ಚಿಂತನೆ/ ಒಂಟಿ ಮಹಿಳೆಯರ ಮನಃಸ್ಥಿತಿ – ಬಿ.ಎಂ. ರೋಹಿಣಿ

ಬದುಕಿನಲ್ಲಿ ನಾನಾ ಕಾರಣಗಳಿಂದ ಒಂಟಿಯಾಗಿ ಉಳಿದ ಈ ಮಹಿಳೆಯರೆಲ್ಲ ಸುಶಿಕ್ಷಿತರು, ಆದರೆ ವ್ಯವಹಾರಶೂನ್ಯರು. ನನಗೆ ಬದುಕಿನಲ್ಲಿ ಜೊತೆ ಯಾ  ರಿಲ್ಲ ಎಂಬ ಭಾವನೆಯೇ ಅವರನ್ನು ದುರ್ಬಲರನ್ನಾಗಿ ಮಾಡಬಹುದು. ಒಂಟಿಯಾಗಿ ಉಳಿಯುವುದೆಂದರೆ, ಸಮಾಜದಿಂದ ಲೋಕದಿಂದ ದೂರ ಉಳಿಯುವುದಲ್ಲ. ಎಲ್ಲರೊಡನೆ ಸಂಪರ್ಕ ಇಟ್ಟುಕೊಂಡೇ ಬದುಕಿನಲ್ಲಿ ಒಬ್ಬರೇ ಸಬಲೀಕರಣದ ದಾರಿಯಲ್ಲಿ ಹೆಜ್ಜೆ ಹಾಕಬಹುದು.

ಗಂಡಿನ ಆಶ್ರಯವಿಲ್ಲದೆ ಹೆಣ್ಣು ಬದುಕಲು ಸಾಧ್ಯವಿಲ್ಲ, ಬದುಕಬಾರದು ಕೂಡಾ ಎಂಬ ನಂಬಿಕೆ ನಮ್ಮದು. ಬಳ್ಳಿಗೊಂದು ಮರ ಆಶ್ರಯ ನೀಡುವಂತೆ, ತಲೆಯಿಟ್ಟು ಒರಗಲು ಹೆಣ್ಣಿಗೆ ಗಂಡಿನ ತೋಳು ಆಸರೆ ನೀಡುತ್ತದೆ ಎಂಬ ಭಾವನೆ ಸಮಾಜದಲ್ಲಿದೆ. ಅವಿವಾಹಿತ ಗಂಡಾಗಲೀ ಹೆಣ್ಣಾಗಲೀ ವಿವಾಹವಾಗದೆ ಸತ್ತರೆ ಪ್ರೇತವಾಗುತ್ತಾರೆ ಎಂಬ ಭಯವನ್ನೂ ತಲೆಯಲ್ಲಿ ತುಂಬಲಾಗಿದೆ. ಕರಾವಳಿಯ ಹಿಂದುಳಿದ ಸಮುದಾಯಗಳಲ್ಲಿ, ಅವಿವಾಹಿತರಿಗೆ ಮೋಕ್ಷವಿಲ್ಲ ಎಂಬ ನಂಬಿಕೆ ಇದೆ. ಪ್ರೇತಾತ್ಮಗಳು ಕುಟುಂಬಕ್ಕೆ ನಾನಾ ರೀತಿಯಲ್ಲಿ ಹಿಂಸೆ ನೀಡುತ್ತವಂತೆ. ಅದರಿಂದ ಮುಕ್ತಿ ಪಡೆಯಬೇಕಾದರೆ, ಆ ಪ್ರೇತಗಳಿಗೆ ಮದುವೆ ಮಾಡಬೇಕು. ಮದುವೆ ಮಾಡಿಸಿದರೆ ಪ್ರೇತಗಳು ಭೂಲೋಕದ ಜನರಿಗೆ ಯಾವ ತೊಂದರೆಯನ್ನೂ ಮಾಡದೆ, ನೆಮ್ಮದಿಯಿಂದ ಇರುತ್ತವಂತೆ. ಈ ಕಾರಣಕ್ಕಾಗಿ ತುಳುನಾಡಿನ ಆಟಿ (ಆಷಾಢ) ಮಾಸದಲ್ಲಿ ಪ್ರೇತಗಳಿಗೆ ಮದುವೆ ಮಾಡುವ ಘಟನೆಗಳು ನಡೆದಿವೆ.

ನನ್ನ ಕುಟುಂಬದಲ್ಲೇ ಅವಿವಾಹಿತೆಯಾಗಿ ಸತ್ತ ನನ್ನ ಚಿಕ್ಕಮ್ಮನಿಗೆ ಹಳೆಯಂಗಡಿಯ ಒಂದು ಕುಟುಂಬದ ಅವಿವಾಹಿತ ಹುಡುಗನ ಪ್ರೇತದೊಂದಿಗೆ ವಿವಾಹ ಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಈ ಘಟನೆ ನೆನಪಾದುದಕ್ಕೆ ಕಾರಣವಿದೆ. ಅವಿವಾಹಿತೆಯರು ಸತ್ತ ಮೇಲೆ ಪ್ರೇತವಾಗಿ ಕಾಡುತ್ತಾರೆಂಬ ನಂಬಿಕೆ ಇದ್ದರೂ ಅವರು ಬದುಕಿರುವಾಗ ಕುಟುಂಬ ಮತ್ತು ಸಮಾಜ ಅವರನ್ನು ಹೇಗೆ ಕಾಣುತ್ತದೆ ಎನ್ನುವುದು ಚರ್ಚಾರ್ಹ. ನನ್ನ ಅಧ್ಯಯನದಲ್ಲಿ, ಕ್ಷೇತ್ರಕಾರ್ಯದಲ್ಲಿ ಇಂಥ ಹಲವಾರು ಘಟನೆಗಳನ್ನು ಕಂಡಿದ್ದೇನೆ.

ಭಗ್ನಪ್ರೇಮಿಯಾದಾಗ, ಅಂತಸ್ತಿಗೆ ತಕ್ಕ ವರ ಸಿಗದೇ ಹೋದಾಗ, ಮುಂದೆ ನಿಂತು ಮದುವೆ ಮಾಡುವವರೇ ಇಲ್ಲದೆ ಹೋದಾಗ, ದೈಹಿಕೆ ಕೊರತೆಗಳಿದ್ದಾಗ, ವೃತ್ತಿ ಬದುಕಿನ ಧಾವಂತದಲ್ಲಿ ಮದುವೆಗೆ ಪ್ರಾಧಾನ್ಯ ನೀಡದೇ ಹೋದಾಗ- ಹೀಗೆ ನಾನಾ ಕಾರಣಗಳಿಂದ ಅವಿವಾಹಿತರಾಗಿ ಉಳಿಯುವ ಮಹಿಳೆಯರ ಸಂಖ್ಯೆ ಈ ಕಾಲದಲ್ಲಿ ಗಣನೀಯವಾಗಿ ಏರುತ್ತಿದೆ. ಮದುವೆಯೇ ಜೀವನದ ಪರಮೋದ್ದೇಶ ಅಲ್ಲ ಎಂಬ ಭಾವನೆ ಕೆಲವರಲ್ಲಾದರೂ ಮೂಡುತ್ತಿದೆ. ಆದರೆ, ಮದುವೆ ಎಂಬ ವ್ಯವಸ್ಥೆಯ ತಳಪಾಯವೇ ಕುಸಿಯುತ್ತಿದ್ದರೂ ಮಧ್ಯಮ ವರ್ಗ ಅದರಲ್ಲಿ ಭರವಸೆ ಇಟ್ಟುಕೊಂಡಿದೆ. ಕುಟುಂಬದಲ್ಲಿ ಸಂತಾನ ಮತ್ತು ಅದರ ರಕ್ಷಣೆಗೆ ಮದುವೆಗಿಂತ ಪರ್ಯಾಯ ವ್ಯವಸ್ಥೆ ಇಲ್ಲ. ಮದುವೆ ಇಲ್ಲದೆ ಒಟ್ಟಿಗೆ ಬದುಕುವ ಗಂಡುಹೆಣ್ಣುಗಳ ಮತ್ತು ಮದುವೆಯಾದರೂ ಮಕ್ಕಳು ಬೇಡವೆಂದು ನಿರ್ಧರಿಸುವ ಗಂಡಹೆಂಡತಿಯರ ಸಂಖ್ಯೆ ಹೆಚ್ಚುತ್ತಿರುವುದೂ ಸಂಸ್ಕøತಿ- ಸಂಪ್ರದಾಯಗಳು ನಿಂತ ನೀರಲ್ಲ ಎಂಬುದಕ್ಕೆ ಸೂಚನೆಯಾಗಿದೆ.

ಮದುವೆ ಆಗಬೇಕೆಂಬ ತೀವ್ರವಾದ ಬಯಕೆ ಇದ್ದೂ ಆಗದವರು, ಮದುವೆ ವ್ಯವಸ್ಥೆಯನ್ನೇ ಧಿಕ್ಕರಿಸಿ ಒಂಟಿಯಾಗಿ ಬದುಕಿದವರು ನಮ್ಮ ಸಮಾಜದಲ್ಲಿ ಹಲವಾರು ಮಂದಿ ಇದ್ದಾರೆ. ಅವಿವಾಹಿತ ಪುರುಷರು `ಶ್ರೀಮಾನ್’ ಎಂಬ ಗೌರವ ಪಡೆದಷ್ಟು ಸುಲಭವಾಗಿ ಅವಿವಾಹಿತ ಮಹಿಳೆಯರು `ಶ್ರೀಮತಿ’ ಎಂಬ ಗೌರವ ಪಡೆಯಲಾರರು. ಕುಮಾರ ವಾಜಪೇಯಿ ಇರುವುದಿಲ್ಲ, ಕುಮಾರ ರಾಹುಲ್ ಗಾಂಧಿ ಇರುವುದಿಲ್ಲ, ಆದರೆ ಕುಮಾರಿ ಜಯಲಲಿತಾ ಇದ್ದೇ ಇರುತ್ತಾಳೆ! ಅವಿವಾಹಿತೆಯರಿಗೆ ಉದ್ಯೋಗ, ಅಧಿಕಾರ ಇದ್ದರೆ, ಸುರಕ್ಷಿತವಾಗಿ ನೆಮ್ಮದಿಯಿಂದ ಇರಬಹುದು ಎಂಬ ಭಾವನೆ ಇದೆ. ಆದರೆ ಆರ್ಥಿಕ ಸ್ವಾವಲಂಬನೆಯೇ, ಕುಟುಂಬದ, ಸಮಾಜದ ಶೋಷಣೆಗೆ ದಾರಿ ಮಾಡಿಕೊಟ್ಟ ಉದಾಹರಣೆಗಳಿವೆ. ಒಂಟಿ ಮಹಿಳೆ ಎಂದರೆ, ಆಕೆ ಅವಿವಾಹಿತೆಯಾಗಿರಲಿ, ವಿಧವೆಯಾಗಿರಲಿ, ಗಂಡ ಬಿಟ್ಟವಳಾಗಿರಲಿ, ಮಕ್ಕಳಿಲ್ಲದವಳಾಗಿರಲಿ ಒಟ್ಟಿನಲ್ಲಿ ಸಮಾಜದ ದೃಷ್ಟಿಯಲ್ಲಿ ಅವಳೊಂದು `ವಾರಸುದಾರರಿಲ್ಲದ ಗದ್ದೆ’ ಎಂಬ ಭಾವನೆಯೇ ಗಟ್ಟಿಗೊಂಡಿರುತ್ತದೆ. ಈ ಬಗ್ಗೆ ಒಂದೆರಡು ಸತ್ಯ ಘಟನೆಗಳನ್ನು ನೋಡಬಹುದು:

ನನಗೆ ಪರಿಚಿತಳಾಗಿದ್ದ ಆಕೆ ತುಂಬಾ ಸುಂದರಿ. ಅವಳ ಉದ್ದವಾದ ಕೂದಲೇ ಅವಳು ಗುಂಪಿನಲ್ಲಿದ್ದರೂ ಅವಳನ್ನು ಗಮನಿಸುವಂತೆ ಮಾಡುತ್ತಿತ್ತು. ವಿವಾಹ ವ್ಯವಸ್ಥೆಯನ್ನೇ ಧಿಕ್ಕರಿಸಿದ ಆಕೆ, ಆಧ್ಯಾತ್ಮದಲ್ಲಿ ಒಲವಿದ್ದ ಕಾರಣ, ಕುಟುಂಬದೊಳಗೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ಎಂದು ಪ್ರತ್ಯೇಕ ಮನೆ ಮಾಡಿಕೊಂಡಿದ್ದಳು. ಆದರೆ ಕ್ರಮೇಣ ಬಂಧುಗಳ ದುರಾಸೆಗಳಿಗೆ ರೋಸಿ ಹೋಗಿ, ಎಲ್ಲರ ಸಂಪರ್ಕ ಕಡಿದುಕೊಂಡು ದ್ವೀಪದಂತೆ ಬಾಳಿದಳು. ಕಾಣದ ದೇವರ ಮೇಲಿನ ಭಕ್ತಿ ಗಾಢವಾಗಿತ್ತು. ಆದರೆ ಎದುರಿಗೆ ಜೀವಂತ ಕಾಣುವ ಮನುಷ್ಯರ ಮೇಲಿನ ನಂಬಿಕೆ ಕಳೆದುಹೋಗಿತ್ತು. ಆಹಾರ, ಉಡುಗೆತೊಡುಗೆ ಎಲ್ಲದರಲ್ಲೂ ಸರಳವಾಗಿ ಬದುಕಿದ ಆಕೆ ತನ್ನ 89 ನೇ ವಯಸ್ಸಿನಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಆಗ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಎಷ್ಟು ಗೊತ್ತೇ?- ಒಂದು ಕೋಟಿ ಎರಡು ಲಕ್ಷ ರೂಪಾಯಿ! ಅವರು ಯಾರನ್ನೂ ವಾರಸುದಾರರಾಗಿ ಹೆಸರಿಸದ ಕಾರಣ ಅದು ಸರ್ಕಾರದ ಬೊಕ್ಕಸಕ್ಕೆ ಸೇರಿತು. ನನಗೆ ಕಾಡಿದ ಪ್ರಶ್ನೆ ಏನೆಂದರೆ, ಒಬ್ಬ ಯೋಗಿನಿಯಂತೆ ಬಾಳಿದ ಆಕೆ ಸಮಾಜ, ಕುಟುಂಬ, ಬಂಧುವರ್ಗ ಎಲ್ಲರನ್ನೂ ತಿರಸ್ಕರಿಸಿ ಸಾಧಿಸಿದ್ದಾದರೂ ಏನು? ಅವರ ಆ ಮನಃಸ್ಥಿತಿಗೆ ಯಾರು ಕಾರಣ? ಖಚಿತವಾಗಿ ಉತ್ತರಿಸಲು ಸಾಧ್ಯವಿಲ್ಲ.

ಇನ್ನೊಬ್ಬಾಕೆ ಖ್ಯಾತ ಚಿತ್ರ ಕಲಾವಿದೆ. ಆದರೆ ಅವಳ ಕಲಾಕೃತಿಗಳನ್ನು ಬಯಸಿ ಬಂದವರು ಅವಳಿಗೆ ಹಣ ನೀಡದೆ, ಹೊಗಳಿ ಸುಮ್ಮನೆ ಹೊತ್ತೊಯ್ಯುತ್ತಿದ್ದರು. ಈ ವಂಚನೆಗೆ ಹೇಸಿ ಅವಳು ಚಿತ್ರ ಬರೆಯುವುದನ್ನೇ ನಿಲ್ಲಿಸಿ ಮಕ್ಕಳಿಗೆ ಪಾಠ ಹೇಳುವ ವೃತ್ತಿ ಆರಿಸಿಕೊಂಡಳು. ಅವಳಿಗೆ ಮದುವೆ ಆಗಬೇಕೆಂಬ ಆಸೆ ಇತ್ತು. ಆದರೆ ಅವಳ ತಾಯಿ ತನ್ನ ಬಂಧುಗಳಿಂದ, ಗಂಡನಿಂದ ದೂರವಾಗಿ ದ್ವೀಪದಂತೆ ಬದುಕಲು ಆರಂಭಿಸಿ, ಮಗಳ ಮದುವೆಯ ಯೋಚನೆಯನ್ನೇ ಮರೆತುಬಿಟ್ಟರು. ತಾಯಿಯ ಅಪ್ಪನ ಆಸ್ತಿಯೊಂದು ಕೋಟಿಗಟ್ಟಲೆ ಬಾಳುತ್ತಿತ್ತು. ಅದನ್ನು ಬಂಧುಗಳು ನಕಲಿ ಸಹಿ ಹಾಕಿ ಮಾರಾಟ ಮಾಡಿದರು. ವಿದ್ಯಾವಂತೆಯಾದ ಈಕೆ ತನ್ನ ಅಜ್ಜನ ಆಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದಿತ್ತು. ವಕೀಲರಿಂದ ಒಂದು ನೋಟೀಸ್ ಕಳಿಸಿದ್ದರೂ ಸಾಕಿತ್ತು. ಆದರೆ ಸದಾ ಉಪವಾಸ, ವ್ರತ ಮಾಡುತ್ತ ಕೃಶಳಾಗಿದ್ದ ಅವಳು, ಕೊನೆಗೆ ಕ್ಷಯರೋಗ ಪೀಡಿತಳಾದಳು. ಆಸ್ಪತ್ರೆಯಲ್ಲಿ ನೋಡಹೋದಾಗ ಅವಳು ಆಡಿದ ಮಾತುಗಳು ನನ್ನನ್ನು ಬೆಚ್ಚಿಬೀಳಿಸಿದವು. “ನನ್ನ ಬದುಕನ್ನೇ ಹಾಳು ಮಾಡಿದ ನನ್ನ ಅಮ್ಮ ದಾರಿಯಲ್ಲಿ ಬಿದ್ದು ಸಾಯಬೇಕು” ಎಂದು ಶಾಪ ಹಾಕಿದ ಅವಳ ಮನಃಸ್ಥಿತಿ ಹೇಗಿರಬಹುದು? ಮದುವೆ ಇಲ್ಲದೆ ತನ್ನ ಬದುಕನ್ನು ಬರಡು ಮಾಡಿದ್ದು ಅಮ್ಮನ ಸ್ವಾರ್ಥವೇ ಎಂದು ಅವಳು ದೃಢವಾಗಿ ನಂಬಿದ್ದಳು. ಒಂಟಿ ಹೆಂಗಸರ ಶೋಷಣೆಗಳ ಮಜಲುಗಳು ಒಂದೆರಡಲ್ಲ.

ಇನ್ನೊಬ್ಬ ಪರಿಚಿತೆ ರಂಗಭೂಮಿ ಕಲಾವಿದೆಯಾಗಿದ್ದರೂ ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಳು. ಅವಳಿಗೆ ಗೊತ್ತಿದ್ದವನು, ನಿವೃತ್ತಿ ನಂತರ ಅವಳಿಗೆ ಬಂದ ಅಪಾರ ಹಣವನ್ನು, ಅವಳ ಆಸ್ತಿ ಮಾರಿದ ಹಣವನ್ನು ಪಡೆದುಕೊಂಡು, ಸಿನಿಮಾ ಮಾಡುತ್ತೇನೆ, ಅವಳಿಗೆ ರಾಣಿ ಅಬ್ಬಕ್ಕನ ಪಾತ್ರ ನೀಡುತ್ತೇನೆ ಎಂದು ನಂಬಿಸಿದ. ಆದರೆ ಅವಳ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಿಸಿದ ಆ ಭೂಪ ಮತ್ತು ಅವನ ಗೆಳೆಯರು ಚಿತ್ರೀಕರಣದ ಲೊಕೇಶನ್‍ಗೆ ಕರೆದೊಯ್ದು ಅವಳ ಮೂಗಿಗೆ ಬೆಣ್ಣೆ ಸವರಿದ. ಆದರೆ ಅಷ್ಟೊಂದು ಹಣ ಕೊಡುವಾಗ ಅವಳೇಕೆ ದಾಖಲೆಗಳೇ ಇಲ್ಲದೆ ಕೊಟ್ಟಳು? ಚಿತ್ರೀಕರಣ ಆರಂಭವೇ ಆಗದಿದ್ದಾಗ ನೊಂದ ಅವಳು ಒಂದು ದಿನ ಹೃದಯಾಘಾತದಿಂದ ಸತ್ತಳು.

ಇಂಥ ಮಹಿಳೆಯರನ್ನು ಕಂಡಾಗಿ ಇವರೆಲ್ಲ ತಮ್ಮ ಬುದ್ಧಿಯನ್ನು ಎಲ್ಲಿ ಅಡವಿಡುತ್ತಾರೆ ಎಂದು ನೋವಾಗುತ್ತದೆ. ಶೋಷಣೆಗೆ ತಮ್ಮನ್ನು ತಾವೆ ಅರ್ಪಿಸಿಕೊಳ್ಳುತ್ತಾರೆ. ಸುಶಿಕ್ಷಿತರಾದ ಇವರಿಗೆಲ್ಲ ಜಾಗೃತಿ ಮೂಡಿಸಬೇಕಾಗಿದೆ. ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳದಿದ್ದರೆ ವಂಚನೆ ನಡೆಯುತ್ತಲೇ ಇರುತ್ತದೆ ಎಂದು ಕಿರಿಯರಿಗೆ ಕಲಿಸಬೇಕಾಗಿದೆ.

– ಬಿ.ಎಂ. ರೋಹಿಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *