ಗಜಲ್ – ರೇಣುಕಾ ಅರುಣಕುಮಾರ ಕಠಾರಿ
ನೀನು ಕೇಳುವ ಅವೆಷ್ಟೊ ಪ್ರಶ್ನೆಗಳು ಇಂದು ಬೆನ್ನೇರಿ ನನ್ನನು ಅಣಿಕಿಸುತ್ತಿವೆ ಗೆಳೆಯ
ಇತಿಹಾಸವು ಬದುಕಿನ ಪುಟವನು ತಿರು-ತಿರುವಿ ಮುನ್ನುಡಿಯಂತೆ ನನ್ನನು ಅಣಿಕಿಸುತ್ತಿವೆ ಗೆಳೆಯ
ಬಣ್ಣದ ಬದುಕಿಗೆ ಮತ್ತೆ ಮತ್ತೆ ಹಚ್ಚಬೇಕು ಬಣ್ಣವ ಹೊಸ ಸೋಗ ಹಾಕಲೆಂದು
ಆ ದಿನಗಳ ನಗು ಗಲ್ಲದ ಮೇಲಿನ ಮಂಜಿನ ಹನಿಗಳಂತೆ ಕರಗಿ ಅಣಕಿಸುತ್ತಿವೆ ಗೆಳೆಯ
ಉಟ್ಟ ಸೀರೆಯ ನಿರಿಗೆಗಳೆಲ್ಲ ಒಂದೊಂದೆ ಮುನಿಸಿಕೊಳ್ಳುತ್ತಿವೆ ಗೊತ್ತಿಲ್ಲ ಇಂದು ನನಗೆ
ನಾವಿಬ್ಬರು ಜೊತೆಗೂಡಿ ನಂಬಿಕೆಯಿಂದಲೇ ಹಾಕಿದ ಹೆಜ್ಜೆಗಳು ಈಗ ಭಯ ಹುಟ್ಟಿಸುತ್ತಿವೆ ಗೆಳೆಯ
ಸೆಡವು ಮರೆತ ಕಣ್ಣುಗಳಿಗೆ ನಿನ್ನಿಂದ ಪ್ರಜ್ಞೆ ತಪ್ಪಿದೆ ಇಂದು ಮತ್ತೆ ಮತ್ತೆ ಕಾಡುತಿದೆ ನೆನಪು
ನಾಳೆಗಾಗಿ ದಾರಿ ಕಾಯುತ್ತಿದ್ದೇನೆ ಮನಸು ಅವೆಷ್ಟೊ ಕನಸುಗಳನು ಕಾಣುತ್ತಿವೆ ಗೆಳೆಯ
ಹುಟ್ಟಿದ ಮೇಲೆ ಸಾಯಲೇಕು ಆದರೆ ಎಲ್ಲರಂತಲ್ಲ ಇದು ನೆನಪಿರಲಿ ನಿನಗೆ
ರೇಣು ಒಂದು ಲೋಕದಿ ಗುರುತಿಗಾಗಿ ಜೀವ ಹಂಬಲಿಸಿ ಬಯಸುತ್ತಿದೆ ಗೆಳೆಯ

ರೇಣುಕಾ ಅರುಣಕುಮಾರ ಕಠಾರಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ರೇಣುಕಾ ರ ಗಜಲ್ ಬರೆಯುವ ಪ್ರಯತ್ನ ಚೆನ್ನಾಗಿದೆ. ಒಟ್ಟೂ ಭಾವ , ಸಾಲುಗಳು ,ಷೇರ್ ಗಳು ಚೆನ್ನಾಗಿ ಬಂದಿವೆ.
ಅಭಿನಂದನೆಗಳು.
ಆದರೆ ಗಜಲ್ ನ ತಾಂತ್ರಿಕ ಅಂಶಗಳು ಅವರಿಗೆ ತಿಳಿದಂತಿಲ್ಲ. ಕೊನೆಯ ಪದ ( ಇಲ್ಲಿ ‘ ಗೆಳೆಯ’ )ವನ್ನು ಪುನರಾವರ್ತನೆ ಮಾಡಿದರೆ ಗಜಲ್ ಆದಂತೆ ಎಂದು ಅವರು ಭಾವಿಸಿದಂತಿದೆ.
ಇವೇ ಮಾತುಗಳನ್ನು ಅಕ್ಷತಾ ಕೃಷ್ಣಮೂರ್ತಿಯವರ ಗಜಲ್ ಗಳ ಬಗೆಗೂ ಹೇಳಬಹುದು..