳು ವ್ಯಕ್ತಿತ್ವವನ್ನು ಕಟ್ಟಿಕೊಂಡೇ ಬದುಕುತ್ತೀವಿ ಎಂದು ಹೊರಡುವ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚು. ತಾಯಂದಿರು ಅಷ್ಟೇ, ಹೆಣ್ಣುಮಕ್ಕಳ ಯೌವನದ ಸಾಹಸಗಳನ್ನು, ಅರಿವಿಲ್ಲದೆ ನೂರೆಂಟು ಸಮಸ್ಯೆಗಳ ಒಳ ಸುಳಿಯಲ್ಲಿ ಸಿಕ್ಕಿ ಒದ್ದಾಡುವುದನ್ನು ಕಂಡಾಗ ಅದು ಬದುಕಿನ ಸಹಜ ಗತಿ ಎಂದು ಒಪ್ಪಿಕೊಳ್ಳುವಷ್ಟು ಪ್ರಬುದ್ಧರೇ? ತಾವೇ ಆ ಹಂತವನ್ನು ದಾಟಿ ಬಂದಿದ್ದರೂ ತಮ್ಮ ಮಕ್ಕಳು ಮಾತ್ರ ಆದರ್ಶ ಜೀವನ ನಡೆಸಬೇಕೆಂದು ಬಯಸುತ್ತಾರೆ! ಈ ಬಗ್ಗೆ ಪ್ರಶ್ನಿಸಿಕೊಳ್ಳಲೇಬೇಕು.ಇದು ಬರಿಯ ಹೆಣ್ಣುಮಕ್ಕಳಿಗೆ ಅನ್ವಯಿಸುವ ವಿಷಯವೇನಲ್ಲ. “ಜೆನೆರೇಷನ್ ಗ್ಯಾಪ್" ಮಣ್ಣು ಮಸಿ ಎಂದೆಲ್ಲ ಹೆಸರಿಟ್ಟು ಪೋಷಕರಿಂದ ದೂರ ಉಳಿಯುವ ಯುವಕ ಯುವತಿಯರು ಒಂದು ಕಡೆಯಾದರೆ, ಮಕ್ಕಳ ನಡೆಗಳನ್ನು ಅತಿಯಾದ ಆತಂಕದಲ್ಲಿ ನೋಡುತ್ತಾ, ಹೇಳಬಹುದಾದ ಮಾತುಗಳನ್ನು ಸರಿಯಾಗಿ ಹೇಳದಂತೆ ಮಾಡಿ ಸಮಸ್ಯೆಗಳನ್ನು ಕಗ್ಗಂಟಾಗಿಸುವ ಪೋಷಕರು! ಬೇಲಿ ದಾಟುವ ಪ್ರಯತ್ನ ಎರಡೂ ಕಡೆಯಿಂದಲೂ ನಡೆಯುವುದು ಕಡಿಮೆಯೇ!
ಪೊಳ್ಳು ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲೂ ತಮ್ಮದೇ ಆದ ಕಾರಣಗಳನ್ನು ವಿದ್ಯಾರ್ಥಿನಿಯರು ಹೇಳುತ್ತಿದ್ದರು.
“ಮೇಡಂ, ಅವರೆಲ್ಲ ಜಡ್ಜ್ ಮೆಂಟಲ್ ಆಗಿ ಬಿಡುತ್ತಾರೆ!” ಅವರು ಹೇಳುವ ಮಾತುಗಳಲ್ಲಿ ಕೂಡ ಅರ್ಥವಿದೆ ಎನ್ನಿಸುತ್ತಿತ್ತು. ಈ ಫೇಸ್ ಬುಕ್ಕನ್ನೆ ನೋಡಿ, ಅದೆಷ್ಟು ಜನರು ಯಾರ್ಯಾರ ಬಗ್ಗೆಯೋ ಜಡ್ಜ್ ಮೆಂಟಲ್ ಆಗಿ ವರ್ತಿಸುತ್ತಿರುತ್ತಾರೆ. ಯಾವುದೋ ಒಂದು ಕವನ ಸಂಕಲನಕ್ಕೆ ನನ್ನ ಕವಿತೆಯನ್ನು ಸೇರಿಸಿರಲಿಲ್ಲ. ಆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಯೇ ಇರಲಿಲ್ಲ. ನನ್ನ ಮಟ್ಟಿಗೆ ಅದೊಂದು ಕ್ಷುಲ್ಲಕ ವಿಷಯವೇ ಸರಿ. ಆದರೆ ನನ್ನ ಕವಿತೆಗಳನ್ನು ಇಷ್ಟಪಡುವ ಒಬ್ಬರು ಆ ಬಗ್ಗೆ ಅವರನ್ನು ಪ್ರಶ್ನಿಸಿದರಂತೆ. ಹೇಳಿದ ಕಾರಣವನ್ನು ಕೇಳಿ ನಾನು ಜೋರಾಗಿ ನಕ್ಕುಬಿಟ್ಟಿದ್ದೆ.
“ಫೇಸ್ ಬುಕ್ಕಿನಲ್ಲಿ ಪ್ರತಿಯೊಂದು ವಿಷಯಕ್ಕೂ ಹೇಳಿಕೆಗಳನ್ನು ಕೊಟ್ಟು ತಾವೆಷ್ಟು ವಿಚಾರವಂತರು ಎನ್ನುವುದನ್ನು ಅವರು ಸಾಬೀತು ಪಡಿಸಿಲ್ಲ!" ಎಂದರಂತೆ!! ಇದೂ ಒಂದು ಬಗೆಯ ಪೊಳ್ಳು ವ್ಯಕ್ತಿತ್ವದ ಪೋಷಣೆಯೇ ಸರಿ!!
ವಿಷಯ ಇದಲ್ಲವೇ ಇಲ್ಲ. ಹೆಣ್ಣುಮಕ್ಕಳು ಸಹಜವಾಗಿ, ಸರಳವಾಗಿ ಯಾವುದೇ ಆತಂಕವಿಲ್ಲದೆ ಮಾತನಾಡಬಲ್ಲರೇ? ಬಹಳ
ಬೋಲ್ಡ್ ಎಂದು ತೋರಿಸಿಕೊಳ್ಳುವ ಹೆಣ್ಣುಮಕ್ಕಳು ಸಹ ನಿಜವಾಗಿ ಎಲ್ಲವನ್ನು ಹೇಳುತ್ತಿದ್ದಾರೆಯೇ? ಹಾಗೆ ಮಾತನಾಡುವಾಗ `ಜಡ್ಜ್ ಮೆಂಟಲ್ ‘ ಆಗದೆ ಇರುವ ಒಂದು ವಾತಾವರಣ ಇಲ್ಲಿದೆಯೇ? ಬಹುಶಃ ಇಲ್ಲ. ನಮ್ಮ ಸಮಾಜದಲ್ಲಿ ಗಂಡಸರ ನಡೆಗಳನ್ನು ಸ್ವೀಕರಿಸಿದಷ್ಟೇ ಸಹಜವಾಗಿ ಹೆಣ್ಣುಮಕ್ಕಳ ನಡೆಗಳನ್ನು ಸ್ವೀಕರಿಸುವ ಕಾಲ ಬರುವವರೆಗೂ ಪ್ರತಿ ಹೆಣ್ಣುಮಗಳ ಗಂಟಲಿನಲ್ಲಿ ಒಂದು ಮುಳ್ಳು ಮುರಿದೇ ಇರುತ್ತದೆ! ಅದಕ್ಕೆ ನಾನೂ ಹೊರತಲ್ಲ. (ಫೇಸ್ ಬುಕ್ ಬರಹ)
- ಎಂ.ಆರ್. ಕಮಲ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.