ಕೌಟುಂಬಿಕ ನ್ಯಾಯಕ್ಕಾಗಿ ಇನ್ನೆಷ್ಟು ಕಾಯಬೇಕು ? – ಗೌರಿ ಚಂದ್ರಕೇಸರಿ
2015ರಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ 639 ಜನರ ವಿರುಧ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದರೆ, ಅದರಲ್ಲಿ ಶಿಕ್ಷೆಯಾಗಿದ್ದು ಕೇವಲ 13 ಜನರಿಗೆ ಮಾತ್ರ. ಇದು ನಮ್ಮ ರಕ್ಷಣಾ ಇಲಾಖೆಯ ಕಾರ್ಯ ವೈಖರಿ. ದಾಖಲಾದ ಬಹುತೇಕ ಪ್ರಕರಣಗಳು ಕ್ರಿಮಿನಲ್ ಸ್ವರೂಪದ ಹಿಂಸೆಗಳಲ್ಲ ಎಂದು ಪರಿಗಣಿಸಿ ಶಿಕ್ಷೆಯನ್ನು ನೀಡಲಾಗಿಲ್ಲ ಎಂದು ಹೇಳಿದ ಗೃಹ ಇಲಾಖೆಯ ರಾಜ್ಯ ಸಚಿವರು ಬಹುಷ: ಜೀವಹಾನಿ ಸಂಭವಿಸಿದಲ್ಲಿ ಮಾತ್ರ ಅದನ್ನು ದೌರ್ಜನ್ಯವೆಂದು ಪರಿಗಣಿಸಿದರೇನೊ! ಇಲ್ಲಾ ನೀಡುವ ದೌರ್ಜನ್ಯ ಹಿಂಸಾ ರೂಪವನ್ನು ಪಡೆದುಕೊಳ್ಳುವವರೆಗೂ ಹೆಣ್ಣುಮಕ್ಕಳು ನ್ಯಾಯಕ್ಕಾಗಿ ಕಾಯಬೇಕೇನೋ ಎನ್ನಿಸುತ್ತದೆ.
ದಿನ ನಿತ್ಯ ಸಾವಿರಾರು ಹೆಣ್ಣು ಮಕ್ಕಳು ನಾಲ್ಕು ಗೋಡೆಗಳ ಮಧ್ಯ ಹಲವಾರು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆಯನ್ನು ಅನುಭವಿಸುತ್ತಿದ್ದಾರೆ. ದೌರ್ಜನ್ಯವೆಸಗಿದ ಕುರುಹುಗಳು ದೇಹದ ಮೇಲೆ ಕಂಡು ಬಂದಲ್ಲಿ ಮಾತ್ರ ಅದು ದೌರ್ಜನ್ಯವಲ್ಲ. ಕಾನೂನಿನ ಕಣ್ಣಿಗೆ ಮಣ್ಣೆರಚಿ ನಿರಪರಾಧಿ ಎನ್ನಿಸಿಕೊಳ್ಳಲು ಏನೇನು ಅಗತ್ಯವಿದೆಯೋ ಆ ಎಲ್ಲಾ ತಂತ್ರಗಳನ್ನು ದೌರ್ಜನ್ಯವೆಸಗುವವರು ತಿಳಿದಿರುತ್ತಾರೆ. ಹೆಣ್ಣಿನ ದೌರ್ಬಲ್ಯಗಳನ್ನು ಬಂಡವಾಳವನ್ನಾಗಿಸಿಕೊಂಡು ನಾನಾ ವಿಧದಲ್ಲಿ ದೈಹಿಕ, ಮಾನಸಿಕ ಹಿಂಸೆಗಳನ್ನು ಎಸಗುತ್ತಾರೆ. ಸದಾ ತವರುಮನೆಯವರನ್ನು ಅಸಭ್ಯವಾಗಿ ನಿಂದಿಸುವುದು, ಆಕೆಯ ಶೀಲವನ್ನು ಶಂಕಿಸಿ ಚಾರಿತ್ರ್ಯವಧೆ ಮಾಡುವುದು, ಅಕ್ಕ-ಪಕ್ಕದವರಿಗೆ ಕಿಂಚಿತ್ತೂ ತಿಳಿಯದಂತೆ ಚಿತ್ರ ವಿಚಿತ್ರವಾದ ಮಾನಸಿಕ ದೈಹಿಕ ಹಿಂಸೆಯನ್ನು ನೀಡುವ ಅತೃಪ್ತರು ಹಲವಾರು ಕುಟುಂಬಗಳಲ್ಲಿ ಕಂಡು ಬರುತ್ತಾರೆ. ಸುಶಿಕ್ಷಿತರಲ್ಲದ, ಆರ್ಥಿಕವಾಗಿ ಸಬಲರಲ್ಲದ, ತವರು ಮನೆಯವರ ಬೆಂಬಲವಿಲ್ಲದ ಸಾವಿರಾರು ಹೆಣ್ಣು ಮಕ್ಕಳು ನಾಲ್ಕು ಗೋಡೆಗಳ ಮಧ್ಯದ ಹಿಂಸೆಯನ್ನು ಮೌನವಾಗಿ ಅನುಭವಿಸುತ್ತಿದ್ದಾರೆ. ಮಕ್ಕಳಿಗಾಗಿ ತಮ್ಮ ನೋವನ್ನೆಲ್ಲ ಸಹಿಸಿಕೊಂಡು ದಿನಗಳನ್ನು ದೂಡುತ್ತಿದ್ದಾರೆ. ಸೂಕ್ಷ್ಮ ಮನಸ್ಸಿನ ಕೆಲ ಹೆಣ್ಣು ಮಕ್ಕಳು ಆತ್ಮ ಹತ್ಯೆಯ ಮೊರೆ ಹೋದರೆ ಇನ್ನು ಕೆಲವರು ತಮ್ಮ ನಂತರ ಮಕ್ಕಳ ಗತಿಯೇನು ಎಂದು ಯೋಚಿಸುತ್ತ ಬದುಕಿಯೂ ಸತ್ತಂತಿದ್ದಾರೆ. ಹೆಣ್ಣು ಸಹನಾಮಯಿ, ಕ್ಷಮಯಾಧರಿತ್ರಿ ಎಂಬ ಬಿರುದು ಬಾವಲಿಗಲನ್ನು ನೀಡಿ ಹೇಗಾದರೂ ಹೊಂದಾಣಿಕೆ ಮಾಡಿಕೊಂಡು ಹೋಗು ಎನ್ನುವ ಸಮಾಜ ಆಕೆಯ ಅಸ್ಥಿತ್ವವನ್ನೇ ಇಲ್ಲವಾಗಿಸಿ ಬಿಡುತ್ತದೆ.
ಹೊರಗೆ ಹೋಗಿ ದುಡಿಯುವ ಕೆಲ ಹೆಣ್ಣು ಮಕ್ಕಳು ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಹೊರ ನಡೆದು ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುಧ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಇಂಥ ಹೆಣ್ಣು ಮಕ್ಕಳ ಪ್ರತಿ ಸಮಾಜ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತದೆ. ಶಾಂತಿ, ನೆಮ್ಮದಿಯುತ ಜೀವನವನ್ನು ನಡೆಸಲೂ ಆಕೆಗೆ ಅವಕಾಶವನ್ನು ನೀಡುವುದಿಲ್ಲ. ಎದೆಗಾರಿಕೆಯುಳ್ಳ ಕೆಲ ಹೆಣ್ಣು ಮಕ್ಕಳು ದೂರು ನೀಡಲು ಹೋದಲ್ಲಿ ಎಷ್ಟೋ ಕಡೆಗೆ ದೂರನ್ನೂ ಸ್ವೀಕರಿಸುವುದಿಲ್ಲ. ಅಕಸ್ಮಾತ್ ಆಗಿ ದೂರನ್ನು ಸ್ವೀಕರಿಸಿದರೂ ದೌರ್ಜನ್ಯವೆಸಗಿದವರ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ. ನೀಡಿದ ದೂರುಗಳು ಕಡತಗಳಲ್ಲೇ ಧೂಳು ತಿನ್ನುತ್ತಿರುವ ಉದಾಹರಣೆಗಳೂ ಇವೆ.
ಇತ್ತೀಚಿನ ದಿನಗಳಲ್ಲಿ ಮಹಿಳಾ ಸಹಾಯ ವಾಣಿ, ವನಿತಾ ಸಹಾಯವಾಣಿಗಳು ಕನಿಷ್ಠ ಪಕ್ಷ ದೌರ್ಜನ್ಯವೆಸಗಿದವರನ್ನು ಕರೆಸಿ ಪ್ರಶ್ನಿಸುವ ಕೆಲಸವನ್ನಾದರೂ ಮಾಡುತ್ತಿವೆ. ಇದರಿಂದ ದೌರ್ಜನ್ಯವೆಸಗುವ ಮುನ್ನ ಆ ವ್ಯಕ್ತಿ ಒಮ್ಮೆ ಯೋಚಿಸುವಂತೆ ಮಾಡಿದೆ. ಕೇವಲ ದೈಹಿಕ ಹಿಂಸೆಯಷ್ಟೇ ದೌರ್ಜನ್ಯವಲ್ಲ, ಮಾನಸಿಕ ಚಿತ್ರಹಿಂಸೆ ಕೂಡ ದೌರ್ಜನ್ಯದ ಒಂದು ಮುಖವೆಂದು ಪರಿಗಣಿಸಿ “ಕೌಟುಂಬಿಕ ದೌರ್ಜನ್ಯ ಕಾಯ್ದೆ”ಯಡಿ ತಪ್ಪಿತಸ್ಥರನ್ನು ಶಿಕ್ಷಿಸಬೇಕಿದೆ.
ಗೌರಿ ಚಂದ್ರಕೇಸರಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.