ಗಮನಿಸಿ- -ಆಶಾ ಜಗದೀಶ್

ತಲೆಮಾರುಗಳೆ ಉರುಳಿ ಹೋದವು
ತರಗೆಲೆಯಂತೆ
ನಿಮ್ಮ ಹಣೆಯಾರೋಹಣಕ್ಕಾಗಿ

ಒಂದೊಂದೇ ಸೂಜಿಮೊನೆ
ಕೊರೆದ ಮಡುವಿನಲ್ಲಿ
ತುಂಬಿಕೊಂಡ ಪಚ್ಚೆ
ಚರ್ಮದ ವಿವಿಧ ಸ್ತರಗಳಲ್ಲಿ
ಇಳಿದವು
ಅಚ್ಚೊತ್ತುವ ಕಲೆಯಾಗಲು

ಎದೆಯೊಳಗಿನ ನಿಮಗಿಂತಲೂ
ಹಣೆ ಮೇಲಿನ ನಿಮ್ಮ ಬಗ್ಗೆ
ನಿಮಗೇಕೆ ಇಷ್ಟೊಂದು ಪ್ರೀತಿ
ಕರಗಿ ಹೋಗುವ ಕುಂಕುಮ
ಉದುರಿಹೋಗುವ ಟಿಕ್ಕಲಿಗಳಿಗಿಂತಲೂ
ಅಚ್ಚಳಿಯದೆ ಉಳಿವ ಅಚ್ಚೆಯನ್ನು
ಏಕಿಷ್ಟು ಪ್ರೀತಿಸಿದಿರಿ

ಚುಚ್ಚಿದ್ದು ನಿಮ್ಮಿಚ್ಚೆ
ಅವಳ ಅಳು ನುಂಗಿದ ಹಚ್ಚೆ
ಹಟದ ಮುಂದೆ ಸೆಟೆದೆದೆಯ
ಸ್ವಾಭಿಮಾನ
ಮತ್ತೆ ಅವಳು ನಿಮ್ಮನ್ನು ತಿರುಗಿ
ನೋಡಲಾರದಷ್ಟು ದೂರ ಸರಿದಿದ್ದಾಳೆ

ಅವಳ ಕಣ್ಸನ್ನೆಯ ಭಾಷೆ ಮರೆತು
ಉಳಿಯುವ ಹಚ್ಚೆ
ಚುಚ್ಚುವ ಸೂಜಿಮೊನೆಯ
ತಹತಹಿಕೆಗೆ ಬಲಿಕೊಟ್ಟ
ಚಂದ್ರನ ಪ್ರತಿ ಉರುಳು
ಅವಳ ಒಂಟಿ ಇರುಳಿನ ಲೆಕ್ಕವಿಟ್ಟಿಲ್ಲ

ಅಸಲಿಗೆ ನಿಮ್ಮ ಸಾಂಗತ್ಯದ
ರುಚಿಯೇ ಗೊತ್ತಿಲ್ಲ
ಅವಳಿಗೆ
ಇದ್ದೂ ಇಲ್ಲದೆಯೂ
ಹಣೆ ಮೇಲಿನ ಪಚ್ಚೆ ಚುಕ್ಕಿ
ಅವಳ ಸಾವನ್ನೂ ಹಿಂಬಾಲಿಸಿದೆ
ಆದರೆ…

ಇನ್ನು ಮುಂದೆ ಅವಳ ಹಣೆ ಮೇಲಿನ
ಪಚ್ಚೆ ಚುಕ್ಕಿ
ನಿಮ್ಮ ಇರುವಿಕೆಯ ಗುರುತಲ್ಲ
ಅವಳ ಬಂಡಾಯದ ಹೆಗ್ಗುರುತು
ಅವಳಳಿದರೂ ನೀವಳಿದರೂ…

ನಿಮ್ಮ ಹಣೆಯಾರೋಹಣವೀಗ
ಸ್ಥಗಿತಗೊಂಡಿದೆ
ಗಮನಿಸಿ

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಗಮನಿಸಿ- -ಆಶಾ ಜಗದೀಶ್

  • September 17, 2018 at 4:24 am
    Permalink

    Well expressed ….nice

    Reply

Leave a Reply

Your email address will not be published. Required fields are marked *