ಗಂಗೂಬಾಯಿ ಮನೆಯಲ್ಲಿ ಗಂಗಾಳದಗಲ ಹೋಳಿಗೆ! : ಆರ್. ಪೂರ್ಣಿಮಾ

ಪತ್ರಕರ್ತರುತಮ್ಮ ವೃತ್ತಿಜೀವನದಲ್ಲಿ ವಿವಿಧ ಕ್ಷೇತ್ರಗಳ ನೂರಾರು ವ್ಯಕ್ತಿಗಳ ಜೊತೆ ಹರಟೆ, ಮಾತುಕತೆ, ವಾಗ್ವಾದ, ಸಂವಾದ, ಸಂದರ್ಶನ ಇತ್ಯಾದಿ ಮಾಡುವುದೆಲ್ಲ ಅನಿವಾರ್ಯ. ತಮ್ಮ ನೆನಪಿನ ಓಣಿಯಲ್ಲಿಅವರು ಮರಳಿ ನಾಲ್ಕು ಹೆಜ್ಜೆಇಡುತ್ತಾ ಹೋದರೆ ಹಲವು ರೀತಿಯ ಅನುಭವಗಳು ಮತ್ತೆ ಹೊರಳಿಕೊಳ್ಳುತ್ತವೆ. ಸಂದರ್ಭಾನುಸಾರ, ವಿಷಯಾನುಸಾರ ಅವು ಕಹಿಯೋ ಸಿಹಿಯೋ ಆಗಿರುತ್ತವೆ. ಆದರೆ ಹಿಂದೂಸ್ತಾನಿ ಸಂಗೀತದ ಅಪ್ರತಿಮಗಾಯಕಿ ಗಂಗೂಬಾಯಿ ಹಾನಗಲ್‍ಅವರಜೊತೆ ಕಳೆದ ಐದಾರು ಗಂಟೆಗಳು, ಮೂರು ದಶಕಗಳನ್ನು ಮೀರಿದ್ದರೂ ನೆನಪಿಸಿಕೊಂಡಾಗಲೆಲ್ಲಾ ಇಂದಿಗೂ ಸಂತೋಷಕೊಡುತ್ತವೆ. ಸರಳತೆ ಮತ್ತುಜೀವನೋತ್ಸಾಹದ  ಪ್ರತೀಕವಾಗಿದ್ದ  ಅವರಜೊತೆಗಿನ ಮಾತುಕತೆಯೇ ಮರೆಯಲಾರದರಾಗಾಲಾಪನೆ.

ಎಂಬತ್ತರದಶಕದಲ್ಲಿ ಪತ್ರಿಕಾಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತೆಯರೂ ವಿರಳವಾಗಿದ್ದರು, ಲೇಖನ, ಸಂದರ್ಶನಗಳಿಗೆ ಅವರು ಊರೂರು ಅಲೆಯುವುದೂ ವಿರಳವಾಗಿತ್ತು. ದೇಶದೆಲ್ಲೆಡೆ ಪ್ರಸಿದ್ಧಿ ಪಡೆದ ಕರ್ನಾಟಕ ಮೂಲದ ಹಿಂದೂಸ್ತಾನಿ ಸಂಗೀತ ಕಲಾವಿದರನ್ನು ಸಂದರ್ಶಿಸಿ `ಸುಧಾ’ ವಾರಪತ್ರಿಕೆಗೆ ಕವರ್ ಸ್ಟೋರಿಗಳನ್ನು ಮಾಡುವ ಬಗ್ಗೆ ಸಂಪಾದಕರಾಗಿದ್ದ ಎಂ.ಬಿ. ಸಿಂಗ್ ಅವರ ಹತ್ತಿರ ಒಮ್ಮೆ ಚರ್ಚಿಸಿದೆ. `ನಿನ್ನಧೈರ್ಯ, ನಿನ್ನಜವಾಬ್ದಾರಿ’ ಎಂಬ ಟ್ಯಾಗ್‍ಲೈನ್ ಸಮೇತ ಅವರ ಒಪ್ಪಿಗೆ ದೊರೆತಾಗ ಹುಬ್ಬಳ್ಳಿ-ಧಾರವಾಡಕ್ಕೆ ರೈಲು ಹತ್ತಿಬಿಟ್ಟೆ. ಹೇಗೂ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ನಮ್ಮ ಕುಟುಂಬಕ್ಕೆ ಪರಿಚಯವಿರುವ ಅನೇಕ ಅಧ್ಯಾಪಕರ ಮನೆಗಳಿದ್ದವು.

ಸಂಗೀತಗಾರನ ಮಗಳಾದ್ದರಿಂದ ಕರ್ನಾಟಕ ಸಂಗೀತ ಪರಂಪರೆ ಕುರಿತು ಅಷ್ಟಿಷ್ಟು ಗೊತ್ತಿತ್ತು. ಆದರೆ ಹಿಂದೂಸ್ತಾನಿ ಸಂಗೀತದ ಘರಾಣೆಗಳ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳದೆ, ಹೋಂವರ್ಕ್ ಮಾಡಿಕೊಳ್ಳದೆ ಅಂಥ ಘನ ವಿದ್ವಾಂಸರ ಜೊತೆ ಮಾತನಾಡುವುದು ಹೇಗೆ ಅಂತ ಚಿಂತೆಯಾಯಿತು. ಆಗಿನ್ನೂ `ಗೂಗಲ್‍ಗುರು’ ಹುಟ್ಟೇಇರಲಿಲ್ಲ! ಆಮೇಲೆ ಹಿಂದೂಸ್ತಾನಿ ಸಂಗೀತ ತಿಳಿದವರ ಹತ್ತಿರ ಹೋಗಿ ಒಂದಷ್ಟು ಮಾಹಿತಿ ಸಂಗ್ರಹಿಸಿದರೂ ಅಳುಕು ಇದ್ದೇ ಇತ್ತು. ಆದರೆ ಯಾವ ಥಳುಕೂ ಇಲ್ಲದ ಗಂಗೂಬಾಯಿ ಅದನ್ನೆಲ್ಲಾ ಹೇಗೆ ಗಾಳಿಗೆ ಹಾರಿಸಿಬಿಟ್ಟರು! ಎಷ್ಟೋ ವರ್ಷಗಳಿಂದ ನಾನು ಅವರಿಗೆ ಪರಿಚಿತಳೆಂಬಂತೆ ನೆನಪುಗಳ ಗಂಗಾ ಲಹರಿಯಲ್ಲಿ ತೋಯಿಸಿಬಿಟ್ಟರು.
ಗಂಗೂಬಾಯಿ ತಮ್ಮ ಸಂಗೀತ ಕುರಿತು ಮಾತನಾಡಿದರೆ ಸಹಜವಾಗಿ ಅದರ ಮೊದಲ ಸ್ವರ ಅವರ ಅಮ್ಮನೇ ಆಗಿರುತ್ತಾರೆ. ದೇವದಾಸಿ ಕುಟುಂಬದ ಅಂಬಾಬಾಯಿ ಮಗಳಿಗೆ ಸಂಗೀತ ಕಲಿಸಲು ಪಟ್ಟ ಕಷ್ಟ, ಮಾಡಿದ ತ್ಯಾಗ ಇವುಗಳನ್ನೆಲ್ಲ ಅದೆಷ್ಟನೆಯದೋ ಬಾರಿಗೆ ಹೇಳುತ್ತಿದ್ದರೂ ಅವರ ಕಣ್ಣಿನಲ್ಲಿ ಅದೆ ಮೊದಲೆಂಬಂತೆ ನೀರು ಜಿನುಗಿತು. ಸಂಗೀತದ ಗ್ರಾಮಫೋನ್ ರೆಕಾರ್ಡ್‍ಗಳನ್ನು ಕೇಳಲು ಹೋಟೆಲ್, ಅಂಗಡಿ ಹತ್ತಿರ ನಿಲ್ಲುತ್ತಿದ್ದೆ ಎಂದು ಬಾಲ್ಯದ ನೆನಪಿಗೆ ಜಾರಿದರು. ಐದನೇ ಇಯತ್ತೆ ದಾಟದ `ಹಾಡೋರ ಮನಿ ಹುಡುಗಿ’ಯಾಗಿ ಅಕ್ಕಪಕ್ಕದ ಜನರಿಂದ ಕೇಳಿದ ಮಾತುಗಳನ್ನು ಒಂದಿಷ್ಟೂ ಕಹಿಯಿಲ್ಲದೆ ಹೇಳಿದರು. ಅಂದಿನ ಕಾಲದ ಗುರುಶಿಷ್ಯ ಸಂಬಂಧದ ಕಟ್ಟುನಿಟ್ಟುಗಳನ್ನು ವಿವರಿಸಿದರು. ಕುಂದಗೋಳದಲ್ಲಿದ್ದ ಗುರುಗಳ ಹತ್ತಿರ ಸಂಗೀತಕಲಿಯಲು ಆ ಕಾಲಕ್ಕೆ ರೈಲು ಹತ್ತಿಕೊಂಡು ಹೋಗುತ್ತಿದ್ದೆ ನೋಡವ್ವ ಎಂದು ಕಣ್ಣು ಅಗಲಿಸಿ ಹೇಳಿದರು. ಕುಳ್ಳಗೆ ಸಣ್ಣಗೆ ಇದ್ದ ಹುಡುಗಿ ಎಂದು ತನ್ನನ್ನೇ ಆಡಿಕೊಂಡ ಅವರು, ಒಂಬತ್ತು ಗಜದ ಸೀರೆ ಉಡುತ್ತಿದ್ದ ಪಡಿಪಾಟಲನ್ನು ಎದ್ದು ನಿಂತು ನಟಿಸಿ ತೋರಿಸುತ್ತಾ ನಕ್ಕು ನಕ್ಕು ನಗಿಸಿದರು. “ನನ್ನ ಸಾಕ್ಷ್ಯಚಿತ್ರದಲ್ಲಿ ನಾ ಹುಡುಗಿಯಾಗಿಂದ ಪಾರ್ಟು ನನ್ನ ಮೊಮ್ಮಗಳೇ ಮಾಡಿದಾಳೆ. ನಾ ಏನು ಇವಳಷ್ಟು ಛಂದ ಇರಲಿಲ್ಲ ಬಿಡು” ಎಂದು ಮುದ್ದಾದ ಗೊಂಬೆ ಹಾಗಿದ್ದ ಮೊಮ್ಮಗಳನ್ನು ಹೊಗಳಿದರು.
ಗಂಗೂಬಾಯಿ ಅವರು ಅಂದು ಹೇಳಿದ ಕಥೆ ಯಾವುದೇ ಕೆಳಜಾತಿಯ, ದೇವದಾಸಿ ಕುಟುಂಬದ, ಬಡವರ ಮನೆಯ ಹುಡುಗಿಯ ಕಥೆಯೇ ಆಗಿತ್ತು. ಆದರೆ ಆ ಹುಡುಗಿಯಲ್ಲಿದ್ದ ಹಿಂದೂಸ್ತಾನಿ ಸಂಗೀತ ಕಲಿಯಲೇಬೇಕೆಂಬ ಛಲ ಮತ್ತು ಅದಕ್ಕೆ ಪಟ್ಟ ಶ್ರಮದ ಕಥೆ ಮಾತ್ರ ಅಸಾಧಾರಣವಾಗಿತ್ತು. ಸಂಗೀತ ಕಲಿಯುತ್ತ, ಗಾಯಕಿ ಎಂಬ ಮನ್ನಣೆಗೆ ಕಾಯುತ್ತ, ಕಛೇರಿಗಳ ಅವಕಾಶ ನಿರೀಕ್ಷಿಸುತ್ತ ತರುಣಿ ಗಂಗೂಬಾಯಿ “ಪುಣೆ, ಬೊಂಬಾಯಿ, ಕಲ್ಕತ್ತ, ಡೆಲ್ಲಿ” ಎಂದೆಲ್ಲಾ ದೂರದೂರುಗಳಿಗೆ ರೈಲಿನ ಮೂರನೇದರ್ಜೆ ಬೋಗಿಯಲ್ಲಿ ಮಾಡಿದ ಪ್ರಯಾಣಗಳ ಕಥೆ ಬೇರೊಂದು ಬಗೆಯದು. ರೇಡಿಯೋದಲ್ಲಿ ಅವರ ಗಾಯನ ಕೇಳಿದ ಯಾರೋ “ಗಂಡಸು ಹಾಡಿದರೆ ಹೆಂಗಸಿನ ಹೆಸರು ಹೇಳುತ್ತಾರಲ್ಲ” ಎಂದು ಅಂದದ್ದು, ಕೊಲ್ಕತ್ತದಲ್ಲಿ ಇವರ ಹಾಡು ಕೇಳಿ ಕೆ.ಎಲ್. ಸೈಗಲ್ ಮೆಚ್ಚುಗೆಯಿಂದ ಹೆಗಲ ಮೇಲೆ ಕೈಇಟ್ಟಾಗ ಬೆಚ್ಚಿಬಿದ್ದದ್ದು ಇಂಥ ಪ್ರಸಂಗಗಳನ್ನು ಹೇಳುವಾಗ ಗಂಗೂಬಾಯಿ ಸಿಕ್ಕಾಪಟ್ಟೆ ನಕ್ಕಿದ್ದರು. ವಕೀಲ ಕೌಲಗಿ ಅವರೊಂದಿಗಿನ ಸಾಂಸಾರಿಕ ಜೀವನ ಕುರಿತು ಒಂದಿಷ್ಟೂ ಮುಜುಗರವಿಲ್ಲದೆ ವಿವರಿಸಿದ್ದರು. ಮಕ್ಕಳು ಕೃಷ್ಣಾ, ನಾರಾಯಣರಾವ್, ಬಾಬುರಾವ್ ಹುಟ್ಟಿದ ಮೇಲೆ ಸಂಸಾರದ ಹೊರೆ ಹೆಚ್ಚಿ ಹೆಚ್ಚು ಕಛೇರಿಗಳಿಗೆ ಹಂಬಲಿಸಿದೆ ಎಂದರು.
“ಈಕಿ ನನ್ನ ನೋಡಾಕ ಬೆಂಗ್ಳೂರಿಂದ ಬಂದಾಳ. ಹೋಳಿಗಿ ಮಾಡು” ಎಂದು ಗಂಗೂಬಾಯಿ ನಮ್ಮ ಮಾತಿನ ಮಧ್ಯೆ ಸೊಸೆಗೆ ಹೇಳಿದರು. ಅವರ ಜೀವನ ಮತ್ತು ಸಂಗೀತ ಯಾನದ ವಿವರಗಳು ಒಂದು ಕಾದಂಬರಿಗೆ ಆಗಿ ಮಿಗುವಷ್ಟು ನನ್ನ ಕಣ್ಣು ಕಿವಿ ಮನಸ್ಸನ್ನು ತುಂಬಿಕೊಂಡಿದ್ದವು. ಆಮೇಲೆ ಊಟದ ಹೊತ್ತಿಗೆ ಪಡಸಾಲೆಯಲ್ಲೇ ಪಕ್ಕದಲ್ಲಿ ಕೂರಿಸಿಕೊಂಡರು. ಊಟ ಮಾಡುವ ತಾಟಿನಷ್ಟುಅಗಲದ ಬಿಸಿಬಿಸಿ ಹೋಳಿಗೆ! ನಿಜ ಹೇಳಬೇಕೆಂದರೆ ಅಷ್ಟು ಅಗಲವಾದ ಹೋಳಿಗೆಯನ್ನೇ ನಾನು ನೋಡಿರಲಿಲ್ಲ. ಗಂಗಾಳದಗಲದ ಹೋಳಿಗೆಯ ಮೇಲೆ ಗಮ್ಮೆನ್ನುವ ತುಪ್ಪ. ಒಂದು ಹೋಳಿಗೆ ತಿನ್ನುವುದರಲ್ಲಿ ಸಾಕಾಯಿತು ಎಂದರೂ ಇನ್ನರ್ಧ ಹಾಕಿಸಿದರು. ಗಂಗೂಬಾಯಿ ಅವರೊಂದಿಗೆ ಕಳೆದ ಗಳಿಗೆಗಳ ಜೊತೆ ಬಿಸಿ ಹೋಳಿಗೆಯನ್ನೂ ಮರೆಯುವಂತಿಲ್ಲ.

ಆರ್. ಪೂರ್ಣಿಮಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *