ಕಾಯ್ವ ವಾದ್ಯ – ಮೌಲ್ಯ ಸ್ವಾಮಿ

ನಾನೇ
ನುಡಿವವರೆಗೂ ಮೌನವನೇ ಸಂಯಮಿಸಿ
ಧ್ಯಾನದ ಆತ್ಮವನೇ
ಕಣ್ಣ ನಿರೀಕ್ಷೆಯಲು   ಹೂತು
ಹೂ ಹೆತ್ತಂತೆ ಕಾಣುವ ನೀನು
ಒಂದು ಅನುಮತಿಯ ಪಲುಕಿಗಾಗಿ ಕಾಯ್ವ ವಾದ್ಯ

ಕಾಯುತ್ತಿ
ಒಂದೊಂದೇ ಕನಸನು ಎಲ್ಲಿಂದಲೋ
ಹೊತ್ತು ತಂದು
ನನ್ನ ಹೊಸ್ತಿಲೇ ಇಲ್ಲದ
ಎಷ್ಟೋ ಭಾರದ ಹೃದಯದ ರೆಪ್ಪೆಯ ಅಗುಳಿಯ
ಮುಂದೆ ಅಲಂಕರಿಸಿ
ಅವು ಅನಾಯಾಸ ರಂಗೇರಲು

ಕಾಯುತ್ತಿ ನೀನು
ಕದ ಬಡಿಯದೆ
ತಡಬಡಿಸದೆ
ಒಂದೇ ಲಯದಿ
ಎಂದಿನಿಂದಲೂ
ಆಡಬೇಕಿದ್ದ ಎಲ್ಲಾ ಮಾತುಗಳನ್ನು
ತೊಡೆಯ ಮೇಲೆ ಕರೆದುಕೊಂಡು
ತಟ್ಟುತ್ತಾ..

ಕೆಲವು ಅವಸರಗಳೇ ಹಾಗೆ,
ಎಲ್ಲ ಮಾನದಂಡ ಮೀರಿದವು

ಒಮ್ಮೊಮ್ಮೆ  ಹೀಗೂ ಆಸೆಯಾಗುತ್ತದೆ:
ಮಾತುಗಳನ್ನೆಲ್ಲಾ
ಪೆದ್ದು ಲೋಕದ ಕಡು ವ್ಯಾಪಾರಸ್ಥ
ಸಂತೆಯಲ್ಲಿ ಮಾರಿ
ಸೇರು ಕಣ್ಸನ್ನೆಯ ಜೋಡಿ ಸಹಿ ರವಾನಿಸುವ
ಮತ್ತೊಂದೇನಾದರೊಂದನು ಕೊಂಡು ಬರಬೇಕೆಂದು

ನಾನೇ ಮೌನ ಮುರಿಯುವವರೆಗು
ನೀನು ಕಾಯುತ್ತೀ
ಕಾಯಲೇಬೇಕೆಂಬ ಹಠವೇನಿಲ್ಲ ಇತ್ತ
ಇನ್ನೊಂದಿಷ್ಟು ಘಳಿಗೆ ಇದ್ದೇ ಇರುತ್ತೀ-
ಯಾರೋ ಆಡಿದಂತೆ
ತನ್ನಂತೆ ತಾನೆ

ಬದುಕಿಗೇನು ಬಿಡು
ರಸೀದಿ ನೀಡದ ಹರಾಮುಕೋರ
ಖಾತ್ರಿ  ಒಂದನು ಬಿಟ್ಟು ಮತ್ತೆಲ್ಲಾ ದಯಪಾಲಿಸುತ್ತದೆ….
ಅನಿರೀಕ್ಷಿತಗಳು ಜಾರಿಯಲಿದ್ದಾಗಲೇ ಆಟ –
ಉಸ್ಸೋ.. ಎನ್ನುವ ಉಪದೇಶ;
ಅದೋ ನೋಡಲ್ಲಿ ಶಿಳ್ಳೆ ಹಾಕಿ ಓಡುತ್ತಿದೆ..ಕಾಲ

ಬೆಳಕಿನಲಿ ಸಂಬಾಳಿಸಿದ ಬಿಕ್ಕುಗಳು
ಒಂದ್ಹೊತ್ತಿನಲಿ ಕಕ್ಕು ಹಾಕುತ್ತವೆ
ಹಾಗೆಂದು
ಬೆಂದ ಬೇಲಿಗಳ ಬೇಗುದಿಗಳ ಕಣ್ಣ ಎಚ್ಚರ ಕಿತ್ತು
ಸಮ್ಮತಿ ಜಾರಿ ಬಿಡುವುದು ಸಲೀಸಿನ ಮಾತೇ?

ಎಲ್ಲಾ ದಿಕ್ಕಿಗೂ
ಚೌಕಾಸಿ ಮಾಡುವ ಬೆಳಗ ಮಾತು ಬಿಡು,
ಬೇಧ ಅರಿಯದ ಕತ್ತಲಿನ ಮುಂದೆ
ಸೆರಗ ಚುಂಗಿನಲ್ಲಿಷ್ಟು
ಗಲ್ಲ ಕರಗದ ನಕ್ಷತ್ರಗಳನ್ನು
ಕಟ್ಟಿಕೊಂಡು ನಾನಾದರೂ
ಒಂದೇ ಸಮನೆ ಕಾಯುತ್ತಲೇ ಇದ್ದೇನೆ

ಎಂದಿನಿಂದಲೂ..

ಜಗತ್ತಿಗೆ ಸುಳಿವಿಲ್ಲವಷ್ಟೆ!

ಮೌಲ್ಯ ಸ್ವಾಮಿ

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಕಾಯ್ವ ವಾದ್ಯ – ಮೌಲ್ಯ ಸ್ವಾಮಿ

Leave a Reply

Your email address will not be published. Required fields are marked *