ಕಾನೂನು ಕನ್ನಡಿ/ ವ್ಯಭಿಚಾರ ನಿರಪರಾಧೀಕರಣ – ಡಾ. ಗೀತಾ ಕೃಷ್ಣಮೂರ್ತಿ

ಮಹಿಳಾ ಅಸ್ಮಿತೆಯ ದೃಷ್ಟಿಯಿಂದ, ಸಂವಿಧಾನದತ್ತ ಸ್ತ್ರೀ ಪುರುಷ ಸಮಾನತೆಯ ದೃಷ್ಟಿಯಿಂದ, ಕಾನೂನು ಇಬ್ಬರಿಗೂ ಸಮಾನವಾಗಿ ಅನ್ವಯಿಸಬೇಕು ಎಂಬ ದೃಷ್ಟಿಯಿಂದ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯನ್ನು ಪುರುಷನ ಆಸ್ತಿ ಎಂಬ ಚಿಂತನೆ ಈ ಕಾನೂನಿನ ರಚನೆಗೆ ಕಾರಣವಾಗಿದೆ ಎಂಬ ದೃಷ್ಟಿಯಿಂದ ವ್ಯಭಿಚಾರವನ್ನು ನಿರಪರಾಧೀಕರಣಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪು ಮಹತ್ವ ಪಡೆಯುತ್ತದೆ

ಮಹಿಳಾ ಹಕ್ಕುಗಳು ಮತ್ತು ಮಹಿಳೆಯರ ಅಸ್ಮಿತೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ಮೂರು ಮುಖ್ಯ ತೀರ್ಪುಗಳಲ್ಲಿ ‘ವ್ಯಭಿಚಾರ’ಕ್ಕೆ ಸಂಬಂಧಿಸಿದ ತೀರ್ಪು ಸಹ ಒಂದು. ಈ ತೀರ್ಪಿನ ಮುಖ್ಯ ಅಂಶ-ವ್ಯಭಿಚಾರದ ನಿರಪರಾಧೀಕರಣ. ಹಾಗೆಂದ ಮಾತ್ರಕ್ಕೆ ವ್ಯಭಿಚಾರ ಸರಿ ಎಂದು ಎಲ್ಲಿಯೂ ಅದನ್ನು ಸಮರ್ಥಿಸಿಲ್ಲ. ಮುಂದೆಯೂ ಇದು ವಿವಾಹ ವಿಚ್ಛೇದನೆ ಪಡೆಯಲು  ಒಂದು ಕಾರಣವಾಗಿ ಮುಂದುವರಿಯುತ್ತದೆ. ಆದ್ದರಿಂದ, ಇದಕ್ಕೆ ಸಂಬಂಧಿಸಿದಂತೆ ಸಿವಿಲ್ ಕಾನೂನು ಪ್ರಕ್ರಿಯೆ ನಡೆಸಲು ಪತಿ ಅಥವಾ ಪತ್ನಿಗೆ ಅವಕಾಶವಿದ್ದೇ ಇರುತ್ತದೆ. ಇದರಿಂದ, ವ್ಯಭಿಚಾರಕ್ಕೆ ಸಂಬಂಧಿಸಿದ ಭಾರತ ದಂಡ ಸಂಹಿತೆಯ 497 ನೇ ಪ್ರಕರಣದಲ್ಲಿ ಅಂತರ್ಗತ ಸ್ತ್ರೀ ಪುರುಷ ತಾರತಮ್ಯ ನಿವಾರಣೆಯಾಗುತ್ತದೆ. ಮಹಿಳೆ ಗಂಡನ ಸ್ವತ್ತು ಎಂಬ ಭಾವದಿಂದ ರಚನೆಯಾದ ಕಾನೂನನ್ನು, ಬದಲಾದ ಹೆಣ್ಣಿನ ಸ್ಥಾನಮಾನ, ಶಿಕ್ಷಣ, ಉದ್ಯೋಗಾವಕಾಶ ಮತ್ತು ಸ್ವತಂತ್ರ ಚಿಂತನೆಯ ಹಿನ್ನೆಲೆಯಲ್ಲಿ ಇಂದು ಕಾನೂನಿನ ಆ ಉಪಬಂಧ ಎಷ್ಟು ಅಪ್ರಸ್ತುತ ಎಂಬುದನ್ನು ವಿಶ್ಲೇಶಣೆ ಮಾಡಲಾಗಿದೆ ಮತ್ತು ಲೈಂಗಿಕತೆ ಅತ್ಯಂತ ಖಾಸಗಿಯಾದ ವಿಷಯವಾದ್ದರಿಂದ ಆ ವಿಷಯದಲ್ಲಿ ಕಾನೂನಿನ ಹಸ್ತಕ್ಷೇಪವಿರಬಾರದು ಎಂಬ ನಿಲುವನ್ನು ತಳೆಯಲಾಗಿದೆ.

ಈ ತೀರ್ಪಿನ ದೂರಗಾಮಿ ಪರಿಣಾಮ ಅಥವಾ ಮಹಿಳಾ ಅಸ್ಮಿತೆಗೆ ಸಂಬಂಧಿಸಿದಂತೆ ಈ ತೀರ್ಪು ಎಷ್ಟು ಮಹತ್ವಪೂರ್ಣವಾದುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಇದಕ್ಕೆ ಸಂಬಂಧಿಸಿದ ಕಾನೂನು ಉಪಬಂಧವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಒಂದು ಉದಾಹರಣೆಯಿಂದ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.

ಶೇಖರ ಮತ್ತು ಶಶಿಧರ ಇಬ್ಬರೂ ಬಾಲ್ಯ ಕಾಲದ ಗೆಳೆಯರಾಗಿದ್ದರೂ ಬೇರೆ ಬೇರೆ ಕಡೆಗಳಲ್ಲಿ ಓದು ಮುಂದುವರಿಸಿದ ಕಾರಣದಿಂದಾಗಿ ಅವರು ಬೇರೆಯಾಗಿದ್ದರು. ಅವರಿಬ್ಬರೂ ಒಂದೇ ಕಡೆ ಕೆಲಸಕ್ಕೆ ಸೇರಿದ ಕಾರಣದಿಂದಾಗಿ ಮತ್ತೆ ಒಂದಾಗಿದ್ದರು. ಶೇಖರನ ಪತ್ನಿ ರೇಖಾ ಮೊದಲ ಮಗುವಿನ ಬಾಣಂತಿತನಕ್ಕಾಗಿ ತವರು ಮನೆಗೆ ಹೋಗಿದ್ದಳು. ಕಾರಣ ಶೇಖರ ಶಶಿಧರನ ಮನೆಗೆ ಪದೇ ಪದೇ ಊಟಕ್ಕೆ ಆಹ್ವಾನಿತನಾಗುತ್ತಿದ್ದ. ಶಶಿಧರನ ಪತ್ನಿ ಅತ್ಯಂತ ಸುಂದರಿ ಮತ್ತು ಆಕೆಗೆ ತನ್ನ ಸೌಂದರ್ಯದ ಬಗ್ಗೆ ಅತೀವ ಹೆಮ್ಮೆ ಮತ್ತು ತನ್ನ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ ಎಂಬ ಹಮ್ಮು. ಶೇಖರ ಪದೇ ಪದೇ ಬರುತ್ತಿದ್ದುದರಿಂದ ಅವರಿಬ್ಬರ ನಡುವೆ ಸಲುಗೆ ಬೆಳೆಯಿತು. ಆಕೆ ತನ್ನ ಆಪ್ತ ಸ್ನೇಹಿತನ ಮಡದಿ ಎಂದು ತಿಳಿದಿದ್ದೂ, ಶಶಿಧರನಿಗೆ ತಿಳಿಯದಂತೆ ಆಕೆಯೊಡನೆ ಲೈಂಗಿಕ ಸಂಪರ್ಕ ಬೆಳೆಸಿದ. ಇದು ಶಶಿಧರನಿಗೆ ತಿಳಿದಾಗ ಆತನಿಗೆ ಅತೀವವಾದ ಆಘಾತವಾಗುವುದರ ಜೊತೆಗೆ ಗೆಳೆಯನನ್ನು ಸಿಗಿದು ಹಾಕುವಷ್ಟು ಕೋಪ ಬಂದಿತ್ತು. ಆದರೆ ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುವುದು ತಪ್ಪು ಎಂದು ಅವನಿಗೆ ತಿಳಿದಿತ್ತು.

ಭಾರತ ದಂಡ ಸಂಹಿತೆಯ(ಇಂಡಿಯನ್ ಪೀನಲ್ ಕೋಡ್) ಪ್ರಕಾರ ‘ವ್ಯಭಿಚಾರ’ ಒಂದು ಶಿಕ್ಷಾರ್ಹ ಅಪರಾಧ. ದಂಡ ಸಂಹಿತೆಯ 497 ನೇ ಪ್ರಕರಣ ವ್ಯಭಿಚಾರದ ಅಪರಾಧಕ್ಕೆ ಶಿಕ್ಷೆ ವಿಧಿಸುತ್ತದೆ. ಈ ಕಾನೂನು ಏನು ಹೇಳುತ್ತದೆ ನೋಡೋಣ –

497 ಯಾರೇ ವ್ಯಕ್ತಿ ವಿವಾಹಿತ ಮಹಿಳೆಯೊಡನೆ, ಆಕೆ ಬೇರೊಬ್ಬನ ಪತ್ನಿ ಎಂದು ತಿಳಿದಿದ್ದರೂ ಅಥವಾ ಆಕೆ ಬೇರೊಬ್ಬನ ಪತ್ನಿ ಎಂದು ನಂಬಲು ಕಾರಣವಿದ್ದರೂ, ಆಕೆಯ ಜೊತೆ ಆಕೆಯ ಗಂಡನ ಸಮ್ಮತಿ ಅಥವಾ ಪರೋಕ್ಷ ಸಮ್ಮತಿ ಇಲ್ಲದೆ, ಲೈಂಗಿಕ ಸಂಬಂಧ ಹೊಂದಿದ್ದರೆ, ಅಂಥ ಸಂಬಂಧ ‘ವ್ಯಭಿಚಾರ’ ಎನಿಸಿಕೊಳ್ಳುತ್ತದೆ. ಆದರೆ ಅದು ಅತ್ಯಾಚಾರದ ಅಪರಾಧವಾಗಿರಬಾರದು. ಎಂದರೆ ಅಂಥ ಸಂಬಂಧ ಆಕೆಯ ಇಚ್ಛೆಗೆ ವಿರುದ್ಧವಾಗಿರಬಾರದು ಮತ್ತು ಇದಕ್ಕೆ ಆಕೆಯ ಗಂಡನ ಸಮ್ಮತಿ ಅಥವಾ ಪರೋಕ್ಷ ಸಮ್ಮತಿ ಇರಬಾರದು. ಹಾಗೆ ಇದಕ್ಕೆ ಆಕೆಯ ಗಂಡನ ಸಮ್ಮತಿ ಅಥವಾ ಪರೋಕ್ಷ ಸಮ್ಮತಿ ಇದ್ದರೆ, ಅದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಲ್ಲ.

ಭಾರತ ದಂಡ ಸಂಹಿತೆಯ 497 ನೇ ಪ್ರಕರಣದ ಅಡಿಯಲ್ಲಿ ‘ವ್ಯಭಿಚಾರ’ ಒಂದು ಅಪರಾಧವಾಗಬೇಕಾದರೆ, ಈ ಮುಂದಿನ ಅಂಶಗಳು ಸಾಬೀತಾಗಬೇಕು:
• ವಿವಾಹಿತ ಸ್ತ್ರೀ ಮತ್ತು ಆಕೆಯ ಪತಿ ಅಲ್ಲದವನೊಡನೆ ಲೈಂಗಿಕ ಸಂಪರ್ಕ ನಡೆದಿರಬೇಕು,
• ವಿವಾಹಿತ ಸ್ತ್ರೀಯೊಡನೆ ಲೈಂಗಿಕ ಸಂಪರ್ಕ ನಡೆಸುವ ವ್ಯಕ್ತಿಗೆ ಆಕೆ ಬೇರೊಬ್ಬ ವ್ಯಕ್ತಿಯ ಮಡದಿ ಎಂದು ತಿಳಿದಿರಬೇಕು ಅಥವಾ ಅವನಿಗೆ ತಿಳಿದಿದೆ ಎಂದು ನಂಬಲು ಕಾರಣವಿರಬೇಕು,
• ಅಂಥ ಲೈಂಗಿಕ ಸಂಪರ್ಕ ಆಕೆಯ ಒಪ್ಪಿಗೆಯಿಂದ ನಡೆದಿರಬೇಕು (ಆಕೆಯ ಒಪ್ಪಿಗೆ ಇಲ್ಲದಿದ್ದರೆ ಅದು ಅತ್ಯಾಚಾರವೆನಿಸಿಕೊಳ್ಳುತ್ತದೆ),
• ವಿವಾಹಿತ ಸ್ತ್ರೀಯೊಡನೆ ಲೈಂಗಿಕ ಸಂಪರ್ಕ ಆಕೆಯ ಪತಿಯ ಸಮ್ಮತಿ ಅಥವಾ ಪರೋಕ್ಷ ಸಮ್ಮತಿ ಇರಬಾರದು.
(ಪತ್ನಿ ಅಪರಾಧದ ದುಷ್ಪ್ರೇರಕಳು ಎಂದು ಶಿಕ್ಷೆಗೆ ಒಳಪಡುವುದಿಲ್ಲ)
ದಂಡ ಪ್ರಕ್ರಿಯಾ ಸಂಹಿತೆಯ 198(2) ನೇ ಪ್ರಕರಣ ವ್ಯಭಿಚಾರದ ವಿರುದ್ಧ ಕಾನೂನು ವ್ಯವಹರಣೆ ಕೈಗೊಳ್ಳಲು ಉಪಬಂಧ ಕಲ್ಪಿಸುತ್ತದೆ.

ಅವಿವಾಹಿತ ಸ್ತ್ರೀ ಅಥವಾ ವಿಧವೆಯೊಡನೆ ಹೊಂದುವ ವಿವಾಹ ಬಾಹಿರ ಸಂಬಂಧವನ್ನು ಕಾನೂನಿನ ವ್ಯಾಪ್ತಿಯಲ್ಲಿ ತಂದಿಲ್ಲ. ಇದಕ್ಕೆ ಕಾರಣ ವಿವಾಹದ ನಂತರ ಮಹಿಳೆ ಗಂಡನ ಸ್ವತ್ತು ಎಂದು ಕಾನೂನು ಸಹ ಪರಿಗಣಿಸಿರುವುದು ಮತ್ತು ಸ್ತ್ರೀ ಪುರುಷರನ್ನು ಸಮಾನರು ಎಂದು ಪರಿಗಣಿಸದೆ ಇರುವುದು. ಹಾಗಾಗಿ, ವಿವಾಹಬಾಹಿರ ಸಂಬಂಧವನ್ನು ವಿವಾಹಿತ ಸ್ತ್ರೀಯೊಡನೆ ಹೊಂದಿದ್ದರೆ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿ ಬರುವ ಪುರುಷ, ಅಂಥದ್ದೇ ಸಂಬಂಧವನ್ನು ಅವಿವಾಹಿತ ಸ್ತ್ರೀಯೊಡನೆ ಅಥವಾ ವಿಧವಾ ಸ್ತ್ರೀಯೊಡನೆ ಹೊಂದಿದ್ದರೆ ಅಪರಾಧವೆನಿಸುವುದಿಲ್ಲ. ವಿವಾಹಿತ ಸ್ತ್ರೀಯೊಡನೆ ವಿವಾಹ ಬಾಹಿರ ಸಂಬಂಧವಿರುವ ವ್ಯಕ್ತಿಯ ವಿರುದ್ಧ ವಿವಾಹಿತ ಸ್ತ್ರೀಯ ಪತಿ ಕ್ರಿಮಿನಲ್ ಮೊಕದ್ದಮೆ ಹೂಡಬಹುದು ಅಥವಾ ಪತಿಯ ಗೈರು ಹಾಜರಿಯಲ್ಲಿ, ಅವನ ಪರವಾಗಿ ಅವಳ ಯೋಗಕ್ಷೇಮದ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ದಾವೆ ಹೂಡಬಹುದು! ಏಕೆಂದರೆ, ಅವಳು ಪತಿಯ ಸ್ವತ್ತು, ಆ ಸ್ವತ್ತಿನ ಅತಿಕ್ರಮಣವಾಗಿರುವುದರಿಂದ ಪತಿಯನ್ನು ಸಂತ್ರಸ್ತ ವ್ಯಕ್ತಿ ಎಂದು ಕಾನೂನು ಪರಿಗಣಿಸಿದೆ. ಆದರೆ ವ್ಯಭಿಚಾರ ನಡೆಸಿದ ವ್ಯಕ್ತಿಯ ಪತ್ನಿಯೂ ಸಂತ್ರಸ್ತೆಯೇ ಆದರೆ ಅವಳಿಗೆ ವ್ಯಭಿಚಾರ ನಡೆಸಿದ ಗಂಡನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ!
ಮೇಲಿನ ಉದಾಹರಣೆಯಲ್ಲಿ, ಕಾನೂನಿನ ಪ್ರಕಾರ ಅಪರಾಧ ನಡೆದಿರುವುದು ಶೇಖರನಿಂದ. ಶೇಖರನಿಂದ ಆತನ ಪತ್ನಿ ರೇಖಾಗೆ ವಿಶ್ವಾಸ ದ್ರೋಹವಾಗಿದ್ದರೂ, ಆಕೆಗೆ ತನ್ನ ಪತಿಯ ವಿರುದ್ಧ ಕ್ರಿಮಿನಲ್ ವ್ಯವಹರಣೆ ಕೈಗೊಳ್ಳಲು ಅವಕಾಶವಿಲ್ಲ. ಗಂಡನ ವ್ಯಭಿಚಾರದಲ್ಲಿ ಪಾಲುದಾರಳಾದ ಶಾಲಿನಿಯ ವಿರುದ್ಧ ಕ್ರಮ ಕೈಗೊಳ್ಳಲೂ ಈ ಪ್ರಕರಣದಡಿಯಲ್ಲಿ ಅವಕಾಶವಿಲ್ಲ. ಆದರೆ ಶೇಖರನ ವಿರುದ್ಧ ಶಶಿಧರ ಕ್ರಿಮಿನಲ್ ಮೊಕದ್ದಮೆ ಹೂಡಬಹುದು, ಏಕೆಂದರೆ ಕಾನೂನು ಅವನನ್ನು ಸಂತ್ರಸ್ತ ಎಂದು ಪರಿಗಣಿಸುತ್ತದೆ, ಒಂದೆಡೆ ವ್ಯಭಿಚಾರ ಮಾಡಿದ ಶಾಲಿನಿಗೆ ಕಾನೂನು ರಕ್ಷಣೆ ನೀಡುತ್ತದೆ, ಇನ್ನೊಂದೆಡೆ ಪತಿಯ ವಿಶ್ವಾಸದ್ರೋಹಕ್ಕೆ ಒಳಗಾದ ರೇಖಾಳಿಗೆ ಕಾನೂನು ಉಪೇಕ್ಷೆಮಾಡುತ್ತದೆ.

‘ವ್ಯಭಿಚಾರ’ ಎಂಬುದಕ್ಕೆ ನಿಘಂಟು ಕೊಡುವ ಅರ್ಥ – ವಿವಾಹಿತ ವ್ಯಕ್ತಿ ತನ್ನ ಪತಿ ಅಥವಾ ಪತ್ನಿ ಅಲ್ಲದ ವ್ಯಕ್ತಿಯೊಡನೆ ಹೊಂದುವ ಲೈಂಗಿಕ ಸಂಪರ್ಕ.

ಇಂಥ ಸಂಬಂಧವನ್ನು ಕಾನೂನೂ ಒಪ್ಪುವುದಿಲ್ಲ, ಯಾವ ಸಮಾಜವೂ ಒಪ್ಪುವುದಿಲ್ಲ. ಸಂದೇಹಕ್ಕೆ ಆಸ್ಪದವೇ ಇಲ್ಲದಂತೆ ಇದು ನೈತಿಕ ಅಪರಾಧ. ಕಾನೂನಿನ ಪ್ರಕಾರವೂ ಅಪರಾಧವೇ.
ಮೇಲಿನ ಉದಾಹರಣೆಯಲ್ಲಿ, ಯಾರು ಅಪರಾಧಿ? ಶೇಖರನನ್ನು ಸ್ವ ಇಚ್ಛೆಯಿಂದ ಕೂಡಿದ ಶಾಲಿನಿ ಅಪರಾಧಿಯೇ? ಆಕೆ ಬೇರೊಬ್ಬನ ಮಡದಿ ಎಂದು ತಿಳಿದಿದ್ದೂ ಆಕೆಯ ಜೊತೆ ಲೈಂಗಿಕ ಸಂಪರ್ಕ ಮಾಡಿದ ಶೇಖರ ಅಪರಾಧಿಯೇ? ಇದು ಇವರಿಬ್ಬರ ಇಚ್ಛೆಗೆ ವಿರುದ್ಧವಾಗಿ ನಡೆದುದಲ್ಲ. ಎಂದರೆ ಈ ಸಂಬಂಧಕ್ಕೆ ಇಬ್ಬರದೂ ಒಪ್ಪಿಗೆಯಿತ್ತು. ಆ ಕಾರಣಕ್ಕೆ ವ್ಯಭಿಚಾರ ಅಪರಾಧ ಎಂದಾದರೆ, ಇಬ್ಬರೂ ಅಪರಾಧಿಗಳೇ. ಈ ಪ್ರಶ್ನೆ ಸಾಮಾನ್ಯ ಜ್ಞಾನದ ಪ್ರಶ್ನೆಯಾದರೆ ಅಥವಾ ನೈತಿಕ ಪ್ರಶ್ನೆಯಾದರೆ, ಇದಕ್ಕೆ ಉತ್ತರ ಇಬ್ಬರೂ ಅಪರಾಧಿಗಳು ಎಂಬುದೇ ಆಗಿರುತ್ತದೆ. ಒಂದು ವೇಳೆ ಕಾನೂನಿನಲ್ಲಿ ಹೇಳಿರುವಂತೆ ಈ ಸಂಬಂಧಕ್ಕೆ ಆಕೆಯ ಗಂಡನ ಸಮ್ಮತಿ ಇದ್ದಿದ್ದರೆ. ಅಂಥ ಸಂಬಂಧ ಅಪರಾಧ ಎನ್ನಿಸಿಕೊಳ್ಳದಿರುವುದು ನೈತಿಕವಾಗಿ ಸರಿಯೇ? ತೀರ್ಪು ಹೊರಬಿದ್ದು ವ್ಯಭಿಚಾರವನ್ನು ಅಪರಾಧಗಳ ಪಟ್ಟಿಯಿಂದ ಹೊರ ತಂದ ಕೂಡಲೇ, ವಿವಾಹ ವ್ಯವಸ್ಥೆ ಕುಸಿಯುತ್ತದೆ. ವ್ಯಭಿಚಾರ ಪ್ರಕರಣಗಳು ಹೆಚ್ಚುತ್ತವೆ, ಮಹಿಳೆ ಇನ್ನಷ್ಟು ಶೋಷಣೆಗೆ ಒಳಗಾಗುತ್ತಾಳೆ ಎಂಬ ಆತಂಕ ವ್ಯಕ್ತವಾಯಿತು. ಆದರೆ, ಈ ಕಾನೂನು ರಚನೆಯ ಹಿಂದೆ ವಿವಾಹದ ಪವಿತ್ರ ಬಂಧನವನ್ನು ಉಳಿಸುವ ಯಾವುದೇ ಉದಾತ್ತ ಧ್ಯೇಯವೂ ಇಲ್ಲ ಎಂಬುದನ್ನು ನ್ಯಾಯಮೂರ್ತಿಗಳು, ವ್ಯಭಿಚಾರ ಅಪರಾಧವಲ್ಲ ಎಂದು ಘೋಷಿಸಿ ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಸಾಮಾಜಿಕ ನೈತಿಕ ಮೌಲ್ಯಗಳ ಮಾನದಂಡದಿಂದ ಮತ್ತು ವೈಯಕ್ತಿಕ ಸಂಬಂಧಗಳ ಮಾನದಂಡದಿಂದ ವಿವಾಹ ಬಾಹಿರ ಸಂಬಂಧ ಯಾವತ್ತಿಗೂ, ಇವತ್ತಿಗೂ, ಇನ್ನು ಮುಂದೆಯೂ ಅನಪೇಕ್ಷಣಿಯವೇ. ವ್ಯಭಿಚಾರವೇ. ವಿವಾಹ ವ್ಯವಸ್ಥೆಗೆ ಮಾರಕವೇ. ಅದರಲ್ಲಿ ಎರಡು ಮಾತಿಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು, ಮಹಿಳಾ ಅಸ್ಮಿತೆಯ ದೃಷ್ಟಿಯಿಂದ, ಸಂವಿಧಾನದತ್ತ ಸ್ತ್ರೀ ಪುರುಷ ಸಮಾನತೆಯ ದೃಷ್ಟಿಯಿಂದ, ಕಾನೂನು ಯಾವುದೇ ಲಿಂಗ ಭೇದವಿಲ್ಲದೆ ಇಬ್ಬರಿಗೂ ಸಮಾನವಾಗಿ ಅನ್ವಯಿಸಬೇಕು ಎಂಬ ದೃಷ್ಟಿಯಿಂದ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯನ್ನು ಪುರುಷನ ಆಸ್ತಿ ಎಂಬ ಚಿಂತನೆ ಈ ಕಾನೂನಿನ ರಚನೆಗೆ ಕಾರಣವಾಗಿದೆ ಎಂಬ ದೃಷ್ಟಿಯಿಂದ ವ್ಯಭಿಚಾರವನ್ನು ನಿರಪರಾಧೀಕರಣಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ನಮಗೆ ಮಹತ್ವದ್ದು ಎನ್ನಿಸುತ್ತದೆ

ಈ ಪ್ರಶ್ನೆ ಇಂದು ನಿನ್ನೆಯದಲ್ಲ. ಈ ಪ್ರಶ್ನೆಗೆ 67 ವರ್ಷಗಳ ಇತಿಹಾಸವಿದೆ. ಮೊದಲ ಬಾರಿಗೆ ಇದನ್ನು ಪ್ರಶ್ನಿಸಿದ್ದು 1951 ರಲ್ಲಿ ಯೂಸುಫ್ ವಿ ಮುಂಬಯಿ ರಾಜ್ಯ ಪ್ರಕರಣದಲ್ಲಿ. ಈ ಅರ್ಜಿಯಲ್ಲಿ ಮುಖ್ಯವಾಗಿ ಎತ್ತಿದ ಪ್ರಶ್ನೆ ಎಂದರೆ, 497 ನೇ ಪ್ರಕರಣ ಸಂವಿಧಾನದ 14 ಮತ್ತು 15 ನೇ ಅನುಚ್ಛೇದಗಳ ಮೂಲಕ ಕೊಡಲಾದ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬುದಾಗಿತ್ತು. ವ್ಯಭಿಚಾರದ ಅಪರಾಧದಲ್ಲಿ ಮಹಿಳೆಯನ್ನು ಸಮಾನ ಜವಾಬ್ದಾರಳನ್ನಾಗಿ ಮಾಡದೆ ಇರುವುದರಿಂದ, ಈ ಕಾನೂನು ಪುರುಷರ ವಿರುದ್ಧ ತಾರತಮ್ಯವೆಸಗಿದೆ ಎಂದು ವಾದ ಮಾಡಲಾಗಿತ್ತು. ಅಲ್ಲದೆ, ಇದರಿಂದ ವ್ಯಭಿಚಾರವೆಸಗಲು ಮಹಿಳೆಯರಿಗೆ ರಹದಾರಿ ನೀಡಿದಂತಾಗಿದೆ ಎಂದೂ ವಾದ ಮಾಡಲಾಗಿತ್ತು.

ಮತ್ತೆ ಎರಡು ಬಾರಿ 497 ನೇ ಪ್ರಕರಣದ ಸಂವೈಧಾನಿಕತೆಯನ್ನು ಪ್ರಶ್ನಿಸಿ ಹಾಕಿದ ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದದ್ದು 1985 (ಶ್ರೀಮತಿ ಸೌಮಿತ್ರಿ ವಿಷ್ಣು ವಿ ಕೇಂದ್ರ ಸರ್ಕಾರ) ಮತ್ತು 1988 (ವಿ. ರೇವತಿ ವಿ ಕೇಂದ್ರ ಸರ್ಕಾರ)ರಲ್ಲಿ. ಎರಡು ಬಾರಿಯೂ ಅದನ್ನು ಪ್ರಶ್ನಿಸಿದ್ದು ಮಹಿಳೆಯರು ಎಂಬುದನ್ನು ಇಲ್ಲಿ ಗಮನಿಸಬೇಕು. ವ್ಯಭಿಚಾರವೆಸಗಿದ ಗಂಡನನ್ನು ಮತ್ತು ತನ್ನ ಪತಿಯೊಡನೆ ವ್ಯಭಿಚಾರವೆಸಗಿದ ಮಹಿಳೆಯನ್ನು ಕಾನೂನು ವ್ಯವಹರಣೆಗೆ ಒಳಪಡಿಸುವ ಹಕ್ಕು ಸಂತ್ರಸ್ತ ಮಹಿಳೆಗೆ ಇರಬೇಕು ಎಂಬುದು ಅವರ ವಾದವಾಗಿತ್ತು.

ಮೇಲಿನ ಮೂರೂ ಪ್ರಕರಣಗಳಲ್ಲಿ, ಅರ್ಜಿದಾರರ ಬೇಡಿಕೆಗಳನ್ನು ನ್ಯಾಯಾಲಯ, ಅವರ ಬೇಡಿಕೆಗಳನ್ನು ಒಪ್ಪಿದಲ್ಲಿ ಉಂಟಾಗಬಹುದಾದ ದೂರಗಾಮೀ ಪರಿಣಾಮಗಳ ದೃಷ್ಟಿಯಿಂದ ತಳ್ಳಿ ಹಾಕಿತ್ತು.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *