ಚಿಂತನೆ / ಅಮ್ಮಂದಿರ ಅಂತರಂಗದೊಳಗೊಂದು ಸುತ್ತು – ಡಾ. ಪ್ರೀತಿ ಕೆ.ಎ.
ಕಾಲ ಬದಲಾದರೂ ಅಮ್ಮಂದಿರು ಹೆಚ್ಚೇನೂ ಬದಲಾಗಿಲ್ಲ… ಮಕ್ಕಳೊಟ್ಟಿಗೆ ಆಟ ಆಡುವ, ಕಾಲ ಕಳೆಯುವ ಅಮ್ಮಂದಿರನ್ನು ಕಂಡಾಗೆಲ್ಲ ಏನೋ ಒಂದು ಹೇಳಿಕೊಳ್ಳಲಾಗದಂತಹ ಅವ್ಯಕ್ತ ನೋವು ಅವಳನ್ನು ಸುಡುತ್ತಿರುತ್ತದೆ. ಮಗುವಾದ ಮೇಲೆ ಕಾಲಿಗೆ ಗೆಜ್ಜೆ ಕಟ್ಟದ, ವೀಣೆ ಮುಟ್ಟದ, ಸಂಗೀತ ಹಾಡದ, ಕಲೆ- ಸಾಹಿತ್ಯದಿಂದ ದೂರವಾದ ಅಸಂಖ್ಯಾತ ಅಮ್ಮಂದಿರು ಹೆಜ್ಜೆ ಹೆಜ್ಜೆಗೂ ಸಿಗುತ್ತಾರೆ. ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಕಲೆ ಮತ್ತೆ ಒಲಿಸಿಕೊಳ್ಳಲಾಗದಷ್ಟು ದೂರ ಹೋಗಿರುತ್ತದೆ. ಪ್ರಶ್ನೆ ಅದು ಮಾತ್ರವಲ್ಲ. ಅಮ್ಮಂದಿರಿಗಾಗುವ ತಳಮಳಗಳು, ಪಶ್ಚಾತ್ತಾಪಗಳು, ಅಪರಾಧೀ ಭಾವಗಳು ಅಪ್ಪಂದಿರಲ್ಲೇಕೆ ಕಾಣ ಸಿಗುವುದಿಲ್ಲ?
‘ಶಕುಂತಲಾದೇವಿ’ ಸಿನಿಮಾ ನೋಡಿದ ನಂತರ ಮನಸ್ಸಲ್ಲಿ ನೂರೆಂಟು ಪ್ರಶ್ನೆಗಳು. ಮಾನವ ಕಂಪ್ಯೂಟರ್ ಎಂದೇ ಕರೆಯಲ್ಪಡುತ್ತಿದ್ದ ಖ್ಯಾತ ಗಣಿತಜ್ಞೆ ಶಕುಂತಲಾದೇವಿಯ ಮೇಧಾವಿತನದ ಬಗ್ಗೆ ನಾನಿಲ್ಲಿ ಹೇಳಹೊರಟಿಲ್ಲ. ಬದಲಿಗೆ ಗಣಿತ ಲೋಕದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದ ಶಕುಂತಲಾದೇವಿಯ ಒಳಗಿದ್ದ ಅಮ್ಮ ಅನುಭವಿಸಿದ್ದ ಮತ್ತು ಅಂತಹ ಲಕ್ಷಾಂತರ ಅಮ್ಮಂದಿರು ಅನುಭವಿಸುತ್ತಿರಬಹುದಾದ ಸಂದಿಗ್ಧತೆಗಳ ಬಗ್ಗೆ. ಗಿನ್ನೆಸ್ ರೆಕಾರ್ಡ್ ನಲ್ಲಿ ಹೆಸರು ಗಳಿಸಿದ್ದ, ನೂರಾರು ದೇಶಗಳ ಗಣಿತಜ್ಞರನ್ನು ಬೆರಗಾಗಿಸಿದ್ದ ಆಕೆ ತನ್ನ ಮಗಳ ಪ್ರೀತಿಯನ್ನು ಗಳಿಸಲು, ಒಬ್ಬ ಒಳ್ಳೆಯ ಅಮ್ಮನಾಗಬೇಕೆಂದು ಪಟ್ಟ ಹರ ಸಾಹಸಗಳು ಒಂದೆರಡಲ್ಲ.
ಕಾಲ ಬದಲಾದರೂ ಅಮ್ಮಂದಿರು ಹೆಚ್ಚೇನೂ ಬದಲಾಗಿಲ್ಲ. ಮನೆ-ವೃತ್ತಿ-ಪ್ರವೃತ್ತಿಗಳ ವರ್ತುಲದಲ್ಲಿ ಸಿಕ್ಕಿ ಹೆಣಗಾಡುತ್ತಿರುವ ಹಲವಾರು ಅಮ್ಮಂದಿರು ನಮ್ಮ ಕಣ್ಣೆದುರೇ ಸಿಗುತ್ತಾರೆ. ಬೇಬಿಸಿಟ್ಟಿಂಗುಗಳಲ್ಲಿ ಪುಟ್ಟ ಕಂದಮ್ಮಗಳನ್ನು ಬಿಟ್ಟು ಹೋಗುವ ಅಮ್ಮಂದಿರನ್ನು ಹೃದಯಹೀನರೆಂಬಂತೆ ನೋಡುವ ಸಮಾಜಕ್ಕೆ, ಹಾಗೆ ಹೋಗುವ ಅಮ್ಮಂದಿರು ಕೆಲಸ ಮಾಡುವ ಕಚೇರಿಗಳಲ್ಲೋ, ಫ್ಯಾಕ್ಟರಿಗಳಲ್ಲೋ, ಸಂಸ್ಥೆಗಳಲ್ಲೋ ಪಡುವ ಪಾಡು ಕಾಣಿಸುವುದಿಲ್ಲ. ತಾನೇನೇ ಕೆಲಸ ಮಾಡುತ್ತಿದ್ದರೂ ತನ್ನ ದೇಹದ ಒಂದು ಭಾಗವೇ ಆಗಿ ಹೋಗಿರುವ ಮಗುವಿನ ಚಿತ್ರವೇ ಆಕೆಯ ಕಣ್ಣ ಮುಂದಿರುವುದು ಆಕೆಗೆ ಮಾತ್ರ ಗೊತ್ತಿರುವ ಸತ್ಯ. ಒಂದು ಗುಟುಕು ಕಾಫಿ ಕುಡಿಯಲು ಪುರುಸೊತ್ತಿಲ್ಲದ ಗಳಿಗೆಗಳಲ್ಲೂ, ಮಗುವಿಗೆ ಈಗ ಹಾಲು ಕೊಟ್ಟಿರಬಹುದಾ ಎಂಬ ಸಂಗತಿಯೇ ಅವಳನ್ನು ಅಧೀರಳನ್ನಾಗಿಸಿರುತ್ತದೆ. ಮಗುವಿನ ಡಯಾಪರು ಬದಲಿಸಿರಬಹುದಾ? ಮಗುವೀಗ ತನ್ನನ್ನೇ ನೆನಪಿಸಿಕೊಂಡು ಅಳುತ್ತಿರಬಹುದಾ? ಅಳುವ ಮಗುವನ್ನು ಗದರುತ್ತಿರಬಹುದಾ? ಎಂಬೆಲ್ಲಾ ಪ್ರಶ್ನೆಗಳು ಅನೇಕ ಬಾರಿ ಕಣ್ಣು ತೊಯ್ಯಿಸಿರುತ್ತದೆ. ಕೆಲಸಕ್ಕೆ ಈಗಲೇ ಸೇರಿ ತಪ್ಪು ಮಾಡಿದೆನಾ? ಇನ್ನಷ್ಟು ದಿವಸ ಮನೆಯಲ್ಲೇ ಇರಬಹುದಿತ್ತಾ? ಎಂಬ ಆಲೋಚನೆಗಳು ಆಗಾಗ್ಗೆ ಪಶ್ಚಾತ್ತಾಪದಿಂದ ಬೇಯುವಂತೆ ಮಾಡುತ್ತಿರುತ್ತವೆ.
ಮಗುವು ಶಾಲೆಗೆ ಹೋಗಲು ಶುರುಮಾಡಿದ ಮೇಲೆ ಎಲ್ಲವೂ ಸರಿಯಾಗಬಹುದು ಎಂದುಕೊಂಡರೂ ಅವರು ಕಾಲೇಜಿನ ಮೆಟ್ಟಲು ಹತ್ತಿ ಇಳಿಯುವವರೆಗೂ ಒಂದು ತರಹದ ಅಪರಾಧೀ ಭಾವ ಅವಳನ್ನು ಕಾಡುತ್ತಲೇ ಇರುತ್ತದೆ. ಮಕ್ಕಳು ಮನೆಗೆ ವಾಪಸ್ಸಾದಾಗ ಎದುರಾಗಬೇಕಿದ್ದ ಬಿಸಿ ಬಿಸಿ ಕಾಫಿ ತಿಂಡಿಗಳು ತನ್ನ ಉದ್ಯೋಗದಿಂದಾಗಿ ಇಲ್ಲವಾಯಿತೇನೋ ಎಂದು ಆಗಾಗ್ಗೆ ಅನಿಸುತ್ತಿರುತ್ತದೆ. ಮಕ್ಕಳೊಟ್ಟಿಗೆ ಆಟ ಆಡುವ, ಕಾಲ ಕಳೆಯುವ ಅಮ್ಮಂದಿರನ್ನು ಕಂಡಾಗೆಲ್ಲ ಏನೋ ಒಂದು ಹೇಳಿಕೊಳ್ಳಲಾಗದಂತಹ ಅವ್ಯಕ್ತ ನೋವು ಅವಳನ್ನು ಸುಡುತ್ತಿರುತ್ತದೆ.
ಹಾಗಿದ್ದರೂ ಉದ್ಯೋಗಕ್ಕೆ ಹೋಗುವ ಜರೂರತ್ತೇನು ಎಂದು ಕೇಳುವವರಿದ್ದಾರೆ. ಅದು ಆಕೆಯ ಬದುಕಿನ ಅನಿವಾರ್ಯತೆಗಳಿರಬಹುದು, ಕನಸಿನ ಬೆನ್ನೇರಿ ಹೊರಟವರ ಹಾದಿಗಳಿರಬಹುದು, ನಾಳಿನ ಸಾಧನೆಗೆ ಹತ್ತಬೇಕಾಗಿರುವ ಮೆಟ್ಟಲುಗಳೂ ಇರಬಹುದು. ಅವಳ ಅಂತರಂಗಕ್ಕೆ ಇಳಿದು ನೋಡಿದವರಾರು?
ಇವಿಷ್ಟೂ ವೃತ್ತಿಯಲ್ಲಿರುವ ಅಮ್ಮಂದಿರ ಕಥೆಯಾದರೆ ಬರವಣಿಗೆ, ನೃತ್ಯ, ಸಂಗೀತ, ಚಿತ್ರಕಲೆಯಂತಹ ಪ್ರವೃತ್ತಿಗಳನ್ನು ಮಗುವಾಗುವವರೆಗೂ ಬಿಗಿದಪ್ಪಿ ಹಿಡಿದಿದ್ದು, ಈಗ ಮುಂದುವರೆಸುತ್ತಿರುವ ಅಮ್ಮಂದಿರ ಕಥೆಯೂ ಭಿನ್ನವಾದದ್ದೇನಲ್ಲ. ‘ಅಲ್ಲಿ ಮಗು ಅಳ್ತಾ ಇದೆ..ಇವಳಿಲ್ಲಿ ಆರಾಮಾಗಿ ಕೂತ್ಕೊಂಡು ಕಥೆ ಗೀಚ್ತಿದಾಳೆ.’ ‘ಮಗು ಪಾಪ ಒಬ್ಬನೇ ಆಡ್ತಾ ಇದೆ. ಇವಳದ್ದು ಲೋಕದಲ್ಲಿಲ್ಲದ ಡ್ಯಾನ್ಸ್ ಕ್ಲಾಸು ‘. ‘ಮಗುವಿಗೆ ಹೋಂವರ್ಕು ಮಾಡಿಸೋದು ಬಿಟ್ಟು ಚಿತ್ರ ಬಿಡಿಸ್ತಿದಾಳೆ’. ‘ಒಂದು ದಿನ ಯೋಗ ಕ್ಲಾಸು ಮಾಡದಿದ್ರೆ ಪ್ರಪಂಚ ಮುಳುಗುತ್ತಾ? ‘. ‘ಆ ಕಸೂತಿ ಬಿಡಿಸೋ ಟೈಮಲ್ಲಿ ಮಗಳಿಗೆ ಸ್ವಲ್ಪ ಓದಿಸಬೋದಲ್ವಾ’. ‘ಬೇರೆ ಮಕ್ಕಳಿಗೆ ಟ್ಯೂಷನ್ ಹೇಳಿಕೊಡೋದು ಇವಳದ್ದೇ ಮಕ್ಕಳಿಗೆ ಪಾಠ ಹೇಳಿಕೊಡಬಾರ್ದಾ? ‘. ‘ಯಾವಾಗ ನೋಡಿದ್ರೂ ಕ್ಲಬ್ಬಂತೆ, ಅಸೋಸಿಯೇಶನಂತೆ..ಮಕ್ಕಳು ಬೇಡ…ಮನೆ ಬೇಡ ‘. ಇಷ್ಟೆಲ್ಲಾ ಕೇಳಿದ ಮೇಲೆ ಯಾವ ಅಮ್ಮಂದಿರಿಗೆ ತಾನೇನೋ ಮಾಡಬಾರದ್ದು ಮಾಡುತ್ತಿದ್ದೇನೆ ಅಂತ ಅನ್ನಿಸಿರಲಾರದು?
ಅದಕ್ಕೇ, ಮಗುವಾದ ಮೇಲೆ ಕಾಲಿಗೆ ಗೆಜ್ಜೆ ಕಟ್ಟದ, ವೀಣೆ ಮುಟ್ಟದ, ಸಂಗೀತ ಹಾಡದ, ಕಲೆ- ಸಾಹಿತ್ಯದಿಂದ ದೂರವಾದ ಅಸಂಖ್ಯಾತ ಅಮ್ಮಂದಿರು ಹೆಜ್ಜೆ ಹೆಜ್ಜೆಗೂ ಸಿಗುತ್ತಾರೆ. ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಕಲೆ ಮತ್ತೆ ಒಲಿಸಿಕೊಳ್ಳಲಾಗದಷ್ಟು ದೂರ ಹೋಗಿರುತ್ತದೆ. ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಎಲ್ಲ ಮೂದಲಿಕೆಗಳನ್ನು ಮೆಟ್ಟಿ ನಿಂತು ತಮ್ಮೊಳಗಿನ ಪ್ರತಿಭೆಗಳಿಗೆ ನೀರೆರೆಯುತ್ತಾರೆ. ‘ಅಮ್ಮ ಹಚ್ಚಿದ ಹಣತೆಯೊಂದು…. ‘ ಭಾವಗೀತೆಯನ್ನು ಬರೆದ ಖ್ಯಾತ ಬರಹಗಾರ್ತಿ ಎಂ.ಆರ್. ಕಮಲ ಹೇಳುತ್ತಾರೆ- ‘ಮಗಳು ಹುಟ್ಟಿದ ನಂತರದ ಹತ್ತು ವರ್ಷಗಳು ನಾನು ಕಲೆ ಮತ್ತು ಸಾಹಿತ್ಯದಿಂದ ಪೂರ್ತಿ ದೂರವೇ ಉಳಿದಿದ್ದೆ’.
ಪ್ರಶ್ನೆ ಅದು ಮಾತ್ರವಲ್ಲ. ಅಮ್ಮಂದಿರಿಗಾಗುವ ತಳಮಳಗಳು, ಪಶ್ಚಾತ್ತಾಪಗಳು, ಅವರಲ್ಲುದಯಿಸುವ ಅಪರಾಧೀ ಭಾವಗಳು ಅಪ್ಪಂದಿರಲ್ಲೇಕೆ ಕಾಣ ಸಿಗುವುದಿಲ್ಲ? ಆಫೀಸಿನಲ್ಲಿ ಕೂತು ಅದು ಯಾಕೆ ಅವರು ಮಕ್ಕಳ ಬಗ್ಗೆ ಕಳವಳಗೊಳ್ಳುವುದಿಲ್ಲ? ಡೇ ಕೇರ್ ನಲ್ಲಿರುವ ಮಗುವಿನ ಬಗ್ಗೆ ಅವರ ಹೃದಯವೇಕೆ ವಿಲವಿಲಗುಟ್ಟುವುದಿಲ್ಲ? ಮಗುವಿನ ಚಿತ್ರವೇ ದಿನವಿಡೀ ಏಕೆ ಕಾಡುವುದಿಲ್ಲ? ಮಗುವಾದ ಮೇಲೆ ಪ್ರವೃತ್ತಿಗಳಿಗೇಕೆ ಇತಿ ಶ್ರೀ ಹಾಡುವುದಿಲ್ಲ?
ಅದೆಲ್ಲವೂ ಅಮ್ಮ -ಮಗುವಿನ ಕರುಳ ಬಂಧಕ್ಕೆ ಸಂಬಂಧಿಸಿದ್ದೇ? ಹೆಣ್ಣು ಗಂಡುಗಳಲ್ಲಿರುವ ಬೇರೆ ಬೇರೆ ಭಾವನಾತ್ಮಕ ಅಂಶಗಳಿಗೆ ಸಂಬಂಧಿಸಿದ್ದೇ? ಮಗುವಿನ ಲಾಲನೆ ಪಾಲನೆಗಳಿಗೆ ಸಂಬಂಧಿಸಿದಂತೆ ಅಮ್ಮಂದಿರಿಗೆ ಹೆಚ್ಚಿನ ಹೊಣೆಗಾರಿಕೆಯನ್ನು ವಹಿಸಿದ ಸಮಾಜದ ಕೊಡುಗೆಯೇ? ಅಲ್ಲ ಅಮ್ಮಂದಿರು ಇರುವುದೇ ಹಾಗೋ?
ಅಷ್ಟಕ್ಕೂ, ಒಂದೆರಡು ಗಂಟೆಯಲ್ಲಿ ಬರೆಯಬಹುದಾದ ಈ ಲೇಖನವನ್ನು ಬರೆಯಲು ಐದಾರು ದಿನ ತೆಗೆದುಕೊಳ್ಳುವಂತೆ ಮಾಡಿದ್ದೂ ನನ್ನೊಳಗಿನ ಅಮ್ಮನೇ !
ಡಾ. ಪ್ರೀತಿ ಕೆ.ಎ.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.