ಕೊರೋನ ಕಥನ/ ಬಾಲಕಿಯರ ಬದುಕಿಗೆ ಬಂದೆರಗಿದ ಬಾಧೆ – ಮಲಿಕಜಾನ ಶೇಖ

ಕೊರೋನ ತಲ್ಲಣದಿಂದ ಶಿಕ್ಷಣ ಕ್ಷೇತ್ರದಲ್ಲಿಬಹಳಷ್ಷು ಬದಲಾವಣೆಗಳು ಕಾಣಬಹುದು, ಸಮಸ್ಯೆಗಳು  ಉಲ್ಬಣಿಸಬಹುದು. ಇವೆಲ್ಲದರ ಪರಿಣಾಮ ಹೆಚ್ಚಾಗಿ ಎರಗುವುದು ಬಾಲಕಿಯರ ಶಿಕ್ಷಣದ ಮೇಲೆ ಎನ್ನುವುದನ್ನು ಗಮನಿಸಬೇಕು. ಹಠಾತ್ತನೆ ಬಂದಕೊರೋನ ಬಾಲಕಿಯರ ಕಲಿಕೆಗೆ ಕಂಟಕವಾಗುವ ಸಾಧ್ಯತೆ ಇದೆ. ಕುಟುಂಬದ ಆರ್ಥಿಕ ಸ್ಥಿರತೆ ಕಾಪಾಡಿ ಆತ್ಮಸ್ಥೈರ್ಯ ತುಂಬಿದರೆ ಬಾಲಕಿಯರು ಎದುರಿಸುವ ಗಂಡಾಂತರ ನಿಲ್ಲಿಸಬಹುದು. ಅದಕ್ಕಾಗಿ ಮತ್ತಷ್ಟು ಕಠಿಣವಾದ ಕಾನೂನು ಜಾರಿಮಾಡುವ ಅವಶ್ಯಕತೆ ಇದ್ದರೆ ಮಾಡಬಹುದು. ಶಾಲೆಗೆ ಕೊರೋನ ಬರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಕೊರೋನ ಜೊತೆ ಬದುಕುವುದು ಎಂದರೆ, ಅದರಲ್ಲಿ ಬಾಲಕಿಯರ ಶಿಕ್ಷಣ ನಿಲ್ಲದಂತೆ ನೋಡಿಕೊಳ್ಳುವುದೂ ಸೇರುತ್ತದೆ. 

  ಕೆಲವು ತಿಂಗಳ ಹಿಂದೆಹುಟ್ಟಿ ಜಗತ್ತಿನಲ್ಲಿ ಇನ್ನಿಲ್ಲದ ತಲ್ಲಣ ಉಂಟುಮಾಡುತ್ತಿರುವ ಕೊರೋನ ಕೋವಿಡ್ ೧೯ ವೈರಾಣು, ನಮ್ಮೆಲ್ಲರ ಜೀವನಕ್ಕೆ ಹೊಸ ಶಬ್ದಗಳನ್ನೂ ಹೊಸ ಆತಂಕಗಳನ್ನೂ ಪರಿಚಯಿಸಿದೆ. ಲಾಕ್ ಡೌನ್, ಕ್ವಾರಂಟೈನ್, ಐಸೋಲೇಷನ್ ಮುಂತಾದ ಪದಗಳು ಜನ ಸಾಮಾನ್ಯರ ಬದುಕಿನಲ್ಲಿ ಭಯ ಹುಟ್ಟಿಸುತ್ತಿವೆ. ಉದ್ಯೋಗ, ವ್ಯಾಪಾರ ಅಷ್ಟೆಅಲ್ಲದೆ ಶಿಕ್ಷಣ ಕ್ಷೇತ್ರದ ಮೇಲೆ ಕೂಡ ಪ್ರತಿಕೂಲವಾದ ಪರಿಣಾಮ ಬೀರುತ್ತಿವೆ. ಇಂದು ಶಾಲೆಗಳು, ಕಾಲೇಜುಗಳು  ಮುಚ್ಚಿಕೊಂಡಿವೆ; ತೆರೆಯುವ ಕಾಲ ಎಷ್ಟು ದೂರವಿದೆ ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಶಾಲೆಗಳು ಯಾವಾಗ ತೆರೆಯುತ್ತವೋ ಅದಿರಲಿ, ಕೊರೋನ ತಲ್ಲಣದಿಂದ ಶಿಕ್ಷಣ ಕ್ಷೇತ್ರದಲ್ಲಿಬಹಳಷ್ಷು ಬದಲಾವಣೆಗಳು ಕಾಣಬಹುದು, ಸಮಸ್ಯೆಗಳು  ಉಲ್ಬಣಿಸಬಹುದು. ಇವೆಲ್ಲದರ ಪರಿಣಾಮ ಹೆಚ್ಚಾಗಿ ಎರಗುವುದು ಬಾಲಕಿಯರ ಶಿಕ್ಷಣದ ಮೇಲೆ ಎನ್ನುವುದನ್ನು ಗಮನಿಸಬೇಕು. ಬಾಲಕಿಯರು ಮತ್ತೆ ಶಾಲೆಗೆಮೊದಲಿನಂತೆ ಬರಬಹುದಾ ಎಂಬ ಪ್ರಶ್ನೆ ಶಿಕ್ಷಣ ತಜ್ಞರನ್ನು ಈಗಾಗಲೇ ಕಾಡುತ್ತಿದೆ.           

ಹಲವು ದಶಕಗಳ ಹೋರಾಟದ ಫಲವಾಗಿ, ಕಳೆದ ಎರಡು ದಶಕಗಳಲ್ಲಿ ಬಾಲಕಿಯರು  ಶಿಕ್ಷಣ ಪಡೆಯುವಪ್ರಮಾಣ ಹೆಚ್ಚುತ್ತಲಿತ್ತು. ಜಗತ್ತಿನ ಪ್ರತಿ ದೇಶದಲ್ಲೂ ಬಾಲಕಿಯರ ಶಿಕ್ಷಣಕ್ಕಾಗಿ ವಿಶೇಷ ಪ್ರೋತ್ಸಾಹ ಕೊಟ್ಟು ಅವರು ಶಾಲೆಗೆ ಬರುವಂತೆ ಮಾಡುತ್ತಿದ್ದರು.

ವಿಶೇಷವಾಗಿ ಆಫ್ರಿಕಾ ಮತ್ತು ಅರಬ್ ಬಡರಾಷ್ಟ್ರಗಳು ಇತ್ತೀಗಷ್ಟೇ ಬಾಲಕಿಯರನ್ನು ಶಾಲೆಗಳಿಗೆ ಕಳುಹಿಸಲು ಪ್ರಾರಂಭ ಮಾಡಿದ್ದವು. ಆದರೆ ಹಠಾತ್ತನೆ ಬಂದಕೊರೋನ ಬಾಲಕಿಯರ ಕಲಿಕೆಗೆ ಕಂಟಕವಾಗುವ ಸಾಧ್ಯತೆ ಇದೆ.  ಇತ್ತೀಚೆಗೆ ತಾನೆ ವಿಶ್ವಮಕ್ಕಳ ಸಂರಕ್ಷಣೆ ಒಕ್ಕೂಟ ಯುನಿಸೆಫ್ ಕೂಡಈ ಕುರಿತು ಎಚ್ಚರಿಕೆಸಂದೇಶ ರವಾನಿಸಿದೆ. ಕೊರೋನದಿಂದ ವಿಶ್ವದ ಬಹುಸಂಖ್ಯೆಯ ಬಾಲಕಿಯರು ಶಿಕ್ಷಣದಿಂದ ದೂರಾಗುವ ಸಾಧ್ಯತೆ ಇದೆಎಂದು ಹೇಳಿದೆ. ಇದರಲ್ಲಿ ಭಾರತದ ಬಾಲಕಿಯರು ಕೂಡ ಇದ್ದೇ ಇದ್ದಾರೆ. ಇನ್ನು ಬಾಲಕಿಯರ ಕಲಿಕೆಗೆಮತ್ತು ಕೊರೋನ ಹಾವಳಿಗೆ ಏನು ಸಂಬಂಧ ಎಂಬ ಪ್ರಶ್ನೆ ಏಳಬಹುದು. ಕರ್ನಾಟಕ ಸರಕಾರದ ಮಕ್ಕಳ ಸಂರಕ್ಷಣೆ ವಿಭಾಗವು “ಕಳೆದೆರಡು ತಿಂಗಳ ಲಾಕ್ ಡೌನ್ ಅವಧಿಯಲ್ಲಿ ಬಾಲ್ಯ ವಿವಾಹದ ಪ್ರಮಾಣ ಹೆಚ್ಚಿದೆ” ಎಂದು ನೀಡಿದ ಹೇಳಿಕೆಯೇ ನೈಜ ಪರಿಸ್ಥಿತಿಯನ್ನು ನಮಗೆ ಸಾಕಷ್ಟು ವಿವರಿಸುತ್ತದೆ.          

ಅಂಧ ಶ್ರದ್ಧೆ, ಮೂಡ ನಂಬಿಕೆ, ಸಾಮಾಜಿಕ ಪ್ರಜ್ಞೆಯ ಕೊರತೆ, ಬಡತನ ಮೊದಲಾದ ನಾನಾ ಕಾರಣಗಳಿಂದ ಮಕ್ಕಳ ಬಾಲ್ಯ ವಿವಾಹ ಸೇರಿ ಹಲವು ಸಾಮಾಜಿಕ ಪಿಡುಗುಗಳ ಬೆಂಕಿಯಲ್ಲಿ ನರಳುತ್ತಿರುವ ನಮ್ಮ ಸಮಾಜಕ್ಕೆ ಕೋರೋನ ಭಯ ಎಣ್ಣೆ ಸುರಿದಿದೆ. ಕೊರೋನ ಪಿಡುಗು ತಂಡ ಆರ್ಥಿಕ ಸಂಕಷ್ಟದ ಪರಿಣಾಮದಲ್ಲಿ  ಹೆಚ್ಚಿದ ಪಾಲಕರ ಬಡತನವೇ ಅವರು ಮೊದಲು ಹೆಣ್ಣುಮಕ್ಕಳಿಗೆ ಶಾಲೆ ಬಿಡಿಸಿ, ಬಾಲ್ಯ ವಿವಾಹ ಮಾಡಲು ಮತ್ತೊಂದು ಕಾರಣ ಆಗಬಹುದು. 

ನಮ್ಮ ದಿನಚರಿ ಇನ್ನುಮುಂದೆ ಕೊರೋನದಿಂದಲೇ ಆರಂಭ ಆಗುವುದರಿಂದ ಅದು ಮಕ್ಕಳ ಶಾಲೆ ಮತ್ತು ಕಲಿಕೆಯನ್ನು ಬಿಡುವುದಿಲ್ಲ. ಎಲ್ಲ ಸೇರಿ ಕಲಿಕೆ ಮಾತ್ರ ದೊಡ್ಡ ಖರ್ಚಿನ ಸಂಗತಿಯಾಗಿ ಮಾರ್ಪಡುತ್ತದೆ. ಆದಾಯ ಕಡಿಮೆ ಆಗಿ ವೆಚ್ಚ ಕಡಿಮೆ ಮಾಡುವುದು ಅನಿವಾರ್ಯ ಆಗುವಾಗ, ಮೊದಲು ಕಣ್ಣಿಗೆ ಬೀಳುವುದು ಮಕ್ಕಳ ಶಿಕ್ಷಣವೇ. ಮಕ್ಕಳ ಬಗ್ಗೆ ನಿರ್ಧಾರ ಕೈಗೊಳ್ಳುವಾಗ, ಇದ್ದುದರಲ್ಲಿ ಗಂಡು ಮಕ್ಕಳಿಗೆ ಶಾಲೆ ಹೋಗುವ ಅವಕಾಶ ದಕ್ಕಬಹುದು.  ಎಲ್ಲ ಸಂದರ್ಭಗಳಲ್ಲೂ ಸುರಕ್ಷಿತವಾಗಿಯೆ ಶಾಲೆಗೆ ಹೋಗಬೇಕಾಗುತ್ತದೆ. ಸುರಕ್ಷಿತವಾಗಿ ಇರಲು ಇನ್ನುಮುಂದೆ ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ವಾಶ್, ಸಾಬೂನು ಎಲ್ಲವೂ ಮನೆ ಮತ್ತು ಶಾಲೆಯಲ್ಲಿ ಕಡ್ಡಾಯ ಆಗುತ್ತದೆ. ಜೊತೆಯಲ್ಲಿ ಶೈಕ್ಷಣಿಕ ಪರಿಕರಗಳು, ಪುಸ್ತಕಗಳ ಬೆಲೆ, ಖಾಸಗಿ ಶಾಲೆಗಳಾದರೆ ಶುಲ್ಕ ಎಲ್ಲವೂ ಗಗನಕ್ಕೆ ತಲುಪುವ ಸಾಧ್ಯತೆ ಇದೆ. ಈ ಭಾರವನ್ನು ಈಗಾಗಲೇ ಜರ್ಜರಿತರಾಗಿರುವ ಬಡ ಪಾಲಕರು ಹೊರುವುದು ಕಷ್ಟ. ಅದರ ಪರಿಣಾಮ ಹೆಣ್ಣುಮಕ್ಕಳ ಶಾಲೆ ಶಿಕ್ಷಣದ ಮೇಲೆ ಆಗುವುದು ಸುಲಭ.

`ಹೆಣ್ಣು ಮಗಳು ಮುಂದೆ ಕೊಟ್ಟ ಮನೆಗೆ ಹೋಗುವಳು ಸುಮ್ಮನೆ ಶಾಲೆಗೆ ಏಕೆ ವೆಚ್ಚ’ ಎಂಬ ವಿಚಾರ ಅನೇಕ ಪಾಲಕರಲ್ಲಿ ಇರುತ್ತದೆ. ಆದರೆ ತಮ್ಮ ಗಂಡು ಮಕ್ಕಳ ವಿಚಾರದಲ್ಲಿ ಹಾಗೆ ಯೋಚಿಸುವುದಿಲ್ಲ. ಬಾಲಕರನ್ನು ಮಾತ್ರ ಶಾಲೆಗೆ ಕಳುಹಿಸಬಹುದು. ಕೊರೋನ ಹಾವಳಿಯಲ್ಲಿ ಉಂಟಾದ ಆರ್ಥಿಕ ನಷ್ಟವನ್ನು ಭರಿಸುವ ಸಲುವಾಗಿ ಸಿಕ್ಕಸಣ್ಣ ಪುಟ್ಟ ಕೆಲಸಕ್ಕೆ ಬಾಲಕಿಯರನ್ನು ಕಳುಹಿಸುವ ಸಾಧ್ಯತೆ ಇರುತ್ತದೆ. ಅವರನ್ನೂ ಕೂಲಿಗೆ ಹಚ್ಚುವ ತುರ್ತು ಬರುತ್ತದೆ. ಹೀಗಾಗಿ ತನ್ನಿಂದ ತಾನೆ ಬಾಲಕಾರ್ಮಿಕ ಪದ್ಧತಿ ಮತ್ತಷ್ಷು ತಲೆ ಎತ್ತುವ ಸಾಧ್ಯತೆ ಇದೆ. ಇದು ಬಾಲಕಿಯರ ಕನಸನ್ನು ನುಚ್ಚುನೂರು ಮಾಡುತ್ತದೆ.          

ಅತ್ಯಂತ ಆಘಾತದ ವಿಷಯವೆಂದರೆ ವಲಸೆ ಕಾರ್ಮಿಕ ಬಾಲಕಿಯರ ಭವಿಷ್ಯದ ಕರಾಳ ಸ್ಥಿತಿ. ಹಲವು ವರ್ಷಗಳಿಂದ ಪಟ್ಟಣಗಳಲ್ಲಿ ವಾಸವಿದ್ದ ಪಾಲಕರು ಕೆಲಸಕ್ಕೆಂದು ಹೋದರೆ ಬಾಲಕಿಯರಿಗೆ ಶಾಲೆ ಕಲಿಯಲು ಹೋಗುವ ಅವಕಾಶ ಇರುತ್ತಿತ್ತು. ಈಗ ಇದ್ದಕ್ಕಿದ್ದಂತೆ ಇವರೆಲ್ಲ ಒಮ್ಮೆಲೆ ತಮ್ಮ ಹಳ್ಳಿಗಳತ್ತ ಮುಖ ಮಾಡಿದ್ದರಿಂದ ಹಳ್ಳಿಗಳಲ್ಲಿ ಇವರ ಪುನಃಶ್ಚೇತನಕ್ಕೆ ಬಹಳ ಸಮಯಬೇಕು. ಅಲ್ಲಿಯವರಿಗೆ ಬಹುತೇಕ ಮಕ್ಕಳೆಲ್ಲ ಶಾಲೆಯಿಂದ ದೂರ ಉಳಿಯಬೇಕಾಗುತ್ತದೆ. ಹಳ್ಳಿಯ ಶಾಲೆ ದೂರವಿದ್ದರೆ ಹೆಣ್ಣು ಮಕ್ಕಳ ಕಲಿಕೆಗೆ ಇನ್ನೂ ಏಟು ಬೀಳುತ್ತದೆ. ಅದಲ್ಲದೆ ಮೊದಲೆ ಹಳ್ಳಿಗಳಲ್ಲಿ ನೀರಿನ ದೊಡ್ಡ ಸಮಸ್ಯೆ. ಅದರಲ್ಲಿ ಹೆಚ್ಚು ವಲಸಿಗರ ಪುನರಾಗಮನದಿಂದ ನೀರಿಗೆ ದೊಡ್ಡ ಸಮಸ್ಯೆ ಆಗಬಹುದು. ಪಾಲಕರು ಹೊಟ್ಟೆಪಾಡಿಗೆ ಕೆಲಸಕ್ಕೆ ಹೋಗುವುದು ಅನಿವಾರ್ಯ ಆದಾಗ ಅನೇಕರು ತಮ್ಮ ಹೆಣ್ಣು ಮಕ್ಕಳನ್ನು ನೀರು, ಬಟ್ಟೆ, ಮುಸುರೇ, ಚಿಕ್ಕ ಮಕ್ಕಳ ಪಾಲನೆ ಮುಂತಾದ ಇನ್ನಿತರ ಕೆಲಸಕ್ಕೆ ಹಚ್ಚಬಹುದು. ಆದಿವಾಸಿ ಮತ್ತು ಅಲೆದಾಡುವ ಜನಾಂಗದ ಬಾಲಕಿಯರಂತೂ ಶಾಲೆಗೆ ಮರಳಲು ಹರಸಾಹಸ ಮಾಡಬೇಕಾಗುತ್ತದೆ.     

ಹೆಚ್ಚಿದ ದೌರ್ಜನ್ಯ : ಅನೇಕ ವರದಿಗಳ ಪ್ರಕಾರ, ಲಾಕ್ ಡೌನ್ ಸಮಯದಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಅದರಲ್ಲಿಬಾಲಕಿಯರ ಮೇಲಿನ ದೌರ್ಜನ್ಯವೂ ಹೆಚ್ಚಿರುತ್ತದೆ. ಎಲ್ಲರೂ ಮನೆಯಲ್ಲೇ ಉಳಿದು, ಕಷ್ಟಗಳು ಮುತ್ತಿದ್ದಾಗ ಗಂಡಸರ ಕೋಪ ಮಕ್ಕಳ ಮೇಲೂ ಸುರಿಯುತ್ತದೆ. ಅನೇಕ ಪಾಲಕರು ಮುಂದಿನ ದಿನಗಳಲ್ಲಿ ಹೊರಗೆ ಸುರಕ್ಷತೆ ಇಲ್ಲ ಎಂದೇ ಹೆಣ್ಣು ಮಕ್ಕಳನ್ನು ಮನೆಯಲ್ಲಿ ಕೂಡಿಸಬಹುದು. ಅವಕಾಶ ಸಿಕ್ಕರೆ ಬಾಲ್ಯವಿವಾಹದ ಮಾರ್ಗ ಅನುಸರಿಸುತ್ತಾರೆ. ಅದಲ್ಲದೆ ಬಾಲ್ಯ ವಿವಾಹಕ್ಕೆ ಆರ್ಥಿಕ ಆಮಿಷಗಳೂ ಮುಖ್ಯ ಕಾರಣ ಆಗುತ್ತವೆ. ಇದು ಬಾಲಕಿಯರ ಕಲಿಕೆ ಅರ್ಧದಲ್ಲಿ ನಿಲ್ಲಿಸುತ್ತದೆ. 

ಕೆಲವೊಂದು ದೇಶಗಳಲ್ಲಿ ಅಂಧ ಧರ್ಮದ ಜನರು “ಕೊರೋನ ಹರಡುವಿಕೆಗೆ ಹೆಣ್ಣು ಶಾಲೆ ಕಲಿತು ಮುಂದೆ ಬಂದು ಸ್ವತಂತ್ರಳಾಗಿ ತಿರುಗುವುದೇ ಕಾರಣ” ಎಂದು ಅಮಾನುಷವಾಗಿ ಬಿಂಬಿಸುತ್ತಿದ್ದಾರೆ. ನೈಜಿರೀಯಾ, ಸಿರಿಯಾ, ಅಪಘಾನಿಸ್ತಾನ,  ಪಾಕಿಸ್ತಾನಗಳಂತಹ ರಾಷ್ಟ್ರಗಳಲ್ಲಿ ಈ ಕೊರೋನ ಮತ್ತಷ್ಟು ಭಯ ಒಡ್ಡಿದೆ. ಅಲ್ಲಿಯ ಪಾಲಕರು ಮುಂದಿನ ದಿನಗಳಲ್ಲಿ ಬಾಲಕಿಯರನ್ನು ಶಾಲೆಗೆ ಕಳುಹಿಸುವುದೇ ಅನುಮಾನ ಎಂದು ಹೇಳಲಾಗುತ್ತಿದೆ. ಅಲ್ಲಿಯೂ ಕೆಲಸ ಮತ್ತು ದುಡಿಮೆ ಇಲ್ಲದ ಅದೆಷ್ಟೋ ಜನರಿಗೆ ಮಕ್ಕಳಿಗೆ ಶಿಕ್ಷಣ ಕೊಡುವುದು ದೊಡ್ಡ ಸಮಸ್ಯೆಯೆ ಆಗಿರುತ್ತದೆ. ಇನ್ನು ಆನ್ ಲೈನ್ ಶಿಕ್ಷಣದ ಲಕ್ಷುರಿ ಎಷ್ಟು ದೇಶಗಳಲ್ಲಿ, ಎಷ್ಟು ಮಕ್ಕಳಿಗೆ, ಅದರಲ್ಲೂ ಎಷ್ಟು ಹೆಣ್ಣುಮಕ್ಕಳಿಗೆ ದಕ್ಕುತ್ತದೆ ಎನ್ನುವುದು ಊಹೆಗೆ ಬಿಟ್ಟ ವಿಚಾರ. ಈ ವೈರಾಣು ತಂದಿರುವ ದೊಡ್ಡ ಸಮಸ್ಯೆಗಳಲ್ಲಿ, ಖಾಸಗಿ ಶಾಲೆಗಳ ನಿಯಂತ್ರಣವೂ ಒಂದಾಗಿದೆ.           

ಅದಕ್ಕಾಗಿ ಜಗತ್ತಿನ ಎಲ್ಲ ದೇಶಗಳು ಯುನಿಸೆಫ್‍ದ ಮಾರ್ಗದರ್ಶನ ಮತ್ತು ದೇಶದ ಶಿಕ್ಷಣ ತಜ್ಞರ ಸಲಹೆಮೇರೆಗೆ, ಮಕ್ಕಳ ಶಿಕ್ಷಣವನ್ನು ತಡೆಯಿಲ್ಲದೆ ಮುಂದುವರಿಸಲು ಎಲ್ಲಕ್ಕಿಂತ ಮುಖ್ಯವಾಗಿ, ಪ್ರತಿಯೊಂದು ಕುಟುಂಬಕ್ಕೂ ದುಡಿಮೆ ಮತ್ತು ಆರ್ಥಿಕ ಸಹಾಯ ಒದಗಿಸಬೇಕಾಗಿದೆ. ಕುಟುಂಬದ ಆರ್ಥಿಕ ಸ್ಥಿರತೆ ಕಾಪಾಡಿ ಆತ್ಮಸ್ಥೈರ್ಯ ತುಂಬಿದರೆ ಬಾಲಕಿಯರು ಎದುರಿಸುವ ಗಂಡಾಂತರ ನಿಲ್ಲಿಸಬಹುದು. ಅದಕ್ಕಾಗಿ ಮತ್ತಷ್ಟು ಕಠಿಣವಾದ ಕಾನೂನು ಜಾರಿಮಾಡುವ ಅವಶ್ಯಕತೆ ಇದ್ದರೆ ಮಾಡಬಹುದು. ಅದಲ್ಲದೆ ಸರಕಾರಗಳು ಕೇವಲ ಶಾಲೆಗಳನ್ನು ಪ್ರಾರಂಭಿಸಿ ಎಂದು ಬರೀ ಆದೇಶ ಹೊರಡಿಸದೆ, ಶಾಲೆಗೆ ಕೊರೋನ ಬರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳಲ್ಲಿ ಅರಿವು ಮೂಡಿಸಿ, ಆರೋಗ್ಯ ಮತ್ತು ಚಿಕಿತ್ಸೆಯ ಕುರಿತು ವಿಶೇಷ ಸೌಲಭ್ಯಗಳನ್ನು ಕೊಡಬೇಕು.         

ಕೋವಿಡ್ ವೈರಾಣು ಜಗತ್ತಿನ ಜನರ ಜೀವದ ಮೇಲೆ ಹಲ್ಲೆ ಮಾಡಿರುವುದರ ಜೊತೆಗೆ ಅವರ ಜೀವನದ ಮೇಲೂ ಹಲ್ಲೆ ಮಾಡಿದೆ. ಈ ಕುರಿತು ಸಾಮಾಜಿಕ ಜಾಗೃತಿಯು ಮಹತ್ವದ್ದಾಗಿದೆ. ಕೊರೋನದ ಆರೋಗ್ಯ ಪರಿಣಾಮಗಳ ಜೊತೆ ಸಾಮಾಜಿಕ ಪರಿಣಾಮಗಳ ಅಧ್ಯಯನ ಮತ್ತು ಸುಧಾರಣಾ ಕ್ರಮಗಳ ಕಾರ್ಯಕ್ರಮ ಅತೀ ಅವಶ್ಯಕ. ಸಾಮಾಜಿಕ ಪರಿಣಾಮಗಳಲ್ಲಿ ಬಾಲಕಿಯರ ಬದುಕಿನ ಮೇಲೆ ಆಗುವ ಹಾನಿಯನ್ನು ಸರ್ಕಾರಗಳು ವಿಶೇಷವಾಗಿ ಪರಿಗಣಿಸಬೇಕು.     

ಬನ್ನಿ ಕೊರೋನ ಜೊತೆ ಜಾಗೃತರಾಗಿ ಬದುಕೋಣ. ನಾವೆಲ್ಲರೂ ಶಿಕ್ಷಣದ ಪ್ರಗತಿಯತ್ತ ನಡೆಯೋಣ. ಬಾಲಕಿಯರು ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳೋಣ.

– ಮಲಿಕಜಾನ ಶೇಖ

(ಅಕ್ಕಲಕೋಟ, ಮಹಾರಾಷ್ಟ್ರ)  

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *