ಮೌಢ್ಯದ ನರಕದಲ್ಲಿ ಗೊಲ್ಲ ಮಹಿಳೆಯರು-ಡಾ. ವಸುಂಧರಾ ಭೂಪತಿ

ಆಸ್ಪತ್ರೆಯಲ್ಲಿ ಸ್ವಚ್ಛವಾದ ಪರಿಕರಗಳನ್ನು ಉಪಯೋಗಿಸಿ ಮಾಡಿಸಿದ ಹೆರಿಗೆಯಲ್ಲಿಯೂ ಕೆಲವು ಬಾರಿ ಸೋಂಕು ಕಾಣಿಸಿಕೊಳ್ಳುವುದುಂಟು. ಅಂತಹುದರಲ್ಲಿ ಯಾವುದೇ ಹೈಜಿನಿಕ್ ಇಲ್ಲದ ಪರಿಸರ, ಯಾವುದೇ ವೈದ್ಯಕೀಯ ಪರಿಸರಗಳಿಲ್ಲದ ಸ್ಥಿತಿಯಲ್ಲಿ ಹೆರಿಗೆಯಾಗುವುದೆಂದರೆ?

 

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಿಂದ ’ಮಹಿಳೆ ಮತ್ತು ವಿಜ್ಞಾನ’ ಯೋಜನೆಯಡಿ ಒಂದು ಕಾರ್ಯಾಗಾರ ಶಿರಾ ಹತ್ತಿರದ ಬೋರನ ಕಣಿವೆಯಲ್ಲಿ ಏರ್ಪಡಿಸಿದ್ದೆವು. ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಿಂದ ಮಹಿಳೆಯರು ಪಾಲ್ಗೊಂಡಿದ್ದರು. ಅಲ್ಲಿ ಬಹಳಷ್ಟು ಚರ್ಚೆಯಾದ ವಿಷಯವೆಂದರೆ ಮೂಢನಂಬಿಕೆಗಳಿಗೆ ಮಹಿಳೆಯರೇ ಯಾಕೆ ಟಾರ್ಗೆಟ್ ಆಗ್ತಾರೆ ಎಂಬುದು. ಹೆಂಡತಿಯ ಹೆಸರು ಲಕ್ಷ್ಮಿ ಅಂತ ಇರುವವರ ಗಂಡಂದಿರಿಗೆ ಗಂಡಾಂತರ ಕಾದಿದೆಯೆಂದು ವೀರಪ್ಪನ್, ಜನಾರ್ಧನ ರೆಡ್ಡಿಯವರ ಉದಾಹರಣೆ ಕೊಟ್ಟು ಲಕ್ಷ್ಮಿ ಅಂತ ಹೆಸರಿರುವವರಿಗೆ ಸುಮ್ಮನೆ ಆತಂಕವನ್ನು ಸೃಷ್ಟಿಸುವುದು… ಇಂತಹ ಗಂಡಸರನ್ನು ಮದುವೆಯಾಗಿ ಗಂಡಾಂತರಕ್ಕೆ ಒಳಗಾದವರು ಆ ಪತ್ನಿಯರೇ ಅಲ್ಲವೆ? ಆಶ್ಚರ್ಯವೆಂದರೆ ಅಲ್ಲಿ ಬಂದಿದ್ದ ಎಲ್ಲಾ ಮಹಿಳೆಯರೂ ಮೂಢನಂಬಿಕೆಗಳಿಗೆ ಬಲಿಯಾಗಲು ಸಿದ್ಧರಿಲ್ಲ. ಅವರೆಲ್ಲ ಒಮ್ಮತದಿಂದ ಮೂಢನಂಬಿಕೆಗಳ ವಿರುದ್ಧ ಹೋರಾಡುತ್ತೇವೆ ಎಂದು ಒಕ್ಕೊರಲಿನಿಂದ ಹೇಳಿದರು. ನಾವು ಸಭೆ ಮುಗಿಸುವ ಹೊತ್ತಿಗೆ ಒಂದು ಹುಡುಗಿ ಓಡುತ್ತಾ ಬಂದು ’ಮೇಡಂ ನನಗೆ ಮಾತನಾಡಲು ಅವಕಾಶ ಮಾಡಿಕೊಡಿ’ ಎಂದಳು. “ಆಯ್ತು, ಸ್ವಲ್ಪ ಸುಧಾರಿಸಿಕೊಂಡು ಮಾತನಾಡು’ ಎಂದಾಗ ’ ನಾನು ಗೊಲ್ಲರ ಜನಾಂಗದಲ್ಲಿ ಹುಟ್ಟಿದವಳು. ನಮ್ಮಲ್ಲಿ ಕೆಲವು ವಿಶಿಷ್ಟ ಆಚರಣೆಗಳಿವೆ. ಋತುಸ್ರಾವವಾದಾಗ ಮತ್ತು ಹೆರಿಗೆಯಾದಾಗ ಮಹಿಳೆಯರನ್ನು ಮನೆಯಿಂದ ಹೊರಗೆ ಇರಿಸುತ್ತಾರೆ. ಅಲ್ಲಿ ಯಾರೂ ಇರುವುದಿಲ್ಲ. ಈಗ ನೀವೆಲ್ಲ ಬಂದರೆ ಒಂದು ಕಡೆ ಕರೆದೊಯ್ಯುತ್ತೇನೆ. ಹೆರಿಗೆಯಾಗ್ತಿದೆ. ಏನು ನಡೀತಿದೆ ಎನ್ನೋದನ್ನು ನೀವು ನೋಡಬಹುದು’ ಎಂದಳು. ನಾವು ತಡಮಾಡದೆ, ’ಆಯ್ತು ಬಾಮ್ಮಾ ಹೋಗೋಣ’ ಎಂದು ಸಜ್ಜಾದೆವು. ಊರಿಂದ ೩-೪ ಕಿಲೋಮೀಟರ್ ದೂರದಲ್ಲಿ ಚಿಕ್ಕ ಗುಡಿಸಲು ಅಂದರೆ ಅದಕ್ಕೆ ಗುಡ್ಲು ಎನ್ನುತ್ತಾರೆ. ಹೊರಗೆ ಏಳೆಂಟು ವರ್ಷದ ಚಿಕ್ಕ ಹೆಣ್ಣು ಮಗುವೊಂದು ಕೈಯಲ್ಲಿ ಕುಡುಗೋಲು ಹಿಡಿದು ನಿಂತಿತ್ತು. ನನಗೆ ಆ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಚಿಕ್ಕ ಮಕ್ಕಳು ಕುಡುಗೋಲು ಕಂಡರೆ ಹೆದರುತ್ತವೆ.

“ಯಾಕೆ ಮಗು, ಕೈಯಲ್ಲಿ ಕುಡುಗೋಲು?”

“ ಒಳಗಡೆ ಅಕ್ಕನಿಗೆ ಹೆರಿಗೆಯಾಗ್ತಿದೆ. ಹೊಕ್ಕು ಬಳ್ಳಿ ಕತ್ತರಿಸಲು ಇದು ಬೇಕು” ಎಂದು ಕುಡುಗೋಲು ತೋರಿಸಿದಳು.

“ಒಳಗಡೆ ಯಾರಾದ್ರೂ ಇದಾರಾ?”

“ಅಕ್ಕ ಒಬ್ಬಳೇ ಇದಾಳೆ”

“ ಒಬ್ಬಳೇ! ಹೆರಿಗೆ! ಹೊಕ್ಕು ಬಳ್ಳಿ ಕತ್ತರಿಸಿದಾಗ ರಕ್ತ ಬರುತ್ತದಲ್ಲ. ಅದನ್ನು ಹೇಗೆ ನಿಲ್ಲಿಸುತ್ತಾಳೆ?’

“ಸೀಮೆಣ್ಣೆ ಬುಡ್ಡಿ ದೀಪಕ್ಕೆ ಹಿಡೀತಾಳೆ” ಎಂದಳು.

ನನಗೆ ಒಂದು ಕ್ಷಣ ಮೈ ಜುಂ ಎಂದಿತು. ಹೆರಿಗೆಯಾಗುತ್ತಿರುವ ಮಹಿಳೆಯೊಬ್ಬಳೇ ತಾನೇ ಅಂತಹ ನೋವಿನ ಕ್ಷಣದಲ್ಲಿಯೂ ತನ್ನ ಹೆರಿಗೆ ತಾನೇ ಮಾಡಿಕೊಳ್ಳಬೇಕು. ಏನಾದರೂ ಆದರೆ ಏನು ಗತಿ? ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು. ಆ ಕುಡಗೋಲು ತುಕ್ಕು ಹಿಡಿದಿದ್ದರೆ ಟೆಟನಸ್ ಕೂಡ ಆಗಬಹುದು, ಎಷ್ಟೋ ಬಾರಿ ಇಂತಹ ಸಂದರ್ಭಗಳಲ್ಲಿ ತಾಯಿ ಸಾಯಬಹುದು, ಮಗು ಸಾಯಬಹುದು. ಇಬ್ಬರಿಗೂ ಅನಾಹುತವಾಗಬಹುದು. ರಕ್ತ ಸ್ರಾವ ಹೆಚ್ಚಾಗಿ ಜೀವಕ್ಕೆ ಅಪಾಯವಾಗಬಹುದು. ಹೀಗೊಮ್ಮೆ ಗೊಲ್ಲರ ಹಟ್ಟಿಯಲ್ಲಿ ಹೆರಿಗೆಯಾಗಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆದು ಸಾವಿಗೀಡಾದದ್ದು ಪತ್ರಿಕೆಯಲ್ಲಿ ವರದಿಯಾದದ್ದು ನೆನಪಾಯಿತು. ಸ್ವಾತಂತ್ರ್ಯ ಬಂದು ಆರೂವರೆ ದಶಕಗಳು ಕಳೆದರೂ ನಮ್ಮ ಮಹಿಳೆಯರ ಪರಿಸ್ಥಿತಿ ಅತಿ ಶೋಚನೀಯವಾಗಿರುವುದು ಎಂತಹ ದುರಂತ! ಈ ಕಾರಣಕ್ಕಾಗಿಯೇ ಇವತ್ತಿಗೂ ಭಾರತದಲ್ಲಿ ಹೆರಿಗೆಯ ಸಂದರ್ಭದಲ್ಲಿ ಸಾಯುವಂತಹ ಶಿಶುಗಳು, ತಾಯಂದಿರ ಸಂಖ್ಯೆ ಇನ್ನೂ ಇಳಿಮುಖವಾಗಿಲ್ಲ. ಆ ಹೆರಿಗೆಯಾದ ತಾಯಿಯ ವಯಸ್ಸು ೧೮ ಮೀರಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛವಾದ ಪರಿಕರಗಳನ್ನು ಉಪಯೋಗಿಸಿ ಮಾಡಿಸಿದ ಹೆರಿಗೆಯಲ್ಲಿಯೂ ಕೆಲವು ಬಾರಿ ಸೋಂಕು ಕಾಣಿಸಿಕೊಳ್ಳುವುದುಂಟು. ಅಂತಹುದರಲ್ಲಿ ಯಾವುದೇ ಹೈಜಿನಿಕ್ ಇಲ್ಲದ ಪರಿಸರ, ಯಾವುದೇ ವೈದ್ಯಕೀಯ ಪರಿಸರಗಳಿಲ್ಲದ ಸ್ಥಿತಿಯಲ್ಲಿ ಹೆರಿಗೆಯಾಗುವುದೆಂದರೆ? ಕಲ್ಪನೆಗೂ ದಕ್ಕದ ಸಂಗತಿ ಎನಿಸಿದರೂ ಸತ್ಯ. ಇಂತಹ ಸತ್ಯವನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟ.

ಈ ಸಂದರ್ಭದಲ್ಲಿ ನನಗೆ ಪ್ರತಿಷ್ಠಿತ ಆಸ್ಪತ್ರೆಯ ನೆನಪಾಯಿತು. ಅಲ್ಲಿ ಹೆರಿಗೆ ಒಂದು ಪ್ಯಾಕೇಜ್. ದಿನ ತುಂಬಿದ ಗರ್ಭಿಣಿ ಆಸ್ಪತ್ರೆಯಲ್ಲಿ ಸೇರಿಸಿದ ಕ್ಷಣದಿಂದ ಹೆರಿಗೆಯಾದ ಮೂರು ದಿನಗಳವರೆಗೆ ಜೊತೆಗೆ ಯಾರೂ ಇರದಿದ್ದರೂ ಆಸ್ಪತ್ರೆಯವರೇ ಎಲ್ಲವನ್ನೂ ಆರೈಕೆ ಮಾಡುತ್ತಾರೆ. ನಾರ್ಮಲ್ ಹೆರಿಗೆಗೆ ತಗಲುವ ವೆಚ್ಚ ಎಷ್ಟು ಗೊತ್ತೆ? ಕೇವಲ ಒಂದು ಲಕ್ಷ! ಅದೇ ಸಿಸೇರಿಯನ್ ಆದರೆ, ಎಷ್ಟಿರಬಹುದು ಲೆಕ್ಕ ಹಾಕಿ. ಈ ಎರಡೂ ಉದಾಹರಣೆಗಳು ನಮ್ಮ ದೇಶದ ವೈರುಧ್ಯಗಳು. ವಿಜ್ಞಾನ – ತಂತ್ರಜ್ಞಾನದಲ್ಲಿ ಬೆಳವಣಿಗೆ ಹೊಂದಿದ್ದೇವೆ, ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿಕೊಳ್ಳುವವರು ನಾಚಿಕೆ, ಅವಮಾನದಿಂದ ಕುಗ್ಗಬೇಕಾದ ಸಂಗತಿಗಳೇ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *