Uncategorizedದೇಶಕಾಲ

ಕೊರೋನ ಕಥನ/ ಹುಡುಗಿಯರನ್ನು ಬಳಲಿಸುತ್ತಿರುವ ಕೊರೋನ ಬಿರುಗಾಳಿ

ಕೋವಿಡ್- 19 ಸೋಂಕಿನಿಂದ ಬಳಲಿ ಬೆಂಡಾದ ದೇಶ ಇದೀಗ ಎರಡನೇ ಅಲೆಯಲ್ಲಿ ಬಸವಳಿಯುತ್ತಿದೆ. ಮೂರನೇ ಅಲೆ ಹತ್ತಿರದಲ್ಲೇ ನಿಂತು ಹೆದರಿಸುತ್ತಿದೆ. ಆರ್ಥಿಕ ವ್ಯವಸ್ಥೆ, ಉದ್ಯೋಗ, ಶಿಕ್ಷಣ, ಸಾಮಾಜಿಕ ಜೀವನ ಎಲ್ಲದಕ್ಕೂ ಹೊಡೆತ ಕೊಟ್ಟಿರುವ ಕೊರೋನ, ಪ್ರತಿಯೊಂದು ವಯೋಮಾನದ ಜನರಿಗೂ ವಿಶಿಷ್ಟವಾದ ಕಷ್ಟಗಳನ್ನು ಕೊಟ್ಟಿದೆ. ಒಟ್ಟಾರೆ ಜನಜೀವನದ ಮೇಲೆ ಆಗಿರುವ ದುಷ್ಪರಿಣಾಮಗಳು ಎದ್ದು ಕಾಣುತ್ತಿದ್ದರೂ, ಕೊರೋನ ಸಂಕಷ್ಟಗಳ ವಲಯವಾರು ಮತ್ತು ವಯೋವಾರು ಸಮೀಕ್ಷೆ ಮತ್ತು ವಿಶ್ಲೇಷಣೆ ಕ್ರಮಬದ್ಧವಾಗಿ, ಪೂರ್ಣವಾಗಿ ನಡೆದಿಲ್ಲ. ಆದರೆ, ಅಲ್ಲಲ್ಲಿ ನಡೆದಿರುವ ಸಮೀಕ್ಷೆಗಳ ಫಲಿತಾಂಶಗಳೇ ಹೆದರಿಕೆ ಹುಟ್ಟಿಸುವಂತಿವೆ.

ಮನೆಮನೆಗಳಲ್ಲಿ ಹುಡುಗಿಯರ ಮೇಲೆ ದೌರ್ಜನ್ಯ ಹೆಚ್ಚಳ, ಶಾಲೆ ಕಾಲೇಜು ಬಿಟ್ಟು ಮದುವೆ ಮಾಡಿಕೊಳ್ಳಲು ಒತ್ತಾಯ, ದಿನವಿಡೀ ಮನೆಗೆಲಸ ಮಾಡಿ ಸುಸ್ತು, ಆನ್ ಲೈನ್ ಕಲಿಕೆಗೆ ಬೇಕಾದ ಉಪಕರಣಗಳಿಲ್ಲದೆ ಆತಂಕ, ಸರಿಯಾದ ಮಾಹಿತಿಗಳಿಲ್ಲದೆ ಪರದಾಟ, ದುಡ್ಡುಕಾಸು ಕೊರತೆಯಿಂದ ಬೇಸರ, ವಿಪರೀತ ಮಾನಸಿಕ ಒತ್ತಡ – ಹೀಗೆ ಹುಡುಗಿಯರಿಗೆ ಕೊರೋನ ಕೊಡುತ್ತಿರುವ ಕಾಟ ಒಂದೆರಡಲ್ಲ.

“ಕೋವಿಡ್- ಅವಳ ಮಾತು : ಹುಡುಗಿಯರ ಬಗ್ಗೆ ಹುಡುಗಿಯರು ನಡೆಸಿದ ಅಧ್ಯಯನ” ಇತ್ತೀಚೆಗೆ ಏಳು ನಗರಗಳಲ್ಲಿ ನಡೆಯಿತು. ಇಪ್ಪತ್ತೈದು ಹುಡುಗಿಯರು ತಮ್ಮ ಗೆಳತಿಯರನ್ನು ಸಂದರ್ಶಿಸಿ ಅವರಿಂದ ಮಾಹಿತಿ ಸಂಗ್ರಹಿಸಿದರು. 13 ರಿಂದ 24 ವರ್ಷ ವಯಸ್ಸಿನ ಹುಡುಗಿಯರು ಈ ಸಮೀಕ್ಷೆಯನ್ನು ನಡೆಸಿದರು. ದೆಹಲಿ, ಮುಂಬೈ, ಪುಣೆ, ಅಹಮದಾಬಾದ್, ಆಳ್ವಾರ್, ಬರೈಲಿ, ಲಕ್ನೋ ನಗರಗಳಲ್ಲಿ ತಮ್ಮ ಸುತ್ತಮುತ್ತಲಿನ, ತಮ್ಮ ಸಮುದಾಯದ ಹುಡುಗಿಯರನ್ನೇ ಅವರು ಸಂದರ್ಶನ ಮಾಡಿದರು. ಇದಕ್ಕೆ ಅವರಿಗೆ ತರಬೇತಿಯನ್ನು ನೀಡಲಾಗಿತ್ತು. ಹೊಸ ಕಾಲಮಾನದಲ್ಲಿ ಒತ್ತಡ ಎದುರಿಸುವ ಯುವಜನರ ಭಾವನೆಗಳನ್ನು ಸಮೀಕ್ಷಿಸುವ ಸಂಸ್ಥೆ ್ಥಯೊಂದು ಇದನ್ನು ನಡೆಸಿತ್ತು.

ಕೊರೋನ ಬಂದ ಮೇಲೆ ಶಾಲೆಕಾಲೇಜುಗಳೆಲ್ಲ ಆನ್ ಲೈನ್ ಪದ್ಧತಿಗೆ ಬದಲಾದವು. ಆದರೆ ಹುಡುಗಿಯರು ಮತ್ತು ಹುಡುಗರಿಗೂ ಅದಕ್ಕೆ ಅಗತ್ಯವಾದ ಕಂಪ್ಯೂಟರ್, ಟಾಬ್ಲೆಟ್, ಮೊಬೈಲ್ ಫೋನ್ ಮುಂತಾದ ಯಾವ ಉಪಕರಣಗಳೂ ಇಂಟರ್ ನೆಟ್ ಸಂಪರ್ಕವೂ ಸುಲಭವಾಗಿ ಲಭ್ಯವಿರಲಿಲ್ಲ. ಇದರಿಂದ ಅವರ ಶಿಕ್ಷಣವೇ ಬರಖಾಸ್ತು ಆಗುವಂತಾಯಿತು. ಹೇಗೂ ಅವರಿಗೆ ಶಾಲೆ/ಕಾಲೇಜು ಇಲ್ಲ ಎಂದು ಅವರ ಮೇಲೆ ಮನೆಗೆಲಸದ ಹೊರೆ ಹೊರಿಸಲಾಯಿತು. ಸಮೀಕ್ಷೆಗೆ ಒಳಗಾದವರಲ್ಲಿ ಶೇ. 80 ಮಂದಿ ಹುಡುಗಿಯರು ಹೆಚ್ಚಿದ ಮನೆಗೆಲಸದಿಂದ ಆಗುತ್ತಿರುವ ಸುಸ್ತಿನ ಬಗ್ಗೆ ಹೇಳಿಕೊಂಡರು.

ತಳಸಮುದಾಯಗಳ ಕುಟುಂಬಗಳಲ್ಲಿ ಆದ ಆರ್ಥಿಕ ಸಂಕಷ್ಟ ಹುಡುಗಿಯರ ಮೇಲೇ ಹೆಚ್ಚು ಒತ್ತಡ ಹೇರಿತು. ದೌರ್ಜನ್ಯದ ಭಯ ಅವರ ಓಡಾಡುವ ಸ್ವಾತಂತ್ರ್ಯವನ್ನೂ ಕಸಿಯಿತು. ಒಟ್ಟು ಶೇ. 42 ರಷ್ಟು ಹುಡುಗಿಯರು ಮದುವೆ ಆಗುವಂತೆ ಮನೆಯ ಹಿರಿಯರು ಒತ್ತಡ ಹೇರುತ್ತಿರುವುದನ್ನು ಹೇಳಿಕೊಂಡರು. ಹೆಣ್ಣುಮಕ್ಕಳಿಗೆ ಕೌಶಲ ಅಭಿವೃದ್ಧಿ ತರಬೇತಿ, ಆಪ್ತ ಸಮಾಲೋಚನೆ, ಡಿಜಿಟಲ್ ಸೌಲಭ್ಯಗಳನ್ನು ಒದಗಿಸುವುದು ಮುಂತಾದ ಹಲವು ಶಿಫಾರಸುಗಳನ್ನು ಸಮೀಕ್ಷಾ ವರದಿಯು ಸೂಚಿಸಿತು.

ಒಟ್ಟಾರೆ ಇದೊಂದು ಸಣ್ಣ ಮಾದರಿ ಮತ್ತು ಪ್ರಮಾಣದ ಸಮೀಕ್ಷೆ ಆಗಿದ್ದರೂ ಇಂಥ ಮತ್ತು ಇನ್ನೂ ಅನೇಕ ಸಂಕಷ್ಟಗಳನ್ನು ಕೊರೋನ ಕಾಲದ ಲಾಕ್ ಡೌನ್, ಸೋಂಕು ಹರಡುವಿಕೆ ಮತ್ತು ಆರ್ಥಿಕ ಕುಸಿತ ಮುಂತಾದುವು ದೇಶದ ಎಲ್ಲ ಪ್ರದೇಶಗಳ, ಎಲ್ಲ ಜಾತಿಸಮುದಾಯಗಳ ಹೆಣ್ಣುಮಕ್ಕಳಿಗೆ ತಂದೊಡ್ಡಿದೆ ಎಂಬುದನ್ನು ತಿಳಿಯಬಹುದು. (ವಿವಿಧ ಮೂಲಗಳಿಂದ)
-ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *