ಕೇರಳದ ನಾರಿಯರು ಕಟ್ಟಿದ ನವೋದಯದ ಗೋಡೆ

“ದೇವರ ಸ್ವಂತ ನಾಡು” ಎಂದು ಕರೆಸಿಕೊಳ್ಳುವ ನಿಸರ್ಗ ಸೌಂದರ್ಯದ ಬೀಡು ಕೇರಳ ಇತ್ತೀಚಿನ ದಿನಗಳಲ್ಲಿ ಬೇಡದ ಬೆಳವಣಿಗೆಗಳಿಂದ ನರಳುತ್ತಿದೆ. ಆದರೆ ಅಂಥವನ್ನು ತಡೆಯುವ ಬೃಹತ್ ಪ್ರಯತ್ನಗಳು ಅಲ್ಲಿ ನಡೆಯುತ್ತಿರುವುದೇ ಬಹಳ ಗಮನಾರ್ಹ. ಹೊಸ ವರ್ಷದ ಉದಯದೊಂದಿಗೆ ಕೇರಳದಲ್ಲಿ ಒಂದು ವೈಚಾರಿಕ “ನವೋದಯ”ವೂ ಮೂಡಿದೆ. ರಾಜ್ಯದ ಉದ್ದಗಲಕ್ಕೆ ಕೈಕೈ ಹಿಡಿದು ನಿಂತ ಸುಮಾರು ಅರ್ಧ ಕೋಟಿ ಮಹಿಳೆಯರು, ರಾಜಕೀಯ ಲಾಭಕ್ಕಾಗಿ ಸನಾತನ ಮೌಲ್ಯಗಳನ್ನು ಬಳಸುವ ದುರುದ್ದೇಶವನ್ನು ಹಿಮ್ಮೆಟ್ಟಿಸಲು ಸಾಂಕೇತಿಕ ತಡೆಗೋಡೆ ನಿರ್ಮಿಸಿದ್ದಾರೆ. .

ನೈಸರ್ಗಿಕ ಪ್ರಕೋಪದಿಂದ ನೊಂದ ರಾಜ್ಯ ಕೇರಳದಲ್ಲಿ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿಷಯ ಅನಗತ್ಯ ರಾಜಕೀಯ ವಿವಾದಗಳಿಗೆ ಎಡೆಕೊಟ್ಟಿರುವುದು ಎಲ್ಲರಿಗೂ ಗೊತ್ತು. ಸುಪ್ರೀಂ ಕೋರ್ಟ್‍ನ ಇತ್ತೀಚಿನ ತೀರ್ಪು ಜಾರಿಯಾಗದಂತೆ ತಡೆಯುವ ಹುನ್ನಾರದ ಹಿಂದೆ ಧಾರ್ಮಿಕ ಭಯೋತ್ಪಾದನೆ ಹೆಚ್ಚಿಸುವ ಗುರಿ ಸ್ಪಷ್ಟವಾಗಿ ಕಾಣುತ್ತಿತ್ತು. ದೇವಾಲಯಕ್ಕೆ 10 ರಿಂದ 50 ವರ್ಷಗಳ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸುವುದು ಪರಂಪರೆಯಿಂದ ಬಂದದ್ದು, ಅದೇ ಸಂಪ್ರದಾಯ, ಅದನ್ನು ರಕ್ಷಿಸಲೇಬೇಕು ಎಂದು ಘೋಷಿಸಿ, ಅದನ್ನು ಬಳಸಿಕೊಂಡು ರಾಜಕೀಯ ನೆಲೆ ಕಂಡುಕೊಳ್ಳುವ ಜನವಿರೋಧಿ ಉದ್ದೇಶವೂ ಇತ್ತು. ಈ ಸಂಪ್ರದಾಯವನ್ನು ರಕ್ಷಿಸಬೇಕು ಎಂದು ಮಹಿಳೆಯರೇ ಅಯ್ಯಪ್ಪ ಜ್ಯೋತಿ ಹಿಡಿದು ದೇಗುಲ ಪ್ರವೇಶ ವಿರೋಧಿಸುವ ಪ್ರದರ್ಶನಗಳನ್ನೂ ಸಂಘಟಿಸಲಾಗಿತ್ತು.

ಪ್ರಗತಿಯ ದಾರಿಯಲ್ಲಿ ಹಾಕುವ ಹೆಜ್ಜೆಗಳು ಹಿಂಸಾತ್ಮಕ ವಿರೋಧವನ್ನು ಎದುರಿಸುವುದು ಹೊಸದೇನೂ ಅಲ್ಲ. ಅದರಂತೆ ಅಯ್ಯಪ್ಪ ದೇಗುಲವನ್ನು ಪ್ರವೇಶಿಸಲು ಪ್ರಯತ್ನಿಸಿದ ಮಹಿಳೆಯರನ್ನು ತಡೆಯಲು ಹಿಂದುತ್ವ ಪ್ರಚಾರದ ಸಂಸ್ಥೆಗಳು ಮತ್ತು ಭಾರತೀಯ ಜನತಾ ಪಕ್ಷ ಅಸಾಂವಿಧಾನಿಕ ಕ್ರಮಗಳನ್ನೂ ಅನುಸರಿಸಿದ್ದು ಭಯಾನಕವಾಗಿತ್ತು. ಆದರೆ ಅದನ್ನು ಬಲವಾಗಿ ವಿರೋಧಿಸಲು ಕೇರಳದ ಮಹಿಳೆಯರೇ ದೃಢ ನಿರ್ಧಾರ ಕೈಗೊಂಡರು. ರಾಜ್ಯದ ಉದ್ದಗಲಕ್ಕೆ ಕೈಕೈ ಹಿಡಿದು ನಿಂತು ಸಮಾನತೆಯ ಆಶಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ, ಅಸಮಾನತೆಯ ಸಂಪ್ರದಾಯದ ವಿರುದ್ಧ “ಮಹಿಳೆಯರ ಗೋಡೆ”ಯನ್ನು ನಿರ್ಮಿಸಿದರು. “ದೇವರ ನಾಡು” ಕೆಟ್ಟುಹೋಗಿ “ದೆವ್ವದ ನಾಡು” ಆಗದಂತೆ, ಹೊಸ ವರ್ಷದ ಉದಯದ ದಿನ ನಡೆದ ಈ ಸೌಹಾರ್ದ ಪ್ರಯತ್ನವನ್ನು “ನವೋದಯ”ವೆಂದೇ ಬಣ್ಣಿಸಲಾಗುತ್ತಿದೆ. ಕೇರಳದ ಹೋರಾಟಗಳ ಚರಿತ್ರೆಗೆ ಹೊಸದೊಂದು ಅಧ್ಯಾಯ ಸೇರಿದೆ.

ಹೊಸವರ್ಷದ ದಿನ ಬೆಳಿಗ್ಗೆ ಕೇರಳ ರಾಜ್ಯದ ಕಾಸರಗೋಡಿನ ಆರಂಭದಿಂದ ತಿರುವನಂತಪುರದ ಕೊನೆಯವರೆಗೆ ಸುಮಾರು 620 ಕಿಲೋಮೀಟರ್ ಉದ್ದದ ಹೆದ್ದಾರಿಗಳು ಮಹಿಳಾಮಯವಾಗಿದ್ದವು. ಕೋಟಿ ಕೋಟಿ ಮಹಿಳೆಯರು ಗೋಡೆಯಂತೆ ನಿಂತು ಕೇರಳದ ಪ್ರಜಾಸತ್ತಾತ್ಮಕ ಪರಂಪರೆಗೆ ಎರಗುತ್ತಿರುವ ಅಪಾಯಗಳಿಗೆ ಸಾಂಕೇತಿಕವಾಗಿ ತಡೆಯೊಡ್ಡಿದರು. ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವುದು, ಸನಾತನವಾದವನ್ನು ಹಿಮ್ಮೆಟ್ಟಿಸುವುದು, ಕೋಮು ಸೌಹಾರ್ದವನ್ನು ಕಾಪಾಡುವುದು, ಜಾತ್ಯತೀತ ಮೌಲ್ಯಗಳನ್ನು ಗೌರವಿಸುವುದು, ಪಿತೃಪ್ರಧಾನ ವ್ಯವಸ್ಥೆಯ ಆದೇಶಗಳನ್ನು ಧಿಕ್ಕರಿಸುವುದು ಈ ಮಹಿಳಾ ಗೋಡೆ ರಚನೆಯ ಅಡಿಪಾಯ ಆಶಯಗಳಾಗಿದ್ದವು. ಮನೆಗೆಲಸ, ಕಾರ್ಖಾನೆ, ಹೊಲಗದ್ದೆ, ಸರ್ಕಾರಿ ಕಚೇರಿ, ನ್ಯಾಯಾಲಯ, ಆಸ್ಪತ್ರೆ, ಅಂಗಡಿಮುಂಗಟ್ಟು, ಶಾಲಾಕಾಲೇಜು ಹೀಗೆ ಎಲ್ಲೆಡೆ ಕೆಲಸ ಮಾಡುವ ಮಹಿಳೆಯರು ಇದರಲ್ಲಿ ಪಾಲ್ಗೊಂಡರು.

ಹಿಂದುಗಳು, ಮುಸ್ಲಿಮರು, ಕ್ರೈಸ್ತರು ಸೇರಿದಂತೆ ಎಲ್ಲ ಮಹಿಳೆಯರು ಈ ಪ್ರದರ್ಶನದಲ್ಲಿ ಒಂದಾಗಿದ್ದರು. ಹತ್ತರ ಹುಡುಗಿಯರಿಂದ ಹಿಡಿದು ತೊಂಬತ್ತರ ಹಿರಿಯರವರೆಗೆ ಅದರಲ್ಲಿ ಕಾಣಿಸಿಕೊಂಡರು. ಕೂಲಿಕಾರ್ಮಿಕರಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಎಲ್ಲ ಮಹಿಳೆಯರು ಇದರ ಹಿಂದಿನ ಆಶಯಗಳನ್ನು ಎತ್ತಿ ಹಿಡಿದರು. ಮಹಿಳೆಯರಿಗೆ ಬೆಂಬಲ ಕೊಡಲು ಅಲ್ಲಲ್ಲಿ ಪುರುಷರೂ ಸಾಲುಗಟ್ಟಿ ನಿಂತರು. ಎಡ ಪ್ರಜಾಸತ್ತಾತ್ಮಕ ರಂಗ ಈ ಬೃಹತ್ ಪ್ರದರ್ಶನವನ್ನು ಸಂಘಟಿಸಿತ್ತು. ಇದನ್ನೂ ಪ್ರತಿಭಟಿಸಿ ಅಲ್ಲಲ್ಲಿ ಸಂಘರ್ಷಗಳು ನಡೆದರೂ ಇತ್ತೀಚಿನ ದಿನಗಳಲ್ಲಿ ಇಂಥ ಪ್ರದರ್ಶನಕ್ಕೆ ಸಿಕ್ಕ ಜನಬೆಂಬಲ ಅಸಾಧಾರಣವಾದದ್ದು ಎಂಬ ಪ್ರಶಂಸೆ ವ್ಯಕ್ತವಾಯಿತು. ಸುಮಾರು 170 ಸಂಘಟನೆಗಳು ಈ ಜನತಾಂತ್ರಿಕ ಪ್ರದರ್ಶನಕ್ಕೆ ಕೈಜೋಡಿಸಿದ್ದವು. ಈ ಮಹಿಳಾಬಲ ಪ್ರದರ್ಶನದ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇಗುಲಕ್ಕೆ ಐವತ್ತರೊಳಗಿನ ಇಬ್ಬರು ಮಹಿಳೆಯರ ಪ್ರವೇಶವೂ ಆಗಿದೆ. ಪ್ರತಿರೋಧಗಳನ್ನು ಲೆಕ್ಕಿಸದೆ ವಕೀಲೆ ಬಿಂದು ಅಮ್ಮಿಣಿ ಮತ್ತು ಸರ್ಕಾರಿ ಉದ್ಯೋಗಿ ಕನಕದುರ್ಗ ಇಬ್ಬರೂ ಧೈರ್ಯವಾಗಿ ದೇಗುಲವನ್ನು ಪ್ರವೇಶಿಸಿದ್ದಾರೆ. ಆ ಮೂಲಕ ಸಂವಿಧಾನ ನೀಡಿರುವ ಸಮಾನತೆಯ ಸಂದೇಶ ಸಾರಿದ್ದಾರೆ.

ಹಿತೈಷಿಣಿ ಬಳಗ

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *