“ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾನೂನು ಪುರುಷ ವಿರೋಧಿಯೇ? ” -ಎಸ್. ಸುಶೀಲಾ ಚಿಂತಾಮಣಿ

ಮದುವೆ ಮಾಡಿಕೊಳ್ಳುವುದು ಒಂದು ಆಟವಲ್ಲ. ಮಹಿಳೆಗೆಪ್ರೀತಿ ಕಾಳಜಿ ಗೌರವ ಕೊಡದೇ ಕೌಟುಂಬಿಕ ನೆಲೆಯಲ್ಲಿ ಅವಳನ್ನು ಹಿಂಸೆಯ ಒಡನಾಡಿಯಾಗಿ ಇರಿಸಿಕೊಳ್ಳುವಂತಿಲ್ಲ ಎನ್ನುವ ಖಡಕ್ ಸೂಚನೆಯನ್ನು ಕೊಟ್ಟ ಒಂದು ಅತ್ಯುತ್ತಮ ಕಾನೂನು ಡಿ.ವಿ. ಕಾನೂನು.

 

ಮಹಿಳೆಯರ ರಕ್ಷಣೆಗಾಗಿ ಕಾನೂನು ಬಂದಾಕ್ಷಣ, ಅದು ಮಹಿಳಾ ಪರ  ಕಾನೂನು ಮಾತ್ರವಲ್ಲ ಪುರುಷ ವಿರೋಧೀ ಕಾನೂನು ಎನ್ನುವ ದನಿ ಕೇಳಬರುತ್ತವೆ. ಕಾನೂನು ಶೂನ್ಯದಲ್ಲಿ ಹುಟ್ಟುವುದಿಲ್ಲ.  ಕಾನೂನು ಸಮಾಜದ ಕೊಡುಗೆ.  ಸಮಾಜದ ಜನತೆಯ ಸಹಬಾಳ್ವೆಯ ಬದುಕಿಗೆ ಧಕ್ಕೆಯಾಗದಂತೆ ಕಾನೂನು ಹುಟ್ಟಿಕೊಳ್ಳುವುದು ಎಷ್ಟೋಅಂಕಿ ಅಂಶಗಳ ಸಂಗ್ರಹಣೆಯ ನಂತರ. ನಿರಂತರವಾದ ಸಂಶೋಧನೆ, ವಾದ ವಿವಾದ ಜಿಜ್ಞಾಸೆಯ ಹಿನ್ನೆಲೆಯಿಲ್ಲದೇ ಯಾವುದೇ ಕಾನೂನೂ ಜಾರಿಗೆ ಬರುವುದಿಲ್ಲ. ಬದಲಾಗುತ್ತಿರುವ ಸಮಾಜದ ಬೇಡಿಕೆಗೆ ತಕ್ಕಂತೆ ಹಲವಾರು ಕಾನೂನುಗಳು ಹುಟ್ಟುತ್ತವೆ. ಹಿಂದೊಮ್ಮೆಪ್ರಸ್ತುತ  ಎನಿಸಿದ್ದ  ಹಲವಾರು  ರೀತಿ ರಿವಾಜುಗಳು ಕಾನೂನುಗಳು ಬದಲಾದ ಸಮಾಜಕ್ಕೆ ಅಪ್ರಸ್ತುತ ಎಂದು ಸಾಬೀತಾದಾಗ ಅವು ರದ್ದಾದದ್ದೂ , ಹಿಂತೆಗೆದುಕೊಳ್ಳಲ್ಪಟ್ಟದ್ದೂ ಇದೆ. ಒಂದು ವರ್ಗಕ್ಕೆ ಸಂಬಂಧಿಸಿದಂತೆ ರಚಿಸಲಾದ ಕಾನೂನು ಸಮಾಜದ ಇನ್ನುಳಿದ ವರ್ಗಗಳಿಗೆ ಸಾಂವಿಧಾನಿಕವಾಗಿ ಲಭ್ಯವಿರುವ ಹಕ್ಕುಗಳಿಗೆ ವಿರೋಧವಾಗಿದ್ದರೆ ಅಂತಹ ಕಾನೂನುಗಳನ್ನು , ಅಥವಾ ಕಾನೂನಿನಲ್ಲಿಯ ಕೆಲವು ಅಂಶಗಳನ್ನು  ನ್ಯಾಯಾಲಯ ಅಸಂವಿಧಾನಿಕ ಎಂದು ತೆಗೆದುಹಾಕಿರುವುದೂ ಇದೆ. ಇವೆಲ್ಲ ತಿಳಿದಿದ್ದೂ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾನೂನು, ೨೦೦೫ರಲ್ಲಿಯೇ ಬಂದಿದ್ದರೂ ಇನ್ನೂ ಒಂದು  ದಶಕದ ನಂತರವೂ,  ಇದೊಂದು ಕೇವಲ ಮಹಿಳಾಪರವಾದ , ಮಹಿಳೆಯರು ಅಳತೆ ಮೀರಿ  ನಡೆಯಲು ಅವಕಾಶ ಮಾಡಿಕೊಟ್ಟಿರುವ, ಪುರುಷರನ್ನು ಹೆದರಿಸಲು ಆಯುಧವಾಗಿ ಮಹಿಳೆಯರು ಉಪಯೋಗಿಸುತ್ತಿರುವ, ಸಂಸಾರದ ಲಯವನ್ನು ಹದಗೆಡಿಸುತ್ತಿರುವ  ಕಾನೂನು ಎಂದು ಮಹಿಳೆಯರ ಬಗ್ಗೆಯೂ, ಡಿ.ವಿ.ಕಾನೂನು ಎಂದು ಸಾಮಾನ್ಯರ ಭಾಷೆಯಲ್ಲಿ ಕರೆಯಲ್ಪಡುವ  ಕಾನೂನಿನ ಬಗ್ಗೆಯೂ ಕ್ಷುಲ್ಲಕವಾಗಿ ಮಾತಾಡುವುದು ಇನ್ನೂ ನಿಂತಿಲ್ಲ ಎನ್ನುವುದು ಶೋಚನೀಯ ವಿಷಯ.

ತನ್ನ ವಿವಾಹವನ್ನು ಉಳಿಸಿಕೊಳ್ಳಲಿಕ್ಕಾಗಿ ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ  ‘ಏನನ್ನಾದರೂ’ ಸಹಿಸಬಲ್ಲಳು ಎಂದರೆ ಆ “ಏನನ್ನಾದರೂ” ಎನ್ನುವ ಪರಿಧಿಯನ್ನು “ಎಲ್ಲಿಯವರೆಗಾದರೂ” ಎಳೆಯಬಹುದು ಎಂದಲ್ಲ ಎನ್ನುವುದು ಅರ್ಥವಾಗಬೇಕಾದವರಿಗೆ ಅರ್ಥವಾಗದೇ ಹೋದಾಗ ಈ ಕಾನೂನು ಹುಟ್ಟಿಕೊಳ್ಳಲೇಬೇಕಾಯಿತು.

ತಾನು ನಂಬಿ ಬಂದವರಿಂದ ತನಗೆ ನಾಲ್ಕು ಗೋಡೆಗಳ ಮಧ್ಯೆ ಹಿಂಸೆ ಆದಾಗ ಹೆಣ್ಣು ಅದನ್ನು ವಿರೋಧಿಸುವುದಾದರೂ  ಹೇಗೆ?ನಿರ್ಲಕ್ಷ್ಯ, ಮೂದಲಿಕೆ, ಚುಚ್ಚು ಮಾತು, ಅವಳ ಕಡೆಯವರ ಬಗ್ಗೆ ಹೀಯಾಳಿಕೆ, ಅವಳಿಗೆ ಸಂಬಂಧಿಸಿದವರಿಗೆ  ನೋವು ಮಾಡಿ ಅವಳಿಗೆ ನೋವಾಗುವಂತೆ ಮಾಡುವುದು, ಮಕ್ಕಳನ್ನು ತಾಯಿಯಿಂದ ಬೇರೆ ಮಾಡುವುದು, ಅವಳನ್ನು ತವರಿನವರಿಂದ ಅವಳ ಸ್ನೇಹಿತರಿಂದ ಬೇರೆ ಮಾಡುವುದು  ಅವಳಿಗೆ ನೋವಾಗಲೆಂದು  ಮಕ್ಕಳಿಗೆ ವಿಪರೀತವಾದ ಹಿಂಸೆ ಕೊಡುವುದು, ಹಣಕಾಸಿನ ಸ್ವಾತಂತ್ರ್ಯ ಕೊಡದಿರುವುದು, ಅವಳ ಗಳಿಕೆಯನ್ನು ಗಂಡ ಮತ್ತು ಆತನ ಮನೆಯವರಿಗೇ ಕೊಡುವಂತೆ ಹೇಳುವುದು, ತವರಿನಿಂದ ಹಣ ತರುವಂತೆ ಹೇಳುವುದು, ಅವಳ ಗಳಿಕೆಯಲ್ಲಿ ಆಸ್ತಿ ಅಂತಸ್ತು ಪಡೆಯುವುದು., ಮನೆಯಲ್ಲಿ ಗಾಣದ ಎತ್ತಿನಂತೆ ದುಡಿಸಿಕೊಳ್ಳುವುದು, ರಾತ್ರಿಯಲ್ಲಿ ದೈಹಿಕ ಸಂಪರ್ಕದ ವಿಷಯದಲ್ಲಿ ವಿಪರೀತವಾದ ಹಿಂಸೆ ಕೊಡುವುದು, ವಿನಾಕಾರಣ ದೈಹಿಕ ಸಂಪರ್ಕವನ್ನೇನಿಲ್ಲಿಸಿಬಿಡುವುದು, ಆಕೆಯ ಅಂಗಾಂಗಗಳ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಆಕೆಯನ್ನು ಅವಾಚ್ಯ ಶಬ್ದಗಳಿಂದ ಬಯ್ಯುವುದು, ಆಕೆ ಕೆಲಸ ಮಾಡುವ ಕಡೆ ಹೋಗಿ ಆಕೆಯ ವಿರುದ್ಧ ಪುಕಾರು ಹಬ್ಬಿಸುವುದು, ಕೆಲಸಕ್ಕೆ ಹೋಗದಂತೆ ತಡೆಯುವುದು, ಮನೆಯ ಒಳಗೆ ಬಾರದಂತೆ ತಡೆಯುವುದು,  ಹೊಡೆ ಬಡೆ ಮಾಡುವುದು ಇನ್ನೂ ಇತ್ಯಾದಿ ಕೌಟುಂಬಿಕ ಹಿಂಸೆ ಯಾವ ಮಹಿಳೆಗೂ ಆಗಿಯೇ ಇರುವುದಿಲ್ಲವೇ ಎನ್ನುವುದನ್ನು ಡಿ.ವಿ ಕಾನೂನಿನ ವಿರುದ್ಧ ಮಾತಾಡುವವರು ಯೋಚಿಸಿ ನೋಡಬೇಕು. ಈ ಮೇಲೆ ಹೇಳಿದ ಹಿಂಸೆ “ಮಹಿಳೆಗೆ ಆದ ಹಿಂಸೆ  ತಾನೇ?” ಎಂದು ಯೋಚಿಸದೆ ಇದು “ವ್ಯಕ್ತಿಗೆ ಆಗುತ್ತಿರುವ ಹಿಂಸೆ,ಮನುಷ್ಯತ್ವದ ಮೇಲಿನ ಆಘಾತ” ಎನ್ನುವ ಆಲೋಚನೆಗೆ ನಾವು ಬರಬೇಕಾಗಿದೆ.   ಹಿಂಸೆಯನ್ನು ತಡೆದುಕೊಂಡು ಸತ್ತವರು ಸಾವಿರಾರೋ ಲಕ್ಷ ಮಂದಿಯೋ ಆಗಿದ್ದಿರಬೇಕು. ಇನ್ನು ಅದೆಷ್ಟೋಮಹಿಳೆಯರು ಹಿಂಸೆಯನ್ನು ಸಹಿಸಿಕೊಳ್ಳುತ್ತಾ ಬದುಕಿದ್ದರೂ ಸತ್ತಂತೆ ಜೀವನೋತ್ಸಾಹವೇ ಇಲ್ಲದೆ ಇರುವುದನ್ನು ಇಂದಿಗೂ ನಾವು ಕಾಣುತ್ತಿದೇವೆ. ಮಹಿಳೆಯೂ ಮನುಷ್ಯಳೇ , ಎನ್ನುವುದನ್ನು ಮರೆತು ನಡೆದಾಗ ಕಾನೂನಿನ ಮೊರೆ ಹೋಗದೇ ಇನ್ನೆಲ್ಲಿಗೆ ಹೋಗಲು ಸಾಧ್ಯ? ಡಿ.ವಿ  ಕಾನೂನಿನಲ್ಲಿ ಎದುರುದಾರರು ಕೇವಲ ಪುರುಷರೇ ಆಗಿರುವುದಿಲ್ಲ ಎನ್ನುವುದನ್ನೂ ಗಮನಿಸಬೇಕು.

ಈ ಡಿ.ವಿ ಕಾನೂನು ಬರಲಿಕ್ಕೆ ಮುಂಚೆ ಗಂಡನ ಮನೆಯಲ್ಲಿ ಹಿಂಸೆ ತಡೆಯಲಾಗದೇ ಹೆಣ್ಣುಮಕ್ಕಳು ತವರಿಗೆ ಬಂದು ಸೇರುತ್ತಿದ್ದರು. ಜೀವನಾಂಶಕ್ಕಾಗಿ ಒಂದು ಕೇಸು ಹಾಕಿ ಕೂತರೆ ಮುಗಿಯಿತು. ವರ್ಷಾನುಗಟ್ಟಲೆ ಕೇಸು ನಡೆಯುತ್ತಿರುವಾಗ ಅವನು ಅಲ್ಲೆ ಇವಳು ಇಲ್ಲೇಎನ್ನುವಂತೆ ಆಗಿ ಪತಿ ಪತ್ನಿಯರ ನಡುವಿನ ಅಂತರ ಬೆಳೆಯುತ್ತಾ ಹೋಗುತ್ತಿತ್ತು.  ಡಿ.ವಿ ಕಾನೂನಿನಿಂದ ಆದ ಅತ್ಯಂತ ದೊಡ್ಡ ಉಪಕಾರ ಎಂದರೆ , ಮಹಿಳೆ ತನಗಾಗುತ್ತಿರುವ ಹಿಂಸೆಯ ಬಗ್ಗೆ  ನಿವೇದಿಸಿಕೊಂಡಾಗ, ಆಕೆಗೆ, ಪ್ರಕರಣ ಅಂತಿಮವಾಗಿ ತೀರ್ಮಾನ ಆಗುವವರೆಗೆ  ಆಕೆಯ ಪತಿಯ ಮನೆಯಲ್ಲೇಉಳಿಯುವ ಮಧ್ಯಂತರ ಆದೇಶವನ್ನು “ರೆಸಿಡೆನ್ಸ್ ಆರ್ಡರ್” ನ್ಯಾಯಾಲಯ ಕೊಡುತ್ತದೆ. ಆಕೆಗೆ ಮುಂದುವರೆದ ಕೌಟುಂಬಿಕ ಹಿಂಸೆ ಆಗದಂತೆ ಆಕೆಗೆ ರಕ್ಷಣೆಯ ಆದೇಶವೂ/ಪ್ರೊಟೆಕ್ಷನ್ ಆರ್ಡರ್ ಸಹ ಸಿಗುತ್ತದೆ. ಹೀಗಾಗಿ ಅವಳು ಪತಿಯ ಮನೆಯಲ್ಲಿಯೇ ಹಿಂಸೆ ಇಲ್ಲದೆಯೇ ಇರಬಹುದು. ಈ ಮಧ್ಯೆ  ಹಿಂಸೆಗೆ ಕಾರಣರಾದ ಪತಿ ಮತ್ತು ಆತನ ಸಂಬಂಧಿಕರನ್ನು ನ್ಯಾಯಾಲಯ ಕರೆಯಿಸಿಕೊಂಡು, ಅವರೊಂದಿಗೆ ಮತ್ತು ನೊಂದ ಮಹಿಳೆ/ಸಂತ್ರಸ್ತೆಯೊಂದಿಗೆ ಮಾತಾಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ.  ಈ ವಿಷಯದಲ್ಲಿ ಕೌಟುಂಬಿಕ ಸಲಹಾಕಾರರ , ವೆಲ್‍ಫೇರ್ ಎಕ್ಸ್ಪರ್ಟ್ಗಳ ಸಹಾಯವನ್ನೂ ಪಡೆಯಲಾಗುತ್ತದೆ. ವಿಷಯದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು ಹೊಂದಾಣಿಕೆ ಮಾಡಿಕೊಂಡು ಹೋಗುವ ರಾಜಿಸೂತ್ರವಾದರೆ ಕೇಸು ಮುಂದುವರೆಯುವುದೇ ಇಲ್ಲ.  ಪತಿ ಮತ್ತು ಆತನ ಕಡೆಯವರಿಗೆ ನೋಟೀಸು ಜಾರಿಯಾದ  ಕೂಡಲೇ ಮೊಟ್ಟಮೊದಲಿಗೆ ಪ್ರಕರಣವನ್ನು ಮಧ್ಯಸ್ಥಿಕೆಗೆ/ಸಂಧಾನಕ್ಕೆ ನ್ಯಾಯಾಲಯ ಕಳುಹಿಸಿಕೊಡುತ್ತದೆ. ಪರಿಣಿತ ಮಧ್ಯಸ್ಥಿಕೆಗಾರರ ಸಂಧಾನಕಾರರ  ಸಹಾಯದಿಂದ ಭಿನ್ನಾಭಿಪ್ರಾಯಗಳು ದೂರವಾಗಬಹುದು. ಯಾವುದೇ ಸಂಸಾರದಲ್ಲಿ ಭಿನ್ನ ಮನೋಭಾವದ ವ್ಯಕ್ತಿಗಳ ನಡುವೆ ಜೀವನ ನಡೆಸುವಾಗ ಅನುದಿನದ ಏರು ಪೇರುಗಳಿಂದ ಆಗಿರಬಹುದಾದ ಗೊಂದಲಗಳು ಜಗಳಗಳು ಇದ್ದರೆ ಅವು ಸುಲಭವಾಗಿ ಇತ್ಯರ್ಥವಾಗಬಹುದು. ಒಬ್ಬರನ್ನೊಬ್ಬರು ಅರ್ಥ  ಮಾಡಿಕೊಳ್ಳಲು ಅನುವಾಗಬಹುದು.  ವೈವಾಹಿಕ ಸಂಬಂಧ ಮುಂದುವರೆಯಬಹುದು.    ಇದಕ್ಕಿಂತ ಇನ್ನೇನು ಬೇಕಿದೆ?. ಆದರೆ ನ್ಯಾಯಾಲಯಕ್ಕೆ ಹೋಗಿದ್ದೇತಪ್ಪು ಎಂದು ಪತಿ  ಮತ್ತು ಆತನ ಮನೆಯವರು  ಆಕೆಯ ವಿರುದ್ಧ ಜಿದ್ದು ಸಾಧಿಸಿದಾಗ ಪ್ರಕರಣ ವಿಚಾರಣೆಗೆ ಹೋಗುತ್ತದೆ. ವಿಚಾರಣೆಯ ನಂತರವೂ ಅಂತಿಮ ಆದೇಶದಲ್ಲಿ ನ್ಯಾಯಾಲಯ ಪತಿ , ಆತನ ಸಂಬಂಧಿಕರು ಮಾಡಿಕೊಳ್ಳಬೇಕಾದ ಪರಿವರ್ತನೆಗಳನ್ನು ಸಹ ಸೂಚಿಸ ಬಹುದು.  ಸಂತ್ರಸ್ತೆಗೆ ಪರಿಹಾರ ಕೊಡಲೇಬೇಕಾದ ಸಂದರ್ಭಗಳಲ್ಲಿ ಮಾತ್ರ ಆ ಬಗ್ಗೆ ಆದೇಶ ಆಗುತ್ತದೆ.

ಮದುವೆ ಮಾಡಿಕೊಳ್ಳುವುದು ಒಂದು ಆಟವಲ್ಲ. ಮಹಿಳೆಗೆಪ್ರೀತಿ ಕಾಳಜಿ ಗೌರವ ಕೊಡದೇ ಕೌಟುಂಬಿಕ ನೆಲೆಯಲ್ಲಿ ಅವಳನ್ನು ಹಿಂಸೆಯ ಒಡನಾಡಿಯಾಗಿ ಇರಿಸಿಕೊಳ್ಳುವಂತಿಲ್ಲ ಎನ್ನುವ ಖಡಕ್ ಸೂಚನೆಯನ್ನು ಕೊಟ್ಟ ಒಂದು ಅತ್ಯುತ್ತಮ ಕಾನೂನು ಡಿ.ವಿ. ಕಾನೂನು.

ಡಿ.ವಿ ಕಾನೂನಿನ ದುರುಪಯೋಗವೇ ಆಗುತ್ತಿಲ್ಲ ಎಂದೂ ಹೇಳಲಾಗುವುದಿಲ್ಲ. ಅರ್ಜಿದಾರಳಾದ ಮಹಿಳೆ ತನ್ನ ಪತಿ ಮತ್ತು ಆತನ ಸಂಬಂಧಿಕರ ಎಲ್ಲರ  ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ. ತನಗೆ ಯಾರಿಂದ ಕೌಟುಂಬಿಕ ಹಿಂಸೆ ಆಗಿದೆಯೋ ಅವರ ವಿರುದ್ಧ ಮಾತ್ರ ದಾಖಲಿಸಬೇಕು. ಪ್ರಕರಣದಲ್ಲಿ ಎದುರುದಾರರಾಗಬೇಕಾದರೆ ಅವರು ಮಹಿಳೆಗೆ ಆಕೆಯ ವಿವಾಹದ ಮೂಲಕ ಸಂಬಂಧಿತರಾಗಿರಬೇಕು ಮತ್ತು ಅವರೊಡನೆ ಆಕೆ ಒಂದು ಕುಟುಂಬದ ಸದಸ್ಯೆಯಾಗಿ ಹಿಂಸೆಯನ್ನು ಅನುಭವಿಸಿರಬೇಕು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳದೇ ಎಲ್ಲೋದೂರದ ಸ್ಥಳದಲ್ಲಿರುವ , ತನ್ನ ಗಂಡನ ತಂಗಿ, ತಮ್ಮ ಚಿಕ್ಕಪ್ಪ  ಅವರು ಇವರು ಎಂದು ಎಲ್ಲರ ಮೇಲೆ ಕೇಸು ಹಾಕಿದರೆ, ಅವರ ವಿರುದ್ಧ ಪ್ರಕರಣ ಪ್ರಾರಂಭಿಕ ಹಂತದಲ್ಲೇರದ್ದಾಗುತ್ತದೆ.  ‘ಹಿಂಸೆಯ ಪರಿಧಿಗೆ ಬರದ ಕೇವಲ ಸಣ್ಣ ಪುಟ್ಟ ಜಗಳಗಳ, ಭಿನ್ನಾಭಿಪ್ರಾಯಗಳ ಇಷ್ಟ ಅ-ಇಷ್ಟಗಳ ವ್ಯಾಪ್ತಿಗೆ ಬರುವ ವಿಚಾರಗಳಿಗಾಗಿ ಪ್ರಕರಣವನ್ನು ದಾಖಲು ಮಾಡುವ ಪರಿಪಾಠವನ್ನು ಮಹಿಳೆಯರೂ ಕೈಬಿಡಬೇಕಿದೆ.

ಒಟ್ಟಾರೆ ಹೇಳುವುದಾದರೆ ಈ ಕಾನೂನಿನ ವಿರುದ್ಧ ಕೂಗು ನಿಲ್ಲಬೇಕಾದರೆ, ಮಹಿಳೆಯರ ವಿರುದ್ಧ ಕೌಟುಂಬಿಕ ಹಿಂಸೆಯೇ ಇಲ್ಲದಂತಾಗಬೇಕು. ಆ ಶುಭದಿನ ಬಂದಾಗ ನಾವು ಮಹಿಳೆಯರೇ ನಿಂತು ಈ ಕಾನೂನಿನ ಅವಶ್ಯಕತೆಯಿಲ್ಲ ಎಂದು ಹೇಳಬಹುದು.

( ಲೇಖಕರು ಮೂವತ್ಮೂರು ವರ್ಷಗಳಿಂದ ವಕೀಲವೃತ್ತಿ ನಡೆಸುತ್ತಿರುವ ಕರ್ನಾಟಕ ಉಚ್ಛನ್ಯಾಯಾಲಯದ ಖ್ಯಾತ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು ಮತ್ತು ಅಂಕಣಕಾರರು).

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *