ಕಾನೂನು ಕನ್ನಡಿ/ಶಿಕ್ಷಣ-ಶಿಕ್ಷೆಯಿಂದ ಮುಕ್ತವಾಗಬೇಕೆ? – ಡಾ. ಗೀತಾ ಕೃಷ್ಣಮೂರ್ತಿ

ಇತ್ತೀಚೆಗಷ್ಟೇ ಮಧ್ಯ ಪ್ರದೇಶ ಉಚ್ಚ ನ್ಯಾಯಾಲಯ ಶಿಕ್ಷಕರನ್ನು ಶಿಕ್ಷೆಗೆ ಒಳಪಡಿಸುವುದಕ್ಕೆ ಸಂಬಂಧಪಟ್ಟಂತೆ ಒಂದು ಮಹತ್ವದ ತೀರ್ಪನ್ನು ನೀಡಿದೆ. ‘ಶಾಲೆಗಳಲ್ಲಿ ಅನುಚಿತ ಪದ್ಧತಿಗಳ ನಿಷೇಧ ಅಧಿನಿಯಮ’ವನ್ನು ಜಾರಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದರಲ್ಲಿ ಇತರ ಅಂಶಗಳ ಜೊತೆಗೆ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡುವುದನ್ನು ಅಪರಾಧದ ವ್ಯಾಪ್ತಿಗೆ ತರುವ ಪ್ರಸ್ತಾವವಿದೆ. ಶಿಕ್ಷಕ ವೃಂದ ಈ ಪ್ರಸ್ತಾವದ ವಿರುದ್ಧ ದನಿಯೆತ್ತಿದ್ದಾರೆ. ಈ ತೀರ್ಪು ಮಧ್ಯ ಪ್ರದೇಶದ ಅನ್ನುಪರ್ ಜಿಲ್ಲೆಯ ಕೊಟ್ಮ ಎಂಬಲ್ಲಿನ ಸರ್ಕಾರೀ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಕುಮಾರಿ ಗಂಗಾ ಸೇನ್ ಎಂಬ 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದುದು.

ಮಕ್ಕಳು ದೇಶದ ಆಸ್ತಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಮಕ್ಕಳ ಮನಸ್ಸು ಜೇಡಿ ಮಣ್ಣಿದ್ದಂತೆ, ನಾವು ಅದಕ್ಕೆ ನಾವು ಯಾವ ರೂಪವನ್ನು ಕೊಟ್ಟರೆ ಆ ರೂಪವನ್ನು ಪಡೆಯುತ್ತದೆ. ಇದು ನಾವೆಲ್ಲರೂ ಹಿಂದಿನಿಂದ ನಂಬಿಕೊಂಡಿರುವ ಮಾತು. ಹಾಗೆಯೇ, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾದರೆ, ಅವರ ಬೆಳವಣಿಗೆಯ ನಂತರದ ಪ್ರಪಂಚಕ್ಕೆ ಮಕ್ಕಳು ತೆರೆದುಕೊಳ್ಳುವುದೇ ಅವರ ಪಾಠಶಾಲೆಯಲ್ಲಿ. ಅಲ್ಲಿ ಅವರ ವ್ಯಕ್ತಿತ್ವವನ್ನು ರೂಪಿಸುವುದು ಆ ಶಾಲೆಯ ಶಿಕ್ಷಕರು. ಅವರೇ ಮಕ್ಕಳಿಗೆ ಮಾದರಿಗಳು. ಇಂದು ಪ್ರಸಿದ್ಧರಾಗಿ, ಜೀವನದಲ್ಲಿ ಸಾಧನೆ ಮಾಡಿದ ಯಾರನ್ನೇ ಮಾತನಾಡಿಸಿದರೂ ಅವರ ನೆನಪುಗಳು ತಮ್ಮ ಆರಂಭದ ಪಾಠಶಾಲೆಯ ಅಧ್ಯಾಪಕರನ್ನು ನೆನೆಯದೆ ಪೂರ್ಣವಾಗುವುದಿಲ್ಲ. ಒಂದಕ್ಷರ ಕಲಿಸಿದಂತ ಗುರು ಎಂದು ಗುರುವಿನ ಮಹತ್ವವನ್ನು ಸಾರಲಾಗುತ್ತದೆ. ನಮ್ಮ ಸಂಸ್ಕ್ರತಿಯಲ್ಲಿ ಗುರು ಬ್ರಹ್ಮ ಎಂದು ಗುರುವಿಗೆ ಪೂಜ್ಯ ಸ್ಥಾನವನ್ನು ಕೊಡಲಾಗಿದೆ. ಆದರೆ ಈಗ ಸಮಾಜ ಬದಲಾಗಿದೆ, ಮೌಲ್ಯಗಳು ಬದಲಾಗಿದೆ, ಗುರುವಿಗೆ ಕೊಡುತ್ತಿದ್ದ ಸ್ಥಾನವೂ ಬದಲಾಗಿದೆ. ಮಕ್ಕಳು, ದುರ್ಬಲ ಗಳಿಗೆಯಲ್ಲಿ, ವಿವೇಚನೆಯಿಲ್ಲದೆ ತೆಗೆದುಕೊಳ್ಳುವ ವಿಪರೀತ ಕ್ರಮಕ್ಕೆ ಶಾಲೆಯ ಶಿಕ್ಷಕರನ್ನು ಹೊಣೆಯಾಗಿಸುವ ಪ್ರಕರಣಗಳು ಹೆಚ್ಚುತ್ತಿವೆ.

ಮಧ್ಯ ಪ್ರದೇಶದ ಉಚ್ಚ ನ್ಯಾಯಾಲಯದ ಮಹತ್ವದ ತೀರ್ಪಿಗೆ ಕಾರಣವಾದ ಈ ಘಟನೆ ನಡೆದದ್ದು 2017ರ ನವೆಂಬರ್ 14 ರಂದು. ಗಂಗಾಸೇನ್ ತನ್ನ ಇಬ್ಬರು ಗೆಳತಿಯರೊಡನೆ ಮನೆಗೆ ತೆರಳುತ್ತಿದ್ದಳು. ಎದುರಿಗೆ ಬಂದ ಶಾಲೆಯ ಪ್ರಾಂಶುಪಾಲರು ಮಧ್ಯಾಹ್ನವೇ ಶಾಲೆಯಿಂದ ತೆರಳುತ್ತಿದ್ದುದಕ್ಕಾಗಿ ಅವರನ್ನು ಬೈಯ್ದು, ಹೊಡೆದು, ಅವರಲ್ಲಿ ಭಯ ಹುಟ್ಟಿಸಿದ್ದಾರೆ. ಇದರಿಂದ ಅಪಮಾನಿತಳಾದ ಮತ್ತು ಭಯಭೀತಳಾದ ಆಕೆ ಅದೇ ದಿನ ಸಂಜೆ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಆಕೆ ಹಾಗೆ ನೇಣಿಗೆ ಶರಣಾಗಲು ಶಾಲೆಯ ಪ್ರಾಂಶುಪಾಲರೇ ಕಾರಣ ಎಂದು ದೂರಿ, ಅವರ ವಿರುದ್ಧ ಅಲ್ಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಆನಂತರದಲ್ಲಿ, ಪೊಲೀಸರು ವಿಚಾರಣೆಯನ್ನು ನ್ಯಾಯಯುತವಾಗಿ ನಡೆಸಿಲ್ಲದ ಕಾರಣ ತಮಗೆ ನ್ಯಾಯ ಸಂದಿಲ್ಲ ಎಂದು ದೂರಿ ಹುಡುಗಿಯ ಮಾವ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಭಾರತ ದಂಡ ಸಂಹಿತೆಯ 306 ನೇ ಪ್ರಕರಣದ ಅಡಿಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಅಪರಾಧಕ್ಕಾಗಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಎಫ್‍ಐಆರ್ ದಾಖಲು ಮಾಡಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕು ಎಂದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯ ಈ ಪ್ರಕರಣದ ವಿಚಾರಣೆಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಹಾಗೂ ತಳೆದ ನಿಲುವು ಗಂಭೀರವಾದ ಚಿಂತನೆಗೆ ಹಚ್ಚುವಂಥವು ಮತ್ತು ಮಹತ್ವವಾದವು.
‘ಪ್ರಾಂಶುಪಾಲರು ಮಕ್ಕಳನ್ನು ಬೈಯ್ದರು, ಹೊಡೆದರು ಮತ್ತು ಅಪಮಾನಿಸಿದರು ಎಂಬ ಆರೋಪಗಳು ನಿಜವೇ ಆಗಿದ್ದರೂ, ಅವು ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದವು ಎಂದು ಹೇಳಲಾಗದು. ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿತು ಎಂದು ಪರಿಗಣಿಸಬೇಕಾದರೆ, ಅವರ ಮಾತಿನಲ್ಲಾಗಲೀ ಕೃತ್ಯದಲ್ಲಾಗಲೀ ಅಂಥ ಕ್ರಮ (ಆತ್ಮಹತ್ಯೆ) ಕೈಗೊಳ್ಳುವಂತೆ ಸಂದೇಹಕ್ಕೆ ಎಡೆಯಿಲ್ಲದಂತೆ ಸ್ಪಷ್ಟ ಸೂಚನೆ ಇರಬೇಕು. ಆದರೆ ಪ್ರಾಂಶುಪಾಲರು ಹಾಗೆ ಮಾಡಿದ್ದಾರೆ ಎಂಬ ಯಾವ ಆರೋಪವೂ ಅವರ ಮೇಲಿಲ್ಲ. ಆದ್ದರಿಂದ ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದರು ಎಂಬ ಗಂಭೀರ ಆರೋಪವನ್ನು ಅವರ ಮೇಲೆ ಹೊರಿಸಲಾಗುವುದಿಲ್ಲ. ಭಾರತ ದಂಡ ಸಂಹಿತೆಯ 323ನೇ ಪ್ರಕರಣದ ಅಡಿಯಲ್ಲಿ ನೋವುಂಟು ಮಾಡಿದ್ದಾರೆ ಎಂಬ ಸಂಜ್ಞೇಯವಲ್ಲದ ಅಪರಾಧಕ್ಕಾಗಿ ಅವರ ವಿರುದ್ಧ ಎಫ್‍ಐಆರ್ ದಾಖಲಿಸಬಹುದು. ಅಲ್ಲದೆ ಶಾಲೆಯಲ್ಲಿ ಕೊಡುವ ಇಂಥ ಶಿಕ್ಷೆಗಳಿಂದ ಉಂಟಾಗುವ ಅವಮಾನ ಅಥವಾ ಮುಜುಗರಗಳು ಅಂಥ ತಪ್ಪನ್ನು ಮತ್ತೆ ಮಾಡದಂತೆ ಭಯ ಹುಟ್ಟಿಸುವ ಪರಿಣಾಮವನ್ನೂ ಹೊಂದಿರುತ್ತವೆ. ಅಷ್ಟೇ ಅಲ್ಲದೆ, ಅಗತ್ಯಬಿದ್ದಾಗ ಎಚ್ಚರಿಕೆ ನೀಡುವುದು ಮತ್ತು ಶಿಕ್ಷೆ ನೀಡುವುದು ಶಿಕ್ಷಣ ನೀಡುವವರ ಕರ್ತವೂ ಆಗಿರುತ್ತದೆ. ಅಥವಾ ಹಾಗೆ ಎಚ್ಚರಿಕೆ ನೀಡಿದಾಗ ಅವರಿಗೆ ಉಂಟಾದ ಮುಜುಗರ ಅಥವಾ ಅವಮಾನ ಮತ್ತೆ ಅಂಥ ತಪ್ಪು ಮಾಡದಂತೆ ಅವರನ್ನು ತಡೆಯುತ್ತದೆ’ ಮತ್ತೂ ಮುಂದುವರಿದು ಅವರು ಹೇಳಿದ ಮಾತುಗಳು ಇಂಥ ಎಲ್ಲ ಪ್ರಕರಣಗಳಲ್ಲೂ ಶಾಲೆಯ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡುವ ಮುನ್ನ ಮನನ ಮಾಡುವಂಥವು-  ‘ಮಕ್ಕಳು ತಪ್ಪು ಮಾಡಿದಾಗ ಬಯ್ದು ಬುದ್ಧಿಹೇಳಿ, ಶಿಕ್ಷಿಸಿ ಸರಿದಾರಿಗೆ ತರುವುದು ಹೇಗೆ ಮನೆಯಲ್ಲಿ ತಂದೆ ತಾಯಿಯರ ಕರ್ತವ್ಯವೋ ಹಾಗೆಯೇ ಶಾಲೆಯಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದಾಗ, ಶಾಲೆಯ ಶಿಸ್ತನ್ನು ಮೀರಿದಾಗ ಬಯ್ದು ಬುದ್ಧಿಹೇಳಿ, ಶಿಕ್ಷಿಸಿ ಸರಿದಾರಿಗೆ ತರುವುದು ಶಿಕ್ಷಕರ ಕರ್ತವ್ಯವಾಗಿರುತ್ತದೆ’ ಶಿಕ್ಷೆ ಎಂದ ಕೂಡಲೇ ಹಿಂದಿನವರಿಗೆ ನೆನಪಿಗೆ ಬರುವುದು ಬೆತ್ತವನ್ನು ಕೈಯಲ್ಲಿ ಹಿಡಿದು, ಅದನ್ನು ಮೇಲಿನಿಂದ ಕೆಳಗೆ ಆಡಿಸುತ್ತಾ ಮಕ್ಕಳಲ್ಲಿ ಭಯ ಹುಟ್ಟಿಸುತ್ತಿದ್ದ ಮಾಸ್ತರರ ಚಿತ್ರಣ. ಆದರೆ ಈಗ ಆ ಚಿತ್ರಣವೂ ಬದಲಾಗಿದೆ, ಮತ್ತು ಶಿಕ್ಷೆಯ ಪರಿಣಾಮವನ್ನು ನೋಡುವ ದೃಷ್ಟಿಕೋನವೂ ಬದಲಾಗಿದೆ.

ಮಕ್ಕಳಿಗೆ ಕೊಡುವ ಶಿಕ್ಷೆ ಅವರು ಮಾಡಿದ ತಪ್ಪಿಗೆ ಅನುಗುಣವಾಗಿರಬೇಕು; ಶಿಸ್ತನ್ನು ಮೂಡಿಸಲು ಸಹಕಾರಿಯಾಗಿರಬೇಕು; ಶಿಕ್ಷೆ, ತಪ್ಪನ್ನು ತಿದ್ದಿ ವಿದ್ಯಾರ್ಥಿಯನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು; ಜೀವ ತೆಗೆಯುವಂಥದ್ದಾಗಿರಬಾರದು. ಆದರೆ ಈಗ ಮಕ್ಕಳನ್ನು ಶಿಕ್ಷಿಸುವಲ್ಲಿ ತೋರುವ ಅಮಾನವೀಯತೆ, ಅದರಿಂದಾಗುವ ಪರಿಣಾಮಗಳು ಆತಂಕಕಾರಿಯಾಗಿವೆ.
ಈ ಮುಂದಿನ ಕೆಲವು ಪ್ರಕರಣಗಳು ಶಿಕ್ಷೆ ಪರಿಮಿತಿ ಮತ್ತು ರೀತಿಗಳ ಬಗ್ಗೆ ಅಂಕೆ ವಿಧಿಸುವ ಅಗತ್ಯವನ್ನೂ ಎತ್ತಿ ತೋರುತ್ತದೆ- ಮಿಲನ್ ತನ್ನ ಎಂಬ ಹೆಸರಿನ ಹುಡುಗ, ಗುಜರಾತಿನ ಅಹಮದಾಬಾದಿನ ನಾರಾಯಣ ಗುರು ವಿದ್ಯಾಲಯದ ಹತ್ತನೇ ತರಗತಿಯ ವಿದ್ಯಾರ್ಥಿ. ಪ್ರತಿನಿತ್ಯ ಅವನು ಶಾಲೆಗೆ ಮೋಟಾರು ಸೈಕಲ್ಲಿನಲ್ಲಿ ಬರುತ್ತಿದ್ದ. ಅಂದು, ಅವನ ಜೀವನದ ದುರ್ದೈವದ ದಿನ. ಅವನು ಶಾಲೆಯನ್ನು 15 ನಿಮಿಷಗಳ ಕಾಲ ತಡವಾಗಿ ತಲುಪಿದ. ಅದಕ್ಕಾಗಿ ಅವನಿಗೆ ನೀಡಿದ ಶಿಕ್ಷೆ ಶಾಲೆಯ ಮೈದಾನವನ್ನು ಐದು ಸುತ್ತು ಹಾಕಬೇಕು ಎಂಬುದಾಗಿತ್ತು. ಆ ವೇಳೆಗಾಗಲೇ ತಡವಾಗಿ ಬಂದಿದ್ದ ಇನ್ನೂ ಐದು ಹುಡುಗರು ಮೈದಾನವನ್ನು ಮೂರು ಸುತ್ತು ಹಾಕಿದ್ದರು. ಮಿಲನ್ ಅವರನ್ನು ಸೇರಿಕೊಂಡ. ಆದರೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ. ‘ತನಗೆ ಉಸಿರಾಟದ ತೊಂದರೆ ಇದೆಯೆಂದಾಗಲೀ, ಆಸ್ತಮಾ ಇದೆ ಎಂದಾಗಲೀ ಶಾಲೆಯಲ್ಲಿ ಯಾವತ್ತೂ ಹೇಳಿರಲಿಲ್ಲ. ಹಾಗಾಗಿ ಅವನು ಪ್ರಜ್ಞೆ ತಪ್ಪಿದ್ದಾನೆಂದು ಭಾವಿಸಿ ಕೂಡಲೇ ಆಂಬುಲೆನ್ಸ್ ಅನ್ನು ಕರೆಸಿದೆವು ಮತ್ತು ಅವನ ತಂದೆ ತಾಯಿಯರಿಗೆ ತಿಳಿಸಿದೆವು’ ಎನ್ನುತ್ತಾರೆ ಆ ಶಾಲೆಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ. ವಿದ್ಯಾರ್ಥಿಯನ್ನು ಕೂಡಲೇ ತಕ್ಕರ್ ಸಿಂಗ್ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿಯ ವೈದ್ಯರು ಅವನನ್ನು ದೊಡ್ಡ ಆಸ್ಪತ್ರೆಗೆ ಒಯ್ಯುವಂತೆ ತಿಳಿಸಿದರು. ಅದರಂತೆ ನಾವು ಅವನನ್ನು ವಸ್ತ್ರಾಪುರದಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ಕರೆದೊಯ್ದೆವು ಎನ್ನತ್ತಾರೆ ಆ ಶಾಲೆಯ ಪ್ರಾಂಶುಪಾಲರಾದ ತರುಣ ಜ್ಯೋತಿ ಅವರು. ಆದರೆ, ಆ ಆಸ್ಪತ್ರೆಯಲ್ಲಿ ಹುಡುಗನನ್ನು ಕರೆತಂದಾಗಲೇ ಮೃತಪಟ್ಟಿದ್ದ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಯಿಂದ ಅವನ ಮರಣಕ್ಕೆ ಕಾರಣ ಮಿದುಳಿನ ರಕ್ತಸ್ರಾವ ಎಂದು ತಿಳಿದು ಬಂತು. ‘ಮುಂಚಿನಿಂದ ಇರುವ ರಕ್ತದೊತ್ತಡದಿಂದ ಇಲ್ಲವೇ ಅತೀವವಾದ ಮಾನಸಿಕ ಒತ್ತಡದಿಂದ ಈ ರೀತಿ ಆಗುವ ಸಾಧ್ಯತೆ ಇದೆ’ ಎನ್ನಲಾಗಿದೆ. ಕೆಲವು ವೈದ್ಯರು, ನಿರ್ಜಲೀಕರಣವೂ ಇಂಥ ಪರಿಸ್ಥಿತಿಗೆ ಕಾರಣವಾಗಿರಬಹುದು ಎನ್ನುತ್ತಾರೆ. ಆ ಪ್ರದೇಶದ ಪೊಲೀಸ್ ಇನ್‍ಸ್ಪೆಕ್ಟರ್ ಅವರು ಆಕಸ್ಮಿಕ ಸಾವು ಎಂಬುದಾಗಿ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ, ಹುಡುಗನ ಮಾವ ಶಾಂತಿಲಾಲ್ ಥಕ್ಕರ್ ಎಂಬುವವರು, ಮಿಲನ್‍ಗೆ ಶಿಕ್ಷೆ ವಿಧಿಸಿದ ಶಿಕ್ಷಕಿ ಜಯಂತಿಭಾಯಿರ್ ಅವರ ವಿರುದ್ಧ ದೂರು ನೀಡಿದ್ದಾರೆ.
** ** ** ** ** **
ಎಂ.ನರೇಂದರ್ ಎಂಬ ಹದಿನೈದು ವರ್ಷದ ಬಾಲಕ ಚೆನ್ನೈನ ಪೆರಂಬೂರಿನಲ್ಲಿರುವ ಡಾನ್ ಬಾಸ್ಕೋ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ. ಅಂದು ಶಾಲೆಗೆ ತಡವಾಗಿ ಬಂದ. ಅದು ಅವನ ಜೀವನದ ದುರ್ದೈವದ ದಿನ. ತಡವಾಗಿ ಬಂದುದಕ್ಕೆ, ದೈಹಿಕ ಶಿಕ್ಷಣದ ಉಪಾಧ್ಯಾಯರು, ಕುಕ್ಕರುಗಾಲಲ್ಲಿ ಕುಳಿತಂತೆಯೇ ಮುಂದಕ್ಕೆ ನಡೆಯುವ ಶಿಕ್ಷೆಯನ್ನು ವಿಧಿಸಿದರು. ಆನಂತರದಲ್ಲಿ ವಿದ್ಯಾರ್ಥಿಗಳು ಸಮಾವೇಶಗೊಂಡಾಗ ಅವನು ಪ್ರಜ್ಞೆ ತಪ್ಪಿಬಿದ್ದ. ಕೂಡಲೇ ಅವನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಅವನನ್ನು ಸರ್ಕಾರೀ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಲಾಯಿತು. ಅದರಂತೆ ಅವನನ್ನು ಸರ್ಕಾರೀ ಆಸ್ಪತ್ರಗೆ ಕರೆದೊಯ್ಯಲಾಯಿತು. ಆದರೆ ಅವನನ್ನು ಕರೆತಂದಾಗಲೇ ಮೃತಪಟ್ಟಿದ್ದನೆಂದು ವೈದ್ಯರು ಘೋಷಿಸಿದರು. ಮರಣೋತ್ತರ ಪರೀಕ್ಷೆ ಬಾಲಕನ ಸಾವು ಸಹಜ ಸಾವು ಎಂದು ವರದಿ ಮಾಡಿತು. ಆದರೆ, ಶಿಕ್ಷಕರು ನೀಡಿದ ಶಿಕ್ಷೆಯಿಂದಲೇ ಆತ ಮೃತ ಪಟ್ಟಿದ್ದಾನೆಂದು ಪೋಷಕರು ದೂರಿದರು.
ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೈಹಿಕ ಶಿಕ್ಷಣದ ಶಿಕ್ಷಕನ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದರೂ, ಬಾಲಕನ ಸಾವಿಗೆ ಶಿಕ್ಷೆ ಕಾರಣ ಎಂಬ ಬಗ್ಗೆ ಸಾಕ್ಷ್ಯಗಳು ದೊರೆತಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
** ** *** ** **
ಕೊಲಿಪಾಕ ಆಶ್ರಿತಾ ತೆಲಂಗಾಣಾದ ಹುಜುರಾಬಾದ್‍ನ ವಿವೇಕವರ್ಧಿನಿ ಮಾದರಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ. ಆಕೆ ಹೋಂವರ್ಕ್ ಮಾಡಿಲ್ಲವೆಂದು ಗಣಿತ ಬೋಧಿಸುವ ಉಪಾಧ್ಯಾಯರು ಆಕೆಗೆ 20 ನಿಮಿಷಗಳ ಕಾಲ ಮಂಡಿಯ ಮೇಲೆ ಕುಳಿತುಕೊಳ್ಳುವ ಶಿಕ್ಷೆ ನೀಡಿದರು. ಬಾಲಕಿ ಇದನ್ನು ತನ್ನ ಪೋಷಕರಿಗೆ ತಿಳಿಸಿ ಮಂಡಿ ನೋಯುತ್ತದೆ ಎಂದು ತಿಳಿಸಿದಳು. ಪೋಷಕರು ಅವಳನ್ನು ವೈದ್ಯರಲ್ಲಿಗೆ ಕರೆದೊಯ್ದರು. ಆ ನೋವಿನಿಂದಾಗಿ ಆಕೆಗೆ ಜ್ವರ ಕಾಣಿಸಿಕೊಂಡಿತು. ಚಿಕಿತ್ಸೆಗೆ ಸ್ಪಂದಿಸದೆ ನೋವು ಹಾಗೂ ಜ್ವರ ಹೆಚ್ಚಾಗುತ್ತಲೇ ಹೋದಾಗ ಮಗಳನ್ನು ವಾರಂಗಲ್ಲಿನ ಎಂಜಿಎಂ ಆಸ್ಪತ್ರೆಗೆ ಸೇರಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಕೊನೆಯುಸಿರೆಳೆದಳು. ಮಂಡಿಯೂರಿದ್ದರಿಂದ ಮಂಡಿಯ ಬಳಿ ರಕ್ತ ಹೆಪ್ಪುಗಟ್ಟಿ ಆಕೆಯ ನರಮಂಡಲದ ಮೇಲೆ ಪರಿಣಾಮ ಬೀರಿದೆ ಎಂದು ವೈದ್ಯರು ಅಭಿಪ್ರಾಯಪಟ್ಟರು.
ಬಾಲಕಿಯ ತಂದೆ ಆ ಶಿಕ್ಷಕರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಿಕ್ಷಕರ ವಿರುದ್ಧ ಕೇಸು ದಾಖಲಾಗಿದೆ, ಆದರೆ, ಇನ್ನೂ ಯಾರನ್ನೂ ಬಂಧಿಸಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
*** ** ** ** ** ***
ಅಜಯ್ ಒರಿಸ್ಸಾದ ಬಾರ್‍ಗರ್ ಜಿಲ್ಲೆಯ ಸೇಂಟ್ ಜಾರ್ಜ್ ಪ್ರೌಢ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿ. ಬಾಲಕ ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಉಪಾಧ್ಯಾಯರು ಮೈಮುರಿಯುವಂತೆ ಹೊಡೆದರು ಅಲ್ಲದೆ ಅವನ ಜೊತೆಗಾರರಿಗೂ ಅವನನ್ನು ಹೊಡೆಯುವಂತೆ ಸೂಚಿಸಿದರು. ಕೃಷಿಕರಾದ ಅಜಯ್ ಪೋಷಕರು ಉಪಾಧ್ಯಾಯರ ವಿರುದ್ಧ ಶಾಲಾ ಅಧಿಕಾರಿಗಳಿಗೆ ದೂರು ನೀಡಿದರು. ಪರಿಣಾಮವಾಗಿ ಉಪಾಧ್ಯಾಯರು ಕ್ಷಮೆ ಯಾಚಿಸಿದರು. ಆ ನಂತರದಲ್ಲಿ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಆದರೆ ವ್ಶೆದ್ಯರಿಗೆ ಮಗುವಿನ ಜೀವವನ್ನು ಉಳಿಸಲಾಗಲಿಲ್ಲ. ಶಿಕ್ಷೆ ನೀಡಿದ್ದ ಶಿಕ್ಷಕರು ಹೆದರಿ ತಲೆ ಮರೆಸಿಕೊಂಡರು. ಅವರ ವಿರುದ್ಧ ದೂರನ್ನು ದಾಖಲಿಸಿಕೊಂಡು ಅವರಿಗಾಗಿ ಹುಡುಕಾಟ ನಡೆದಿದೆ.
ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು, ಅವರಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಸಾಧನವಾಗಬೇಕು ಎಂಬ ಏಕೈಕ ಉದ್ದೇಶದಿಂದ ಮಕ್ಕಳನ್ನು ಶಿಕ್ಷಿಸುತ್ತಿದ್ದ ಉಪಾಧ್ಯಾಯರೂ ಈಗಿಲ್ಲ, ಅಂದಿನ ಗುರು ಶಿಷ್ಯರ ಸಂಬಂಧವೂ ಈಗ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ವಿಶ್ಲೇಷಿಸಬೇಕಾಗುತ್ತದೆ.
2009 ರಲ್ಲಿ ಜಾರಿಗೆ ಬಂದ ಶಿಕ್ಷಣ ಹಕ್ಕು ಅಧಿನಿಯಮ ಮಕ್ಕಳನ್ನು ದೈಹಿಕ ಅಥವಾ ಮಾನಸಿಕ ಶಿಕ್ಷೆಗೆ ಒಳಪಡಿಸುವುದನ್ನು ನಿಷೇಧಿಸುತ್ತದೆ. ಇದನ್ನು ಉಲ್ಲಂಘಿಸಿದವರು ಸೇವಾ ನಿಯಮಗಳ ಪ್ರಕಾರ ಶಿಸ್ತು ಕ್ರಮಕ್ಕೆ ಒಳಪಡಲು ಬದ್ಧರಾಗಿರುತ್ತಾರೆ.

‘ಶಾಲೆಗಳಲ್ಲಿ ಅನುಚಿತ ಪದ್ಧತಿಗಳ ನಿಷೇಧ ಅಧಿನಿಯಮ’ವನ್ನು ಜಾರಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದರಲ್ಲಿ ಇತರ ಅಂಶಗಳ ಜೊತೆಗೆ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡುವುದನ್ನು ಅಪರಾಧದ ವ್ಯಾಪ್ತಿಗೆ ತರುವ ಪ್ರಸ್ತಾವವಿದೆ. ಶಿಕ್ಷಕ ವೃಂದ ಈ ಪ್ರಸ್ತಾವದ ವಿರುದ್ಧ ದನಿಯೆತ್ತಿದ್ದಾರೆ.
ಮೇಲಿನ ಈ ತೀರ್ಪಿನಿಂದ ಶಿಕ್ಷಕರು ನಿರಾಳವಾಗಿ ಉಸಿರಾಡಬಹುದಾದರೂ ಅದು ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *