ಕೃಷಿಕ ಹೆಣ್ಣಿನ ಹಾಡು ಪಾಡು – ಸಂಗೀತಾ ರವಿರಾಜ್‌

 

ಹಳ್ಳಿಗಾಡಿನ ಕೃಷಿಕ ಮಹಿಳೆ ಗಂಡಿಗೆ ಸರಿಸಮಾನವಾಗಿ ದುಡಿಯುತ್ತಾಳೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮನೆಕೆಲಸ, ತೋಟದ ಕೆಲಸ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಾಳೆ. ಆದರೆ, ಆರ್ಥಿಕ ಸ್ವಾವಲಂಬನೆ ಮಾತ್ರ ಆಕೆಗೆ ಮರೀಚಿಕೆ. ಈ ಬಗ್ಗೆ ಇಲ್ಲಿ ವಿಶ್ಲೇಷಿಸಲಾಗಿದೆ.

 

ಬೆಳಗಾಗೆದ್ದು ಒಂದು ಕ್ಷಣ ಸುಂದರ ಬೆಳಗನ್ನು ಆಸ್ವಾದಿಸಿ ತದನಂತರ ಅಡುಗೆ ಒಲೆಗೆ ಬೆಂಕಿ ಮಾಡುವುದು ನನ್ನ ನಿತ್ಯದ ದಿನಚರಿ. ಮದುವೆಯ ಮೊದಲು ಎಂದಾದರೊಮ್ಮೆ ಮಾಡಿದ ಈ ಕೆಲಸವನ್ನು ಮದುವೆಯ ಬಳಿಕ 12 ವರ್ಷಗಳಿಂದ  ಇಂದಿಗೂ ತಪಸ್ಸಿನಂತೆ ನಿರ್ವಹಿಸುತ್ತಾ ಬಂದಿರುವೆ.

 

ಹೇಳಿ ಕೇಳಿ ನಮ್ಮದು ಕೃಷಿ ಕುಟುಂಬದ ಹಳ್ಳಿ ಮನೆ. ಕೃಷಿ ಕುಟುಂಬದ ಮನೆಯಲ್ಲಿ ಹೀಗೆ ಬೆಳ್ಳಂಬೆಳಗ್ಗೆ ಒಲೆ ಉರಿಸುವುದರೊಂದಿಗೆ ಶುರುವಾಗುವ ಮಹಿಳೆಯ ಕೆಲಸ ರಾತ್ರಿ ಮಲಗುವವರೆಗೂ ಮುಂದುವರಿಯುತ್ತಲೇ ಹೋಗುತ್ತದೆ.  ಬೆಳಗ್ಗೆ ಹಚ್ಚಿದ ಸೌದೆ ಒಲೆಯಲ್ಲಿ ಸಂಜೆಯವರೆಗೆ ಗಂಜಿಯೋ, ಅನ್ನವೋ, ಸಾರೋ  ಬೇಯುತ್ತಲೇ ಇರುತ್ತದೆ.

 

ಮನೆ, ತೋಟವೆಂದು ಅಡ್ಡಾಡುವ ಈ ಹೆಣ್ಮಕ್ಕಳು ಹೆಚ್ಚು ಓದಿರಲ್ಲ ಎಂದು ಖಂಡಿತ ಅಂದುಕೊಳ್ಳಬೇಡಿ. ಈಗ ಎಲ್ಲರೂ ಪದವಿ ಅಥವಾ ಅದಕ್ಕಿಂತ ಹೆಚ್ಚು ಓದಿದವರೆ ಇಲ್ಲಿದ್ದಾರೆ. ಮನೆಯಲ್ಲಿಯೇ ಬೇಕಾದಷ್ಟು ಕೆಲಸ ಇರುವಾಗ ಹೊರಗಡೆ ಉದ್ಯೋಗಕ್ಕೆ ಏಕೆ ಹೋಗಬೇಕು ಎಂಬ ಹಿರಿಯರ  ಸಲಹೆಯ ಮೇರೆಗೆ ಮನೆಯಲ್ಲಿಯೆ ಉಳಿಯುವುದು ಸಾಮಾನ್ಯ.  ಎಲ್ಲರೂ ಪಟ್ಟಣದಲ್ಲಿಯೇ ಉಳಿದರೆ ಕೃಷಿಯ ಗತಿ ಏನು? ಅದೂ ಅಲ್ಲದೆ ಪತಿಗೆ ಕೃಷಿಯೇ ಕಾಯಕವೆಂದ ಮೇಲೆ ಹೆಂಡತಿ ಉದ್ಯೋಗಕ್ಕೆ ಹೋಗುವುದು ಸರಿಯೆ ಎಂಬ ಅಂಬೋಣ ಇನ್ನು ಕೆಲವು ಹಿರಿಯರದ್ದು.

 

ಹಾಗೂ ಹೀಗೂ  ಗೊತ್ತಿಲ್ಲದಿದ್ದರೂ ಹೊಸ ಕೆಲಸ ಕಲಿತುಕೊಂಡು ಹಳ್ಳಿ ಮನೆ ಮತ್ತು ಕೃಷಿ ಸುಧಾರಿಸುವುದರಲ್ಲಿಯೆ ಮಹಿಳೆ ನೆಮ್ಮದಿ ಕಾಣುತ್ತಾಳೆ. ಮನಪೂರ್ವಕವಾಗಿ ನೆಮ್ಮದಿ ಕಂಡುಕೊಂಡರೆ ಇದಕ್ಕಿಂತ ಸುಂದರ ತಾಣ ಬೇರಿಲ್ಲವೆಂಬುದಂತೂ ನಿಜ. ಬೆವರು ಹರಿಯುವಂತೆ ಕೆಲಸ ಮಾಡಿ ಆರೋಗ್ಯವಂತ ದೇಹವನ್ನು ಕಾಪಾಡಿಕೊಳ್ಳಬಹುದು. ಇದಕ್ಕಿಂತ ಮುಖ್ಯವಾಗಿ ಶುದ್ಧವಾದ ಗಾಳಿ ,ನೀರು, ಪ್ರಕೃತಿಯ ಮಡಿಲಲ್ಲಿ ಜೀವನ ಸಾಗಿಸುತ್ತಾಳೆ. ಇಂತಹ ಅನುಕೂಲತೆಗಳನ್ನೆಲ್ಲಾ ಪಡೆದರೂ ಸಣ್ಣ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಮಾತ್ರ ಅಸಮರ್ಥಳಾಗಿರುತ್ತಾಳೆ.

 

ತನ್ನದೇ ತೋಟ, ಮನೆಯಲ್ಲಿ ಹಗಲಿಡೀ ಅವಿರತವಾಗಿ ದುಡಿದರೂ ಕೃಷಿ ಮಹಿಳೆ ಸ್ವಾವಲಂಬಿಯಾಗಿರುವುದಿಲ್ಲ . ಇದು ಕೃಷಿ ಮಹಿಳೆಯ ಬಹುದೊಡ್ಡ ದುರಂತ. ಮಹಿಳೆಯ ಹೆಸರಿನಲ್ಲಿ ಯಾವುದೇ ಜಮೀನು ,ಸೊತ್ತು ಇರುವುದಿಲ್ಲ. ಕನಿಷ್ಠ ಪಕ್ಷ ಬ್ಯಾಂಕ್  ಖಾತೆ ಇಲ್ಲದ ಕೃಷಿ ಮಹಿಳೆಯರು ಗ್ರಾಮೀಣ ಬಾಗದಲ್ಲಿ ಹಲವರಿದ್ದಾರೆ. ಹೈನುಗಾರಿಕೆಯ ಪ್ರತಿ ಕೆಲಸ ಪೂರೈಸಿ ಡೈರಿಗೆ  ಹಾಲು ಕಳಿಸಿದ ನಂತರ,  ಹಾಲಿನ ಡೈರಿಯಿಂದ ಹಣ ಮಾತ್ರ ಗಂಡಸರ ಖಾತೆಗೆ ಜಮೆ ಆಗುತ್ತದೆ!

 

ಮಹಿಳೆಯರಿಗೆ ತನ್ನ ಮೂಲಭೂತ ಅವಶ್ಯಕತೆಗಳು, ತೀರ ಖಾಸಗಿ ವಸ್ತುಗಳನ್ನು ಖರೀದಿಸಲು ಸಹ ಹಣ ಇರುವುದಿಲ್ಲ. ನನ್ನ ಗೆಳತಿಯ ತಂಗಿಯೊಬ್ಬಳು  ಸ್ಯಾನಿಟರಿ ಪ್ಯಾಡ್ ಖರೀದಿಸಲು ಹಣ ಸಾಲುತ್ತಿಲ್ಲ, ಅದಕ್ಕೋಸ್ಕರ ದುಡ್ಡು ಕೇಳಲು ಸಂಕೋಚವೆನಿಸುತದೆ ಎನ್ನುತ್ತ ಋತುಸ್ರಾವದ ದಿನಗಳಲ್ಲಿ ಬಟ್ಟೆಗೆ ಮೊರೆ ಹೋಗುತ್ತಾಳೆ. ಕೇಳಿದರೆ ಮನಸ್ಸು ಆರ್ದ್ರಗೊಳ್ಳುತ್ತದೆ. ಆದರೂ ಇದು ನಿಜ.

 

ಇದಲ್ಲದೇ ಹಳ್ಳಿಯ ಮಹಿಳೆ ಹೊರಗೆ ಕಾಲಿಡದೆ ತಿಂಗಳಾನುಗಟ್ಟಲೇ ಕಳೆದಿರುತ್ತದೆ. ಮಹಿಳೆಯರಿಗೆ ಅದೆಷ್ಟೋ ವಸ್ತುಗಳು ಬೇಕೆಂದು ಮನಸ್ಸಲ್ಲಿ ಅದಮ್ಯ ಆಸೆಯಿರುತ್ತದೆ. ಆದರೆ ಅದನ್ನೆಲ್ಲಾ ಯಾರಿಗೂ ತಿಳಿಯದಂತೆ ಅದುಮಿಟ್ಟುಕೊಂಡು ಜೀವನ ಸಾಗಿಸುತ್ತಾರೆ. ತಮ್ಮಲ್ಲಿರುವ ನೃತ್ಯ, ಸಂಗೀತ, ಬರವಣಿಗೆ ಹವ್ಯಾಸಗಳನ್ನು  ಅನಿವಾರ್ಯವಾಗಿ ಅದುಮಿಟ್ಟುಕೊಳ್ಳುತ್ತಾರೆ. ಪತಿಯೊಂದಿಗೆ ಮುಕ್ತವಾಗಿ ಜೀವನ ಸಾಗಿಸಲು ಕೂಡುಕುಟುಂಬ ಅಡ್ಡಿ ಮಾಡುತ್ತದೆ.

 

ಪಟ್ಟಣದ ಸ್ತ್ರೀ ಯರ ‘ಶಾಪಿಂಗ್ ‘ಎಂಬ ಸಂತಸ ನಮ್ಮ ಮಹಿಳೆಯರಿಗೆ ಊರಿನ ಜಾತ್ರೆಯಲ್ಲಿ ಸಮಾಪ್ತಿಗೊಳ್ಳುತ್ತದೆ. ಎಂದಾದರೂ ಅನಿವಾರ್ಯವೆಂದು ಹತ್ತಿರದ ಪಟ್ಟಣಕ್ಕೆ ಹೋದಾಗ ಗಡಿಬಿಡಿಯಲ್ಲಿ ಅವಶ್ಯಕತೆಯ ವಸ್ತಗಳನ್ನು ಖರೀದಿಸಿದರೆ ಅದೇ ಶಾಪಿಂಗ್.  ಮತ್ತೇನಿದ್ದರೂ ಮನೆಯವರೊಂದಿಗೆ ಚೀಟಿ ಬರೆದು ಕೊಡುವುದರಲ್ಲಿಯೆ ಸಮಾಪ್ತಿಗೊಳ್ಳುತ್ತದೆ ಮತ್ತು ಸಂತೃಪ್ತಿಗೊಳ್ಳಬೇಕಾಗುತ್ತದೆ.

 

ಮನಸ್ಸಿನ ಆಸೆಗಳೆಲ್ಲವೂ ಸಂತೆಯಲಿ ಬಿಕರಿಗಿಟ್ಟ ಕನಸು. ಒಲೆಯಿಂದ ಅನ್ನ ಬಾಗಿದಾಗ ಗಂಜಿ ಬಿದ್ದ ಗಾಯದ ಉರಿಯಾಗಲಿ, ಒಡೆದ ಹಿಮ್ಮಡಿಯ ನೋವಾಗಲಿ, ಹಸುವಿಗೆ ಹುಲ್ಲು ಸಂಗ್ರಹಿಸುವಾಗ ತಾಗಿದ ಕತ್ತಿಯ ಗಡಿಯಾಗಲಿ, ಕಾಲಡಿಗೆ ಚುಚ್ಚಿದ ಮುಳ್ಳಿನ ನೋವಾಗಲಿ ಮನಸ್ಸಿನ  ವೇದನೆಗಳೆದುರು ನೋವುಗಳೇ  ಅಲ್ಲ.

 

ಅವಳು ಬಯಸುವ ಅಕ್ಕರೆಯ ಒಂದು ಪಿಸುಮಾತು ಇಲ್ಲಿ ಸಿಗುವುದಿಲ್ಲ. ತನ್ನ ಸಂಬಂಧಿಕರುನ್ನು ಮನೆಗೆ ಕರೆಯಲು ಆಕೆಗೆ ಸಂಕೋಚ. ಬಯಲು ಸೀಮೆಯ ಕೃಷಿ ಮಹಿಳೆಯರ ಜೀವನ ಇನ್ನೂ ಕ್ಲಿಷ್ಟಕರ.ಅವರು ನೀರಿಗಾಗಿ ಬಲುದೂರ ಹೋಗಿ ಪ್ರಯಾಸ ಪಡುತ್ತಾರೆ.ಮನೆಯಲ್ಲಿ ಶೌಚಾಲಯ ಇಲ್ಲದೆ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ.

 

ಮನೆಯಲ್ಲಿಯೆ ಉಳಿಯುವ ಗೃಹಿಣಿ ತನ್ನ ಅಸ್ಮಿತೆಯನ್ನು ಇನ್ನು ಗಟ್ಟಿಗಳಿಸಲೋಸುಗ ದೈಹಿಕವಾಗಿ ಕಷ್ಟಪಟ್ಟು ದುಡಿಯತ್ತಾಳೆ. ಮಹಿಳೆ ದೈಹಿಕವಾಗಿ ಕೆಲಸ ಮಾಡಲು ಗಂಡಿನಷ್ಟು ಶಕ್ತ ಅಲ್ಲ ಎಂಬುದು ತಲೆತಲಾಂತರದಿಂದ ಪ್ರತಿಯೊಬ್ಬರು ಅಂದುಕೊಂಡುಬಿಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಹೆಣ್ಣಾಳುಗಳಿಗೆ ನೀಡುವ ಸಂಬಳ ತಾರತಮ್ಯ.

 

ವಿಪರ್ಯಾಸವೆಂದರೆ ಹಳ್ಳಿಯ ಪ್ರತಿ ಮಹಿಳೆಯೂ ಗಂಡಿಗೆ ಸಮನಾಗಿ ದುಡಿಯುತ್ತಾಳೆ. ನಮ್ಮದೇ ಊರಿನ ಕೃಷಿ ವ್ಯವಸ್ಥೆಯನ್ನು ಉದಾಹರಿಸಿ ಹೇಳುವುದಾದರೆ ಇಲ್ಲಿನ ಹಲವು ಮಹಿಳೆಯರು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ರಬ್ಬರ್  ಟ್ಯಾಪಿಂಗ್ ಮಾಡುತ್ತಾರೆ. ಮತ್ತೆ ರಬ್ಬರ್ ಹಾಲು ಸಂಗ್ರಹಿಸುವ ಕೆಲಸ.  ಕೊಕ್ಕೋ ಹಣ್ಣನ್ನು ಕುಯ್ಯುವುದು,  ಕರಿಮೆಣಸು ಕುಯ್ಯುವುದು,ಅಡಿಕೆ ಆಯ್ದು ತರುವುದು, ಗೇರುಬೀಜ ಆಯ್ದು ತರುವುದು ಇತ್ಯಾದಿಗಳನ್ನು ಮಹಿಳೆಯರು ಸಲೀಸಾಗಿ ಮಾಡುತ್ತಾರೆ.

 

ಇದರೊಂದಿಗೆ ದನ ಸಾಕಾಣಿಕೆ ಹಳ್ಳಿಯಲ್ಲಿ ಸರ್ವೇಸಾಮಾನ್ಯ. ಹೈನುಗಾರಿಕೆಯ ಕೆಲಸ ಮಹಿಳೆಯನ್ನು ಹೈರಾಣಾಗಿಸುತ್ತದೆ.  ನಾಡಿನಾದ್ಯಂತ ಇರುವ ಎಲ್ಲ  ಕೃಷಿಕ ಮಹಿಳೆಯರ ಮಾನಸಿಕ ಸಂಘರ್ಷ ಒಂದೇ ತೆರನಾಗಿ ಇರುತ್ತದೆ ಎಂಬುದು ನನ್ನ ಭಾವನೆ .

 

ಮುಖ್ಯವಾಗಿ ಕೂಡು ಕುಟುಂಬ ಇಲ್ಲಿರುತ್ತದೆ. ಇಲ್ಲಿ ಹಿರಿಯರು ಕಿರಿಯರನ್ನು, ಮಹಿಳೆಯರನ್ನು ದುಡಿಸುತ್ತಾರೆ ಹೊರತೂ ಹಣದ ಸ್ವಾತಂತ್ರ್ಯವನ್ನು ಖಂಡಿತ ನೀಡಲಾರರು. ಎಲ್ಲ ಕೆಲಸ ಮುಗಿಸಿದ ನಂತರ ಮಾರಾಟಕ್ಕೆ ಕೊಂಡೊಯ್ಯುವ ಕೆಲಸ ಗಂಡಸರಿಗೆ ಸೀಮಿತ. ದಿನಸಿಯ ಪಟ್ಟಿ ನೀಡಿ ಉಸಿರು ಬಿಡುತ್ತಾಳೆ ಅಷ್ಟೆ.

 

ಸಂಜೆಗೊಮ್ಮೆ ನೋಡುವ ಧಾರವಾಹಿಗಳೇ ಆಕೆಗೆ ದೊಡ್ಡ ಮನರಂಜನೆ. ಇದರೊಂದಿಗೆ ಮಕ್ಕಳ ಪ್ರಗತಿ ಕಂಡು ಸಂತಸದ ನಿಟ್ಟುಸಿರಿಡುತ್ತಾಳೆ. ಹಳ್ಳಿ ಮನೆಗಳೆಂದರೆ ಹುಲ್ಲು, ಹಂಚು ಹೊದೆಸಿದ ಸಾಮಾನ್ಯ ಮನೆಗಳೆಂದು ಅಂದುಕೊಳ್ಳಬೇಡಿ. ವಾಣಿಜ್ಯ ಬೆಳೆಗಳ ಭರಾಟೆಯಿಂದ ದೊಡ್ಡ ದೊಡ್ಡ ತಾರಸಿ ಮನೆಗಳು ಈಗಿನ ಹಳ್ಳಿಗಳಲ್ಲೂ ತಲೆಯೆತ್ತಿವೆ. ಮಹಿಳೆಗೆ ಇಂತಹ ಮನೆಯನ್ನು ಜೋಪಾನ ಮಾಡುವ ಕೆಲಸ ಕಡಿಮೆಯದ್ದಲ್ಲ. ಈಕೆಗೆ ಇಂತಹ ಮನೆಯಿಂದ ಬಿಡುಗಡೆ ಬೇಕಾಗಿಲ್ಲ. ಬದಲಾಗಿ ಮನೆಯೊಳಗಡೆಯೆ ಬಿಡುಗಡೆ ಬೇಕಾಗಿದೆ ಅಲ್ಲವೇ?

ಸಂಗೀತಾ ರವಿರಾಜ್‌

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಕೃಷಿಕ ಹೆಣ್ಣಿನ ಹಾಡು ಪಾಡು – ಸಂಗೀತಾ ರವಿರಾಜ್‌

  • October 23, 2018 at 6:42 pm
    Permalink

    ಧನ್ಯವಾದಗಳು ಹಿತೈಷಿಣಿ..

    Reply

Leave a Reply

Your email address will not be published. Required fields are marked *