ಕೊರೋನ ಕಥನ / ನೋವೇ ಉಸಿರಾಗುವಂಥ ಬದುಕು- ವಿಮಲಾ ಕೆ.ಎಸ್.

ಕೊರೋನ ಕಾಲದ ಸಂಕಷ್ಟಗಳು ಮಹಿಳೆಯರ ಬದುಕನ್ನು ಉಸಿರುಗಟ್ಟಿಸಿರುವ ರೀತಿ ಊಹಾತೀತ. ಇದಕ್ಕೆ ದೇಶವಿದೇಶಗಳ, ನಗರ ಹಳ್ಳಿಗಳ ಇತಿಮಿತಿಯಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಅವರ ಕೆಲಸದ ಹೊರೆ ಹೆಚ್ಚಿದೆ, ಹಣಕಾಸಿನ ಬಿಕ್ಕಟ್ಟು ಅವರನ್ನು ಇನ್ನಿಲ್ಲದ ಇಕ್ಕಟ್ಟುಗಳಿಗೆ ಸಿಕ್ಕಿಸುತ್ತಿದೆ. ಕಿರುಕುಳ, ದೌರ್ಜನ್ಯ ತಪ್ಪಿಸಿಕೊಳ್ಳುವ ದಾರಿ ಕಾಣದಾಗಿದೆ. ಹೊಸ್ತಿಲಿನ ಒಳಗಿನ ಸಂಕಟಗಳಿಗೆ ಹೊಸ್ತಿಲಿನ ಆಚೆ ಯಾವ ಪರಿಹಾರವೂ ಕಾಣುತ್ತಿಲ್ಲ.

ನೋವೇ ಉಸಿರಾದರೆ ಬದುಕೋದು ಹೇಗೆ?. . . ಸತತ ಹುಟ್ಟುವ ಪ್ರಶ್ನೆಗಳಿವು. ಎಲ್ಲಿ ಹೋದರೂ ಕಾಲಿಗೆ ತೊಡರುವ, ಉತ್ತರ ಬೇಡುವ ಪ್ರಶ್ನೆಗಳಿವೆ. ಉತ್ತರಗಳು ಒಂದೇ ಆಗುವುದಿಲ್ಲ, ಹಾಗಾಗಲು ಸಾಧ್ಯವೂ ಇಲ್ಲ. ಪ್ರಶ್ನೆ ಒಂದೆ ಆದರೆ ಉತ್ತರಕ್ಕೆ ಅದೆಷ್ಟು ಕವಲುಗಳು ಬಿಳಿಲುಗಳು. ನೆಲಕ್ಕೆ ಬಿದ್ದಷ್ಟೂ ಗಟ್ಟಿಯಾಗುವ ಬೇರುಗಳು. ನೀರು ಎಲ್ಲಿಂದ ಬೀಳ್ತದೋ, ಗೊಬ್ಬರ ಯಾವುದೋ ಹುಡುಕುತ್ತಲೇ ಇರಬೇಕು. ಯಾಕೆ ಅಂದರೆ ಅಷ್ಟು ಹುಲುಸಾದ ಬೆಳೆಯದು. ಪಾರ್ಥೇನಿಯಂ ಕಳೆಯ ತರಹ. ಕಣ್ಣಿಗೆ ಕಾಣದ, ಯಾರ ಅಂಕೆಗೂ ಸಿಗದೆ ಅತಿರಥ ಮಹಾರಥರನ್ನೇ ನಡುಗಿಸಿದ ಕೋವಿಡ್ -19 ಎಂಬ ವೈರಾಣು ಇದನ್ನು ‘ಮಹಾಮಾರಿ’ ಎಂದು ಕರೆಯುವುದರ ಹಿಂದೆಯೂ ಒಂದು ರಾಜಕಾರಣ, ಅದಕ್ಕೆ ಕೊರೊನಾ ಎಂದು ಕರೆದು ಸ್ತ್ರೀಲಿಂಗವನ್ನು ಆರೋಪಿಸಿದ್ದೂ ಮತ್ತೊಂದು ಕುತಂತ್ರ. ಇದ್ಯಾಕೆ ಹೀಗೆ?? ಪ್ರಶ್ನೆಗೆ ಮತ್ತೊಂದು ಉಪಪ್ರಶ್ನೆ ಜೋಡಿಸಿಕೊಳ್ಳುತ್ತದೆ. ಉತ್ತರ ಎಲ್ಲಿ ಹುಡುಕೋಣ??

ಈ ಕೋವಿಡ್ -19 ವೈರಾಣು ಜಗತ್ತನ್ನು ನಡುಗಿಸಿದೆ ನಿಜ. ಹಗಲು ರಾತ್ರಿಗಳ ಪರಿವೆಯೇ ಇಲ್ಲದೇ ಅವಿರತ ಶ್ರಮಿಸುತ್ತಿರುವ ವೈದ್ಯಕೀಯ ವಲಯ, ಇನ್ನೂ ಹಲವಾರು ವಿಭಾಗಗಳಿಗೆ ಜೀವದ ಹರಾಸು ಇಲ್ಲದ ಸ್ಥಿತಿ ನಿರ್ಮಾಣವಾಗಿ ಅರ್ಧ ವರ್ಷ ಸಮೀಪಿಸುತ್ತಿದೆ. ಅತ್ಯಂತ ಸೂಕ್ಷ್ಮಾಣು ಜೀವಿಯಿಂದ ಬಂದ ಆಪತ್ತು ಕೆಲವರನ್ನು ಹೈರಾಣಾಗಿಸಿದೆ. ಆದರೆ ಇಲ್ಲಿಯೂ ವಿಜ್ಞಾನದ ಮೇಲೆ ನಂಬಿಕೆ ಇಟ್ಟ, ಜನರ ಜೀವಗಳ ರಕ್ಷಣೆ, ಸುರಕ್ಷೆ ತಮ್ಮ ಮೊದಲ ಆದ್ಯತೆ ಎಂದೇ ನಂಬಿರುವ ವಿಯಟ್ನಾಂ, ಕ್ಯೂಬಾದಂಥ ರಾಷ್ಟ್ರಗಳು ಈ ವೈರಾಣುವಿಗೂ ಸವಾಲೆಸೆದು ಯಶಸ್ವಿಯಾದರು. ಇದು ಹುಟ್ಟಿ ಬಂತೆಂಬ ಚೈನಾ ಕೂಡಾ ಇತರ ದೇಶಗಳಿಗಿಂತ ಮುಂದಿದೆ ಅದನ್ನು ನಿಯಂತ್ರಿಸುವ ದಾರಿಯಲ್ಲಿ ಹೇಳುತ್ತವೆ ವರದಿಗಳು. ಅಮೆರಿಕಾ, ಇಟಲಿ, ಸ್ಪೇನ್ ಇಂಗ್ಲೆಂಡ್ ಮುಂತಾದ ರಾಷ್ಟ್ರಗಳು ಕೂಡಾ ತಲ್ಲಣಿಸಿದವು. ಸಾವು ಸಾವಿರಗಳಲ್ಲಿ ಸೋಂಕು ಲಕ್ಷಗಳಲ್ಲಿ. ಸದ್ಯದಲ್ಲಿ ಮೇಲೇಳಲಾರದ ಆರ್ಥಿಕ ದುಃಸ್ಥಿತಿಗೆ ದೇಶಗಳು ತಳ್ಳಲ್ಪಟ್ಟಿವೆ. ಅವು ಸಾಮಾಜಿಕ ತಲ್ಲಣಗಳನ್ನೂ ಸೃಷ್ಟಿಸಿವೆ. ಅದು ಸಮಾಜದ ಎಲ್ಲ ವಿಭಾಗಗಳನ್ನೂ ಬಾಧಿಸಿದೆ. ಹಲವು ರೀತಿಯ ಸಮಸ್ಯೆಗಳವು. ಅದರಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಹಲವು ಮುಖಗಳಿವೆ.

ಸಾಮಾನ್ಯವಾಗಿ ಮಹಿಳೆ – ಮಹಿಳೆಯಾಗಿ, ನಾಗರಿಕಳಾಗಿ ಮತ್ತು ಕಾರ್ಮಿಕಳಾಗಿ/ದುಡಿಯುವವಳಾಗಿ ಈ ಮೂರು ಜವಾಬ್ದಾರಿಗಳನ್ನು ನಿಭಾಯಿಸುತ್ತ ಬದುಕುತ್ತಾಳೆ. ಈ ಮೂರೂ ತ್ರಾಸದಾಯಕವೇ. ಕುಟುಂಬ, ಸಮಾಜ, ಪರಿಸರಗಳೆಲ್ಲದರ ಬೇಕು ಬೇಡಗಳನ್ನು ನೋಡುತ್ತಲೇ ಅದಕ್ಕೆ ತಕ್ಕ ಪ್ರತಿಫಲಗಳು ಬಹುತೇಕ ಸಿಗದ ರೀತಿಯ ಆಕೆ ಬದುಕುತ್ತಾಳೆ. ಕೌಟುಂಬಿಕ ಜವಾಬ್ದಾರಿಯ ಸಂದರ್ಭದಲ್ಲಿಯಂತೂ ಅದೊಂದು ಕೆಲಸವೆಂದು ಪರಿಗಣಿಸದ ಆದರೆ ಎಂದಿಗೂ ಮುಗಿಯದ ಹೊರೆ ಹೊರೆ ಹೊಣೆಗಾರಿಕೆಗಳೇ.
ಕೋವಿಡ್ ಆಕ್ರಮಣ ಮತ್ತು ಅದರ ಕಾರಣದಿಂದ ಘೋಷಿಸಿದ ಅಯೋಜಿತ ಲಾಕ್‍ಡೌನ್ ಸಂದರ್ಭದಲ್ಲಿ ಮಹಿಳೆಯರ ಸಂಕಷ್ಟಗಳ ಸರಮಾಲೆ ಇನ್ನಷ್ಟು ಹೆಚ್ಚಿತು. ಕುಟುಂಬದ ನಾಲ್ಕು ಗೋಡೆಯ ಒಳಗೆ ಮನೆಯವರೆಲ್ಲರೂ ಬಂಧಿಗಳಾಗಬೇಕಾಗಿ ಬಂದಾಗ ಅದರ ಹೆಚ್ಚುವರಿ ಭಾರ-ಕೆಲಸದ ಹೊರೆ ಆರ್ಥಿಕವಾಗಿ ಆದಾಯ ಕಡಿಮೆ ಇರುವ ಗುಂಪಿಗೆ ಸೇರಿದವರಾದರೆ ಅದನ್ನು ನಿಭಾಯಿಸುವ ಜವಾಬ್ದಾರಿಯೂ ಆಕೆಯ ಮೇಲೆ. ಇನ್ನು ಆಕೆಯೂ ಉದ್ಯೋಗಸ್ಥಳಾಗಿ ಮನೆಯಿಂದ ಹೊರಗೂ ದುಡಿಯುವವಳಾಗಿದ್ದರಂತೂ ಅನಿಶ್ಚಿತ ಅವಧಿಯ ಲಾಕ್‍ಡೌನ್ ಭವಿಷ್ಯದ ಚಿಂತೆಯನ್ನು ಹತ್ತಾರು ಪಟ್ಟು ಹೆಚ್ಚಿಸುವಂತೆ ಇತ್ತು. ಅದರ ಜೊತೆಯೇ ಮನೆಯ ಪುರುಷ ಆತನ ಚಿಂತೆಗಳು, ಕಾಲು ಕಟ್ಟಿದಂಥ ಮನೆಯೊಳಗಿನ ವಾಸ ಹೆಚ್ಚಿಸಿದ ಆರೋಗ್ಯದ ಆತಂಕಗಳು-ಇಲ್ಲಿ ಕನ್ನಡದ ವಿದ್ಯುನ್ಮಾನ ಮಾಧ್ಯಮಗಳ ಕೊಡುಗೆ ಖಂಡನೀಯ. ತಿಳುವಳಿಕೆ ನೀಡುವ ಬದಲು ಜನರನ್ನು ಭಯಭೀತರನ್ನಾಗಿಸಿದ ಹೆಗ್ಗಳಿಕೆ ಅವರದು.

ಇಂಥ ಕಾಲಘಟ್ಟದಲ್ಲಿ ಕೌಟುಂಬಿಕ ದೌರ್ಜನ್ಯಗಳ ಸಂಖ್ಯೆ ಯಾರ ಅಂಕೆಗೂ ಸಿಗದೇ ನಾಗಾಲೋಟದಲ್ಲಿ ಏರತೊಡಗಿತು. ಇದು ಕೇವಲ ಭಾರತದ ಪ್ರಶ್ನೆ ಮಾತ್ರವಲ್ಲ, ಬದಲಿಗೆ ಕೋವಿಡ್ ಗೆ ಹೇಗೆ ಗಡಿ ರೇಖೆಗಳ, ವರ್ಗ ಜಾತಿಗಳ ಬೇಧವಿರಲಿಲ್ಲವೋ ಹಾಗೆಯೇ ಇದೂ ಕೂಡ ಸಮಾನ ಸ್ತರದಲ್ಲಿ ಪಸರಿಸಿಬಿಟ್ಟಿತು ಎನ್ನುತ್ತದೆ ವಿಶ್ವಸಂಸ್ಥೆಯ ಹೇಳಿಕೆ. ವಿಶ್ವಸಂಸ್ಥೆಯ ಯು.ಎನ್.ಡಿ.ಪಿ.ವಿಮೆನ್ ಇದನ್ನು ಸಾಂಕ್ರಾಮಿಕದ ನೆರಳು Shadow Pandamic ಎಂದು ಹೆಸರಿಸಿ ಅದರ ಕುರಿತೇ ಆ ಹೆಸರಿನಲ್ಲಿಯೇ ಒಂದು ಕಿರು ಚಿತ್ರವನ್ನೂ ನಿರ್ಮಿಸಿದೆ.

ಹಿಂಸಾಚಾರದಲ್ಲಿ ಹೆಚ್ಚಳ : ವಿಶ್ವದ ಹಲವು ದೇಶಗಳಲ್ಲಿ ಈ ಅವಧಿಯಲ್ಲಿ 50-60% ಹಿಂಸಾಚಾರದಲ್ಲಿ ಹೆಚ್ಚಳವಾಗಿದೆ. ಹಿಂಸ್ರಕ ಎದುರೇ ಇರುವಾಗ ದೂರು ಕೊಡುವುದು ಸುಲಭವಲ್ಲ. ಲಾಕ್‍ಡೌನ್ ಅವಧಿಯಲ್ಲಿ ಹೊರಗೆ ಓಡಿಹೋಗಿ ರಕ್ಷಿಸಿಕೊಳ್ಳುವುದೂ ಸುಲಭವಲ್ಲ. ಅಕ್ಕಪಕ್ಕದ ಸ್ನೇಹಿತರು ಸಂಬಂಧಿಕರೂ ಸಹಾಯಕ್ಕೆ ಧಾವಿಸಲಾರದ ಸಂಗತಿ. ಇನ್ನು ಮಕ್ಕಳು ಕುಟುಂಬದ ಇತರ ಸದಸ್ಯರ ಎದುರೇ ನಡೆಯುವ ಘಟನೆಯ ಪರಿಣಾಮದ ಭೀಕರತೆ ಅಥವಾ ಮರೆಯಲ್ಲಿ ನಡೆದರದನ್ನು ಮುಚ್ಚಿಟ್ಟುಕೊಳ್ಳುವ ಅನಿವಾರ್ಯತೆಗಳ ಮಧ್ಯದಲ್ಲಿಯೂ ದೂರು ಕರೆಗಳಲ್ಲಿ 50-60% ಹೆಚ್ಚಳವೆಂದರೆ ಇನ್ನು ಅವಡುಗಚ್ಚಿ ಸಹಿಸಿದ ಮಹಿಳೆಯರದೆಷ್ಟಿರಬಹುದು. ಈ ಅವಧಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯಗಳೂ ತೀರಾ ಹೆಚ್ಚಿವೆ. ಅತ್ಯಾಚಾರದಂಥ ಪ್ರಕರಣಗಳೂ ವರದಿಯಾಗಿವೆ. ಆನ್‍ಲೈನ್ ಅಶ್ಲೀಲ ಚಿತ್ರದ ವೆಬ್ ಸೈಟ್‍ಗಳ ಭೇಟಿಯಲ್ಲಿಯೂ ತೀವ್ರ ಏರಿಕೆಯಾಗಿದೆ ಎಂದು ವರದಿಗಳು ಹೇಳುತ್ತಿವೆ.

ನಮ್ಮದೇ ದೇಶದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವರು “ನಮ್ಮಲ್ಲಿ ದೌರ್ಜನ್ಯ ಪ್ರಕರಣಗಳಲ್ಲಿ ಏರಿಕೆಯಾಗಿಲ್ಲ. ಇವೆಲ್ಲವೂ ಎನ್.ಜಿ.ಓ ಗಳ ಸೃಷ್ಟಿ ಎಂದು ಹೇಳುತ್ತಲೇ, ದೇಶದಲ್ಲಿ ಪೊಲೀಸ್ ಠಾಣೆಗಳ ಬಾಗಿಲೇನೂ ಮುಚ್ಚಿಲ್ಲ, ದೇಶದಲ್ಲಿ ಈ ಅವಧಿಯಲ್ಲಿ ವಿವಿಧ ದೌರ್ಜನ್ಯಗಳಿಗೆ ಒಳಗಾದ 89000 ಮಹಿಳೆಯರನ್ನು ರಕ್ಷಿಸಲಾಗಿದೆ” ಎಂದು ಹೇಳಿದರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಲ್ಲೊಂದು ಮುಚ್ಚಿಡುವ ರಾಜಕಾರಣ ಗೋಚರಿಸುತ್ತದೆ. ಯಾಕೆಂದರೆ ಅದಕ್ಕೆ ಕೆಲವೇ ದಿನಗಳ ಮೊದಲು ಬಹುಶಃ ಮೇ- ಜೂನ್ ತಿಂಗಳಿನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಹಿಂದಿಗಿಂತ ಲಾಕ್‍ಡೌನ್ ಕಾಲದಲ್ಲಿ ದೂರು ಕರೆಗಳ ಪ್ರಮಾಣ ಜಾಸ್ತಿಯಾಗಿದೆ ಎಂದು ಹೇಳಿಕೆ ನೀಡಿತ್ತು. ಇದು ಒಂದು ವಿಭಾಗವಾದರೆ ಈಗ ಹೊರಬಿದ್ದ ಇನ್ನೊಂದು ಅಂಶ ಲಾಕ್‍ಡೌನ್ ಆದರೂ ಕೆಲಸ ಮುಂದುವರೆಸಿದ ಕೆಲವು ವಿಭಾಗಗಳ ಮನೆಯಿಂದಲೇ ಕೆಲಸ ಮಾಡುವ ವೃತ್ತಿಗಳನ್ನು ಅವಲಂಬಿಸಿರುವ ಮಹಿಳೆಯರ ಹೊಸ ಸಂಕಟ ಆನ್‍ಲೈನ್ ಅಥವಾ ವರ್ಚುಯಲ್ ಲೈಂಗಿಕ ಕಿರುಕುಳ. ಟೀಮ್ ಲೀಡರ್, ಸೂಪರ್ ವೈಸರ್ ಹೀಗೆ ಸಹೋದ್ಯೋಗಿಗಳಾಗಿ ಕರ್ತವ್ಯ ನಿರ್ವಹಿಸುವವರು ಕೆಲಸದ ಕಾರಣಕ್ಕಾಗಿ ಕರೆಯ ನೆಪದಲ್ಲಿ ಹೊತ್ತಲ್ಲದ ಹೊತ್ತಿನಲ್ಲಿಯೂ ಕರೆ ಮಾಡಿ ಅನಗತ್ಯ ಮಾತು ಬೆಳೆಸುವ, “ನಿನ್ನ ಜೊತೆ ದಿನಕ್ಕೊಮ್ಮೆಯಾದರೂ ಮಾತಾಡಬೇಕು” ಎನ್ನುವವರು, ಅವರ ಮುಖ ನೋಡಬೇಕೆಂದು ವಿಡಿಯೋ ಕಾಲ್ ಗೆ ಒತ್ತಾಯಿಸುವುದೂ ಹೀಗೆಲ್ಲ.

ಇದು ಕೆಲಸದ ಬದಲಿಗೆ ಸಿಗುವ ಕಿರಿಕಿರಿ ಒಂದೆಡೆಯಾದರೆ ಕುಟುಂಬದ ಇತರ ಸದಸ್ಯರ ಅದರಲ್ಲಿಯೂ ಬಾಳ ಸಂಗಾತಿಯಲ್ಲಿ ಮೂಡಿಸಬಹುದಾದ ಭಾವನೆ ಅಭಿಪ್ರಾಯ ಅನುಮಾನಗಳ ನಾವು ಯೋಚಿಸಿದರೆ ಆಕೆಯ ಬದುಕು ಎಷ್ಟು ದುರ್ಭರವಾಗಬಹುದಲ್ವಾ? ಇದರ ಕುರಿತು ಯಾರ ಜೊತೆ ಹಂಚಿಕೊಳ್ಳಲಾಗದು. ದೂರು ಕೊಟ್ಟರೆ ನಿಂತೀತಾ? ಅಥವಾ ಕೆಲಸ ಉಳಿದೀತಾ? ಇಂದಿನ ದಿನಮಾನದಲ್ಲಿ ಜೀವನಾವಶ್ಯಕ ವಸ್ತುಗಳು ಗಗನಕ್ಕೇರುತ್ತಿರುವ ಹೊತ್ತಿನಲ್ಲಿ, ಆರೋಗ್ಯ, ಶಿಕ್ಷಣ, ಸಾರಿಗೆ ಮತ್ತಿತರ ಅತ್ಯಾವಶ್ಯಕ ಸೌಕರ್ಯಗಳು ಸೇವೆಯ ಹೆಸರನ್ನು ಹೊತ್ತುಕೊಂಡೇ ಖಾಸಗಿಯವರ ಲಾಭಕೋರತನದ ಬಂಡವಾಳಗಳಾಗಿರುವಾಗ ಇಬ್ಬರೂ ಗಳಿಸಿದರೂ ಜೀವನದ ಬಂಡಿ ಮುಂದೆ ಸಾಗುವುದು ಕಷ್ಟ. ಇನ್ನು ದೂರು ಕೊಟ್ಟು ಕೆಲಸ ಕಳೆದುಕೊಳ್ಳುವುದು ಎಷ್ಟು ಕಷ್ಟ.

ಇನ್ನೊಂದು ಪ್ರಶ್ನೆ. ಹೆಣ್ಣಿನ ಮೇಲೆ ಅತ್ಯಾಚಾರ ದೌರ್ಜನ್ಯಗಳ ಕುರಿತು ಸುದ್ದಿ ಎದ್ದಾಗಲೆಲ್ಲ ಆಕೆಯ ಉಡುಪು, ಓಡಾಡುವ ಜಾಗ, ಒಡನಾಡುವ ಗೆಳೆಯರು ಹೀಗೆ ಆರೋಪಗಳ ಸುರಿಮಳೆಯನ್ನೇ ಆಕೆಯ ಮೇಲೆ ಸುರಿಸುವ ನಾಲಿಗೆಗಳು, ಈ ತೆರನ ಚಪಲ ಚೆನ್ನಿಗರಾಯರ ಬಗ್ಗೆ ಏನು ಹೇಳುತ್ತವೆ? ಮುಗಿಯದ ಪ್ರಶ್ನೆಗಳು- ಒಂದಲ್ಲ ಒಂದು ದಿನ ಉತ್ತರ ಸಿಗಬೇಕು. ಅತ್ತ ನಾವು ಸಾಗಬೇಕು.

ವಿಮಲಾ ಕೆ.ಎಸ್.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *