ಗೆಲ್ಲುವ ಮುನ್ನ ನಮ್ಮ ಹುಡುಗಿಯರು ಏನೇನನ್ನು ಸೋಲಿಸಿದರು! – ಕಲ್ಯಾಣಿ
ಏಷ್ಯನ್‍ಗೇಮ್ಸ್‍ನಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆಯನ್ನು ಇಡೀ ದೇಶವೇ ಬೆರಗಿನಿಂದ ನೋಡುತ್ತಿದೆ. ಕ್ರೀಡಾಂಗಣಕ್ಕೆಕಾಲಿಡುವ ಮುನ್ನ, ಕೊರಳಿಗೆ ಪದಕ ಧರಿಸುವ ಮುನ್ನ ನಮ್ಮ ಹುಡುಗಿಯರು ಒದ್ದು ಸೋಲಿಸಿದ್ದು ಏನೇನನ್ನು? ಗೆದ್ದು ಮಣಿಸಿದ್ದು ಯಾರ್ಯಾರನ್ನು? ಈ ವಿಷಯಕೈಗೆತ್ತಿಕೊಂಡು ಅನೀಶ್ ಶರ್ಮ ಎಂಬುವರು ಮಾಡಿದ ವಿಶ್ಲೇಷಣೆÂ ಸಾಮಾಜಿಕ ಮಾಧ್ಯಮದಲ್ಲಿ ಸಾಂಕ್ರಾಮಿಕವಾಗಿ ಹರಿದಾಡುತ್ತಿದೆ.
ಅಸಮಾನತೆಯೇ ಅಂತಃಸತ್ವ ಎಂಬಂತಿರುವ ನಮ್ಮ ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಯಾವ ವಿಚಾರದಲ್ಲೂ ಗಂಡುಮಕ್ಕಳಿಗಿರುವ ಅನುಕೂಲ, ಪ್ರೋತ್ಸಾಹ ಮತ್ತು ಸ್ವಾತಂತ್ರ್ಯ ಇರುವುದಿಲ್ಲ. ಏನನ್ನಾದರೂ ಸಾಧಿಸಬೇಕಾದರೆ ಅದಕ್ಕೆ ಮುನ್ನ ಅವರು ಹಲವಾರು ಅಡೆತಡೆಗಳನ್ನು ಸೋಲಿಸಬೇಕಾಗುತ್ತದೆ. ಹೆಣ್ಣುಮಕ್ಕಳಿಗೆ ಮೊದಲು ಹುಟ್ಟುವ ಹಕ್ಕಾದರೂ ಇರುತ್ತಿತ್ತು. ಗರ್ಭದಲ್ಲೇ ಭ್ರೂಣದ ಲಿಂಗ ಪತ್ತೆ ಮಾಡುವಷ್ಟು ತಂತ್ರಜ್ಞಾನ ಮುಂದುವರಿದ ಮೇಲೆ, ಗರ್ಭದಲ್ಲೇ ಹೆಣ್ಣನ್ನು ಹೊಸಕಿ ಹಾಕುತ್ತ ಹುಟ್ಟುವ ಹಕ್ಕನ್ನೂ ಕಸಿದುಕೊಳ್ಳಲಾಗಿದೆ. `ಹೆಣ್ಣು ಹುಟ್ಟುವುದು ಬೇಡ’ ಅನ್ನುವ ಕೆಟ್ಟ ಮನೋಭಾವವನ್ನು ಅವಳು ಗರ್ಭದಲ್ಲಿದ್ದಾಗಲೇ ಸೋಲಿಸಿ ಹುಟ್ಟಬೇಕು; ಅಕಸ್ಮಾತ್ ಹುಟ್ಟುವ ಅವಕಾಶ ಪಡೆದರೆ ಮುಂದಿನ ಜೀವನದಲ್ಲಿ ಹೆಣ್ಣು ಎದುರಿಸಬೇಕಾದ ಸವಾಲುಗಳಿಗೆ ಲೆಕ್ಕವಿಲ್ಲ.
ಹಾಗಿದ್ದಮೇಲೆ ಪದಕ ಗೆದ್ದ ಹೆಣ್ಣುಮಕ್ಕಳು ಅದಕ್ಕೆ ಮೊದಲು ಏನೇನನ್ನು ಸೋಲಿಸಿದರು? `ಇದು ಹೆಣ್ಣುಮಗು’ ಎಂದು ಸಾರುವ ಅಲ್ಟ್ರಾ ಸೌಂಡ್‍ಅನ್ನು ಮೊತ್ತಮೊದಲಿಗೆ ಸೋಲಿಸಿದರು. ನಂತರ ಹೆರಿಗೆ ಆದಮೇಲೆ ಹೊರಗೆ ಬಂದು `ಹೆಣ್ಣುಮಗು’ ಎಂದು ಸಪ್ಪೆ ದನಿಯಲ್ಲಿ ಹೇಳುವ ನರ್ಸಮ್ಮಳನ್ನು ಸೋಲಿಸಿದರು. ಹೆಂಗೋ ಬದುಕಿಕೊಳ್ಳಲು ಬಿಟ್ಟರೂ ಪ್ರತಿದಿನ ಇವರ ಉತ್ಸಾಹ ಕೊಲ್ಲುವ, ಕೊಲೆಪಾತಕರಿಗಿಂತಲೂ ಕೀಳಾದ ಅಪ್ಪ ಅಮ್ಮಂದಿರ ಧೋರಣೆಯನ್ನು ಸೋಲಿಸಿದರು. ಆಮೇಲೆ ಅಪ್ಪ ಅಮ್ಮಂದಿರು ಹೆಣ್ಣುಮಗಳಿಗೆ ಕನಸುಗಳ ಬೆನ್ನುಹತ್ತಲು ಅವಕಾಶ ಕೊಟ್ಟಿದ್ದಕ್ಕೆ ಎದುರಾದ ಅನೇಕ ಅಡೆತಡೆಗಳನ್ನು ಸೋಲಿಸಿದರು.
ಭಾರತದಲ್ಲಿ ಹುಟ್ಟುವ ಪ್ರತಿಯೊಂದು ಮಗುವೂ ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕು ಎನ್ನುವಂಥ ಕುಟುಂಬದ ಕೆಟ್ಟ ಜಂಬದ ಬಲೂನಿಗೆ ಸೂಜಿ ಚುಚ್ಚಿಚುಚ್ಚಿ ಸೋಲಿಸಿದರು. “ಥೂ ಇದು ಹುಡುಗಿಯರ ಆಟ ಅಲ್ಲ” ಎಂದ ಶಾಲಾ ಟೀಚರಮ್ಮನನ್ನು ಸೋಲಿಸಿದರು. ನಂತರ ಅತ್ಯಂತ ಕೆಟ್ಟದಾದ ಕ್ರೀಡಾ ಸೌಲಭ್ಯ ವ್ಯವಸ್ಥೆ ಮತ್ತು ಉತ್ಸಾಹ ಉಳಿಸಿಕೊಳ್ಳಲು ಬೇಕಾದ ಪುಷ್ಟಿಕರ ಆಹಾರದ ಕೊರತೆ ಇವುಗಳನ್ನೂ ಸೋಲಿಸಿಬಿಟ್ಟರು. ವಿದೇಶ ಎಂದೊಡನೆ ಹಾರಲು ತಯಾರಾಗುವ ಮತ್ತು ಯಾವ ಆಟವನ್ನೂ ಆಡಿ ಗೊತ್ತಿರದ ಹೊಟ್ಟೆಡುಮ್ಮಣ್ಣ ಕ್ರೀಡಾ ಅಧಿಕಾರಿಗಳೇ ಕ್ರೀಡಾಳುಗಳ ಹಣೆಬರಹವನ್ನು ನಿರ್ಧರಿಸುವಂಥ ನಮ್ಮ ದರಿದ್ರ ವ್ಯವಸ್ಥೆಯನ್ನೂ ಅವರು ಸೋಲಿಸಿಬಿಟ್ಟರು!
“ಒಳ್ಳೇ ಹುಡುಗಿಯರು ಯಾರೂ ಹೀಗೆ ತೊಡೆಕಾಣಿಸುವಂತೆ ಬಟ್ಟೆ ಹಾಕ್ಕೋಳಲ್ಲ, ಛೀ!” ಎಂದು ಮೂಗು ಮುರಿಯುವ ಅಜ್ಜಂದಿರನ್ನು ಈ ಹುಡುಗಿಯರು ಸೋಲಿಸಿದರು. ಹಾಗೇ “ಉರಿ ಬಿಸಿಲಿನಲ್ಲಿ ಆಟ ಆಡಿ ಕರೀ ತಿಮ್ಮಿ ಆಗಬೇಡ” ಎಂದು ನಿರ್ಬಂಧಿಸುವ ಅಜ್ಜಿಯರನ್ನು ಸೋಲಿಸಿದರು. “ಲೇ, ವಿಪರೀತ ಆಡಬೇಡ, ಮೆರೀಬೇಡ” ಎನ್ನುವ ಗೆಳತಿಯರನ್ನೂ ಸೋಲಿಸಿದರು. “ನಿಮ್ಮ ಹುಡುಗಿ ಒಬ್ಬೊಬ್ಬಳೇ ಎಲ್ಲೆಲ್ಲಿಗೆಲ್ಲಾ ಹೋಗ್ತಾಳೆ” ಎನ್ನುವ ಪಕ್ಕದ್ಮನೆ ಆಂಟಿಯನ್ನೂ ಅವರು ಸೋಲಿಸಿದರು.
ಇನ್ನು ಮೈದಾನದಲ್ಲೋ ಅವರು ಆಡುವ ಕೌಶಲದ ಆಟವನ್ನು ಬಿಟ್ಟು ಅವಳ ಕಾಲುಗಳನ್ನೇ ದಿಟ್ಟಿಸಿ ನೋಡುವ ಲಕ್ಷಾಂತರ ಕಿರಾತಕ ಕಣ್ಣುಗಳನ್ನು ಅವರು ಸೋಲಿಸಿದರು. “ನೀನು ಯಾವಾಗ ಮದುವೆ ಮಾಡ್ಕೋತೀಯ?” ಎಂದು ಚುಚ್ಚುವಂತೆ ಕೇಳುವ ದೊಡ್ಡಮ್ಮ ಚಿಕ್ಕಮ್ಮಂದಿರನ್ನು ಕೂಡ ಸೋಲಿಸಿದರು. “ನೀವು ಯಾವಾಗ ಸೆಟಲ್ ಆಗ್ತೀರ?” ಎಂದು ಕೇಳಿದ ಪತ್ರಕರ್ತನನ್ನೂ ಅವರು ಸೋಲಿಸಿದರು. “ಸುಮ್ಮನೆ ಇವರೆಲ್ಲ ಗೌರ್ನಮೆಂಟ್ ಖರ್ಚಿನಲ್ಲಿ ಫಾರಿನ್‍ಗೆ ಹೋಗೋದು ಅಲ್ಲಿ ಅಲೆದಾಡಿಕೊಂಡು ಸೆಲ್ಫಿ ತೊಗೊಂಡು ಬರೋಕಷ್ಟೆ” ಎಂದು ಮೂಗುಮುರಿಯುವ ಸಿನಿಕರನ್ನು ಸೋಲಿಸಿದರು.
ಅನೀಶ್ ಶರ್ಮ ಕೊನೆಗೆ ಹೇಳುವುದು ಇಷ್ಟೇ…
“ನಮ್ಮ ಹುಡುಗಿ” ಅಂತ ಈಗ ಹೇಳಿಕೊಂಡು, ಅವಳ ಗೆಲುವು-ಮೆಡಲು ಅಂತ ಹೇಳಿಕೊಂಡು ಮೆರೆಯಬೇಡಿ… ಆ ಹುಡುಗಿಯರು ಇಷ್ಟೆಲ್ಲಾ ಸಾಧಿಸಿದ್ದು ನಮ್ಮಿಂದ ಅಲ್ಲ, ನಮ್ಮಂಥಾ ಜನರು ಇದ್ದೂ ಅವರು ಇಷ್ಟೆಲ್ಲಾ ಸಾಧಿಸಿದರು ಅನ್ನುವುದೇ ದೊಡ್ಡದು!
ಕಲ್ಯಾಣಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.