ಗಜಲ್ – ಅಕ್ಷತಾ ಕೃಷ್ಣಮೂರ್ತಿ
ನಿನ್ನ ತುಟಿಯಂಚಿನ ಮಾತೂ ನನ್ನದೇ ಆಗಿದ್ದರೆ ಎಷ್ಟು ಚಂದ
ನಿನ್ನ ಬೆರಳಿಗಂಟಿಕೊಂಡ ಉಂಗುರ ನಾನಾಗಿದ್ದರೆ ಎಷ್ಟು ಚಂದ
ನಿನ್ನ ಅನುದಿನದ ಸೂರ್ಯೋದಯ ಸೂರ್ಯಾಸ್ತಗಳಲ್ಲೆಲ್ಲ ನನ್ನದೆ
ಉಸಿರಿನ ಗಾಳಿ ಸೋಕಿ ನೆನಪಿನ ಗೂಡಾಗಿದ್ದರೆ ಎಷ್ಟು ಚಂದ
ನಿನ್ನ ಸಾಂಗತ್ಯ ಸುಖವನು ಬಾಚಿ ಕೊಡುತಿರುವ ಜಗದಲಿ
ನನ್ನನ್ನೆ ನಾ ಮೈ ಮರೆಯುವಂತಿದ್ದರೆ ಎಷ್ಟು ಚಂದ
ಬಹುಕಾಲದಗಲಿಕೆಯ ಬೇನೆ ಇದು ತಳಮಳವು ಚೂರು ನೋವು
ಹನಿಹನಿಯು ಕರಗಿ ಒಲವು ಉಕ್ಕುವಂತಿದ್ದರೆ ಎಷ್ಟು ಚಂದ
ತುಟಿಯ ನಿಶ್ಯಬ್ದವು ಮಾತಾಗಿ ಎಲ್ಲವನ್ನು ಪಟಪಟನೆ ಹೇಳಿ ಕೇಳಿ
ಒಟ್ಟೂ ಖಾಲಿಯಾಗಿ ಮತ್ತೆ ತುಂಬಿಕೊಳ್ಳುವಂತಿದ್ದರೆ ಎಷ್ಟು ಚಂದ
ಸಖ ನಿನ್ನ ಕಣ್ಣಲ್ಲಿ ಮನದಲ್ಲಿ ಮೈ ಮೇಲಿನ ಪ್ರತಿ ರೋಮದಲ್ಲಿ
ನನ್ನ ಹೆಸರಿನ ಅಕ್ಷರ ಉಸುರಿ ಮುತ್ತು ಸುರಿಸುತ್ತದೆ ಅಂತಾದರೆ ಎಷ್ಟು ಚಂದ
***
ಎದೆಯ ದಾಹದುರಿಗೆ ಬೊಗಸೆನೀರು ತಂದವಳು ನೀನು
ಇರುಳುಗೂಡಿನ ಕನಸಲಿ ಸೇರಿ ಕೂಡಿದವಳು ನೀನು
ಕೈಗೆ ಕೈ ತಾಗಿ ಹೊಸ ಪುಳಕ ಹುಟ್ಟಿ ಇನ್ನೇನು ಬೆರಳುಗಳು ಬೆಸೆದು
ಗಟ್ಟಿ ಹಿಡಿದು ನಡೆದಾಗಲೇ ಹೊಸ ಕವಿತೆ ಹುಟ್ಟಿಸಿದವಳು ನೀನು
ಕಲ್ಪನೆಯಾದರು ಸರಿ ನಿನ್ನ ಕೆನ್ನೆಯ ನಯವಾಗಿ ಸವರಿ ಮುಂಗುರುಳು ಸರಿಸಿ
ಮೆಲ್ಲನೆ ನನ್ನತ್ತ ಸೆಳೆದಪ್ಪಿ ಸದ್ದಿಡದೆ ಮುತ್ತಿಡಬೇಕೆಂದವಳು ನೀನು
ಹರಿಯುವ ನದಿಯು ತನ್ನ ದಾರಿಯ ಅಂಕುಡೊಂಕಾಗಿ ಬದಲಿಸಿ ನಿನ್ನ ನೋಡುತಿದೆ
ಹರಿನೀರ ತೊಡೆ ಮೇಲೆ ಕಾಲಿಟ್ಟು ಮೀನಿನ ಗೆಜ್ಜೆ ಕಟ್ಟಿಸಿಕೊಂಡವಳು ನೀನು
ದಿನವಿಡಿ ಮೈಗಂಟಿಕೊಂಡೆ ಕುಳಿತು ಏನೇನೋ ಪಿಸುಗುಡುತ್ತಿರುವ ಇರುಳು
ದಿಂಬಿನಡಿಯಲ್ಲಿ ರತಿ ಸುಖವನು ಅವಿರತವಾಗಿ ಅರಳಿಸಿದವನು ನೀನು
ಅಕ್ಷತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಗಜಲ್ ಗಳೆರಡು ಅಂದವೋ ಅಂದ…
ಬಹಳ ಸುಂದರವಾಗಿವೆ ಟೀಚರ್
ತುಂಬಾ ದನ್ಯವಾದಗಳು “ಹಿತೈಷಿಣಿ” ಬಳಗಕ್ಕೆ
ಕಿರಸೂರ ಗಿರಿಯಪ್ಪ