ಕ್ಯಾಲಿಫೋರ್ನಿಯ ರಾಜ್ಯದ ಮಹಿಳಾಪರ ನಿಲುವು
ಮಹಿಳಾ ಪ್ರಾತಿನಿಧ್ಯದ ಪರವಾದ ಸಕಾರಾತ್ಮಕ ನಿಲುವು ಸ್ಪಷ್ಟ ರೂಪ ತಾಳುವುದು ಕಾನೂನಿನಂಥ ದಿಟ್ಟ ನಿರ್ಧಾರಗಳಲ್ಲಿ. ಈ ಹಿನ್ನೆಲೆಯಲ್ಲಿ ವಾಣಿಜ್ಯ ಕಂಪೆನಿಗಳ ಬೋರ್ಡ್ ರೂಂಗಳಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಕಲ್ಪಿಸುವ ಕ್ಯಾಲಿಫೋರ್ನಿಯ ರಾಜ್ಯದ ಹೊಸ ಕಾನೂನು ಸ್ವಾಗತಾರ್ಹ. ಅದು ಜಗತ್ತಿನ ವಾಣಿಜ್ಯ ವಲಯದ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದ ಐವತ್ತು ರಾಜ್ಯಗಳ ಪೈಕಿ ಕ್ಯಾಲಿಫೋರ್ನಿಯ ರಾಜ್ಯ ತನ್ನ ವೈಶಾಲ್ಯದಿಂದ ಮಾತ್ರವಲ್ಲ, ವೈಶಿಷ್ಟ್ಯಗಳಿಂದಲೂ ಗಮನ ಸೆಳೆಯುತ್ತದೆ. ಹಾಲಿವುಡ್ ಸೇರಿದಂತೆ ಮನರಂಜನಾ ಉದ್ಯಮ ಇಲ್ಲಿರುವುದು ಮಾತ್ರವಲ್ಲದೆ ಮಾಹಿತಿ ತಂತ್ರಜ್ಞಾನ, ವಾಣಿಜ್ಯ, ಕೃಷಿ ಸೇರಿ ಅನೇಕ ಕ್ಷೇತ್ರಗಳ ಪ್ರಮುಖ ಉದ್ಯಮಗಳ ಬೃಹತ್ ಕಚೇರಿಗಳು ಈ ರಾಜ್ಯದಲ್ಲಿ ನೆಲೆ ಪಡೆದಿವೆ. ಜಗತ್ತಿನ ಅನೇಕ ದೇಶಗಳಿಂದ ಉದ್ಯೋಗಿಗಳು ಇಲ್ಲಿಗೆ ಕೆಲಸಕ್ಕೆ ಬರುತ್ತಾರೆ. ಇಂಥ ವಾಣಿಜ್ಯ ಪ್ರಧಾನ ರಾಜ್ಯ ಅಕ್ಟೋಬರ್ ತಿಂಗಳಿನಲ್ಲಿ ಒಂದು ಹೊಸ ಕಾನೂನಿನ ಮೂಲಕ ಆ ದೇಶದ ಗಮನ ಸೆಳೆಯಿತು. ಅದರಿಂದ ವಾಣಿಜ್ಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯದ ಪರವಾದ ಚಳವಳಿಗೆ ಬಹುದೊಡ್ಡ ಬೆಂಬಲ ನೀಡಿತು.
ಕ್ಯಾಲಿಫೋರ್ನಿಯ ರಾಜ್ಯದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಉದ್ಯಮ ಸಂಸ್ಥೆಗಳು -ಕಂಪೆನಿಗಳು ತಮ್ಮ ಆಡಳಿತ ಮಂಡಲಿಯಲ್ಲಿ ಮಹಿಳಾ ನಿರ್ದೇಶಕರನ್ನು ನೇಮಿಸಿಕೊಳ್ಳುವುದು ಕಡ್ಡಾಯ ಎಂಬ ಮಸೂದೆಗೆ ರಾಜ್ಯದ ಗವರ್ನರ್ ಜೆರ್ರಿ ಬ್ರೌನ್ ಸಹಿ ಹಾಕುವ ಮೂಲಕ ಅದು ಒಂದು ಕಾನೂನಾಗಿ ಜಾರಿಗೆ ಬಂದಿತು. ಆ ಮೂಲಕ ವಾಣಿಜ್ಯ ವಲಯದಲ್ಲಿ ಉನ್ನತ ಸ್ಥಾನಗಳಿಗೇರಲು ಅರ್ಹ ಮಹಿಳೆಯರಿಗೆ ಸಮಾನ ಅವಕಾಶ ಇರಬೇಕು ಎಂದು ಆಗ್ರಹಿಸುವ ಚಳವಳಿಗೆ ದೊಡ್ಡ ಬೆಂಬಲವನ್ನು ನೀಡಿತು. ಏಕೆಂದರೆ ಎಷ್ಟು ಅರ್ಹತೆ, ಯೋಗ್ಯತೆ ಮತ್ತು ಪ್ರತಿಭೆ ಇದ್ದರೂ ಎಲ್ಲ ವಲಯಗಳಂತೆ, ವಾಣಿಜ್ಯ ವಲಯದಲ್ಲೂ `ಗ್ಲಾಸ್ ಸೀಲಿಂಗ್’, ಅಂದರೆ ಅವಕಾಶದ ಅಡೆತಡೆಯನ್ನು ನಿವಾರಿಸಿಕೊಂಡು ಮುನ್ನಡೆಯುವುದು ಮಹಿಳೆಯರ ಪಾಲಿಗೆ ದೊಡ್ಡ ಸವಾಲೇ ಆಗಿರುವುದು ಸತ್ಯ.
ಕ್ಯಾಲಿಫೋರ್ನಿಯದಲ್ಲಿ ಈಗ ಈ ಹೊಸ ಕಾನೂನಿನ ಪ್ರಕಾರ ರಾಜ್ಯದ ಗಡಿಗಳಲ್ಲಿ ಪ್ರಧಾನ ಕಚೇರಿ ಹೊಂದಿರುವ ವಾಣಿಜ್ಯ ಕಂಪೆನಿಗಳು ತಮ್ಮ ಬೋರ್ಡ್ ರೂಂಗಳಲ್ಲಿ – ನಿರ್ದೇಶಕ ಮಂಡಲಿಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವುದು ಕಡ್ಡಾಯ. ಅಮೆರಿಕದಲ್ಲಿರುವ `ವ್ಯಕ್ತಿ’ಗಳಲ್ಲಿ ಅಂದರೆ ಪ್ರಜೆಗಳಲ್ಲಿ ಅರ್ಧ ಭಾಗ ಮಹಿಳೆಯರೇ ಇದ್ದಾರೆ. ಇವರಿಗೆ ಕಾರ್ಪೊರೇಟ್ ಬೋರ್ಡ್‍ಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವುದನ್ನು ಮಾಡಲೇಬೇಕು ಎಂದು ಈ ನಿರ್ಧಾರ ಕೈಗೊಂಡಿರುವುದಕ್ಕೆ ವಿವರಣೆ ನೀಡಲಾಗಿದೆ. ಆ ರಾಜ್ಯದಲ್ಲಿರುವ ಎಲ್ಲ ವಾಣಿಜ್ಯ ಕಂಪೆನಿಗಳೂ ಈಗ ತಮ್ಮ ಬೋರ್ಡ್‍ಗಳಲ್ಲಿ 2019 ರ ಅಂತ್ಯದ ವೇಳೆಗೆ ಒಬ್ಬ ಅರ್ಹ ಮಹಿಳೆಯನ್ನಾದರೂ ನೇಮಿಸಿಕೊಳ್ಳಬೇಕು. ಐವರು ನಿರ್ದೇಶಕರಿರುವ ಕಂಪೆನಿಗಳು 2021 ರ ಹೊತ್ತಿಗೆ ಇಬ್ಬರು ಅಥವಾ ಮೂವರು ಅರ್ಹ ಮಹಿಳೆಯರಿಗೆ ಅವಕಾಶ ಕೊಡಬೇಕು ಎಂದು ಕಾನೂನು ಹೇಳುತ್ತದೆ. ಇದನ್ನು ಉಲ್ಲಂಘಿಸುವ ಕಂಪೆನಿಗಳ ಮೇಲೆ ದಂಡ ಹಾಕಿ ಕಠಿಣ ಕ್ರಮ ಜರುಗಿಸಲಾಗುತ್ತದೆ. ಈಗ ಈ ರಾಜ್ಯದಲ್ಲಿ ಆರಂಭವಾಗಿರುವ ಅನೇಕ ಸ್ಟಾರ್ಟ್ ಅಪ್ ಕಂಪೆನಿಗಳು ಷೇರು ಮಾರುಕಟ್ಟೆ ಪ್ರವೇಶಿಸುವ ಮುನ್ನ ತಮ್ಮ ನಿರ್ದೇಶಕ ಮಂಡಲಿಗೆ ಮಹಿಳೆಯರನ್ನು ಸೇರಿಸಿಕೊಳ್ಳಲೇಬೇಕು.
ಕ್ಯಾಲಿಫೋರ್ನಿಯ ರಾಜ್ಯದಲ್ಲೇ ಪ್ರಧಾನ ಕಚೇರಿ ಹೊಂದಿರುವ ಫೇಸ್‍ಬುಕ್, ಆಲ್ಫಬೆಟ್ ಮುಂತಾದ ಕಂಪೆನಿಗಳು ಕೂಡ ಈಗ ತಮ್ಮ ನಿರ್ದೇಶಕ ಮಂಡಲಿಯಲ್ಲಿ ಹೆಚ್ಚು ಮಹಿಳೆಯರಿಗೆ ಅವಕಾಶ ಕೊಡುವುದು ಅನಿವಾರ್ಯ. ಮಹಿಳೆಯರು ಮತ್ತು ಅವಕಾಶ ಹೆಚ್ಚು ಸಿಕ್ಕಿಲ್ಲದ ಇತರ ಸಮುದಾಯಗಳ ಜನರಿಗೆ ತಾವು ಖಂಡಿತ ಕೊಡಲು ಈಗಾಗಲೇ ಆಲೋಚಿಸಿರುವುದಾಗಿ ಅವು ಹೇಳಿವೆ.
ಕ್ಯಾಲಿಫೋರ್ನಿಯದ ಈ ನಿರ್ಧಾರ ಇತರ ರಾಜ್ಯಗಳ ಮೇಲೂ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಒಂದು ಕಾನೂನಾಗಿ ಹೊರಬಂದಿರುವುದು, ಅದರ ಉಲ್ಲಂಘನೆ ದಂಡನಾರ್ಹವಾಗಿರುವುದು ಸದ್ಯಕ್ಕೆ ಈ ರಾಜ್ಯದಲ್ಲಿ ಮಾತ್ರ. ಇದಕ್ಕೆ ಮುನ್ನ, ಕೊಲರಾಡೋ, ಇಲಿನಾಯ್, ಪೆನಿಸಿಲ್ವೇನಿಯ, ಮೆಸಾಚುಸೆಟ್ಸ್ ರಾಜ್ಯಗಳು ಬೋರ್ಡ್ ರೂಂಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕುರಿತು ನಿರ್ಣಯಗಳನ್ನೇನೋ ಕೈಗೊಂಡಿವೆ. ಆದರೆ ಅದರ ಪಾಲನೆ ಪೂರ್ತಿ ಎಷ್ಟರ ಮಟ್ಟಿಗೆ ಆಗಿದೆ ಎನ್ನುವುದು ಅನುಮಾನ.
ಡೆಮೊಕ್ರಾಟ್ ರಾಜಕಾರಣಿಗಳೇ ಹೆಚ್ಚಾಗಿರುವ ಕ್ಯಾಲಿಫೋರ್ನಿಯದಲ್ಲಿ ಇಂಥ ಕಾನೂನು ಬರಲು # ಮೀ ಟೂ ಚಳವಳಿಯೂ ಒಂದು ಮುಖ್ಯ ಕಾರಣವಾಗಿದೆ. ಇದರ ಜೊತೆಗೆ ಮಹಿಳೆಯರು, ಮಕ್ಕಳು, ಬಡತನದಲ್ಲಿರುವ ಕುಟುಂಬಗಳಿಗೆ ನೆರವಾಗುವ ಇನ್ನಿತರ ಕೆಲವು ಮಸೂದೆಗಳಿಗೂ ಗವರ್ನರ್ ಜೆರಿ ಬ್ರೌನ್ ತಮ್ಮ ದೀರ್ಘಾವಧಿ ಆಡಳಿತದ ಅಂತ್ಯದಲ್ಲಿ ಸಹಿ ಹಾಕಿದ್ದಾರೆ. ಕಾರ್ಪೊರೇಟ್ ಅಮೆರಿಕದಲ್ಲಿ ಮಹಿಳೆಯರ ಮುನ್ನಡೆಗೆ ಈ ಕಾನೂನು ದೊಡ್ಡ ಬೆಂಬಲ ಕೊಡುತ್ತದೆ ಎಂಬ ಶ್ಲಾಘನೆ ಇದ್ದರೂ ಇದಕ್ಕೆ ಸಾಕಷ್ಟು ವಲಯಗಳಿಂದ ನಿರೀಕ್ಷಿತ ವಿರೋಧವೂ ಬಂದಿದೆ.
ಕೇವಲ ಮಹಿಳೆ ಎನ್ನುವ ಕಾರಣಕ್ಕೇ ಅವಳಿಗೆ ಉನ್ನತಿ, ಬಡ್ತಿ ಕೊಡಬೇಕೇ, ಅವಳಿಗೆ ಯೋಗ್ಯತೆ ಇದ್ದರೆ ಅವಳೇ ಪಡೆಯುತ್ತಾಳೆ, ಸರ್ಕಾರ ನಮಗೆ ಊರುಗೋಲು ಕೊಡಬೇಕೇ ಇತ್ಯಾದಿ ಮಾತುಗಳು ಕೇಳಿಬಂದಿವೆ. ಹ್ಯೂಲೆಟ್-ಪಕಾರ್ಡ್, ಪೆಪ್ಸಿಕೊ, ಜನರಲ್ ಮೋಟಾರ್ಸ್ ಮುಂತಾದ ಕಂಪೆನಿಗಳಲ್ಲಿ ಸಿಇಒ ಪದವಿಗೇರಿದ ಮಹಿಳೆಯರಿಗೆ ಇಂಥ ಯಾವ ಕಾನೂನು ಇತ್ತು ಎಂಬ ವಾದವೂ ಎದುರಾಗಿದೆ. ನಾರ್ವೆ ಮುಂತಾದ ದೇಶಗಳಲ್ಲಿ ಇಂಥ ನಿಯಮ ಬಂದು ಸಾಧಿಸಿದ್ದು ಅಷ್ಟರಲ್ಲೇ ಇದೆ ಎಂಬಂಥ ಸಿನಿಕ ಪ್ರತಿಕ್ರಿಯೆಗಳೂ ಬಂದಿವೆ.
ಯಾರು ಏನೇ ಹೇಳಿದರೂ ಮಹಿಳೆಯ ಪರವಾದ ಕಾನೂನು, ಮಹಿಳೆಗೆ ನೀಡುವ ಮೀಸಲಾತಿ ಮುಂತಾದುವೆಲ್ಲ, ಸಮಾನತೆಯ ದಾರಿಯಲ್ಲಿ ಇಡುವ ಸಣ್ಣ ಹೆಜ್ಜೆಗಳಾಗಿ ಫಲ ನೀಡುತ್ತವೆ ಎನ್ನುವುದನ್ನು ಮರೆಯಬಾರದು. ಆದ್ದರಿಂದ ಕ್ಯಾಲಿಫೋರ್ನಿಯ ರಾಜ್ಯದ ದಿಟ್ಟ ನಿರ್ಧಾರ ಅಭಿನಂದನಾರ್ಹ.
ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.