ಕಾನೂನು ಕನ್ನಡಿ / ವಿವಾಹ ಶೂನ್ಯೀಕರಣ ಮತ್ತು ಜೀವನಾಂಶ – ಡಾ. ಗೀತಾ ಕೃಷ್ಣಮೂರ್ತಿ
ಮಹಿಳೆಯರು ಒಳಗಾಗುವ ಅನೇಕ ಬಗೆಯ ಶೋಷಣೆಗಳಿಗೆ ಪರಿಹಾರ ನೀಡುವ ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ, ಅನೇಕ ಸಂದರ್ಭಗಳಲ್ಲಿ, ಅದನ್ನು ಪಡೆಯಲು ಇನ್ನಿಲ್ಲದ ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಮಹಿಳೆಯರಿಗೆ ಕಾನೂನುಗಳಿಂದ ನ್ಯಾಯ ದೊರೆಯುವುದು, ಕಾನೂನು ರಚನೆಯ ಹಿಂದಿರುವ ಆಶಯ ನೆರವೇರಿದಾಗ. ಕಾನೂನು ರಚನೆಯ ಉದ್ದೇಶವನ್ನೂ ಮೀರಿ ನ್ಯಾಯ ಒದಗಿಸುವ ಅವಕಾಶ ನ್ಯಾಯಾಧೀಶರ ನಿರ್ವಚನೆಗೆ ಇದೆ.
ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಕುಟುಂಬದ ಪಾತ್ರ ಬಹಳ ದೊಡ್ಡದು. ಕುಟುಂಬದಲ್ಲಿ ಸೌಹಾರ್ದಯುತವಾದ ವಾತಾವರಣವಿದ್ದರೆ, ಸಮಾಜದಲ್ಲಿಯೂ ಅಂಥ ವಾತಾವರಣ ಪ್ರತಿಫಲಿತವಾಗುತ್ತದೆ ಎಂಬುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಕುಟುಂಬ ಮತ್ತು ಸಮಾಜದಲ್ಲಿ ಇಂಥ ವಾತಾವರಣವನ್ನು ಕಲ್ಪಿಸಲು ವಿವಾಹ ಒಂದು ವಾಹಕ.
ಇವತ್ತಿಗೂ, ಅಲ್ಪ ಪ್ರಮಾಣದ ಪ್ರೇಮ ವಿವಾಹಗಳನ್ನು ಹೊರತು ಪಡಿಸಿದರೆ, ಬಹುತೇಕ ವಿವಾಹಗಳು ಏರ್ಪಟ್ಟ ವಿವಾಹಗಳೇ. ಎರಡು ಬೇರೆ ಬೇರೆ ಕುಟುಂಬಗಳ ಇಬ್ಬರು ವ್ಯಕ್ತಿಗಳು ವಿವಾಹ ಬಂಧನದಲ್ಲಿ ಬಂಧಿತರಾಗಿ ಒಟ್ಟಿಗೆ ಜೀವನದ ಪ್ರಯಾಣವನ್ನು ಪ್ರಾರಂಭಿಸುತ್ತಾರೆ. ಇಂಥ ಪ್ರಯಾಣ ಅರ್ಧದಲ್ಲೇ ಮೊಟಕುಗೊಳ್ಳದೆ ಸಾಗುವುದು, ಪರಸ್ಪರರಲ್ಲಿ ನಂಬಿಕೆ ಮತ್ತು ವಿಶ್ವಾಸಗಳು ಇದ್ದಾಗ ಮಾತ್ರ. ಇಂಥ ಬಂಧನ ಸತ್ಯದ ನೆಲೆಗಟ್ಟಿನ ಮೇಲೆ ನಿಂತಾಗ ಮಾತ್ರ. ಇಂಥ ಬಂಧನ ಕೊನೆಗೊಳ್ಳುವುದು ಸಾವಿನಿಂದ ಮಾತ್ರ ಎಂಬ ಕಾಲದಿಂದ ಬಹು ದೂರ ಸಾಗಿ ಬಂದಿದ್ದೇವೆ ನಾವು. ಮಹಿಳೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಮಾನಸಿಕವಾಗಿ ಸ್ವತಂತ್ರ ಳಾಗುವುದಕ್ಕೇ ಮುನ್ನವೇ, ತನಗಿರುವ ಹಕ್ಕುಗಳ ಅರಿವು ಅವಳಿಗೆ ಆಗುವುದಕ್ಕೆ ಮುನ್ನವೇ, ವಿಚ್ಛೇದನೆಯ ಅವಕಾಶ ನೀಡುವ ಮೂಲಕ ವೈವಾಹಿಕ ಬಂಧನದಿಂದ ಬಿಡುಗಡೆಯ ಮಾರ್ಗ ಮುಕ್ತವಾಗಿತ್ತು.
ಕಾನೂನುಗಳಲ್ಲಿ ಏನೇ ಅವಕಾಶ ಕಲ್ಪಿಸಿದ್ದರೂ, ಅವಳು ಸಂಕಷ್ಟದಲ್ಲಿದ್ದಾಗ ಮತ್ತು ಅವಳಿಗೆ ಅನ್ಯಾಯವಾದಾಗ, ಅದರ ಪ್ರಯೋಜನ ಅವಳಿಗೆ ದೊರೆಯುವುದು, ಆ ಕಾನೂನಿನ ಅನ್ವಯದಿಂದ ಅವಳಿಗೆ ಪರಿಹಾರ ದೊರೆತಾಗ ಮಾತ್ರ. ಕಾನೂನಿನ ಉದ್ದೇಶವನ್ನು, ಕಾನೂನಿನ ಅನ್ವಯದ ಸಾಧ್ಯಾಸಾಧ್ಯತೆಗಳನ್ನು ತೆರೆದಿಡುವುದು, ಕಾನೂನನ್ನು ಅನ್ವಯಿಸುವಾಗ ಆ ಕಾನೂನಿಗೆ ನ್ಯಾಯಾಧೀಶರು ನೀಡುವ ನಿರ್ವಚನೆ. ಕಾನೂನು ರಚನೆಯ ಉದ್ದೇಶವನ್ನೂ ಮೀರಿ ನ್ಯಾಯ ಒದಗಿಸುವ ಸಾಮಥ್ರ್ಯ ನ್ಯಾಯಾಧೀಶರ ನಿರ್ವಚನೆಗೆ ಇದೆ.
ಇದನ್ನು ಹೇಳಲು ಕಾರಣ, ಮಹಿಳೆಯರು ಒಳಗಾಗುವ ಅನೇಕ ಬಗೆಯ ಶೋಷಣೆಗಳಿಗೆ ಪರಿಹಾರ ನೀಡುವ ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ, ಅನೇಕ ಸಂದರ್ಭಗಳಲ್ಲಿ, ಅದನ್ನು ಪಡೆಯಲು ಇನ್ನಿಲ್ಲದ ಕಾನೂನು ಹೋರಾಟ ನಡೆಸಬೇಕಾಗುತ್ತದೆ. ‘ಜೀವನಾಂಶ’ ಅದಕ್ಕೊಂದು ಉತ್ತಮ ಉದಾಹರಣೆ.
ಕಾನೂನಿನಲ್ಲಿ ಜೀವನಾಂಶ ಪಡೆಯಲು ಸ್ಪಷ್ಟ ಅವಕಾಶವಿದ್ದರೂ, ಪದೇ ಪದೇ ನ್ಯಾಯಾಲಯಗಳ ಮುಂದೆ ಪ್ರಶ್ನಿಸಿ ದಾವೆ ಹೂಡಲಾಗುತ್ತದೆ ಇಲ್ಲವೇ ಕೆಳ ನ್ಯಾಯಾಲಯಗಳ ತೀರ್ಪನ್ನು ಪ್ರಶ್ನಿಸಿ ಮೇಲಿನ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತದೆ. ಮಹಿಳೆ ತನಗೆ ನ್ಯಾಯವಾಗಿ ದಕ್ಕಬೇಕಾದುದನ್ನು ಹೋರಾಡಿಯೇ ಪಡೆಯಬೇಕಾಗುತ್ತದೆ. ಇದಕ್ಕೆಲ್ಲ ಕಾರಣ, ತಮ್ಮ ಕಕ್ಷಿದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನಿನ ಉಪಬಂಧಗಳನ್ನು ಬೇರೆ ಬೇರೆ ರೀತಿಯಲ್ಲಿ ನಿರ್ವಚಿಸಲು ಇರುವ ಸಾಧ್ಯತೆಗಳು. ‘ಚಾಪೆಯ ಕೆಳಗೆ ಹಾಗೂ ರಂಗೋಲೆಯ ಕೆಳಗೂ ನುಸುಳಿ’, ಭಿನ್ನ ರೀತಿಯಲ್ಲಿ ಅನ್ವಯಿಸಲು ಇರುವ ಸಾಧ್ಯತೆಗಳು.
ಇದಕ್ಕೆ ಉದಾಹರಣೆ, ಆಪರಾಧಿಕ ದಂಡ ಸಂಹಿತೆಯ (ಸಿಆರ್‍ಪಿಸಿ) 125 ನೇ ಪ್ರಕರಣದ ಅಡಿಯಲ್ಲಿ ಜೀವನಾಂಶ ಪಡೆಯಲು ಮಹಿಳೆ ನಡೆಸಬೇಕಾಗಿ ಬಂದ ಕಾನೂನು ಹೋರಾಟ. ಈ ಪ್ರಕರಣದ ಅಡಿಯಲ್ಲಿ ‘ಪತ್ನಿ’ಗೆ ಗಂಡನಿಂದ ಜೀವನಾಂಶ ಪಡೆಯಲು ಅವಕಾಶವಿದೆ ಮತ್ತು ಪತಿ, ಜೀವನಾಂಶ ನೀಡಲು ಬದ್ಧರಾಗಿರುತ್ತಾನೆ. ಜೀವನಾಂಶದ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ.
ಒಂದು ವಿವಾಹ, ‘ಕಾನೂನಿನ ಕಣ್ಣಿನಲ್ಲಿ’ ಊರ್ಜಿತ ವಿವಾಹ ಎನ್ನಿಸಿಕೊಳ್ಳಬೇಕಾದರೆ ಕೆಲವೊಂದು ಷರತ್ತುಗಳ ಪಾಲನೆಯಾಗಿರಬೇಕು ಎಂದು ‘ಹಿಂದೂ ವಿವಾಹ ಅಧಿನಿಯಮ’ ವಿಧಿಸುತ್ತದೆ. ಹಾಗೆಯೇ ಮೋಸ ಮಾಡಿ, ವಾಸ್ತವಾಂಶಗಳನ್ನು ಮುಚ್ಚಿಟ್ಟು ಆದ ವಿವಾಹದಿಂದ ಬಿಡುಗಡೆ ಪಡೆಯಲು ಅವಕಾಶವನ್ನೂ ಕಲ್ಪಿಸಿದೆ. ಅಂಥ ಸಂದರ್ಭದಲ್ಲಿ, ವಿವಾಹವನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಪ್ರಕರಣದಲ್ಲಿ ಸತ್ಯಾಂಶವಿದ್ದರೆ, ನ್ಯಾಯಾಲಯ ಅಂಥ ವಿವಾಹವನ್ನು ಶೂನ್ಯವೆಂದು ಘೋಷಿಸುವ ಮೂಲಕ ವಿವಾಹ ಬಂಧನವನ್ನು ಕೊನೆಗೊಳಿಸುತ್ತದೆ.
ವಿವಾಹವನ್ನು ‘ಶೂನ್ಯ’ ಎಂದು ಘೋಷಿಸಲಾಗಿದೆ ಎಂದರೆ ಅದರರ್ಥ ವಧೂವರರ ನಡುವೆ ವಿವಾಹ ನಡೆದೇ ಇಲ್ಲವೆಂದು ಅರ್ಥ. ಎಂದರೆ, ಅಂಥ ವಿವಾಹ ಕಾನೂನಿನ ಪ್ರಕಾರ ‘ವಿವಾಹ’ ಎನ್ನಿಸಿಕೊಳ್ಳುವುದೇ ಇಲ್ಲ. ಆದ್ದರಿಂದ ವಿವಾಹ ನಡೆದಿದ್ದರೂ ಅದು- ಪತಿ ಪತ್ನಿಯರ ನಡುವೆ ಯಾವುದೇ ಸಂಬಂಧವನ್ನು ಏರ್ಪಡಿಸುವುದಿಲ್ಲ.
-ಪರಸ್ಪರರು ವಿವಾಹದಿಂದಾಗಿ ದೊರೆಯುವ ಯಾವುವೇ ಹಕ್ಕುಗಳನ್ನೂ ಪಡೆಯುವುದಿಲ್ಲ.
-ನೆರವೇರಿಸಬೇಕಾದ ಯಾವುವೇ ಕರ್ತವ್ಯಗಳನ್ನು ನಿಭಾಯಿಸಲೂ ಬದ್ಧರಾಗಿರುವುದಿಲ್ಲ.
ಪ್ರಸ್ತುತ ಪ್ರಕರಣದಲ್ಲಿ, ತನ್ನ ಗಂಡ ನಪುಂಸಕನಾಗಿದ್ದಾನೆ, ಆದರೆ ಆ ವಿಷಯವನ್ನು ಮುಚ್ಚಿಟ್ಟು ತನ್ನನ್ನು ಮೋಸದಿಂದ ಮದುವೆಯಾಗಿದ್ದಾನೆ ಎಂಬ ಕಾರಣದ ಮೇಲೆ, ವಿವಾಹವನ್ನು ಶೂನ್ಯವೆಂದು ಘೋಷಿಸಬೇಕೆಂದು ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಳು. ನ್ಯಾಯಾಲಯ ವಿಚಾರಣೆಯ ನಂತರ ಆ ವಿವಾಹವನ್ನು ಶೂನ್ಯವೆಂದು ಘೋಷಿಸಿ ಅವಳನ್ನು ಆ ಮೋಸದ ವಿವಾಹದಿಂದ ಮುಕ್ತಗೊಳಿಸಿತ್ತು.
ಆನಂತರದಲ್ಲಿ, ಪತ್ನಿ, ಆಪರಾಧಿಕ ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಅಡಿಯಲ್ಲಿ ಪತಿಯಿಂದ ಜೀವನಾಂಶವನ್ನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಳು. ಆದರೆ, ಇದನ್ನು ವಿರೋಧಿಸಿ ಪತಿ ಪ್ರತ್ಯರ್ಜಿಯನ್ನು ಸಲ್ಲಿಸಿದ. ಇದಕ್ಕೆ ಅವನ ವಾದ, ‘ಆಪರಾಧಿಕ ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಅಡಿಯಲ್ಲಿ, ‘ಪತ್ನಿ’ ಮಾತ್ರವೇ ಪತಿಯಿಂದ ಜೀವನಾಂಶವನ್ನು ಪಡೆಯಲು ಅರ್ಹಳಾಗಿರುತ್ತಾಳೆ.
ಆಪರಾಧಿಕ ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಅಡಿಯಲ್ಲಿ, “ಪತ್ನಿ” ಎಂಬ ಪರಿಭಾಷೆಯಲ್ಲಿ, ಮರು ಮದುವೆಯಾಗಿಲ್ಲದ ವಿಚ್ಛೇದಿತ ಪತ್ನಿಯೂ ಸೇರುತ್ತಾಳೆ.
ಆದರೆ, ಇಲ್ಲಿ ತನ್ನ ಮತ್ತು ಈಕೆಯ ನಡುವಿನ ವಿವಾಹ ‘ಶೂನ್ಯ’ಗೊಂಡಿರುವುದರಿಂದ, ‘ವಿವಾಹ’ ವಿವಾಹವೇ ಅಲ್ಲ. ಆದ್ದರಿಂದ, ಈಕೆ, ಆಪರಾಧಿಕ ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಪ್ರಕಾರ ‘ಪತ್ನಿ’ ಯೇ ಅಲ್ಲ. ಹಾಗಾಗಿ, ಆಕೆಗೆ ಜೀವನಾಂಶ ನೀಡಲು ತಾನು ಬದ್ಧನಾಗಿರುವುದಿಲ್ಲ’ ಎಂಬುದಾಗಿತ್ತು.
ಈ ಪ್ರಕರಣ ಕೆಳ ನ್ಯಾಯಾಲಯಗಳ ನಿಕಷವನ್ನು ದಾಟಿ, ಈಗ ಸರ್ವೋಚ್ಚ ನ್ಯಾಯಾಲಯದ ಅಂಗಳವನ್ನು ತಲುಪಿತ್ತು. ಇಲ್ಲಿ ಇತ್ಯರ್ಥವಾಗಬೇಕಾಗಿದ್ದುದು –
‘ಹಿಂದೂ ವಿವಾಹ ಅಧಿನಿಯಮದ 12 ನೇ ಪ್ರಕರಣದ ಅಡಿಯಲ್ಲಿ ವಿವಾಹ ಶೂನ್ಯವೆಂದು ಘೋಷಿಸಲಾದ ನಂತರ, ಪತ್ನಿ ಆಪರಾಧಿಕ ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಅಡಿಯಲ್ಲಿ ಜೀವನಾಂಶವನ್ನು ಕೋರಲು ಅವಕಾಶವಿದೆಯೇ’ ಎಂಬುದು.
ಇಲ್ಲಿ ಗಮನಿಸಬೇಕಾದದ್ದು, ಎರಡು ಅಂಶಗಳನ್ನ. ಒಂದು, ನಪುಂಸಕತ್ವದ ಕಾರಣದಿಂದ ವೈವಾಹಿಕ ಸಂಬಂಧ ಪ್ರಾರಂಭವಾಗದಿದ್ದರೆ, ಅಂಥ ವಿವಾಹವನ್ನು ಶೂನ್ಯಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ. ಹಾಗೆ ಶೂನ್ಯಗೊಳಿಸಿದ ಕೂಡಲೇ, ಅಂಥ ವಿವಾಹ ಅನೂರ್ಜಿತಗೊಳ್ಳುತ್ತದೆ. ಎಂದರೆ, ಕಾನೂನಿನ ಕಣ್ಣಿನಲ್ಲಿ ಆಕೆ ಅವನ ಪತ್ನಿಯಾಗಿರಲೇ ಇಲ್ಲ ಎಂದಾಗುತ್ತದೆ.
ಎರಡನೆಯದು, ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಅಡಿಯಲ್ಲಿ ಗಂಡನಿಂದ ಜೀವನಾಂಶವನ್ನು ಕ್ಲೇಮು ಮಾಡಬೇಕಾದರೆ, ಆಕೆ ಆತನ ’ಪತ್ನಿ’ ಆಗಿರಲೇ ಬೇಕು.
ಕಾನೂನಿನ ಪ್ರಕಾರ ಆಕೆ ತನ್ನ ಪತ್ನಿಯೇ ಅಲ್ಲ. ಹಾಗಿದ್ದಲ್ಲಿ ಅವಳಿಗೆ ಜೀವನಾಂಶ ಕೊಡಲು ತಾನು ಬದ್ಧನಲ್ಲ ಎಂಬುದು ಪತಿಯ ವಾದ.
ಎರಡೂ ಬೇರೆ ಬೇರೆ ಕಾನೂನುಗಳ ಉಪಬಂಧಗಳು. ಎರಡನ್ನು ಜಾರಿಗೊಳಿಸಿರುವುದರ ಉದ್ದೇಶ – ಮಹಿಳೆಗೆ ಶೋಷಣೆ ವಿರುದ್ಧ ರಕ್ಷಣೆ ನೀಡುವುದು. ಆದರೆ ಪತಿಯ ವಾದವನ್ನು ಒಪ್ಪಿ, ಕಾನೂನಿನ ಉಪಬಂಧಗಳನ್ನು ಪ್ರತ್ಯೇಕಿಸಿ ಅಕ್ಷರಶಃ ವ್ಯಾಖ್ಯಾನಿಸಿದರೆ ಕಾನೂನುಗಳ ಉದ್ದೇಶವೇ ವಿಫಲವಾಗಿಬಿಡುತ್ತದೆ. ಆದರೆ, ಸರ್ವೋಚ್ಚ ನ್ಯಾಯಾಲಯ ಇದಕ್ಕೆ ಅವಕಾಶ ನೀಡಲಿಲ್ಲ.
‘ವಿವಾಹವನ್ನು ಶೂನ್ಯಗೊಳಿಸಬೇಕೆಂದು ಪತ್ನಿ ನ್ಯಾಯಾಲಯವನ್ನು ಕೋರಿದುದು, ಪತಿ, ಮೋಸದಿಂದ ಅಥವಾ ವಾಸ್ತವಾಂಶವನ್ನು ಮುಚ್ಚಿಟ್ಟು ವಿವಾಹವಾಗಿದ್ದಾನೆ ಎಂಬ ಕಾರಣದಿಂದಾಗಿ. ಆ ಕಾರಣಕ್ಕಾಗಿ ನ್ಯಾಯಾಲಯ ವಿವಾಹವನ್ನು ‘ಶೂನ್ಯ’ವೆಂದು ಘೋಷಿಸಿದ್ದರೆ, ಆಪರಾಧಿಕ ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಅಡಿಯಲ್ಲಿ ಜೀವನಾಂಶವನ್ನು ನೀಡಲು ಪತಿ ಬದ್ಧನಾಗಿರುತ್ತಾನೆ’ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಪ್ರಕರಣದಲ್ಲಿ ‘ಪತಿ, ತಾನು ನಪುಂಸಕ ಎಂಬ ವಾಸ್ತವಾಂಶವನ್ನು ಮುಚ್ಚಿಟ್ಟು ವಿವಾಹವಾಗಿರುತ್ತಾನೆ. ಈ ಕಾರಣದ ಮೇಲೆ ವಿವಾಹವನ್ನು ಶೂನ್ಯೀಕರಿಸಲು ಕಾನೂನಿನಲ್ಲಿ ಅವಕಾಶವಿದೆ. ನಿಜ. ಆದರೆ, ವಿವಾಹ ಶೂನ್ಯಗೊಂಡಿದೆ ಎಂಬ ಕಾರಣಕ್ಕೆ ಆಕೆ ‘ಪತ್ನಿ’ ಅಲ್ಲ ಹಾಗಾಗಿ ಜೀವನಾಂಶ ನೀಡಬೇಕಿಲ್ಲ ಎಂಬ ವಾದ ಸರಿ ಅಲ್ಲ. ಏಕೆಂದರೆ ವಿವಾಹ ಶೂನ್ಯವಾಗಲು ಕಾರಣ ಅವನು ಮೋಸ ಮಾಡಿದ್ದಾನೆ ಎಂಬುದು. ಇಲ್ಲಿ, ‘ಶೂನ್ಯ’ಗೊಳಿಸಿರುವುದಷ್ಟೇ ಮುಖ್ಯವಾಗುವುದಿಲ್ಲ, ಯಾವ ಸಂದರ್ಭದಲ್ಲಿ ಮತ್ತು ಯಾವ ಕಾರಣಕ್ಕಾಗಿ ಶೂನ್ಯಗೊಳಿಸಲಾಗಿದೆ ಎಂಬುದೂ ಮುಖ್ಯವಾಗುತ್ತದೆ. ಆದ್ದರಿಂದ ಜೀವನಾಂಶ ನೀಡಲು ಪತಿ ಬದ್ಧನಾಗಿರುತ್ತಾನೆ’ ಎಂದು ತೀರ್ಪು ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.
ಈ ತೀರ್ಪು ನಮಗೆ ಮುಖ್ಯವಾಗುವುದು, ಕಾನೂನನ್ನು ಅಕ್ಷರಶಃ ಅನ್ವಯಿಸದೆ, ಮಾಡಿದ ಮೋಸವನ್ನು ಕಾನೂನು ವ್ಯಾಖ್ಯೆಯ ಪರಿಧಿಯೊಳಗೆ ತಂದು, ಮಹಿಳೆಗೆ ನ್ಯಾಯ ದೊರೆಯುವಂತೆ, ಕಾನೂನನ್ನು ನಿರ್ವಚಿಸಿ ಅನ್ವಯಿಸಲಾಗಿದೆ ಮತ್ತು ಆ ಮೂಲಕ ಮಹಿಳೆಗೆ ದೊರೆಯಬೇಕಾಗಿದ್ದ ನ್ಯಾಯವನ್ನು ದೊರಕಿಸಿ ಕೊಡಲಾಗಿದೆ ಎಂಬುದರಿಂದ. ಮಹಿಳೆಯರಿಗೆ ಕಾನೂನುಗಳಿಂದ ನ್ಯಾಯ ದೊರೆಯುವುದು, ಕಾನೂನುಗಳ ರಚನೆಯ ಹಿಂದಿರುವ ಆಶಯ ನೆರವೇರಿದಾಗ.
ಕಾನೂನುಗಳ ಆಶಯ ಈಡೇರುವುದು ಮತ್ತು ಆ ಮೂಲಕ ಮಹಿಳೆಯರಿಗೆ ನ್ಯಾಯ ದೊರೆಯುವಂತಾಗುವುದು ಇಂಥ ತೀರ್ಪುಗಳಿಂದ ಮಾತ್ರ.
- ಡಾ. ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.