ಗೌರವ ತೂರಿಬಿಡುವ ನಡವಳಿಕೆಗಳು

“ಎಲ್ಲಿ ನಾರಿಯರಿಗೆ ಗೌರವ ಇರುತ್ತದೆಯೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ” ಮುಂತಾದ ನೂರೆಂಟು ಮಾತುಗಳನ್ನು ನಮ್ಮ ದೇಶ ಶತಮಾನಗಳಿಂದ ಕೇಳುತ್ತಿದೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯ ಕಾಲ ಉರುಳಿದಂತೆ ನೂರೆಂಟು ಹೊಸಬಗೆಗಳಲ್ಲಿ ಪ್ರಕಟವಾಗುತ್ತಿದೆ. ಸಾರ್ವಜನಿಕ ನಡವಳಿಕೆಯಲ್ಲಿ, ಮಾತುಕತೆಯಲ್ಲಿ ಅದು ಪಡೆಯುತ್ತಿರುವ ಸ್ವರೂಪ ಮಾನಮರ್ಯಾದೆಯ ಎಲ್ಲೆ ಮೀರಿ ಹೆದರಿಕೆ ಹೆಚ್ಚಿಸುತ್ತಿರುವುದು ನಿಜಕ್ಕೂ ಸಾಮಾಜಿಕ ದುರಂತ.

ಮೈದಾನದಲ್ಲಿ ಪಡೆದ ಯಶಸ್ಸನ್ನು ತಲೆಗೂ ಏರಿಸಿಕೊಂಡ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಇಬ್ಬರೂ ಕರಣ್ ಜೋಹರ್ ಜೊತೆ ಕಾಫಿ ಕುಡಿದುಕೊಂಡು ಹುಡುಗಿಯರ ಬಗ್ಗೆ ಅವರ ಜೊತೆ ತಾವು ನಡೆದುಕೊಳ್ಳುವ ಬಗ್ಗೆ ಎಗ್ಗುಸಿಗ್ಗು ಇಲ್ಲದೆ ಮಾತನಾಡುತ್ತಾರೆ. ಸಮಾನತೆಯ ಆಶಯವನ್ನೇ ಉಸಿರಾಡಬೇಕಿದ್ದ ನ್ಯಾಯಮೂರ್ತಿಗಳು ಹಗುರವಾಗಿ ಮಾತನಾಡುತ್ತಾರೆ. ದೇವಾಲಯಗಳಿಗೆ ಮಹಿಳೆಯರ ಪ್ರವೇಶ ರಾಜಕೀಯ ಅಜೆಂಡಾಗಳಿಗೆ ಊರುಗೋಲಾಗುತ್ತದೆ. ಇನ್ನು ಸಾರ್ವಜನಿಕ ಜೀವನದಲ್ಲಿ ರಾಜಕಾರಣಿಗಳ ನಡವಳಿಕೆ ಸಂಯಮ, ಪಕ್ವತೆ ಎಲ್ಲವನ್ನೂ ಗಾಳಿಗೆ ತೂರುವಂತಿರುತ್ತದೆ.

ಮಂತ್ರಿಯಾದ ತನಗೆ ಸ್ವಾಮೀಜಿಯವರ ಅಂತ್ಯಸಂಸ್ಕಾರದ ಆವರಣದ ಒಳಗೆ ಬಿಟ್ಟು ವಿನಯದಿಂದ ಸುಸ್ವಾಗತ ಕೋರಲಿಲ್ಲ ಎಂದು ಕುಪಿತರಾದ ಸಚಿವ ಸಾ.ರಾ. ಮಹೇಶ್ ಸಂದರ್ಭವನ್ನೂ ಮರೆತು ಅಲ್ಲಿದ್ದ ಉನ್ನತ ಪೆÇಲೀಸ್ ಅಧಿಕಾರಿ ದಿವ್ಯಾ ಗೋಪಿನಾಥ್ ಅವರನ್ನು ನಿಂದಿಸಿ ಅವಮಾನಿಸುತ್ತಾರೆ. ಇನ್ನು ಇದಕ್ಕೆ ಈ ಕ್ಷಣದ ಉದಾಹರಣೆಯೆಂದರೆ, ಸಮಾಜವಾದಿ ಎನಿಸಿಕೊಂಡಿದ್ದ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೈಸೂರಿನಲ್ಲಿ ತಮ್ಮನ್ನು ಪ್ರಶ್ನಿಸಿದ ಮಹಿಳೆಯ ಕೈಯಲ್ಲಿದ್ದ ಮೈಕ್ ಅನ್ನು ಅವಳ ಮೈಮೇಲಿದ್ದ ದುಪ್ಪಟ್ಟಾ ಸಮೇತ ಕಿತ್ತೆಳೆದು ಏಕವಚನದಲ್ಲಿ ನಿಂದಿಸಿ ಅವಮಾನಿಸಿದ್ದಾರೆ.

ಮಹಿಳೆಯರ ಮೇಲೆ ದೌರ್ಜನ್ಯ ಯಾವ ರೂಪದಲ್ಲಾದರೂ ಬಂದೆರಗಬಹುದು: “ಹಿಂದೂ ಹುಡುಗಿಯ ಮೈಮುಟ್ಟಿದವರ ಕೈ ಕತ್ತರಿಸಿ” ಎಂದು ಅಪ್ಪಣೆ ಕೊಟ್ಟ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಮಾತು ಖಂಡಿತ ಮಹಿಳೆಯರನ್ನು ರಕ್ಷಿಸಿಬಿಡುವುದಿಲ್ಲ. ಕಾನೂನು ಪರಿಪಾಲನೆಯ ಬದಲಿಗೆ ಸಾಮಾಜಿಕ ಕ್ಷೋಭೆಗೆ ಇನ್ನಷ್ಟು ಅವಕಾಶ ಕಲ್ಪಿಸಿ, ಮಹಿಳೆಯರ ಮೇಲೆ ಅದು ಇನ್ನಷ್ಟು ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ. ಗಂಡುಮಕ್ಕಳ ಚಿಂತನಾಕ್ರಮದಲ್ಲಿ ಸಮಾನತೆಯ ಆಶಯವನ್ನು ಬಿತ್ತುವುದೇ ಉತ್ತಮ ಮಾರ್ಗ ಎಂಬುದನ್ನು ಇಂಥ ಮನೋಭಾವ ನಿರ್ಲಕ್ಷಿಸುತ್ತದೆ.

ಹಿತೈಷಿಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *