ಕೊರೋನ ಕಥನ/ ಕೌಟುಂಬಿಕ ಹಿಂಸೆಗಿಲ್ಲ ಲಾಕ್‍ಡೌನ್ -ಡಾ. ವಸುಂಧರಾ ಭೂಪತಿ

ಮಹಾನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿಯೂ ಲಾಕ್‍ಡೌನ್ ಸಮಯದಲ್ಲಿ ಮಹಿಳೆಯರು ಕೌಟುಂಬಿಕ ಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ಲಾಕ್‍ಡೌನಿನಂತಹ ಸಮಯದ ಹಣಕಾಸಿನ ಅನಿಶ್ಚಯತೆ, ನೌಕರಿ ನಷ್ಟ, ಆಹಾರ ಅಭದ್ರತೆ ಮತ್ತು ಅನಾರೋಗ್ಯದಲ್ಲಿ ಕೌಟುಂಬಿಕ ಹಿಂಸೆ ಹೆಚ್ಚಾಗುತ್ತವೆ. ಅಸಮಾನತೆಗೂ ಕಾರಣವಾಗುತ್ತವೆ. ಲಾಕ್ ಡೌನ್ ಸಮಯದಲ್ಲಿ “ಸ್ಟೇ ಹೋಂ, ಸ್ಟೇ ಸೇಫ್” ಎನ್ನುವುದು ಅನೇಕ ಮಹಿಳೆಯರ ಪಾಲಿಗೆ ನಿಜವಲ್ಲ.

ಕೊರೋನ- ಕೋವಿಡ್ 19 ಕಾರಣದಿಂದ ಆಗಿರುವ ಲಾಕ್ ಡೌನ್ ಮಹಿಳೆಯರಿಗೆ ಹಲವಾರು ಸಂಕಷ್ಟಗಳನ್ನು ತಂದೊಡ್ಡಿದೆ. ಕೌಟುಂಬಿಕ ಹಿಂಸೆ ಮತ್ತು ದೌರ್ಜನ್ಯ ಇಂದಿಗೂ ಮಹಿಳೆಯರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದೆ. ಈಗ ಕೊರೊನಾ ವೈರಸ್ ಹರಡುವ ಭೀತಿಯಿಂದ ಸರ್ಕಾರ ಲಾಕ್‍ಡೌನ್ ನಿಯಮಗಳನ್ನು ಜಾರಿ ಮಾಡಿದೆ. ಇದರ ಪರಿಣಾಮವಾಗಿ ಜನರು ಹೆಚ್ಚಾಗಿ ಹೊರಗೆ ಅಡ್ಡಾಡುವಂತಿಲ್ಲ. ಲಾಕ್‍ಡೌನ್ ಸಡಿಲವಾದರೂ ಜನಸಂಚಾರ ಮತ್ತು ದೈನಂದಿನ ಜೀವನ ಮೊದಲಿನಂತೆ ಆಗಲು ಸಾಕಷ್ಟು ಸಮಯ ಹಿಡಿಯಲಿದೆ. ಸಾಮಾನ್ಯವಾಗಿ ಬಹುತೇಕ ಜನರು ಇಂದು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಾಕಷ್ಟು ಜನರು ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿಯೇ ಇರಬೇಕಾಗಿದೆ. ಇದರಿಂದ ಕೌಟುಂಬಿಕ ಹಿಂಸೆ ಮತ್ತು ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ.

ದೆಹಲಿ, ಮುಂಬಯಿ, ಹೈದರಾಬಾದ್, ಬೆಂಗಳೂರಿನಂತಹ ಮಹಾನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿಯೂ ಲಾಕ್‍ಡೌನ್ ಸಮಯದಲ್ಲಿ ಮಹಿಳೆಯರು ಕೌಟುಂಬಿಕ ಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವೇ ಹೇಳಿದೆ. ಆಯೋಗದ ಅಂಕಿಅಂಶಗಳ ಪ್ರಕಾರ ಏಪ್ರಿಲ್ ತಿಂಗಳ ಮಧ್ಯಭಾಗದವರೆಗೆ ಕೌಟುಂಬಿಕ ಹಿಂಸೆಯ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 100ರಷ್ಟು ಏರಿಕೆ ಇತ್ತು. ಮಾರ್ಚ್ 23 ಮತ್ತು ಏಪ್ರಿಲ್ 16ರ ನಡುವಿನ 25 ದಿನಗಳಲ್ಲಿಯೇ ಆಯೋಗ 587 ದೂರುಗಳನ್ನು ದಾಖಲಿಸಿಕೊಂಡಿತ್ತು. ಈ ದೂರುಗಳು ಮುಖ್ಯವಾಗಿ ಈಮೇಲ್ ಮತ್ತು ವಾಟ್ಸಾಪ್‍ಗಳ ಮೂಲಕ ಬಂದಿದ್ದವು.
ಅನೇಕ ಕುಟುಂಬಗಳು ಚಿಕ್ಕಚಿಕ್ಕ ಮನೆಗಳಲ್ಲಿ ವಾಸಿಸುತ್ತವೆ. ಒಂದು ಕೋಣೆಯ ಮನೆಯಲ್ಲಿ ಕೆಲವು ಕಡೆ ಏಳೆಂಟು ಜನ ವಾಸಿಸುತ್ತಾರೆ. ಎಲ್ಲರೂ ಈಗ ಸದಾಕಾಲ ಮನೆಯಲ್ಲಿಯೇ ಇರುವುದರಿಂದ ಪರಸ್ಪರ ಜಗಳ-ವಾಗ್ವಾದ ಸಾಮಾನ್ಯ. ಅಂತಹ ಎಲ್ಲಾ ಜಗಳಗಳಿಗೂ ಸುಲಭವಾಗಿ ಸಿಗುವವಳು ಮಹಿಳೆ. ಮನೆಗೆಲಸ, ಅಡುಗೆ, ಕುಟುಂಬದ ಎಲ್ಲಾ ಸದಸ್ಯರ ಬೇಕುಬೇಡಗಳನ್ನು ಪೂರೈಸುವಷ್ಟರಲ್ಲೇ ಸುಸ್ತಾಗಿರುವ ಆಕೆಗೆ ಗಂಡ ಮತ್ತು ಅವನ ಕುಟುಂಬದವರು ಹಿಂಸೆ ನೀಡಿದಲ್ಲಿ ಅದನ್ನು ಹೇಗೆ ಸಹಿಸಿಯಾಳು? ಯಾಕೆ ಸಹಿಸಬೇಕು?

ಆಶ್ಚರ್ಯವೆಂದರೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಹಲವು ಮಹಿಳಾ ಸಹಾಯವಾಣಿಗಳು, ಪೋಲಿಸ್ ಮತ್ತು ಸರ್ಕಾರೇತರ ಸಂಘಸಂಸ್ಥೆಗಳು ನಡೆಸುವ ಇತರ ಸಹಾಯವಾಣಿಗಳಲ್ಲಿ ದಾಖಲಾದ ದೂರುಗಳ ಸಂಖ್ಯೆ ಕಡಿಮೆ ಇತ್ತು. ದೆಹಲಿಯ ಮಹಿಳಾ ಆಯೋಗ ಮಾರ್ಚ್ 12 ಮತ್ತು 25ರ ನಡುವೆ 808 ದೂರುಗಳನ್ನು ದಾಖಲಿಸಿಕೊಂಡಿತ್ತು. ಆದರೆ ಆಶ್ಚರ್ಯದ ಸಂಗತಿ ಎಂಬಂತೆ ಏಪ್ರಿಲ್ 7 ಮತ್ತು 20ರ ನಡುವೆ ದಾಖಲಾದ ದೂರುಗಳ ಸಂಖ್ಯೆಯು ಕೇವಲ 237 ಆಗಿತ್ತು. “ಕೌಟುಂಬಿಕ ಹಿಂಸೆಯ ಪ್ರಕರಣಗಳು ಹೆಚ್ಚಾಗಿಯೇ ಇವೆ. ಆದರೆ ಅವುಗಳ ಬಗ್ಗೆ ದೂರು ನೀಡಲು ಮಹಿಳೆಯರು ಮುಂದೆ ಬರುತ್ತಿಲ್ಲ. ಈ ಬಗ್ಗೆ ವಿಚಾರಿಸಿ ವರದಿ ನೀಡಿ ಎಂದು ರಾಜ್ಯಗಳ ಪೋಲಿಸ್ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದೇವೆ” ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ. ಅಲ್ಲದೇ ಈ ಸಮಯದಲ್ಲಿ ದೂರು ನೀಡಲು ಮಹಿಳೆಯರಿಗೆ ಹಿಂಜರಿಕೆ, ಭಯ ಮತ್ತು ಎಲ್ಲಿ ಮನೆಯವರೇ ಹೊರಗೆ ಹಾಕಿಬಿಡುತ್ತಾರೋ ಎಂಬ ಆತಂಕ ಅವರಲ್ಲಿ ಮನೆಮಾಡಿದೆ ಎಂಬುದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರ ಅಭಿಪ್ರಾಯ.

ಕರ್ನಾಟಕದಲ್ಲಿ ಮಾರ್ಚ್ 1ರಿಂದ ಏಪ್ರಿಲ್ 22ರ ತನಕ 218 ಕೌಟುಂಬಿಕ ಹಿಂಸೆಯ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ (2019) ಇವುಗಳ ಸಂಖ್ಯೆ 2,088 ಇತ್ತು.

ವ್ಯವಧಾನ ಇಲ್ಲ

ಹಿಂಸೆಗೆ ಒಳಗಾಗುತ್ತಿರುವ ಮಹಿಳೆಯರಿಗೆ ಇಂದು ಸ್ವಾತಂತ್ರ್ಯವೇ ಇಲ್ಲ. ಅವರು ಮನೆಯಿಂದ ಹೊರಗೆ ಬರುವಂತಿಲ್ಲ. ಹೀಗಾಗಿ ಅವರಿಗೆ ದೂರು ನೀಡಲು ಸಮಯವಾಗಲೀ ವ್ಯವಧಾನವಾಗಲಿ ಇಲ್ಲ. ಗಂಡ ಮತ್ತು ಮನೆಯವರಿಗೆ ಅಡುಗೆತಿಂಡಿ ಮಾಡಿಕೊಂಡು ಮನೆಗೆಲಸದಲ್ಲಿಯೇ ಅವರ ಸಮಯವೆಲ್ಲಾ ಕಳೆಯುತ್ತಿದೆ. ಆದ್ದರಿಂದ ಯಾರೂ ಕೂಡ ದೂರು ನೀಡಲು ಮುಂದೆ ಬರುತ್ತಿಲ್ಲ. ಎಲ್ಲಾ ಹಿಂಸೆ, ಅವಮಾನವನ್ನು ನುಂಗಿ ಬದುಕು ಸವೆಸುತ್ತಿದ್ದಾರೆ. ಅಲ್ಲದೇ ಎಲ್ಲ ಮಹಿಳೆಯರ ಹತ್ತಿರ ಈಮೇಲ್ ಮತ್ತು ವಾಟ್ಸಾಪ್ ಸೌಲಭ್ಯಗಳಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಅಂಚೆಯ ಮೂಲಕ ಬರುತ್ತಿರುವ ದೂರುಗಳು ಇತ್ತೀಚೆಗೆ ಇಲ್ಲವಾಗಿವೆ ಎಂದು ಅವರು ಹೇಳುತ್ತಾರೆ.

ಆಯೋಗ ಸ್ವೀಕರಿಸಿರುವ ದೂರುಗಳು ಕೇವಲ “ಶಿಕ್ಷಿತ ಮತ್ತು ಮೇಲ್ವರ್ಗದ” ಮತ್ತು ಕನಿಷ್ಠ ಸ್ಮಾರ್ಟ್ ಫೋನ್ ಇರುವ ಮಹಿಳೆಯರಿಂದ ಬಂದವು. ಇಂದು ಎಷ್ಟು ಜನರ ಬಳಿ ಸ್ಮಾರ್ಟ್ ಫೋನ್‍ಗಳಿವೆ ಮತ್ತು ಹಾಗೆ ನೋಡಿದರೆ ಬಹುತೇಕ ಗ್ರಾಮೀಣ ಮಹಿಳೆಯರ ಹತ್ತಿರ ಬೇಸಿಕ್ ಫೋನೇ ಇಲ್ಲ. ಅವರು ಹಿಂಸೆ ಮತ್ತು ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭಗಳು ಮಾಮೂಲಿನ ದಿನಗಳಲ್ಲಿ ಹೆಚ್ಚು. ಇನ್ನು ಲಾಕ್‍ಡೌನಿನ ಸಮಯದಲ್ಲಿ ಅವರ ಪರಿಸ್ಥಿತಿ ಗಂಭೀರವಾಗಿದೆ.

ಲಾಕ್‍ಡೌನ್ ಸಮಯದಲ್ಲಿ ಇಂತಹ ಪ್ರಕರಣಗಳು ಅಧಿಕವಾಗಿರುವುದರಲ್ಲಿ ಯಾವ ಸಂಶಯವೂ ಇಲ್ಲ. ಹಿಂಸೆ ಮತ್ತು ದೌರ್ಜನ್ಯ ಎಸಗುವವರು ವಿದ್ಯಾವಂತರು ಮತ್ತು ಅವಿದ್ಯಾವಂತರು ಆಗಿರಬಹುದು. ಮಹಾನಗರಗಳಲ್ಲಿ ಐಟಿಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಅನೇಕ ಸುಶಿಕ್ಷಿತರೂ ಇಂತಹ ಪ್ರಕರಣಗಳನ್ನು ಈಗಾಗಲೇ ಎದುರಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಅಲ್ಲದೇ ಕೇವಲ ಗಂಡನೇ ಹಿಂಸೆ/ದೌರ್ಜನ್ಯ ಎಸೆಗಬೇಕೆಂದಿಲ್ಲ. ಆತನ ಪೋಷಕರು, ಸಹೋದರ-ಸಹೋದರಿಯರು ಮತ್ತು ಕೆಲವು ಸಂದರ್ಭಗಳಲ್ಲಿ ಒಡಹುಟ್ಟಿದವರೂ ಹಿಂಸೆ/ದೌರ್ಜನ್ಯದಲ್ಲಿ ನಿರತರಾಗಬಹುದು. ಹಿಂಸೆ ಎಂದರೆ ಕೇವಲ ಹೊಡೆತ/ಬಡಿತವಲ್ಲ, ನಿಂದನೆ/ಬೈಗುಳವಲ್ಲ. ಮನೆಯಲ್ಲಿ ಸೊಸೆಯನ್ನು ಸರಿಯಾಗಿ ನೋಡಿಕೊಳ್ಳದೇ ಇರುವುದು, ಆಕೆಗೆ ಸರಿಯಾಗಿ ಊಟತಿಂಡಿ ಕೊಡದೇ ಇರುವುದು, ಉದಾಸೀನ ಮಾಡುವುದೂ ಹಿಂಸೆಯೇ ಸರಿ.

ಇಂತಹ ಪ್ರಕರಣಗಳು ಲಾಕ್‍ಡೌನಿನಂತಹ ಸಮಯದ ಹಣಕಾಸಿನ ಅನಿಶ್ಚಯತೆ, ನೌಕರಿ ನಷ್ಟ, ಆಹಾರ ಅಭದ್ರತೆ ಮತ್ತು ಅನಾರೋಗ್ಯದ ಕಾಲದಲ್ಲಿ ಹೆಚ್ಚಾಗುತ್ತವೆ. ಇವೆಲ್ಲವೂ ಸೇರಿ ಅಸಮಾನತೆಗೂ ಕಾರಣವಾಗುತ್ತವೆ. ಎಷ್ಟೋ ಕಡೆ ಮನೆಗೆಲಸಕ್ಕೆ ಹೋಗುವ ಮಹಿಳೆಯರಿಗೆ ಕೊಟ್ಟ ಮಾಸ್ಕ್ ಗಳನ್ನೂ ಅವರ ಗಂಡಂದಿರು ಉಪಯೋಗಿಸುತ್ತಿದ್ದಾರೆ. ಬಹುತೇಕ ಪುರುಷರಿಗೆ ಹೆಂಡತಿಯ/ಮಹಿಳೆಯರ ಆರೋಗ್ಯದ ಕಾಳಜಿಯೇ ಇಲ್ಲ. ಅದು ಅವರ ಆದ್ಯತೆಯೂ ಆಗಿಲ್ಲ ಎಂಬುದು ಖೇದಕರ ವಿಷಯ. ಈಗಂತೂ ಮನೆಯಲ್ಲಿ ಮೊದಲು ಗಂಡಸರ ಆರೋಗ್ಯದ ಕಾಳಜಿ, ನಂತರ ಮಕ್ಕಳದ್ದು ಆನಂತರ ಕೊನೆಯಲ್ಲಿ ಮಹಿಳೆಯರದ್ದು.

ಹಳ್ಳಿಗಳಲ್ಲಿ ಲಾಕ್‍ಡೌನಿನ ಸಮಯದಲ್ಲಿಯೇ ಹಲವು ಬಾಲ್ಯವಿವಾಹಗಳು ನಡೆದಿರುವ ವರದಿಗಳು ಗಾಬರಿ ಹುಟ್ಟಿಸಿವೆ. ಕೆಲವೆಡೆ ಪೋಲಿಸರು ಮತ್ತು ಮಕ್ಕಳ ಸಹಾಯವಾಣಿಗಳಿಗೆ ವಿಷಯ ತಿಳಿದು ಬಾಲ್ಯವಿವಾಹಗಳನ್ನು ನಿಲ್ಲಿಸಿರುವುದು ಸಮಾಧಾನದ ಸಂಗತಿ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೌಟುಂಬಿಕ ಹಿಂಸೆಗೆ ಒಳಗಾಗುವ ಮಹಿಳೆಯರ ಮಾನಸಿಕ ಮತ್ತು ದೈಹಿಕ ಆರೋಗ್ಯ ಇಂತಹ ಸಮಯದಲ್ಲಿ ಸೂಕ್ಷ್ಮವಾಗುತ್ತದೆ. ಅವರು ಹೆಚ್ಚಿನ ಒತ್ತಡ, ಆತಂಕ ಮತ್ತು ಕೆಲಸಕ್ಕೆ ಹೋಗುವವರಾಗಿದ್ದಲ್ಲಿ ಕೆಲಸ ಕಳೆದುಕೊಂಡರೆ ಉಂಟಾಗುವ ನಷ್ಟವನ್ನು ತಾಳ್ಮೆಯಿಂದ ಸಹಿಸಬೇಕಾದ ಪರಿಸ್ಥಿತಿ ಇದೆ. ನಮ್ಮ ದೇಶದಲ್ಲಿ ಇಂದಿಗೂ ಮಹಿಳೆ ಮನೆಯಲ್ಲಿ ಮಾಡುವ ಕೆಲಸ ಸರಿಯಾದ ಗೌರವ ಸಿಕ್ಕುತ್ತಿಲ್ಲ. ಗೃಹಿಣಿ ಎಂದರೆ ಮನೆಯವರಿಗೆ ಅಡಿಗೆ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳುವುದು ಅಷ್ಟೇ ಎಂಬ ಭಾವನೆ ಇದೆ.

ಇಡೀ ವಿಶ್ವದ ಸಮಸ್ಯೆ

ಕೌಟುಂಬಿಕ ಹಿಂಸೆ ಮತ್ತು ದೌರ್ಜನ್ಯ ನಮ್ಮ ದೇಶವೊಂದರ ಸಮಸ್ಯೆಯಲ್ಲ. ಇದು ಇಡೀ ವಿಶ್ವದ ಸಮಸ್ಯೆಯಾಗಿದೆ. ಆದ್ದರಿಂದಲೇ ಲಾಕ್‍ಡೌನ್ ಸಮಯದಲ್ಲಿ ಕೌಟುಂಬಿಕ ಹಿಂಸೆ ಮತ್ತು ದೌರ್ಜನ್ಯದ ಸಮಸ್ಯೆ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ತಿಳಿಸಿರುವುದು ನಿಜಕ್ಕೂ ಕಾಳಜಿಯ ವಿಷಯವಾಗಿದೆ. ಯೂರೋಪಿನಲ್ಲಿ ಮಹಿಳಾ ಸಹಾಯವಾಣಿಗಳಿಗೆ ಬರುವ ಕರೆಗಳ ಪ್ರಮಾಣ ಈಗ ಶೇಕಡಾ 60ರಷ್ಟು ಹೆಚ್ಚಾಗಿರುವುದೇ ಇದಕ್ಕೆ ನಿದರ್ಶನ. ಮಹಿಳೆಯರು ಮತ್ತು ಮಕ್ಕಳು ಹಿಂಸೆ ಮತ್ತು ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ ಮತ್ತು ಅಂತಹ ಪ್ರಕರಣಗಳ ಸಂಖ್ಯೆ ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಸಿದರೆ ಏಪ್ರಿಲ್ ತಿಂಗಳಿನಲ್ಲಿ ಹೆಚ್ಚಾಗಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯೂರೋಪಿನ ಪ್ರಾದೇಶಿಕ ನಿರ್ದೇಶಕ ಹ್ಯಾನ್ ಕ್ಲೂಜ್ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕಷ್ಟಕರ ಪರಿಸ್ಥಿತಿಗಳಲ್ಲಿ (ಉದಾಹರಣೆಗೆ ಈ ಲಾಕ್‍ಡೌನ್ ಒಂದು ಕಷ್ಟಕರ ಪರಿಸ್ಥಿತಿಯೇ ಆಗಿದೆ) ಕೌಟುಂಬಿಕ ಹಿಂಸೆ ಮತ್ತು ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತವೆ. ಈ ಸಮಸ್ಯೆ ಕೇವಲ ಕೊರೊನಾ ಪೀಡಿತ ಪ್ರದೇಶಗಳಲ್ಲಿ ಮಾತ್ರವಲ್ಲ, ಎಲ್ಲಾ ದೇಶಗಳಲ್ಲೂ ಇದೆ ಎಂದು ಸಂಸ್ಥೆಯ ತಾಂತ್ರಿಕ ಅಧಿಕಾರಿ ಇಸಾಬಲ್ ಯೋರ್ಡಿ ಹೇಳಿದ್ದಾರೆ. ಮುಂದಿನ ಆರು ತಿಂಗಳುಗಳಲ್ಲಿ ಲಾಕ್‍ಡೌನಿನ ಪರಿಣಾಮದಿಂದ 31 ದಶಲಕ್ಷ ಕೌಟುಂಬಿಕ ಹಿಂಸೆಯ ಪ್ರಕರಣಗಳು ದಾಖಲಾಗಬಹುದೆಂದು ವಿಶ್ವಸಂಸ್ಥೆಯ ಅಂಗವಾದ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಂಸ್ಥೆ (ಯುಎನ್ ಏಜೆನ್ಸಿ ಫಾರ್ ಸೆಕ್ಷುವಲ್ ಅಂಡ್ ರಿಪ್ರೊಡಕ್ಟಿವ್ ಹೆಲ್ತ್-ಯುಎನ್‍ಎಫ್‍ಪಿಎ) ಹೇಳಿದೆ. ಚೀನಾ, ಇಂಗ್ಲೆಂಡ್, ಅಮೆರಿಕಾ ಹೀಗೆ ಕೌಟುಂಬಿಕ ಹಿಂಸೆ ಮತ್ತು ದೌರ್ಜನ್ಯದ ಪ್ರಕರಣಗಳು ವರದಿಯಾಗದ ದೇಶಗಳೇ ಇಲ್ಲ. ಕೊರೊನಾ ವೈರಸ್ ಮೊದಲಿಗೆ ಕಾಣಿಸಿಕೊಂಡ ಚೀನಾದ ವೂಹಾನ್ ಪ್ರಾಂತ್ಯದ ಜಿಂಗ್ಝೌ ನಗರದ ಪೋಲಿಸ್ ಠಾಣೆಯೊಂದರಲ್ಲಿ ಅತಿ ಹೆಚ್ಚು ಪ್ರಕರಣಗಳು ಫೆಬ್ರವರಿ ತಿಂಗಳಿನಲ್ಲಿಯೇ ದಾಖಲಾಗಿವೆ.

ಸಹಾಯವಾಣಿಗಳು

ದೈಹಿಕ, ಮಾನಸಿಕ, ಭಾವನಾತ್ಮಕ, ಲೈಂಗಿಕ ಮತ್ತು ಆರ್ಥಿಕ ತೊಂದರೆಗಳನ್ನು ಉಂಟುಮಾಡುವುದು ಕೌಟುಂಬಿಕ ಹಿಂಸೆಯಲ್ಲಿ ಸೇರಿದೆ. ಇಂತಹ ಸಮಸ್ಯೆಗಳಲ್ಲಿ ಸಿಲುಕಿಕೊಂಡವರು 100, 181 ಅಥವಾ 080-22943224/5 ಈ ಟೆಲಿಫೋನ್ ಸಂಖ್ಯೆಗಳಿಗೆ ಕರೆ ಮಾಡಬಹುದು. ಈ ಸಹಾಯವಾಣಿಗಳಿಂದ ಸಲಹೆ, ಸೂಚನೆಗಳು ದೊರೆಯಲಿವೆ. ಪೋಲೀಸರ ಸಹಾಯವೂ ಸಿಗುತ್ತದೆ. ಗಂಭೀರ ಪ್ರಕರಣಗಳಲ್ಲಿ ಹಿಂಸೆಗೆ ಒಳಗಾದವರನ್ನು ಅವರ ಪೋಷಕರಲ್ಲಿಗೆ ಅಥವಾ ಹತ್ತಿರದ ಮಹಿಳಾ ಆವಾಸಕ್ಕೆ ಕಳಿಸಲಾಗುತ್ತದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ನೆರವಾಗಲೆಂದೇ 193 ಸಾಂತ್ವನ ಕೇಂದ್ರಗಳಿವೆ. ಈ ಕೇಂದ್ರಗಳಿಗೆ ಸರ್ಕಾರವು ಹೆಚ್ಚಿನ ಅನುದಾನ ನೀಡಿ ಮತ್ತಷ್ಟು ಬಲಪಡಿಸಬೇಕಾಗಿದೆ.


ಡಾ. ವಸುಂಧರಾ ಭೂಪತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *