ಕಾವ್ಯಶ್ರೀ ಎಚ್ ಅವರ ಎರಡು ಕವನಗಳು

ಕಲಿತಿದ್ದೇನೆ ಈಗ
ಸಂಕಟಗಳನ್ನೆ ಉಣ್ಣುವುದನ್ನ,
ನೋಡಿದ್ದೇನೆ ನಾನೇ
ನೀವು ತಿಂದ ಉಪ್ಪು ಹುಳಿ ಖಾರಗಳೆಲ್ಲಾ
ನೂರಾರು ರಕ್ತಬೀಜಾಸುರರ ಹುಟ್ಟಿಸುವದನ್ನ
ಮತ್ತೊಂದು ಮಾರಣಹೋಮಕ್ಕೆ ಆಜ್ಯವಾಗಲಾರೆ ನಾ

ಕಲಿತಿದ್ದೇನೆ ಈಗ
ದಾರಿಯಿಲ್ಲದೆಡೆಯೂ ನಡೆಯುವುದನ್ನ
ನೋಡಿದ್ದೇನೆ ನಾನೇ
ನೀವು ನೆಟ್ಟ ಗಿಡಗಳೆಲ್ಲಾ
ಮುಳ್ಳುಕಂಟಿಯಾಗಿ ಗೀರಿ
ಎಲ್ಲರ ರಕ್ತ ಹೀರುವುದನ್ನ
ಮತ್ತೊಂದು ಮರುಭೂಮಿಯಾಗಲಾರೆ ನಾ

ಕಲಿತಿದ್ದೇನೆ ಈಗ
ಬಣ್ಣಗಳಿಗೆ ಮರುಳಾಗದಿರುವುದನ್ನ
ನೋಡಿದ್ದೇನೆ ನಾನೇ
ಕೇಸರಿ ಹಸಿರು ನೀಲಿಗಳೆಲ್ಲಾ
ಕದಡಿ ರಾಡಿಯಾಗುವುದನ್ನ
ಮತ್ತೊಂದು ಮುಖವಾಡವಾಗಲಾರೆ ನಾ

ಕಲಿತಿದ್ದೇನೆ ಈಗ
ಮೌನವಾಗಿರುವುದನ್ನ
ನೋಡಿದ್ದೇನೆ ನಾನೇ
ಆಡಿದ ಮಾತು ಚಕಮಕಿಸಿ
ಕಿಡಿಯಾಗಿ ಸಿಡಿಯುವುದನ್ನ
ಕಡಲೊಡಲ ಬಡಬಾಗ್ನಿ ನಾನಾಗಲಾರೆ

**************”**

ನೀನು ಎಂಬ ನಿನ್ನನ್ನು ಎರಡು ಭಾಗ ಮಾಡಬೇಕು
ಸೂರ್ಯ ಚಂದ್ರರು ಹಂಚಿಕೊಂಡಂತೆ ಹಗಲು ಇರುಳುಗಳನ್ನು

ಮರಳಿಸುವೆನು ಅದರಲಿ ಒಂದನು
ಕಡತಂದ ಆ ಲೋಕಕೇ
ಬಿಕರಿಯಾಗಲಿ ನಿನ್ನೆಲ್ಲ ಮುಖವಾಡಗಳು, ತಕರಾರುಗಳು, ಉಡಾಫೆ ಮಾತುಗಳು ಅಹಂಕಾರ, ಹುಸಿತನ ಹುಂಬತನ ಅಲ್ಲಿಯೇ
ನನಗದರ ಗೊಡವೆಯೇ ಬೇಡ

ನಾ ಕಾದಿರುವುದು ನನ್ನೊಂದಿಗಿರುವಾಗಿನ ನೀನೆಂಬ ನಿನಗಷ್ಟೇ
ಆಗ ನಿನ್ನ ಕಣ್ಣಿನಾಳದ ಪ್ರಪಾತದಿಂದ ಇಣುಕುವ ಆ ಸ್ನಿಗ್ಧ ನಗುವಿಗಷ್ಟೇ

ಆ ಅಮ್ಮನಂತಹ ಮಡಿಲು
ನನಗಾಗಿಯೇ ಹಾಡುವ ಹಕ್ಕಿಗೊರಳು

ನನಗೆ ಬೇಕಿರುವುದು
ಲೋಕದ ಹಂಗು ತೊರೆದ ನನ್ನ ನೀನಷ್ಟೆ
ಅದಕೇ ನೀನೆಂಬ ನಿನ್ನನ್ನು ಎರಡು ಭಾಗ ಮಾಡಬೇಕು

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

3 thoughts on “ಕಾವ್ಯಶ್ರೀ ಎಚ್ ಅವರ ಎರಡು ಕವನಗಳು

 • July 15, 2018 at 10:58 am
  Permalink

  watsapp ನಲ್ಲೂ Arfticles ಗಳನ್ನು
  Share ಮಾಡುವ ವ್ಯವಸ್ಥೆ ಮಾಡಿ .
  ಉಳಿದಂತೆ ಎಲ್ಲಾ ಚೆನ್ನಾಗಿದೆ . ಶುಭಾಶಯಗಳು.

  Reply
 • July 16, 2018 at 7:31 am
  Permalink

  ಹಿತೈಷಿಣಿ ಸುಂದರವಾಗಿ ಮೂಡಿ ಬಂದಿದೆ.

  Reply
 • July 18, 2018 at 6:08 am
  Permalink

  ಹಿತೈಷಿಣಿಗೆ ಶುಭವಾಗಲಿ. ಲಕ್ಷಾಂತರ ಜನ ಸದಸ್ಯರಾಗಲಿ. ನೋಡಲಿ. ಬೆಳೆಯಲಿ

  Reply

Leave a Reply

Your email address will not be published. Required fields are marked *