ಕಾನೂನು ಕನ್ನಡಿ/ ವಿಳಂಬ ಪರಿಹಾರ: ಒದಗಿಸೀತೇ ನ್ಯಾಯ?- ಡಾ. ಗೀತಾ ಕೃಷ್ಣಮೂರ್ತಿ
ಚಂದ್ರಭಾಗಾ ಬೊರಾಡೆ ಎಂಬ ಹಳ್ಳಿಯ ಹೆಣ್ಣುಮಗಳಿಗೆ 17 ವರ್ಷಗಳ ನಂತರ ಮುಂಬೈ ಹೈಕೋರ್ಟ್ ನ್ಯಾಯ ಒದಗಿಸಿದೆ. 60ರ ದಶಕದಲ್ಲಿ ಮದುವೆಯ ಆರಂಭದ ದಿನಗಳಲ್ಲೇ ಆಕೆಗೆ ದೈಹಿಕ, ಮಾನಸಿಕ ಹಿಂಸೆ ಕೊಟ್ಟು, ಆಕೆ ಮನೆಬಿಟ್ಟು ಹೋಗುವಂತೆ ಮಾಡಿದ್ದ ಆಕೆಯ ಪತಿ ಬಬನ್‌ರಾವ್ ಬೊರಾಡೆಗೆ ಜೀವನಾಂಶ ನೀಡುವಂತೆ ಆದೇಶಿಸಿದೆ. ಇಲ್ಲಿ ನ್ಯಾಯ ತಡವಾಗಿ ದೊರೆತರೂ ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಈ ತೀರ್ಪು ಎತ್ತಿಹಿಡಿದಿದೆ.
ಎಲ್ಲ ಪ್ರಜೆಗಳಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸಬೇಕು ಎಂಬುದು ಭಾರತದ ಸಂವಿಧಾನದ ಬಹು ಮುಖ್ಯವಾದ ಧ್ಯೇಯಗಳಲ್ಲೊಂದು. ಆದರೆ ಬಡ ಮತ್ತು ಶೋಷಿತ ವರ್ಗದವರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರಿಗೆ ಶೀಘ್ರವಾಗಿ ಹಾಗೂ ಕೈಗೆಟಕುವ ರೀತಿಯಲ್ಲಿ ನ್ಯಾಯ ದೊರಕಿಸಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಮಾತನ್ನು ಪದೇ ಪದೇ ಹೇಳುತ್ತಾ ಬರಲಾಗಿದೆ. ‘ನಮ್ಮ ದೇಶದಲ್ಲಿ ಬಡ ವ್ಯಕ್ತಿಯೊಬ್ಬ ನ್ಯಾಯ ದೊರಕಿಸಿಕೊಳ್ಳುವ ಪ್ರಕ್ರಿಯೆಯಲ್ಲಿ, ಉಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತುವಲ್ಲಿಗೆ ತಲುಪಿದ್ದಾನೆ ಎಂದಾದರೆ ಅದೇ ಒಂದು ಸಾಧನೆ’ ಎಂದಿದ್ದರು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಪಿ.ಸಿಂಗ್ ಅವರು. ನಮ್ಮ ಬಹುಪಾಲು ಸಂಖ್ಯೆಯ ಜನರಿಗೆ ನ್ಯಾಯ ಮರೀಚಿಕೆಯಾಗಿಯೇ ಉಳಿದಿದೆ.
ಇಷ್ಟೆಲ್ಲ ಹೇಳಲು ಕಾರಣವಿಲ್ಲದಿಲ್ಲ. ಇತ್ತೀಚೆಗೆ, ದಂಡ ಪ್ರಕ್ರಿಯಾ ಸಂಹಿತೆ(ಸಿಆರ್‌ಪಿಸಿ)ಯ 125 ನೇ ಪ್ರಕರಣದ ಅಡಿಯಲ್ಲಿ ಜೀವನಾಂಶ ಕೋರಿ ಹಾಕಿದ ಅರ್ಜಿಗೆ ಸಂಬಂಧಿಸಿದಂತೆ ಮುಂಬಯಿ ಉಚ್ಚ ನ್ಯಾಯಾಲಯ, ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ತೀರ್ಪು ಪ್ರಕಟಿಸಿದೆ. ಇಲ್ಲಿ ನ್ಯಾಯಾಲಯದ ಮೊರೆ ಹೋದದ್ದು, ಚಂದ್ರಭಾಗಾ ಬೊರಾಡೆ ಎಂಬಾಕೆ, ತನ್ನ ಪತಿ ಬಬನ್‍ರಾವ್ ಬೊರಾಡೆ ವಿರುದ್ಧ. ನ್ಯಾಯ ದೊರೆತದ್ದು ಹದಿನೇಳು ವರ್ಷಗಳ ನಂತರ!
ಚಂದ್ರಭಾಗಾ ಬೊರಾಡೆಯ ಕಥೆ ನಮ್ಮ ಬಹುತೇಕ ಹೆಣ್ಣು ಮಕ್ಕಳ ಕಥೆಯೂ ಹೌದು. ಬಬನ್‍ರಾವ್ ಬೊರಾಡೆಯ ಜೊತೆ ಆಕೆಯ ವಿವಾಹವಾದದ್ದು ಆಕೆ ಜೀವನಾಂಶ ಕೋರಿ ಅರ್ಜಿ ಹಾಕಿದ ಮೂವತ್ತು ವರ್ಷಗಳ ಹಿಂದೆ. ಆಕೆ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದು 1994ರ ಜುಲೈ 8 ರಂದು! ವಿವಾಹವಾದ ಎರಡು ವರ್ಷಕ್ಕೇ ಪತಿ ನೀಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ತಾಳಲಾರದೆ ಗಂಡನ ಮನೆಯನ್ನು ತೊರೆದು ತಂದೆಯ ಜೊತೆ ವಾಸಿಸಲು ಪ್ರಾರಂಭಿಸಿದಳು. ತದ ನಂತರದಲ್ಲಿ ಗಂಡನ ಮನೆಗೆ ಬರಲು ಪ್ರಯತ್ನಿಸಿದಳಾದರೂ ಅದಕ್ಕೆ ಅವಕಾಶ ಕೊಡಲಿಲ್ಲ. ಆಕೆಯ ಪತಿ 1980 ರಲ್ಲಿ ಮತ್ತೊಬ್ಬಳನ್ನು ವಿವಾಹವಾದ. ಈಕೆ ತನ್ನ ತಂದೆಯ ಮನೆಯಲ್ಲಿಯೇ ಉಳಿಯಬೇಕಾಯಿತು. 1994 ರಲ್ಲಿ ಅವಳ ತಂದೆ ಮೃತಪಟ್ಟಾಗ, ಈಕೆ ತನ್ನ ಗಂಡನಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದಳು. ಆದರೆ ಆಕೆಯ ಗಂಡ ಆಕೆಯೊಡನೆ ವಿವಾಹವಾಗಿರುವುದನ್ನೇ ಅಲ್ಲಗಳೆದ. ಅವನ ಹೇಳಿಕೆಯೆಂದರೆ, ಆಕೆಯ ತಂದೆ ತನ್ನ ತೋಟದಲ್ಲಿ ಮಾಲಿಯಾಗಿ ಕೆಲಸ ಮಾಡುತ್ತಿದ್ದ, ಹಾಗಾಗಿ ತನಗೆ ಆಕೆಯ ಪರಿಚಯವಾಗಿತ್ತು, ಈಗ ಆ ಪರಿಚಯವನ್ನೇ ಆಕೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾಳೆ ಎಂಬುದಾಗಿತ್ತು.
ಆಕೆಯ ಗಂಡನ ಪರವಾಗಿ ವಾದ ಮಾಡಿದ ವಕೀಲರು, ಆಕೆಯು ಒದಗಿಸಿದ ಸಾಕ್ಷ್ಯಗಳಲ್ಲಿದ್ದ ಕೆಲವು ಹೊಂದಾಣಿಕೆಯಾಗದ ವಿವರಗಳನ್ನು ಎತ್ತಿ ತೋರಿದರು ಮತ್ತು ವಿವಾಹವಾದ ನಂತರ ಗಂಡನಿಂದ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದರೂ ಇಷ್ಟು ವರ್ಷಗಳ ಕಾಲ ಆಕೆ ಅವನ ವಿರುದ್ಧ ಯಾವುದೇ ಮೊಕದ್ದಮೆಯನ್ನು ಹೂಡಿಲ್ಲ ಎಂದೂ ಆರೋಪಿಸಿದರು. ಆದರೆ ಆಕೆಯ ಪರ ವಾದಿಸಿದ ವಕೀಲರು ಮುಂದಿಟ್ಟ ಕಾರಣ, ಆಕೆಯ ತಂದೆ ಜೀವಂತವಿರುವವರೆಗೂ ಆಕೆಯ ಯೋಗಕ್ಷೇಮವನ್ನು ಅವರೇ ವಹಿಸಿಕೊಂಡಿದ್ದರು, ಹಾಗಾಗಿ ಆಕೆಗೆ ಗಂಡನಿಂದ ಜೀವನಾಂಶ ಪಡೆಯುವ ಅಗತ್ಯ ಉಂಟಾಗಲಿಲ್ಲ, ಆದರೆ ಈಗ ಆಕೆಯ ತಂದೆ ಮೃತಪಟ್ಟಿರುವುದರಿಂದ ಆಕೆಗೆ ಜೀವನ ನಿರ್ವಹಿಸಲು ಯಾವುದೇ ಆದಾಯವಿಲ್ಲ, ಹಾಗಾಗಿ ಗಂಡನಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದಾಳೆ ಎಂಬುದಾಗಿತ್ತು.
ಸಾಕ್ಷ್ಯಗಳು ನೀಡಿದ ಪರಸ್ಪರ ಹೊಂದಾಣಿಕೆಯಾಗದ ಸಣ್ಣ ವಿವರಗಳನ್ನು ಆಧರಿಸಿ ಜೀವನಾಂಶ ಕೋರಿ ಹಾಕಿದ ಅರ್ಜಿಯನ್ನು ಮೊದಲ ದರ್ಜೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆಕೆ ಸೆಷನ್ಸ್ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದಳು. ಸೆಷನ್ಸ್ ನ್ಯಾಯಾಲಯ ಆಕೆಯ ಅಪೀಲನ್ನು ಪುರಸ್ಕರಿಸಿ, 2001 ರ ಮಾರ್ಚ್ 20 ರಲ್ಲಿ, 1994 ರ ಜುಲೈ 8 ರಿಂದ, ತಿಂಗಳಿಗೆ 500 ರೂಗಳಂತೆ ಜೀವನಾಂಶ ನೀಡುವಂತೆ ಆದೇಶಿಸಿತು.
ಈ ಆದೇಶವನ್ನು ಆಕೆಯ ಪತಿ ವಿರೋಧಿಸಿ, ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ. ಈ ಅರ್ಜಿಯಲ್ಲಿನ ತೀರ್ಪು ಇದೀಗ 2018 ರ ಅಕ್ಟೋಬರ್ 10 ರಂದು, 17 ದೀರ್ಘ ವರ್ಷಗಳ ನಂತರ, ಪತ್ನಿಯ ಪರವಾಗಿ, ಹೊರಬಿದ್ದಿದೆ.
ಪತ್ನಿಯ ಪರವಾಗಿ ತೀರ್ಪು ನೀಡುತ್ತಾ, ನ್ಯಾಯಾಧೀಶೆ ಮೃದುಲಾ ಭಾಟ್ಕರ್ ಹೇಳಿರುವ ಮಾತುಗಳು ಮನನೀಯ-
‘ದಂಡ ಪ್ರಕ್ರಿಯಾ ಸಂಹಿತೆಯ 125 ನೇ ಪ್ರಕರಣದ ಅಡಿಯಲ್ಲಿ ಸಲ್ಲಿಸಲಾಗುವ ಜೀವನಾಂಶ ಅರ್ಜಿಯ ವಿಚಾರಣೆ ಸಂಕ್ಷಿಪ್ತ ಸ್ವರೂಪದ ವಿಚಾರಣೆ ಎಂಬುದು ಸ್ಥಾಪಿತವಾದ ವಿಧಾನ. ಇತರ ಅಪರಾಧಿಕ ಪ್ರಕರಣಗಳ ವಿಚಾರಣೆಯಲ್ಲಿ ಅಗತ್ಯ ಪಡಿಸುವ ಕರಾರುವಾಕ್ಕು ರುಜುವಾತನ್ನು ಮಂಡಿಸುವಂತೆ ಇಲ್ಲಿ ಒತ್ತಾಯವಿರುವುದಿಲ್ಲ. ಪತ್ನಿ ನೀಡುವ ಸಾಕ್ಷ್ಯದಿಂದ ಆಕೆಯೇ ಈತನ ಮೊದಲ ಪತ್ನಿ ಎಂಬುದು ನ್ಯಾಯಾಲಯಕ್ಕೆ ಮನದಟ್ಟಾಗುವಷ್ಟಿದ್ದರೆ ಸಾಕು.” ಎಂದಿದ್ದಾರೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಜೀವನಾಂಶದ ಅರ್ಜಿಯನ್ನು ತಿರಸ್ಕರಿಸಿದ ಬಗ್ಗೆಯೂ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ತೀರ ತಾಂತ್ರಿಕವಾಗಿ ಮತ್ತು ಕಾನೂನಿನ ಆಶಯಕ್ಕೆ ಬೆಲೆ ಕೊಡದೆ ತೀರ ಅಕ್ಷರಶಃ ಅರ್ಥಕ್ಕೆ ಬೆಲೆ ನೀಡಿ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಜೀವನಾಂಶದಂಥ ಅರ್ಜಿಗಳನ್ನು ವಿಚಾರಣೆ ಮಾಡುವಾಗ ಹೆಚ್ಚು ಸಂವೇದನಾಶೀಲರಾಗಿರಬೇಕು ಇಂಥ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ಹೆಚ್ಚು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ. ಹಾಗೆ ಮಾಡುವಾಗ, 1964-65 ರಷ್ಟು ಹಿಂದೆ ಇದ್ದ ಸಾಮಾಜಿಕ ಪರಿಸ್ಥಿತಿಯನ್ನು ಮತ್ತು ಪತ್ನಿ ಅಶಿಕ್ಷಿತೆ ಎಂಬುದನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು ಎಂದೂ ಹೇಳಿದ್ದಾರೆ.
ತನ್ನ ಗಂಡನೇ ತನ್ನನ್ನು ಹೊರಹಾಕಿದ ಎಂಬುದನ್ನು ಆಕೆ ಸಾಕ್ಷ್ಯ ಸಮೇತ ರುಜುವಾತುಪಡಿಸಬೇಕಿಲ್ಲ. ಮಾನಸಿಕ ಮತ್ತು ದೈಹಿಕ ಹಿಂಸೆಯಿಂದಾಗಿ ಗಂಡನ ಮನೆಯನ್ನು ಹೆಂಡತಿ ಅನಿವಾರ್ಯವಾಗಿ ತೊರೆದು ಹೋದರೆ, ಹೆಂಡತಿ ಗಂಡನಿಂದ ತಾನೇ ದೂರ ಉಳಿದಿದ್ದಾಳೆ ಎಂದು ಭಾವಿಸಲಾಗದು. ಹೆಂಡತಿಯನ್ನು ನಿರ್ಲಕ್ಷಿಸಿದ್ದಾನೆ ಮತ್ತು ನೋಡಿಕೊಳ್ಳಲು ಗಂಡ ವಿಫಲನಾಗಿದ್ದಾನೆ ಎಂದೇ ಬಾವಿಸಬೇಕಾಗುತ್ತದೆ ಎಂದಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ, ಗಂಡನ ವಾದವನ್ನು ಸಮರ್ಥಿಸಲು ಒಬ್ಬರು ಸಾಕ್ಷಿಯೂ ಇಲ್ಲ. ಆದರೆ ಅವರಿಬ್ಬರೂ ವಿವಾಹವಾಗಿದ್ದರ ಬಗ್ಗೆ ನೀಡಿರುವ ಪತ್ನಿಯ ಹೇಳಿಕೆಯನ್ನು ಆಕೆಯ ಎಲ್ಲ ಸಾಕ್ಷಿಗಳೂ ಸಮರ್ಥಿಸಿದ್ದಾರೆ. ಇದುವರೆಗೆ ಜೀವನಾಂಶಕ್ಕೆ ಅರ್ಜಿ ಹಾಕದ ಆಕೆ, ತನ್ನ ತಂದೆಯ ಮರಣಾನಂತರ, ಜೀವನ ನಿರ್ವಹಣೆಗೆ ಬೇರೆ ಆದಾಯವಿಲ್ಲದುದರಿಂದಾಗಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟು ಜೀವನಾಂಶ ನೀಡಿಕೆಯ ಆದೇಶವನ್ನು ಎತ್ತಿ ಹಿಡಿದಿದ್ದಾರೆ.
ಎಷ್ಟೇ ಮಹಿಳಾಪರ ಕಾನೂನುಗಳು ಇದ್ದರೂ, ಅವುಗಳನ್ನು ಅನ್ವಯಿಸಿ ನ್ಯಾಯ ಪ್ರದಾನ ಮಾಡುವಾಗ, ಕಾನೂನು ರಚನೆಯ ಹಿಂದಿನ ಆಶಯವನ್ನು ನೆರವೇರಿಸುವ ಮನೋಭಾವ ಇಲ್ಲದಿದ್ದದ್ದಲ್ಲಿ, ಆ ಕಾನೂನಿನ ಪ್ರಯೋಜನ ವಾಸ್ತವದಲ್ಲಿ ದೊರಕದೇ ಹೋಗುತ್ತದೆ. ಆದರೆ, ಚಂದ್ರಭಾಗಾ ಬೊರಾಡೆ ಸಲ್ಲಿಸಿದ ಅಪೀಲಿನಲ್ಲಿ ಹೊರಬಿದ್ದ ತೀರ್ಪು, ಮೇಲ್ನೋಟಕ್ಕೇ ಅನ್ಯಾಯವಾಗಿದೆ ಎಂದು ಕಂಡು ಬರುವಂಥ ಪ್ರಕರಣಗಳಲ್ಲಿ, ಕಾನೂನಿನ ಚೌಕಟ್ಟಿನೊಳಗೇ ಕಾನೂನಿನ ಆಶಯವನ್ನು ಈಡೇರಿಸುವಂಥ ನ್ಯಾಯ ದೊರಕಿಸಿಕೊಡುವುದು ಸಾಧ್ಯ ಎಂಬುದನ್ನು ಸಾಬೀತು ಪಡಿಸುತ್ತದೆ. ತಡವಾಗಿ ದೊರೆತ ನ್ಯಾಯ, ನ್ಯಾಯವನ್ನು ನಿರಾಕರಿಸಿದಂತೆ ಎಂಬುದು ನಿಜ. ಆದರೆ ಇಲ್ಲಿ ತಡವಾಗಿಯಾದರೂ ನ್ಯಾಯ ದೊರೆಯಿತಲ್ಲ ಎಂಬುದೇ ಸಮಾಧಾನ.
ಡಾ. ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.