`ಗಾನ್ ವಿತ್ ದ ವಿಂಡ್’: ಅಸಾಮಾನ್ಯ ವ್ಯಕ್ತಿತ್ವದ ಸ್ಕಾರ್ಲೆಟ್ – ಜಯಶ್ರೀ ದೇಶಪಾಂಡೆ

ಕೆಲವು ಜನ ಮಾತ್ರ ಇಂಥದೊಂದು ಅಂತರ್ಗತ ಧೈರ್ಯ ಶಕ್ತಿಗಳನ್ನು ತಮ್ಮುಸಿರಿನಲ್ಲಿ ಹೊತ್ತು ಬಂದಿರುವುದೇಕೆ? ಕೆಲವರು ಪರಿಸ್ಥಿತಿಯೆದುರು ಕುಸಿದರೆ ಸ್ಕಾರ್ಲೆಟ್ ಓ ಹಾರಾ ಥರ ಇನ್ನು ಕೆಲವರು ಅದನ್ನೇ ತಮ್ಮ ಆಂತರಿಕ ಶಕ್ತಿ ಆಗಿಸಿಕೊಳ್ಳುವುದು ಹೇಗೆ? `ಗಾನ್ ವಿತ್ ದ ವಿಂಡ್’ ಅಸಾಮಾನ್ಯ ಧೈರ್ಯ, ಸ್ಥೈರ್ಯಗಳುಳ್ಳವರ ವಿಷಾದಗೀತೆ.

ಗಾಳಿಗೊಂದು ಹೆಸರಿದೆಯೇ? ಆಕಾರ…ರೂಪ, ಬಣ್ಣ? ಗಾಳಿಯನ್ನು ಗಾಳಿಯೆಂದು ಗುರುತಿಸುವ ಪರಿಮಾಣವೇನು? ಹಾಂ, ಅದಕ್ಕಿರುವ ಸ್ವರೂಪಗಳು ಅದೆಷ್ಟು ! ಮಂದಮಾರುತ, ಕುಳಿರ್ಗಾಳಿ, ಮಂದಾನಲ.. ಸುಳಿಗಾಳಿ, ಝಂಝಾವಾತ, ಚಂಡಮಾರುತ, ಬಿರುಗಾಳಿ, ಚಕ್ರವಾತದ ವರೆಗಿನ ಹಲವು ಅವತಾರಗಳದಕ್ಕೆ. ಯಾವುದು ಯಾವಾಗ ಬೀಸಬೇಕೆಂಬುದು ವಿಧಿಲಿಖಿತ. ಬೀಸಿದಾಗ ಅದಕ್ಕೆ ಸಿಲುಕಿಕೊಳ್ಳುವವರ ಬದುಕು ತಳೆಯುವ ಬಣ್ಣಗಳು ಒಂದಿಡೀ ಜನಾಂಗದ ಅಸ್ತಿತ್ವಕ್ಕೆ ಭಾಷ್ಯ ಬರೆದರೆ?

ಗಾಳಿಯ ಬಗ್ಗೆ ಯೋಚಿಸುವಾಗೆಲ್ಲ ನನ್ನ ನೆನಹುಗಳ ತೆರೆಯಲ್ಲಿ ತೇಲಿ ಬರುವುದು ಲೇಖಕಿ ಮಾರ್ಗರೆಟ್ ಮಿಶೆಲ್ ಳ ಪೆನ್ನಿನಿಂದ ಇಳಿದು ಬಂದ ‘ಗಾನ್ ವಿತ್ ದ ವಿಂಡ್’ ಕಾದಂಬರಿಯ ನಾಯಕಿ ಸ್ಕಾರ್ಲೆಟ್ ಓ ಹಾರಾಳ ಅಸಾಮಾನ್ಯ ವ್ಯಕ್ತಿತ್ವ ವಿಶೇಷ. ಬಾಲ್ಯದ ಮುಗ್ಧತೆ ಕಳಚಿ ಯೌವನದ ಹೊಸ್ತಿಲೇರಿ ಮುಂಬರುವ ದಿನಗಳ ಬಗ್ಗೆ ಪುಷ್ಕಳವಾಗಿ ಹರಟುತ್ತ ಅದಾವುದೋ ಲೋಕದಲ್ಲಿರುವ ಸ್ಕಾರ್ಲೆಟ್, ಟಾರಾ ಎಸ್ಟೇಟ್ ಒಡೆಯನ ಮುದ್ದಿನ ಮಗಳು. ಚೆಲುವು ವರದಾನ ಅವಳಿಗೆ, ಸುತ್ತಮುತ್ತಲ ಭೂಮಾಲೀಕರ ಪಂಗಡದ ಕಣ್ಮಣಿ.

ಬೀಸಿ ಬಂದ ಗಾಳಿ ಅವಳ ಕನಸುಗಳ ಅಸ್ತಿತ್ವ, ಸೋಲುಗಳೊಂದಿಗಿನ ನಿರಂತರ ಸೆಣಸು, ರಕ್ತದಲ್ಲೇ ಅಚ್ಚೊತ್ತಿದ ಅವಳ ಛಲ.. ಮತ್ತದರೊಂದಿಗೆ ಉತ್ತರ ಅಮೆರಿಕದ ದಕ್ಷಿಣದ ನೆಲದ ರೈತಾಪಿಗಳ ಹೋರಾಟದ ಫಲಿತವನ್ನು, ಗೆಲುವು ಸೋಲುಗಳ ಹೆಜ್ಜೆಗಳನ್ನು ಬೆಂಕಿ, ಬೂದಿ, ಬೆವರು, ಕಣ್ಣೀರು, ನೆತ್ತರಿನ ಸಮಗ್ರಮಸಿಯಲ್ಲಿ ಅದ್ದಿ ಹರಡಿದ ವಿಸ್ತಾರಗಾಥೆಯೇ ‘ಗಾನ್ ವಿತ್ ದ ವಿಂಡ್… ‘ ಜಾರ್ಜಿಯಾ, ಅಟ್ಲಾಂಟಾ ಸೇರಿದಂತೆ ದಕ್ಷಿಣದ ಸಮೃದ್ಧ ಕೃಷಿ ಭೂಮಿಗಳ ಪಾತ್ರ ಇವೆಲ್ಲದರಲ್ಲೂ.. ಒಂದೊಂದು ಹನಿ ರಕ್ತ ನೆಲಕ್ಕೆ ಬೀಳುವುದನ್ನೂ ಕಣ್ಣಾರೆ ಕಂಡ ಉವಾಚಗಳ ಪ್ರತಿ. ಇತಿಹಾಸ ಹೇಳುವ ಘಟನೆಗಳ ನಡು ನಡುವೆ ಸುಲಭಗ್ರಹೀತವಾಗಲೊಲ್ಲದ ಶ್ರಮಿಕ ವರ್ಗದ ಜೀವನದ ಉತ್ಪಾತಗಳ ಉಚ್ಚಾರ.

ಇದು ಉತ್ತರ ಅಮೆರಿಕದಲ್ಲಿನ ಸಿವಿಲ್ ವಾರ್, ರೀಕನ್‍ಸ್ಟ್ರಕ್ಷನ್  ಆಫ್ ದ ನೇಶನ್ ಇವೆರಡೂ ಒಂದನ್ನೊಂದು ಬಿಡದ ಭೂತಗಳಾಗಿ ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಜಾರ್ಜಿಯಾವನ್ನು ಹಿಂಡಿದ ಕತೆ. ಆ ಶಾಪದ ಸುಂಟರಸುಳಿಗಾಳಿಯಲ್ಲಿ ಸಿಲುಕಿದ ಜೀವಗಳ ಕಥನ…

ಹರಕು ಜೀನ್ಸ್, ಹೊಲಸು ಶರ್ಟ್, ಎಣ್ಣೆಗಾಣದ ಕೆದರು ಕೂದಲಿನಡಿಯ ದೊರಗು ಮುಖದಲ್ಲಿ ವಾರಗಟ್ಲೆ ಬೆಳೆದ ಹಂಡಬಂಡ ಹಳದಿ,ಬಿಳಿ ಗಡ್ಡ, ಅಷ್ಟೇ ಹಳದಿಗಟ್ಟಿದ ಹಲ್ಲಿನ ಸಾಲುಸಾಲು ಸೌತೀಗಳು, ಕಾನ್ಫೆಡರೇಟ್ ಆರ್ಮಿ ಅನಿಸಿಕೊಂಡ ಕಾಳಗಗ್ರಸ್ತ ಒರಟು ಆಫ್ರಿಕನ್ ಅಮೆರಿಕನ್ ಜನರ ಗುಂಪು ಅಥವಾ ಅಮೆರಿಕದ ದಕ್ಷಿಣದ ತಪ್ಪಲಿನ ಜನಕ್ಕೆ ತಾವು ಎಳೆಯಲ್ಪಟ್ಟು ಬಿದ್ದ ಹೋರಾಟ ಯಾವುದಕ್ಕೆ, ಯಾರು ನಿಜಕ್ಕೂ ತಮ್ಮ ವೈರಿ, ಈ ಕಾಳಗದ ಕೊನೆ ಯಾವ ದಿಕ್ಕಿನಲ್ಲಿದೆ, ಆ ಕೊನೆಯಲ್ಲಿ ತಮಗಿರುವುದು ಜಯವೋ ಸೋಲೋ ಗೆಲುವೋ ಒಂದೂ ಅರಿವಿಲ್ಲ… ಅದು ಉಗ್ರಭಾಷಣದ ನಾಯಕ ಎದ್ದು ನಿಂತು ಮೇಜು ಗುದ್ದಿ ಕೂಗಿದ ಕಿರುಚಾಟದ ಪ್ರಭಾವ, ಫ್ರೆಂಚರು, ಬ್ರಿಟಿಷರು, ಅಮೆರಿಕದ ಜನ ಕೈ ಜೋಡಿಸಿ ತಮ್ಮನ್ನು ತುಳಿದ ದಮನವನ್ನು, ಶತಮಾನಗಳಿಂದ ತಮ್ಮ ಮೇಲೆ ಹೇರಲ್ಪಟ್ಟ ಗುಲಾಮಗಿರಿಯನ್ನು ಹಿಮ್ಮೆಟ್ಟಿಸುವ ಹೋರಾಟ… ಇದಕ್ಕೆ ನೆಲೆಯಾದ ದೌರ್ಭಾಗ್ಯ ಜಾರ್ಜಿಯಾ ರಾಜ್ಯಕ್ಕೆ. ಅದರ ಬೆನ್ನಲ್ಲೇ ಗುಲಾಮರ ರಾಜ್ಯಗಳು ಅನಿಸಿಕೊಂಡ ಮಿಸ್ಸೋರಿ, ಟೆಕ್ಸಾಸ್, ಫ್ಲೋರಿಡಾ, ನಾರ್ತ್ ಕೆರೊಲಿನಾ.

ಅಟ್ಲಾಂಟಿಕ್ ಮಹಾಸಾಗರಕ್ಕೆ ಸೇರುತ್ತಿದ್ದ ಮಿಸೊರಿ ಮತ್ತೆ ಮಿಸಿಸಿಪ್ಪಿ ನದಿಯ ನೀರು ಈ ದಕ್ಷಿಣ ಭಾಗದ ಜನರ ಬದುಕಿನ ಆಧಾರ, ಅವರು ಬೆವರಿಳಿಸಿ ತೆಗೆಯುತ್ತಿದ್ದ ಸಮೃದ್ಧ ಹತ್ತಿ ಬೆಳೆ ಹೊರದೇಶಕ್ಕೆ ರವಾನೆಯಾಗುತ್ತಿದ್ದುದು ಇದೇ ಜಲಮಾರ್ಗಮುಖೇನ… ಆದರೆ ಕೇಂದ್ರದಲ್ಲಿನ ಸರಕಾರ ಅಡ್ಡ ನಿಂತು ಹಾಕಿದ ನಿರ್ಬಂಧ ಇವರ ಕೊರಳಿಗೆ ಉರುಳು. ಪರಿಣಾಮವೇ ಯೂನಿಯನ್ ಸೈನ್ಯ ಮತ್ತು ಕಾನ್ ಫೆಡರೇಟ್ ಆರ್ಮೀ ಅನಿಸಿಕೊಂಡ, ಗುಲಾಮಗಿರಿ ಪ್ರಚಲಿತವಿದ್ದ ಭೂಮಿಯ ಬಡ ಕಾಲಾಳುಗಳ ಅಸಮಾನ ಕಾಳಗ. . ಬಲಾಢ್ಯರು ಮತ್ತು ದುರ್ಬಲರ ನಡುವಿನ ಹೋರಾಟದ ಅದೆಷ್ಟು ಪುರಾಣಗಳನ್ನು ಬರೆದಿದೆಯೋ ಈ ಜಗತ್ತು.

ಇದೆಲ್ಲದರ ನಡುವೆಯೂ ಬದುಕು, ಹುಡುಗರ ಶೌರ್ಯ, ಹುಡುಗಿಯರ ಯೌವ್ವನ ಮದುವೆ, ಮಕ್ಕಳು, ಋತುಮಾನ ಪಲ್ಲವ, ಪ್ರೇಮ ಪ್ರೀತಿ, ಪ್ರತಿಷ್ಠೆ, ಹಠ, ಬಯಕೆ, ನಗು ಅಳುವಿನ ನಿತ್ಯಾನುಸಂಧಾನದ ನೆರಳಲ್ಲಿ ತೇಲಿ ಹೊರಟಿದ್ದ ದಿನಗಳಲ್ಲಿ ಸ್ಕಾರ್ಲೆಟ್ ಓ ಹಾರಾ ತನ್ನದೇ ಕನಸುಗಳ ಬೆನ್ನಟ್ಟಿದ್ದಳು. ಅವಳ ಕನಸು ಆಷ್ಲೀ. ಆಷ್ಲೀ ವಿಲ್ಕಿಸ್…

ಅವಳ ಕನಸುಗಳಿಗೆಂದೂ ಚೌಕಟ್ಟಿನ ಹಂಗಿಡಲಿಲ್ಲ ಸ್ಕಾರ್ಲೆಟ್. ತನ್ನ ತೆರೆದ ಹೃದಯದ ಒಳಬಡಿತವನ್ನು ಆಷ್ಲೀ ಎದುರು ಸಮಯಾಸಮಯದ ಪರಿವೆಯಿಲ್ಲದೆ, ಹೌದು ಆಷ್ಲೀಯ ನಿಶ್ಚಿತಾರ್ಥದ ಹೊತ್ತಿನಲ್ಲಿ ಇಟ್ಟಷ್ಟೇ ಅದು ಸಮಸ್ತ ಜಗಕ್ಕೂ ಬಹಿರಂಗ ರಹಸ್ಯವೇ.. ಕೊನೆ ಉಸಿರಿರುವ ವರೆಗೂ ಕುದಿದ ಆ ತಲ್ಲಣದ ಅಭಿವ್ಯಕ್ತಿಯನ್ನು ಸ್ಕಾರ್ಲೆಟ್ ಆಗಿ ನಟಿಸಿ ಸಮರ್ಥವಾಗಿ ಕಟ್ಟಿಕೊಟ್ಟ ವಿವಿಯನ್ ಲೀಯ ಹಸುರು ನೀಲಿ ಕಣ್ಣುಗಳಿಗೆ ಭವಿಷ್ಯವನ್ನು ಗುರುತಿಸುವ ಶಕ್ತಿಯೇನಾದರೂ ಪಡೆದಿದ್ದರೆ ಸೋತು ಸತ್ತ ಅವಳ ಮೂರು ಮದುವೆಗಳ ಗೋರಿಯ ಚಿತ್ರಣ ಅಲ್ಲಿ ಮೂಡುತ್ತಿತ್ತೇನೋ… ಸಿವಿಲ್ ವಾರ್ ನ ದಳ್ಳುರಿ ಅವಳ ಬದುಕಿನಲ್ಲಿ ಆಡಿದ ಆಟಗಳಿಗೆ ಕೊನೆಯಿಲ್ಲ.

ಆಷ್ಲೀ ವಿಲ್ಕಿಸ್ ಅವಳ ಮೊದಲ ಮತ್ತು ಕೊನೆಯ ಕನಸು, ಆದರೆ ಅವನೋ ಇವಳ ತಂಗಿ ಮೆಲಿನೀಗೆ ಮೀಸಲು, ಅವಳನ್ನು ಮೆಚ್ಚಿ ವರಿಸಿ ಅವಳ ಮಗು ಹುಟ್ಟುವಾಗ ಯುದ್ಧ ಭೂಮಿಯಿಂದ ಹೆರಿಗೆಗಾಗಿ ಸ್ಕಾರ್ಲೆಟ್ ಗೆ ಕೈ ಮುಗಿದವನು. ಅನಿವಾರ್ಯತೆ! ಜಿದ್ದು ತಲೆಯೇರಿದ ಸ್ಕಾರ್ಲೆಟ್ ಮೂರು ಮದುವೆ ಎರಡು ವೈಧವ್ಯಗಳ ಪಾರಿತೋಷಕ ಪಡೆದದ್ದು ಅವಳ ಹಣೆಬರಹ… ಹುಚ್ಚು ಹಠ ಅನಿಸಬಹುದಾದ ಅವಳ  ವಾಕ್ಝರಿ, ನಿಂತ ನಿಲುವಿನ ನಿರ್ಧಾರಗಳು ಓಹ್ ಎಂದು ಹುಬ್ಬೇರಿಸುವಂತೆ ಮಾಡಿಯೇ ಬಿಡುತ್ತವೆ. ಮೂರನೆಯ ಗಂಡನಾಗಿ ರೆಟ್ ಬಟ್ಲರ್ ( ನಟ – ಕ್ಲಾರ್ಕ್ ಗೆಬೆಲ್) ಕಾದಂಬರಿ ಚಲನಚಿತ್ರ ಎರಡರಲ್ಲೂ ಇಡೀ ಆವರಿಸಿಕೊಳ್ಳುವ ನೆಗೆಟಿವ್ ಪಾಸಿಟಿವ್ ಎರಡರ ಮಿಶ್ರಣ ಆದಂಥ ಮನುಷ್ಯ, ಜೀವನವನ್ನು ಸೀರಿಯಸ್ ಆಗಿ ತೆಗೆದುಕೊಳ್ಳದವನು, ಸ್ಪಷ್ಟವಕ್ತಾ, ಪ್ರವಾಹವನ್ನು ಈಜುವುದಾಗಲಿ ಅದಕ್ಕೆದುರು ಬೀಳುವುದಾಗಲಿ ಅವನಿಗೆ ಒಪ್ಪಿತವಿಲ್ಲ. ಆಷ್ಲೀ ನಾಯಕನಾಗಿಯೂ ನಾಯಕನಲ್ಲದವನು… ಪತ್ನಿ ಮೆಲಿನೀಗೆ ನಿಷ್ಠ, ಪದೇಪದೆ ಪ್ರೇಮನಿವೇದನೆ ಮಾಡುವ ಸ್ಕಾರ್ಲೆಟ್ ಗೆ ಸಾಮದಾನವಿಧಾನದಲ್ಲಿ ತಿಳಿಹೇಳಿ ಕೊನೆಯ ಮೆಟ್ಟಿಲಲ್ಲೂ, ತನ್ನ ಅಸಹಾಯಕತೆಯಲ್ಲೂ ಗೋಜಲಾದವನು.

ಗಾನ್ ವಿತ್ ದ ವಿಂಡ್ ಹಬ್ಬಿ ಹರಡಿರುವ ಕಥಾವಿಸ್ತಾರದ ನೆಲೆ ಜಾರ್ಜಿಯಾ, ಆಫ್ರಿಕನ್ ಅಮೆರಿಕನ್ ಶ್ರಮಿಕರ ಬಹುದೊಡ್ಡ ವಸತಿಯ ಪ್ರದೇಶ. ಹತ್ತಿಯ ಸಮೃದ್ಧ ಬೆಳೆಯ ನೆಲದಲ್ಲಿ ದುಡಿಯುವ ಗುಲಾಮರಲ್ಲಿ ಎರಡು ವಿಧ, ಅವರಲ್ಲಿ ಬಿಳಿಯರೂ ಉಂಟು, ಕೊಂಚ ಮೇಲ್ವರ್ಗ. ಅಪ್ಪಟ ಕರಿಯರು ನೆಲದಲ್ಲೇ ಗೇಯುವ ಶ್ರಮಿಕ ಪಂಗಡ. ಟ್ಯಾಕ್ಸ್, ಕಂದಾಯ, ಊಳಿಗಕ್ಕೆ ಪ್ರತಿಫಲವಾಗಿ ಊಟ ಬಟ್ಟೆ, ಇರಲು ಗೂಡು ಇವಿಷ್ಟರ ಬಲದಲ್ಲಿ ದೇಶದ ಪುನರ್ನಿರ್ಮಾಣದ ಹೊಣೆಯೇರಿಸಿಕೊಂಡ ಪ್ರಬಲ ಬಿಳಿಯರ ಆಕ್ರಮಣಕ್ಕೆ ಹಣ್ಣಾಗಿ ಕಾಲಾನುಕಾಲಕ್ಕೆ ಚಿಮ್ಮಿಸಿದ ಗುಲಾಮರ ಪ್ರತಿಭಟನೆಯ ಕಾಳಗದಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು, ಕೋವಿ ತುಪಾಕಿಗಳಿಂದ ಸಜ್ಜಿತರಾದ ಯೂನಿಯನ್ ಆರ್ಮಿಯ ಜನರಲ್‌ ಗಳ ಶಕ್ತಿ ಎದುರು ಪದೇ ಪದೇ ಸೋತ ಗುಲಾಮರ ರಕ್ತಸಿಕ್ತ ಹೆಜ್ಜೆಗಳ ಪಥಸಂಚಲನ…

ಹುಟ್ಟಿನಿಂದ ಸಾಯುವ ವರೆಗೂ ಗುಲಾಮರಾಗೇ  ಬದುಕುವ ಅನಿವಾರ್ಯತೆಯನ್ನು ಒಪ್ಪಿಕೊಂಡವರೂ ಎದುರು ಬೀಳುವ ಸ್ಥಿತಿ ನಿರ್ಮಾಣವಾದುದರ ಹಿನ್ನೆಲೆ ಅದಿನ್ನೆಷ್ಟು ಕ್ರೌರ್ಯಭರಿತ ಇದ್ದೀತು? ಪುನರ್ ನಿರ್ಮಾಣದ ಪರದೆಯಡಿ ಎಲ್ಲಿ ಬೇಕೆಂದರಲ್ಲಿಂದ ಎತ್ತಿಕೊಂಡೊಯ್ದ ಆಳುವ ಬಿಳಿಯರು ತೋಡಿಸುತ್ತಿದ್ದ ಗುಂಡಿಗಳಲ್ಲೇ ಕೊನೆಗಾಣುವ ಗುಲಾಮರು, ಅವರ ಹೆಂಡರು ಮಕ್ಕಳು ಆ ಶೋಷಣೆಯ ಪರೋಕ್ಷ ಪರಿಣಾಮಗಳ ಕುಲುಮೆಯಲ್ಲಿ ಬೇಯುತ್ತಿದ್ದಾಗ ಹುಟ್ಟಿಕೊಂಡಿತ್ತು ಕಾನ್ಫೆಡರೇಟ್ ಆರ್ಮಿ ಅನ್ನುವ ಕಾಳಗಾಸಕ್ತ ಶ್ರಮಿಕವರ್ಗ…ಅದರಲ್ಲಿ ಬಿಳಿ, ಕರಿ ಎರಡೂ ವರ್ಣಗಳು ಕೂಡಿದ್ದು ಸಿವಿಲ್ ವಾರ್ ನ ವೈಶಿಷ್ಟ್ಯ, ವೈಚಿತ್ರ್ಯ ಎರಡೂ.

ಪುರುಷರ ಅಸಹಾಯಕತೆ-ಅದರಲ್ಲೂ ಯುದ್ಧದಲ್ಲಿ ಹೋರಾಡಿ ಸೋತ ಪುರುಷರ ಅಸಹಾಯಕತೆ -ಅವರ್ಣನೀಯ, ಪುರುಷಾರ್ಥಗಳನ್ನು, ಕುಟುಂಬ ಸೌಖ್ಯವನ್ನು, ಯಾವುದನ್ನೂ ಉಳಿಸಿಕೊಳ್ಳಲಾಗದ ಹತಾಶೆಯ ಉತ್ತುಂಗದಲ್ಲಿ ಜರ್ಜರಿತವಾಗುವ ಮೆದುಳಿನ ಅವಸ್ಥೆಗಳ ಪ್ರತೀಕವಾಗುತ್ತಾನೆ ಆಷ್ಲೀ … ಉನ್ನತ ಸ್ತರದ ಶ್ವೇತರು ಯುದ್ಧಕ್ಕಿಳಿವ ಅನಿವಾರ್ಯದ ಸಂದರ್ಭದಲ್ಲಿ ಸಿಲುಕಲು ಕಾರಣವಾಗುವುದು ಕಂದಾಯದ ಉರುಳು, ಕೈ ಬಿಟ್ಟು ಕಣ್ಮರೆ ಆಗುತ್ತಿದ್ದ ಮಿಸಿಸಿಪ್ಪಿ, ಚಟ್ಟಾಹೂಚಿಯಂಥ ನದಿಗಳ ಸರಕು ಸಾಗಣೆಯ ಮೂಲಾಧಾರ. ಕಾರಣ ಯೂನಿಯನ್ ಕಟ್ಟಾಜ್ಞೆ… ತೀಕ್ಷ್ಣ ಶೋಷಣೆಗೆ ಬಳಕೆಯಾಗುವ ಭಯದಲ್ಲಿ ಕಾಳಗಕ್ಕೆ ಕೈ ಜೋಡಿಸಿ ಪ್ರಾಣ ಕಳಕೊಳ್ಳುವ ಲಕ್ಷಾಂತರ ಕರಿ, ಬಿಳಿ ಗಲಾಮರ ದೀರ್ಘ ಹೋರಾಟ ದಶಕಗಳ ಕಾಲ ಅಮೇರಿಕದ ದಕ್ಷಿಣ ಪೂರ್ವದ ಕರಾವಳಿ ಜನರಲ್ ಮಾರ್ಷಲ್ ನ ‘ಮಾಚ್೯ ಟು ದ ಸೀ’…  ಅನ್ನುತ್ತ ಅಟ್ಲಾಂಟಿಕ್ ಸಾಗರದ ದಂಡೆಯವರೆಗಿನ ನಗರಗಳನ್ನೆಲ್ಲ ಸುಟ್ಟು ಭೂತನಗರಿಯಾಗಿಸಿದ ಠೇಂಕಾರದೊಳಗೆ ಸದ್ದುಗದ್ದಲವಿಲ್ಲದೆ ಸುಟ್ಟು ಭಸ್ಮೀಭೂತ ಆದ ಐತಿಹಾಸಿಕ ಸತ್ಯ… ಚಿಕಾಮೂಗಾ, ಚಟ್ಟಾಹೂಚಿ, (ಈ ಹೆಸರಿನ ನದಿ ಇದೆ, ಬಲು ಸುಂದರ) ಅಟ್ಲಾಂಟಾ, ಸವಾನ್ನಾ, ಫ್ರೆಡ್ ರಿಕ್ ಬರ್ಗ, ಚಾನ್ಸಲರ್ ವಿಲ್ ಇವೆಲ್ಲವನ್ನೂ ‘ಸವಾನಾ ಕ್ಯಾಂಪೇನ್’ ಎನ್ನುವ ಒಂದು ಮಾಸ್ಟರ್ ಪ್ಲಾನಿನ ಅನ್ವಯ ಗೆದ್ದು ತನ್ನಡಿಗೆ ಹಾಕಿಕೊಳ್ಳಹೊರಟಿದ್ದ ಜನರಲ್ ವಿಲಿಯಮ್ ಶೆರ್ಮನ್ ನ ಕುಖ್ಯಾತ ದಮನಕಾರೀ ವಿನಾಶದ ಸಾವಿನ ಮರವಣಿಗೆ, ಅದೇ “ಮಾಚ್೯ ಟು ದ ಸೀ’…

ಹೀಗೆ ಅಸಂಖ್ಯ ಕದನಕ್ಷೇತ್ರಗಳಲ್ಲಿ ಬಲಿಯಾದ ಅಗಣಿತ ದೊರಗುಗಡ್ಡದ ದೊಗಳೆ ಪ್ಯಾಂಟಿನ ಮನುಷ್ಯರ ಸಂಸಾರಗಳ ಉಧ್ವಸ್ತ ಕಥನದ ಕಣ್ಣೀರ ಉಲ್ಲೇಖ.. ಅವನು ನಡೆದ ದಾರಿಗುಂಟ ಹುಟ್ಟಿಕೊಂಡಿದ್ದುವು ಸ್ಮಶಾನಸದೃಶವಾಗುಳಿದ ಊರುಗಳು, ಮುಂದೆ ಭೂತನಗರಿಗಳು ಅನಿಸಿಕೊಂಡು ಪ್ರವಾಸಿಗರಿಗೆ ರಾತ್ರಿ ಅಲ್ಲಿ ನಡೆಯುತ್ತವೆ ಎಂದು ಹೇಳಿಕೊಳ್ಳುವ ಭೂತನೃತ್ಯ ತೋರಿಸಲು ಕರೆಯುವ ಅರೆಪಳೆಯುಳಿಕೆಗಳು…ಇದೆಲ್ಲದರ ಪರದೆಯ ಹಿಂದೆ ಅಂದು ಮಕ್ಕಳು ಮರಿ ಕೊಲ್ಲಲ್ಪಟ್ಟರು, ಮಹಿಳೆಯರು ಹಿಂಸೆಗೀಡಾದರು..ಸಾಮೂಹಿಕವಾಗಿ ಮನೆಮನೆಗಳಲ್ಲೇ ಸಾವಿರಾರು ಜನರನ್ನ ಹುಗಿದು ಹಾಕಿದ್ದು ಕ್ರೌರ್ಯದ ಪರಾಕಾಷ್ಠೆ ಅಲ್ಲದೆ ಇನ್ನೇನು?

ಕಣ್ಣೆದುರಲ್ಲೇ ಮನೆ ಮಠ, ಗಂಡ ಮಕ್ಕಳ ವಿನಾಶದ ಸುಳಿಯಲ್ಲಿ ಸಿಕ್ಕು ಹಾಕಿಕೊಂಡ ಸ್ಕಾರ್ಲೆಟ್ ಳ ಪರಿವಾರಕ್ಕೂ ಇದಾವುದರಿಂದಲೂ ವಿನಾಯಿತಿ ಪಡೆಯಲಾಗಲಿಲ್ಲ. ಅವಳಪ್ಪನ ಹೆಮ್ಮೆಯ ಟಾರಾ ಎಸ್ಟೇಟ್ ಸುಟ್ಟು ಪಳಿಯುಳಿಕೆಯಾದ ಮನೆಯಲ್ಲಿ ತಾನು ದಾದಿಯಾಗಿ ದುಡಿಯುತ್ತಿದ್ದ ಅಟ್ಲಾಂಟಾದ ಆಸ್ಪತ್ರೆಯಿಂದ ತಪ್ಪಿಸಿಕೊಂಡೋಡಿ ಬಂದ ಸ್ಕಾರ್ಲೆಟ್ ಅಮ್ಮನ ಹೆಣದೆದುರು ನಿಂತು ಹುಚ್ಚನಂತಾದ ಅಪ್ಪನ ಅಸಹಾಯಕತೆಗೂ ಸಾಕ್ಷಿಯಾಗ್ತಾಳೆ. ಆ ಘೋರ ಅವಳ ಆಂತರ್ಯದ ಕಸುವನ್ನು ಕಸಿಯದೆ ಇನ್ನಷ್ಟು ಬೆಳೆಸಿದ್ದುದರ ವಿಸ್ಮಯ ಓದಿದವರನ್ನೂ, ಸಿನಿಮಾ ನೋಡಿದವರನ್ನೂ ಕೂಡಿಯೇ ಕಾಡುತ್ತೆ. ಯುದ್ಧಗ್ರಸ್ತ ನೆಲದಲ್ಲಿ ಅವಶೇಷಗಳಾಗಿ ಉಳಿದವರ ರೋದನವಾಗದೆ ಇರುವ ಸಂಕೇತದಂತೆ ಟಾರಾ ಎಸ್ಟೇಟ್ ಮತ್ತದರ ಸುತ್ತಮುತ್ತಲ ಜೈವಿಕತೆಯನ್ನೆಲ್ಲ ಮರುಜೀವಂತಗೊಳಿಸುವ ಪಣ ತೊಟ್ಟು ಏರುದಾರಿಗಳ ಪಥಚಲನಕ್ಕಿಳಿಯುತ್ತಾಳೆ. ಶ್ರೀಮಂತ ವಿಲಾಸಿ ರೆಟ್ ಬಟ್ಲರ್ ತನ್ನೆಲ್ಲಾ ವೈಚಿತ್ರ್ಯವಿಶೇಷಗಳ ನಡುವೆ ಅವಳ ಬದುಕಿನ ಹಂತಗಳಲ್ಲಿ ಆಗೀಗ ತನ್ನನ್ನೇ ಜೋಡಿಸಿಕೊಂಡು ಮೂರನೆಯ ಗಂಡನಾಗಿ ಅದರ ವೈಫಲ್ಯವೂ ಸೇರಿದಂತೆ ಸ್ಕಾರ್ಲೆಟ್ ಳ ವಿಷಮ ನೆರಳಾಗುತ್ತಾನೆ.

ಕಾನ್ ಫೆಡರೇಟ್ ಸೈನಿಕರ ಸೋಲಿನ ಉತ್ತರಾರ್ಧವಾಗಿ ಧೂಳು, ಮಣ್ಣು, ಕರಿ ಕಪ್ಪು ಕಾಂಡಗಳನ್ನಷ್ಟೇ ಉಳಿಸಿಕೊಂಡು ಸೋತು ಇನ್ನೇನೇನು ಸಾಯುವೆ ಅನ್ನುತ್ತ ನಿಂತ ಮರಗಳ ಮರುಭೂಮಿಯಂತಾಗಿದ್ದ ಟಾರಾ ಎಸ್ಟೇಟನ್ನು ಮತ್ತೆ ಬದುಕಿಸುವ ಇನ್ನೊಂದು ಪಣಗೈಯುವ ಸ್ಕಾರ್ಲೆಟ್ ಒಂದೊಂದು ಹನಿ ನೀರು, ಒಂದಿಷ್ಟು ಡಾಲರ ಗಳಿಗಾಗಿ ತನ್ನ ಮುರುಕು ಮನೆಯ ಬಾಗಿಲು ತಟ್ಟಿ ಪಿಸ್ತೂಲು ಎದೆಗೆ ಹಿಡಿಯುವವನನ್ನು ಗುಂಡು ಹಾರಿಸಿ ಕೊಂದುಹಾಕುವುದೂ ಸೇರಿದಂತೆ ತನ್ನ ರಕ್ತ ಬೆವರು ಕಣ್ಣೀರುಗಳನ್ನೆಲ್ಲ ಟಾರಾದ ಭೂಮಿಗೆ ಧಾರೆ ಎರೆಯುತ್ತಾಳೆ. ಸತ್ತು ಹೋದ ಇನ್ನಿಬ್ಬರು ಗಂಡರ, ಬದುಕಿಯೂ ಬೇರೆ ಅನಿಸುವ ರೆಟ್ ಬಟ್ಲರ್ ನೆರಳುಗಳು ಎರಚಿದ ಧೂಳನ್ನು ತೊಡೆಯುತ್ತಾಳೆ.. ಒಂದು ಕ್ಷಣ ನಮ್ಮ ಮದರ್ ಇಂಡಿಯಾ ಸಿನಿಮಾದ ನರ್ಗಿಸ್ ನೆನಪಾಗುವಂತೆ…

‘ಗಾನ್ ವಿತ್  ದ ವಿಂಡ್’ ಬದುಕಿನ, ಬದುಕುಳಿಯುವ, ಉಧ್ವಸ್ತ ಬದುಕನ್ನು ಮರಳಿ ನಿಲ್ಲಿಸುವ ಅದಮ್ಯ ತುಡಿತಗಳ ಕ್ಷಣ ಕ್ಷಣದ ಸೆಲೆ. ”ಕೆಲವು ಜನ ಮಾತ್ರ ಇಂಥದೊಂದು ಅಂತರ್ಗತ ಧೈರ್ಯ ಶಕ್ತಿಗಳನ್ನು ತಮ್ಮುಸಿರಿನಲ್ಲಿ ಹೊತ್ತು ಬಂದಿರುವುದೇಕೆ? ಕೆಲವರು ಪರಿಸ್ಥಿತಿಯೆದುರು ಕುಸಿದರೆ ಇನ್ನು ಕೆಲವರು ಅದನ್ನೇ ತಮ್ಮ ಶಕ್ತಿ ಆಗಿಸಿಕೊಳ್ಳುವುದು ಹೇಗೆ? ಅನಾಹುತ, ಆಕಸ್ಮಿಕ, ಅನ್ಯಾಯ, ಅಸ್ತಿತ್ವದ ಉಳಿವು, ಕೊನೆಗೆ ಸಾಯುವ ವರೆಗೂ ಮರೀಚಿಕೆಯಾಗಿಬಿಡುವ ನೆಮ್ಮದಿಯ ಕೆಲವು ಕ್ಷಣಗಳಿಗಾಗಿ ಏನೆಲ್ಲವನ್ನೂ ಕಳೆದುಕೊಳ್ಳುವ ಹಲವು ದೌರ್ಭಾಗ್ಯರ ನಡುವಲ್ಲೇ ಅದೆಲ್ಲವನ್ನೂ ಗೆಲುವಿನ ಮೆಟ್ಟಿಲಾಗಿಸಿಕೊಳ್ಳುವ ಕೆಲವರ ಶಕ್ತಿಗೆ ಏನೆನ್ನಬೇಕು? ಸ್ಥೈರ್ಯ? ಅಂತಃಶಕ್ತಿ? ಇರಬಹುದು… ಇಂಥದೊಂದು ಆಂತರಿಕ “ಸ್ಥೈರ್ಯವುಳ್ಳವರ ಬಗೆಗಿನ ಕತೆಯನ್ನು ನಾನು ಬರೆದಿರುವೆ ಅದೇ ಇದು” ಎನ್ನುತ್ತಾಳೆ ಮಾರ್ಗರೆಟ್ ಮಿಶೆಲ್ .
ನಿಜ…
ಇದು ಧೈರ್ಯ, ಸ್ಥೈರ್ಯಗಳುಳ್ಳವರ ವಿಷಾದಗೀತೆ. ‘ ‘ಗಾನ್ ವಿತ್ ದ ವಿಂಡ್’..

– ಜಯಶ್ರೀ ದೇಶಪಾಂಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *