ಕಾನೂನು ಕನ್ನಡಿ/ ಸಹಾನುಭೂತಿ ಉದ್ಯೋಗ- ಡಾ.ಗೀತಾ ಕೃಷ್ಣಮೂರ್ತಿ
ಮುಂಬಯಿ ಉಚ್ಚ ನ್ಯಾಯಾಲಯ ಇತ್ತೀಚೆಗೆ ಒಂದು ಮಹತ್ವದ ತೀರ್ಪನ್ನು ಕೊಟ್ಟಿದೆ. ಈ ತೀರ್ಪಿನ ಮಹತ್ವವನ್ನು ತಿಳಿಯಬೇಕಾದರೆ, ಸರ್ಕಾರಿ ಉದ್ಯೋಗಿಗಳಿಗೆ ಇರುವ ಒಂದು ಸೌಲಭ್ಯವನ್ನು ತಿಳಿದುಕೊಳ್ಳಬೇಕು.. ಅದೆಂದರೆ, ಸರ್ಕಾರಿ ಸೇವೆಯಲ್ಲಿರುವ ನೌಕರ, ಸೇವೆಯಲ್ಲಿರುವಾಗ ಮರಣ ಹೊಂದಿದರೆ, ಅವನ ಪತ್ನಿಗೆ ಅಥವಾ ಅವನ ಮಗ ಅಥವಾ ಮಗಳಿಗೆ, ಸಹಾನುಭೂತಿಯಿಂದ, ಒಂದು ನೌಕರಿಯನ್ನು ಕೊಡಬೇಕು ಎನ್ನುವ ನಿಯಮವಿದೆ. ಈ ನಿಯಮದ ಪಾಲನೆಗೆ ಅನೇಕ ಷರತ್ತುಗಳಿವೆ. ಆದರೆ ಅವು ಯಾವುವೂ ನಮಗೆ ಇಲ್ಲಿ ಪ್ರಸ್ತುತವಲ್ಲ. ಇಲ್ಲಿ ಪ್ರಸ್ತುತವಾಗುವುದು, ಸರ್ಕಾರಿ ಸೇವೆಯಲ್ಲಿದ್ದು ಮೃತಪಟ್ಟ ನೌಕರನ ಮಗ/ಮಗಳು ಎರಡನೆ ಹೆಂಡತಿಯ ಮಗ ಅಥವಾ ಮಗಳಾಗಿದ್ದರೆ, ಅಂಥ ಸಹಾನುಭೂತಿಪರ ನೌಕರಿ/ಉದ್ಯೋಗವನ್ನು ಪಡೆಯಲು ಅರ್ಹನೇ/ಅರ್ಹಳೇ ಎಂಬುದು.
ಈ ಪ್ರಶ್ನೆ ಉದ್ಭವಿಸುವುದಕ್ಕೆ ಕಾರಣ, ಹಿಂದೂ ವಿವಾಹ ಅಧಿನಿಯಮದ ಪ್ರಕಾರ, ಮೊದಲನೆಯ ಹೆಂಡತಿ ಜೀವಂತವಿರುವಾಗಲೇ, ಅವಳಿಂದ ವಿಚ್ಛೇದನ ಪಡೆಯದೆ ಆಗುವ ಮತ್ತೊಂದು ವಿವಾಹ ಊರ್ಜಿತ ವಿವಾಹ ಎನಿಸಿಕೊಳ್ಳುವುದಿಲ್ಲ ಮತ್ತು ಕಾನೂನು ರೀತ್ಯಾ ಎರಡನೆಯ ಹೆಂಡತಿಗೆ ಪತ್ನಿಯ ಯಾವ ಸ್ಥಾನಮಾನವೂ ದೊರೆಯುವುದಿಲ್ಲ. ಆದರೆ, ಎರಡನೆಯ ಹೆಂಡತಿಯಿಂದ ಹುಟ್ಟಿದ ಮಕ್ಕಳು ಮಾತ್ರ ಔರಸ(ಲೆಜಿಟಿಮೇಟ್) ಮಕ್ಕಳೆನಿಸಿಕೊಳ್ಳುತ್ತಾರೆ.
1955 ರಲ್ಲಿ ಹಿಂದೂ ವಿವಾಹ ಅಧಿನಿಯಮವನ್ನು ಜಾರಿಗೊಳಿಸುವ ಮುನ್ನ ವಿವಾಹಕ್ಕೆ ಸಂಬಂಧಪಟ್ಟಂತೆ ಯಾವುವೇ ಷರತ್ತುಗಳಿರಲಿಲ್ಲ. ಬಾಲ್ಯ ವಿವಾಹಗಳು ನಡೆಯುತ್ತಿದ್ದವು, ಪುರುಷ ಏಕ ಕಾಲಕ್ಕೆ ಒಬ್ಬರಿಗಿಂತ ಹೆಚ್ಚಿನ ಪತ್ನಿಯರನ್ನು ಹೊಂದಿರಲು ಅವಕಾಶವಿತು. ಇಂಥ ವಿವಾಹ ಕಾನೂನಿನ ದೃಷ್ಟಿಯಿಂದ ಅಸಿಂಧುವೂ ಆಗುತ್ತಿರಲಿಲ್ಲ, ಅನೂರ್ಜಿತವೂ ಆಗುತ್ತಿರಲಿಲ್ಲ. ಹಾಗೆಯೇ ಆ ರೀತಿ ವಿವಾಹವಾದ ದಂಪತಿಗಳಿಗೆ ಹುಟ್ಟಿದ ಮಕ್ಕಳೂ ಎಲ್ಲ ಮಕ್ಕಳೊಡಗೂಡಿ ಬೆಳೆಯುತ್ತಿದ್ದರು. ಎಲ್ಲ ಸವಲತ್ತುಗಳನ್ನೂ ಅನುಭವಿಸುತ್ತಿದ್ದರು. ಆದರೆ, 1955 ರಲ್ಲಿ, ಹಿಂದೂ ವಿವಾಹ ಅಧಿನಿಯಮದ ಜಾರಿಗೊಂಡ ನಂತರ, ಒಂದು ವಿವಾಹ, ಕಾನೂನು ರೀತ್ಯಾ ಊರ್ಜಿತ ವಿವಾಹ ಎನ್ನಿಸಿಕೊಳ್ಳಬೇಕಾದರೆ, ಅಂಥ ವಿವಾಹ ಅನೇಕ ಷರತ್ತುಗಳಿಗೆ ಒಳಪಟ್ಟಿರಬೇಕಾದದ್ದು ಕಡ್ಡಾಯವಾಯಿತು.
ಷರತ್ತುಗಳಿದ್ದಾಗ್ಯೂ, ಷರತ್ತುಗಳ ಉಲ್ಲಂಘನೆ ಸಾಮಾನ್ಯವಾಗಿದೆ. ಷರತ್ತುಗಳು ಉಲ್ಲಂಘನೆಯಾಗಿವೆ ಎಂಬ ಕಾರಣಕ್ಕೆ ವಿವಾಹ ಅನೂರ್ಜಿತಗೊಂಡರೆ, ಅವರಿಗೆ ಹುಟ್ಟಿದ ಮಕ್ಕಳು ಯಾವುದೇ ಕಾರಣಕ್ಕೂ ಅತಂತ್ರರಾಗಬಾರದು, ಅವರಿಗೆ ಔರಸ ಮಕ್ಕಳ ಸ್ಥಾನಮಾನ ಸಿಗದೇ ಹೋಗಬಾರದು. ಹಾಗೆಂದೇ ಹಿಂದೂ ವಿವಾಹ ಅಧಿನಿಯಮದ ಅಡಿಯಲ್ಲಿ ಅಂಥ ಮಕ್ಕಳು ಲೆಜಿಟಿಮೇಟ್ ಎನ್ನಿಸಿಕೊಳ್ಳತ್ತಾರೆ. ಎರಡನೆಯ ಹೆಂಡತಿಯ ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಪಾಲು ದೊರೆಯುತ್ತದೆ. ಮೊದಲ ಹೆಂಡತಿಯ ಮಕ್ಕಳು ಹಾಗೂ ಎರಡನೆಯ ಹೆಂಡತಿಯ ಮಕ್ಕಳ ನಡುವೆ ತಾರತಮ್ಯವೆಸಗುವ ಹಾಗಿಲ್ಲ ಎಂದು ಅನೇಕ ಮೊಕದ್ದಮೆಗಳಲ್ಲಿ ಅನೇಕ ನ್ಯಾಯಾಲಯಗಳು ತೀರ್ಪು ನೀಡಿವೆ.
ಈಗ ಉಲ್ಲೇಖಿಸುತ್ತಿರುವ ಪ್ರಕರಣ, ಎರಡನೆಯ ಹೆಂಡತಿಯ ಮಗ ಎಂಬ ಕಾರಣಕ್ಕೆ ಅವಕಾಶ ವಂಚಿತನಾದ ವ್ಯಕ್ತಿ ನ್ಯಾಯಾಲಯದ ಮೆಟ್ಟಿಲು ಹತ್ತಿ ವಿಜೇತನಾದ ಕಥೆ. ಯುವರಾಜ್ ಖಕಡೆ ಎಂಬಾತನ ತಂದೆ ಸೆಂಟ್ರಲ್ ರೈಲ್ವೆಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಸೇವೆಯಲ್ಲಿದ್ದಾಗಲೇ ಮರಣ ಹೊಂದಿದರು. ಯುವರಾಜ್ ಖಡಕೆ ಎಂಬಾತ ತನ್ನ ತಂದೆಗೆ ಎರಡನೆ ಹೆಂಡತಿಯಿಂದ ಹುಟ್ಟಿದ ಮಗ. ಹಿತೈಷಿಗಳ ಸಲಹೆಯ ಮೇರೆಗೆ, ತಂದೆಯ ಮರಣಾನಂತರ ತನಗೆ ಸಹಾನುಭೂತಿ ನೌಕರಿಯನ್ನು ನೀಡಬೇಕೆಂದು ಕೋರಿ ತಂದೆ ಕೆಲಸ ಮಾಡುತ್ತಿದ್ದ ಇಲಾಖೆಗೆ ಅರ್ಜಿ ಸಲ್ಲಿಸಿದ.
ಆದರೆ, 2016 ರ ಡಿಸೆಂಬರ್ 6 ರಂದು ಹೊರಡಿಸಿದ ಆದೇಶದ ಮೂಲಕ ಅವನ ಕೋರಿಕೆಯನ್ನು ಸೆಂಟ್ರಲ್ ರೈಲ್ವೇಸ್ ತಿಸ್ಕರಿಸಿತು. ಹಾಗೆ ತಿರಸ್ಕರಿಸಿದುದಕ್ಕೆ ಅದು ನೀಡಿದ ಕಾರಣ, ಆತನ ತಾಯಿ ಮತ್ತು ಆತನ ತಂದೆ, ತಂದೆಯ ಮೊದಲ ಮದುವೆ ಇನ್ನೂ ಊರ್ಜಿತವಿರುವಾಗಲೇ ವಿವಾಹವಾಗಿದ್ದರು, ಹಾಗಾಗಿ ಅದು ಎರಡನೆಯ ಮದುವೆ. ಕಾನೂನಿನ ಪ್ರಕಾರ ಎರಡನೆಯ ಹೆಂಡತಿಗೆ ಕಾನೂನಿನ ಸ್ಥಾನ ಮಾನ ಇಲ್ಲ. ಅರ್ಜಿದಾರ ಯುವಕ ಸೇವೆಯಲ್ಲಿದ್ದು ಮರಣ ಹೊಂದಿದ ಉದ್ಯೋಗಿಯ ಎರಡನೆ ಹೆಂಡತಿಯ ಮಗ. ಆದ್ದರಿಂದ ಮೃತ ಉದ್ಯೋಗಿಯ ಕುಟುಂಬದ ವ್ಯಕ್ತಿಗೆ ಕೊಡುವ ‘ಸಹಾನುಭೂತಿ ನೌಕರಿ’ಗೆ ಅವನ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂಬುದಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಆತ ಮುಂಬಯಿ ಉಚ್ಚ ನ್ಯಾಯಾಲಯದ ಮೊರೆ ಹೋದ. ನ್ಯಾಯಾಲಯ ಇದನ್ನು ಕೂಲಂಕುಷವಾಗಿ ಪರಿಶೀಲಿಸಿತು.
‘ಸಹಾನುಭೂತಿಪರ ನಿಯೋಜನೆ ಎಂಬುದು ಇತರ ನಿಯಮ ಬದ್ಧ ನಿಯೋಜನೆಗಳಿಗಿಂತ ಭಿನ್ನವಾದುದು. ಇಂಥ ನಿಯೋಜನೆಯನ್ನು ಮಾಡುವಾಗ, ಅರ್ಜಿ ಹಾಕಿದ ಸಮಯದಲ್ಲಿ ಇದ್ದ, ಅಂಥ ನಿಯೋಜನೆಗಳಿಗೆ ಅನ್ವಯಿಸುವ ನಿಯಮ, ನಿಯಮಾವಳಿಗಳು ಅಥವಾ ಕಾರ್ಯಕಾರೀ ಸೂಚನೆಗಳ ಪ್ರಕಾರವಾಗಿಯೇ ಮಾಡಬೇಕಾಗುತ್ತದೆ. ಅಲ್ಲದೆ ಆಯಾ ಪ್ರಕರಣಕ್ಕೆ ಅನ್ವಯಿಸುವಂಥ ಅನೇಕ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಸಹಾನುಭೂತಿಪರ ನಿಯೋಜನೆಯನ್ನು ಯಾರೂ ಹಕ್ಕು ಎಂಬಂತೆ ಕ್ಲೇಮು ಮಾಡಲು ಬರುವುದಿಲ್ಲ. ಅರ್ಜಿ ಹಾಕುವ ಸಮಯದಲ್ಲಿ ಇದ್ದ ನಿಯಮಗಳಲ್ಲದೆ ಹಿಂದೆ ಇದ್ದ ನಿಯಮಗಳ ಆಧಾರದ ಮೇಲೆ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಆದರೆ ಸಹಾನುಭೂತಿ ನೌಕರಿ ನೀಡಲು ಇಲಾಖೆಯ ಷರತ್ತುಗಳೆಲ್ಲವನ್ನೂ ಪೂರೈಸಿದ್ದಾಗ್ಯೂ, ಆತ ಮೃತ ಉದ್ಯೋಗಿಯ ಎರಡನೆ ಹೆಂಡತಿಯ ಮಗ ಎಂಬ ಒಂದೇ ಕಾರಣಕ್ಕಾಗಿ ಅವನ ಅರ್ಜಿಯನ್ನು ತಿರಸ್ಕರಿಸಲು ಬರುವುದಿಲ್ಲ, ಎಂದು ಅಭಿಪ್ರಾಯ ಪಟ್ಟು ಅರ್ಜಿದಾರನ ಅರ್ಜಿಯನ್ನು ಹೊಸದಾಗಿ ಪರಿಗಣಿಸಬೇಕು ಮತ್ತು ಎರಡು ತಿಂಗಳೊಳಗಾಗಿ ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳಬೇಕು’ ಎಂಬ ತೀರ್ಪನ್ನು ನೀಡಿತು.
ಈ ಹಿಂದೆಯೂ ಇಂಥದ್ದೇ ಒಂದು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ತನ್ನ ಅಭಿಪ್ರಾಯವನ್ನು ತಿಳಿಸಿದೆ. ಇದೂ ಸಹ ದಕ್ಷಿಣ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯ ಎರಡನೆ ಹೆಂಡತಿಯ ಮಗನಿಗೆ ‘ಸಹಾನುಭೂತಿ ನೌಕರಿ’ ನೀಡಿಕೆಗೆ ಸಂಬಂಧ ಪಟ್ಟಿದುದಾಗಿತ್ತು. ಇಲ್ಲಿಯೂ ಉದ್ಯೋಗಿ ಸೇವೆಯಲ್ಲಿದ್ದಾಗಲೇ ಮೃತಪಟ್ಟಿದ್ದ. ಆದರೆ ಆತನ ಮಗನಿಗೆ ನೌಕರಿಯನ್ನು ಕೊಡುವುದಕ್ಕೆ ದಕ್ಷಿಣ ರೈಲ್ವೆ ನಿರಾಕರಿಸಿತು. ಇದಕ್ಕೆ ಅದು ಕೊಟ್ಟ ಕಾರಣ-‘ರೈಲ್ವೆ ಮಂಡಳಿಯ ಸೂಚನೆಗಳ ಪ್ರಕಾರ ಎರಡನೆಯ ಹೆಂಡತಿ ಯಾವುವೇ ಸೌಲಭ್ಯಗಳನ್ನು ಪಡೆಯಲು ಅರ್ಹಳಾಗಿರುವುದಿಲ್ಲ. ಆತ ತನ್ನ ತಂದೆಯ ಎರಡನೆ ಹೆಂಡತಿಗೆ ಮಗನಾದ್ದರಿಂದ ಅವನಿಗೆ ನೌಕರಿಯನ್ನು ನಿರಾಕರಿಸಲಾಯಿತು. 2-1-1992 ರಲ್ಲಿ ರೈಲ್ವೆ ಮಂಡಲಿಯು, ಎರಡನೆಯ ಹೆಂಡತಿಯಲ್ಲಿ ಹುಟ್ಟಿದ ಮಕ್ಕಳಿಗೆ ಸಹಾನುಭೂತಿ ನೌಕರಿಯನ್ನು ಕೊಡಲಾಗುವುದಿಲ್ಲ ಎಂದು ಆದೇಶವನ್ನು ಹೊರಡಿಸಿತು. ಈ ಆದೇಶವನ್ನು ಆ ನಂತರದಲ್ಲಿ ಅಸಿಂಧು ಎಂದು ತೀರ್ಪು ನೀಡಲಾಗಿತ್ತು.
ಹಾಗೆಯೇ, ಇನ್ನೊಂದು ಪ್ರಕರಣದಲ್ಲಿ, ‘ಮೊದಲ ಮದುವೆ ಊರ್ಜಿತವಿರುವಾಗಲೇ ಇನ್ನೊಂದು ಮದುವೆಯಾಗುವುದು ಕಾನೂನುಬಾಹಿರ. ಆದರೆ, ಅಂಥ ವಿವಾಹದಿಂದ ಹುಟ್ಟಿದ ಮಕ್ಕಳು ಲೆಜಿಟಿಮೇಟ್ ಮಕ್ಕಳ ಮಾನ್ಯತೆಯನ್ನೇ ಪಡೆಯುತ್ತಾರೆ ಮತ್ತು ಹಿಂದೂ ವಿವಾಹ ಅಧಿನಿಯಮದ ಉಪಬಂಧಗಳ, ಪ್ರಕಾರ ಶೂನ್ಯ ವಿವಾಹ ಸಂಬಂಧದಿಂದ ಹುಟ್ಟಿದ ಮಕ್ಕಳು ಔರಸ ಮಕ್ಕಳ ಸ್ಥಾನಮಾನವನ್ನೇ ಪಡೆಯುತ್ತಾರೆ ಎಂದು ಸ್ಪಷ್ಟ ಪಡಿಸಿದೆ. ಆದ್ದರಿಂದ ಅಂಥ ಮಕ್ಕಳ ಕಾನೂನುಬದ್ಧ ಹಕ್ಕುಗಳನ್ನು ಮೊಟಕುಗೊಳಿಸಲಾಗದು’ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮತ್ತೂ ಮುಂದುವರಿದು, ‘ಸೇವೆಯಲ್ಲಿದ್ದಾಗ ಮೃತಪಟ್ಟ ನೌಕರನ ಮಗ/ಮಗಳಿಗೆ ಸಹಾನುಭೂತಿ ನೌಕರಿ ನೀಡಲು ಅವಕಾಶ ಕಲ್ಪಿಸಿರುವುದರ ಉದ್ದೇಶವೆಂದರೆ, ಅಂಥ ಸಾವಿನಿಂದಾಗಿ ಆ ಕುಟುಂಬ ಜೀವನೋಪಾಯಕ್ಕೆ ಆದಾಯವಿಲ್ಲದೆ ತತ್ತರಿಸಬಾರದು, ಬೀದಿಗೆ ಬೀಳಬಾರದು ಎಂಬುದು. ಆದರೆ ಎರಡನೆಯ ಹೆಂಡತಿಯ ಮಗನಿಗೆ ಕಾನೂನೇ ಔರಸ ಪುತ್ರನ ಸ್ಥಾನಮಾನ ನೀಡಿದರೂ ಮೊದಲನೆಯ ಹೆಂಡತಿಯ ಮಗ ಮತ್ತು ಎರಡನೆಯ ಹೆಂಡತಿಯ ಮಗ ಎಂಬ ಕಾರಣಕ್ಕಾಗಿ ಅವರಲ್ಲಿ ತಾರತಮ್ಯವೆಸಗುವುದು ಕಾನೂನಿನ ಉದ್ದೇಶಕ್ಕೆ ವಿರುದ್ಧವಾದುದಾಗಿದೆ. ತನ್ನ ತಂದೆ ತಾಯಿ ಯಾರಾಗಿರಬೇಕು ಎಂಬುದನ್ನು ಮಕ್ಕಳು ಆಯ್ಕೆ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಇಂಥ ನಿರ್ಧಾರಗಳು, ತಾರತಮ್ಯದ ವಿರುದ್ಧ ನಮ್ಮ ಸಂವಿಧಾನ ನೀಡಿರುವ ರಕ್ಷಣೆಯನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ಖಚಿತ ಮಾತುಗಳಲ್ಲಿ ಸ್ಪಷ್ಟ ಪಡಿಸಿದೆ.
ಹೆಣ್ಣು ಮಕ್ಕಳಿಗೂ ಈ ನಿಯಮಗಳು ಅನ್ವಯಿಸುವುದರಿಂದ ಈ ತೀರ್ಪು ನಮಗೆ ಮಹತ್ವದ್ದಾಗುತ್ತದೆ
ಕಾನೂನುಗಳ ರಚನೆಯ ಉದ್ದೇಶ ನೆರವೇರುವುದು, ಅವುಗಳ ಆಶಯವನ್ನು ಜಾರಿಗೆ ತಂದಾಗ ಮಾತ್ರ. ಕಾನೂನುಗಳು ಸ್ತ್ರೀ ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡಿದಾಗ, ಅದು ಸ್ತ್ರೀ ಸಮಾನತೆಯನ್ನು ಕಾನೂನು ರೀತ್ಯಾ ಸಾಧಿಸುವತ್ತ ಇಟ್ಟ ಒಂದು ಹೆಜ್ಜೆಯಷ್ಟೇ. ಅದರ ಫಲ ದೊರೆಯುವುದು ಕಾನೂನಿನ ಆ ಆಶಯ ಎಲ್ಲ ಹಂತಗಳಲ್ಲಿಯೂ ನೆರವೇರಿದಾಗ ಮಾತ್ರ.
ಡಾ.ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.