ಗತ – ಜಯಶ್ರೀ ದೇಶಪಾಂಡೆ

ಅಲ್ಲೇ ಎಲ್ಲೋ ವಿಭಾಗಿಸಿಕೊಂಡುವು
ನನ್ನ ನಿನ್ನ ನೋವುಗಳು,
ಎಲ್ಲಿ? ಅದೇ ಪ್ರಶ್ನೆ.
ಅಲ್ಲ, ನೋವುಗಳಿಗೆ ನಮ್ಮಲ್ಲಿ ಪ್ರೈವಸಿಯ ಛಾಪು ಬಿದ್ದದ್ದು ಯಾವಾಗ?
ಅದರ ಮುಖ ಇದಕ್ಕೆ ಇದರದು ಅದಕ್ಕೆ ಕಾಣದಂತೆ,
ದಕ್ಕದಂತೆ ಅಡಗಿಕೊಂಡದ್ದೇಕೆ?

ಹಳ್ಳ ಹನಿಯಾಗಿ ಹರಿದು ದಿಕ್ಕ ಹುಡುಕುತ್ತಲೇ
ದಿಕ್ಕು ತಪ್ಪಿ ಅಲೆವಾಗ
ಅಲ್ಲೇ ಕಂಡ ನಿನ್ನ ಸೆಲೆ ಕೈಬೀಸಿ ಕರೆದು ಎದೆಗೊತ್ತಿಕೊಂಡರೆ
ಹುಶ್ಶಪ್ಪ ಅನಿಸಿದ ನಿರಾಳದಲ್ಲಿ ಜೊತೆಗೂಡಿ
ಬೆಟ್ಟ ಗುಡ್ಡ ಕಂದರ ಕವಾಟಗಳ ಒಡಲು ತಡಕಾಡುತ್ತ,
ಗರ್ಭದೊಳಗಿದ್ದ ನಮ್ಮ ನೋವುಗಳೆಲ್ಲ ಆ ತಡಕಾಟದಲ್ಲಿ ಒಂದಾಗಿ
ಇನ್ನೇನು ಸಾಗರವೊಂದೇ ಗಮ್ಯ…ಅದು ಅಲ್ಲಿ ಅನತಿ ದೂರದಲ್ಲಿ…

ಎರಡು ಝರಿ ಒಂದಿಟ್ಟು ತುಂಬಿ ತುಳುಕುವ ನದಿ ಕೆಲವೊಮ್ಮೆ ತೇಲಿ,
ಇನ್ನೊಮ್ಮೆ ಉಕ್ಕಿ ಆಚೀಚೆ ದಂಡೆಗಳ ಮೀರಿ ಹರಿದು
ಅವರಿವರು ಬೆರಗಾಗಿ ಮತ್ತೆ ನಕ್ಕು
ನಮ್ಮನ್ನೇ ನಿಟ್ಟಿಸಿ ಹಾಡು ಗೀಡು ಬರೆದು ಅವನ್ನು
ನಮಗೆ ಅರ್ಪಿಸಿ ಧನ್ಯರಾದಾಗ
ಹಿಗ್ಗಿನಲ್ಲಿ ನೋವೆಲ್ಲಿ ಎಂದು ಮರೆತೇಬಿಟ್ಟೆವಲ್ಲ?
ನೋವೆಂದರೇನು ಎಂದು ಕೇಳಿದೆವಲ್ಲ? ಅಥವಾ ನೋವೇ ಮರೆತಿತ್ತೆ ನಮ್ಮನು?

ಇನ್ನೇನು ಸಾಗರನೇ ಬಂದು ಎದುರುಗೊಂಡಾನು
ನಮ್ಮ ಐಕ್ಯಕ್ಕೆ ಮುನ್ನುಡಿ ಬರೆದಾನು… ಹೆಜ್ಜೆಸದ್ದಾಗದಂತೆ ಹರಿದು, ಹಗುರವಾಗಿ
ನಮ್ಮೊಳಗಿನ ಒಂದಾಗಿಬಿಟ್ಟಿದ್ದ ಆ
ನೋವುಗಳಿಗೊಂದು ಅಸ್ತಿತ್ವವೇ ಇಲ್ಲದಾಗಿ,
ಸಾಗರಲೀನದ ತಾರ್ಕಿಕ ಅಂತ್ಯದ ಗುರಿ ಕಣ್ಣೊಳಗಿಟ್ಟ ಓಟ
ಕಣ್ ಚಿತ್ರ ಕಣ್ಮಾಯವಾದರೆ ಕಣ್ಣು ಬಿಟ್ಟವರ್ಯಾರು? ಹಾ…

ಜಯಶ್ರೀ ದೇಶಪಾಂಡೆ

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *