ಕೆಂಡದುಂಡೆಗಳು – ಆಶಾ ಜಗದೀಶ್
ಆಗಸದ ತುಂಬೆಲ್ಲ ಕೆಂಡದುಂಡೆಗಳು
ಉಣ್ಣುವ ತಟ್ಟೆಯೊಳಗೂ ಕಿಬ್ಬೊಟ್ಟೆಯೊಳಗೂ
ಹಿಂದಿನಂತಲ್ಲದ ಉರಿ
ಕೆಂಡದುಂಡೆಯೊಂದು ಮೊಳೆಯುವ ರಾತ್ರಿ
ನಾನು ಮಲಗಲಿಲ್ಲ
ಮುಂಜಾನೆ ಅದೇ ಆಗ ಮೂರೆಸಳ
ತೊಟ್ಟಲ್ಲಿ ಬೆಚ್ಚಗೆ ಕಣ್ಮುಚ್ಚಿ ಮಲಗಿದ್ದ
ಕೆಂಡದ ಮೊಗ್ಗು
ಧಡಾರನೆ ಬಾಗಿಲ ಜಡಿದು
ಹೆಣದ ಮೇಲಿನ ಬಿಳಿ ಬಟ್ಟೆಯಂತೆ
ಮುಖಮುಚ್ಚಿಕೊಂಡು ಮಲಗಿಬಿಟ್ಟೆ
ಪಾದಗಳು ಇಣುಕುತ್ತಿದ್ದವಂತೆ
ನನಗಿದ್ದದ್ದು ತಲೆಯದೊಂದೇ ಚಿಂತೆ
ಮೂರುದಾರಿ ಕೂಡುವ ಜಾಗದಲ್ಲಿ
ಸಿಂಧೂರವನಿಟ್ಟು ಮುತ್ತುಗಳ ಕತ್ತು ಕುಯ್ಯುವ
ಮಾರಣ ಹೋಮದ ದಿನ
ಅಗ್ನಿಕುಂಡದ ನಡುವೆ ನಿಲ್ಲಿಸಿ ಇದನ್ನೊಂದು
ಮದುವೆ ಎಂದು ಘೋಷಿಸಿಬಿಡುತ್ತಾರೆ
ಅಕ್ಷತೆ ಎಂದೆನಿಸಿಕೊಳ್ಳುವ ಅಕ್ಕಿಕಾಳು
ಅವಳ ಚಿತೆಯ ಕಾಯುತ್ತದೆ
ಚುಂಬಕ ಮಲೆಗಳ ನಡುವೆ
ತೂಗಾಡುವ ಸೂತ್ರದ ಗಾಳಿಪಟ
ದಿಕ್ಕೆಟ್ಟು ಅಲೆಯುತ್ತದೆ
ಉರುಲು ಸುತ್ತಿದ ಎರಡನೆ ಬೆರಳ ಕಣ್ಣ ಉಪ್ಪಿಗೆ
ಸೆಲೆತ ಬೆರಳ ಸಂದಿ ಉರಿಯುತ್ತದೆ
ನಿಗಿನಿಗಿ ಕೆಮ್ಮೈನವನ ಸಂತಾನದ ಸೋಂಕು
ಭೂಮಿಯ ಮೇಲಿನ ಗರ್ಭಗಳಿಗೆ…
ಕೆಂಪನ್ನು ಉಂಡು ಕೆಂಪನ್ನೆ ಉಟ್ಟು
ಕೆಂಪುಬಣ್ಣದ ಮೇಲೆ ಹೊರಳಾಡಿ ಬೆಳೆದವನಿಗೆ
ಬಿಳಿ ಹಸಿರು ಎಂದರೆ ಏನೆಂದು ಹೇಗೆ
ವಿವರಿಸುವುದು
ಉಬ್ಬಿದ ಹೊಟ್ಟೆಯ ಮೇಲೆ ದಿಗ್ವಿಜಯದ ಪತಾಕೆ
ಯಾರೋ ಹೊರುತ್ತಾರೆ ಇನ್ಯಾರೋ ಸಂಭ್ರಮಿಸುತ್ತಾರೆ
ಇಡಲಿರುವ ಕೆಂಪು ಪಾದಗಳ ಹೆಜ್ಜೆಗೆ ಓಕಳಿಯ
ಸವರುತ್ತಾರೆ
ಸ್ಪರ್ಶವನ್ನು ಮರೆಸುವ ಬೂಟುಗಳ ತೊಡಿಸುತ್ತಾರೆ
ನಿಜ ಉರಿ ಬದಲಾಗಿದೆ ಕಾರಣ
ಹಿಂದಿಗಿಂತಲೂ ಅದರ ತೀವ್ರತೆ ಹೆಚ್ಚಾಗಿದೆ
ಸುಡುತ್ತಿತ್ತು ಆದರೀಗ ಕ್ಷಣಾರ್ಧದಲ್ಲಿಯೇ
ಕರಕಲಾಗಿಸುತ್ತದೆ…
ಮತ್ತು ಉರಿಯ ನಿರಾಕರಿಸುವ
ಕಟ್ಟಳೆ ಮೀರಿದ ಸಾಲೊಂದು
ಗರ್ಭಪಾತದ ದವಾಖಾನೆಯ ಮುಂದೆ
ಕಂಕಣ ಕಟ್ಟಿ ನಿಂತಿದೆ.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ತುಂಬಾ ಚೆನ್ನಾಗಿದೆ