’ಕುದಿಎಸರು’ ಒಂದು ಅನಿಸಿಕೆ – ಯಮುನಾ ಗಾಂವ್ಕರ್

ಪಾಚಿಗಟ್ಟಿದ ನೆಲದಲ್ಲೇ ನಡೆ
ಎಂದು ದಾರಿಗುಂಟ
ಧಮಕಿ ಹಾಕಿದವರೆದುರು
ಜಾರಿ ಬೀಳದೇ
ಜೀವ ಜೀಕಿದ ಅಬ್ಬೆ ಇವಳು…

ಮೊದಲ ರಾತ್ರಿಯೇ
ಆ ಚಂದಿರನ ಬೆಳ್ದಿಂಗಳಲ್ಲಿ ಉದುರುತ್ತಿರುವ ಪಾರಿಜಾತದ ಪಕಳೆಗಳ ಹೊಸಕಿ,
ಶಿಕಾರಿ ಮಾಡಲು ಎಗರಿ ಬಿದ್ದ ಆ ದೈತ್ಯಕ್ಕೆ ಬೆಚ್ಚಿ-ಬೆಪ್ಪಾಗಿ ಕತ್ತಲೊಳಗೆ ರಕ್ತ ಹೆಪ್ಪುಗಟ್ಟಿತ್ತು…

ದೇಹದ ತುಂಬಾ ತುಂಬಿಟ್ಟು ಹೋದ
‘ಸಾಲ’ದ ಗಾಯ
ತೀರಿಸುವ ಕಷ್ಟ ಅವಳಿಗೆ ತಾನೆ…
ಆತನಿಗೋ
ಕತ್ತಲಲ್ಲಿ ಕಣ್ಣು ಬಿಟ್ಟು ನೋಡುವ ಕೈಗಳು.
ಸಂಚಾರ ಮಾಡಿದ ದಾರಿಗುಂಟ
ಕಲೆ ಗುರ್ತುಗಳದ್ದೇ ದರ್ಬಾರು…

ಕಾಲಾಂತರದಿಂದ ಮರುಮಾತಿಲ್ಲದೇ
ಮುದುರಿದೆದೆಯ ಮೇಲೆ
ಬೀಳುವ ಹನಿಗಳೆಲ್ಲ ದಾಳಿ ಇಟ್ಟು ಕೊರೆದ ಮೇಲೂ
ಒಣಗುವುದು ಚಿಗುರುವುದು ನಡೆದೇ ಇದೆ

ಬಣಗುಟ್ಟುವ ಭೂಮಿಯಲ್ಲಿ
ಸತ್ತ ಗಿಡ ಮರವೂ
ತನ್ನದೆಂಬ ಕುಡಿ-ಅಂಶಕ್ಕೆ
ಚಿಗುರು ಇಟ್ಟು ಸಾಗುವಂತೆ ಈಕೆ…

ಅಗ್ರಹಾರ ಕೇರಿಯ ಮಡಿಹೆಣ್ಣು
ಮೈಲಿಗೆಯ ಅಡುಗೆ ಉಂಡು
ಹಳಸಿದ ಹಣೆಬರಹವ ಅಳಿಸುತ್ತ
ಜಗಜ್ಜೀವಗಳೆಲ್ಲವ
ಹೊನ್ನ ಚಂದಿರನ ತೊಟ್ಟಿಲಲಿರಿಸಿ
ಮಡಿಲಲ್ಲೇ
ನಕ್ಷತ್ರಗಳ ತೋರಿಸಿದಳೀಕೆ…

ಕತ್ತಲೊಳಗೆ ತೀರದಷ್ಟು ದೂರ ಸಾಗಿ
ಅವಳೊಳಗೆ ಬೆಳಕು ಬರುವಷ್ಟು ಓಡುತ್ತಿದ್ದಾಳೆ…
ಬೆಳಕು ಹಂಚುತ್ತಾ…

ಈ ನಡು ರಾತ್ರಿಯಲ್ಲಿ ಪುಸ್ತಕ ಓದಿ ಮುಗಿಸುವಾಗ “ಕುದಿಎಸರು” ಉಕ್ಕಿ ಬಂದಿದ್ದು ಸತ್ಯ. ತೇವಗೊಂಡ ಕಣ್ಣುಗಳು ಅಕ್ಷರಗಳ ಎತ್ತಿ ಓದಲು ಪರವಾನಗಿ ಕೊಡುತ್ತಿರಲಿಲ್ಲ. ಅವರು ಕುದಿ ಎಸರಲ್ಲಿ ಬೆಂದು ಇನ್ನೇನು ಅಗುಳು ಅನ್ನವಾಗಿ “ಜೀವಗಾಳು” ಆಗಬೇಕು ಎನ್ನುವಷ್ಟರಲ್ಲೇ ಜನ್ಮಾಂತರಕ್ಕೂ ಸಾಕಾಗುವ ಜೀವಾನುಭವ ಪಡೆದು ನಮಗೂ ಮುಂಬರುವ ದಿನಗಳ ದುಗುಡದ ಅರಿವು ಕೊಡುತ್ತ ಹೋಗಿದ್ದೀರಿ. ಅದೊಂದು ಸಹಸ್ರಮಾನಗಳಲ್ಲಿ ಹೆಣ್ಣನ್ನು ಬಳಸಿ ಬಿಸಾಡಿದ, ಅಧಿಕಾರದ ಅಮಲು ಮನಸ್ಸುಗಳ ಇಂದಿನ ಪಳೆಯುಳಿಕೆಯಂತೆ ಕಂಡುಬಂತು. ಇಂಥದ್ದೊಂದು ಬದುಕು ಬಾಳಿದವರು ನಮ್ಮ ಜೊತೆಗೆ ಇದ್ದಾರೆ ಎಂಬ ವಿಶ್ವರೂಪವನ್ನು ಬರಹಕ್ಕಿಳಿಸಿ ಹೆಣ್ಣು ಕೂಡ ಮನುಷ್ಯಳೆಂದು ಗೊತ್ತಾಗುವಂತೆ ಕೂಗಿ ಹೇಳಿದ್ದೀರಿ. ವಂದನೆ.

ಗಂಡಸು ಎಂಬ ಶಬ್ದವೊಂದಿದ್ದರೆ ಸಾಕು ಪೌರುಷದ ಪರಮಾವಧಿ ಹೆಣ್ಣಿನ ಮೇಲೆರಗುತ್ತದೆ. ಅದೇವೇಳೆ ತಾನು ಇನ್ನೊಬ್ಬರಿಗೆ ಏನೇ ಮಾಡಿದರೂ ಪ್ರಶ್ನಾತೀತ, ಇನ್ನೊಬ್ಬರು ಮಾತ್ರ ತನಗೆ ಎದುರುತ್ತರಿಸಬಾರದೆಂಬ ಅಂತರ್ಗತ ನಡಾವಳಿಗಳು ಹೆಣ್ಣನ್ನು ಹೆಣದ ತನಕವೂ ಬೆನ್ನಟ್ಟಿರುತ್ತವೆ. ಅದಕ್ಕೆ ಈ “ಕುದಿ ಎಸರು” ಜೀವಯಾನದ ಪುಸ್ತಕದಲ್ಲಿ ಉಲ್ಲೇಖಿತ ಕುಟುಂಬದ ಸುತ್ತ ಕಾಣಬರುವ ಸಂಗತಿಗಳೇ ಇಂದಿನ ಭಾರತದ ಅನೇಕರ ಮನೆಗಳಲ್ಲಿ ಕೂಡ ನಡೆಯುತ್ತಿರುತ್ತದೆ. ಅದನ್ನು ನಿಮ್ಮದೇ ಬದುಕಿನಲ್ಲಿ ಕಂಡುಂಡು ಅಭಿವ್ಯಕ್ತಿಸುವ ದಾರ್ಷ್ಟ್ಯ ನೀವು ತೋರಿದ್ದೀರಿ.
ಪತಿ ಪರಿತ್ಯಜಿಸುವ ದಿನದಂದು ಕೋರಾ ಕಾಗಜ್ ನೋಡಿದ್ದು ಕಾಕತಾಳೀಯವಾಗಿ ಹೋಲುತ್ತದೆ. ಅಂದಿನ ನಿಮ್ಮೆಲ್ಲಾ ಮುಗ್ಧತೆಯ ಮಧ್ಯೆಯೂ, ತೆರೆಗೆ ಸಿಕ್ಕಾಗ ಯಾವುದೋ ಸಣ್ಣ ಆಧಾರ ಹಿಡಿದು ನೀರಲ್ಲೂ ನೆಲದ ಮೇಲೂ ಬದುಕುವ ಉಭಯವಾಸಿಯಂತೆ, ಎದುರಿಸಿ ನಿಂತಿದ್ದು, ಸೋಲದೇ ಸಲುಹಿದ್ದು, ನಿರ್ಲಕ್ಷಿಸದೇ ಬೆಳೆಸಿದ್ದು, ಅಸಹ್ಯ, ಅನುಮಾನ, ಅಸಭ್ಯ ಅನಾಗರಿಕತನಗಳ ದಾಳಿ ಒಳಗೊಳಗೇ ಅದುಮಿಟ್ಟು ನಂತರ ಸ್ಪೋಟವಾದುದು, ನಾಡು ನೆನೆವಂಥ ಕೆಲಸಕ್ಕೆ ಕೈಹಾಕಿದ್ದು, ಒಡಲಕುಡಿಗಳೆಲ್ಲರನ್ನು ಸಮಾಜಮುಖಿಯಾಗಿ ತನ್ಮಯಗೊಳಿಸಿದ್ದು ಅದ್ಭುತ ಜೀವನ. ಅದಕ್ಕೇ “ಜೀವ ಕೊಡುವ ಜೀವವಿದು ಕಡಿಮೆ ಯಾರಿಗೆ?” ಶಬ್ದಗಳು ಹೊಮ್ಮದ ಲೋಕ ತೋರಿಸಿದ್ದೀರಿ. ಸೆಲ್ಯೂಟ್.

ಯಮುನಾ ಗಾಂವ್ಕರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *