ಗಜಲ್ – ಅಕ್ಷತಾ ಕೃಷ್ಣಮೂರ್ತಿ
ಮಾತೆಲ್ಲವು ಕತ್ತಲರಮನೆಯತ್ತ ನಡೆದಿರುವಾಗ ನೀ ನನ್ನ ಮರೆತಂತಿದೆ
ಕಾಪಿಡುತ್ತಾ ಬಂದ ಸಿಟ್ಟು ದೊಡ್ಡ ಗಂಟಾದಾಗ ನೀ ನನ್ನ ಮರೆತಂತಿದೆ
ಒಲವೆಂದರೆ ತನ್ನ ತಾನು ಅರಿಯುವುದು ಬೆರೆಯುವುದು ನಿನ್ನೊಳಗೊಂದಾಗುವುದೂ
ಎಂದೆಲ್ಲ ಉಸುರಿ ಮನದಿ ಖುಷಿಯಾಗಿ ಪ್ರಾಣ ಎಂದರೂ ನೀ ನನ್ನ ಮರೆತಂತಿದೆ
ಕಾರಣವಿಲ್ಲದೆ ನಿನ್ನೆದೆಯಲ್ಲಿ ಅದೆಷ್ಟು ಬೆಂಕಿ ಹಗೆ ಹುಟ್ಟಿಸುವೆ
ಆರಿಸಲು ಕಡಲ ನೀರನ್ನೇ ತಂದರೂ ನೀ ನನ್ನ ಮರೆತಂತಿದೆ
ನಾ ನಿನಗೆ ದೀಪವಲ್ಲ ಬೆಳಗಲು ಮನಸ್ಸಿಲ್ಲ ತೊರೆದುಬಿಡು ಎಂದೆ
ಲಕ್ಷ ದೀಪೋತ್ಸವದ ಕನಸು ಬಿತ್ತಿದರೂ ನೀ ನನ್ನ ಮರೆತಂತಿದೆ
ನಿನ್ನ ಮೋಡಿಗೊಳಗಾದ ಆತ್ಮವಿದು ಬಿಕ್ಕುತಿದೆ ಒಣ ಹುಲ್ಲಾಗಿ ಹಾರಿ
ಮುಗಿಯದ ನಿಂದೆನೆಗೆ ತೂರಿ ಲೋಕ ತೊರೆದರೂ ನೀ ನನ್ನ ಮರೆತಂತಿದೆ
……………………….
ನೆನಪಾದೊಡನೆ ಕಣ್ಣರಳುವ ಸುಖ ಮನತುಂಬಿ ಮರೆಯಲಾಗದು ನನಗೆ
ಎಂದೂ ಬತ್ತದ ಕಿರುನಗೆ ಹಾದುಹೋಗುವುದು ಮರೆಯಲಾಗದು ನನಗೆ
ನೀನಿಲ್ಲದಿರುವಾಗ ಬೇಗ ಸರಿಯದು ಇರುಳು ಹೊತ್ತು ಮನ ಕತ್ತಲು ಕವಿದು
ಉಸಿರುಗಟ್ಟಿ ಜೀವ ನೆನಪ ಹೆತ್ತೆತ್ತು ಸಾಯುವುದು ಮರೆಯಲಾಗದು ನನಗೆ
ಕೊಳಲಿನೆದೆಯಲಿ ಇಡೀ ಲೋಕ ಹಿಡಿದಿರುವ ಮಾಧವ ನೀನು ಚತುರ ಚೆನ್ನಿಗ
ಬಯಕೆಯ ಕೊನೆಗಳಿಗೆಯಲ್ಲಿ ನನಗೆ ದನಿಯಾದುದನು ಮರೆಯಲಾಗದು ನನಗೆ
ಋತು ಬದಲಾದಂತೆ ಸದ್ದಿಲ್ಲದೆ ಅದಲು ಬದಲು ಎಲ್ಲ ಮರಗಿಡಬಳ್ಳಿಯು
ನೋಡಿ ಕಲಿತದ್ದು ಮಾಡಿ ನಲಿದದ್ದು ಸೋಜಿಗದ್ದು ಮರೆಯಲಾಗದು ನನಗೆ
ನನ್ನೆದೆಗೂಡಲಿ ಇನ್ನೆಷ್ಟು ದಿನ ಬಚ್ಚಿಡಲಿ ಪ್ರೇಮ ಸಂಜೀವಿನಿಯ
ಗುಟ್ಟು ರಟ್ಟಾಗುವುದೇ ಒಲವಿನೆದೆಯ ಬಯಕೆ ಹೇಳಿಬಿಡಲೇ ನಿನಗೆ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
Kavithe chennagide
ಧನ್ಯವಾದಗಳು
poetry is good