Latestಅಂಕಣ

ಕಾನೂನು ಕನ್ನಡಿ/ ಲೈಂಗಿಕ ವೃತ್ತಿಯವರ ಮೇಲೆ ಅತ್ಯಾಚಾರಕ್ಕೆ ಹಕ್ಕಿದೆಯೇ?- ಡಾ. ಗೀತಾ ಕೃಷ್ಣಮೂರ್ತಿ

ಮಹಿಳೆ ವೇಶ್ಯಾವೃತ್ತಿಯಲ್ಲಿ ತೊಡಗಿದ್ದರೂ, ಅವಳಿಗೂ ಖಾಸಗಿತನದ ಹಕ್ಕು ಇದೆ. ಅವಳ ದೇಹದ ಮೇಲೆ ಆಕ್ರಮಣ ಮಾಡಲು, ಅವಳ ವೃತ್ತಿಯ ಕಾರಣಕ್ಕೆ, ಯಾರಿಗೂ ಹಕ್ಕು ದೊರೆಯುವುದಿಲ್ಲ. ಯಾರಿಗೂ ಅಥವಾ ಎಲ್ಲರಿಗೂ ತನ್ನನ್ನು ಒಪ್ಪಿಸಿಕೊಳ್ಳಲು ನಿರಾಕರಿಸುವ ಹಕ್ಕು ಆಕೆಗೆ ಇದೆ. ಇತರ ಮಹಿಳೆಯರಂತೆಯೆ ಆಕೆಗೂ ಕಾನೂನಿನ ರಕ್ಷಣೆ ಇದೆ. ಎಲ್ಲಕ್ಕಿಂತ ಹೆಚ್ಚಿಗೆ, ಆಕೆ ವೇಶ್ಯೆ ಎಂಬ ಕಾರಣಕ್ಕೆ ಆಕೆಯ ಸಾಕ್ಷ್ಯವನ್ನು ಅಲ್ಲಗಳೆಯಲಾಗದು. ಈ ಅಂಶಗಳನ್ನು ಸರ್ವೋಚ್ಚ ನ್ಯಾಯಾಲಯ ಹಿಂದಿನ ಅನೇಕ ಪ್ರಕರಣಗಳಲ್ಲಿ ಸ್ಪಷ್ಟಪಡಿಸಿದೆ.

ಲೈಂಗಿಕ ವೃತ್ತಿಯವರ ಮೇಲೆ ಅತ್ಯಾಚಾರಕ್ಕೆ ಹ್ಯಕ್ಕಿದೆಯೇ? ಇಂಥದ್ದೊಂದು ಪ್ರಶ್ನೆ ಅನೇಕ ಬಾರಿ, ಬೇರೆ ಬೇರೆ ಸ್ತರದ ನ್ಯಾಯಾಲಯಗಳ ಮುಂದೆ ಅನೇಕ ಪ್ರಕರಣಗಳಲ್ಲಿ ಬಂದಿದೆ.

ಈ ಪ್ರಕರಣ, ದೆಹಲಿಯ ಕಟ್ವಾರಿಯಾ ಸರಾಯ್‍ನಲ್ಲಿರುವ ಶಹೀದ್ ಭಗತ್‍ಸಿಂಗ್ ಜುಗ್ಗಿ ಕ್ಯಾಂಪ್‍ನಲ್ಲಿ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದುದು. ಮಹಿಳೆಯ ಹೇಳಿಕೆಯಂತೆ, 28-7-1997 ರಲ್ಲಿ ರಾತ್ರಿ 9 ಗಂಟೆಯಲ್ಲಿ ಮಹಿಳೆ ಹಟ್ಟಿಯಲ್ಲಿ ಒಬ್ಬಳೇ ಇದ್ದಾಗ, ಒಂದನೇ ಆರೋಪಿ ಆಕೆಯನ್ನು ಬೀಡಿ ನೀಡುವಂತೆ ಕೇಳಿದ. ಆದರೆ ಆಕೆ ಅದನ್ನು ನೀಡಲು ನಿರಾಕರಿಸಿದಳು, ಆತ ಸುಮ್ಮನಾಗದೆ ನೀರು ಬೇಡಿದ, ಆಕೆ ಅದನ್ನು ನೀಡಲೂ ನಿರಾಕರಿಸಿದಳು. ಆನಂತರದಲ್ಲಿ, ಆರೋಪಿಗಳು ದೀಪವನ್ನು ಆರಿಸಿ {ನಾಲ್ವರು) ಆಕೆಯ ಮೇಲೆ ಅತ್ಯಾಚಾರ ನಡೆಸಿದರು. ಆಕೆ ಜೋರಾಗಿ ಚೀರಾಡಿ ಪ್ರಜ್ಞೆ ತಪ್ಪಿದಳು. ಅವಳ ಚೀರಾಟವನ್ನು ಕೇಳಿ ಆಕೆಯ ತಾಯಿ ಓಡುತ್ತ ಬಂದರು. ಬಂದಾಗ ಹಟ್ಟಿಯೊಳಗಿಂದ ನಾಲ್ವರು ಆರೋಪಿಗಳು ಹೊರಬಿದ್ದುದ್ದನ್ನು ನೋಡಿದಳು. ಮೊದಲು ಪ್ರಜ್ಞೆ ತಪ್ಪಿದ ಮಗಳೆಡೆಗೆ ಗಮನ ನೀಡಿದಳು. ಪೊಲೀಸು ಕಂಟ್ರೋಲ್ ರೂಮಿನ ವ್ಯಾನ್ ಆಕೆಯನ್ನು ಕೂಡಲೇ ಆಲ್ ಇಂಡಿಯಾ ಮೆಡಿಕಲ್ ಸೈನ್ಸೆಸ್ ಆಸ್ಪತ್ರೆಗೆ ಕರೆದೊಯ್ದಿತು.

ಸುಮಾರು 11.45 ರ ಹೊತ್ತಿಗೆ ಡಾ| ಮೋನಿಕಾ ಎಂಬ ವೈದ್ಯೆ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ವೈದ್ಯಕೀಯ ಪರೀಕ್ಷೆಯ ನಂತರ ಆಕೆಯ ಮೇಲೆ ಅತ್ಯಾಚಾರವಾಗಿರುವುದನ್ನು ದೃಢಪಡಿಸಿದರು. ಆಕೆಗೆ ಪ್ರಜ್ಞೆ ಬಂದು ಆಕೆ ಹೇಳಿಕೆಯನ್ನು ಕೊಡುವ ಸ್ಥಿತಿಯಲ್ಲಿದ್ದಾಳೆ ಎಂದು ವೈದ್ಯರು ತಿಳಿಸಿದ ನಂತರ, ಸುಮಾರು, 29-8-1997 ರಂದು ಬೆಳಗಿನ ಜಾವ 2.30 ರ ಹೊತ್ತಿಗೆ ಸಂತ್ರಸ್ತೆಯ ಹೇಳಿಕೆಯನ್ನು ದಾಖಲು ಮಾಡಿಕೊಂಡರು ಮತ್ತು 2.50 ರ ಹೊತ್ತಿಗೆ ಆಕೆಯ ಹೇಳಿಕೆಯನ್ನು ಪೊಲೀಸು ಠಾಣೆಗೆ ಕಳುಹಿಸಿ ಅಂದೇ ಬೆಳಗಿನ 3.15 ರ ವೇಳೆಗೆ ಫ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಯಿತು. ಇದಿಷ್ಟೂ ಘಟನೆಗಳು ನಡೆದ ಕ್ರಮ.

ಸಂತ್ರಸ್ತೆಯ ಸಾಕ್ಷ್ಯ, ವೈದ್ಯಕೀಯ ವರದಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇವುಗಳನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ಆರೋಪಿಗಳೆಲ್ಲರನ್ನೂ ದೋಷಿಗಳೆಂದು ತೀರ್ಮಾನಿಸಿ ಹತ್ತು ವರ್ಷಗಳ ಕಠಿಣ ಸಜೆಯನ್ನು ವಿಧಿಸಿತು. ಈ ತೀರ್ಪನ್ನು ವಿರೋಧಿಸಿ ಆರೋಪಿಗಳು ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದರು. ತಮ್ಮ ಮೇಲಿನ ಆರೋಪಗಳೆಲ್ಲವನ್ನೂ ಆರೋಪಿಗಳು ನಿರಾಕರಿಸಿದರು ಮತ್ತು ಸಂತ್ರಸ್ತೆಯು ಸ್ವೇಚ್ಛಾ ಲೈಂಗಿಕ ಪ್ರವೃತ್ತಿಯವಳೆಂದೂ, ಆಕೆ ತನ್ನ ಹಟ್ಟಿಯಲ್ಲಿ ವೇಶ್ಯಾವೃತ್ತಿಯನ್ನು ನಡೆಸುತ್ತಿದ್ದಳೆಂದೂ, ಹಾಗಾಗಿ ಆಕೆಯ ಸಾಕ್ಷ್ಯ ಪರಿಗಣನೆಗೆ ಯೋಗ್ಯವಲ್ಲವೆಂದೂ ವಾದಿಸಿದರು. ಅಲ್ಲದೆ ಆರೋಪಿಗಳ ಪರ ಮಂಡಿಸಿದ ವಾದ ಮತ್ತು ಸಲ್ಲಿಸಿದ ದಾಖಲೆಗಳಲ್ಲಿ ಘಟನಾವಳಿಗಳ ಕ್ರಮವನ್ನು ಮತ್ತು ಸಮಯವನ್ನೂ ಸಹ ತಿರುಚಲಾಗಿತ್ತು. ಈ ಅಂಶಗಳನ್ನು ಆಧರಿಸಿ, ದೆಹಲಿಯ ಉಚ್ಚ ನ್ಯಾಯಾಲಯ ಎಲ್ಲ ಆರೋಪಿಗಳನ್ನೂ ಖುಲಾಸೆ ಮಾಡಿತು. ಅಷ್ಟೇ ಅಲ್ಲದೆ ವಿಚಾರಣಾ ನ್ಯಾಯಾಲಯಕ್ಕೆ ದಾಖಲೆಗಳನ್ನೊದಗಿಸಿದ ಪೊಲೀಸು ತನಿಖಾಧಿಕಾರಿಗಳ ವಿರುದ್ಧವೇ ಸುಳ್ಳು ಸಾಕ್ಷ್ಯಗಳ ಸೃಷ್ಟಿಗಾಗಿ ಕಾನೂನು ವ್ಯವಹರಣೆ ಪ್ರಾರಂಭಿಸುವಂತೆ ಆದೇಶ ಹೊರಡಿಸಿತು. ಆದರೆ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನೆರವೇರಿಸಿದ್ದ ಪೊಲೀಸು ಅಧಿಕಾರಿಗಳು ಉಚ್ಚ ನ್ಯಾಯಾಲಯದ ಈ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದರು.

ಅತ್ಯಾಚಾರ ಮಹಿಳೆಯ ದೇಹ ಹಾಗೂ ಮನಸ್ಸುಗಳ ಮೇಲೆ ನಡೆಯುವ ಅತ್ಯಂತ ಕ್ರೂರ, ಹೇಯ ಮತ್ತು ಅಮಾನವೀಯ ದೌರ್ಜನ್ಯ. 2012 ರಲ್ಲಾದ ‘ನಿರ್ಭಯ’ ಪ್ರಕರಣ, ಮನುಷ್ಯನ ಕ್ರೌರ್ಯ ಯಾವ ಮಟ್ಟಕ್ಕೆ ಹೋಗಬಲ್ಲುದು ಎಂಬುದನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ಅನಾವರಣಗೊಳಿಸಿತು. ಇಡೀ ದೇಶದ ನಾಗರಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿತು. ಇಡೀ ವ್ಯವಸ್ಥೆ ಸಂವೇದನಾಶೀಲವಾದ ಹೊರತು ಇದಕ್ಕೆ ಪರಿಹಾರವಿಲ್ಲ ಎಂಬುದನ್ನು ಮನದಟ್ಟು ಮಾಡಿಸಿತು. ಶಿಕ್ಷೆಯ ಭಯ ಹೆಚ್ಚಿದ ಹೊರತು ಇಂಥ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತವೆ ಎಂಬ ಭಯದೊಂದಿಗೆ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲಾಯಿತು.

ಯಾವುದೇ ಅಪರಾಧ ಪ್ರಕರಣದಲ್ಲಿ, ಅಪರಾಧಿಗೆ ಶಿಕ್ಷೆಯಾಗಿ ಸಂತ್ರಸ್ತ ವ್ಯಕ್ತಿಗೆ ನ್ಯಾಯ ದೊರೆಯುವ ಮುನ್ನ ಅದು ಕ್ರಮಿಸುವ ದಾರಿ ಬಹು ದೀರ್ಘ. ನ್ಯಾಯ ಪ್ರದಾನವಾಗುವುದಕ್ಕೆ ಮುನ್ನ, ಅನೇಕ ಹಂತಗಳಲ್ಲಿ, ನ್ಯಾಯ ನೀಡಿಕೆಯ ಹಾದಿ ತಪ್ಪಿಸುವ ಸಾಧ್ಯತೆಗಳಿರುತ್ತವೆ. ಸಂದೇಹಕ್ಕೆ ಆಸ್ಪದವಿಲ್ಲದಂತೆ, ಸಾಕ್ಷ್ಯಾಧಾರಗಳನ್ನು ಒದಗಿಸಿ, ಅಪರಾಧವನ್ನು ರುಜುವಾತು ಪಡಿಸುವುದೇ ಇಲ್ಲಿನ ಸವಾಲು. ಇಲ್ಲಿ ಸ್ವಲ್ಪ ತಪ್ಪಿದರೂ ಅಪರಾಧಿ ಶಿಕ್ಷೆಯಿಂದ ತಪ್ಪಿಸಿಕೊಂಡುಬಿಡುತ್ತಾನೆ. ನ್ಯಾಯ ವ್ಯವಸ್ಥೆಯ ಮೇಲಿರುವ ನಂಬಿಕೆಯ ಬುಡವೇ ಅಲುಗಾಡಿಬಿಡುತ್ತದೆ.

ಅತ್ಯಾಚಾರ ಕಾನೂನಿಗೆ ಇಲ್ಲಿಯವರೆಗೆ ಅನೇಕ ತಿದ್ದುಪಡಿಗಳಾಗಿವೆ. ಇಡೀ ರಾಷ್ಟ್ರ ತಲೆತಗ್ಗಿಸುವಂತಾಗುವ ಒಂದೊಂದು ಅತ್ಯಾಚಾರ ಪ್ರಕರಣ ನಡೆದಾಗಲೂ, ಕಾನೂನಿನ ಮರುಪರಿಶೀಲನೆಯಾಗಿದೆ ಮತ್ತು ಇರುವ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಆದರೂ, ಅಂಕಿ ಅಂಶಗಳ ಪ್ರಕಾರ, ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ ಬಹು ಕಡಿಮೆ.

ಕಾನೂನು ಎಷ್ಟೇ ಬಿಗಿಯಾಗಿದ್ದರೂ, ಆ ಕಾನೂನಿನ ಅನ್ವಯ ನ್ಯಾಯ ದೊರೆಯಬೇಕಾದರೆ, ಪ್ರಾಥಮಿಕ ವಿಚಾರಣೆ, ಸಾಕ್ಷ್ಯಾಧಾರಗಳ ಸಂಗ್ರಹಣೆ ಮತ್ತು ನ್ಯಾಯ ನೀಡಿಕೆ-ಈ ಎಲ್ಲ ಹಂತಗಳೂ ಸಮರ್ಪಕವಾಗಿ, ಯಾವುವೇ ಲೋಪಗಳಿಲ್ಲದೆ, ರಾಗದ್ವೇಷ ರಹಿತವಾಗಿ ನಡೆಯಬೇಕು. ಹೇಗೇ ನಡೆದರೂ, ಎಲ್ಲ ಹಂತಗಳಲ್ಲಿಯೂ, ಕಾನೂನು, ವಿಚಾರಣೆ ಹಾಗೂ ಕಾನೂನಿನ ಅನ್ವಯದಲ್ಲಿನ ಲೋಪಗಳನ್ನು ಹುಡುಕಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಆರೋಪಿ ಮಾಡಿಯೇ ಮಾಡುತ್ತಾನೆ.

ಈ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯ, ವಿವರಗಳ ಸತ್ಯಾಸತ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ದೆಹಲಿ ಉಚ್ಚ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿತು ಮತ್ತು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು.

ಈ ತೀರ್ಪು ನಮಗೆ ಮುಖ್ಯವಾಗುವುದು, ಸಂತ್ರಸ್ತ ಮಹಿಳೆ ವೇಶ್ಯಾವೃತ್ತಿಯಲ್ಲಿ ತೊಡಗಿದ್ದಳು, ಹಾಗಾಗಿ ಅವಳ ಹೇಳಿಕೆ ಪರಿಗಣನೆಗೆ ಯೋಗ್ಯವಲ್ಲ ಎಂಬ ಆರೋಪಿಗಳ ವಾದವನ್ನು ತಳ್ಳಿ ಹಾಕಿದೆ ಎಂಬುದರಿಂದ. ಸಂತ್ರಸ್ತೆಯ ಹೇಳಿಕೆಯನ್ನು ದೃಢಪಡಿಸುವ ಸಾಕ್ಷ್ಯಗಳು ಇಲ್ಲದಿದ್ದರೂ, (ಅದನ್ನು ಅಲ್ಲಗಳೆಯುವ ಸಾಕ್ಷ್ಯಗಳು ಇಲ್ಲದಿದ್ದಲ್ಲಿ) ಸತ್ಯವೆಂದೇ ಪರಿಗಣಿಸಬೇಕು ಎಂಬುದು ಕಾನೂನಿನ ನಿಲುವು. ಒಂದು ವೇಳೆ ಈ ಪ್ರಕರಣದ ಆರೋಪಿಗಳು ತಿಳಿಸಿರುವಂತೆ ಆಕೆ ವೇಶ್ಯಾವೃತ್ತಿಯಲ್ಲಿ ತೊಡಗಿದ್ದಳು ಎಂಬುದು ನಿಜವೇ ಆದರೂ, ಆ ಅಂಶ ಅವಳ ಒಪ್ಪಿಗೆಯಿಲ್ಲದೆ ಅವಳ ಮೇಲೆ ಅತ್ಯಾಚಾರವೆಸಗಲು ಅವರಿಗೆ ಯಾವುದೇ ಹಕ್ಕು ನೀಡುವುದಿಲ್ಲ.

ಈ ಪ್ರಕರಣದಲ್ಲಿ ಆಕೆಯ ಹೇಳಿಕೆಯನ್ನು ಪುಷ್ಟೀಕರಿಸುವ ದಾಖಲೆಗಳೂ, ಸಾಕ್ಷಿಗಳ ಹೇಳಿಕೆಗಳೂ ಇದ್ದವು. ಆದಾಗ್ಯೂ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಪೊಲೀಸು ತನಿಖಾಧಿಕಾರಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗದಿದ್ದಿದ್ದರೆ ಆರೋಪಿಗಳು ಶಿಕ್ಷೆಯನ್ನು ತಪ್ಪಿಸಿಕೊಂಡುಬಿಡುತ್ತಿದ್ದರು.

ಮಹಿಳೆ ವೇಶ್ಯಾವೃತ್ತಿಯಲ್ಲಿ ತೊಡಗಿದ್ದರೂ, ಅವಳಿಗೂ ಖಾಸಗಿತನದ ಹಕ್ಕು ಇದೆ. ಅವಳ ದೇಹದ ಮೇಲೆ ಆಕ್ರಮಣ ಮಾಡಲು, ಅವಳ ವೃತ್ತಿಯ ಕಾರಣಕ್ಕೆ, ಯಾರಿಗೂ ಹಕ್ಕು ದೊರೆಯುವುದಿಲ್ಲ. ಯಾರಿಗೂ ಅಥವಾ ಎಲ್ಲರಿಗೂ ತನ್ನನ್ನು ಒಪ್ಪಿಸಿಕೊಳ್ಳಲು ನಿರಾಕರಿಸುವ ಹಕ್ಕು ಆಕೆಗೆ ಇದೆ. ಇತರ ಮಹಿಳೆಯರಂತೆಯೆ ಆಕೆಗೂ ಕಾನೂನಿನ ರಕ್ಷಣೆ ಇದೆ. ಎಲ್ಲಕ್ಕಿಂತ ಹೆಚ್ಚಿಗೆ, ಆಕೆ ವೇಶ್ಯೆ ಎಂಬ ಕಾರಣಕ್ಕೆ ಆಕೆಯ ಸಾಕ್ಷ್ಯವನ್ನು ಅಲ್ಲಗಳೆಯಲಾಗದು. ಈ ಅಂಶಗಳನ್ನು ಸರ್ವೋಚ್ಚ ನ್ಯಾಯಾಲಯ ಹಿಂದಿನ ಅನೇಕ ಪ್ರಕರಣಗಳಲ್ಲಿ ಸ್ಪಷ್ಟಪಡಿಸಿದೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *