ಗಟವಾಣಿ/ ಹೆಣ್ಣೈಕಳ ನಸಿಪುಡಿ ರಿವಾಯ್ತು- ಅರುಣ್ ಜೋಳದಕೂಡ್ಲಿಗಿ

ಇಲ್ಲಿ ಜನರ ನುಡಿಗಟ್ಟಿನಲ್ಲಿ `ನಸಿಪುಡಿ’ ಮೇಲಿನ ಅರ್ಥಗಳಂತೆ ಮೂಗಿಗೆ ಹಾಕಿಕೊಳ್ಳುವ ಹೊಗೆಸೊಪ್ಪಿನ ಪುಡಿ ಎಂಥಲೂ, ಮತ್ತೊಂದೆಡೆ ಹೆಣ್ಣು `ಹಾಳಾಗು’ವ `ನಸಿ’ ಎಂಥಲೂ `ನಸಿಪುಡಿ’ ಪದ ಕಾಲಕ್ರಮೇಣ ಬಳಕೆಗೆ ಬಂದಂತೆ ಕಾಣುತ್ತದೆ.

 

ಮೊಹರಂ ಕ್ಷೇತ್ರಕಾರ್ಯಕ್ಕೆಂದು ರಹಮತ್ ಮೇಷ್ಟ್ರುಜತೆ ರೋಣ, ಬಿಜಾಪುರ, ಇಂಡಿ ಭಾಗದ ಮೊಹರಂ ಆಚರಣೆಗಳನ್ನು ನೋಡಲೆಂದು ಮತ್ತು ರಿವಾಯ್ತು ಹಾಡುಗಾರರನ್ನು ಭೇಟಿಮಾಡಲೆಂದು ಪ್ರಯಾಣ ಬೆಳೆಸಿದ್ದೆವು. ಹೀಗೆ ಕ್ಷೇತ್ರಕಾರ್ಯಕ್ಕೆ ಹೋಗುವಾಗ ನಾವು ಭೇಟಿ ಮಾಡಬೇಕೆಂದ ಊರಿಗೆ ಮಾತ್ರ ಹೋಗುವುದಿಲ್ಲ. ಬದಲಾಗಿ ದಾರಿ ಮಧ್ಯೆ ನುಸುಳುವ ಹಳ್ಳಿಗಳ ಜನರನ್ನು ಮಾತಿಗೆಳೆದು, ಆಯಾ ಊರಿನ ಬಗ್ಗೆ ವಿಚಾರಿಸುತ್ತಾ ನಿಧಾನಕ್ಕೆ ಅಲ್ಲಿನ ಮೊಹರಂ ಹಬ್ಬದ ಬಗ್ಗೆ, ರಿವಾಯ್ತು ಹಾಡುಗಾರಿಕೆ ಬಗ್ಗೆ ಮಾತು ಬೆಳೆಯುತ್ತದೆ. ಇಂತಹ ಮಾತುಕತೆಯಲ್ಲಿ ಕೆಲವೊಮ್ಮೆ ಅಪರೂಪದ ಮಾಹಿತಿ ಸಿಗುವುದುಂಟು, ಹಾಡುಗಾರಿಕೆಯ ಪರಿಚಯ ಆಗುವುದುಂಟು.

ಹೀಗೆ ದಾರಿಯಲ್ಲಿ ಸಿಕ್ಕ ಊರುಗಳಲ್ಲಿ ಯಲಬುರ್ಗಾ ತಾಲೂಕಿನ ಪುಟ್ಟ ಹಳ್ಳಿ ನೆಲಜೇರಿಯೂ ಒಂದು. ಇದೊಂದು ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ರಾಜಪ್ಪಸ್ವಾಮಿಯ ಉರುಸು ನಡೆಯುತ್ತದೆ. ಆಗ ಯಲಬುರ್ಗ ರೋಣ ಕುಷ್ಟಗಿ ಕೊಪ್ಪಳ ಸೀಮೆಯ ಗಾಯಕರು ಸೇರಿ ರಾತ್ರಿ ಪೂರಾ ಹಾಡುವುದಿದೆಯಂತೆ, ಇಂತಹ ಹಾಡಿಕೆ ಪರಂಪರೆಯ ಊರಿದು.

ಈ ಗ್ರಾಮದವರ ಮಾಹಿತಿ ಆಧರಿಸಿ ರಿವಾಯ್ತು ಹಾಡುಗಾರ ಅಂದಾನಪ್ಪನನ್ನು ಭೇಟಿ ಮಾಡಿದೆವು. ಆತ ಒಂದು ಕೈಯಲ್ಲಿ ಕಚ್ಚೆಯ ಚುಂಗು ಸಿಕ್ಕಿಸಿಕೊಂಡು ಸೈಕಲ್ಲು ಹ್ಯಾಂಡಲ್ ಹಿಡಿದು ಬರುತ್ತಿರುವಾಗ ನಮ್ಮೆದುರಿಗೆ ಸಿಕ್ಕರು. ತಲೆಗೆ ಸೆಲ್ಲೇವು ಸುತ್ತಿದ ಅಂದಾನಪ್ಪ ಎತ್ತರದ ಮಾಜಿ ಪೈಲ್ವಾನನಂತಹ ಕಟ್ಟುಮಸ್ತಾದ ಆಳು. ಅವರನ್ನು ಮಾತನಾಡಿಸಿ ನಮ್ಮ ಕಿರುಪರಿಚಯ ಮಾಡಿಕೊಂಡು, ರಿವಾಯ್ತು ಹಾಡುಗಳ ಬಗ್ಗೆ ಕೇಳಿದಾಗ ಆತನ ಮುಖದಲ್ಲಿ ಸಂತಸದ ಗೆರೆಗಳು  ಮೂಡಿದವು. ಆತ ತನ್ನ ಮನೆಗೆ ನಮ್ಮನ್ನು ಮಾತಿನ ಮಳೆಯಲ್ಲಿ ನೆನೆಸುತ್ತಾ ಕರೆದೊಯ್ದ.

ಜಂತಿ ಕಂಬದ ಹಳೆಮಾದರಿಯ ಕಟ್ಟುಮಸ್ತಾದ ಮನೆಯದು. ಹೊರಗೆ ಕಟ್ಟೆಯ ಮೇಲೆ ಕುಳಿತೆವು. ಬಾಗಿಲಿನ ಮೇಲೆ ದೇವರುಗಳ ಫೋಟೋ ನೆಲ ನೋಡುವಂತೆ ವಾಲಿದ್ದವು. ಪೂಜೆಗೊಳಪಟ್ಟು ವಿಭೂತಿ ಕುಂಕುಮ ಧರಿಸಿಕೊಂಡಿರುವ ತೀರಿದ ಮನೆಯ ಹಿರಿಯರ ಫೋಟೋಗಳು ಮನೆ ಕಾವಲಿಗಿದ್ದಂತೆ ಕಂಡವು. ಕಟ್ಟೆಯ ಆಬದಿ ಈಬದಿ ಕಾಳುಕಡಿಗಳ ಕೊರೆಗಳನ್ನು ಒಟ್ಟಲಾಗಿತ್ತು. ನೋಡು ನೋಡುತ್ತಲೇ ಇಬ್ಬರು ಮೂವರು ಸಹ ಹಾಡುಗಾರರನ್ನು ಅಂದಾನಪ್ಪ ಕಲೆಸಿಬಿಟ್ಟರು.

ಒಂದೆರಡು ಹಾಡನ್ನು ಹಾಡಿದರು. ಪೈಲ್ವಾನನಂಥಹ ದೊಡ್ಡ ದೇಹದಲ್ಲಿ ಒಂದು ಬಗೆಯ ಗಡುಸನ್ನು ಮಿದುವು ಮಾಡಿದಂತಹ ಧ್ವನಿ. ಏರು ಇಳಿವಿನಲ್ಲಿ ಧ್ವನಿಯನ್ನು ಎತ್ತರಿಸಿ, ಇಳಿಸಿ ಹಾಡುತ್ತಾ ರಿವಾಯ್ತಿನ ಲಯಕ್ಕೆ ಹಾಡುಗಳನ್ನು ಹೊಂದಿಸಿ ನಮಗೆ ಕೇಳಿಸಿದರು. ರಹಮತ್ ಮೇಷ್ಟ್ರುಆ ಧ್ವನಿಯನ್ನು ಹೊಗಳಿದಾಗ ಅಂದಾನಪ್ಪ ಚೈತನ್ಯ ಪಡೆದವನಂತೆ ಒಳಗೊಳಗೆ ಹೆಮ್ಮೆ ಪಟ್ಟುಕೊಂಡರು.

ಹೀಗೆ ಹಾಡುತ್ತಿರುವುದನ್ನು ನಿಲ್ಲಿಸಿ ಮನೆಯ ಒಳ ಹೋಗಿ, ರಿವಾಯ್ತು ಬರೆದ ನೋಟ್ ಪುಸ್ತಕ ತಂದರು. ಅದು ಅಡುಗೆ ಮನೆ ಹೊಗೆಗೆ ಸಿಕ್ಕು ಗೋಲ್ಡನ್ ಬ್ರೌನ್ ತರಹದ ಕಂದು ಬಣ್ಣವನ್ನು ತಾಳಿತ್ತು. ಈ ಪುಸ್ತಕದ ಮುಖಪುಟದಲ್ಲಿ `ಯಲ್ಲಪ್ಪ ವಿರೂಪಾಕ್ಷಪ್ಪ ಹೊಸೂರ ಪುಸ್ತಕ ಕೊಡಿಸಿದವರು’ ಎನ್ನುವ ನೆನೆಕೆಯೂ ಇತ್ತು. ಈ ಪುಸ್ತಕದಲ್ಲಿ ೫೦ ರಿವಾಯ್ತು ಪದಗಳಿದ್ದವು. ಈ ರಿವಾಯ್ತುಗಳಲ್ಲಿ ನಸಿಪುಡಿ ಕುರಿತ ರಿವಾಯ್ತು ನನ್ನ ಗಮನ ಸೆಳೆಯಿತು. ಆಧುನಿಕ ಸಂಗತಿಗಳು ಹಳ್ಳಿ ಪ್ರವೇಶ ಮಾಡಿದಾಗ ಅವುಗಳನ್ನು ಹಾಡಿಕೆ ಮಂದಿ ಹೇಗೆ ಕಂಡರು, ಮತ್ತು ಅವುಗಳ ಸ್ವೀಕಾರದಲ್ಲಿ ಜನರಲ್ಲಿ ಮೂಡಿದ ಅನುಮಾನಗಳು ಎಂಥವು ಎನ್ನುವುದನ್ನು ಈ ಹಾಡಿನಿಂದ ತಿಳಿಯಬಹುದು.

ನಸಿಪುಡಿ ರಿವಾಯ್ತು:

ನಸಿಪುಡಿ ಬಂದಿತು ನಮ ದೇಶಕ್ಕ| ಕುಸಿಲಿಂದ ಹೋಗುತಾವೋ ನಮ ಮನಿ ರೊಕ್ಕ||

|ಏ| ಬಸವ್ವ ತಿಕ್ಕುತಾಳೋ ನಸಿ ಪುಡಿ ವಳ್ಳೆ ಚೊಕ್ಕ| ಕಾಶವ್ವ ಬೇಡುತಾಳೋ ನನಗೀಟ ಹಾಕ||

ಗಸಗಸ ತಿಕ್ಕಿ ವುಗಿತಾರೋ ನೆಲಕ            ||೧||

 

||ಇ|| ಬೇಕಾಗಿ ಕೂಡಿಕೊಂಡು ಹೋಗುತಾರಾ ವಲಕಾ| ತಾಸಿಗೆ ವೊಮ್ಮೆ ತಿಕ್ಕುತಾರೋ ಗಿಡ ಬುಡಕ||

|ಏ| ನಸಿಪುಡಿ ಆದೀತೋ ಮದ್ಯಾನಕ್ಕ| ಬ್ಯಾಸರಾಗಿ ನೋಡುತಾರೋ ಹೊಳ್ಳಿ ಎಲ್ಲಾ ಕಡೆಕಾ||

ತ್ರಾಸಾಗಿ ಬರುತಾರೋ ಮನಿತನಕ            ||೨||

 

|ಇ| ವುದ್ರಿ ಕೇಳುತಾರೋ ನಸಿ ವೊಳ್ಳೆ ಖಡಕ| ವುದ್ರಿ ಕೊಡುದಿಲ್ಲೆಂದು ಹೊಡೆದ ಕಪಾಳಕ್ಕ|

|ಏ| ತಲಬು ಮಾಡಬಾರದಂಥ ಹೋದರು ಹಿಂದಕ|

ಅತ್ತಿ ವದಿತಾಳೋ ನಡು ಮುರಿಯೋ ತನಕ     ||೩||

 

|ಇ| ಬಿಸಿನೀರು ಕಾಶಿಕೊಂಡು ತೊಳಕೊಂಡೊ ಮನಕ| ಮುಸುಡೀಗೆ ತಿಕ್ಕುತಾರೋ ಪೌಡರ್ ಖಡಕ||

|ಏ| ಹೊಸ ಹೊಸ ಪದ್ದತಿ ಬಿಡರವ್ವ ಖಡಕ| ಖಾಸ ನಾನು ಹೇಳುತೀನಿ ನಿಮ್ಮ ದೇಹಕ್ಕ

ಬೇಸಾಗಿ ನೋಡಿಕೊಳ್ರಿ ನಿಮ್ಮ ಮನಕ          ||೪||

 

|ಇ| ದ್ಯಾಸ ಮಾಡಿ ನೊಡಿಕೊಳ್ಳೊ ಷಾಹೀರ ಮನಕ| ತ್ರಾಸ ಹಿಡಿದು ತೂಗಿ ನೋಡೋ ಅಕ್ಷಾರ ತೂಕ||

|ಏ| ದೇಶದೊಳು ಮಂಗಳೂರ ಇರುವುದ ಖಡಕಾ| ಪಾಸಾಗಿ ಶ್ಯಾಮಲಿಂಗ ಆಗ್ಯಾನೋ ಬೆಳಕ|

ಹೆಸರು ಆಗೈತಿ ನೋಡ್ರಿ ದಿಕ್ಕು ದೇಶಕ್ಕ          ||೫||

 

ಈ ರಿವಾಯ್ತು ಹಳ್ಳಿ ಹೆಣ್ಮಕ್ಕಳ ನಸಿಪುಡಿ ತಲಬು ಕುರಿತಾಗಿದೆ. ಹಳ್ಳಿ ಗಂಡ್ಮಕ್ಳು ಬೀಡಿ ಸೇದುವ ತಲಬಿನಂತೆ ಹೆಣ್ಮಕ್ಕಳು ನಸಿಪುಡಿ ತಿಕ್ಕುವ ತಲುಬಿಗೆ ಬೀಳುತ್ತಾರೆ. ಈ ನಸಿಪುಡಿಯನ್ನು ಹಿರಿಯ ಅಜ್ಜಿಯರು ತಿಕ್ಕಿದರೆ ಅದು ಮಾನ್ಯ. ಆದರೆ ಹರೆಯದ ಹುಡುಗಿಯರು ಈ ತಲುಬು ಕಲಿತರೆ ಅದು ಅಪರಾಧ. ಹಾಗಾಗಿ ಹರೆಯದ ಹುಡುಗಿಯರು ತಂದೆ ತಾಯಿ ಅಣ್ಣ ತಮ್ಮಂದಿರಿಗೆ ತಿಳಿಯದಂತೆ, ಮದುವೆಯಾಗಿದ್ದರೆ ಗಂಡ, ಅತ್ತೆ ಮಾವಂದಿರಿಗೆ ತಿಳಿಯದಂತೆ ಕಳ್ಳತನದಿಂದ ನಸಿಪುಡಿ ತಿಕ್ಕುತ್ತಾರೆ. ಇದು ಗೊತ್ತಾದರೆ ನಸಿಪುಡಿ ತಿಕ್ಕುವ ತಲಬಿನ ಕಾರಣಕ್ಕೆ ಒದೆ ತಿನ್ನುವ ಪ್ರಸಂಗಗಳೂ ನಡೆಯುತ್ತವೆ.

ನಾಸ ಎಂದರೆ ಮೂಗು, ಮೂಗಿಗೆ ಹಾಕಿಕೊಳ್ಳುವ ಹೊಗೆಸಪ್ಪಿನಿಂದ ತಯಾರಿಸಿದ ಪುಡಿ, ನಶ್ಯದ ಪುಡಿ ಎಂದು ಕರೆಯುತ್ತಾರೆ. ಹಾಗಾಗಿ `ನಾಸೀಪುಡಿ’ ಎಂಬ ನುಡಿಗಟ್ಟು ನಿಂತಿದೆ. ನಸಿ ಎಂದರೆ ಹಾಳಾಗು, ನಾಶವಾಗು, ಸೊರಗು, ಕೃಶವಾಗು, ಕುಗ್ಗು, ಕುಸಿ ಎಂಬರ್ಥಗಳಿವೆ. ಹಾಗಾಗಿ ಹಳೆಗನ್ನಡದಲ್ಲಿ ಸೊರಗಿದಂತೆ ಕಾಣುವ ದೇಹವನ್ನು `ನಸಿಮೆಯ್’ ಎಂದು ಕರೆದದ್ದಿದೆ. ಇಲ್ಲಿ ಜನರ ನುಡಿಗಟ್ಟಿನಲ್ಲಿ `ನಸಿಪುಡಿ’ ಮೇಲಿನ ಅರ್ಥಗಳಂತೆ ಮೂಗಿಗೆ ಹಾಕಿಕೊಳ್ಳುವ ಹೊಗೆಸೊಪ್ಪಿನ ಪುಡಿ ಎಂಥಲೂ, ಮತ್ತೊಂದೆಡೆ ಹೆಣ್ಣು `ಹಾಳಾಗು’ವ `ನಸಿ’ ಎಂಥಲೂ `ನಸಿಪುಡಿ’ ಪದ ಕಾಲಕ್ರಮೇಣ ಬಳಕೆಗೆ ಬಂದಂತೆ ಕಾಣುತ್ತದೆ.

ಇಂತಹ ನಸಿಪುಡಿ ಆಯಾ ಹಳ್ಳಿಗಳ ಚಿಕ್ಕ ಚಿಕ್ಕ ಗೂಡಂಗಡಿಗಳಲ್ಲಿ ದೊರೆಯುತ್ತದೆ. ನಸಿಪುಡಿ ಕೊಳ್ಳಲು ಹಣವಿಲ್ಲದಾಗ ಮನೆಯಲ್ಲಿನ ಕಾಳು ಕಡಿ ಅಂಗಡಿಗೆ ಮಾರಿ ನಸಿಪುಡಿ ಕೊಳ್ಳುತ್ತಾರೆ. ಪುಟಾಣಿ ಡಬ್ಬಿಯೊಂದನ್ನು ನಸಿಪುಡಿ ಡಬ್ಬಿ ಎಂದು ಕರೆಯುತ್ತಾರೆ. ಕೂದಲು ಕೊಂಡು ಹೇರುಪಿನ್ನ ಸೂಜಿ ಮಾರಲು ಬರುವ ಜೋಗೇರಲ್ಲಿ ಈ ನಸಿಪುಡಿಯ ಹೊಸ ಡಬ್ಬಿಗಳು ಸಿಗುತ್ತವೆ. ಇಂತಹ ನಸಿಪುಡಿ ಡಬ್ಬಿಯನ್ನು ಇಟ್ಟುಕೊಳ್ಳುವ ಚೀಲವನ್ನು ನಸಿಪುಡಿ ಚೀಲ ಎಂತಲೂ ಕರೆಯುತ್ತಾರೆ. ನಸಿಪುಡಿ ತಿಕ್ಕಲು ಹೆಸರುವಾಸಿಯಾದ ಕಾರಣ ಕೆಲವರಿಗೆ  ನಸಿಪುಡಿ ಮಾರಜ್ಜಿ, ನಸಿಪುಡಿ ಕೆಂಪಮ್ಮ ಎನ್ನುವ ಅಡ್ಡ ಹೆಸರುಗಳೂ ಬಂದಿವೆ.

ಘಾಟು ಇರುವ ನಸಿಪುಡಿಯನ್ನು ತಂಬಾಕಿನ ಒಣ ಎಲೆ ಕಾಚು ಮುಂತಾವುಗಳ ಮಿಶ್ರಣದಿಂದ ಮಾಡಿರುತ್ತಾರೆ. ಅಜ್ಜಿಯರು ಚಳಿಯನ್ನು ಹೋಗಲಾಡಿಸಲು ಈ ನಸೆಯನ್ನು ತಿಕ್ಕುವುದಿದೆ. ಕೆಲ ಅಜ್ಜಂದಿರು ಈ ನಸೆಯನ್ನು ಮೂಗಿನಲ್ಲಿ ಏರಿಸಿಕೊಳ್ಳುವುದೂ ಇದೆ.  ಇದು ಒಂದು ರೀತಿಯ ಮತ್ತನ್ನು ತರುತ್ತದೆಯೆಂದು, ಮೈಯನ್ನು ಬೆಚ್ಚಗಿಡುತ್ತದೆಯೆಂದು ಹಳ್ಳಿಯ ಅನುಭವಿ ಅಜ್ಜಿಯರು ಹೇಳುತ್ತಾರೆ. ಹೀಗೆ ನಸಿಪುಡಿ ಜತೆಗೆ ಕಡ್ಡಿಪುಡಿಯೂ ಜೋಡಿಯಾಗಿರುತ್ತೆ. ಈ ಕಡ್ಡಿಪುಡಿ ಅಡಕೆ ಎಲೆ ಜೊತೆ ಹಾಕಿದರೆ, ನಸಿಪುಡಿ ಒಂದನ್ನೆ ತಿಕ್ಕುತ್ತಾರೆ.

ನಸಿಪುಡಿ ತಿಕ್ಕಿದ ಕಾರಣಕ್ಕೆ ಕೆಲವು ಅಜ್ಜಿಯರ ಹಲ್ಲು ಕರ‍್ರಗೆ ಕರಿಕಟ್ಟಿರುತ್ತದೆ. ಬೆಳಗ್ಗೆ ಬಲಗೈಯ ತೋರು ಬೆರಳಿಂದ ಹಲ್ಲು ತಿಕ್ಕುವಂತೆ ನಸಿಪುಡಿಯನ್ನು ತಿಕ್ಕುತ್ತಾರೆ. ಹೀಗೆ ತಿಕ್ಕಿಯಾದ ಮೇಲೆ ಬೆರಳನ್ನು ಸೀರೆಯ ಸೆರಗಿಗೆ ಒರೆಸಿಕೊಂಡು ಕೆಲಸದಲ್ಲಿ ನಿರತರಾಗುತ್ತಾರೆ. ಸಿಮೆಂಟ್ ವರೆಸಿ ಗೋಡೆಯ ಬಿರುಕುಗಳನ್ನು ಪ್ಯಾಕ್ ಮಾಡಿದಂತೆ, ಹಲ್ಲಿನ ಸಂದಿಗೊಂದಿಗಳಲ್ಲಿ ನಸಿಪುಡಿಯನ್ನು ತಿಕ್ಕಿ ಪ್ಯಾಕ್ ಮಾಡಿ ಕನಿಷ್ಠ ಒಂದು ತಾಸಿನವರೆಗೂ  ತುಟಿಗಳನ್ನು ಬಿಗಿ ಹಿಡಿದೇ ಮಾತನಾಡುತ್ತಾರೆ. ಆ ನಂತರ ಉಗುಳಲು ಶುರು ಮಾಡುತ್ತಾರೆ. ಅಂತವರೊಂದಿಗೆ ನಾವಾಗ ಮಾತಿಗೆ ಕೂತರೆ, ನಮ್ಮ ದೇಹಕ್ಕೆ ನಸಿಪುಡಿಯ ದ್ರವರೂಪದ ಸಿಂಚನವಾಗುತ್ತದೆ. ಕೆಲ ಅಜ್ಜಿಯರು ಹಲ್ಲು ನೋವಿಗೆ ನಸಿಪುಡಿ ತಿಕ್ಕುವುದಾಗಿಯೂ ಹೇಳುತ್ತಾರೆ.

ನಸಿಪುಡಿ ತಿಕ್ಕುವ ತಲುಬು ಹಳ್ಳಿಯನ್ನು ಪ್ರವೇಶಿಸಿದ ನಂತರ ಹೆಣ್ಣುಮಕ್ಕಳಲ್ಲಿ ಆದ ಬದಲಾವಣೆಯನ್ನು ಈ ಗೀತೆ ಹೇಳುತ್ತಿದೆ. ಅಂತೆಯೇ `ಮುಸುಡೀಗೆ ತಿಕ್ಕುತಾರೋ ಪೌಡರ್ ಖಡಕ|| ಹೊಸ ಹೊಸ ಪದ್ದತಿ ಬಿಡರವ್ವ ಖಡಕ|’ ಎನ್ನುವಾಗ ಹೊಸ ಪದ್ದತಿಗಳು ಹಳ್ಳಿಗಳನ್ನು ಪ್ರವೇಶಿಸುವಿಕೆ ಬಗ್ಗೆ ರಿವಾಯ್ತಿನಲ್ಲಿ ಸಣ್ಣ ಆತಂಕವೂ ಇದೆ. ಹೆಣ್ಣು ಆಧುನಿಕ ಸಂಗತಿಗಳಿಗೆ ತೆರೆದುಕೊಳ್ಳುವುದರ ಬಗೆಗಿನ ಪುರುಷಪ್ರಧಾನ ನಿರೂಪಣೆಗಳ ಪ್ರಭಾವದ ಎಳೆಯೂ ಈ ಹಾಡಿನಲ್ಲಿದೆ.

ಆಧುನಿಕ ವಿದ್ಯಾಬ್ಯಾಸವನ್ನು ಪಡೆಯುವ ಬಗ್ಗೆ ಈ ಹಾಡು ಗಮನ ಸೆಳೆಯುತ್ತದೆ.`ದ್ಯಾಸ ಮಾಡಿ ನೋಡಿಕೊಳ್ಳೊ ಷಾಹೀರ ಮನಕ| ತ್ರಾಸ ಹಿಡಿದು ತೂಗಿ ನೋಡೋ ಅಕ್ಷಾರ ತೂಕ||ದೇಶದೊಳು ಮಂಗಳೂರ ಇರುವುದ ಖಡಕಾ| ಪಾಸಾಗಿ ಶ್ಯಾಮಲಿಂಗ ಆಗ್ಯಾನೋ ಬೆಳಕ| ಹೆಸರು ಆಗೈತಿ ನೋಡ್ರಿ ದಿಕ್ಕು ದೇಶಕ್ಕ’  ಇಲ್ಲಿ ಆಧುನಿಕವಾಗಿ ಬಂದ ನಸಿಪುಡಿ, ಪೌಡರು ಮುಂತಾವುಗಳನ್ನು ಬಳಸುವುದು ಸರಿಯಲ್ಲ ಎಂದು ಹೇಳುತ್ತಲೇ ಅದೇ ಆಧುನಿಕತೆಯ ಭಾಗವಾದ ಶಿಕ್ಷಣವನ್ನು ಈ ಹಾಡು ಎತ್ತಿ ಹಿಡಿಯುತ್ತದೆ. ಅಂತೆಯೇ ಅದು ಹೆಣ್ಣು ಶಿಕ್ಷಣ ಪಡೆಯಬೇಕೆಂಬುದಕ್ಕಿಂತ ಗಂಡಿನ ಹೆಸರು ಸಹಜವೆಂಬಂತೆ ಉಲ್ಲೇಖವಾಗುತ್ತದೆ. ಇದು ಮೌಖಿಕ ಪರಂಪರೆ ಆಧುನಿಕತೆಯನ್ನು ಸ್ವೀಕರಿಸಿದ ಒಂದು ಮಾದರಿಯನ್ನು ತೋರುತ್ತಿದೆ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *