ಗೌರಿ:ಕೃಷಿದೇವತೆ- ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ
ಭಾದ್ರಪದ ಮಾಸದ ತದಿಗೆಯಂದು ಬರುವ ಗೌರಿ ಹಬ್ಬ ಹೆಣ್ಣು ಮಕ್ಕಳಿಗೆ ಅತಿ ಸಂತಸದ ಹಬ್ಬ. ಕರ್ನಾಟಕದಲ್ಲಂತೂ ಇದು ವಿಶೇಷ. ಇಂದಿನ ಮಾರುಕಟ್ಟೆ ಸಂಸ್ಕೃತಿಯ ಅಬ್ಬರದಲ್ಲಿ ಈ ಹಬ್ಬ ತನ್ನ ಮೂಲಸತ್ವವನ್ನೇ ಮರೆತುಬಿಟ್ಟಿದೆ. ಆರಂಭದಲ್ಲಿ ಗೌರಿ ಹಬ್ಬ ’ಮಾತೃ ಆರಾಧನ” ಮತ್ತು ’ಮಾತೃಹಕ್ಕ”ಗಳನ್ನು ಆಚರಿಸುವ ಹಬ್ಬವೂ ಆಗಿತ್ತು. ಮೂಲತಃ ಗೌರಿ ಕೃಷಿದೇವತೆ. ಬೇಸಾಯವನ್ನು ಮೊದಲು ಶೋಧಿಸಿದ್ದು ಸಹ ಮಹಿಳೆಯರೇ. ಭಾರತದ ಶ್ರೇಷ್ಠ ತತ್ವಶಾಸ್ತ್ರಜ್ಞರಲ್ಲೊಬ್ಬರಾದ ದಿವಂಗತ ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯರು ಭಾರತಾದ್ಯಂತ ಪ್ರಚಾರದಲ್ಲಿರುವ ಗೌರಿ-ಗಣೇಶ ವ್ರತದ ಆಚರಣೆಯನ್ನು ತಮ್ಮ ”ಲೋಕಾಯತ” ಗ್ರಂಥದಲ್ಲಿ ವಿವರವಾಗಿ ವಿಶ್ಲೇಷಿಸಿದ್ದಾರೆ. ೨೦೧೮ ಅವರ ಶತಮಾನೋತ್ಸವದ ವರ್ಷ. ಗೌರಿ ಹಬ್ಬದ ಸಂದರ್ಭದಲ್ಲಿ ಅವರ ವಿಚಾರಗಳ ಮೆಲಕು
ಬೇಸಾಯವನ್ನು ಶೋಧಿಸಿದ ಮೊದಲಿಗರು ಮಹಿಳೆಯರಾದ್ದರಿಂದ ಅವರೇ ಮೊದಲ ಹಂತದ ಕೃಷಿಯಲ್ಲಿ ಮುಖ್ಯವಾಗಿ ಭಾಗಿಗಳಾಗಿದ್ದವರು. ಅವರ ದುಡಿಮೆ, ಕೃಷಿಗಳಿಂದ ಹುಟ್ಟಿದ ಆರ್ಥಿಕ ಪರಿಸರವು ಸಾಮಾಜಿಕವಾಗಿಯೂ ಸ್ತ್ರೀಪಾರಮ್ಯವನ್ನು ಎತ್ತಿಹಿಡಿದಿತ್ತು. ಆದ್ದರಿಂದಲೇ ಭೌತಿಕ ತಳಹದಿಯನ್ನು ಆಧರಿಸಿ ಕಟ್ಟಲ್ಪಟ್ಟಿದ್ದ ತತ್ವ ಚಿಂತನೆಯಲ್ಲಿ ಪ್ರಕೃತಿಯೇ ಪ್ರಧಾನವಾಗಿ ಇರುವಂತೆ ಒತ್ತು ಇತ್ತು. ತದ್ವಿರುದ್ದವಾಗಿ ಪಶುಪಾಲನೆಯೇ ಮುಖ್ಯ ಆರ್ಥಿಕ ತಳಹದಿಯಾಗಿದ್ದ ವೈದಿಕ ತಾತ್ವಿಕತೆಯ ಪುರುಷಪ್ರಧಾನವಾಗಿದ್ದುದು ಗಮನಾರ್ಹ. ಹೀಗೆ ಸ್ತ್ರೀ ಪುರುಷ ಪ್ರಾಧಾನ್ಯಕ್ಕೂ ಉತ್ಪಾದನಾ ವ್ಯವಸ್ಥೆಗೂ ನಿಕಟವಾದ ಸಂಬಂಧವಿರುವುದನ್ನು ಪ್ರತಿಪಾದಿಸಲಿಕ್ಕಾಗಿ ದೇವಿ ಪ್ರಸಾದರು ಭಾರತಾದ್ಯಂತವಾಗಿ ಪ್ರಚಾರದಲ್ಲಿರುವ ಗೌರಿ-ಗಣೇಶ ವ್ರತದ ಆಚರಣೆಯನ್ನು ವಿವರವಾಗಿ ವಿಶೇಷಿಸುತ್ತಾರೆ.
ಈ ವ್ರತದ ಅತ್ಯಂತ ಪುರಾತನವಾದ ವಿಧಿಯೊಂದು ಹೀಗಿದೆ: ಇದರಲ್ಲಿ “ಗಣೇಶ ಚತುರ್ಥಿ” ವ್ರತಕ್ಕೆ ಒಬ್ಬ ಗಂಡು ದೇವತೆಯ ಹೆಸರು ಇದ್ದರೂ ವಾಸ್ತವ ಕ್ರಿಯಾವಿಧಿಗಳಲ್ಲಿ ಅವನ ಪಾತ್ರವೇನೂ ಇಲ್ಲ. ಬಿತ್ತನೆಯ ಕಾಲದಲ್ಲಿ ಪಾಡ್ಯದ ಚಂದ್ರನ ಸಂಕೇತವಾಗಿ ಕಾಣಿಸಿಕೊಳ್ಳುವ ಈತನನ್ನು ಬಹುಬೇಗ ಜಾಗಬಿಡುವಂತೆ ಮಾಡಿ, ವಿಸರ್ಜಿಸಿಬಿಟ್ಟು ಮುಂದಿನ ದಾರ್ಮಿಕ ವಿಧಿಯೆಲ್ಲ ಗೌರಿ ಎಂಬ ಸ್ತ್ರೀದೇವತೆಗೆ ಸಂಬಂಧಿಸಿದಂತೆ ನಡೆಯುತ್ತದೆ. ಈ ಗೌರಿಯು ನಮ್ಮ ಪುರಾಣಕತೆಗಳ ಗೌರಿ (ಪಾರ್ವತಿದೇವಿ) ಅಲ್ಲ. ವಿವಿಧ ಸಸ್ಯಗಳ ಒಂದು ಕಂತೆಯನ್ನು, ಗೌರಿಯ ಪ್ರತಿಕೃತಿಯಾಗಿ ಕಲ್ಪಿಸಲಾಗುತ್ತದೆ. ಈ ಗೌರಿಯ ಮಾನವ ಪ್ರತಿನಿಧಿಯಾಗಿ ಒಬ್ಬ ’ಕನ್ಯೆ’ಯನ್ನು ಗೌರಿಪಟ್ಟಕ್ಕೆ ಏರಿಸಲಾಗುತ್ತದೆ. ಅರಿಶಿನ ಪುಡಿಯಿಂದ ನೆಲದ ಮೇಲೆ ಈ ದೇವಿಯ ಚಿತ್ರ ಬರೆದು ಅದರ ಮೇಲೆ ಸ್ತ್ರೀಯರು ತಾವು ಸಂಗ್ರಹಿಸಿ ತಂದ ಸಸ್ಯಗಳನ್ನು ಇರಿಸುತ್ತಾರೆ. ಈ ಗಿಡಗಳನ್ನೆಲ್ಲ ಒಂದು ಕಟ್ಟಾಗಿ ಕಟ್ಟುವಾಗ ಮುತ್ತೈದೆಯರಿಗೆ ಕುಂಕುಮ ನೀಡುತ್ತಾರೆ. ಈ ಕಂತೆಯನ್ನು, ಕನ್ಯೆಯನ್ನೂ ಮನೆಯ ಕೋಣೆ ಕೋಣೆಗೂ ಕರೆದೊಯ್ದು ’ಗೌರಿ ಗೌರಿ ನೀನೇನು ಕಂಡೆ’? ಎಂದು ಸ್ತ್ರೀಯರು ಕೇಳುತ್ತಾರೆ. ಆ ಕನ್ಯೆಯು ’ನಾನು ಸಂಪತ್ತನ್ನು ಕಂಡೆ, ಸಮೃದ್ಧಿಯನ್ನು ಕಂಡೆ’ ಎಂದು ಉತ್ತರಿಸಬೇಕು. ಗೌರಿಯ ಈ ನಾಟಕೀಯ ಭೇಟಿಯನ್ನು ವಾಸ್ತವಿಕವೆಂದು ತೋರಿಸಲು ಅಲ್ಲೆಲ್ಲಾ ರಂಗೋಲಿಯಲ್ಲಿ ಹೆಜ್ಜೆಗಳನ್ನು ಬರೆಯುತ್ತಾರೆ. ಮರುದಿನ ಅಕ್ಕಿ, ತೆಂಗಿನಕಾಯಿಯ ರೊಟ್ಟಿ ಮಾಡಿ ಈ ದೇವತೆಗೆ ನೈವೇದ್ಯ ಮಾಡಿ ವಿವಾಹಿತ ಸ್ತ್ರೀಯರೆಲ್ಲ ಕೈಯಿಂದ ಹೊಸೆದ ಹತ್ತಿಯ ದಾರವನ್ನು ತಮ್ಮೆತ್ತರದಷ್ಟು ಉದ್ದಕ್ಕೆ ಹದಿನಾರು ಸುತ್ತು ಮಾಡಿ ಗೌರಿಯ ಎದುರು ಇರಿಸುತ್ತಾರೆ. ಮಾರನೆಯ ದಿನ ಗೌರಿ ಮುಂದೆ ಹುಡುಗಿಯರು ಹಾಡುತ್ತಾ ಕುಣಿಯಬೇಕು. ಮುಂದಿನ ದಿನ ಬೊಂತಾಗೌರಿಗೆ ಅರ್ಧಚಂದ್ರಾಕಾರದ ದೋಸೆಗಳನ್ನು (ಕಡುಬು?) ಅರ್ಪಿಸಿ, ಪ್ರತಿಯೊಬ್ಬರೂ ತಾವು ಇರಿಸಿದ್ದ ಗೆಜ್ಜೆವಸ್ತ್ರ (ಹತ್ತಿಯ ನೂಲು) ವನ್ನು ತೆಗೆದುಕೊಂಡು ಹೊಸೆದು ಹದಿನಾರು ಗಂಟುಹಾಕಿ ಅರಿಶಿನ ಹಚ್ಚಿ ಒಬ್ಬರು ಮತ್ತೊಬ್ಬರ ಕೊರಳಿಗೆ ಕಟ್ಟುತ್ತಾರೆ. ಆ ದಾರವನ್ನು ಮುಂದಿನ ಸುಗ್ಗಿಯವರೆಗೆ ಹಾಗೇ ಧರಿಸುತ್ತಾರೆ. ದಾರವನ್ನು ಕೊರಳಿಗೆ ಕಟ್ಟಿಕೊಂಡ ದಿನವೇ ಬೊಂತಾಗೌರಿಯನ್ನೂ ನದಿ ಇಲ್ಲವೆ ಕೆರೆಯಲ್ಲಿ ವಿಸರ್ಜಿಸಿ, ಆ ದಡದಿಂದ ಒಂದು ಹಿಡಿ ಮಣ್ಣು ತಂದು ಮನೆಯ ಮೇಲೆ, ಒಳಗೇ, ಸುತ್ತಮುತ್ತಲಲ್ಲೂ, ತೋಟದಲ್ಲೂ ಎರಚುತ್ತಾರೆ. ಬೊಂತೆಯನ್ನು ಹೆಂಗಸರೇ ಕೊಂಡೊಯ್ಯಬೇಕು. ಒಯ್ಯುವಾಗ ಒಮ್ಮೆಯೂ ತಿರುಗಿ ನೋಡುವಂತಿಲ್ಲ. ವ್ರತ ಮುಗಿದ ನಂತರ ವ್ರತ ಕಥೆ ಪೌರಾಣಿಕ ಕಥೆಗಳನ್ನು ವಾಚಿಸಲಾಗುತ್ತದೆ.
ಈ ವ್ರತಕಥೆಯೂ ಸರಳವಾದದ್ದು. ತೀರಾ ಬಡವನಾಗಿದ್ದ ಒಬ್ಬನು ಬಡತನದ ಬೇಗೆಯನು ತಡೆಯಲಾಗದ ನದಿಯಲ್ಲಿ ಮುಳುಗಿ ಪ್ರಾಣ ಬಿಡಲೆಂದು ಹೋಗುತ್ತಾನೆ. ಆಗ ಒಬ್ಬ ವೃದ್ದೆ ಮುತ್ತೈದೆ ಅವನೆದರು ಕಾಣಿಸಿಕೊಂಡು ಆ ಮನುಷ್ಯನನ್ನು ಮನೆಗೆ ಹಿಂದಿರುಗುವಂತೆ ಒತ್ತಾಯಿಸುತ್ತಾಳೆ. ಅವನು ಹೊರಟಾಗ ಆಕೆ ಕೂಡ ಅವನೊಂದಿಗೇ ಅವನ ಮನೆಗೆ ಬರುತ್ತಾಳೆ. ಆಕೆಯೊಂದಿಗೆ ಸಿರಿ ಸಂಪತ್ತುಗಳೂ ಆ ಮನೆಗೆ ಬರುತ್ತವೆ. ಆಕೆ ಅಲ್ಲಿಂದ ಹೊರಡುವ ಕಾಲ ಬಂದಾಗ ಆ ಮನುಷ್ಯ ಆಕೆಯನ್ನು ನದಿಯ ಬಳಿ ಬಿಟ್ಟು ಬರುತ್ತಾನೆ. ಹೊರಟವನಿಗೆ ಆಕೆ ಒಂದು ಹಿಡಿ ದಡದ ಮಣ್ಣನ್ನು ನೀಡಿ, ಸಮೃದ್ಧಿಗಾಗಿ ಈ ಮಣ್ಣನ್ನು ಅವನು ತನ್ನ ಎಲ್ಲಾ ಪದಾರ್ಥಗಳ ಮೇಲೆ ಎರಚಬೇಕೆಂದು ಹೇಳುತ್ತಾಳೆ. ಪ್ರತಿವರ್ಷವೂ ಭಾದ್ರಪದ ಮಾಸದಲ್ಲಿ ಗೌರಿ ವ್ರತ ಮಾಡಿ ಇದನ್ನು ನಡೆಸಲೆಂದು ಆದೇಶಿಸುತ್ತಾಳೆ.
ಈ ವ್ರತ ಮತ್ತು ಕಥೆಯ ಹಿಂದಿರುವ ವೈಚಾರಿಕ ತರ್ಕವನ್ನು ಶ್ರೀ ಗುಪ್ತೆಯವರ ಮಾತುಗಳಲ್ಲಿ ದೇವಿಪ್ರಸಾದರು ವಿವರಿಸುತ್ತಾರೆ. ನದಿಯ ತೀರದಲ್ಲಿ ಕೊಚ್ಚಿಬಂದ ಮೆಕ್ಕಲು ಮಣ್ಣು ಬೆಳೆಗಳ ಮೂಲಸ್ಥಾನ. ವೃದ್ಧ ಮುತ್ತೈದೆ ಮುಗಿದು ಹೋದ ಋತು. ವ್ರತದಲ್ಲಿ ಬರುವ ಕಿರಿಯ ಕನ್ಯೆ ಬರಲಿರುವ ಹೊಸ ಋತುವಿನ ಸಂಕೇತ. ಅರಿಶಿನದಲ್ಲಿ ನೆಲದ ಮೇಲೆ ಬರೆದ ಚಿತ್ರ ಸತ್ತ ಋತುವಿನ ಪ್ರತೀಕ. ಈ ಋತುವಿನಲ್ಲಿ ಬೆಳೆದ ಬೆಳೆಗಳಾದ ಅಕ್ಕಿ, ಜೋಳ (ಸಜ್ಜೆ)ಗಳೇ ಮೊದಲ ದಿನದ ನೈವೇದ್ಯ ವಸ್ತುಗಳಾಗುತ್ತವೆ. ಮರುದಿನದ ನೈವೇದ್ಯ ಬರಲಿರುವ ಋತುವಿಗಾಗಿ. ಹೊಲದ ಕೆಲಸ ಕೊನೆಗೊಳ್ಳುವ ದಿನವೇ ಚಿತ್ರವು ಬೊಂತೆಯಲ್ಲಿ ಜೀವರಹಿತವಾಗುವ ದಿನವೂ ಆಗುತ್ತದೆ. ಬೊಂತೆಯನ್ನು ನೀರಿನ ಮೂಲಕ ಭೂಮಾತೆಯ ಗರ್ಭಕ್ಕೆ ಮುಳುಗಿಸುವ ಕ್ರಿಯೆ, ಅಲ್ಲಿನ ಮಣ್ಣು ತಂದು ಎರಚುವುದು, ನೂತ ದಾರದೆಳೆಯಲ್ಲಿ ಹದಿನಾರು ಗಂಟುಗಳನ್ನು ಹಾಕುವುದು ಮುಂತಾದುವೆಲ್ಲ ಋತುವಿನ ಸಾವು-ಹುಟ್ಟುಗಳು ಒಟ್ಟಿಗೇ ಸಂಭವಿಸುವುದರ ಸಾಂಕೇತಿಕ ಅಭಿವ್ಯಕ್ತಿಗಳು. ಬೆಳೆ ಬೆಳೆಯಲು ಬೇಕಾಗುವ ಕಾಲಾವಧಿಯ ವಾರಗಳನ್ನು ಹದಿನಾರು ಎಳೆ, ಹದಿನಾರು ಗಂಟು ಸಂಕೇತಿಸುತ್ತವೆ, ಎಂಬುದು ಶ್ರೀ ಗುಪ್ತೆ ಅವರ ವಿವರಣೆ.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.