ಗೋಹರ್‌ಬಾಯಿ ಕರ್ನಾಟಕಿ: ರಹಮತ್ ತರೀಕೆರೆ

ತನ್ನ ಛಲದ ಸ್ವಭಾವದಿಂದ ಗೋಹರ್ ಏಕಕಾಲಕ್ಕೆ ಕೀರ್ತಿಯನ್ನೂ ಪಡಬಾರದ ಪಾಡನ್ನೂ ಅನುಭವಿಸ ಬೇಕಾಯಿತು. ಅದೊಂದು ರೋಚಕವೂ ದುರಂತವೂ ಆದ ಕತೆ     

ಖ್ಯಾತ ಗಾಯಕನಟಿ ಅಮೀರ್‌ಬಾಯಿ ಕರ್ನಾಟಕಿಯವರ ಜೀವನಚಿತ್ರ ರಚಿಸಲೆಂದು ಹೊರಟರೆ, ಅವರ ಅಕ್ಕ ಗೋಹರ್ ಬಾಯಿ(೧೯೧೦-೧೯೬೪) ಚಿತ್ರವೂ ಹುಟ್ಟಿಬಿಡುತ್ತದೆ. ಈ ಬಗ್ಗೆ ನನ್ನ ಕುತೂಹಲ ಕೆರಳಿಸಿದ್ದು ಪ್ರಕಾಶ್ ಜಿ. ಬುರ್ಡೆಯವರ `ಗಂಧರ್ವಲೋಕದ ದುರಂತನಾಯಕಿ: ಗೋಹರ್‌ಬಾಯಿ ಕರ್ನಾಟಕಿ’ ಎಂಬ ಲೇಖನ. ಕಾರವಾರ ಸೀಮೆಯಿಂದ ಬಹಳ ಹಿಂದೆ ಮುಂಬೈಗೆ ಹೋಗಿ ನೆಲೆಸಿದ್ದ ಬುರ್ಡೆ, ಸಂಗೀತಪ್ರೇಮಿ ಹಾಗೂ ಸಂಗೀತ ಚರಿತ್ರಕಾರರು. `ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ೮೦-೯೦ರ ದಶಕದಲ್ಲಿ ಸಂಗೀತ ಸಮೀಕ್ಷೆ ಮಾಡುತ್ತಿದ್ದವರು. ಅವರಿಗೆ ಗೋಹರ್ ಕುರಿತು ಕೆಲವು ಮರಾಠಿಗರು ತೋರಿದ ಅನಾದರವು ಕಲಕಿತ್ತು; ಬಾಲಗಂರ್ಧವರಿಗೆ ೭೫ ತುಂಬಿದಾಗ ಮುಂಬೈನಲ್ಲಿ ನಡೆದ ಸತ್ಕಾರ ಸಮಾರಂಭವನ್ನು(೧೯೬೪) “ಹೆಗಲಿಗೆ ಹೆಗಲುಕೊಟ್ಟು ಕಷ್ಟಸುಖದಲ್ಲಿ ಭಾಗಿಯಾದ” ಗೋಹರ್ ಅವರನ್ನು ಬಿಟ್ಟು ಮಾಡಿದ್ದು ಬೇಸರ ತರಿಸಿತ್ತು:

“ಒಂದು ಕಾಲದಲ್ಲಿ ತನ್ನ ಪ್ರೇಮ ಪುತ್ಥಳಿಯೂ ಅನುರಾಗ ಸಿಂಧುವೂ ಪಟ್ಟದರಾಣಿಯೂ ಆಗಿ ಪ್ರತಿಷ್ಠಿತಳಾದ” ಗೋಹರ್‌ಬಾಯಿಯನ್ನು ಬಾಲಗಂಧರ್ವರು ಕೂಡ ಈ ಉತ್ಸವದಲ್ಲಿ ಕಡೆಗಣಿಸಿದರಲ್ಲಾ ಎಂದು ವಿಷಾದವಿತ್ತು. ಲೇಖನದ ಕೊನೆಯಲ್ಲಿ “ಪ್ರತಿಗಂಧರ್ವ ಎಂದು ಹೆಸರು ಪಡೆದ ಗೋಹರ್ ಬಾಯಿಯವರನ್ನು ಕಣ್ಣಾರೆ ನೋಡಿದ ಕೇಳಿದ ಪ್ರೇಕ್ಷಕರು ಹಾಗೂ ಗಂಧರ್ವರ ಹಿತಚಿಂತಕರು, ಅವರನ್ನು ಪೂರ್ತಿ ನಿರ್ಲಕ್ಷಿಸಿದ ಕಾರಣವೇನು? ಗೋಹರ್‌ಬಾಯಿ ಕರ್ನಾಟಕದವರೆಂದೆ? ಮುಸಲ್ಮಾನರೆಂದೆ? ತನ್ನ ಕೀರ್ತಿಯ ಅತ್ಯುಚ್ಚ ಶಿಖರವನ್ನೇರಿ ಸಿನಿಮಾ ನಟಿಯ ಭೂಮಿಕೆಯನ್ನು ತೊರೆದು, ಹಗಲು ರಾತ್ರ‍್ರಿ ಬಾಲಗಂಧರ್ವರೊಂದಿಗೆ ಮೂವತ್ತು ವರ್ಷ ನೆರಳಿನಂತೆ ಜೀವಿಸಿದ್ದಕ್ಕೇನೆ?” ಎಂಬ ಪ್ರಶ್ನೆಯನ್ನು ಬುರ್ಡೆಯವರು ಎತ್ತಿದ್ದರು.

ಇದರ ಹಿಂದೆ ೧೯೩೦-೬೦ರ ಮೂರು ದಶಕಗಳ ಮರಾಠಿ ರಂಗಭೂಮಿ ಹಾಗೂ ಮುಂಬೈ ಸಿನಿಮಾ ಜಗತ್ತಿನ ಸಂಗತಿಗಳು, ಕರ್ನಾಟಕ ಮಹಾರಾಷ್ಟ್ರಗಳ ನಡುವಣ ಸಂಘರ್ಷಗಳು, ಹಿಂದೂ-ಮುಸ್ಲಿಂ ಕುರಿತಸಾಮಾಜಿಕ ಗ್ರಹಿಕೆಗಳು ಕೆಲಸ ಮಾಡಿರಬಹುದು ಎಂದುಅವರಿಗೆಅನಿಸಿತು. ಇದರ ಜತೆಗೆ ಪ್ರತಿಕೂಲ ವಿದ್ಯಮಾನಗಳಲ್ಲಿ ಈಜುವ ಗೋಹರರ ಪ್ರತಿಭೆ, ಮಹತ್ವಾಕಾಂಕ್ಷೆ ಹಾಗೂ ಹಟಮಾರಿತನಗಳು ಕಾಣತೊಡಗಿದವು. ತನ್ನಿಚ್ಛೆಯಂತೆ ಬದುಕಲು ಬಯಸುವ ಮತ್ತು ಅದಕ್ಕಾಗಿ ಎದುರಾಗಬಹುದಾದ ಅಡ್ಡಿಗಳನ್ನು ಎದುರಿಸುವ ದಿಟ್ಟತನ, ಗೋಹರರ ಮೂಲಗುಣವೇ ಇರಬೇಕು ಎಂದು ಭಾಸವಾಗತೊಡಗಿತು. ತನ್ನೀ ಛಲದ ಸ್ವಭಾವದಿಂದ ಗೋಹರ್ ಏಕಕಾಲಕ್ಕೆ ಕೀರ್ತಿಯನ್ನೂ ಪಡಬಾರದ ಪಾಡನ್ನೂ ಅನುಭವಿಸ ಬೇಕಾಯಿತು. ಅದೊಂದು ರೋಚಕವೂ ದುರಂತವೂ ಆದ ಕತೆ.

ಗೋಹರ್ ಹೆಸರಿನ ಅನೇಕ ತಾರೆಯರು ಸಿನಿಮಾ ಮತ್ತು ಗಾಯನಲೋಕದಲ್ಲಿ ಆಗಿ ಹೋದರು. ಅವರಲ್ಲಿ ಪ್ರಸಿದ್ಧ ತಾಯಿಫಾ ಗಾಯಕಿಯೂ ಮೊಟ್ಟಮೊದಲ ಗ್ರಾಮೊಫೋನ್ ರೆಕಾರ್ಡುಗಳಿಗೆ ಹಾಡಿದ ಕಲಾವಿದೆಯೂ ಆದ ಗೋಹರ್‌ಜಾನ್ ಕಲ್ಕತ್ತೆವಾಲಿ; ಫಾರ್ಸಿ ರಂಗಭೂಮಿ ಕಲಾವಿದೆ ಗೋಹರ್‌ಜಾನ್; ಮುಂಬೈನ ರಣಜಿತ್ ಸ್ಟುಡಿಯೊ ನಟಿ ಗೋಹರ್; ಹಿಂದೂಸ್ತಾನಿ ಗಾಯಕಿ ಗೋಹರಜಾನ್ ದೆಹಲಿವಾಲಿ ಮುಂತಾದವರಿದ್ದಾರೆ. ಹೀಗಾಗಿಯೇ ಉಳಿದ ಗೋಹರ್‌ಗಳಿಂದ ಪ್ರತ್ಯೇಕವಾಗಿ ಗುರುತಿಸಲು ಕೊಲಂಬಿಯಾ ಮತ್ತು ರೀಗಲ್ ಗ್ರಾಮೊಫೋನ್ ಕಂಪನಿಗಳು, ರೆಕಾರ್ಡುಗಳ ಮೇಲೆ ಇವರ ಹೆಸರನ್ನು ಮಿಸ್ ಗೋಹರ್ ಕರ್ನಾಟಕಿ, ಗೋಹರ್ ಬಿಜಾಪುರ ಎಂದು ಬಳಸಿದವು. ಹಲವು ಗೋಹರ್‌ಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲು ಗೋಹರ್ ಅವರೇ ಕರ್ನಾಟಕಿ ಎಂಬ ಅಡ್ಡಹೆಸರನ್ನು ಮೊದಲಿಗೆ ಇಟ್ಟುಕೊಂಡಿದ್ದು, ಇದುವೇ ಅಮೀರ್‌ಬಾಯಿ ವಿನಾಯಕ, ನಂದಾ ಅವರಿಗೆ ಪ್ರೇರಣೆ ಕೊಟ್ಟಿರುವ ಸಾಧ್ಯತೆಯೂ ಇಲ್ಲದಿಲ್ಲ. ಬಾಲಗಂಧರ್ವರ ಬಾಳಸಂಗಾತಿಯಾದ ಬಳಿಕ ಅವರನ್ನು ಗೋಹರ್‌ಬಾಯಿ ರಾಜಹಂಸ ಎಂದು ಕರೆಯಲಾಯಿತು. ಮುಂಬಯಿ ಪುಣೆ ಆಕಾಶವಾಣಿಗಳಿಂದ ಗೋಹರ್ ಗಾಯನವನ್ನು ಪ್ರಸಾರ ಮಾಡುವಾಗ, ಈಗಲೂ ಇದೇ ಹೆಸರು ಬಳಕೆಯಾಗುತ್ತಿದೆ. ವಿಶೇಷವೆಂದರೆ ಕನ್ನಡದ ಬರೆಹಗಳಲ್ಲಿ ಗೋಹರ್ ಅವರನ್ನು ಗೋಹರ್‌ಜಾನ್ ಎಂದಿರುವುದು.

ಕನ್ನಡ ರಂಗಭೂಮಿ ಬಿಟ್ಟು ಮುಂಬೈಗೆ ತೆರಳಿದ ಬಳಿಕ, ಗೋಹರ್ ತಮ್ಮನ್ನು ಹಿಂದಿ ಮತ್ತ್ತು ಮರಾಠಿ ಸಿನಿಮಾಗಳಲ್ಲಿ ಹಾಡುನಟಿಯಾಗಿ ತೊಡಗಿಸಿಕೊಂಡರು. ಅವರು ಗ್ರಾಮೊಫೋನ್ ಕಂಪನಿಗಳಿಗಾಗಿ ಹಿಂದೂಸ್ತಾನಿ ಅರೆಕ್ಲಾಸಿಕಲ್ ಗಾಯಕಿಯಾಗಿ ಗಜಲ್ ಭಜನೆ ಅಭಂಗ ಹಾಗೂ ರಂಗಗೀತೆಗಳನ್ನು ಹಾಡಿದರು. ಇಷ್ಟಾದರೂ ಅವರನ್ನು ಮುಖ್ಯವಾಗಿ ರಂಗಭೂಮಿ ಕಲಾವಿದೆ ಎಂದೇ ಗುರುತಿಸಲಾಗುತ್ತದೆ. ಅವರ ಬಹುತೇಕ ಗಾಯನಗಳು ರಂಗಗೀತೆ ಆಗಿರುವುದೂ ಇದಕ್ಕೆ ಕಾರಣವಿರಬೇಕು.

ಬೀಳಗಿ ಸೋದರಿಯರಲ್ಲಿ ಹೆಚ್ಚು ಜನಪ್ರಿಯತೆ ಹಾಗೂ ಸಾರ್ವಜನಿಕ ಮನ್ನಣೆ ಪಡೆದವರು ಅಮೀರ್‌ಬಾಯಿ. ಇದಕ್ಕೆ ಕಾರಣ, ಅವರ ಸೌಮ್ಯ ಸ್ವಭಾವ ಹಾಗೂ ಪ್ರತಿಷ್ಠಿತವೂ ಪ್ರಭಾವಶಾಲಿಯೂ ಆದ ಹಿಂದಿ ಸಿನಿಮಾದ ಹಿನ್ನೆಲೆಗಳಿರಬಹುದು. ಆದರೆ ಸಿನಿಮಾದಷ್ಟು ಗ್ಲಾಮರಸ್ ಅಲ್ಲದ ರಂಗಭೂಮಿಯಲ್ಲಿ ಗೋಹರ್ ತಮ್ಮನ್ನು ಗುರುತಿಸಿಕೊಂಡರು. ಇದಕ್ಕೆ ಕಾರಣ, ಮರಾಠಿ ರಂಗಭೂಮಿಯ ದಂತಕತೆಯಾಗಿದ್ದ ನಾರಾಯಣರಾವ್ ರಾಜಹಂಸ ಉರುಫ್ ಬಾಲಗಂಧರ್ವರಲ್ಲಿ ಅವರಿಗೆ ಉಂಟಾದ `ನಾಟಕೀಯ’ ಪ್ರೇಮ. ಗಂಧರ್ವರನ್ನು ಅನುಕರಿಸಿ ಹಾಡುವುದರಿಂದ ಆರಂಭವಾದ ಅವರ ಗಂಧರ್ವಾಕರ್ಷಣೆ, ಮುಂದೆ ಗಂಧರ್ವ ಕಂಪನಿ ಸೇರಿ ಅದರ ಒಡತಿಯೂ ಗಂಧರ್ವರ ಪತ್ನಿಯೂ ಆಗುವಲ್ಲಿ ಕೊನೆಕಂಡಿತು. ಈ ಗಂಧರ್ವ ವ್ಯಾಮೋಹ, ಅವರ ಬಾಳನ್ನು ಅನೇಕ ರೊಮ್ಯಾಂಟಿಕ್ ಘಟನೆಗಳಿಂದಲೂ ರಂಗಸಾಹಸಗಳಿಂದಲೂ, ಅಪವಾದ ಮತ್ತು ಯಾತನೆಗಳಿಂದಲೂ ತುಂಬಿತು.

ಗೋಹರ್ ಅಮೀರ್‌ಬಾಯಿಗಿಂತ ಎರಡು ವರ್ಷ ದೊಡ್ಡವರು. ತಂಗಿಯಂತೆ ಇವರೂ ಬಿಜಾಪುರ ಸೀಮೆಯಲ್ಲಿದ್ದ ರಂಗಭೂಮಿಯಲ್ಲಿ ಕಲಾಜೀವನ ಆರಂಭಿಸಿದವರು. ಸೋದರಮಾವ ಬೇವೂರ ಬಾದಶಾ ಮಾಸ್ತರ್, ಅಮೀರ್‌ಬಾಯಿಯಂತೆ ಗೋಹರ್ ಅವರಿಗೂ ಮೊದಲ ಹಂತದಲ್ಲಿ ಸಂಗೀತ ಕಲಿಸಿರುವ ಸಾಧ್ಯತೆಯಿದೆ. ಕೆಲವು ವೆಬ್‌ಸೈಟ್‌ಗಳಲ್ಲಿ ಗೋಹರ್ ಗದಗಿನ ಪಂಚಾಕ್ಷರಿ ಗವಾಯಿ ಹಾಗೂ ನೀಲಕಂಠ ಬುವಾ ಅವರಲ್ಲಿ ಸಂಗೀತ ಕಲಿತರೆಂದು ನಮೂದಿಸಲಾಗಿದೆ. ಗೋಹರ್ ಒಳಗಿನ ಕಲಾವಿದೆಯನ್ನು ೨೦-೩೦ರ ದಶಕಗಳಲ್ಲಿದ್ದ ಕನ್ನಡ ರಂಗಭೂಮಿ ಪರಿಸರ ರೂಪಿಸಿತೆನ್ನಬಹುದು. ಶಾಂತಕವಿ, ಶಿವಮೂರ್ತಿಸ್ವಾಮಿ ಕಣಬರಗಿಮಠ, ಚಿಕ್ಕೋಡಿ ಶಿವಲಿಂಗಸ್ವಾಮಿ, ಕಂದಗಲ್ ಹಣಮಂತರಾವ್, ಗರೂಡ ಸದಾಶಿವರಾವ್, ಶಿರಹಟ್ಟಿ ವೆಂಕೋಬರಾವ್, ಸವಣೂರಿನ ವಾಮನರಾವ್ ಮುಂತಾದ ಹಿರಿಯರು ತಮ್ಮ ನಾಟಕ ರಚನೆ, ನಟನೆ, ಗಾಯನಗಳ ಮೂಲಕ ಸೃಷ್ಟಿಸಿದ್ದ ರಂಗಭೂಮಿ ಸಂಸ್ಕೃತಿ ಆಗ ಮುಂಬೈ ಕರ್ನಾಟಕದಲ್ಲಿ ದಟ್ಟವಾಗಿತ್ತು. ಇದರ ಜತೆಗೆ ಬೀಳಗಿ ಸೋದರಿಯರು ಹುಟ್ಟಿ ಬೆಳೆದ ಬಿಜಾಪುರವು, ಜನಪದ ರಂಗಭೂಮಿಯಾದ `ಕೃಷ್ಣ ಪಾರಿಜಾತ’ದ ನೆಲೆಮನೆಯಾಗಿದ್ದು, ಮುಸ್ಲಿಂ ಕಲಾವಿದರಿಂದ ತುಂಬಿತ್ತು. ತಂಗಿಯಂತೆ ಗೋಹರರೂ ಮೊದಲ ಘಟ್ಟದಲ್ಲಿ ತಮ್ಮ ಕುಟುಂಬದ ನಾಟಕ ಕಂಪನಿಯಲ್ಲಿ ಕೆಲಸ ಮಾಡಿದಂತೆ ತೋರುತ್ತದೆ. ನಂತರ ಗದುಗಿನ ಎರಾಸಿ ಭರಮಪ್ಪನವರ `ವಾಣೀವಿಲಾಸ ಸಂಗೀತ ನಾಟಕ ಮಂಡಳಿ’ಯಲ್ಲಿ ಹಾಡುನಟಿಯಾಗಿ ಸೇರಿಕೊಂಡರು; ಕಂಪನಿಯ ಮೂರು ಮುಖ್ಯ ನಾಟಕಗಳಾದ `ಕಿತ್ತೂರು ರುದ್ರಮ್ಮ’ `ವರಪ್ರದಾನ’ `ಮಾನಾಪಮಾನ’ಗಳಲ್ಲಿ ಅವರು ನಾಯಕಿಯಾಗಿ ಅಭಿನಯಿಸಿದರು.

ಗೋಹರಜಾನ್ ಗಂಧರ್ವರನ್ನೇಅನುಕರಿಸುತ್ತಿದ್ದಳು. ಕಂಚಿನ ಕಂಠ, ಶಾಸ್ತ್ರೀಯ ಸಾಧನೆ ಮಾಡಿದ್ದರಿಂದ ಅವಳ ಪಾತ್ರದಲ್ಲಿ ಅಭಿನಯಕ್ಕಿಂತ ಹೆಚ್ಚಿನ ಒತ್ತು ಸಂಗೀತಕ್ಕೆ ಬೀಳುತ್ತಿತ್ತು. ಗೋಹರ್ `ವರಪ್ರದಾನ’ದಲ್ಲಿ ತಮ್ಮ ಹಾಡಿಕೆ ಮತ್ತು ನಟನೆಯಿಂದ ಲಲಿತೆಯ ಪಾತ್ರಕ್ಕೆ ಒಂದು ಗುರುತು ದೊರಕಿಸಿಕೊಟ್ಟಂತೆ ಕಾಣುತ್ತದೆ. `ವರಪ್ರದಾನ’ದಲ್ಲಿ ಗೋಹರ್ ನಟನೆ ನೋಡಲೆಂದು ಅನಕೃ, ವಾಣಿವಿಲಾಸ ಕಂಪನಿಯ ಕ್ಯಾಂಪುಗಳಿದ್ದ ಊರುಗಳಿಗೆ ಬರುತ್ತಿದ್ದರು ಎಂದು ಬಸವರಾಜ ಮನ್ಸೂರರು ದಾಖಲಿಸುತ್ತಾರೆ. ಕಂದಗಲ್ಲರು ಗೋಹರರ ಪಾತ್ರದ ಜೀವಂತಿಕೆಯನ್ನು ಸದಾ ನೆನೆಯುತ್ತಿದ್ದರು ಎಂದು, ಗೋಹರ್ ಅಭಿನಯ ಕಂಡಿರುವ ಕಂದಗಲ್ಲರ ಶಿಷ್ಯರಾದ ರಂಗನಟ ವಸಂತ ಕುಲಕರ್ಣಿ ಹೇಳುತ್ತಾರೆ. ಗೋಹರ್ ಅಭಿನಯಕ್ಕೆ ಸಾಕ್ಷಿಯಾಗಿರುವ ಮತ್ತೊಬ್ಬ ಪ್ರೇಕ್ಷಕರಾದ ಏಣಗಿ ಬಾಳಪ್ಪನವರ ಪ್ರಕಾರ “ಚಾಲಾಕಿನ ವೈಯಾರದ ಪಾತ್ರಗಳು ಗೋಹರಜಾನಳಿಗೆ ಹೊಂದಿಕೊಳ್ಳುತ್ತಿದ್ದವು”

ಗೋಹರ್ ಹಾಡಿದ ಹೆಚ್ಚಿನ ರಂಗಗೀತೆಗಳು ಗಂಧರ್ವರ ಶೈಲಿಯನ್ನು ಅನುಕರಣೆ ಮಾಡಲು ಕಾರಣ: ಮೊದಲನೆಯದು-ವೈಯಕ್ತಿಕವಾಗಿ ಗೋಹರರಲ್ಲಿ ಬೆಳೆಯುತ್ತಿದ್ದ ಗಂಧರ್ವ ಸೆಳೆತ. ಎರಡನೆಯದು-  ಮುಂಬೈ ಕರ್ನಾಟಕದ ರಂಗಭೂಮಿಯು, ಸಾಮಾನ್ಯವಾಗಿ ಮರಾಠಿ ರಂಗಭೂಮಿಯನ್ನು ನಿರ್ದಿಷ್ಟವಾಗಿ ಗಂಧರ್ವ ಕಂಪನಿಯನ್ನು ಆದರ್ಶ ಮಾದರಿಯನ್ನಾಗಿ ತನ್ನ ಕಣ್ಣುಮುಂದೆ ಇರಿಸಿಕೊಂಡಿದ್ದುದು. ವಾಮನರಾಯರ `ವಿಶ್ವಗುಣಾದರ್ಶ ಕಂಪನಿ’ಯಂತೂ ಮರಾಠಿ ನಾಟಕಗಳ ಕನ್ನಡ ರೂಪಗಳನ್ನು  ಪ್ರದರ್ಶಿಸುವುದಕ್ಕೆಂದೇ ಜನ್ಮತಳೆದಂತಿತ್ತು. ಗಮನಾರ್ಹವೆಂದರೆ, `ವಾಣಿವಿಲಾಸ’ ಕಂಪನಿಯು ಆರಂಭದಲ್ಲಿ ಚಿಕ್ಕೋಡಿ ಹಾಗೂ ಕಂದಗಲ್ ವಿರಚಿತ ಸ್ವತಂತ್ರ ಕನ್ನಡ ನಾಟಕಗಳನ್ನು ಪ್ರದರ್ಶಿಸಿದ್ದು ಮತ್ತು ಮೂರನೇ ನಾಟಕದ ಹೊತ್ತಿಗೆ ಅದು ಮರಾಠಿಗೆ ಹೋಗಿದ್ದು. ಈ ಒತ್ತಡಗಳು ಕನ್ನಡ ರಂಗಗಾಯನವನ್ನು ಸಹಜವಾಗಿಯೇ ಮರಾಠಿ ರಂಗ ಸಂಗೀತದ ನಕಲನ್ನಾಗಿ ಮಾಡಿದವು.

ವಾಣಿವಿಲಾಸ ಕಂಪನಿಯು ಗುಲಬರ್ಗ ಕ್ಯಾಂಪಿನಲ್ಲಿದ್ದಾಗ ಕಂಪೆನಿಯ ಆಧಾರಸ್ತಂಭದಂತಿದ್ದ ಗೋಹರ್‌ಜಾನ್ ಕಂಪೆನಿ ಬಿಟ್ಟು ಚಲನಚಿತ್ರದಲ್ಲಿ ಅಭಿನಯಿಸಲು ಮುಂಬಯಿಗೆ ಹೋದಳು. ಗೋಹರ್ ಕನ್ನಡ ರಂಗಭೂಮಿಯಲ್ಲಿ ಇದ್ದುದಕ್ಕೆ ಸಿಗುವ ಕುರುಹುಗಳೆಂದರೆ, ಅವರ ಅಭಿನಯವನ್ನು ಕಣ್ಣಾರೆ ನೋಡಿರುವ ಪ್ರೇಕ್ಷಕರ ನೆನಪುಗಳು ಹಾಗೂ ಅವರು ಹಾಡಿರುವ ರಂಗಗೀತೆಗಳು. `ಕಿತ್ತೂರು ರುದ್ರಮ್ಮ’ ನಾಟಕದಲ್ಲಿ ಗೋಹರ್ ಹಾಡಿರುವ `ನಾ ಪೇಳುವೆ ನಿನಗೊಂದುಪಾಯ, ತರವಲ್ಲ ನಿನಗೆ ಅಪಮಾನ ಮರುಳೆ ಆತ್ಮಹತ್ಯೆಯಿದು ಮಹಾಪಾಪವೆ’ ಎಂಬ ರಂಗಗೀತೆ, ಕರ್ನಾಟಕ ಕಾಫಿ ರಾಗದಲ್ಲಿದೆ. ಬಾಗೇಶ್ರೀರಾಗದಲ್ಲಿ `ಪ್ರಿಯಕರ ಮಮಬಾಲಾ ವಿಮಲಯುತ ಪೇಳೆ ಸಖಾ ಸದಾ ದೇಹಿ ನಾ, ನೀ ಯಶವಾ ಪಡೆಯೊ ಖ್ಯಾತಾ ಮಧುರ ಪೆಸರ ನುಡಿ ಶಾಂತಿ ಸುಗುಣ’ ಎಂಬ ಗೀತೆ(ಎಚ್‌ಎಂವಿ) ಅವರ ಜನಪ್ರಿಯತೆಯನ್ನು ಹೆಚ್ಚಿಸಿತು. ಕೊಲಂಬಿಯಾ ಕಂಪನಿಯ ರೆಕಾರ್ಡುಗಳಿಗಾಗಿ ಗೋಹರ್ ಹಾಡಿದ ಕನ್ನಡ ರಚನೆಗಳೆಂದರೆ, `ನಾ ಪೇಳುವೆ ನಿನಗೊಂದುಪಾಯ’, `ಕರುಣಾಕರ ಮಾಧವ’ ಹಾಗೂ `ಭುವನ ಭಾಗ್ಯವೇಶ್ರೀರಾಮಾ’. ಮೊದಲ ಎರಡು ರಚನೆಗಳು ಕರ್ನಾಟಕಿ ಕಾಫಿ ರಾಗದಲ್ಲಿದ್ದರೆ, ಕೊನೆಯದು ಕರ್ನಾಟಕಿ ರಾಗದಲ್ಲಿದೆ. ಈ ಹಾಡುಗಳಸಾಂಪ್ರದಾಯಿಕ ಶೈಲಿಯು, ೩೦ರ ದಶಕದಲ್ಲಿ ಕನ್ನಡ ರಂಗಭೂಮಿಯ ಮೇಲಿದ್ದ ಮರಾಠಿ ರಂಗಭೂಮಿಯ ದಟ್ಟ ಪ್ರಭಾವವನ್ನು ಸೂಚಿಸುತ್ತದೆ.

ಗೋಹರ್‌ಬಾಯಿ ಅವರ ಗಂಧರ್ವ ವ್ಯಾಮೋಹಕ್ಕೆ ಅವರು ನಟಿಸಿ ಹಾಡಿದ `ಮಾನಾಪಮಾನ’ ನಾಟಕವು ನಾಂದಿ ಹಾಡಿತೆನ್ನಬಹುದು. ಅವರು ಗಂಧರ್ವ ಕಂಪನಿಯನ್ನು ಪ್ರವೇಶಿಸುವ ಮುನ್ನ ಮುಂಬೈ ಚಿತ್ರರಂಗದ ಘಟ್ಟವನ್ನು ಹಾಯಬೇಕಾಯಿತು. ೧೯೩೨ರ ಸುಮಾರಿಗೆ ಮುಂಬೈಗೆ ಹೋಗಲು ನಾನಾ ಚಾಫೇಕರ್ ಕಾರಣರಾದರು. ಆದರೆ ಅವರನ್ನು ಸಿನಿಮಾ ಲೋಕಕ್ಕೆ ಪರಿಚಯಿಸಲು ಗಂಧರ್ವ ಕಂಪನಿಯ ನಟ ಕೃಷ್ಣರಾವ್ ಚೋಣ್ಕರ್ ನೆರವಾದರು. ಶಾರದಾ ಫಿಲಮ್ಸ್ ಕಂಪನಿಯ `ರಾಸವಿಲಾಸ'(೧೯೩೨) ಗೋಹರರ ಮೊದಲ ಚಿತ್ರ. ಇದರಲ್ಲಿ ಅವರು ರಾಧೆಯಾಗಿಯೂಕೃಷ್ಣರಾವ್ ಚೋಣ್ಕರ್ ಕೃಷ್ಣನಾಗಿಯೂ ಪಾತ್ರ ಮಾಡಿದ್ದಾರೆ. ಬಾಪುಬಾಯಿಯವರ ಚಿತ್ರಸಂಸ್ಥೆಯಲ್ಲಿ ಮುಖ್ಯ ನಟಿಯಾಗಿದ್ದ  ಗೋಹರ್ ತಿಂಗಳಿಗೆ ೩೦೦ ರೂ.ಗಳಷ್ಟು ಸಂಭಾವನೆ ಪಡೆಯುತ್ತಿದ್ದರು. ಅವರು ನಾನುಭಾಯಿ ವಕೀಲ್ ನಿರ್ದೇಶಿತ ಚಿತ್ರಗಳಲ್ಲಿ ಹೆಚ್ಚು ಕೆಲಸ ಮಾಡಿದರು. ೧೯೪೫-೫೦ರ ಕಾಲಾವಧಿಯಲ್ಲಿ ಅಮೀರ್‌ಬಾಯಿ, ನಾನುಭಾಯಿ ವಕೀಲರ ನಿರ್ದೇಶನದಲ್ಲಿ ಕುಲಕಲಂಕ್, ಅರಬ್ ಕ ಸಿತಾರಾ, ಕಿಸ್ಮತ್ ಕಾ ಸಿತಾರ, ಜಾದೂಯಿ ಬಾನ್ಸರಿ, ರತನ್ ಮಂಜರಿ, ಹಿಂದ್‌ಮೇಲ್, ಜನ್ಮಾಷ್ಟಮಿ, ಲವಕುಶ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು. ಕುತೂಹಲಕರ ಸಂಗತಿಯೆಂದರೆ, ಬೀಳಗಿ ಸೋದರಿಯರು ಒಂದೇ ಚಿತ್ರದಲ್ಲಿ ಕೆಲಸ ಮಾಡಿದ ನಿದರ್ಶನಗಳು ಸಿಕ್ಕದಿರುವುದು.

ಗೋಹರ್ ನಟಿಸಿದ ಚಿತ್ರಗಳು ಸುಮಾರು ಹದಿನೈದರಷ್ಟಿವೆ. ಮುಂಬೈನ ನವಭಾರತ್ ಮೂವಿ ಟೋನ್‌ನವರ `ಗೋಲ್‌ನಿಶಾನ್’ನಲ್ಲಿ ಗೋಹರ್ `ಹೇ ಅಂಬಿಕಾ ಜಗದಂಬೆ’ ಎಂಬ ಸುಶ್ರಾವ್ಯವಾದ ಭಜನೆಯನ್ನು ಹಾಡಿರುವರು. ಗೋಹರ್ ನಟಿಸಿದ ಸಿನಿಮಾಗಳು ಬಹಳ ಯಶಸ್ಸು ಪಡೆದಂತೆ ತೋರುವುದಿಲ್ಲ. ಗಂಧರ್ವಮೋಹಕ್ಕೆ ಸಿಲುಕಿದ ಅವರು ಚಿತ್ರರಂಗಕ್ಕೆ ಗಡಿಬಿಡಿಯಲ್ಲಿ ವಿದಾಯ ಹೇಳಿ ಗಂಧರ್ವ ಕಂಪನಿಯತ್ತ ಮುಖಮಾಡಿದರು.

`ಕಾನ್ಹೋಪಾತ್ರ’ ನಾಟಕದಲ್ಲಿ ವಿಠಲನ ಭಕ್ತೆಯಾದ ಕಾನ್ಹೋಳ ಪಾತ್ರವನ್ನು ಸ್ವತಃ ಗಂಧರ್ವರೇ ಮಾಡುತ್ತ ಹಾಡಿದ ರಂಗಗೀತೆಗಳು ಆಗ ಪ್ರಖ್ಯಾತವಾಗಿದ್ದವು. ಅವುಗಳಲ್ಲಿ `ಅಗ ವೈಕುಂಟಿ ಚ್ಯಾ ರಾಯಾ’ `ಪತಿತ ಪಾವನಾ’ ಗೀತೆಗಳು ಮುಖ್ಯವಾದವು. ಕೊಲಂಬಿಯಾ ಕಂಪನಿ ಹೊರತಂದಿದ್ದ ಈ ರಂಗಗೀತೆಗಳ ಧ್ವನಿಮುದ್ರಿಕೆಗಳನ್ನು ಕೇಳಿಕೇಳಿ ಗಂಧರ್ವ ಶೈಲಿಯನ್ನು ರೂಢಿಸಿಕೊಂಡಿದ್ದ ಗೋಹರ್, ಈ ಗೀತೆಗಳನ್ನು ಗಂಧರ್ವರ ಶೈಲಿಯಲ್ಲಿಯೇ ಹಾಡಿ, ಎಚ್‌ಎಂವಿ ರೆಕಾರ್ಡನ್ನು ಹೊರತಂದರು.

ತಮ್ಮ ಹಾಡಿಕೆಯನ್ನು ಗಾಯಕಿಯೊಬ್ಬಳು ಅನುಕರಿಸಿ ರೆಕಾರ್ಡನ್ನು ಹೊರತಂದಿರುವುದರ ವಿರುದ್ಧ ಬಾಲಗಂಧರ್ವರು ಕೋರ್ಟಿನಲ್ಲಿ ಕೇಸು ಮಾಡಿದರಂತೆ; `ಕಾನ್ಹೋಪಾತ್ರ’ದ ರಚನೆಗಳು ಪರಂಪರೆಯಿಂದ ಬಂದವು; ರಾಗ ಧಾಟಿಗಳಿಗೆ ಒಬ್ಬರ ಏಕಸ್ವಾಮ್ಯ ಇಲ್ಲ ಎಂದು ಅವರ ದೂರನ್ನು ಕೋರ್ಟು ರದ್ದುಗೊಳಿಸಿತಂತೆ. ಆದರೆ ಮರಾಠಿ ಪ್ರೇಕ್ಷಕರು ಗಂಧರ್ವರ ದನಿಯನ್ನು ಹೋಲುವ ಇನ್ನೊಂದು ಹೆಣ್ದನಿಯನ್ನು ಇಷ್ಟಪಟ್ಟರು ಮತ್ತು ಗೋಹರರಿಗೆ `ಪ್ರತಿಗಂಧರ್ವ’ ಎಂಬ ಹೆಸರನ್ನೂ ಕೊಟ್ಟರು.

ಹಳೆಯ ಪತ್ರಿಕೆಗಳಲ್ಲಿ ಸಿಗುವ ಫೋಟೊಗಳಲ್ಲಿ ಗೋಹರ್, ಕೈಯಲ್ಲಿ ತಂಬೂರಿ ಹಿಡಿದು ತಲೆಯ ಮೇಲೆ ಸೆರಗು ಹೊದ್ದು, ಗ್ರಾಮೊಫೋನ್ ಹಾಡಿಕೆಗಾಗಿ ಡಿಸ್ಕ್ಕಟ್ ಎದುರು ಹಾಡುತ್ತಿದ್ದಾರೆ. ಅವರ ಬದಿಯಲ್ಲಿ ಮುಂಭಾಗದಲ್ಲಿ ಕಂಪನಿಯ ಮಾಲೀಕನು ದೊಡ್ಡದೊಂದು ಕುರ್ಚಿಯಲ್ಲಿ ಕುಳಿತಿರುವನು. ಗೋಹರ್ ಅವರ ಮರಾಠಿ, ಉರ್ದು, ಕನ್ನಡ, ಹಿಂದಿ ಗೀತೆಗಳು ಒಂದೇ ರೆಕಾರ್ಡಿನಲ್ಲಿ ಇರುವುದುಂಟು. ಅವರು ಬೇರೆಬೇರೆ ಗ್ರಾಮೊಫೋನ್ ಕಂಪನಿಗಳಿಗೆ ಮರಾಠಿ, ಉರ್ದು, ಬಂಗಾಳಿ ಭಾಷೆಗಳಲ್ಲಿ  ಹಾಡಿದರು. ಉರ್ದುವಿನಲ್ಲಿ `ರಾಜಾಕೆ ಚಮನ್‌ಮೆ’ ಎಂದು ಆರಂಭವಾಗುವ ಕೆಲವು ಗಜಲುಗಳನ್ನು ಅವರು ಕೊಲಂಬಿಯಾ ಕಂಪನಿಗಾಗಿ ಹಾಡಿದರು; ಅವರ `ಅಗ ವೈಕುಂಠಿ ಚಾ ರಾಯಾ’ ಅಭಂಗದ ಗಾನತಟ್ಟೆ ಭರಾಟೆಯಿಂದ ಮಾರಾಟವಾಯಿತು. `ಪತಿತಾ ಪಾವನ’ ಅಭಂಗ ಹಾಗೂ `ಸಬಕಲಿಯಾ’ ಗಜಲ್ ಒಂದೇ ರಾಗ ಮತ್ತು ಧಾಟಿಯಲ್ಲಿವೆ.`ರಾಜಾಕೆ ಚಮನಮೆ’ `ಖಬರ್ ತುಮಾರಿ ಹಮನೆ’ ಠುಮ್ರಿ/ಗಜಲ್‌ಗಳನ್ನು ಕೇಳುವಾಗ ಕಲ್ಕತ್ತೆಯ ಗೋಹರ್‌ಜಾನರ ಪ್ರಭಾವ ಎದ್ದು ಕಾಣುತ್ತದೆ. ಗೋಹರರದು ಅನುಕರಣ ಪ್ರತಿಭೆ. ಅವರ ಮರಾಠಿ ರಂಗಗೀತೆಗಳು ಗಂಧರ್ವರನ್ನು ಅನುಕರಿಸಿದರೆ, ಠುಮ್ರಿ, ಗಜಲುಗಳು ಗೋಹರ್‌ಜಾನರನ್ನು ಅನುಕರಿಸಿರುವಂತೆ ತೋರುತ್ತದೆ. ಗೋಹರ್‌ಗೆ ಹೋಲಿಸಿದರೆ ಅಮೀರ್‌ಬಾಯಿ ಹಿಂದೆ ಯಾರ ನೆರಳೂ ಕಾಣುವುದಿಲ್ಲ. ಅವರ ಹಾಡಿಕೆ ಸ್ವಂತಿಕೆಯ ಮೇಲೆ ನಿಂತಿರುವುದು ಕಾಣುತ್ತದೆ. ಅಮೀರ್ ನುಣ್ದನಿಗೆ ಹೋಲಿಸಿದರೆ ಗೋಹರರದು ಚೂಪಾದ ಸ್ವರ. ಹಾಡಿಕೆಯಲ್ಲೂ ವೈವಿಧ್ಯವಿಲ್ಲ. ಇದಕ್ಕೆ ಕಾರಣ, ರಂಗಭೂಮಿ ತರಬೇತಿಯೂ ಇದ್ದೀತು. ಸ್ಪರ್ಧಾತ್ಮಕ ಉದ್ಯಮವಾಗಿದ್ದ ಸಿನಿಮಾದಲ್ಲಿ ಇರುವ ಪ್ರಯೋಗಗಳು ರಂಗಭೂಮಿಯಲ್ಲಿ ಕಡಿಮೆಯಿರುತ್ತವೆ. ಇಲ್ಲವೇ ಅವು ನಿಧಾನವಾಗಿ ನಡೆಯುತ್ತವೆ. ಬಿಸ್ವಾಸ್, ನೌಶಾದ್, ಖೇಮಚಂದರಂತಹ ಪ್ರತಿಭಾವಂತ ಸಂಗೀತ ನಿರ್ದೇಶಕರು ಅಮೀರ್ ಪ್ರತಿಭೆಯನ್ನು ಬಳಸಿಕೊಂಡು ಅದ್ಭುತ ಹಾಡುಗಳನ್ನು ಮಾಡಿದರು. ಗೋಹರ್ ಕಂಠಕ್ಕೆ ಇಂತಹ ಈ ಅವಕಾಶ ಸಿಕ್ಕಿದ್ದು ಕಡಿಮೆ. ಮರಾಠಿ ರಂಗಭೂಮಿಯ ಅದರಲ್ಲೂ ಗಂಧರ್ವರ ಚಾಲುಗಳನ್ನು ಕುರಿತ ಅವರ ವ್ಯಾಮೋಹವು, ಸ್ವಂತ ಪ್ರತಿಭೆಯನ್ನು ಪ್ರಯೋಗಗಳಿಗೆ ಒಡ್ಡಿಕೊಂಡು ನೋಡಲು ಅಡ್ಡಿಯಾಯಿತೆನಿಸುತ್ತದೆ. ಮೇಲಾಗಿ ಅಮೀರ್‌ಬಾಯಿ ಅವರ ಅರೆಶಾಸ್ತ್ರೀಯ ಲಘುಸಂಗೀತದ ಹಾಡಿಕೆಯ ಮುಂದೆ ಹೆಚ್ಚು ಶಾಸ್ತ್ರೀಯ ಹಿನ್ನೆಲೆಯಿಂದ ಹಾಡುತ್ತಿದ್ದ ಗೋಹರ್ ಗಾಯನ ಬಹುಶಃ ಜನಪ್ರಿಯವಾಗಲಿಲ್ಲ.

೨೦೧೧ರಲ್ಲಿ ಮುಂಬೈನಲ್ಲಿ ರೆಕಾರ್ಡ್ ಕಲೆಕ್ಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಕಾರ್ಯದರ್ಶಿ ಸುರೇಶ್ ಚಾಂದವಣ್ಕರ್, ಮುಂಬೈ ಕರ್ನಾಟಕ ಸಂಘದಲ್ಲಿ ಗೋಹರ್ ಗಂಧರ್ವರ ಹೆಸರಿನಲ್ಲಿ ಒಂದು ದೃಶ್ಯವಾಕ್ ಕಾರ್ಯಕ್ರಮ ನಡೆಸಿಕೊಟ್ಟರು. ಅದರ ಹೆಸರು `ಜನ್ಮಶತಾಬ್ದಿ ವಾ ಉಪೇಕ್ಷಾ’. ಈ ಕಾರ್ಯಕ್ರಮದಲ್ಲಿ ಒಂದೇ ಹಾಡನ್ನು ಗೋಹರ್ ಹಾಗೂ ಗಂಧರ್ವರು ಹೇಗೆ ಬೇರೆಬೇರೆಯಾಗಿ ಹಾಡಿದ್ದಾರೆ ಎಂದು ತೋರಿಸಿದರು. ಗೋಹರ್ ಗಂಧರ್ವರನ್ನು ಅನುಕರಿಸಿರುವುದು ನಿಜ. ಸೂಕ್ಷ್ಮವಾಗಿ ನೋಡಿದರೆ, ಗಂಧರ್ವರ ಹಾಡು ಗೋಹರ್ ಅವರ ಪ್ರತಿಭೆಯೊಳಗೆ ರೂಪಾಂತರಗೊಂಡು ಹೊಸದೊಂದು ಆಕಾರ ತಳೆದಂತೆ ಕಾಣುತ್ತವೆ. ಆ ಆಕಾರದ ಬೇರುಗಳು ಕನ್ನಡ ರಂಗಭೂಮಿ, ಜನಪದ ಗಾಯನಗಳಲ್ಲಿಯೂ ಇರುವಂತೆ ತೋರುತ್ತವೆ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *