ಚಿಂತನೆ/ `ಅಮ್ಮ ರಿಟೈರ್ ಆಗ್ತಾಳೆ’ ಹೌದಾ? –ಜಯಶ್ರೀ ದೇಶಪಾಂಡೆ
‘
ಅಮ್ಮ ರಿಟೈರ್ ಆಗ್ತಾಳೆ ಅಂದರೆ ಯಾರು ತಾನೇ ನಂಬುತ್ತಾರೆ? ಮನೆಯ ಕೆಲಸ, ಚಿಂತೆ, ಕಾಳಜಿ, ಜವಾಬ್ದಾರಿ ಹೀಗೆ ಒಂದೆರಡಲ್ಲ, ಹತ್ತಾರು ವಿಚಾರಗಳು ಅವಳನ್ನು ಕುಟುಂಬಕ್ಕೆ ಕಟ್ಟಿಹಾಕುತ್ತವೆ. ಅಶೋಕ್ ಪಾಟೋಳೆ ಅವರ ಮರಾಠಿ ನಾಟಕ ‘ಆಯಿ ರಿಟಾಯರ್ ಹೋತೆ’ ಅಮ್ಮನ ತವಕ ತಲ್ಲಣಗಳನ್ನು ಬಹಳ ವಸ್ತುನಿಷ್ಠವಾಗಿ ಮುಂದಿಟ್ಟು, ಅವಳಿಗೆ ಜೀವನದಲ್ಲಿ ವಿಶ್ರಾಂತಿ, ನಿವೃತ್ತಿ ಇಲ್ಲ ಎಂಬುದನ್ನು ಪ್ರತಿಪಾದಿಸುತ್ತದೆ. ಈ ನಾಟಕವನ್ನು ಸುಶೀಲಾ ಕೊಪ್ಪರ ಅವರ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದು ಒಟ್ಟ ಅಮ್ಮನ ಕಥೆಯಲ್ಲ ಎಂಬುದನ್ನು ‘ವಿಶ್ವ ತಾಯಂದಿರ ದಿನ’ ನೆನಪಿಸಿಕೊಳ್ಳಬೇಕು.
ಅಮ್ಮ’ ಎಂಬ ಜೀವ ನಿಜಕ್ಕೂ ರಿಟೈರ್ ಆಗುತ್ತದೆಯಾ? ಅವಳ ಅಂತ:ಕರಣದ ಸೆಲೆ ತನ್ನ ಒರತೆಯನ್ನು ಒಣಗಲು ಬಿಡುತ್ತದೆಯೇ? ಹೆತ್ತ ಗಳಿಗೆಯಿಂದ ಜೀವಕ್ಕೆ ಹತ್ತಿದ ಕುಡಿಗಳ ಯೋಗಕ್ಷೇಮವೇ ಅವಳ ಬದುಕಿಡೀ ಸೊಗಯಿಸುವ ಹಂದರವಲ್ಲವೇ? ಇಂಥದ್ದರಲ್ಲಿ ಅಮ್ಮ ರಿಟೈರ್ ಆಗ್ತಾಳೆ ಅಂದರೇನರ್ಥ? ಆ ನಿವೃತ್ತಿಯಾದರೂ ಯಾವುದರಿಂದ? ಅವಳು ಮಾಡುತ್ತಿದ್ದ ಉದ್ಯೋಗವೇ? ಅದರಲ್ಲೇನು ವಿಶೇಷ? ಹಾಗೆ ನೋಡುವುದಾದರೆ ಉದ್ಯೋಗದಿಂದ ನಿವೃತ್ತಿ ಅಂದರೆ ಗಂಡಸಿಗಾಗಲೀ, ಹೆಣ್ಮಕ್ಕಳಿಗಾಗಲೀ ಒಂದು ಹಂತಕ್ಕೆ ತಲುಪುತ್ತಲೆ ಸಾಮಾನ್ಯವಾಗಿ ‘ನೌಕರಿಗೆ ವಿದಾಯ’ ಎಂದರ್ಥ ಅಲ್ಲವೇ? ಆದರೆ ಮನೆಯಲ್ಲೇ ಅದೂ ಅಮ್ಮನ ನಿವೃತ್ತಿ, ಮತ್ತು ಇನ್ನು ಮುಂದಿನ ಬದುಕನ್ನು ಕೇವಲ ತನಗಾಗಿ, ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಂಡು ಜೀವಿಸುವ ಹೊಸ ಆಯಾಮವೊಂದನ್ನು ಅವಳು ಅರಸಿ ಹೋಗುತ್ತಾಳೆ ಅಂದರೆ…? ನಾವದನ್ನು ಸಹಜವಾಗಿ ಸ್ವೀಕರಿಸುವುದೇ ಇಲ್ಲವಲ್ಲ!
“ಅಮ್ಮ ರಿಟಾಯರ್ ಆಗ್ತಾಳೆ” ಇದು ಮರಾಠೀ ನಾಟಕವೊಂದರ ಕನ್ನಡ ಅನುವಾದ. “ಆಯಿ ರಿಟಾಯರ್ ಹೋತೆ” ಅಶೋಕ ಪಾಟೋಳೆ ಬರೆದ ಈ ನಾಟಕದ ಅಸಂಖ್ಯ ಪ್ರದರ್ಶನ ಗಳು ಅಂದು ಪುಣೆ, ಮುಂಬಯಿ ಮೊದಲುಗೊಂಡು ಇಡೀ ಮರಾಠೀ ಜನಮಾನಸದಲ್ಲಿ ಭಾವನೆಗಳ ಮಹಾಪೂರವನ್ನೆ ಎಬ್ಬಿಸಿದ ಚರ್ಚೆಯಾಗಿತ್ತು. ಕನ್ನಡದ ಪ್ರಸಿದ್ಧ ಪತ್ರಕರ್ತೆ, ಖಾದ್ರಿ ಶಾಮಣ್ಣನವರ ಶಿಷ್ಯೆ, ಲೇಖಕಿ ಶೀಲಾ ಕೊಪ್ಪರ್ ಅವರ ಲೇಖನಿ ಇದೇ ನಾಟಕವನ್ನು ನಾಟಕವಾಗಿಯೇ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿತು.
ಅಶೋಕ ಪಾಟೋಳೆಯವರ ” “ಮುಕಾಟ್ಯಾನ ಝೋಪಾ ಆತಾ” (ಸುಮ್ಮನೆ ಮಲಗಿ ಇನ್ನು) “ತಾಂದೂಳ ನಿವಡತಾ ನಿವಡತಾ” (ಅಕ್ಕಿ ಅರಿಸುತ್ತ…ಆರಿಸುತ್ತ) “ತಿಚ್ಯಾಪಾಶಿ ಆಹೇ ಮ್ಹಣೂನ” (ಅವಳ ಹತ್ರ ಇದೆ ಅಂತ…)ಈ ನಾಟಕಗಳೂ ಹೆಣ್ಮಕ್ಕಳ ಅಂರಂಗದ ಕಿಟಕಿಗಳಂತೆ ಅದರೊಳಗಿನ ವಿಭಿನ್ನ ಲೋಕವೊಂದನ್ನು ಪುರುಷ ಪ್ರಪಂಚಕ್ಕೆ ತೆರೆದಿಟ್ಟುವು.
“ಅಮ್ಮ ರಿಟೈರ್ ಆಗ್ತಾಳೆ”ಯಲ್ಲಿ ದಶಕಾನುಗಟ್ಲೆ ಮನೆ, ಮಕ್ಕಳು, ಕುಟುಂಬದ ಸದಸ್ಯರು, ಬಂಧು ಬಳಗ, ರೀತಿನೀತಿ ರಿವಾಜುಗಳು, ಇಂಥ ಹಲವೆಂಟು ಜವಾಬ್ದಾರಿಗಳ ನೊಗ ಹೊತ್ತು ರಾಮನಿಗೆ ಸೇತುವೆ ಕಟ್ಟಲು ಮರಳು ತಂದು ತಂದು ಸುರಿದ ಅಳಿಲಿನಂತೆ ಸದ್ದಿಲ್ಲದೆ ದುಡಿದ ಅಮ್ಮ ಇದ್ದಕ್ಕಿದ್ದಂತೆ ಕರ್ತವ್ಯ ಸಂನ್ಯಾಸ ಘೋಷಿಸಿದಾಗ ಮನೆಯಿಡೀ ಅಲ್ಲೋಲ ಕಲ್ಲೋಲವಾಗುತ್ತದೆ. ಅದು ಸಹಜವೇ! ಈ ಬಗೆಯ ಸೇವೆಗಳು ಅನೂಚಾನವಾಗಿ ತಮಗೆಲ್ಲ ಹಕ್ಕಿನ ಸವಲತ್ತುಗಳಾಗಿ ಲಭಿಸುತ್ತಿರುವಾಗ ಇದೇನಿದು ಮಾತು?
ಅಮ್ಮ ಯಾವತ್ತೂ ಹೀಗೆ ಹಿಂದ್ಹೆಜ್ಜೆ ಇಡಲಾರಳು, ಇಡಲಾಗದು. ಅವಳ ದುಡಿತ, ವಾತ್ಸಲ್ಯ, ಮಮತೆ, ಜವಾಬ್ದಾರಿ ಎಲ್ಲವೂ ಎಲ್ಲರಿಗೂ ಅಭ್ಯಾಸವಾಗಿ ಹೋಗಿದೆ.ಮಗಂದಿರು, ಸೊಸೆಯರು, ಮಗಳು, ಪತಿ, ಆಪ್ತೇಷ್ಟರು ಸಮಸ್ತರಿಗೂ. ಅವಳ ಪ್ರೀತಿ ಸದಾ ಎದುರಿಗೆ ಹಬ್ಬಿದ ಕತ್ತಲ ಸೆರಗಿನಲಿ ಬಿಂದು ಬಿಂದು ಬೆಳಕನ್ನು ಹೀರಿಕೊಳ್ಳುವಂತೆ.
ನೋವಿನ ಪರೋಕ್ಷ ಎಳೆಗಳು! :
ನಾಟಕದ ಕಥೆ ತಾಯಿಯ ಪಾತ್ರದ ಸುತ್ತಲೂ ಸುತ್ತುತ್ತದೆ. ಮನೆಯ ಜವಾಬ್ದಾರಿಗಳನ್ನೆಲ್ಲ ಪ್ರೀತಿಯಿಂದ ನಿರ್ವಹಿಸುವ ತಾಯಿ. ಮಕ್ಕಳ ಬೆಳವಣಿಗೆ ಶಿಕ್ಷಣಗಳ ಸಮಗ್ರ ಹಂತಗಳಲ್ಲೂ ಅವಳದೇ ಕ್ಷಮತೆ. ಜವಾಬ್ದಾರಿ ಹೊರಲು ಹಿಂದೇಟು ಹಾಕುವ ಪತಿ. ಮಕ್ಕಳ ಮದುವೆ, ಮನೆ ತುಂಬಿ ಬಂದ ಸೊಸೆಯಂದಿರು ಅವಳಿಗೆ ”ಅಮ್ಮ ನೀ ಇನ್ನು ಕೊಂಚ ಕೂತಿರು ಈ ಕೆಲಸ ಮಾಡಬೇಕಾ? ಇರು ನಾನು ಮಾಡುವೆ” ಅಂದವರೇ ಅಲ್ಲ. ಸ್ವಾರ್ಥದ ಕಟ್ಟೆಯೊಳಗೆ ಖುಶಿಯಿಂದ ವಿಜೃಂಭಿತರಾದವರು! ಅಪ್ಪನ ಬಗ್ಗೆ ಹೇಳುವುದಾದರೆ ಆತ ರಿಟೈರ್ ಆಗಿ ಆಯ್ತಲ್ಲ ಇನ್ನೇನು, ಅವರು ಸಂಪೂರ್ಣ ವಿಶ್ರಾಂತಿಗೆ ಹಕ್ಕುದಾರ! ಅವಳ ಮೇಲೆ ಅಧಿಕಾರ ಚಲಾಯಿಸುವುದು. ತಪ್ಪುಗಳನ್ನು ಹುಡುಕುವುದು… ಸ್ನೇಹಿತರು, ಇಸ್ಪೀಟ್ ಆಟ, ಸುತ್ತಾಟ… ಅಮ್ಮನಿಗೆ? ನೋವಿನ ಪರೋಕ್ಷ ಎಳೆಗಳು!
ಸೊಸೆಯಂದಿರ ಕಿತ್ತಾಟ, ಸೋಮಾರಿ ತನ, ಕುಟುಂಬದ ಸಣ್ಣಪುಟ್ಟ ಸಂಗತಿಗಳ ಸಮಸ್ಯೆಯೂ ಒಂದೊಮ್ಮೆ ಅಮ್ಮನ ತಾಳ್ಮೆಯ ಪರೀಕ್ಷೆಗಳೇ ಆಗಿ ಆ ಎಲ್ಲ ತಾಕಲಾಟ ಅವಳಿಗೆ ತೀವ್ರ ನಿರಾಸೆ ಮೂಡಿಸುತ್ತದೆ. ತಾನೊಮ್ಮೆ ನಡೆಸುತ್ತಿದ್ದ ಮಹಿಳಾ ಅಬಲಾಶ್ರಮದ ಜಾಗವನ್ನು ಮಗನೇ ಖರೀದಿಸುವ ಸುದ್ದಿಯನ್ನು ಇವಳಿಂದಲೇ ಬಚ್ಚಿಟ್ಟದ್ದು ಅಮ್ಮನಿಗೆ ಆಘಾತಕಾರಿ! ಸಾಕು, ಇನ್ನಾದರೂ ತನಗೆ ಇಂಥ ಕರ್ಮಬಂಧನಗಳು ದೂರವಾಗಲಿ, ಎಲ್ಲ ಕೆಲಸಗಳಿಂದ ವಿಶ್ರಾಂತಿ ಬೇಕು. ಗಂಡನಂತೆ ತಾನೂ ರಿಟೈರ್ ಆಗಬೇಕು. ಇನ್ನು ಯಾವುದೇ ಜವಾಬ್ದಾರಿ ತನಗೆ ಬೇಡ ಅನಿಸುತ್ತದೆ. ಈ ಅನಿಸಿಕೆಯೇ ಗಟ್ಟಿ ನಿರ್ಧಾರವಾಗಿ ಪರಿವರ್ತನೆ ಗೊಂಡಾಗ ಮನೆಯ ಸದಸ್ಯರೆಲ್ಲ ಕಕ್ಕಾಬಿಕ್ಕಿ. ಹೀಗೂ ಆದೀತು ಎಂಬುದನ್ನೇ ನಿರೀಕ್ಷಿಸದವರು, ಅವಳ ನೋವು, ಭಾವನೆಗಳು, ಕೆಲಸ ಇವುಗಳ ಬಗ್ಗೆ ಯಾವತ್ತೂ ಗಂಭೀರವಾಗಿ ಯೋಚಿಸದಿದ್ದ ಮನೆಯವರು ಅವಳೊಮ್ಮೆ ಹೊರಟೇ ನಿಂತಾಗ ಅವಳನ್ನು ತಡೆಯುವ ಅನಿವಾರ್ಯತೆಯಲ್ಲಿ ಹಲುಬುತ್ತಾರೆ… ಈ ಅಮ್ಮ ಮನೆಯ ಕೇಂದ್ರಬಿಂದು, ಅವಳ ಅನುಪಸ್ಥಿತಿ ಅವರನ್ನು ಖಂಡಿತ ವಿಹ್ವಲಗೊಳಿಸುವ ವಿಷಯ.
‘ಅವಳೇನು ಮನೆಯಲ್ಲೇ ಇರ್ತಾಳೆ ಮಾಡಲಿ’ ಎಂಬುದು ‘ಮನೆಗೆಲಸ ತಾನೇ? ಅದೇನ್ಮಹಾ! ‘ ಎಂಬ ಮನೋಭಾವ, ‘ಹೊರಗೆ ದುಡಿವವರ ಕಷ್ಟಗಳೇನು ಗೊತ್ತಿವಳಿಗೆ?’ಎಂಬ ಉಡಾಫೆ ಇದೆಲ್ಲಕ್ಕೂ ಈ ನಾಟಕ ಉತ್ತರಗಳನ್ನು ಹುಡುಕಿ ಊನವಿದ್ದೆಡೆ ಬೆರಳಿಡುತ್ತದೆ. ಮನೆಜನರ ಈ ಮನಸ್ಥಿತಿಯೇ ಆ ಊನ. ‘ಡಿಗ್ನಿಟಿ ಆಫ್ ಲೇಬರ್’ ಅಮ್ಮನಿಗಲ್ಲ. ಎನ್ನುವುದನ್ನು ತಮ್ಮ ವರ್ತನೆಯಿಂದ ಸೂಚಿಸುವ ಮಕ್ಕಳು.
ಇದೆಲ್ಲಕ್ಕೂ ಒಂದು ತಪರಾಕಿ ಈ ನಾಟಕದ ಕಥಾನಕದಲ್ಲಿದೆ.”ನನ್ನ ಜೀವನದ ಕೊನೆಯ ಭಾಗವನ್ನು ಎಲ್ಲಿ, ಹೇಗೆ ಕಳೆಯಬೇಕೆಂದು ನಿರ್ಧಾರ ಮಾಡುವವಳು ನಾನು. ನೀವ್ಯಾರೂ ಅಲ್ಲ” ಎನ್ನುತ್ತ ತನ್ನ ನಿವೃತ್ತಿಯ ವಿಧಾನವನ್ನು ಆಯ್ಕೆ ಮಾಡುವ ಅಮ್ಮನೊಬ್ಬಳು ಈ ಕಥನದ ಮೂಲಕ ವೃದ್ಧಾಪ್ಯವೆಂಬುದು ಇತರರ ಹೊಣೆಗಾರಿಕೆಯ ಸಂಗತಿ ಆಗಲೇಬೇಕೆಂಬುದಿಲ್ಲ ಎನ್ನುವ ಸಂದೇಶವಾಹಕಿಯಾಗುತ್ತಾಳೆ.
ಹಾಗೆ ಇದು ಒಬ್ಬ ಅಮ್ಮನ ಕಥೆಯಲ್ಲ, ನಮ್ಮ ಸಮಾಜದ ಕೋಟ್ಯವಧಿ ತಾಯಂದಿರ ಅಸ್ಮಿತೆಯ ಮೇಲೊಂದು ಪ್ರಶ್ನೆ ಚಿಹ್ನೆ ದ್ದಂತಿದೆ. ಮದುವೆಯಾದ ಕ್ಷಣದಿಂದ ಒಂದು ಸಂಸಾರವನ್ನು ತನ್ನೆದೆಗೆ ಕಟ್ಟಿಕೊಂಡು ದಾರಿ ಸಾಗುವ ಅವಳಿಗೆ ಇಂಥದೊಂದು ವಿರಾಮದ ಅಗತ್ಯವನ್ನು, ವಯಸ್ಸು ಮಾಗಿದ ಮೇಲೂ ಅವಳದೇ ಆದ ಒಂದು ಜಗತ್ತು ಬೇಕೆಂಬುದನ್ನು ಯಾರೂ ನಿರೀಕ್ಷಿಸುವುದೇ ಇಲ್ಲ. ಎಲ್ಲಿಯ ವರೆಗೆ? ಹೀಗೆ ಅಮ್ಮ ಒಂದೊಮ್ಮೆ ಭುಗಿಲ್ ಅನ್ನುವ ವರೆಗೆ? ಅಥವಾ ಅಂಥದೊಂದು ಪ್ರಸಂಗ ನಡೆಯುವುದು ನಮ್ಮ ಸಾಮಾಜಿಕ ಸ್ವಾಸ್ಥ್ಯಕ್ಕೆ ಒಳಿತೇ?
ತಾಯಂದಿರ ದಿನ ಪ್ರತಿ ವರ್ಷವೂ ಬರುತ್ತದೆ. ಪಾಶ್ಚಾತ್ಯರ ಜೀವನಪದ್ಧತಿಯಲ್ಲಿ ಕೂಡುಕುಟುಂಬಗಳಿಲ್ಲ. ಎಲ್ಲೋ ಇರುವ ಅಮ್ಮನನ್ನು ಭೇಟಿಯಾಗಲು ಕಾಣಿಕೆ ಹೊತ್ತು ಬರುವ ಮಕ್ಕಳ ಜಗತ್ತು ಅದು. ನಮ್ಮಲ್ಲಿ ಇದೊಂದು ಪ್ರಥೆಯಾಗದೆ,ಅವಳ ಆಸೆ ಆಕಾಂಕ್ಷೆಗಳನ್ನು ಅರಿತು ಬೆರೆತು ಅವಳ ಸ್ವಾತಂತ್ರ್ಯವನ್ನು ಅವಳಿಗೆ ಕೊಟ್ಟಾಗಲೇ ತಾಯಂದಿರ ದಿನಕ್ಕೊಂದು ಸಾರ್ಥಕತೆ! ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು.
–ಜಯಶ್ರೀ ದೇಶಪಾಂಡೆ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.