FEATUREDಚಾವಡಿಚಿಂತನೆ

ಚಾವಡಿ/ ಚಿಂತನೆ / ಇದು ಸರೀನಾ? ಕೇಳುತ್ತಿದೆ ಕೊರೋನಾ – ನೂತನ ದೋಶೆಟ್ಟಿ

ಇದುವರೆಗೆ ಟಿವಿಗಳಲ್ಲಿ ನಿತ್ಯ ಬರುವ ಭವಿಷ್ಯ ಹೇಳುವ ಕಾರ್ಯಕ್ರಮಗಳನ್ನು ಬಹು ಗಂಭೀರವಾಗಿ ನೋಡುವ, ಭಾಗವಹಿಸುವ ಮಹಿಳೆಯರ ಬಗ್ಗೆ ಕೊಂಚ ಬೇಸರ, ಸ್ವಲ್ಪ ಅಸಹನೆ, ತುಸು ತಾತ್ಸಾರ, ಅಪಾರ ಮರುಕವಿತ್ತು. ಆದರೆ ಗಂಟೆ, ಜಾಗಟೆಯ ಈ ಸಮೂಹ ಸನ್ನಿಯಲ್ಲೂ ಮಹಿಳೆಯರು ಭಾಗವಹಿಸಿರುವುದನ್ನು ಕಂಡು ನನ್ನ ದೇಶದ ಬಗ್ಗೆ ಎಲ್ಲಿಲ್ಲದ ಕಳಕಳಿ, ಕಾಳಜಿ ಉಂಟಾಯಿತು. ನಮ್ಮಲ್ಲಿ ಇನ್ನೂ ಪ್ಲೇಗಮ್ಮ, ಸಿಡುಬಮ್ಮ ಮೊದಲಾದ ರೋಗನಿಯಂತ್ರಕ ದೇವತೆಗಳ ಹೆಸರಿನಲ್ಲಿ ಗುಡಿಗಳಿವೆ. ಅವುಗಳನ್ನು ನಂಬಿ ಭಕ್ತಿಯಿಂದ ನಡೆದುಕೊಳ್ಳುವ ಸಹಸ್ರಾರು ಜನ ದೇಶದಾದ್ಯಂತ ಇದ್ದಾರೆ. ಅವರಲ್ಲಿ ಬಹುಸಂಖ್ಯಾತರು ಮಹಿಳೆಯರೇ.

ಮಾರ್ಚ್ 22ರಂದು ಸಂಜೆ 5 ಗಂಟೆಗೆ ಮಾನ್ಯ ಪ್ರಧಾನಿಗಳ ಕರೆಯ ಮೇರೆಗೆ ಚಪ್ಪಾಳೆ ತಟ್ಟುವುದರ ಮೂಲಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಿತರರಾಗಿರುವ ಎಲ್ಲರಿಗೂ ಗೌರವ ಸಲ್ಲಿಸಲಾಯಿತು ಹಾಗೂ ಧನ್ಯವಾದ ಹೇಳಲಾಯಿತು. ಒಳ್ಳೆಯದೆ. ಆನಂತರ ಇದ್ದಕ್ಕಿದ್ದಂತೆ ಎಲ್ಲ ಕಡೆಗಳಿಂದಲೂ ಅಬ್ಬರದ ಗಂಟೆ, ಜಾಗಟೆ, ಶಂಖನಾದ ಮಾಡುತ್ತ ಹೆಂಗಸರು, ಮಕ್ಕಳು, ಯುವಕರು, ಯುವತಿಯರು, ಗುಂಪುಗುಂಪಾಗಿ ಮೆರವಣಿಗೆಯಲ್ಲಿ ಸಾಗಿದ್ದು ಕೊರೊನಾ ವೈರಸ್ಸಿನ ಆತಂಕದ ಸಂದರ್ಭದಲ್ಲಿ ಗಾಬರಿ ಹುಟ್ಟಿಸಿತು ! ಆ ಕ್ಷಣ ಅನ್ನಿಸಿದ್ದು ದೇಶಕ್ಕೆ ದೇಶವೇ ಬೆಳಗ್ಗಿನಿಂದ ಕಷ್ಟಪಟ್ಟು ಸಾಧಿಸಿದ್ದ ಸ್ವಯಂ ನಿಯಂತ್ರಣ ಬೀದಿ ಪಾಲಾಯಿತು ಎಂದು.

ಈ ಶಂಖ, ಜಾಗಟೆಗಳ ಬಡಿತವನ್ನು ಮಹಿಳೆಯೊಬ್ಬರು ತಮ್ಮ ಫೇಸ್ ಬುಕ್ ಪೇಜಿನಲ್ಲಿ ‘ದೈವೀಕ ಅನುಭವ’ ಎಂದು ಬಣ್ಣಿಸಿದರೆ , ಇನ್ನೊಬ್ಬ ಮಹಿಳೆ “ಹಿಂದೆಂದೂ ಕಂಡಿರದ ಅತ್ಯಂತ ಸಂತಸ ನೀಡಿದ ಅನುಭವ “ ಎಂದು ಬಣ್ಣಿಸಿದರು. ಇಂತಹ ನೂರಾರು ಪೋಸ್ಟುಗಳು ಕ್ಷಣಮಾತ್ರದಲ್ಲಿ ಅನೇಕರ ಫೇಸ್ ಬುಕ್ ವಾಲ್ ಮೇಲೆ ಮಿಂಚಿದವು.

ಇದುವರೆಗೆ ಟಿವಿಗಳಲ್ಲಿ ನಿತ್ಯ ಬರುವ ಭವಿಷ್ಯ ಹೇಳುವ ಕಾರ್ಯಕ್ರಮಗಳನ್ನು ಬಹು ಗಂಭೀರವಾಗಿ ನೋಡುವ, ಅವುಗಳಲ್ಲಿ ತಾವೂ ಭಾಗವಹಿಸುವ ಮಹಿಳೆಯರ ಬಗ್ಗೆ ಕೊಂಚ ಬೇಸರ, ಸ್ವಲ್ಪ ಅಸಹನೆ, ತುಸು ತಾತ್ಸಾರ, ಅಪಾರ ಮರುಕವಿತ್ತು. ಆದರೆ ಗಂಟೆ, ಜಾಗಟೆಯ ಈ ಸಮೂಹ ಸನ್ನಿಯಲ್ಲೂ ಮಹಿಳೆಯರು ಭಾಗವಹಿಸಿರುವುದನ್ನು ಕಂಡು ನನ್ನ ದೇಶದ ಬಗ್ಗೆ ಎಲ್ಲಿಲ್ಲದ ಕಳಕಳಿ, ಕಾಳಜಿ ಉಂಟಾಯಿತು. ನಮಗೆಲ್ಲ ತಿಳಿದಿರುವಂತೆ ನಮ್ಮಲ್ಲಿ ಇನ್ನೂ ಪ್ಲೇಗಮ್ಮ, ಸಿಡುಬಮ್ಮ ಮೊದಲಾದ ರೋಗನಿಯಂತ್ರಕ ದೇವತೆಗಳ ಹೆಸರಿನಲ್ಲಿ ಗುಡಿಗಳಿವೆ. ಅವುಗಳನ್ನು ನಂಬಿ ಭಕ್ತಿಯಿಂದ ನಡೆದುಕೊಳ್ಳುವ ಸಹಸ್ರಾರು ಜನ ದೇಶದಾದ್ಯಂತ ಇದ್ದಾರೆ. ಇವತ್ತಿಗೂ ಸಿಡುಬು ಸೋಂಕು ದೇವತೆಯ ಕೋಪದಿಂದ ಅಥವಾ ಮೈಲಿಗೆಯಾದ್ದರಿಂದಲೇ ಬರುತ್ತದೆ ಎಂದು ನಂಬುವ ಅಸಂಖ್ಯ ಜನರಿದ್ದಾರೆ. ಅವರಲ್ಲಿ ಬಹುಸಂಖ್ಯಾತರು ಮಹಿಳೆಯರೇ.

ಹೀಗಿರುವಾಗ ಕೊರೊನಾ ಎಂಬ ಹೊಚ್ಚ ಹೊಸ ಸೋಂಕನ್ನು ಗಂಟೆ, ಜಾಗಟೆ ಬಡಿಯುವುದರ ಮೂಲಕ ಓಡಿಸೋಣ ಎಂದು ಪಣತೊಟ್ಟು ಗಲ್ಲಿ ಗಲ್ಲಿಗಳಿಂದ ಜನ ತಂಡೋಪತಂಡವಾಗಿ ಬಡಿಯುತ್ತ ಸಾಗಿದ ದೃಶ್ಯಗಳನ್ನು ನೋಡಿದಾಗ ಕೆಲ ಹೊತ್ತಿನ ಮೊದಲು ಚಪ್ಪಾಳೆ ತಟ್ಟಿಸಿಕೊಂಡ ವೈದ್ಯರು, ದಾದಿಯರು, ಪೋಲಿಸರ ಗುಂಡಿಗೆಗಳು ಗಡಗಡ ನಡುಗಿರದೇ ಇರಲಾರವು. ಬೆಳಗ್ಗಿನಿಂದ ಕಾಯ್ದುಕೊಂಡು ಬಂದಿದ್ದ ನಿಯಂತ್ರಣ ಕ್ಷಣ ಮಾತ್ರದಲ್ಲಿ ಈ ಗುಂಪುಗಳ ಕಾಲಧೂಳಿಯಾಗಿ ಹೋದದ್ದನ್ನು ಇವರೆಲ್ಲ ಅಸಹಾಯಕರಾಗಿ ನಿಂತು ನೋಡಬೇಕಾಯುತು.

ಬಹುತೇಕವಾಗಿ ಮಹಿಳೆಯರು ತಮ್ಮ ಮಕ್ಕಳಿಗೆ, ಮನೆಯವರಿಗೆ, ಅನಾರೋಗ್ಯ ಉಂಟಾದಾಗ ಬಲಹೀನರಾಗುತ್ತಾರೆ. ಅಂಥ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಲು ಅವರು ಯಾವ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಮಾಧ್ಯಮಗಳು. ಭವಿಷ್ಯಕಾರರು ಮಹಿಳೆಯರ ಈ ‘ವೀಕ್‍ನೆಸ್‘ಅನ್ನು ಸದಾ ದುಡಿಸಿಕೊಂಡೇ ತಮ್ಮ ಹೊಟ್ಟೆ ಹೊರೆದುಕೊಳ್ಳುವುದು ಹೊಸದೇನಲ್ಲ. ಈ ಕಾರಣದಿಂದಲೇ ಭವಿಷ್ಯವಾಣಿಗಳು, ದಿನ-ವಾರ ಭವಿಷ್ಯಗಳು ಎಂಥ ಪ್ರತಿಷ್ಠಿತ ವಾಹಿನಿಗಳು ಹಾಗೂ ಪತ್ರಿಕೆಗಳಲ್ಲೂ ತಮ್ಮ ಸ್ಥಾನವನ್ನು ಕಾಯ್ದುಕೊಂಡೇ ಬಂದಿವೆ. ‘ಬಾಯಲ್ಲಿ ಆಚಾರ; ತಿನ್ನೋದು ಬದನೆಕಾಯಿ’ ಎನ್ನುವ ನುಡಿಗಟ್ಟು ಈ ಮನಸ್ಥಿತಿಗಳಿಗೆ ಹೇಳಿ ಮಾಡಿಸಿದಂತಿದೆ. ಕೊರೊನಾದಂಥ ಜೀವಕಂಟಕ ವೈರಾಣುಗಳ ನಿಯಂತ್ರಣದಲ್ಲಿ ಅದಕ್ಕೆ ಸಾಮಾಜಿಕ, ಧಾರ್ಮಿಕ, ರಾಜಕೀಯ ಬಣ್ಣ ನೀಡಲು ಯತ್ನಿಸಿದ್ದು ಅದಕ್ಕೆ ಮಹಿಳೆ-ಮಕ್ಕಳನ್ನು ಬಳಸಿಕೊಂಡಿದ್ದು ನಾಗರಿಕ ಸಮಾಜ ಒಪ್ಪುವ ನಡಾವಳಿ ಅಲ್ಲವೇ ಅಲ್ಲ.

 ಒಂದೆಡೆ ಮಹಿಳಾ ಸಬಲೀಕರಣದ ಮಾತು. ಇನ್ನೊಂದೆಡೆ ಅದೇ ಮಹಿಳೆಯರನ್ನು ಶತಮಾನಗಳಷ್ಟು ಹಿಂದೆ ನೂಕುವ ಪ್ರಯತ್ನಗಳು ನಮ್ಮ ಕಾಲದ ಸಾಮಾಜಿಕ ದ್ವಂದ್ವತೆಗೆ ಹಿಡಿದ ಕನ್ನಡಿ. ಧಾರ್ಮಿಕ ನಂಬಿಕೆಗಳು, ಆಚರಣೆಗಳು ಅವರವರ ವೈಯುಕ್ತಿಕ ಆಯ್ಕೆ ಹಾಗೂ ಸ್ವಾತಂತ್ರ್ಯ. ಅದನ್ನು ಇಲ್ಲಿ ಪ್ರಶ್ನಿಸಲಾಗುತ್ತಿಲ್ಲ. ಆದರೆ ಆ ನಂಬಿಕೆಗಳ ದಾರಿ ತಪ್ಪಿಸಿ ಅವುಗಳನ್ನು ತಮ್ಮ ದಾರಿಗೆ ಬೇಕಾದಂತೆ ಒಗ್ಗಿಸುವ, ಕುಗ್ಗಿಸುವ ಕ್ಷುದ್ರತೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ, ಅದರಲ್ಲೂ ಮಹಿಳೆಯರ ಸಬಲೀಕರಣಕ್ಕೆ ದೊಡ್ಡ ಹಿನ್ನಡೆಯಾದೀತು. 20 ನೇ ಶತಮಾನದ ಅಂತ್ಯದವರೆಗೂ ಏರುಗತಿಯ ಮಹಿಳಾ ಅಭಿವೃದ್ಧಿಯನ್ನು ದಾಖಲಿಸಿದ ನಮ್ಮದೇಶ 21 ನೇ ಶತಮಾನದ ಆರಂಭದಿಂದಲೇ ಹಿಂದೆಂದೂ ಕಂಡು ಕೇಳರಿಯದ ಮಹಿಳಾ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ. ಮನೆಯೆ ಮೊದಲ ಪಾಠಶಾಲೆ; ಜನನಿ ತಾನೆ ಮೊದಲ ಗುರುವು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಘೋಷವಾಕ್ಯಗಳು ಕೇವಲ ಬಾಯಿಗೆ ಒರೆಸಿದ ತುಪ್ಪವಾಗಬಾರದು. ಈ ಎಲ್ಲ ವಿದ್ಯಮಾನಗಳು ಸ್ವಾಭಾವಿಕವಾಗಿ ನಡೆಯುವುದಿಲ್ಲ. ಇವುಗಳ ಹಿಂದೆ ವ್ಯವಸ್ಥಿತವಾದ ಅಜೆಂಡಾ ಒಂದಿರುತ್ತದೆ. ಅದಕೆ ಅಮಾಯಕ ಮಹಿಳೆಯರನ್ನು ದಾಳಗಳಾಗಿ ಬಳಸಬಾರದು. ಅದನ್ನು ಅರಿಯುವ, ಅರಿವು ಮೂಡಿಸುವ ಜವಾಬ್ದಾರಿ ನನ್ನ ಮೇಲಿದೆ ಎಂಬ ಕಾಳಜಿ, ಕಳಕಳಿ ಪ್ರತಿಯೊಬ್ಬ ಮಹಿಳೆಯರದೂ ಆಗಲಿ ಎಂಬುದೇ ಈ ಹೊತ್ತಿನ ಆಶಯ.
               

ನೂತನದೋಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಚಾವಡಿ/ ಚಿಂತನೆ / ಇದು ಸರೀನಾ? ಕೇಳುತ್ತಿದೆ ಕೊರೋನಾ – ನೂತನ ದೋಶೆಟ್ಟಿ

 • Shadakshary

  Yes, women must think in this regard.

  Reply

Leave a Reply

Your email address will not be published. Required fields are marked *