ಚಿಂತನೆ/ ಏಕರೂಪ ಸಂಕೇತ ಇಲ್ಲದ ತಾಳಿ – ಡಾ.ಇಂದಿರಾ ಹೆಗ್ಗಡೆ

ಭಾರತೀಯ ಸಮಾಜದಲ್ಲಿ ವಿವಾಹಿತ ಮಹಿಳೆಗೆ ಸಂಕೇತ ಎನಿಸಿದ ತಾಳಿ ಅಥವಾ ಮಂಗಳಸೂತ್ರಕ್ಕೆ ಏಕರೂಪವಿಲ್ಲ. ಪ್ರದೇಶ, ಜಾತಿ, ಬುಡಕಟ್ಟು, ಸಂಪ್ರದಾಯ ಇವೆಲ್ಲಕ್ಕೆ ಅನುಸಾರವಾಗಿ ಅದರ ಸ್ವರೂಪ ಬದಲಾಗುತ್ತದೆ. ಉತ್ತರ ಭಾರತದಲ್ಲಿ ಬಹುಪಾಲು ಜಾತಿಗಳಲ್ಲಿ ಸಿಂಧೂರವೇ ಹೆಣ್ಣಿಗೆ ಮದುವೆ ಆಗಿರುವುದನ್ನು ಹೇಳುತ್ತದೆ. ಹೆಣ್ಣಿಗೆ ಈ ಸಂಕೇತಗಳು ಇರುವಂತೆ ಗಂಡಿಗೆ ಯಾವ ಸಂಕೇತವೂ ಇಲ್ಲ.

ಮಹಿಳೆಗೆ ವಿವಾಹ ಆದುದರ ಸಂಕೇತವಾಗಿ ಹಿಂದೂ ಪದ್ಧತಿಯಲ್ಲಿ ತಾಳಿಯನ್ನು ಕಟ್ಟಲಾಗುತ್ತದೆ ಎನ್ನುವುದು ಇಂದಿನ ನಂಬಿಕೆ. ಆದರೆ ತಾಳಿ ದಕ್ಷಿಣ ಭಾರತದಲ್ಲಿ ಮಾತ್ರ ಇರುವ ಮುತ್ತೈದೆ ಚಿಹ್ನೆ. ಈ ಚಿಹ್ನೆ ಇಡಿಯ ದಕ್ಷಿಣ ಭಾರತದಲ್ಲಿ ಏಕರೂಪ ಸಂಕೇತವನ್ನು ಹೊಂದಿಲ್ಲ.

ಉತ್ತರ ಭಾರತೀಯರಿಗೆ ನೆತ್ತಿಯ ಮೇಲೆ ಸಿಂಧೂರ ಇದ್ದರೆ ಅದು ವಿವಾಹಿತ ಸ್ತ್ರೀಯನ್ನು, ಪತಿ ಬದುಕಿರುವುದನ್ನು ಸಂಕೇತಿಸುತ್ತದೆ. ಉತ್ತರ ಭಾರತೀಯರ ವಿವಾಹ ವಿಧಿಗಳಲ್ಲಿ ವರನು ವಧುವಿನ ಬೈತಲೆಗೆ ಸಿಂಧೂರ ಹಾಕುವುದು ಮುಖ್ಯ ವಿಧಿ. ಆಳರಸರ ಯುದ್ಧ ಕಾಲದಲ್ಲಿ ಗೋವುಗಳನ್ನು ಅಪಹರಿಸುವಂತೆ ಹೆಣ್ಣುಗಳನ್ನು ಅಪಹರಿಸುತ್ತಿದ್ದರು. ಹಣ್ಣಿಗಾಗಿ ಯುದ್ಧಗಳು ನಡೆಯುತ್ತಿದ್ದುದು ಇತಿಹಾಸ ಮತ್ತು ಪುರಾಣಗಳು ದಾಖಲಿಸಿವೆ. ಯುದ್ಧದಲ್ಲಿ ಗೆದ್ದು ತಂದ ಸ್ತ್ರೀಗೆ ವಿಜಯದ ಸಂಕೇತವಾಗಿ ರಕ್ತದ ತಿಲಕವನ್ನು ಇಟ್ಟು ಗೆದ್ದು ತಂದವನು ವಿವಾಹ ಆಗುತ್ತಿದ್ದರಬೇಕು ಎನ್ನುವುದು ಊಹೆ. ಇಂತಹ ವಿವಾಹವನ್ನು ‘ಅಸುರೀ ವಿವಾಹ’ ಎಂದು ಕರೆಯುತ್ತಿದ್ದರು. ಈ ಪ್ರಕಾರ ಈಗ ಉತ್ತರ ಭಾರತೀಯರು ಹಾಕುವ ಬೈತಲೆ ಸಿಂಧೂರ ರಕ್ತದ ಸಂಕೇತ.

“ಮುಂಡಾ ಜನರಲ್ಲಿ ಸಿಂಧೂರ ಹಚ್ಚುವುದನ್ನು ‘ಸಿಂಧೂರ ಕರಾಬ್ ‘ ಎಂದು ಕರೆಯುತ್ತಾರೆ. ಗಂಡು ಹೆಣ್ಣಿನ ಬೈತಲೆಗೆ ಸಿಂಧೂರ ಹಚ್ಚಿ ತನ್ನ ಕೈಬೆರಳಿಂದ ತೆಗೆದ ರಕ್ತ ಹನಿಯನ್ನು ಬಟ್ಟೆಗೆ ಒರೆಸಿ ಅದನ್ನು ವಧುವಿನ ಕೊರಳಿಗೆ ಮುಟ್ಟಿಸಬೇಕು. ವಧುವೂ ಹಾಗೆಯೇ ಮಾಡಬೇಕು. ಪ್ರಾಚೀನ ಕಾಲದಲ್ಲಿ ಗಂಡು ಹೆಣ್ಣನ್ನು ಅಪಹರಿಸಿಕೊಂಡು ಮದುವೆ ಮಾಡಿಕೊಳ್ಳಬೇಕಾಗಿತ್ತು. (ವಿವಾಹ ಅಂದರೆ ಇದೇ. ಅಪಹರಿಸಿಕೊಂಡು ಹೋಗು ಎಂದರ್ಥ. ) ನನ್ನ ಮಗಳನ್ನು ಮದುವೆಯಾಗು ಎಂದು ಕೇಳುವ ಬದಲು ನನ್ನ ಹೆಣ್ಣನ್ನು ಅಪಹರಿಸು ಎಂದು ಹುಡುಗನನ್ನು ಕೇಳಿಕೊಳ್ಳುವ ಪದ್ಧತಿ ಕೆಲವು ಜಾತಿಗಳಲ್ಲಿ ಇವೆ.” (ಚಿದಾನಂದ ಸಮಗ್ರ ಸಂಪುಟ. III: ಜನ –ಜನಪದ -ಜಾನಪದ ಪು 334. 2002)

ಬಿಳಿಗಿರಿರಂಗನ ಬೆಟ್ಟದ ಸೋಲಿಗರಲ್ಲಿ ವಿವಾಹವಾಗಬೇಕಾದ ತರುಣ ತರುಣಿಯರು ಕಾಡಿಗೆ ಓಡಿಹೋಗಬೇಕು. ಒಂದು ತಿಂಗಳ ತರುವಾಯ ಅವರು ಊರಿಗೆ ಮರಳ ಬೇಕು . ಆಗ ಅವರ ವಿವಾಹವನ್ನು ಎಲ್ಲರೂ ಸೇರಿ ನೆರವೇರಿಸುವ ಪದ್ಧತಿ ಈಗಲೂ ಉಳಿದು ಬಂದಿದೆ. ಈ ಮಾಹಿತಿಯನ್ನು ನಾನು ಸೋಲಿಗರಿಂದಲೇ ಪಡೆದಿದ್ದೇನೆ.

ಈಶಾನ್ಯ ಭಾರತದ ಹೆಚ್ಚಿನ ಎಲ್ಲಾ ಪಂಗಡಗಳಲ್ಲಿ ಹೆಣ್ಣುಗಂಡು ಪರಸ್ಪರ ಮೆಚ್ಚಿದಾಗ ಕಾಡು ಸೇರುತ್ತಾರೆ. ಹೆಚ್ಚಾಗಿ ಬೈಶಾಖಿ ನೃತ್ಯದಲ್ಲಿ ಭಾಗವಹಿಸುವ ಜೋಡಿಗಳು ಅಲ್ಲಿಂದಲೇ ಕಾಡಿಗೆ ಓಡುವ ಪದ್ಧತಿ ಈ ಭಾಗದಲ್ಲಿ ಇದೆ. ಬೈಶಾಖಿಯು ಫಲವತ್ತತೆಗೆ ಸಂಬಂಧಿಸಿದ ಒಂದು ಆಚರಣೆ.

ನಾನು ಸಿಕ್ಕಿಂಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ “ನಾಡಿನಲ್ಲಿ ಇರುವವರು ಕೂಡಾ ಕಾಡಿಗೆ ಹೋಗುವಿರಾ” ಎಂದು ಯುವಕನೋರ್ವನಲ್ಲಿ ಕೇಳಿದ್ದೆ. “ನಾವು ನಗರದವರು ಈಗ ಕಾಡಿಗೆ ಹೋಗುವುದಿಲ್ಲ. ಗೆಳೆಯರ ಮನೆಗೆ ಹೋಗುತ್ತೇವೆ” ಎಂದ ಆತ. ಹೀಗೆ ಓಡಿ ಕನಿಷ್ಠ ಒಂದು ರಾತ್ರಿ ಕಳೆದ ಮೇಲೆ ಮರಳುತ್ತಾರೆ. ಆಮೇಲೆ ಗಂಡಿನ ಸೋದರ ಮಾವ ಮದುವೆಯ ಪ್ರಸ್ತಾಪವನ್ನು ಹುಡುಗಿಯ ಮನೆಗೆ ಕೊಂಡುಹೋಗುತ್ತಾನೆ.

ದಕ್ಷಿಣ ಭಾರತದ ವೈದಿಕ ಸಮಾಜದಲ್ಲಿ ಕ್ರಿಯಾತ್ಮವಾಗಿ ಹೆಣ್ಣನ್ನು ಒಂದು ಗಂಡಿಗೆ ಒಪ್ಪಿಸಿದುದರ ಕುರುಹಾಗಿ ಮದುವೆಯಂದು ಗಂಡು ಹೆಣ್ಣಿಗೆ ತಾಳಿ ಕಟ್ಟುತ್ತಾನೆ. ಆದರೆ ಈ ಪದ್ಧತಿ ಏಕರೂಪವಾಗಿಲ್ಲ.

ಈಗಲೂ ಬುಡಕಟ್ಟು ಮೂಲದ ಅನೇಕ ಪದ್ಧತಿಗಳನ್ನು ಉಳಿಸಿಕೊಂಡು ಬಂದ ನೆಲಮೂಲದ ತುಳುವರಲ್ಲಿ ತಾಳಿ ಇಲ್ಲ. ಹುಡುಗಿ ಪುಷ್ಪವತಿಯಾದಾಗ ನಡೆಯುವ ‘ಕರ ಪತ್ತಾವುನು’ (ಮದ್ದಲೆ ಮದಿಮೆ/ಒಸಗೆ) ಮುಹೂರ್ತದಲ್ಲಿ ಕುಟುಂಬದ ಯಜಮಾನನ ಮಡದಿ (ಸಾಮಾನ್ಯವಾಗಿ ಸೋದರತ್ತೆ) ಕರಿಮಣಿ (ಕಪ್ಪು ಮಣಿ) ಮತ್ತು ಬಣ್ಣದ ಮಣಿಗಳನ್ನು ದಾರದಲ್ಲಿ ಪೋಣಿಸಿ ಕನ್ಯೆಯ ಕೊರಳಿಗೆ ಹಾಕುತ್ತಿದ್ದಳು. ಈ ಮಣಿಗಳು ಹುಡುಗಿಯ ಪ್ರೌಢತೆ/ ವಿವಾಹ ಯೋಗ್ಯತೆಯನ್ನು ಸೂಚಿಸುತ್ತಿತ್ತು.

ಕ್ರಮೇಣ ಒಸಗೆಯ ಪದ್ಧತಿ ಕಡಿಮೆಯಾಯಿತು. ಮುಂದೆ 1960ರ ದಶಕದ ವರೆಗೆ ವಿವಾಹದ ಮುನ್ನಾದಿನ ನಡೆಯುವ ಮುಹೂರ್ತದಲ್ಲಿ ವಧುವಿನ ಕುಟುಂಬದ ಯಜಮಾನನ ಮಡದಿ “ಕರಿಮಣಿ, ಕಾಲುಂಗುರ, ವಂಕಿ ಉಂಗುರ’ವನ್ನು ವಧುವಿಗೆ ತೊಡಿಸುವ ಪದ್ಧತಿ ಇತ್ತು. ವಧುವಿನ ಮುಂದೆ ಕುಲದೈವಕ್ಕೆ ದೇವರಿಟ್ಟು(ಬಾಳೆ ಎಲೆಯಮೇಲೆ ಅಕ್ಕಿ ತೆಂಗಿನಕಾಯಿ ತಾಂಬೂಲ ಒಂದು ಕಾಲು ಪನವು) ಅದರ ಮೇಲೆ ಇವೆಲ್ಲವುಗಳನ್ನು ಇಟ್ಟು ಕುಲದೈವವನ್ನು ಪ್ರಾರ್ಥಿಸುವ ಪದ್ಧತಿ ಇತ್ತು.

ಆಧುನಿಕ ದಿನಗಳಲ್ಲಿ ಮನೆಯಲ್ಲಿ ‘ದೇವರಿಟ್ಟು’ ನಡೆಸುವ ಮುಹೂರ್ತ ಆಚರಣೆಯಲ್ಲಿ ದೇವರೆದುರಲ್ಲಿ ಇಟ್ಟ ಕರಿಮಣಿಯನ್ನು ಹೊರತು ಪಡಿಸಿ ಇತರ ಮುತ್ತೈದೆ ಒಡವೆಗಳನ್ನು ವಧುವಿಗೆ ಮುನ್ನಾದಿನವೇ ಹಳೆಯ ಪದ್ಧತಿಯಂತೆ ತೊಡಿಸಲಾಗುತ್ತದೆ. ಕರಿಮಣಿಯನ್ನು ಮರುದಿನ ವರನ ಕೈಗೆ ನೀಡಿ ವಧುವಿನ ಕೊರಳಿಗೆ ಹಾಕಲು ಹಿರಿಯರು ಆದೇಶಿಸುತ್ತಾರೆ. ಕರಿಮಣಿ ಸರದಲ್ಲಿ ತಾಳಿ ಇರುವುದಿಲ್ಲ. ಈಗಲೂ ತಾಳಿ ಸಂಪ್ರದಾಯವಲ್ಲ.

ಹರಿಜನರ ಒಂದು ಪಂಗಡದಲ್ಲಿ ತಾಳಿ ಕಟ್ಟುವುದು ವಧುವಿನ ಸೋದರಮಾವ. ಇನ್ನೊಂದು ಪಂಗಡದಲ್ಲಿ “ಪೆದ್ದ ಮಾದಿಗ” (ಹಿರಿಯ ಮುಖಂಡ) ವಧುವಿಗೆ ಮೊದಲು ತಾಳಿ ಕಟ್ಟುತ್ತಾನೆ. ಅನಂತರ ಎರಡನೆಯ ಬಾರಿ ವರನು ಕಟ್ಟುತ್ತಾನೆ.

ತಮಿಳಿನಲ್ಲಿ “ತಾಳಿಕಟ್ಟು” ಎಂದರೆ ಮದುವೆ ಎಂದೂ “ತಾಳಿಕ್ಕಾರಿ” ಅಂದರೆ ಮದುವೆಯಾದವಳೆಂದೂ “ತಾಳಿಯಿರುತ್ತವಳ” ಅಂದರೆ ತಾಳಿಯನ್ನು ಕಳಕೊಂಡವಳು ಅಂದರೆ ವಿಧವೆ ಎಂದು ಅರ್ಥ.
ತಾಳಿ ಎನ್ನುವ ಪದ ತಾಳೆಗರಿಯ ಮೂಲದಿಂದ ಬಂದಿರಬಹುದು ಎಂದು ವಿದ್ವಾಂಸರಾದ ಡಾ. ಎಂ. ಚಿದಾನಂದ ಮೂರ್ತಿಯವರು ಅಭಿಪ್ರಾಯ ಪಡುತ್ತಾರೆ. ಅವರು ಮುಂದುವರಿಸಿ “ಹಂದಿಜೋಗಿ ವಡ್ಡರಲ್ಲಿ ಈಗಲೂ ತಾಳಿ ಎನ್ನುವುದು ಕರಿಮಣಿಗಳ ಮಾಲೆ. ಇಲ್ಲಿ ತಾಳೆಗರಿಯನ್ನು ತಾಳಿಯ ಸಂಕೇತವಾಗಿ ಕಟ್ಟುವುದೂ ಇದೆ. ಮೂಲತಃ ತಾಳಿ ಎನ್ನುವುದು ತಾಳೆಗರಿಯನ್ನು ಸಂಕೇತಿಸುತ್ತಿದ್ದರಬೇಕು. ಕಿವಿಯ ಓಲೆಯೂ ತಾಳೆ ಗರಿಯ ಮೂಲದಿಂದ ಬಂದಿದ್ದು” ಎನ್ನುತ್ತಾರೆ. ಹಿಂದೆ ತುಳುನಾಡಿನ ಹಳ್ಳಿಗಳಲ್ಲಿ ಬ್ಯಾರಿ ಜನಾಂಗದ ಮಹಿಳೆಯರು ತಾಳೆಗರಿಯನ್ನು ಸುರುಳಿಯಾಗಿ ಸುತ್ತಿ ಕಿವಿಗೆ ಧರಿಸುತ್ತಿದ್ದುದು ಸಾಮನ್ಯವಾಗಿತ್ತು.

ತಾಳಿ ಬೇರೆ ಬೇರೆ ಜನಾಂಗಗಳಲ್ಲಿ ಬೇರೆ ಬೇರೆ ವಸ್ತುವನ್ನು ಸಂಕೇತಿಸುತ್ತದೆ. ದಕ್ಷಿಣ ಭಾರತದ ಅನೇಕ ಪಂಗಡಗಳಲ್ಲಿ ಅರಸಿನ ಕೊಂಬು ತಾಳಿಯನ್ನು ಸಂಕೇತಿಸುತ್ತದೆ. ಒಡಿಸ್ಸಾದ ಸವರರಲ್ಲಿ (ಶಬರ) ಹೊನ್ನೆವರ ಗಿಡದ (ತಂಗಡಿ) ಹೂ ತಾಳಿಯಾಗಿದೆ.

ತಾಳಿಯ ಉಲ್ಲೇಖ ಶಾಸನಗಳಲ್ಲಿ ಇದೆಯೆಂದು ಚಿದಾನಂದ ಮೂರ್ತಿಯವರು ಬರೆಯುತ್ತಾರೆ.
ಪ್ರಾಚೀನ ಸಂಸ್ಕೃತ, ಸೂತ್ರ ಸಾಹಿತ್ಯದಲ್ಲಿ ಮಂಗಳ ಸೂತ್ರ ಅಥವಾ ತಾಳಿಯ ಉಲ್ಲೇಖ ಇಲ್ಲ. ಈಚಿನ ಶನಕ ಸೂತ್ರದಲ್ಲಿ ಇದೆ. ಸಂಕೇತವಾಗಿದೆ.

ಇತ್ತೀಚಿನ ದಿನಗಳಲ್ಲಿ ಕೆಲವು ತುಳುವ ಮಹಿಳೆಯರು ಕರಿಮಣಿಯನ್ನು ಧರಿಸುವುದನ್ನು ಕಡಿಮೆ ಮಾಡಿದ್ದಾರೆ.
ಎಂದಿಗೂ ತುಳುವರ ವಿವಾಹ ಕನ್ಯಾದಾನವನ್ನು ಸ್ವೀಕರಿಸಲಿಲ್ಲ. ಆದರೆ ಕೆಲವೆಡೆ ಸಪ್ತ ಪದಿ ಆಚರಿಸಲಾಗುತ್ತದೆ. ಸಪ್ತಪದಿ ಎಂದರೆ ವಧುವು ಅಕ್ಕಿಯ ಮೇಲೆ ಏಳು ಹೆಜ್ಜೆಗಳನ್ನಿಟ್ಟು ಚಿರಂತನ ಸಖ್ಯವನ್ನು ಬಯಸುವ ವೈದಿಕ ವಿಧಿ. ಸಪ್ತಪದಿ ಕಾರ್ಯ ಅಂಗವಾಗಿ ವರನು ವಧುವನ್ನು ಏಳು ಹೆಜ್ಜೆ ಇಡಿಸುತ್ತಾ ಒಂದೊಂದಾಗಿ ಹೆಜ್ಜೆಗಳಿಗೆ ಈ ಮಂತ್ರಗಳನ್ನು ಹೇಳುತ್ತಾನೆ. ಪ್ರತಿಯೊಂದು ಹೆಜ್ಜೆಗೂ ಇದರಲ್ಲಿ ನನ್ನನ್ನು ಅನುಸರಿಸು ಎನ್ನುತ್ತಾನೆ.
1 ಅನ್ನಕ್ಕಾಗಿ ಮೊದಲ ಹೆಜ್ಜೆ ಇಡು.
2 ಬಲದ ಅಭಿವೃದ್ಧಿಗಾಗಿ ಎರಡನೆಯ ಹೆಜ್ಜೆ ಇಡು.
3 ಧನಾಭಿವೃದ್ಧಿಗಾಗಿ ಮೂರನೆಯ ಹೆಜ್ಜೆ ಇಡು.
4 ಮಮತೆಯ ಅಭಿವೃದ್ಧಿಗಾಗಿ ನಾಲಕ್ನೆಯ ಹೆಜ್ಜೆ ಇಡು.
5 ಸಂತಾನ ಲಾಭಕ್ಕಾಗಿ ಐದನೆಯ ಹೆಜ್ಜೆ ಇಡು.
6 ಅನುಕೂಲವಾದ ೃತುಕಾಲಕ್ಕಾಗಿ ಐದನೆಯ ಹೆಜ್ಜೆ ಇಡು.
7 ನಮ್ಮೊಳಗಿನ ಸ್ನೇಹಕ್ಕಾಗಿ ಏಳನೆಯ ಹೆಜ್ಜೆ ಇಡು – ಎಂದು ವರನು ವಧುವಿಗೆ ಹೇಳುತ್ತಾನೆ.

  • ಡಾ.ಇಂದಿರಾ ಹೆಗ್ಗಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *