ಕೆಲಸದಾಕೆಯ ಆತ್ಮಕತೆ – ಡಾ.ಕೆ.ಎಸ್.ಚೈತ್ರಾ

ಜೀವನಚರಿತ್ರೆಯೆಂಬ ಸಾಹಿತ್ಯದ ಭಾಗವಾದ ಆತ್ಮಕತೆಯಲ್ಲಿ, ವ್ಯಕ್ತಿ ತನ್ನ ಜೀವನದ ವಿವರಗಳನ್ನು ತಾನೇ ನಿರೂಪಿಸುತ್ತಾನೆ. ವರ್ತಮಾನದಲ್ಲಿದ್ದು, ಭೂತಕಾಲಕ್ಕೆ ಮರಳಿ ನೆನಪಿನಾಳದಿಂದ ಘಟನೆಗಳನ್ನು ಹೆಕ್ಕಿ ತೆಗೆದು ದಾಖಲಿಸುವ ಕೆಲಸ ಸುಲಭದ್ದಲ್ಲ. ಹಾಗೆ ನೋಡಿದರೆ ಬರೆಯುತ್ತಾ ಹಳೆಯ ಸುಖ-ದುಃಖಗಳನ್ನು ಮತ್ತೊಮ್ಮೆ ಅನುಭವಿಸುವ ವಿಶಿಷ್ಟಅನುಭವವದು. ಸಾಹಿತಿಗಳು, ನಟ-ನಟಿಯರು, ವೈದ್ಯರು ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧರಾದವರ ಆತ್ಮಕತೆ-ಜೀವನಚರಿತ್ರೆಗಳು ಈಗಾಗಲೇ ಪ್ರಕಟವಾಗಿವೆ, ಆಗುತ್ತಿವೆ. ಆದರೆ ಮನೆಕೆಲಸದ ಸಹಾಯಕಿ ಆತ್ಮಕತೆ ಬರೆದರೆ?

ಆರನೇ ತರಗತಿಯಲ್ಲಿಅಪ್ಪನ ಬಲವಂತಕ್ಕೆ ಶಾಲೆ ಬಿಟ್ಟು, ಹನ್ನೆರಡು ವರ್ಷಕ್ಕೆ ಬಾಲ್ಯ ವಿವಾಹಕ್ಕೆ ಬಲಿಯಾಗಿ , ನಂತರ ಮನೆಕೆಲಸದ ಸಹಾಯಕಿಯಾಗಿ ಬಾಳು ಕಂಡುಕೊಂಡ ಬೇಬಿ ಹಾಲ್ದಾರ್ ಬರೆದಿರುವ ಅಪರೂಪದ ಆತ್ಮಕತೆ ‘ಆಲೋ ಆಂಧರಿ’ (ಕತ್ತಲು-ಬೆಳಕು) ಬಂಗಾಳಿ ಭಾಷೆಯಲ್ಲಿದೆ( 2002ರಲ್ಲಿ ಪ್ರಕಟ). 21 ಭಾರತೀಯ ಭಾಷೆಗಳಿಗಲ್ಲದೆ, 13 ವಿದೇಶಿ ಭಾಷೆಗಳಿಗೆ ಅನುವಾದಗೊಂಡು ಅಪಾರ ಜನಪ್ರಿಯತೆ ಗಳಿಸಿರುವ ಮಹತ್ವದ ಕೃತಿ. ಇಂಗ್ಲೀಷಿನಲ್ಲಿ ‘ಎ ಲೈಫ್ ಲೆಸ್‌ ಆರ್ಡಿನರಿ’ ಎಂಬ ಹೆಸರಿನಲ್ಲಿ ಅನುವಾದಗೊಂಡಿದೆ. ಹೆತ್ತತಾಯಿ, ತನ್ನ ಗಂಡನ ಬೇಜವಾಬ್ದಾರಿಯಿಂದ ಬೇಸೆತ್ತು ಮಾರುಕಟ್ಟೆಗೆ ಹೋಗಿ ಹಾಗೇ ಬರದಿರುವುದರಿಂದ ಆರಂಭವಾಗುವ ಈ ಕೃತಿಯಲ್ಲಿ ಬಹಳಷ್ಟು ನೋವಿನ ಸಂಗತಿಗಳಿವೆ. ಆಶ್ಚರ್ಯವೆಂದರೆ ಎಲ್ಲೂ ಸ್ವಾನುಕಂಪ, ಅತಿಯಾದ ಭಾವುಕತೆ, ಸಿಟ್ಟುತೋರದೆ ಸಂಯಮದಿಂದ ಬೇಬಿ ನಿರೂಪಿಸುತ್ತಾರೆ.

‘ನನ್ನಂಥ ಪ್ರತಿಯೊಬ್ಬರಲ್ಲೂ ಹೇಳಲು ಇಂಥ ಬೇಕಷ್ಟು ಕತೆಗಳಿವೆ, ಹಂಚಿಕೊಳ್ಳಲು ಸಾವಿರ ಅನುಭವಗಳಿವೆ. ಆದರೆ ಕೇಳುವವರಿಲ್ಲಅಷ್ಟೇ’ ಎನ್ನುವ ಅವರ ಮಾತು ಕಟು ವಾಸ್ತವವನ್ನು ತೆರೆದಿಡುತ್ತದೆ. ಹಾಗೆ ನೋಡಿದರೆ ಇದು ಬೇಬಿಯೊಬ್ಬರ ಕತೆಯಲ್ಲ, ಭಾರತದಂಥ ದೇಶದಲ್ಲಿ ಲಕ್ಷಾಂತರ ಕೆಳವರ್ಗದ, ಅನಕ್ಷರಸ್ಥ ಶ್ರಮಜೀವಿಗಳ ಆತ್ಮಕತೆಯೂ ಹೌದು. ಅವರೆಲ್ಲರ ಜೀವನಕ್ಕೆ ಹಿಡಿದ ಕೈಗನ್ನಡಿಯಂತಿರುವುದರಿಂದಲೇ ಈ ಕೃತಿ ಮಹತ್ವದ್ದು!
ಸಂಯಮದಿಂದ ನಿರೂಪಿಸಿರುವ ಈ ಆತ್ಮಕತೆಯಲ್ಲಿ ಗಂಡಸರ ಬಗ್ಗೆ ಹೆಚ್ಚೇನೂ ಆಕ್ರೋಶ ಕಾಣುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಬೇಬಿ ಕೊಡುವ ಉತ್ತರ ಹೀಗಿದೆ. ’ಗಂಡಸರಿಗೆ ಮಾತ್ರ ಕೆಟ್ಟವರು ಎಂಬ ಹಣೆಪಟ್ಟಿ ಹಚ್ಚಲು ಸಾಧ್ಯವಿಲ್ಲ. ಹೆಂಗಸರೂ ಕೆಟ್ಟವರಿರಬಹುದು. ಅದು ನಮ್ಮ ವ್ಯಕ್ತಿತ್ವ ಅಷ್ಟೇ. ನನ್ನ ಬದುಕಿನಲ್ಲಿ ತಂದೆ, ಗಂಡ, ಇನ್ನಿತರ ಗಂಡಸರು ಕೆಟ್ಟದು ಮಾಡಿದರು ನಿಜ. ಅದು ತಪ್ಪು. ಆದರೆ ನನ್ನ ಬರವಣಿಗೆಗೆ, ಆ ಮೂಲಕ ಹೊಸ ಬದುಕಿಗೆ ಕಾರಣವಾದವರೂ ಗಂಡಸೇ; ಪ್ರೊಫೆಸರ್! ಅದೂ ಅಲ್ಲದೇ ನನ್ನನ್ನು ತುಳಿದ ಗಂಡಸರೇ ನನ್ನಲ್ಲಿ ಏನಾದರೂ ಆಗಬೇಕೆಂಬ ಹಠ ಮೂಡಿಸಿದವರೂ ಆಗಿದ್ದಾರೆ. ಸ್ತ್ರೀವಾದ ನಂಗೆ ಗೊತ್ತಿಲ್ಲ. ಆದರೆ ಹೆಂಗಸರಿಗೆ ಗಂಡಸರು ಬಸ್ಸಿನಲ್ಲಿ ಸೀಟು ಬಿಟ್ಟು ಕೊಡಬೇಕು ಎಂಬುದಕ್ಕೆ ನನ್ನ ಸಹಮತವಿಲ್ಲ. ಆ ಮೂಲಕ ಹೆಂಗಸಿಗೆ ತಾನು ದುರ್ಬಲೆ ಅನಿಸಿದರೆ, ಗಂಡಸಿಗೆ ತಾನೇನೋ ಉಪಕಾರ ಮಾಡಿದೆ ಎಂಬ ಹೆಮ್ಮೆಯ ಕೋಡು ಮೂಡಲು ಕಾರಣ. ಯಾರೂ ಯಾರಿಗೆ ಉಪಕಾರ ಮಾಡುವುದು ಬೇಡ; ಸಮಾನ ಅವಕಾಶ ಸಿಕ್ಕರೆ ಸಾಕು. ಜೀವನದ ಈ ಹಂತದಲ್ಲಿ ನನಗೆ ಹಿಂತಿರುಗಿ ನೋಡಿದಾಗ ಬೇಸರವಿಲ್ಲ. ಎಲ್ಲವನ್ನೂ ಎದುರಿಸಿ ನಿಂತಿದ್ದೇನೆ ಎಂಬ ಸಂತಸವಿದೆ’.

ಬೇಬಿಗೇ ಬೇಬಿಗಳು!

ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುವ ಕಾಶ್ಮೀರದಲ್ಲಿ ಜನಿಸಿದ ಬೇಬಿಯ ಬದುಕು ಮಾತ್ರ ನರಕ ಸಮಾನವೇ! ಕುಡಿದು ಬಂದು ಗಲಾಟೆ ಮಾಡಿ ಹೊಡೆಯುವ ತಂದೆ, ಹೆದರಿ ಹೈರಾಣಾದ ತಾಯಿಯ ನಡುವೆ ಬೇಡದ ಮಗು ಈ ಬೇಬಿ. ಕಡೆಗೊಮ್ಮೆ ಕೌಟುಂಬಿಕ ದೌರ್ಜನ್ಯ ತಾಳಲಾರದೇ ತಾಯಿ, ಮನೆ-ಗಂಡ-ಮಗು ಬಿಟ್ಟು ಹೋದಾಗ ಬೇಬಿಗೆ ಕೇವಲ ನಾಲ್ಕುವರ್ಷ. ಮಲತಾಯಿಯ ಜತೆ ಬಂಗಾಳದ ದುರ್ಗಾಪುರಕ್ಕೆ ವಾಸ್ತವ್ಯ ಬದಲಾಯಿತು. ಮನೆ ಬದಲಾಯಿತು, ಮನಸ್ಸು ಚೂರಾಯಿತು. ಆದರೂ ಗೆಳತಿಯರೊಡನೆ ಆಟವಾಡುತ್ತಾ ದುಃಖ ನುಂಗಿದ್ದ ಹನ್ನೆರಡರ ಬಾಲೆಗೆ ಆಕೆಗಿಂತ ಹದಿನಾಲ್ಕು ವರ್ಷ ಹಿರಿಯವರನೊಡನೆ ಮದುವೆ!

ಮನೆಯ ತುಂಬಾ ನೆಂಟರು ಬಂದು ಗಲಾಟೆ, ಭಾರದ ಅಲಂಕಾರ, ಸುಂದರ ಮಂಟಪದಲ್ಲಿ ದೊಡ್ಡ ಗಂಡಸಿನ ಪಕ್ಕ ಕುಳಿತು ಪೂಜೆ , ಸಿಹಿ ತಿಂಡಿ, ಇದರಿಂದ ಮನೆಯಲ್ಲಿ ಏನೋ ವಿಶೇಷ ಹಬ್ಬಅಂದು ಕೊಂಡಿದ್ದಳು ಬೇಬಿ. ಎಲ್ಲಾ ಮುಗಿದು ಅಪರಿಚಿತ ವ್ಯಕ್ತಿಯೊಡನೆ ಬೇರೆ ಮನೆಗೆ ಹೋಗಬೇಕು ಎಂದಾಗಲೇ ತಿಳಿದಿದ್ದು ಆಗಿದ್ದು ತನ್ನ ಮದುವೆ, ಆ ವ್ಯಕ್ತಿ ತನ್ನ ಗಂಡ. ಮದುವೆ ಆಗಿ ವರ್ಷ ಕಳೆಯುವಷ್ಟರಲ್ಲಿ ಆಡುವ ಹುಡುಗಿ ಕೈಗೆ ಕೂಸು ಬಂದಾಗಿತ್ತು.
ದೇಹ ಮನಸ್ಸು ಎರಡೂ ಬೆಳೆಯದ ಮುಗ್ಧೆಯ ಮೇಲೆ ಸತತ ಹದಿಮೂರು ವರ್ಷಗಳ ದೌರ್ಜನ್ಯ ನಡೆಯಿತು. ಅಷ್ಟರಲ್ಲಾಗಲೇ ಮೂರು ಮಕ್ಕಳ ತಾಯಿಯಾಗಿದ್ದ ಬೇಬಿ ತನ್ನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಆ ಪರಿಸ್ಥಿತಿಯಲ್ಲಿ ಅತ್ಯಂತ ಕಠಿಣ ನಿರ್ಧಾರವನ್ನೇ ಕೈಗೊಂಡಳು. ವಿದ್ಯಾಭ್ಯಾಸ, ದುಡ್ಡು ಯಾವುದೂ ಇಲ್ಲದ ಬೇಬಿಯ ಬಳಿ ಇದ್ದದ್ದು ಬದುಕು ಕಟ್ಟಿಕೊಳ್ಳುವ ಕನಸೊಂದೇ!ಹಾಗಾಗಿಯೇ ಗಂಡನನ್ನು ತೊರೆದು ದೆಹಲಿಯ ರೈಲು ಹತ್ತಿದ್ದು ಆಕೆಯ ಜೀವನದ ಮಹತ್ವದ ಘಟನೆ.

ದೆಹಲಿಯಲ್ಲಿ ಕೆಲಸದಾಳು…

ಚಿಕ್ಕ ಪ್ರಾಯದ ಮಹಿಳೆಯೊಬ್ಬಳು ಏಕಾಂಗಿಯಾಗಿ ದುಡಿದು ಮೂರು ಮಕ್ಕಳನ್ನು ಸಾಕುವುದು ಸಾಮಾನ್ಯದ ಮಾತಲ್ಲ. ಕಾಮ್‌ವಾಲಿಯಾಗಿ ಎಲ್ಲ ಅಪಮಾನ, ಕ್ರೂರದೃಷ್ಟಿ, ಲೈಂಗಿಕ ಕಿರುಕುಳ ಸಹಿಸಿದ ಬೇಬಿಗೆ ಹೊಸ ಬೆಳಕು ತೋರಿದ್ದು ಪ್ರೊಫೆಸರ್ ಬೋದ್ ಕುಮಾರ್ (ಖ್ಯಾತ ಹಿಂದಿ ಲೇಖಕ ಪ್ರೇಮ್‌ಚಂದ್ ಅವರ ಮೊಮ್ಮಗ). ಅವರ ಮನೆಕೆಲಸದ ಸಹಾಯಕಿಯಾಗಿ ಸೇರಿದ ಬೇಬಿ ಕಸ ಗುಡಿಸಿ, ನೆಲ ಒರೆಸಿ, ಧೂಳು ಹೊಡೆದು ಹೀಗೆ ಎಲ್ಲಾ ಕೆಲಸವನ್ನು ಮಾತಿಲ್ಲದೆ ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ಆದರೆ ಮನೆಯ ಕಪಾಟಿನಲ್ಲಿ ಜೋಡಿಸಿಟ್ಟ ಪುಸ್ತಕಗಳನ್ನು ನೋಡುವಾಗಲೆಲ್ಲಾ ಕಣ್ಣುಗಳಲ್ಲಿ ಆಸೆ ಮಿನುಗುತ್ತಿತ್ತು, ಮುಟ್ಟಬೇಕು ಎಂಬ ಕಾತುರವಿರುತ್ತಿತ್ತು. ಅದನ್ನು ಗಮನಿಸಿದ ಸೂಕ್ಷ್ಮದೃಷ್ಟಿಯ ಪ್ರೊಫೆಸರ್ ಓದಲು ಪ್ರೋತ್ಸಾಹ ನೀಡಿದರು. ತಸ್ಲೀಮಾ ನಸ್ರೀನ್‌ರ ’ನನ್ನಬಾಲ್ಯ’ ಬೇಬಿ ಓದಿದ ಮೊದಲ ಕೃತಿ. ಅಲ್ಲಿಂದ ಶುರುವಾದ ಓದಿನ ಗೀಳು ಬಂಗಾಳಿಯ ಅತ್ಯುತ್ತಮ ಕೃತಿಗಳೆಲ್ಲವನ್ನು ಓದಲು ಪ್ರೇರೇಪಿಸಿತು. ಬೇಬಿಯ ಆಸಕ್ತಿ ಗಮನಿಸಿದ ಪ್ರೊಫೆಸರ್ ಒಂದು ದಿನ ಆಕೆಗೆ ಪೆನ್ನು, ಖಾಲಿ ಪುಸ್ತಕ ನೀಡಿ ಬರೆಯಲು ಹೇಳಿದರು. ಕೈಯಲ್ಲಿ ಪುಸ್ತಕ ಹಿಡಿದ ಬೇಬಿಗೆ ಕಕ್ಕಾಬಿಕ್ಕಿ.

ಬರೆಯುವುದೇನು? ಕಳೆದು ಹೋದ ಬಾಲ್ಯ, ಓಡಿ ಹೋದ ತಾಯಿ, ದೇಹದ ಮೇಲಿನ ಹೊಡೆತದ ಕಲೆ, ಹದಿಮೂರನೇ ವಯಸ್ಸಿನಲ್ಲಿ ತಿಂದ ಹೆರಿಗೆ ನೋವು, ತಂದೆಯ ಬೈಗುಳ, ಒದೆತ, ಏಕಾಂಗಿಯಾಗಿ ಸವೆಸಿದ ದಿನಗಳು… ಅದುವರೆಗೆ ಅದುಮಿಟ್ಟ ನೆನಪುಗಳೆಲ್ಲವೂ ಹಾಳೆಯ ಮೇಲೆ ಮಸಿಯ ಜತೆ ರಕ್ತ-ಕಣ್ಣೀರೂ ಸೇರಿ ಹರಿಯಿತು. ಆರನೇ ತರಗತಿ ಬಿಟ್ಟ ನಂತರ ಅಲ್ಲಿಯವರೆಗೆ ಪೆನ್ನು ಹಿಡಿಯದಿದ್ದ ಬೇಬಿಗೆ ನೆನಪುಗಳು ಉಕ್ಕಿ ಬಂದರೂ ಬರೆಯುವುದು ಸುಲಭವಾಗಿರಲಿಲ್ಲ. ವಾಕ್ಯ ರಚನೆ, ವ್ಯಾಕರಣ, ಶಬ್ದ ಎಲ್ಲವೂ ಕಷ್ಟವಾಗಿತ್ತು. ಆದರೂ ಬರೆದಳು, ಬರೆದಳು ಮತ್ತು ಕಲಿತಳು!

ಆಲೋ ಆಂಧರಿ…

ಅಂತೂ ತರಕಾರಿ ಕತ್ತರಿಸುತ್ತಾ, ಚಪಾತಿ ಬೇಯಿಸುತ್ತಲೇ ನೆನಪಾಗಿದ್ದನ್ನೆಲ್ಲಾ ದಾಖಲಿಸುತ್ತಾ ಹೋದಳು ಬೇಬಿ. ಮನೆಗೆ ಮರಳಿದ ನಂತರವೂ ಮಧ್ಯ ರಾತ್ರಿಯವರೆಗೆ ಬರೆಯಲಾರಂಭಿಸಿದಳು.
ಆಕೆಯ ಹಸ್ತಪ್ರತಿ ಓದುತ್ತಾ ಪ್ರೊಫೆಸರ್ ಕಣ್ಣು ಹನಿಗೂಡಿತ್ತು, ಮನಸ್ಸು ತುಂಬಿ ಬಂದಿತ್ತು. ಭಾವನಾ ಜೀವಿಯಾದ ಅವರು ತಮ್ಮ ಅಭಿಪ್ರಾಯದ ಬಗ್ಗೆ ಖಾತರಿ ಇಲ್ಲದೇ ಸಾಹಿತ್ಯ ಲೋಕದ ಅರಿವಿದ್ದ ತಮ್ಮ ಗೆಳೆಯರ ಜತೆ ಈ ಪುಸ್ತಕದ ಬಗ್ಗೆ ಚರ್ಚಿಸಿದರು. ಓದಿದ ಎಲ್ಲರ ಮಾತು ಒಂದೇ ‘ಅದ್ಭುತ’ . ಹೀಗೆ ‘ಆಲೋ ಆಂಧೇರಿ’ ರೂಪು ತಾಳಿತು.
ಆದರೆ ಅದನ್ನು ಪ್ರಕಟಿಸುವವರು ಯಾರು? ಕಡೆಗೆ ಬಹಳ ಧೈರ್ಯ ಮಾಡಿ ಕೊಲ್ಕತ್ತದ  ಶನಿ ಪ್ರಕಾಶನ ಎಂಬ ಸಣ್ಣಸಂಸ್ಥೆ ಅದನ್ನು2002 ರಲ್ಲಿ ಪ್ರಕಟಿಸಿತು. ಬಿಡುಗಡೆಯಾದ ಮೊದಲದಿನದಿಂದಲೇ ನಿರೀಕ್ಷೆ ಮೀರಿದ ಭರ್ಜರಿ ಮಾರಾಟ. ಸಾಹಿತ್ಯಾಸಕ್ತರು ಮಾತ್ರವಲ್ಲ ಸಮಾಜದ ಕೆಳಸ್ತರದವರೂ ಕಾದುನಿಂತು ಕೊಂಡ ಕೃತಿ ಇದು.
ಹಾಗಾಗಿಯೇ ಪ್ರಕಟವಾದ ಎರಡೇ ವರ್ಷದಲ್ಲಿ ಎರಡು ಬಾರಿ ಮರುಮುದ್ರಣವಾಯಿತು.ಇಂಗ್ಲೀಷಿನಲ್ಲಿ ‘ಎ ಲೈಫ್‌ ಲೆಸ್‌ ಆರ್ಡಿನರಿ’ ಎಂಬ ಹೆಸರಿನಲ್ಲಿಅನುವಾದಗೊಂಡಿದೆ.

ಹೊಸ ಅಸ್ತಿತ್ವ…

ಪ್ರೊಫೆಸರ್ ಬಳಿಯೇ ಅನೇಕ ವರ್ಷಗಳ ಕಾಲ ಓದು, ಬರವಣಿಗೆ ಮುಂದುವರಿಸಿದ ಬೇಬಿ , ತದನಂತರ ಇನ್ನೆರಡು ಕೃತಿ ರಚಿಸಿದ್ದಾರೆ. ಆರ್ಥಿಕವಾಗಿ ಸ್ವಾವಲಂಬಿಯಾಗಿ ಈಗ ಕೊಲ್ಕತ್ತಾದಲ್ಲಿ ಮಕ್ಕಳೊಂದಿಗೆ
ನೆಲೆಸಿದ್ದಾರೆ. “ಪ್ರೊಫೆಸರ್, ತನ್ನ ಹೊಸಬದುಕಿನ ತಂದೆ ಮತ್ತು ಗುರು. ಕೆಲಸ ಮಾಡುವುದು ಇದ್ದೇಇದೆ,  ಅದು ಅನ್ನವನ್ನು ನೀಡಿದೆ. ಆದರೆ ಬರವಣಿಗೆ ನನಗೆ ಈವರೆಗೆ ಇಲ್ಲದ ಹೊಸ ಅಸ್ತಿತ್ವವನ್ನು ನೀಡಿದೆ. ಅದೀಗ ನನ್ನ ಉಸಿರು. ಉಸಿರಿಲ್ಲದೇ ಬದುಕಲು ಸಾಧ್ಯವೇ? ಆದ್ದರಿಂದ ನನಗಾಗಿಯೇ ನಾನು ಬರೆಯುತ್ತೇನೆ” ಎನ್ನುವ ಬೇಬಿ ನಿಜಕ್ಕೂ ಅಸಾಮಾನ್ಯ  ಲೇಖಕಿ ಮತ್ತು ಸ್ವತಃ  ಬದುಕು ಕಟ್ಟಿಕೊಂಡ
ಸಾಹಸಿ.

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಕೆಲಸದಾಕೆಯ ಆತ್ಮಕತೆ – ಡಾ.ಕೆ.ಎಸ್.ಚೈತ್ರಾ

  • August 1, 2018 at 2:58 pm
    Permalink

    thanks for the article

    Reply

Leave a Reply

Your email address will not be published. Required fields are marked *