ಕೃಷಿ ಮಹಿಳೆಯ ಶೋಧನೆಯೇ? – ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ

ಇತಿಹಾಸ, ತತ್ವಶಾಸ್ತ್ರ, ವಿಜ್ಞಾನ, ಉತ್ಖನನ ಶಾಸ್ತ್ರ, ಮಾರ್ಕ್ಸ್‌ವಾದ – ಹೀಗೆ ಹತ್ತು ಹಲವು ರಂಗಗಳಲ್ಲಿ ಅವಿಸ್ಮರಣೀಯವಾದ ಕೊಡುಗೆಗಳನ್ನು ನೀಡಿ, ಜಗತ್‌ಪ್ರಸಿದ್ಧರಾದ ಪದ್ಮಭೂಷಣ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರ ನೂರನೆಯ ಹುಟ್ಟುಹಬ್ಬ ಇಂದು. ಕೃಷಿ ಎನ್ನುವುದು ಮಹಿಳೆಯ ಶೋಧನೆ ಎಂಬುದನ್ನು ಸಾಧಾರವಾಗಿ ನಿರೂಪಿಸಿರುವ ಅವರ ಲೇಖನ ಇಲ್ಲಿದೆ.

ಮಾನವ ಜನಾಂಗವು ನಡೆದು ಬಂದ ಹಾದಿಯನ್ನು ಗಮನಿಸಿದರೆ ಆರಂಭದ ದೆಸೆಯಲ್ಲಿ ಕಾಳುಕಡ್ಡಿ ಹಾಗೂ ಹಣ್ಣುಹಂಪಲನ್ನು ಸಂಗ್ರಹಿಸುವ ಕೆಲಸ ಮಹಿಳೆಯರದ್ದಾಗಿತ್ತೆಂಬುದು ತಿಳಿಯುತ್ತದೆ. ಕೃಷಿಯು ಅವಳ  ಶೋಧನೆಯಾಗಿದ್ದಿರಬೇಕೆಂದು ಇದರಿಂದ ಊಹಿಸಬಹುದು. ಎತ್ತುಗಳ ಬಳಕೆ ಮತ್ತು ನೇಗಿಲಿನ ಪ್ರಯೋಗ ಆರಂಭವಾದ ಮೇಲೆ ಅದು ಅವರಿಂದ ಪುರುಷರಿಗೆ ವರ್ಗಾವಣೆಯಾಯಿತು. ಪ್ರಾಚೀನ ಶಿಲಾಯುಗದಲ್ಲಿ ಸ್ತ್ರೀಯು ಕೃಷಿಯನ್ನು ಆರಂಭಿಸಿದ್ದು ಕಲ್ಲಿನ ಚೂರುಗಳಿಂದ. ಹೊರಗೆ ಬೇಟೆಯಾಡಲು ಪುರುಷನು ಇನ್ನೂ ಪ್ರಬಲವಾದ ಕಲ್ಲಿನ ಆಯುಧಗಳನ್ನು ಬಳಸುತ್ತಿದ್ದಿರಬೇಕು. ಆದರೆ ಬೇಟೆಗಿಂತಲೂ ಕೃಷಿಯ ಆಧಾರ ಹೆಚ್ಚಿದ್ದ ಆರ್ಥಿಕ ವ್ಯವಸ್ಥೆಯಲ್ಲಿ ಮೊದಲಿಗೆ ಹೆಣ್ಣಿನ ಸ್ಥಾನಮಾನ ಮೇಲ್ಮಟ್ಟದ್ದಾಗಿತ್ತು. ಸಂತತಿಯನ್ನು ಪಿತೃಮೂಲದಿಂದ ಗುರುತಿಸುವ ಪದ್ಧತಿ ಇದರಿಂದ ಜಾರಿಗೆ ಬಂತು. ಪಶುಸಂಗೋಪನೆ ಮುಖ್ಯ ಕಸುಬಾಗಿ ಬೆಳೆದ ಬುಡಕಟ್ಟುಗಳಲ್ಲಿ ಇದು ಮತ್ತೆ ಪಿತೃಮೂಲ ಸಂಸ್ಕೃತಿಯತ್ತ ವಾಲುವ ಪ್ರವೃತ್ತಿ ಕಂಡು ಬಂತು. ವಿಶ್ವದ ಅತಿ ಪ್ರಾಚೀನ ಸಾಹಿತ್ಯಗಳಲ್ಲಿ ಇದಕ್ಕೆ ಪುರಾವೆಗಳು ಹೇರಳವಾಗಿವೆ.

ಯಾವ ಪ್ರಾಚೀನ ಸಮಾಜದಲ್ಲೂ ಕೃಷಿಯು ಒಟ್ಟಾರೆ ಪುರುಷರ ಕೈಯಲ್ಲಿರಲಿಲ್ಲ. ಜೆ.ಡಿ. ಬರ್ನಾಲ್ ಇದನ್ನು ಸವಿಸ್ತಾರವಾಗಿ ನಿದರ್ಶನಗಳಿಂದ ಸಾಬೀತು ಮಾಡಿ ತೋರಿಸಿದ್ದಾರೆ. ಬ್ರೆಜಿಲ್ ನ ಮಧ್ಯಭಾಗದ ಬಕೈರಿ ಜನಾಂಗವನ್ನು ಅಭ್ಯಸಿಸಿದ ವಾನ್ ಡೈನ್ ಸ್ಟೈನನ್ ಸಹ ಇದೇ ತೀರ್ಮಾನಕ್ಕೆ ಬರಬೇಕಾಯಿತು. ತಾನು ವಾಸಿಸುತ್ತಿದ್ದ ಗುಡಿಸಲಿನ ಸುತ್ತಮುತ್ತ ಕೋಲುಕಲ್ಲುಗುದ್ದಲಿಗಳಿಂದ ನೆಲವನ್ನು ಹೆಕ್ಕುತ್ತಾ ಸಣ್ಣ ಪ್ರಮಾಣದಲ್ಲಿ ಬೇಸಾಯದತ್ತ ಕ್ರಮೇಣ ಮುನ್ನಡೆದಳು. ಪುರುಷನಿಗೆ ಬೇಟೆ, ಇತರ ಬುಡಕಟ್ಟುಗಳೊಡನೆ ನಿರಂತರವಾದ ಘರ್ಷಣೆ, ಮತ್ತು ಕಾಡಮೃಗಗಳಿಂದ ರಕ್ಷಣೆ ಕೊಡುವುದು, ಇತ್ಯಾದಿ ಕರ್ತವ್ಯಗಳಾದರೆ, ಕೃಷಿಯ ಮೂಲಕ ಆಹಾರವನ್ನು ವ್ಯವಸ್ಥೆಗೊಳಿಸುವುದು ಮಹಿಳೆಯ ಪಾಲಿಗೆ ಬಂತು. ವಿವಿಧ ಉಪಕರಣಗಳ ಉಪಯೋಗದಿಂದ ಕೃಷಿ ಮೇಲ್ಮಟ್ಟಕ್ಕೇರಿದಾಗ ಮಾತ್ರವೇ ಕೃಷಿಯಲ್ಲಿ ಅವಳ ಪಾತ್ರ ಸ್ವಲ್ಪ ಕಡಿಮೆಯಾಗಿದ್ದು, ಪಶುಸಂಗೋಪನೆಯನ್ನು ವೃತ್ತಿಯಾಗಿಟ್ಟುಕೊಂಡಿದ್ದ ಬುಡಕಟ್ಟುಗಳು ಕೃಷಿಯನ್ನು ಕೈಗೂಡಿಸಿಕೊಂಡಾಗ ಸಹಜವಾಗಿಯೇ ಮಹಿಳೆಯು ಕೃಷಿಗಾಗಿ ಪಶುಗಳ ಬಳಕೆಯನ್ನು ವಿರೋಧಿಸಿದ್ದಿರಬೇಕು.

ಇದನ್ನು ವಿವರಿಸುತ್ತಾ ಬ್ರಿಫಾಲ್ಟ್ ಆಸ್ಟ್ರೇಲಿಯಾದ ಮೂಲನಿವಾಸಿಗಳಲ್ಲಿ ಆಯುಧಗಳು ಪುರುಷರಿಗಿದ್ದಂತೆ ಮಹಿಳೆಯರಿಗೆ ಗೆಡ್ಡೆಗೆಣಸುಗಳನ್ನು ಅಗೆಯುವ ಕೋಲು ಪವಿತ್ರವಾದ ಆಸ್ತಿಯಾಗಿತ್ತೆಂದು ನಮೂದಿಸಿದ್ದಾರೆ. ಬುಡಕಟ್ಟು ಜನಾಂಗಗಳ ಐತಿಹ್ಯಗಳಲ್ಲೂ ಮಹಿಳೆಯು ಕೃಷಿ ಶೋಧಕಳೆಂಬ ಸೂಚನೆಗಳನ್ನು ಅವರು ಗುರುತಿಸಿದ್ದಾರೆ.

ಮಾತೃಪ್ರಧಾನ ಸಾಮಾಜಿಕ ಸಂಸ್ಥೆಗಳು ನಶಿಸಿಹೋಗದೆ ಉಳಿದಿರುವ ಖಾಸಿ ಬುಡಕಟ್ಟು ಜನಾಂಗದವರು ಇದಕ್ಕೆ ಒಂದು ಕುತೂಹಲಕಾರಿ ನಿದರ್ಶನ.   ಅವರಲ್ಲಿ ತಾಯಿಯು ಕುಟುಂಬದ ಒಡತಿ ಮಾತ್ರವೇ ಅಲ್ಲ; ಕುಟುಂಬದ ಎಲ್ಲ ರೀತಿಯ ಸಂಬಂಧಗಳಿಗೂ ಆಕೆಯೇ ಮೂಲ.  ಅವಳಿಗೆ ಧಾರ್ಮಿಕ ಮತ್ತು ರಾಜಾಧಿಪತ್ಯದ ಎರಡೂ ಕರ್ತವ್ಯಗಳು ಒಟ್ಟಾಗಿ ಲಭಿಸುತ್ತವೆ. ಡಿ.ಡಿ. ಕೋಸಾಂಬಿಯವರು ವಿಮರ್ಶಿಸಿದಂತೆ, “ದೇಶದ ಯಾವ ಭಾಗಗಳಲ್ಲಿ ನೇಗಿಲಿನಿಂದ ಉಳುವ ಪದ್ಧತಿ ತಡವಾಗಿ ಪ್ರಾರಂಭವಾಯಿತೋ ಅಂತಹ ಕಡೆಗಳಲ್ಲಿ ಇಂದಿಗೂ ಮಾತೃಪ್ರಧಾನ ಸಂಸ್ಥೆಗಳು ಉಳಿದುಕೊಂಡಿವೆ. ತಿರುವಾಂಕೂರ್, ಕೊಚ್ಚಿನ್ ಪ್ರದೇಶ ಹಾಗೂ ಕೆಲವು ಜನಾಂಗಗಳು ಇದಕ್ಕೆ ನಿದರ್ಶನವಾಗಿದೆ”.

ಭಾರತದಲ್ಲಿ ಕೃಷಿಯು ಮಹಿಳೆಯರಿಂದ ಕಂಡು ಹಿಡಿಯಲ್ಪಟ್ಟಿತೇ? ಹಾಗಿದ್ದಲ್ಲಿ, ಇದಕ್ಕೂ ಸಮಾಜದಲ್ಲಿ ಮಹಿಳೆಯ ಸ್ಥಾನಮಾನಕ್ಕೂ ಏನಾದರೂ ಸಂಬಂಧವಿದೆಯೇ? ಏರೆನ್ ಫಲ್ಸ್ ಎಂಬುವರು ಇದಕ್ಕಾಗಲೇ ಉತ್ತರ ನೀಡಿದ್ದಾರೆ:

“ಇಲ್ಲಿ ( ಅಂದರೆ ಭಾರತದಲ್ಲಿ) ಸ್ತ್ರೀಯು ಭೂಮಿಯನ್ನು ವ್ಯವಸ್ಥಿತವಾಗಿ ಉಳುವುದನ್ನು ಕಂಡುಹಿಡಿದದ್ದೇ ಅಲ್ಲದೆ, ಅದನ್ನು ಕಾರ್ಯರೂಪಕ್ಕೆ ತಂದಳು. ಇದೇನೂ ಬಹಳ ಸುಲಭದ ಕೆಲಸವಾಗಿದ್ದಿರಲಾರದು. ಏಕೆಂದರೆ ಅತಿ ಪ್ರಾಚೀನ ಸಮಾಜದಲ್ಲಿ ಸಂಪ್ರದಾಯದ ಕಟ್ಟುಪಾಡುಗಳು ಸಾಕಷ್ಟು ಪ್ರಬಲವಾಗಿದ್ದವು; ವಿಶೇಷತ: ಆರಂಭದಲ್ಲಿ ಇದು ಕಂಡು ಬರುತ್ತದೆ. ಇಂದಿಗೂ ಕೂಡ ಈ ಕೃಷಿಪೂರ್ವ ಗುಂಪುಗಳ ಪದ್ಧತಿಗಳು ಅಲ್ಲಲ್ಲಿ ಉಳಿದುಕೊಂಡಿರುವುದೇ ಇದಕ್ಕೆ ಸಾಕ್ಷಿ. ಭೂಮಿಯನ್ನು ಉಳುವುದರ ಪರಿಣಾಮವಾಗಿ ಈ ಮಾತೃ ಪ್ರಧಾನ ಸಾಂಸ್ಕೃತಿಕ ಬುಡಕಟ್ಟಿಗೆ ಸೇರಿದ ಜನರು ಕಾಡು ಬೀಡುಗಳಲ್ಲಿ ಅಲೆಯುವುದನ್ನು ತೊರೆದು ಪ್ರಪ್ರಥಮವಾಗಿ ಒಂದೆಡೆ ನೆಲೆಸುವಂತಹವರಾದರು.”

ಕೃಷಿಯೇ ಪ್ರಧಾನವಾದ ಭಾರತದಂತಹ ದೇಶದಲ್ಲಿ ಮಾತೃಹಕ್ಕಿನ ಅವಶೇಷಗಳು ಅಗಾಧವಾಗಿ ಉಳಿದಿರುವುದು ಆಶ್ಚರ್ಯವೇನಲ್ಲ. ಖಾಸಿ ಮತ್ತು ಗಾರೋ ಬುಡಕಟ್ಟಿನವರು ವಾಸಿಸುವ ಭಾರತದ ಈಶಾನ್ಯ ಪ್ರದೇಶದಲ್ಲಿ ಮತ್ತು ಮಲಬಾರ್ ಪ್ರದೇಶದಲ್ಲಿ ವಾಸಿಸುವ ನಾಯರ್‌ಗಳ ಮಧ್ಯೆ ಮಾತೃ ಹಕ್ಕಿನ ಉಳಿಕೆಯು ಹೆಚ್ಚು ಕಾಣಸಿಗುತ್ತದೆ. ಸ್ತ್ರೀಯ ದೇಹದಿಂದ ಗಿಡಗಳು ಹುಟ್ಟುತ್ತವೆ ಎಂಬ ಪುರಾತನ ನಂಬಿಕೆಯನ್ನು ಪುಷ್ಟೀಕರಿಸುವಂತಹ ಆಧಾರವೊಂದನ್ನು ಹರಪ್ಪಾದಲ್ಲಿ ಹೊರತೆಗೆದಿದ್ದಾರೆ. ಅಲ್ಲಿ ಸಿಕ್ಕಿರುವ ಫಲಕವೊಂದರಲ್ಲಿ ತಲೆಕೆಳಗಾಗಿರುವ ಯೋನಿಯಿಂದ ಗಿಡವೊಂದು ಹೊರಬರುತ್ತಿರುವಂತೆ ಚಿತ್ರಿಸಿದ್ದಾರೆ. ಇಂತಹ ಅನೇಕ ಉದಾಹರಣೆಗಳು ಭಾರತದಲ್ಲಿ ಹೇರಳವಾಗಿ ಕಂಡುಬರುತ್ತವೆ.

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *