ಚಿಂತನೆ / ಇಂಥ ಪ್ರದರ್ಶನ ಅಗತ್ಯವೇ? – ಜಯಶ್ರೀ ದೇಶಪಾಂಡೆ

`ಪರ್ಚೇಸೋಮೇನಿಯಾ’ ಎಂಬ ವ್ಯಂಗ್ಯ ಉಪಾಧಿ ಪಡೆದಿರುವ ಕೊಳ್ಳುಬಾಕತನಕ್ಕೆ ಬಹುಶಃ ಮದ್ದೇ ಇಲ್ಲ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದಲ್ಲಿ ಅನೇಕ ತಂದೆತಾಯಂದಿರಲ್ಲಿ `ನಮಗಂತೂ ಇವೆಲ್ಲ ಸಿಕ್ಕಲಿಲ್ಲ, ನಮ್ಮ ಮಕ್ಕಳಾದರೂ ಖುಷಿ ಪಡಲಿ’ ಎಂಬ ವಿಚಿತ್ರ ಮನೋಭಾವ ಹೆಚ್ಚಾಗುತ್ತಿದೆ. ತೋರಿಕೆಯಲ್ಲೇ ಬದುಕು ಸಾರ್ಥಕ ಎಂಬ ಹಮ್ಮನ್ನು ಮಕ್ಕಳಲ್ಲಿ ಬಿತ್ತುವ ಇಂತಹ ಬೆಳವಣಿಗೆ ಅವರ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ.

ಸ೦ಗೀತಾಳ ಕೈಯೊಳಗಿದ್ದ ದಪ್ಪ ಕವರ್‍ನಲ್ಲೇನಿದೆ ಎಂದು ಅವಳು ಬಾಯಿ ಬಿಡದಿದ್ದರೂ ಗೊತ್ತಾಗೇ ಬಿಟ್ಟಿತ್ತು. ಶಾಪಸ್೯ ಸ್ಟಾಪಿನ ಛಾಪಿನ ಹೊಚ್ಚ ಹೊಸ ಕವರು ಅದು ಅಲ್ಲಿನ ಖರೀದಿ ಎಂದು ಘಂಟಾಘೋಷವಾಗಿ ಸಾರಿತ್ತಲ್ಲ… ಏನಿಲ್ಲ ಅಂದರೂ ಕನಿಷ್ಠ ಏಳೆ೦ಟು ಸಾವಿರ ಹಣಕ್ಕೆ ಕಡಿಮೆ ಇಲ್ಲದ ಖರೀದಿ. ಒ೦ದು ವಷ೯ ಆಗಿತ್ತಷ್ಟೆ ಅವಳೊಂದು ಕೆಲಸಕ್ಕೆ ಸೇರಿ. ತಿಂಗಳ ಸ೦ಬಳ ಎಷ್ಟೆಂದು ಅವಳಿಗಷ್ಟೇ ಗೊತ್ತು. ತಾಯಿಗೂ ಗೊತ್ತಿಲ್ಲ ಅದು, ಅವಳು ಹೇಳಿಲ್ಲ ! ಆದರೆ ಅಪ್ಪ ಹೋದಾಗಿಂದ ಅವಳಮ್ಮ ಪ್ರೈಮರಿ ಶಾಲೆಯ ಟೀಚರಾಗಿ ಮಕ್ಕಳಿಗಾಗಿ ಹಗಲು ಇರುಳುಗಳನ್ನೊಂದು ಮಾಡುತ್ತ ಕಷ್ಟ ಪಟ್ಟವಳು, ಅವಳಿಗೀಗ ಒಂದಿಷ್ಟು ವಿಶ್ರಾಂತಿಯ ಅಗತ್ಯ ಇದೆ…ಸಂಗೀತಾ ದುಡಿದು ತರುವ ಹಣಕ್ಕಾಗಿ ಚಾತಕದ೦ತೆ ಕಾಯುತ್ತಿದ್ದ ಆ ನಿಶ್ಶಕ್ತ ತಾಯಿಗೆ ಅದರ ಅವಶ್ಯಕತೆ ಖ೦ಡಿತ ಇದೆ. ಇಷ್ಟು ವರ್ಷಗಳೂ ದುಡಿದು ಸವೆದು ಹೋಗಿರುವ ಅವಳ ದೇಹಕ್ಕೆ ವಿಶ್ರಾಂತಿ, ಔಷಧಿಗಳೆರಡೂ ಬೇಕು. ಹೀಗಿರುವಾಗ ಮಗಳು ತರುವ ಹಣದ ಬಗ್ಗೆ ಅವಳ ನಿರೀಕ್ಷೆಯನ್ನು ತಪ್ಪೆನ್ನಲು ಸಾಧ್ಯವಿಲ್ಲ. ಆದರೆ ನಡೆಯುತ್ತಿರುವುದೇ ಬೇರೆ…

ಈ ಮೂರ್ನಾಲ್ಕು ತಿಂಗಳಲ್ಲಿ ಸಂಗೀತಾಳ ನಡೆನುಡಿಗಳಲ್ಲಿ ಇದ್ದಕ್ಕಿದ್ದಂತೆ ವಿಪರೀತ ಬದಲಾವಣೆಗಳು…ಸಂಬಳದಲ್ಲಿ ಮುಕ್ಕಾಲು ಭಾಗ ಖಚು೯ ಮಾಡುತ್ತ ಮಾಲ್ ಗಳನ್ನು ಸುತ್ತಿ ಒಂದಕ್ಕೆಂಟು ರೇಟು ಕೊಟ್ಟು ಕಣ್ಣಿಗೆ ಆಕಷಿ೯ಸಿದ್ದನ್ನೆಲ್ಲ ಖರೀದಿಸಿದ್ದು, ದುಬಾರಿ ಮೊಬೈಲು, ಅಷ್ಟೇ ಬೆಲೆಯ ಚಪ್ಪಲಿ ಒಂದಲ್ಲ ಎರಡಲ್ಲ.. ಅವಳಮ್ಮ ಗಾಬರಿಯಿಂದ ಮಗಳ ಈ ಪರಿಯನ್ನು ಗಮನಿಸಿದ್ದಾಳೆ. ಪ್ರಶ್ನೆ ಎತ್ತಿದರೆ ಧ್ವನಿ ಜೋರು ಮಾಡಿ ಕೂಗಾಡುವ ಮಗಳ ಅಟಾಟೋಪಕ್ಕೆ ಬೆದರಿ ಮೌನವಾಗುತ್ತಾಳೆ!

ವಿಷಯ ಇಷ್ಟೇ…ಸ೦ಗೀತಳಿಗೊಬ್ಬ ಹೊಸ ಗೆಳತಿ ಸಿಕ್ಕಿದ್ದಾಳೆ, ಊರಲ್ಲಿ ಅಪಾರ ಆಸ್ತಿ ಅವಳಪ್ಪನಿಗೆ. ಸಿಟಿಯಲ್ಲಿ ಮನೆಗಳಿಂದ ಬರುವ ಭಾರೀ ಮೊತ್ತದ ಬಾಡಿಗೆ ಹಣ.. ಇವಳು ಕೆಲಸ ಮಾಡುವುದು ಟೈಮ್ ಪಾಸ್‍ಗೆ …ಸಂಪಾದಿಸಿದ್ದನ್ನು ತನ್ನಿಷ್ಟದಂತೆ ಚೆಲ್ಲುವ ಹುಚ್ಚು ಅವಳಿಗೆ. ಈ ಗೆಳತಿಯ ಸಹವಾಸ ಸ೦ಗೀತಾಳ ದೌಬ೯ಲ್ಯ ಆಗಿದ್ದರ ಪರಿಣಾಮವೇ ಇವಳ ಈ ದುಂದುವೆಚ್ಚ!

ಅನೀಶನ ಅಪ್ಪ ಕೊರಿಯರ್ ಕ೦ಪನಿಯಲ್ಲಿ  ಸೂಪರ್‍ವೈಸರ್. ಮಗನ ಶಿಕ್ಷಣಕ್ಕೆ ದುಡಿದು ಕೂಡಿಟ್ಟ ಹಣ ಸಾಲುವ ಪ್ರಶ್ನೆಯೇ ಇಲ್ಲ ಅದಕ್ಕ೦ತೂ ಸಾಲ ಎತ್ತಿಯಾಗಿದೆ ಆದರೂ ಮಗನ ಹಠಕ್ಕೆ ಸೋತು ಇತ್ತೀಚಿಗೆ ಕೊಡಿಸಿರುವ ಒಂದು ಲಕ್ಷದ ಬೈಕಿನ ‘ಈ ಎಂ ಐ’ ಕಂತುಗಳನ್ನು ತು೦ಬುತ್ತಿರುವವನೂ ಅವನೇ! ಬೈಕು ಕೊoಡರೆ ತಪ್ಪಲ್ಲ ಆದರೆ ಒಂದು ಲಕ್ಷ ದುಡ್ಡು ಪೀಕಿಸಿದಂಥ ಬೈಕಿನ ಅಗತ್ಯವಿತ್ತೇ?ಎನ್ನುವ ಪ್ರಶ್ನೆ ಅವರಲ್ಲಿ ಎದ್ದಿಲ್ಲ, ಎದ್ದಿದ್ದರೂ ಪ್ರತಿಷ್ಠೆ ಅಡ್ಡ ನಿಲ್ಲುತ್ತಿದೆ… ಅಪ್ಪನ ಸೋತ ಮುಖದತ್ತ ಅನೀಶನ ಗಮನವಿಲ್ಲ.

ಶರಣ ಇಲ್ಲಿ ಇನ್ನೊಂದು ಉದಾಹರಣೆ. ನಾಲ್ಕು ಜನರ ಮನೆ ಅಡುಗೆ ಮಾಡುವ ಅಮ್ಮ, ಸರಕಾರೀ ಬಸ್ ಡ್ರೈವರ್ ಅಪ್ಪ. ಶರಣನಿಗೆ ಮೊಬೈಲ್ ಎಂದರೆ ಪ್ರಾಣ, ತಿಂಗಳಿಗೊಂದರಂತೆ ಹೊಸ ಹೊಸ ಮಾಡೆಲ್ ಬಿಡುಗಡೆಯಾಗುವ ಸ್ಮಾರ್ಟ್ ಫೋನಿನ ಫಳಫಳ ಅತ್ಯಾಕರ್ಷಕ ಅನಿಸುತ್ತಿದ್ದಂತೆ ಅದು ಬೇಕೇ ಬೇಕೆಂದು ಪಟ್ಟು ಹಿಡಿದು, ಅಪ್ಪ ಅಮ್ಮನ ಪ್ರಾಣ ತಿಂದು ವರ್ಷಕ್ಕೊಂದು ಹೊಸ ಫೋನು ಖರೀದಿ ಮಾಡುವವನಿಗೆ ಅದರ ಹಿಂದಿನ ಅವರಿಬ್ಬರ ನೋವು ಕಣ್ಣೀರಿನ ಕಡೆ ಗಮನವಿಲ್ಲ. ಕೊಡಿಸದೆ ಹೋದಲ್ಲಿ ಮನೆ ಬಿಟ್ಟು ಓಡಿ ಹೋಗುವ ಮಾತು, ಒಮ್ಮೆ ಮಾಡಿಯೂ ಇದ್ದ ದುಸ್ಸಾಹಸ…

ಇನ್ನು ಉದಾಹರಣೆಗಳತ್ತ ಕಣ್ಣಿಟ್ಟಲ್ಲಿ ಲಕ್ಷಾವಧಿ ಹುಡುಗ ಹುಡುಗಿಯರ ಇ೦ದು ನಾಳೆಯ ಕಥನಗಳಲ್ಲಿ ಇವೇ ಬಗೆಯ ಸಮಾಚಾರಗಳಿವೆ. ಹೆಚ್ಚಾಗಿ ನಗರಗಳ ಭ್ರಮಾಲೋಕ ಹದಿವಯಸ್ಸನ್ನು ಎಷ್ಟು ಮಟ್ಟಿಗೆ ಪ್ರಭಾವಿಸುತ್ತದೆ ಎ೦ದರೆ ಅವರಿವರ ಅನುಕರಣೆಯ ಮನಸ್ಥಿತಿ ಒಮ್ಮೆ ಹೊಕ್ಕುಬಿಟ್ಟರಾಯಿತು ಸಾರಾಸಾರ ವಿವೇಚನೆಯ ಹ೦ತವನ್ನವರು ಬಹಳ ಶೀಘ್ರವಾಗಿ ದಾಟಿಬಿಡುತ್ತಾರೆ. ತನ್ನನ್ನು ಒಪ್ಪವಾಗಿ, ಸು೦ದರವಾಗಿ ತೋರ್ಪಡಿಸಿಕೊಳ್ಳುವುದನ್ನು ತಪ್ಪೆನ್ನಲಾಗದು, ಆದರೆ ಸ೦ಗೀತಾ ಮತ್ತವಳ೦ಥ ಹುಡುಗಿಯರು, ಹುಡುಗರು ತಮ್ಮದೊ೦ದು ಸ್ಟೇಟಸ್ ಗಾಗಿ ಊಟ, ತಿ೦ಡಿಯ ಹಣವನ್ನು ಕೂಡ ತ್ಯಾಗ ಮಾಡುವ ಹ೦ತದಲ್ಲಿದ್ದಾರೆ. ಇದೊ೦ದು ನಮೂನೆಯ ಪೀರ್ ಪ್ರೆಶರ್ ಇದ್ದ೦ತೆ. ಹದಿನೆ೦ಟರಿ೦ದ, ಇಪ್ಪತ್ತೆ೦ಟು, ಮೂವತ್ತರ ವರೆಗೆ ಹೆಚ್ಚಾಗಿ ಕಾಡುವ ಈ ಮನೋಭಾವ ‘ತೋರಿಕೆಯಲ್ಲೇ ಸುಖ’ ಎನ್ನುವ ಅನಿಸಿಕೆಯನ್ನು ಅವರಲ್ಲಿ ಬಿತ್ತುತ್ತದೆ. ಬಾಹ್ಯರೂಪದಲ್ಲಿ ಕಾಣಿಸಿಕೊಳ್ಳುವ ತಮ್ಮ ಶರೀರವೇ ಸಮಾಜದಲ್ಲಿ ತನಗೊ೦ದು ಪ್ರತಿಷ್ಠೆ ಗೌರವ ತರುವ ಸಾಧನ ಎ೦ಬ ಖಚಿತ ನ೦ಬಿಗೆಯಲ್ಲಿ ಸ್ಯೂಡೋ ಸ್ಟೇಟಸ್ ನ ಹಿ೦ದೆ ಬೀಳುತ್ತಾರೆ.

‘ಏನು ಈ ಸ್ಯೂಡೋ ಸ್ಟೇಟಸ್?’ ನಗರ ಪ್ರದೇಶದ ನಿಜ ಬಡ, ಹಾಗೂ ಮಧ್ಯಮ ಆರ್ಥಿಕ ಸ್ತರದ ಕುಟು೦ಬದವರನ್ನು ಕಾಡುವ ಪೀಡೆಯಿದು. ಪಾರ್ಟಿ, ಟೂರು, ದುಬಾರಿ ಬ್ರ್ಯಾ೦ಡಿನ ಬಟ್ಟೆಬರೆ, ಶೂಗಳು, ಸಣ್ಣ ಸಣ್ಣ ಆಕ್ಸೆಸರಿಯಿ೦ದ ಆರ೦ಭಿಸಿ ಕಾರು, ಬೈಕುಗಳ ಹ೦ತಕ್ಕೆ ಚಾಚುವ ಖರೀದಿಯ ಹುಚ್ಚು ಮನೆಯ ಆರ್ಥಿಕ ಪರಿಸ್ಥಿತಿಗೆ ಮಾಡುತ್ತಿರುವ ಅಪಾಯವನ್ನು ಗಮನಿಸುವ ವ್ಯವಧಾನವನ್ನೇ ಕೊಡುವುದಿಲ್ಲ.

ಯಾಕಿಲ್ಲ! ಅವರಿಗಷ್ಟೇ ಯಾಕೆ? ನನಗೂ ಯಾಕೆ ಸಿಗಬಾರದು? ಅವನಷ್ಟೇ ಫ್ಯಾಷನೇಬಲ್ ತಾನು ಯಾಕಾಗಬಾರದು..ಪ್ರಶ್ನೆಗಳ ನಡುವಿನ ತೇಲಾಟದಲ್ಲಿ ಗಿರಕಿ ಹೊಡೆಯುತ್ತ ಆಸೆ ಅಪೇಕ್ಷೆಗಳ ಹಂದರಗಟ್ಟುವ ಮನಸುಗಳನ್ನು ತಮ್ಮ ತೆಕ್ಕೆಗೆಳೆದುಕೊಳ್ಳುವ ಮಾರುಕಟ್ಟೆಗಳಿರುವುದು ನಮ್ಮ ಸುತ್ತ ಮುತ್ತಲಿನಲ್ಲೇ ! ನಮ್ಮ ಅಗತ್ಯ ಅವಶ್ಯಕತೆಗಳ ಸೀಮಾರೇಖೆಗಳು ಇತ್ತೀಚಿನ ವಷ೯ಗಳಲ್ಲಿ  ನಮ್ಮನ್ನು ತಟ್ಟುತ್ತಿಲ್ಲವೇ ?

‘ಬೇಕು’ ಮತ್ತು ‘ಅಗತ್ಯ’ಗಳ ನಡುವಿನ ಗೆರೆಯನ್ನು ಕಿತ್ತು ಹಾಕುತ್ತಿರುವ ಶೋ ಆಫ್ ಅಥವಾ ಚಂದಗಾಣಿಸಿಕೊಳ್ಳುವಿಕೆಯ ಹಪಾಪಿತನ, ಪ್ರದಶಿ೯ಸಿಕೊಳ್ಳುವ ಅತ್ಯಾಸಕ್ತಿ ವಿವೇಚನೆಯ ಅಂಚನ್ನು ದಾಟಿಬಿಟ್ಟಿದೆ.

ಅವರ ಬಿಟ್ಟು ಇವರಾರು? ಎನ್ನುವ ಮಾಯದಾಟದಲ್ಲಿ ತೊಡಗಿದಂತಿದೆ ಯುವಕ ಯುವತಿಯರ ಒಂದು ಪಂಗಡ. ಇವರಿಗೆ ಕ್ಲಾಸ್ ಬೇಕು! ತೋರಿಕೆಯದಾದರೂ ಸರಿ. ಹತ್ತು ಜನರ ಕಣ್ಣಲ್ಲಿ ಎದ್ದು ಕಾಣುವ, ಅವರ ಕಣ್ಣರಳಿಕೆಗೆ ಕೇಂದ್ರ ಬಿಂದುವಾಗುವ ತನ್ಮೂಲಕ ತನ್ನೊಳಗಿನ ಫಾಲ್ಸ್ ಪ್ರೆಸ್ಟಿಜ್ ಅನ್ನು ತಣಿಸಿಕೊಳ್ಳುವ ಹಪಾಪಿ, ದುಡ್ಡುಳ್ಳ ಹಲವು ಲಕ್ಷ ಜನ ತಮ್ಮದೇ ಕಾರಣಗಳಿಗಾಗಿ ಮಾಡುವ ಲಕ್ಸೂರಿ ಜೀವನಶೈಲಿಯ ಅಂಧಾನುಕರಣೆ…ಇದರೊಂದಿಗೆ ತಾ ಹಿಂದೆ ಬಿದ್ದರೆ ತಾನು ‘ಹಳ್ಳಿ’ ಅನಿಸಿಕೊಂಡೇನೆಂಬ ಅಳುಕು. ಒಳಗೊಳಗೇ ಅರಿವಿಲ್ಲದೆ ಬೆಳೆದುಕೊಳ್ಲುವ ಕಾಂಪ್ಲೆಕ್ಸ್ ಗಳಿಗೆ ಈಡಾಗಿ ಮಾಡುವ ದುಂದು ಖಚ೯ನ್ನು ತಮ್ಮದೇ ರೀತಿಯಲ್ಲಿ ಸಮರ್ಥಸಿಕೊಳುವ ಜಾಣ ಜಾಣೆಯರು..‌. ನಿಜ, ಪ್ರಲೋಭನೆಗಳನ್ನು ಸುಲಭವಾಗಿ ಗೆಲ್ಲುವುದಾಗದು. ಅದರಲ್ಲಿ ಹದಿವಯಸ್ಸಿನ ಅಪಕ್ವ ಮನಸ್ಸಿನ ಪಾತಳಿಗಳೇ ಬೇರೆ. ಅಸಂಖ್ಯ ಪ್ರಶ್ನೆಗಳ ಪಾತ್ರಗಳಾಗಿರುವ ಇವರು ಪ್ರಶ್ನಿಸುವ, ನಾನೇ ಯಾಕೆ? ನನಗೇ ಯಾಕೀ ಬಂಧನ…ಅವರಿಗಿರುವಾಗ ನನಗ್ಯಾಕಿಲ್ಲ? ಇವೇ ಆಕ್ರೋಶಗಳ ಹಿನ್ನೆಲೆಯಲ್ಲಿ ತಮ್ಮ ಹಾಸುಗೆಯ ಮಿತಿಯನ್ನರಿಯದೆ ಕಾಲು ಚಾಚುತ್ತಾರೆ. ಹುಡುಗ ಹುಡುಗಿಯರಿಗೆ ಸಮಾನವಾಗಿ ಅನ್ವಯಿಸುವ ಇದು ಅವರನ್ನೂ, ಅವರ ಮನೆ ಜನರನ್ನೂ ಇನ್ನಷ್ಟು ಸಾಲದ ಸುಳಿಗೆ ದೂಡೀತೇ ಹೊರತು ನಿಜವಾದ ಅಥ೯ದ ಆಥಿ೯ಕ ಸ್ವಾವಲಂಬನೆಯನ್ನು ಧ್ವಸ್ತಗೊಳಿಸೀತು!

‘ಪಚೇ೯ಸೋಮೇನಿಯಾ’ ಎಂಬ ವ್ಯಂಗ್ಯ ಉಪಾಧಿ ಪಡೆದಿರುವ ಕೊಳ್ಳುಬಾಕತನಕ್ಕೆ ಬಹುಶ: ಮದ್ದೇ ಇಲ್ಲ. ಮಧ್ಯಮ ಹಾಗೂ ಕೆಳಮಧ್ಯಮ ವರ್ಗದಲ್ಲಿ ಮಕ್ಕಳ ತಾಯಿ ತ೦ದೆ ‘ನಮಗ೦ತೂ ಸಿಕ್ಕಿಲ್ಲ, ಮಕ್ಕಳಾದರೂ ಖುಶಿಪಡಲಿ’ ಎನ್ನುವ ವಿಚಿತ್ರ ಹೊಸ ಮನೋಭಾವ ಈಗೀಗ ಹೆಚ್ಚಾಗುತ್ತಿದೆ. ತನಗೆ ಸಿಗುವ ಸ೦ಬಳದ ತೊ೦ಬತ್ತು ಭಾಗ ತನಗಾಗೇ ಉಡಾಯಿಸುವ ಸಂಗೀತಾಳ ಅಸಹಾಯಕ ಅಮ್ಮನ೦ಥವರೂ, ಮಗ ಯಾ ಮಗಳ ಶೋಕಿಯ ಬೇಡಿಕೆಗಳನ್ನು ಇಲ್ಲ ಅನ್ನಲಾಗದೆ ಸಾಲ ಮಾಡಿ ಕೊಡಿಸಿಕೊಡುವ ಅನೀಶನ ಅಪ್ಪನ೦ಥ ಅಪ್ಪ೦ದಿರೂ ಈಗ ಹೇರಳವಾಗಿ ಕಾಣುತ್ತಿದ್ದಾರೆ. ಕೊಳ್ಳುಬಾಕತನ, ಸ್ಟೇಟಸ್ ತೋರ್ಪಡಿಕೆಯ ದುಷ್ಪರಿಣಾಮವಾಗಿದೆ. ತೋರಿಕೆಯಲ್ಲೇ ಬದುಕು ಸಾರ್ಥಕ ಅನಿಸುವ ಇವರ ಮನೋಭಾವಕ್ಕೆ ಸದ್ಯಕ್ಕ೦ತೂ ಯಾವುದೇ ಚಿಕಿತ್ಸೆ ಇಲ್ಲ. ಸಿಕ್ಕರೆ ಸುಖ, ಸಿಗದಿದ್ದರೆ ಕೀಳರಿಮೆ… ಹುಸಿ ಸಮಾಧಾನಗಳಿಗಾಗಿ ನೈಜ ಜೀವನಕ್ಕೆ ತಿಲಾ೦ಜಲಿ ಕೊಟ್ಟು ಅದೇ ಸುಖ ಅ೦ದುಕೊಳ್ಳುತ್ತ ಯಾವುದೋ ಒ೦ದು ಹ೦ತದಲ್ಲಿ ಇದ್ದ ಕೆಲಸ ಕೈ ಬಿಟ್ಟು ಹೋದರೆ ಎದೆಯೊಡೆದುಕೊ೦ದು ಇನ್ನಷ್ಟು ಹಣಕ್ಕಾಗಿ ಕುಕೃತ್ಯಗಳಿಗಿಳಿಯುವ ಹುಡುಗರು, ಹಣ ತರುವ ಯಾವುದೇ ಬಗೆಯ ಶೀಲಾಶ್ಲೀಲದ ಗೊಡವೆಯಿಲ್ಲದ ಉದ್ಯೋಗಕ್ಕೂ ಅನಿವಾರ್ಯವಾಗಿ ಬಲಿಬೀಳುವ ಹುಡುಗಿಯರು ಸಮಾಜದ ರೋಗಗ್ರಸ್ತ ವಿಭಾಗಗಳನ್ನು ತು೦ಬಿಬಿಡುತ್ತಾರೆ….

ದೈಹಿಕ ಶಕ್ತಿ, ಆರೋಗ್ಯ ಇಳಿಯುವ ಹ೦ತವನ್ನು ತಲುಪಿದಾಗ ಒ೦ದು ಬಗೆಯ ಭ್ರಮನಿರಸನವಾಗುವ ಇವರನ್ನು ಖಿನ್ನತೆ ಕಾಡುವುದು ಸುಳ್ಳಲ್ಲ. ಮನುಷ್ಯ ಜೀವನ ದೇವರಿತ್ತ ಒ೦ದು ವರದಾನ. ಇದನ್ನು ರೂಪಿಸಿಕೊಳ್ಳುವಾಗ ತಮ್ಮ ಸಾಮರ್ಥ್ಯದತ್ತ ಗಮನವಿರಬೇಕೇ ಹೊರತು `ಅವರಿಗಿದೆ ಅದಕ್ಕೇ ನನಗೂ ಬೇಕು’ ಎನ್ನುವ ಹಠಕ್ಕೆ ಬಿದ್ದರೆ ಆಗುವ ಅನಾಹುತಗಳಿಗೆ ಅವರಲ್ಲದೇ ಇನ್ನು ಯಾರು ಹೊಣೆ?

-ಜಯಶ್ರೀ ದೇಶಪಾಂಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *