ಕಾನೂನು ಕನ್ನಡಿ/ ಶೂನ್ಯ ವಿವಾಹ- ನ್ಯಾಯಕ್ಕಾಗಿ ಹೋರಾಟ: ಡಾ. ಗೀತಾ ಕೃಷ್ಣಮೂರ್ತಿ
ಭಾರತದ ಸಂವಿಧಾನ, ಸ್ತ್ರೀ ಪುರುಷರಿಗೆ ಕಾನೂನಿನ ಮುಂದೆ ಮತ್ತು ಕಾನೂನುಗಳಲ್ಲಿ ಸಮಾನ ಅವಕಾಶ ನೀಡಿದೆ, ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿಕೊಂಡು 69 ವರ್ಷಗಳೇ ಕಳೆದಿವೆ- ಆದರೆ ಸಂವಿಧಾನದ ಈ ಆಶಯ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ. ಅಗತ್ಯ ಸಂಪನ್ಮೂಲಗಳನ್ನು ಹೊಂದಿರುವ, ಛಲ ಬಿಡದೆ ಹೋರಾಡುವ ವ್ಯಕ್ತಿಗಳಿಗೆ ಮಾತ್ರ ದಕ್ಕುವಂಥದ್ದಾಗಿ ಉಳಿದಿರುವುದು ಈ ಆಶಯದ ಅಣುಕು ಎಂಬುದು ವಿಪರ್ಯಾಸವೆನಿಸಿದರೂ ಸತ್ಯ.
ಮಹಿಳೆ ಅನೇಕ ಬಗೆಯ ಸಾಮಾಜಿಕ, ಕೌಟುಂಬಿಕ ಹಾಗೂ ಆರ್ಥಿಕ ಕ್ರೌರ್ಯಗಳಿಗೆ ಒಳಗಾಗುತ್ತಲೇ ಇದ್ದಾಳೆ. ಇವುಗಳ ಜೊತೆಗೆ, ಕಾನೂನುಗಳ ಅನುಷ್ಠಾನ, ಅನ್ವಯ, ವ್ಯಾಖ್ಯಾನಗಳಿಗೆ ಸಂಬಂಧಿಸಿದಂತೆ, ನ್ಯಾಯಿಕ ಕ್ಷೇತ್ರದಲ್ಲಿಯೂ ನ್ಯಾಯ ದೊರಕಿಸಿಕೊಳ್ಳುವುದಕ್ಕಾಗಿ ಏಕಾಂಗಿಯಾಗಿ ಹೋರಾಡಬೇಕಾದ ಅನೇಕ ಸಂದರ್ಭಗಳು ಎದುರಾಗುತ್ತವೆ.
ಪ್ರಸ್ತುತ ಪ್ರಕರಣದ ವಿವರಗಳು ಈ ಮಾತಿಗೆ ಪುಷ್ಟಿ ನೀಡುತ್ತವೆ. ನ್ಯಾಯ ಬೇಡಿ ನ್ಯಾಯಾಲಯದ ಮೆಟ್ಟಿಲನ್ನು ಛಲ ಬಿಡದೆ ತುಳಿದ ಈ ಹೆಣ್ಣುಮಗಳು ಆತನನ್ನು ಪ್ರೇಮಿಸಿ ಮದುವೆಯಾದದ್ದು 2010 ರಲ್ಲಿ. ಅವರದು ಅಂತರ್ಜಾತಿ ವಿವಾಹವಾದ್ದರಿಂದ `ವಿಶೇಷ ವಿವಾಹ ಅಧಿನಿಯಮ’ ದ ಅಡಿಯಲ್ಲಿ ಅವರು ವಿವಾಹವಾದರು. ಆಕೆಯ ಹೇಳಿಕೆಯಂತೆ, ವಿವಾಹದ ನಂತರ ಗಂಡ ಆಕೆಯನ್ನು ಅನೇಕ ಬಗೆಯಲ್ಲಿ ಹಿಂಸಿಸಲು ಮತ್ತು ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ. ಆತ ಮನೆಗೆ ಕುಡಿದು ಬರುತ್ತಿದ್ದ, ಕುಡಿತದ ಅಮಲಿನಲ್ಲಿ ಹಿಂಸೆ ಎಲ್ಲೆ ಮೀರುತ್ತಿತ್ತು. ಇದಲ್ಲದೆ, ಆತ ಈಕೆಯ ಕ್ರೆಡಿಟ್ ಕಾರ್ಡ್ ಬಳಸಿ ಆಕೆಯ ಖಾತೆಯಲ್ಲಿದ್ದ ಹಣವನ್ನು ತೆಗೆಯುತ್ತಿದ್ದ. ಅವನ ಕಾಟ ತಾಳದೆ ಈಕೆ 2012 ರ ಜೂನ್ 30 ರಂದು ಅವನನ್ನು ಬಿಟ್ಟು ತವರು ಮನೆಗೆ ಬಂದುಬಿಟ್ಟಳು. ಹಾಗೆ ಬರುವುದಕ್ಕೆ ಮುಂಚೆ ತನ್ನ ಎಲ್ಲ ವಸ್ತುಗಳನ್ನು ಕಲೆಹಾಕಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ, ತನ್ನ ಗಂಡ ತನ್ನ ಮೊದಲನೆಯ ಪತ್ನಿಯಿಂದ 2009ರ ಡಿಸೆಂಬರ್ 14 ರಂದು ವಿಚ್ಛೇದನೆ ಪಡೆದ ಪತ್ರದ ನಕಲನ್ನು ಅಕಸ್ಮಾತ್ತಾಗಿ ನೋಡಿದಳು. ಇದರಿಂದ ಆಕೆಗೆ ಆದ ಆಘಾತ ಅಷ್ಟಿಷ್ಟಲ್ಲ. ಏಕೆಂದರೆ, ಆತ ತನ್ನನ್ನು ಮದುವೆಯಾಗುವುದಕ್ಕೆ ಮುನ್ನ ತನಗೆ ಮದುವೆಯಾಗಿತ್ತು ಎಂಬ ವಿಷಯವನ್ನೇ ಇವಳಿಂದ ಮುಚ್ಚಿಟ್ಟಿದ್ದ. ಅಲ್ಲದೆ, ವಿವಾಹ ಸಮಯದಲ್ಲಿ ಆತನ ಮೊದಲನೆಯ ವಿವಾಹ ಊರ್ಜಿತವಿದ್ದು, ಮೊದಲನೆಯ ಪತ್ನಿ ಜೀವಂತ ಇದ್ದಳು ಮತ್ತು ಆ ಪತ್ನಿಯಿಂದ ಆತ ಕಾನೂನು ಬದ್ಧವಾಗಿ, ಸಕ್ಷಮ ನ್ಯಾಯಾಲಯದಿಂದ ವಿಚ್ಛೇದನೆ ಪಡೆಯದೆ ಈಕೆಯನ್ನು ವಿವಾಹವಾಗಿದ್ದ. ಹೆಂಡತಿ ಜೀವಂತವಿರುವಾಗಲೇ ಅವಳಿಂದ ವಿಚ್ಛೇದನೆ ಪಡೆಯದೆ ಇನ್ನೊಂದು ವಿವಾಹವಾಗುವುದು ಕಾನೂನಿನ ಪ್ರಕಾರ ವಿವಾಹವೇ ಅಲ್ಲ. ಅಂಥ ವಿವಾಹ `ಅನೂರ್ಜಿತ ಮತ್ತು ಶೂನ್ಯ ವಿವಾಹ’ ಎನ್ನಿಸಿಕೊಳ್ಳುತ್ತದೆ.
ಆದ್ದರಿಂದ ಆಕೆ, ಆತನೊಂದಿಗಿನ ತನ್ನ ವಿವಾಹವನ್ನು ವಿಶೇಷ ವಿವಾಹ ಅಧಿನಿಯಮ 1954 ರ 25 ನೇ ಪ್ರಕರಣದ ಅಡಿಯಲ್ಲಿ `ಅನೂರ್ಜಿತ ಮತ್ತು ಶೂನ್ಯ ವಿವಾಹ’ ಎಂದು ಘೋಷಿಸಬೇಕೆಂದು ಕೋರಿ ಪುಣೆಯ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಳು. ಆಕೆ ಇದಕ್ಕೆ ಕೊಟ್ಟ ಕಾರಣಗಳು ಸ್ಪಷ್ಟವಾಗಿದ್ದವು – ತನ್ನ ಗಂಡ ಮದುವೆಗೆ ಅವಳ ಒಪ್ಪಿಗೆಯನ್ನು ಮೋಸದಿಂದ ಪಡೆದಿದ್ದ; ಮದುವೆಯಾಗುವಾಗ ತನ್ನ ಗಂಡನಿಗೆ ಈ ಮೊದಲೇ ವಿವಾಹವಾಗಿದೆ ಎಂಬುದು ತನಗೆ ಗೊತ್ತಿರಲಿಲ್ಲ; ವಿವಾಹವನ್ನು ನೋಂದಣಿ ಮಾಡಿಸುವಾಗ, ವಿವಾಹ ದಸ್ತಾವೇಜಿನಲ್ಲಿ ತನಗೆ ವಿವಾಹವಾಗಿಲ್ಲ ಎಂದು ತನ್ನ ಗಂಡ ಘೋಷಿಸಿದ್ದ; ತನ್ನನ್ನು ವಿವಾಹವಾಗುವಾಗ ತನ್ನ ಮೊದಲ ಮದುವೆ ಊರ್ಜಿತವಿರುವ ಬಗ್ಗೆ ಮುಚ್ಚಿಟ್ಟಿದ್ದ; ತನ್ನನ್ನು ವಿವಾಹವಾಗುವ ಸಮಯದಲ್ಲಿ ತನ್ನ ಗಂಡನ ವಿವಾಹ ಊರ್ಜಿತವಿದ್ದುದರಿಂದ, ತನ್ನ ವಿವಾಹವನ್ನು `ಶೂನ್ಯ’ವೆಂದು ಘೋಷಿಸಬೇಕು ಎಂಬುದಕ್ಕೆ ಆಕೆ ನೀಡಿದ ಕಾರಣಗಳು.
ಆದರೆ ಅವಳ ಈ ಎಲ್ಲ ವಾದಗಳನ್ನೂ ಆಕೆಯ ಗಂಡ ಸಾರಾಸಗಟಾಗಿ ತಳ್ಳಿ ಹಾಕಿದ. ತಾನು ಆಕೆಯನ್ನು ಮದುವೆಯಾಗುವುದಕ್ಕೆ ಮುನ್ನ, ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು, ತಾನು ತನ್ನ ಸೋದರ ಮಾವನ ಮಗಳನ್ನು ವಿವಾಹವಾಗಿದ್ದು ನಿಜ, ಆದರೆ ಆ ಮದುವೆ ನಡೆದದ್ದು 2007 ರ ಮಾರ್ಚ್ 8 ರಂದು, ಈ ವಿಷಯ ಈಗ ಅರ್ಜಿ ಹಾಕಿರುವ ತನ್ನ ಹೆಂಡತಿಗೆ ತಿಳಿದಿತ್ತು, ಹಾಗಿದ್ದರೂ ಆಕೆ ತನ್ನನ್ನು ಮದುವೆಯಾದಳು ಎಂಬುದು ಅವನ ವಾದ. ಅಲ್ಲದೆ ತನಗೆ ಅರ್ಜಿದಾರಳನ್ನು ಮದುವೆಯಾಗಲು ಇಷ್ಟವಿರಲಿಲ್ಲ, ಆದರೆ ಮದುವೆಯಾಗದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದಳು. ಹಾಗಾಗಿ ಒತ್ತಾಯಕ್ಕೆ ಒಳಗಾಗಿ ತಾನು ಮದುವೆಯಾಗಬೇಕಾಯಿತು. ಆ ಪತಿ ತನ್ನ ಪರವಾಗಿ ಮಂಡಿಸುವ ಮತ್ತೊಂದು ಬಲವಾದ ವಾದ ಎಂದರೆ, ಈಕೆಯೊಡನೆ ಮದುವೆಯಾಗುವುದಕ್ಕೆ ಮುನ್ನ ತಾನು ತನ್ನ ಮೊದಲ ಪತ್ನಿಯಿಂದ ಸಾಂಪ್ರದಾಯಿಕ ವಿಚ್ಛೇದನೆ ಪಡೆದಿದ್ದೆ ಎಂಬುದು. ಹಾಗಾಗಿ ತಾನು ಅವಳಿಗೆ ಮೋಸ ಮಾಡಿದ್ದೇನೆ, ಮೊದಲ ಮದುವೆಯ ವಿಷಯವನ್ನು ಮುಚ್ಚಿಟ್ಟಿದ್ದೇನೆ ಮತ್ತು ವಿವಾಹದ ಸಮಯದಲ್ಲಿ ಮೊದಲ ಮದುವೆ ಊರ್ಜಿತವಿತ್ತು ಎಂಬ ಎಲ್ಲ ವಾದಗಳೂ ಸುಳ್ಳು, ಆದ್ದರಿಂದ, ವಿವಾಹವನ್ನು `ಶೂನ್ಯ’ವೆಂದು ಘೋಷಿಸಬೇಕೆಂದು ಕೋರುವ ಅವಳ ಅರ್ಜಿಯನ್ನು ತಿರಸ್ಕರಿಸಬೇಕು ಎಂಬ ಕೋರಿಕೆಯನ್ನು ಸಲ್ಲಿಸಿದ.
ಇಲ್ಲಿ ನ್ಯಾಯಾಲಯದ ಮುಂದೆ ಇದ್ದ ಬಗೆಹರಿಸಬೇಕಾದ ಪ್ರಶ್ನೆಗಳು ಐದು-
– ಅರ್ಜಿದಾರಳನ್ನು (ಪತ್ನಿ) ವಿವಾಹವಾಗುವ ಸಮಯದಲ್ಲಿ ಪ್ರತಿವಾದಿಯ (ಗಂಡ) ಮದುವೆ, ವಿಘಟನೆಗೊಂಡಿರಲಿಲ್ಲವೇ-ಊರ್ಜಿತವಿತ್ತೇ?
– ಪ್ರತಿವಾದಿ (ಗಂಡ) ತನ್ನ ಮೊದಲ ಮದುವೆಯನ್ನು ಅರ್ಜಿದಾರಳಿಂದ (ಪತ್ನಿ) ಮುಚ್ಚಿಟ್ಟದ್ದನೇ?
– ಪ್ರತಿವಾದಿ ತನ್ನ ಹೆಂಡತಿಯನ್ನು ಮಾನಸಿಕವಾಗಿ ಹಿಂಸಿಸಿದ್ದನೇ?
– ತನ್ನ ಗಂಡನ ಮೊದಲ ಮದುವೆಯ ಬಗ್ಗೆ ತಿಳಿವಳಿಕೆಯಿದ್ದೂ, ತನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ, ಮದುವೆಯಾಗುವಂತೆ ಪ್ರತಿವಾದಿಯ ಮೇಲೆ ಅರ್ಜಿದಾರಳು ಒತ್ತಡ ಹಾಕಿದ್ದು ನಿಜವೇ?
– ಪತ್ನಿಯ ಅರ್ಜಿ ಸಮರ್ಥನೀಯವೇ?
ವಿಚಾರಣಾ ನ್ಯಾಯಾಲಯ ಮೇಲಿನ ಎಲ್ಲ ಅಂಶಗಳನ್ನೂ ಕೂಲಂಕಷವಾಗಿ ಪರಿಶೀಲಿಸಿತು. ಅರ್ಜಿದಾರಳು ಕೋರಿರುವಂತೆ ವಿವಾಹವನ್ನು `ಶೂನ್ಯ’ವೆಂದು ಘೋಷಿಸಲು ಮೇಲಿನ ಯಾವ ಕಾರಣಗಳೂ ವಿಶೇಷ ವಿವಾಹ ಅಧಿನಿಯಮದ 25 ನೇ ಪ್ರಕರಣದ ಅಡಿಯಲ್ಲಿ ಸಮರ್ಥನೀಯವಲ್ಲ ಮತ್ತು ಮೋಸ ತಿಳಿದ ನಂತರದ ಒಂದು ವರ್ಷದೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕಿತ್ತು, ಆದರೆ ಆ ಅವಧಿಯ ನಂತರವೂ ಪತ್ನಿ ಪತಿಯೊಂದಿಗೆ ಸಹ ಜೀವನ ನಡೆಸಿದ್ದಾಳೆ, ಆದ್ದರಿಂದಲೂ ಅವಳ ಕೋರಿಕೆಯನ್ನು ಮನ್ನಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟು ಅವಳ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತು.
ಈ ತೀರ್ಪಿನಿಂದ ತನಗೆ ನ್ಯಾಯ ದೊರೆತಿಲ್ಲ ಎಂದು ಆಕೆ ಮುಂಬಯಿ ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದಳು. ತನ್ನ ಗಂಡನಿಗೆ ಮೊದಲೇ ವಿವಾಹವಾಗಿತ್ತು ಎಂಬ ವಿಷಯ ತನಗೆ ತಿಳಿದಿರಲಿಲ್ಲ ಎಂಬುದನ್ನು ಸಾಬೀತು ಪಡಿಸಲು ತನಗೆ ಅವಕಾಶವನ್ನೇ ಕೊಡಲಿಲ್ಲ ಎಂಬುದು ಅವಳ ಮುಖ್ಯ ವಾದವಾಗಿತ್ತು. ಆದರೆ, ಅವಳಿಗೆ ತನ್ನ ಗಂಡನ ಮೊದಲ ವಿವಾಹದ ಬಗ್ಗೆ ಅರಿವಿತ್ತು ಎಂದು ನಂಬಲು ಮತ್ತು ಆತನ ಮೊದಲ ಹೆಂಡತಿಯಿಂದ ವಿಚ್ಛೇದನೆ ಪಡೆಯಲು ಪತ್ನಿಯೇ ಕಾರಣ ಎಂದು ನಂಬಲು ಕೆಳ ನ್ಯಾಯಾಲಯಕ್ಕೆ ಸಾಕಷ್ಟು ಸಾಕ್ಷ್ಯವಿತ್ತು ಎಂದು ಅಭಿಪ್ರಾಯಪಟ್ಟು ಉಚ್ಚ ನ್ಯಾಯಾಲಯವೂ ಅವಳ ಅಪೀಲನ್ನು ವಜಾ ಮಾಡಿತು.
ಇಲ್ಲಿಯೂ ತನಗೆ ನ್ಯಾಯ ದೊರೆತಿಲ್ಲ ಎಂದು ಛಲ ಬಿಡದೆ ಆಕೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದಳು. ಇಲ್ಲಿ ಅವಳ ವಕೀಲರು ಮುಖ್ಯವಾಗಿ ಮುಂದಿಟ್ಟ ವಾದವೆಂದರೆ, ಈ ಹಿಂದೆ ತೀರ್ಪು ನೀಡಿದ ಎರಡೂ ನ್ಯಾಯಾಲಯಗಳೂ, ವಿಶೇಷ ವಿವಾಹ ಅಧಿನಿಯಮದ 24ನೇ ಪ್ರಕರಣದ ಅಡಿಯಲ್ಲಿ ಈ ಪ್ರಕರಣವನ್ನು ಪರಿಗಣಿಸಿಯೇ ಇಲ್ಲ ಎಂಬುದು. ಪತಿ ತಾನು ಮೊದಲ ಪತ್ನಿಯಿಂದ ಸಾಂಪ್ರದಾಯಿಕ ವಿಚ್ಛೇದನೆ ಪಡೆದಿದ್ದುದಕ್ಕೆ ಯಾವುದೇ ಸಾಕ್ಷ್ಯವನ್ನೂ ಒದಗಿಸಿಲ್ಲ, ಆದ್ದರಿಂದ ಅರ್ಜಿದಾರಳ ಜೊತೆ ಆತನ ವಿವಾಹವಾಗುವ ಸಂದರ್ಭದಲ್ಲಿ ಅವನ ಮೊದಲ ವಿವಾಹ ಊರ್ಜಿತವಿತ್ತು. ಆದ್ದರಿಂದ, ಈ ಪ್ರಕರಣವನ್ನು ಅಧಿನಿಯಮದ 24 ನೇ ಪ್ರಕರಣದ ಅಡಿಯಲ್ಲಿ ನ್ಯಾಯಾಲಯಗಳು ಪರಿಗಣಿಸಬೇಕಿತ್ತು. ಹಾಗೆ ಪರಿಗಣಿಸಿದ್ದೇ ಆದರೆ, ಮೋಸವಾದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕಿತ್ತು ಎಂಬ ಕಾಲ ಪರಿಮಿತಿ ಅನ್ವಯವಾಗುವುದಿಲ್ಲ ಎಂಬ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತು.
ಇದಕ್ಕೆ ಪ್ರತಿಯಾಗಿ, ಪತಿ ತಾನು ಅರ್ಜಿದಾರಳನ್ನು ವಿವಾಹವಾಗುವುದಕ್ಕೆ ಮುನ್ನ ಸಾಂಪ್ರದಾಯಿಕ ವಿಚ್ಛೇದನೆಯನ್ನು ಪಡೆದಿರುವುದಾಗಿ ಹೇಳಿದ್ದರೂ ಅದನ್ನು ರುಜುವಾತು ಪಡಿಸಲು ಯಾವುವೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಹಾಗೂ ಅವನು ಹೇಳುವ ಸಂಪ್ರದಾಯದಲ್ಲಿ ಸಾಂಪ್ರದಾಯಿಕ ವಿಚ್ಛೇದನೆಯ ಪರಿಕಲ್ಪನೆ ಇದೆಯೇ ಅದನ್ನು ಕಾನೂನು ಮಾನ್ಯ ಮಾಡಿದೆ ಎಂಬ ಬಗ್ಗೆಯೂ ಯಾವುವೇ ಪುರಾವೆಗಳನ್ನು ಒದಗಿಸಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಹಾಗಾಗಿ, ಅರ್ಜಿದಾರಳನ್ನು ವಿವಾಹವಾಗುವ ಸಮಯದಲ್ಲಿ ಆಕೆಯ ಗಂಡನ ಮೊದಲ ಮದುವೆ ಊರ್ಜಿತವಿತ್ತು ಎಂದೇ ನ್ಯಾಯಾಲಯ ಭಾವಿಸಬೇಕಾಗುತ್ತದೆ. ಅದರ ಪ್ರಕಾರ, ವಿವಾಹದ ಸಮಯದಲ್ಲಿ ಅವನು ಈಗಾಗಲೇ ವಿವಾಹವಾಗಿದ್ದು, ಪತ್ನಿ ಜೀವಂತವಿದ್ದರೆ ಮತ್ತು ಆಕೆಯಿಂದ ವಿಚ್ಛೇದನೆ ಪಡೆಯದ ವಿವಾಹವಾಗಿದ್ದರೆ, ಅಂಥ ವಿವಾಹ ಕಾನೂನು ರೀತ್ಯಾ ಅಮಾನ್ಯ ಮತ್ತು ಶೂನ್ಯ ವಿವಾಹ ಎನಿಸಿಕೊಳ್ಳುತ್ತದೆ ಮತ್ತು ಶೂನ್ಯ ವಿವಾಹ ಎಂದಿಗೂ ಶೂನ್ಯ ವಿವಾಹವೇ. ಆದ್ದರಿಂದ ವಿವಾಹವನ್ನು ಶೂನ್ಯವೆಂದು ಘೋಷಿಸಬೇಕೆಂದು ಸಲ್ಲಿಸುವ ಅರ್ಜಿಗೆ ಕಾಲ ಪರಿಮಿತಿ ಅನ್ವಯವಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಅನ್ವಯವಾಗುವುದು ಅಧಿನಿಯಮದ 24ನೇ ಪ್ರಕರಣ. ಆದರೆ ಈ ಪ್ರಕರಣದಲ್ಲಿ ಕಾನೂನನ್ನು ಅನ್ವಯಿಸುವಲ್ಲಿಯೇ ಕೆಳ ನ್ಯಾಯಾಲಯಗಳೆರಡೂ ತಪ್ಪÅ ಎಸಗಿವೆ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಪ್ರಕರಣದಲ್ಲಿ, ವಿಶೇಷ ವಿವಾಹ ಅಧಿನಿಯಮದ 24ನೇ ಪ್ರಕರಣವನ್ನು ಅನ್ವಯಿಸಬೇಕಿತ್ತು, ಆದರೆ ಎರಡೂ ನ್ಯಾಯಾಲಯಗಳೂ ಅಧಿನಿಯಮದ 25ನೇ ಪ್ರಕರಣವನ್ನು ಅನ್ವಯಿಸಿ ತೀರ್ಪನ್ನು ನೀಡಿವೆ ಎಂದು ಅಭಿಪ್ರಾಯಪಟ್ಟು ಸರ್ವೋಚ್ಚ ನ್ಯಾಯಾಲಯ ಉಚ್ಚ ನ್ಯಾಯಾಲಯದಮತ್ತು ವಿಚಾರಣಾ ನ್ಯಾಯಾಲಯದ ತೀರ್ಪುಗಳನ್ನು ತಳ್ಳಿ ಹಾಕಿತು ಮತ್ತು 2010 ರ ಏಪ್ರಿಲ್ 5 ರಂದು ಆತನೊಂದಿಗೆ ಆದ ಆಕೆಯ ವಿವಾಹವನ್ನು ಅಮಾನ್ಯ ಮತ್ತು ಶೂನ್ಯ ಎಂದು ಘೋಷಿಸಿತು.
ಆಕೆಯ ಛಲ ಬಿಡದ ಹೋರಾಟಕ್ಕೆ ಕೊನೆಗೂ ಜಯ ಲಭಿಸಿತ್ತು! ಆದರೆ, ತಮಗೆ ದಕ್ಕಬೇಕಾದ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಲು ಸಾಧ್ಯವಿಲ್ಲದ ಹೆಣ್ಣು ಮಕ್ಕಳ ಸಂಖ್ಯೆಯೇ ನಮ್ಮಲ್ಲಿ ಜಾಸ್ತಿ. ಹಾಗಿರಬೇಕಾದರೆ, ಛಲ ಬಿಡದೆ, ಎರಡು ಮೂರು ಹಂತದ ನ್ಯಾಯಾಲಯಗಳ ಮೆಟ್ಟಿಲು ಹತ್ತಿ ನ್ಯಾಯ ದಕ್ಕಿಸಿಕೊಳ್ಳುವ ಮಾತಂತೂ ದೂರವೇ ಉಳಿಯಿತು. (ಸ್ವಪ್ನಾಂಜಲೀ ಸಂದೀಪ್ ಪಾಟೀಲ್ ವಿ ಸಂದೀಪ್ ಆನಂದ್ ಪಾಟೀಲ್ ಎಸ್‍ಎಲ್‍ಪಿ (ಸಿ) ಸಂ:25080, 2016)
ಡಾ. ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.