ಕಾನೂನು ಕನ್ನಡಿ/ಮೋಸದ ವಿಚ್ಛೇದನೆ: ನ್ಯಾಯಾಲಯದಿಂದ ಛೀಮಾರಿ – ಡಾ.ಗೀತಾ ಕೃಷ್ಣಮೂರ್ತಿ
ವಿವಾಹ ಹೇಗೆ ಒಂದು ಸಾಮಾಜಿಕ ವ್ಯವಸ್ಥೆಯ ಭಾಗವಾಗಿದೆಯೋ, ಹಾಗೆಯೇ ಇತ್ತೀಚಿನ ದಿನಗಳಲ್ಲಿ ವಿಚ್ಛೇದನೆಯೂ ಸಾಮಾಜಿಕ ವ್ಯವಸ್ಥೆಯ ಒಂದು ಭಾಗವಾಗಿ ಒಪ್ಪಿತವಾಗಿಬಿಟ್ಟಿದೆ. ಆದರೂ ಕೆಲವೊಮ್ಮೆ ಮಹಿಳೆಯರು ವಿಚ್ಛೇದನದ ಸಂದರ್ಭದಲ್ಲಿ ಮೋಸ ಹೋಗುವುದುಂಟು. ಹೀಗೆ ಮೋಸದ ಪ್ರಯತ್ನಕ್ಕೆ ಗುರಿಯಾಗದಿರಲು ಮಹಿಳೆಯರಿಗೆ ಅಗತ್ಯವಾಗಿ ಬೇಕಾಗಿರುವುದು ಕಾನೂನಿನ ಸಾಕ್ಷರತೆ. ತನಗಿರುವ ಹಕ್ಕುಗಳ ಬಗೆಗಿನ ತಿಳಿವಳಿಕೆ.
ವಿವಾಹ ಹೇಗೆ ಒಂದು ಸಾಮಾಜಿಕ ವ್ಯವಸ್ಥೆಯ ಭಾಗವಾಗಿದೆಯೋ, ಹಾಗೆಯೇ ಇತ್ತೀಚಿನ ದಿನಗಳಲ್ಲಿ ವಿಚ್ಛೇದನೆಯೂ ಸಾಮಾಜಿಕ ವ್ಯವಸ್ಥೆಯ ಒಂದು ಭಾಗವಾಗಿ ಒಪ್ಪಿತವಾಗಿಬಿಟ್ಟಿದೆ. ಮಗ ಅಥವಾ ಮಗಳ ವಿವಾಹವಾಯಿತು ಎಂದು ಹೇಳುವಷ್ಟೇ ಸಹಜವಾಗಿ ಮಗ ಅಥವಾ ಮಗಳ ವಿವಾಹ ವಿಚ್ಛೇದನೆಯಲ್ಲಿ ಕೊನೆಗೊಂಡಿತು ಎಂದು ಹೇಳುವಷ್ಟು ಮಟ್ಟಿಗೆ ಪೋಷಕರೂ ಇದನ್ನು ಒಪ್ಪಿಕೊಂಡುಬಿಟ್ಟಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುವುದು ವಿವಾಹ ಬಂಧನದಿಂದ ಹೊರಬರುವ ಸುಗಮ ಮಾರ್ಗ. ಆದರೆ ವಿಚ್ಛೇದನೆಗೆ ಪತಿ ಮತ್ತು ಪತ್ನಿ ಇಬ್ಬರಲ್ಲಿ ಒಬ್ಬರ ಒಪ್ಪಿಗೆಯಿದ್ದು ಇನ್ನೊಬ್ಬರ ಒಪ್ಪಿಗೆ ಇಲ್ಲದಾಗ, ವಿಚ್ಛೇದನೆ ಪಡೆಯಲು ಇತರ ಕಾರಣಗಳುಂಟು.
ಈ ಮೊಕದ್ದಮೆಯ ಪಕ್ಷಕಾರರು ವಿವಾಹವಾದದ್ದು 2011 ರ ಮೇ 5 ರಂದು. ವಿವಾಹವಾದ ಎರಡು ವರ್ಷಗಳಲ್ಲಿ ಅವರಿಗೆ ಮಗನೂ ಜನಿಸಿದ. ವಿವಾಹವಾದ ನಂತರದ ನಾಲ್ಕು ವರ್ಷಗಳಲ್ಲಿ ಅವರು ಜಗಳವಾಡದ ದಿನವಿರಲಿಲ್ಲ. ಹಾಗೂ ಹೀಗೂ ವಿವಾಹ ಬಂಧನ ನಾಲ್ಕು ವರ್ಷಗಳ ಕಾಲ ಮುಂದುವರಿಯಿತು. ಆ ನಂತರದಲ್ಲಿ ಒಂದು ದಿನ ಗಂಡ ಪತ್ನಿಯನ್ನು ಮನೆಯಿಂದ ಹೊರ ಹಾಕಿದ. ಆಗ ಅವಳು ಆಶ್ರಯ ಪಡೆದದ್ದು ಅವಳ ತವರು ಮನೆಯಲ್ಲಿ. ಅವಳ ತವರು ಮನೆಯಿದ್ದುದು ರಾಜಾಸ್ಥಾನ ರಾಜ್ಯದ ಶಿರೋಹಿ ಎಂಬಲ್ಲಿ. ಅಲ್ಲಿ ಆಕೆ, 2018 ರಲ್ಲಿ ಹಿಂದೂ ವಿವಾಹ ಅಧಿನಿಯಮದ 9 ನೇ ಪ್ರಕರಣದ ಅಡಿಯಲ್ಲಿ, ದಾಂಪತ್ಯ ಹಕ್ಕುಗಳ ಪೂರ್ವ ಸ್ಥಿತಿ ಸ್ಥಾಪನೆಯ ಆದೇಶ ನೀಡಬೇಕೆಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಳು. -ದಾಂಪತ್ಯ ಹಕ್ಕುಗಳ ಪೂರ್ವ ಸ್ಥಿತಿ ಸ್ಥಾಪನೆಯ ಆದೇಶ ಎಂದರೆ, ಪತಿ ಅಥವಾ ಪತ್ನಿ, ತನ್ನ ಪತ್ನಿಯಿಂದ ಅಥವಾ ಪತಿಯಿಂದ ಸೂಕ್ತ ಕಾರಣವಿಲ್ಲದೆ ದೂರವಿದ್ದರೆ ಮತ್ತು ತನ್ನ ದಾಂಪತ್ಯದ ಕರ್ತವ್ಯಗಳನ್ನು ನಿರ್ವಹಿಸಲು ವಿಫಲರಾಗಿದ್ದರೆ ಮತ್ತು ಹಾಗೆ ದೂರ ಉಳಿಯುವುದಕ್ಕೆ ಇರುವ ಕಾರಣ ಸಮರ್ಥನೀಯವಲ್ಲ ಎಂದು ನ್ಯಾಯಾಲಯಕ್ಕೆ ಮನದಟ್ಟಾದರೆ, ಆಗ, ನ್ಯಾಯಾಲಯ, ಹಾಗೆ ದೂರ ಉಳಿದ ವ್ಯಕ್ತಿಗೆ ತನ್ನ ಪತ್ನಿಯೊಡನೆ ಅಥವಾ ಪತಿಯೊಡನೆ ಸಹವಾಸವನ್ನು ಪ್ರಾರಂಭಿಸುವಂತೆ ನೀಡುವ ಆದೇಶ. -ಪತ್ನಿ ಅರ್ಜಿ ಸಲ್ಲಿಸಿದುದು, ತನ್ನೊಂದಿಗೆ ಬಾಳುವಂತೆ ತನ್ನ ಪತಿಗೆ ಇಂಥ ಆದೇಶ ನೀಡಬೇಕೆಂದು ಕೋರಿ. ಆದರೆ, ಈ ಅರ್ಜಿಯನ್ನು ಸಲ್ಲಿಸಿದ ನಂತರ ಅವಳಿಗೆ ತಿಳಿದು ಬಂದ ಅಂಶ ಅವಳನ್ನು ದಿಗ್ಭ್ರಾಂತಳನ್ನಾಗಿಸಿತು. ಅವಳ ಗಂಡ ಆ ವೇಳೆಗೆ ಆಗಲೇ, ಎಂದರೆ, 2016 ರಲ್ಲಿಯೇ, ಹುಬ್ಬಳ್ಳಿಯ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, 07-08-2017 ರಂದೇ ವಿಚ್ಛೇದನೆಯ ಡಿಕ್ರಿಯನ್ನೂ ಪಡೆದುಕೊಂಡುಬಿಟ್ಟಿದ್ದ! ಈ ಅನಿರೀಕ್ಷಿತ ಆಘಾತದಿಂದ ಚೇತರಿಸಿಕೊಂಡ ಪತ್ನಿ, ನ್ಯಾಯಾಲಯದ ತೀರ್ಪಿನ ಪ್ರಮಾಣೀಕೃತ ಪ್ರತಿಯನ್ನು ಪಡೆದುಕೊಂಡಳು.
ಕುಟುಂಬ ನ್ಯಾಯಾಲಯ ನೀಡಿದ ವಿಚ್ಛೇದನೆಯ ಡಿಕ್ರಿಯನ್ನು ವಿರೋಧಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪತ್ನಿ ಮೇಲ್ಮನವಿಯನ್ನು ಸಲ್ಲಿಸಿದಳು.
ವಿಚಾರಣೆಯ ಕಾಲದಲ್ಲಿ, ಗಂಡ, ಹುಬ್ಬಳ್ಳಿ ಕುಟುಂಬ ನ್ಯಾಯಾಲಯಕ್ಕೆ ಪತ್ನಿಯ ವಿಳಾಸವನ್ನು ತಪ್ಪಾಗಿ ಕೊಟ್ಟಿದ್ದ, ಅವಳ ತವರಿನ ಊರಿನ ಹೆಸರನ್ನು ಶಿರೋಹಿ ಎಂಬುದರ ಬದಲು ಶಿರೋನಿ ಎಂಬುದಾಗಿ ನೀಡಿದ್ದ ಮತ್ತು ನ್ಯಾಯಾಲಯದಿಂದ ಕಳುಹಿಸಲಾಗಿದ್ದ ನೋಟೀಸಿನ ಮೇಲೆ, ‘ನೋಟೀಸನ್ನು ಸ್ವೀಕರಿಸಲು ನಿರಾಕರಿಸಲಾಗಿದೆ’ ಎಂಬ ಹಿಂಬರಹವನ್ನು ನೀಡಲಾಗಿದೆ ಎಂಬ ತಪ್ಪು ಮಾಹಿತಿಯನ್ನು ನೀಡಿದ್ದ ಎಂಬ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಈ ಸುಳ್ಳುಗಳ ಆಧಾರದ ಮೇಲೆ ಕುಟುಂಬ ನ್ಯಾಯಾಲಯದಿಂದ ವಿಚ್ಛೇದನೆಯ ಡಿಕ್ರಿಯನ್ನು ಪಡೆದುಕೊಂಡಿದ್ದ ಎಂಬುದನ್ನೂ ಉಚ್ಚ ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡಲಾಯಿತು.
ಉಚ್ಚ ನ್ಯಾಯಾಲಯ, ವಿಚಾರಣೆಯ ಸಮಯದಲ್ಲಿ ಪತಿ ಹಾಜರಿರಬೇಕು ಎಂದು ಆದೇಶ ನೀಡಿತು. ಆದರೆ ವಿಚಾರಣೆಯ ಸಮಯದಲ್ಲಿ ಪತಿ ಹಾಜರಿರಲಿಲ್ಲ. ಆತನ ವಕೀಲರು, ಆತನ ಗೈರುಹಾಜರಿಗೆ, ತನ್ನ ಕಕ್ಷಿದಾರ ತನಗೆ ನೀಡಿದ್ದ ಎರಡು ಮೊಬೈಲ್ ನಂಬರುಗಳೂ ಸ್ಥಗಿತವಾಗಿವೆ, ಹಾಗಾಗಿ ತಾನು ಆತನನ್ನು ಸಂಪರ್ಕಿಸಲಾಗಲಿಲ್ಲ ಎಂಬ ಕಾರಣವನ್ನು ನೀಡಿದರು.
‘ಈ ಎಲ್ಲ ವಿವರಗಳಿಂದ, ವಿಚ್ಛೇದನೆಯ ಅರ್ಜಿಯನ್ನು ವಿರೋಧಿಸಲು ಪತ್ನಿಗೆ ಇದ್ದ ಹಕ್ಕನ್ನು ಕಸಿದುಕೊಳ್ಳಲು ಮತ್ತು ತನಗಾಗಿ ಮತ್ತು ಈ ವಿವಾಹದಿಂದ ಹುಟ್ಟಿದ ತಮ್ಮ ಮಗುವಿಗಾಗಿ ಜೀವನಾಂಶವನ್ನು ಕ್ಲೇಮು ಮಾಡುವ ಹಕ್ಕನ್ನು ಅವಳಿಂದ ಕಸಿದುಕೊಳ್ಳಲು ಪತಿ ಸುಳ್ಳುಗಳ ಈ ಸರಮಾಲೆಯನ್ನು ಹೆಣೆದಿದ್ದ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ’ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಅಲ್ಲದೆ, ‘ಕೆಳ ನ್ಯಾಯಾಲಯವೂ ಸಹ ಲಭ್ಯವಿರುವ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಣೆ ಮಾಡುವಲ್ಲಿ ವಿಫಲವಾಗಿದೆ ಮತ್ತು ವಿಚ್ಛೇದನೆ ಡಿಕ್ರಿಯನ್ನು ನೀಡುವಾಗ ಗಮನಿಸಬೇಕಾದ ಕಾನೂನು ಉಪಬಂಧಗಳಿಗೆ ಗಮನ ನೀಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ, ಈ ತೀರ್ಪನ್ನು ತಳ್ಳಿ ಹಾಕಲಾಗಿದೆ’ ಎಂದು ಅಭಿಪ್ರಾಯ ಪಟ್ಟಿದೆ.
ಈ ತೀರ್ಮಾನದೊಂದಿಗೆ ಇದನ್ನು ಮತ್ತೆ ವಿಚಾರಣೆ ನಡೆಸುವಂತೆ ಸೂಚಿಸಿ ಈ ಪ್ರಕರಣವನ್ನು ಕೆಳ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಇದರ ವಿಚಾರಣೆ ಮತ್ತಷ್ಟು ತಡವಾಗಿ ಪತ್ನಿ ಮತ್ತು ಮಗುವಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ, ವಿಚಾರಣೆಯ ದಿನಾಂಕವನ್ನೂ ಉಚ್ಚ ನ್ಯಾಯಾಲಯವೇ ನಿಗದಿಪಡಿಸಿ, ಮೊದಲು ಪತ್ನಿ ಮತ್ತು ಮಗುವಿಗೆ ಸಂದಾಯವಾಗಬೇಕಾದ ಜೀವನಾಂಶವನ್ನು ನಿರ್ಧರಿಸುವುದಕ್ಕೆ ಗಮನ ನೀಡಬೇಕೆಂದೂ ಸಹ ಸೂಚನೆ ನೀಡಿದೆ. ಹೆಚ್ಚಿನ ವಿಳಂಬವನ್ನು ತಪಿಸುವುದಕ್ಕಾಗಿ, ನಿಗದಿ ಪಡಿಸಿದ ದಿನಾಂಕದಂದು ಪಕ್ಷಕಾರರಿಬ್ಬರೂ ವಿಚಾರಣೆಯ ದಿನ ಹಾಜರಿರುವಂತೆಯೂ ಸೂಚಿಸಲಾಯಿತು.
ಹಿಂದೂ ವಿವಾಹ ಕಾನೂನಿನ ಪ್ರಕಾರ, ಎರಡು ರೀತಿಯಲ್ಲಿ ಪತಿ ಪತ್ನಿಯರು ವಿವಾಹ ಬಂಧನದಿಂದ ಹೊರಗೆ ಬರಬಹುದು. ದೋಷಾರೋಪಣೆಯ(ಕಾನೂನಿನಲ್ಲಿ ನಮೂದಿಸಿರುವ ಯಾವುದೇ ಒಂದು ಕಾರಣವನ್ನು ತೋರಿಸುವ) ಮೂಲಕ, ಅದನ್ನು ಸಾಬೀತು ಪಡಿಸಿ, ವಿಚ್ಛೇದನೆ ಪಡೆಯುವುದು. ಇಲ್ಲವೇ, ಇಬ್ಬರೂ ಪರಸ್ಪರ ಒಪ್ಪಿ ವಿಚ್ಛೇದನೆ ಪಡೆಯುವ ಮೂಲಕ ವಿವಾಹ ಬಂಧನದಿಂದ ಹೊರ ಬರುವುದು. ಕೆಲವೊಮ್ಮೆ, ಕಾನೂನಿನಲ್ಲಿ ನಮೂದಿಸಿರುವ ಯಾವುದೇ ಕಾರಣ(ದೋಷ)ವಿಲ್ಲದೆಯೂ, ಹೊಂದಾಣಿಕೆಯೇ ಇಲ್ಲದ ಕಾರಣದಿಂದ ವಿವಾಹ ಸಂಬಂಧ ಅಸಹನೀಯವಾಗಿ, ಅದರಿಂದ ಹೊರ ಬಂದರೆ ಸಾಕೆನಿಸುವ ಅನೇಕ ಪ್ರಕರಣಗಳಿವೆ. ಆದರೆ, ಪ್ರಸ್ತುತ, ‘ಹೊಂದಾಣಿಕೆಯಿಲ್ಲದಿರುವುದರಿಂದ ವಿವಾಹ ಸರಿಪಡಿಸಲಾಗದಂತೆ ಮುರಿದು ಬಿದ್ದಿದೆ’ ಎಂಬ ಕಾರಣಕ್ಕೆ ವಿಚ್ಛೇದನೆ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಇಂಥ ಪ್ರಕರಣಗಳಲ್ಲಿ, ಕಾನೂನಿನಲ್ಲಿ ನಮೂದಿಸಿರುವ ಕಾರಣಗಳ ಆಧಾರದ ಮೇಲೆಯೇ ವಿಚ್ಛೇದನೆ ಪಡೆಯಬೇಕಾಗುತ್ತದೆ. ಅಂಥ ಸಂದರ್ಭಗಳಲ್ಲಿ, ವಿಚ್ಛೇದನೆ ದೊರೆಯುವುದು ವಿಳಂಬವಾಗುವುದು, ಅತಿ ವಿಳಂಬವಾಗುವುದೂ ಸಾಮಾನ್ಯ. ಹಾಗಾಗಿ, ಅನೇಕ ಬಾರಿ, ವಿಚ್ಛೇದನೆ ಬಯಸುವ ಪತಿ ಅಥವಾ ಪತ್ನಿ ಹತಾಶರಾಗುತ್ತಾರೆ. ವಿಫಲ ವಿವಾಹದಿಂದ ಹೊರಬರಲಾರದ, ವಿಚ್ಛೇದನೆ ದೊರೆಯದ ಕಾರಣ ಹೊಸ ಬದುಕನ್ನು ಕಟ್ಟಿಕೊಳ್ಳಲಾರದ ಪರಿಸ್ಥಿತಿ ಇಂಥ ಹತಾಶೆಗೆ ಕಾರಣವಾಗುತ್ತದೆ.
ಇಲ್ಲಿ ಕುಟುಂಬ ನ್ಯಾಯಾಲಯ ನೀಡಿದ ತೀರ್ಪನ್ನು ಉಚ್ಚ ನ್ಯಾಯಾಲಯ ವಿಪರ್ಯಯಗೊಳಿಸಿದೆ. ನ್ಯಾಯ ಪ್ರದಾನ ವ್ಯವಸ್ಥೆಯಲ್ಲಿ, ಕೆಳ ನ್ಯಾಯಾಲಯದ ತೀರ್ಪನ್ನು ಮೇಲಿನ ನ್ಯಾಯಾಲಯ ರದ್ದುಗೊಳಿಸುವುದು ಅಪರೂಪವೂ ಅಲ್ಲ. ಆದರೆ, ಯಾವುದೇ ಸಂದರ್ಭದಲ್ಲಿಯೂ, ಸುಳ್ಳಿನ ಮೊರೆ ಹೋಗಿ ನ್ಯಾಯ ದಕ್ಕಿಸಿಕೊಳ್ಳುವುದು ಸಾಧ್ಯವಿಲ್ಲ. ಅದನ್ನು ನ್ಯಾಯಾಲಯ ಪ್ರೋತ್ಸಾಹಿಸುವುದೂ ಇಲ್ಲ, ಸಹಿಸುವುದೂ ಇಲ್ಲ.
ಹಿಂದೂ ಕೌಟುಂಬಿಕ ಕಾನೂನುಗಳ ಪ್ರಕಾರ, ಪತ್ನಿಗೆ ಮತ್ತು ಮಗುವಿಗೆ ಇರುವ ಹಕ್ಕನ್ನು ಕಸಿದು ಕೊಳ್ಳುವುದು ಯಾವುದೇ ನ್ಯಾಯಸಮ್ಮತ ಕಾರಣಕ್ಕೂ ಸಾಧ್ಯವಾಗುವುದಿಲ್ಲ. ಈ ಪ್ರಕರಣದಲ್ಲಿ ಪತಿ ಮಾಡಿದುದು ಇಂಥ ಪ್ರಯತ್ನವನ್ನು. ಇಂಥ ಮೋಸದ ಪ್ರಯತ್ನಕ್ಕೆ ಗುರಿಯಾಗದಿರಲು ಮಹಿಳೆಯರಿಗೆ ಅಗತ್ಯವಾಗಿ ಬೇಕಾಗಿರುವುದು ಕಾನೂನಿನ ಸಾಕ್ಷರತೆ. ತನಗಿರುವ ಹಕ್ಕುಗಳ ಬಗೆಗಿನ ತಿಳಿವಳಿಕೆ.
ನ್ಯಾಯಾಲಯದ ಇಂಥ ತೀರ್ಪುಗಳು ಕಾನೂನಿನಲ್ಲಿ ಮತ್ತೆ ಮತ್ತೆ ಭರವಸೆಯನ್ನು ಮೂಡಿಸುತ್ತವೆ, ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಸಮ್ಮತವಾಗಿ ದಕ್ಕಬೇಕಾದುದನ್ನು ದಕ್ಕಿಸಿಕೊಳ್ಳಲು ಅಗತ್ಯವಾದ ಆತ್ಮ ಸ್ಥೈರ್ಯವನ್ನು ನೀಡುತ್ತವೆ.
***

ಡಾ.ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.