ಕಾನೂನು ಕನ್ನಡಿ/ ಮಾನಸಿಕ ಅಸ್ವಸ್ಥತೆ ವಿಚ್ಛೇದನೆಗೆ ಕಾರಣವೇ? – ಡಾ. ಗೀತಾ ಕೃಷ್ಣಮೂರ್ತಿ

ಸಹಜವಾದ ವೈವಾಹಿಕ ಜೀವನವನ್ನು ನಡೆಸಲು ಅಸಾಧ್ಯ ಎನ್ನುವಂಥ ಮತ್ತು ಔಷಧ ಸೇವನೆಯಿಂದಲೂ ವಾಸಿಯಾಗುವ ಯಾವುದೇ ಭರವಸೆಯಿಲ್ಲದಂಥ ಮಾನಸಿಕ ಅಸ್ವಸ್ಥತೆಯನ್ನು ಮಾತ್ರ ‘ವಾಸಿಯಾಗದ ಮಾನಸಿಕ ಅಸ್ವಸ್ಥತೆ’ ಎಂದು ಭಾವಿಸಿ ವಿಚ್ಛೇದನೆಗೆ ಕಾರಣ ಎಂದು ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಹಿಂದೂ ವಿವಾಹ ಅಧಿನಿಯಮದ ಅಡಿಯಲ್ಲಿ ಮಾನಸಿಕ ಅಸ್ವಸ್ಥತೆ ವಿಚ್ಛೇದನೆ ಪಡೆಯಲು ಇರುವ ಕಾರಣಗಳಲ್ಲಿ ಒಂದು. ಆದರೆ ಅಂಥ ಮಾನಸಿಕ ಅಸ್ವಸ್ಥತೆಯ ಸ್ವರೂಪ ಹೇಗಿರಬೇಕು? ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದಿದ್ದ ಒಂದು ಪ್ರಕರಣದಲ್ಲಿ ನೀಡಿರುವ ತೀರ್ಪು ಈ ಬಗ್ಗೆ ಬೆಳಕು ಚೆಲ್ಲುತ್ತದೆ.
ಈ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯದ ಮುಂದೆ ಇದ್ದದ್ದು ಎರಡು ತೀರ್ಪುಗಳು. ಒಂದು, ಹೆಂಡತಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ, ಹಾಗಾಗಿ ಅವಳೊಡನೆ ವಿವಾಹ ಜೀವನವನ್ನು ಮುಂದುವರೆಸುವುದು ಸಾಧ್ಯವಿಲ್ಲ, ಆದ್ದರಿಂದ ಅವಳಿಂದ ತನಗೆ ವಿಚ್ಛೇದನೆ ಬೇಕು ಎಂದು ಕೋರಿದ್ದ ಗಂಡನ ಮನವಿಯನ್ನು ಪುರಸ್ಕರಿಸಿ, ವಿಚ್ಛೇದನೆಗೆ ಅನುಮತಿ ನೀಡಿದ ವಿಚಾರಣಾ ನ್ಯಾಯಾಲಯದ ತೀರ್ಪು.
ಮತ್ತೊಂದು, ಈ ತೀರ್ಪನ್ನು ಪ್ರಶ್ನಿಸಿ, ತನಗೆ ತೀವ್ರತರವಾದ ಯಾವುದೇ ಮಾನಸಿಕ ಅಸ್ವಸ್ಥತೆಯಿಲ್ಲ ಎಂಬುದನ್ನು ವೈದ್ಯಕೀಯ ವರದಿಗಳೊಂದಿಗೆ ಸಮರ್ಥಿಸಿಕೊಂಡು, ವಿಚ್ಛೇದನೆಯ ಡಿಕ್ರಿಯನ್ನು ರದ್ದುಗೊಳಿಸಬೇಕು ಮತ್ತು ದಾಂಪತ್ಯ ಹಕ್ಕುಗಳ ಪೂರ್ವಸ್ಥಿತಿ ಸ್ಥಾಪನೆಗೆ ಆದೇಶ ನೀಡಬೇಕೆಂದು ಸಲ್ಲಿಸಿದ ಅಪೀಲಿನ ವಿಚಾರಣೆ ನಡೆಸಿ, ವಿಚ್ಛೇದನೆಯ ಡಿಕ್ರಿಯನ್ನು ರದ್ದುಗೊಳಿಸಿ, ಅಪೀಲುದಾರಳ ಕೋರಿಕೆಯಂತೆ ದಾಂಪತ್ಯ ಹಕ್ಕುಗಳ ಪೂರ್ವಸ್ಥಿತಿ ಸ್ಥಾಪನೆಗೆ ಆದೇಶ ನೀಡಿದ ಉಚ್ಚ ನ್ಯಾಯಾಲಯದ ತೀರ್ಪು.

ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದು ಆಕೆಯ ಗಂಡ.

ಒಂದು ಕಾಲದಲ್ಲಿ ‘ಹುಚ್ಚು’ ಎಂಬ ಪದವೇ ಬೆಚ್ಚಿ ಬೀಳಿಸುತ್ತಿತ್ತು. ಅದರಿಂದ ಮುಕ್ತಿಯೇ ಇಲ್ಲ, ಅದು ಪೂರ್ವ ಜನ್ಮದ ಕರ್ಮ ಫಲ, ಇತ್ಯಾದಿ, ಇತ್ಯಾದಿ ತಪ್ಪು ಕಲ್ಪನೆಗಳೇ ತುಂಬಿರುತ್ತಿತ್ತು. ಆದರೆ ಅದೊಂದು ಮಾನಸಿಕ ಸ್ಥಿತಿ, ಸೂಕ್ತವಾದ ಚಿಕಿತ್ಸೆ ಹಾಗೂ ಕುಟುಂಬದವರ ಸಹಕಾರದಿಂದ ಅಂಥ ಮಾನಸಿಕ ಸ್ಥಿತಿಯನ್ನು ಬಹುಪಾಲು ಸಂದರ್ಭಗಳಲ್ಲಿ ಗುಣಪಡಿಸಬಹುದು ಎಂಬುದು ಈಗ ವ್ಶೆಜ್ಞಾನಿಕವಾಗಿ ಸಾಬೀತಾಗಿರುವ ಸಂಗತಿ. ಆದರೆ ಕೆಲವೊಂದು ಪ್ರಕರಣಗಳು ಇದಕ್ಕೆ ಅಪವಾದ, ಎಂದರೆ ವಾಸಿ ಮಾಡಲಾಗದ ತೀವ್ರ ಸ್ವರೂಪದ್ದಾಗಿದ್ದು, ವಾಸಿ ಮಾಡಲಾಗದ್ದಾಗಿರಬಹುದು. ಹಾಗಾಗಿ, ಹಿಂದೂ ವಿವಾಹ ಅಧಿನಿಯಮದ ಅಡಿಯಲ್ಲಿ ವಿಚ್ಛೇದನೆ ಪಡೆಯಲು ಇದನ್ನೂ ಒಂದು ಕಾರಣವನ್ನಾಗಿ ಸೇರಿಸಲಾಗಿದೆ.

ಹಿಂದೆ ‘ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು’ ಎಂಬುದು ನಾಣ್ಣುಡಿಯಂತೆ ಜನಜನಿತವಾಗಿತ್ತು. ಹಾಗೆಯೇ ‘ಮದುವೆ ಆಗುವವರೆಗೆ ಹುಚ್ಚು ಬಿಡಲ್ಲ, ಹುಚ್ಚು ಬಿಟ್ಟ ಹೊರತು ಮದುವೆ ಆಗಲ್ಲ’ ಎಂಬ ಮಾತೂ ಜನಜನಿತವಾಗಿತ್ತು. ಮದುವೆಯನ್ನು ವಧೂವರರ ಪರವಾಗಿ ಹಿರಿಯರೇ ನಿಶ್ಚಯಿಸುತ್ತಿದ್ದ ಕಾಲದಲ್ಲಿ ಮತ್ತು ಒಮ್ಮೆ ಮದುವೆಯಾಗಿಬಿಟ್ಟರೆ, ಪತಿ ಪತ್ನಿಯರನ್ನು ಬೇರ್ಪಡಿಸುವುದು ಸಾವು ಮಾತ್ರ ಎಂಬಂಥ ಕಾಲದಲ್ಲಿ ಮೇಲಿನ ಎರಡೂ ನಾಣ್ಣುಡಿಗಳಿಗೆ ಚಲಾವಣೆಯಿತ್ತು. ಆದರೆ ಕಾಲ ಸರಿದಂತೆ, ಸಾಮಾಜಿಕ ಮೌಲ್ಯಗಳು ಬದಲಾದಂತೆ ಈ ಬಗೆಗಿನ ದೃಷ್ಟಿಕೋನವೂ ಬದಲಾಯಿತು. 1955 ರಲ್ಲಿ ಹಿಂದೂ ವಿವಾಹ ಅಧಿನಿಯಮ ಜಾರಿಯಲ್ಲಿ ಬಂದ ನಂತರವಂತೂ ವಿವಾಹದ ಪರಿಕಲ್ಪನೆ ಹಾಗೂ ನಿಯಮಗಳು ಹೊಸ ಆಯಾಮವನ್ನೇ ಪಡೆದುಕೊಂಡವು. ಆವರೆಗೆ ಜಾರಿಯಲ್ಲಿದ್ದ ಅನೇಕ ಪದ್ಧತಿಗಳು ಜಾರಿಯಾದ ವಿವಾಹ ಕಾನೂನಿನ ಪ್ರಕಾರ ಕಾನೂನು ಬಾಹಿರವೆನಿಸಿಕೊಂಡವು, ಸುಳ್ಳು ಹೇಳಿ ಮೋಸಮಾಡಿ ಮದುವೆ ಮಾಡುವುದಂತೂ ಅಪರಾಧವೇ ಆದವು.

ಈ ಪ್ರಕರಣದ ಪಕ್ಷಕಾರರ ವಿವಾಹ ನೆರವೇರಿದುದು 1995 ರಲ್ಲಿ ಆಂಧ್ರ ಪ್ರದೇಶದ ಕಾಕಿನಾಡದಲ್ಲಿ. ವಿವಾಹವನ್ನು ಹಿಂದೂ ಸಂಪ್ರದಾಯದ ಪ್ರಕಾರ ನೆರವೇರಿಸಲಾಗಿತ್ತು. ಇಬ್ಬರೂ ಉನ್ನತ ವ್ಯಾಸಂಗ ಪಡೆದವರು, ವೈದ್ಯರು. ಪತಿ ನವದೆಹಲಿಯ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದುದರಿಂದ ಪತ್ನಿಯೂ ನವದೆಹಲಿಗೆ ಸ್ಥಳಾಂತರಗೊಂಡು, ಅದೇ ಸಂಸ್ಥೆಯಲ್ಲಿ ವ್ಶೆದ್ಯೆಯಾಗಿ ತಮ್ಮ ವೈದ್ಯ ವೃತ್ತಿಯನ್ನು ಮುಂದುವರೆಸಿದಳು. ಈ ಮಧ್ಯೆ ಗಂಡನ ಅಣ್ಣನ ಸಾವಿನಿಂದಾಗಿ ಇಬ್ಬರೂ ಅತೀವವಾದ ಮಾನಸಿಕ ಕ್ಷೋಭೆಗೆ ಮತ್ತು ಖಿನ್ನತೆಗೆ ಒಳಗಾದರು ಮತ್ತು ಅದಕ್ಕಾಗಿ ಚಿಕಿತ್ಸೆಗೂ ಒಳಗಾಗಬೇಕಾಯಿತು. ಈ ಎಲ್ಲ ಘಟನೆಗಳಿಂದಾಗಿ ಇಬ್ಬರೂ ದೆಹಲಿಯ ತಮ್ಮ ಉದ್ಯೋಗವನ್ನು ತೊರೆದರು.

ಆ ನಂತರದಲ್ಲಿ ಪತಿ ಸಿಕಂದರಾಬಾದಿನ ಗಾಂಧಿ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದ. ಪತ್ನಿಯ ಹೇಳಿಕೆಯ ಪ್ರಕಾರ, ಈ ಎಲ್ಲ ಪಲ್ಲಟಗಳಿಂದಾಗಿ ಅವರ ಸಂಸಾರದಲ್ಲಿ ಬಿರುಕುಂಟಾಯಿತು. ವಿವಾಹದ ಒಂದು ವರ್ಷದ ನಂತರ, ಮಾವ ಹಾಗೂ ಗಂಡ ಅವಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದರು. ಆ ನಂತರದಲ್ಲಿ ಆಕೆಯ ಹೆಸರಿನಲ್ಲಿರುವ ಮನೆಯನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಬೇಕೆಂದು ಪತಿ ಒತ್ತಾಯ ಮಾಡಿದುದಾಗಿ ಮತ್ತು ತಾನು ಅದನ್ನು ನಿರಾಕರಿಸಿದುದಾಗಿ ಹೇಳಿದ್ದಾಳೆ. 1998 ರಲ್ಲಿ ಪತ್ನಿ ಸ್ಕಿಸೊಫ್ರೇನಿಯಾ ಎಂಬ ಮಾನಸಿಕ ರೋಗದಿಂದ ನರಳುತ್ತಿದ್ದಾಳೆಂದೂ ಮತ್ತು ಆತ್ಮಹತ್ಯಾ ಮನೋಭಾವವನ್ನು ಹೊಂದಿದ್ದಾಳೆಂದೂ, ಆ ಕಾರಣಕ್ಕೆ ತನಗೆ ಅವಳ ಜೊತೆ ಬಾಳಲು ಸಾಧ್ಯವಿಲ್ಲವೆಂದೂ, ತನಗೆ ಅವಳಿಂದ ವಿಚ್ಛೇದನ ಬೇಕೆಂದೂ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ.

ಆದರೆ ಈ ಎಲ್ಲ ಆರೋಪಗಳನ್ನೂ ಪತ್ನಿ ನಿರಾಕರಿಸಿದ್ದೇ ಅಲ್ಲದೆ, ತನ್ನ ಗಂಡನಿಗೆ ಹೆಚ್ಚಿನ ವರದಕ್ಷಿಣೆ ಪಡೆದು ಇನ್ನೊಂದು ವಿವಾಹವಾಗುವ ಉದ್ದೇಶವಿದೆ, ಆದ್ದರಿಂದ ತನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಈ ಅರ್ಜಿಯನ್ನು ಸಲ್ಲಿಸಿದ್ದಾನೆ ಎಂದು ದೂರಿದಳು. ತನ್ನ ಸಹವಾಸದಿಂದ ದೂರ ಉಳಿಯಲು ಮತ್ತು ವಿಚ್ಛೇದನೆ ಕೋರಲು ಆತನಿಗೆ ಯಾವುದೇ ಹಕ್ಕು ಇಲ್ಲವೆಂದು, ದಾಂಪತ್ಯ ಹಕ್ಕುಗಳ ಪೂರ್ವ ಸ್ಥಿತಿ ಸ್ಥಾಪನೆಗೆ ಆದೇಶ ನೀಡಬೇಕೆಂದೂ ಪ್ರತ್ಯರ್ಜಿಯನ್ನು ಸಲ್ಲಿಸಿದಳು.

ಆದರೆ, ವಿಚಾರಣಾ ನ್ಯಾಯಾಲಯ, ಪತಿಯ ವಿಚ್ಛೇದನೆಯ ಅರ್ಜಿಯನ್ನು ಪುರಸ್ಕರಿಸಿತು. ಇದಕ್ಕೆ ಅದು ಎರಡು ಕಾರಣ ನೀಡಿತು – ವಿವಾಹಕ್ಕೆ ಮುನ್ನ ತನಗಿದ್ದ ಖಾಯಿಲೆಯ ಬಗ್ಗೆ ತಿಳಿಸದೆ ವಿಷಯವನ್ನು ಮುಚ್ಚಿಡಲಾಗಿತ್ತು ಎಂಬುದು ಒಂದು. ಈ ಕಾರಣಕ್ಕಾಗಿ ಪತ್ನಿಗೆ ದಾಂಪತ್ಯ ಹಕ್ಕುಗಳ ಪೂರ್ವಸ್ಥಿತಿ ಸ್ಥಾಪನೆಗೆ ಆದೇಶ ನೀಡಲಾಗುವುದಿಲ್ಲವೆಂದು ತಿಳಿಸಿತು. ಇನ್ನೊಂದು -ಹೈದರಾಬಾದಿನ ಸಂಜೀವರೆಡ್ಡಿ ನಗರದಲ್ಲಿರುವ ಸರ್ಕಾರೀ ಮಾನಸಿಕ ಆರೋಗ್ಯ ಆಸ್ಪತ್ರೆ ಪತ್ನಿಯ ಮಾನಸಿಕ ಆರೋಗ್ಯದ ಬಗ್ಗೆ ನೀಡಿರುವ ಪ್ರಮಾಣಪತ್ರ. ಪ್ರಮಾಣ ಪತ್ರದಲ್ಲಿ, ಪತ್ನಿ ಸ್ಕಿಸೋಫ್ರೇನಿಯಾದಿಂದ ನರಳುತ್ತಿದ್ದಾಳೆಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇದರ ಆಧಾರದ ಮೇಲೆ ಈ ಅರ್ಜಿ ವಿಚ್ಛೇದನೆ ನೀಡಲು ಅರ್ಹವಾಗಿದೆಯೆಂದು ವಿಚಾರಣಾ ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಆದರೆ ಪತ್ನಿಗೆ ಈ ತೀರ್ಪು ಆಘಾತಕಾರಿಯಾಗಿತ್ತು. ಆಕೆ, ಈ ತೀರ್ಪಿನಿಂದ ತನಗೆ ಅನ್ಯಾಯವಾಗಿದೆಯೆಂದು ತಿಳಿಸಿ ಆ ತೀರ್ಪನ್ನು ಪ್ರಶ್ನಿಸಿ ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದಳು. ಉಚ್ಚ ನ್ಯಾಯಾಲಯ, ಮನವಿಗಳನ್ನು ಮತ್ತು ಸಾಕ್ಷ್ಯಗಳನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿದ ನಂತರ, ಪತ್ನಿ, ಆಕೆಯ ಗಂಡ ಆರೋಪಿಸಿರುವಂತೆ ಸ್ಕಿಸೋಫ್ರೇನಿಯಾ ಖಾಯಿಲೆಯಿಂದ ಬಳಲುತ್ತಿರಲಿಲ್ಲವೆಂದು ಅಭಿಪ್ರಾಯಪಟ್ಟಿತು. ಮುಂದುವರೆದು, ಒಂದು ವೇಳೆ ಪತಿ ಆರೋಪಿಸಿರುವಂತೆ ಆಕೆ ಸ್ಕಿಸೋಫ್ರೇನಿಯಾದಿಂದ ನರಳುತ್ತಿದ್ದಳು ಎಂದಾದರೂ, ಹಿಂದೂ ವಿವಾಹ ಅಧಿನಿಯಮದ ಪ್ರಕಾರ ವಿಚ್ಛೇದನಕ್ಕೆ ಕಾರಣವಾಗುವಂಥ ಗಂಭೀರ ಸ್ವರೂಪದ ಖಾಯಿಲೆಯಿಂದ ನರಳುತ್ತಿರಲಿಲ್ಲವೆಂದು ಅಭಿಪ್ರಾಯಪಟ್ಟಿತು ಮತ್ತು ಆ ಕಾರಣಕ್ಕೆ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿತು. ಪತ್ನಿ ಕೋರಿದಂತೆ ದಾಂಪತ್ಯ ಹಕ್ಕುಗಳ ಪೂರ್ವ ಸ್ಥಿತಿ ಸ್ಥಾಪನೆಯ ಅದೇಶವನ್ನು ಹೊರಡಿಸಿ, ಗಂಡನಿಗೆ ಹೆಂಡತಿಯ ಜೊತೆಯಲ್ಲಿ ವಾಸಿಸುವಂತೆ ಸೂಚಿಸಿತು.
ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯ ನೀಡಿದ ಈ ತೀರ್ಪನ್ನು ಪ್ರಶ್ನಿಸಿ ಪತಿ ಸರ್ವೊಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ.

ಈಗ ಸರ್ವೋಚ್ಚ ನ್ಯಾಯಾಲಯದ ಮುಂದೆ ಇದ್ದ ಪ್ರಶ್ನೆಗಳು ನಾಲ್ಕು-
-ಪತ್ನಿ ಗಂಭೀರ ಸ್ವರೂಪದ ಮಾನಸಿಕ ಖಾಯಿಲೆಯಿಂದ, ಎಂದರೆ ಸ್ಕಿಸೋಫ್ರೇನಿಯಾದಿಂದ ಅಥವಾ ವಾಸಿಯಾಗದ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದಾಳೆಯೇ?
-ವಿಚಾರಣಾ ನ್ಯಾಯಾಲಯ ನೀಡಿದ್ದ ವಿಚ್ಛೇದನೆಯನ್ನು ರದ್ದುಗೊಳಿಸಿ, ದಾಂಪತ್ಯ ಹಕ್ಕುಗಳ ಪೂರ್ವಸ್ಥಿತಿ ಸ್ಥಾಪನೆಯ ಆದೇಶವನ್ನು ನೀಡುವಾಗ, ಉಚ್ಚ ನ್ಯಾಯಾಲಯ, ಸಲ್ಲಿಸಿದ್ದ ಮನವಿಗಳ ಸತ್ಯಾಸತ್ಯತೆಯನ್ನು ಮತ್ತು ದಾಖಲೆಗಳ ಸಾಕ್ಷ್ಯಗಳನ್ನು ಸರಿಯಾಗಿ ಪರಿಶೀಲಿಸಿತ್ತೇ?
-ಪತಿ ಸಲ್ಲಿಸಿರುವ ಅಪೀಲನ್ನು ಪುರಸ್ಕರಿಸಿ, ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ, ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿಯಬೇಕೆ?
-ಏನೆಂದು ಆದೇಶಿಸಬೇಕು?

ಈ ನಾಲ್ಕೂ ಪ್ರಶ್ನೆಗಳನ್ನು ಸರ್ವೋಚ್ಚ ನ್ಯಾಯಾಲಯ ಪರಿಶೀಲಿಸಿ ವಿಸ್ತøತವಾದ ತೀರ್ಪನ್ನು ನೀಡಿದೆ. ಅದನ್ನಿಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ-
• ಮೊದಲನೆಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸರ್ವೋಚ್ಚ ನ್ಯಾಯಾಲಯ ಆಧರಿಸಿದ್ದು ವೈದ್ಯರ ಹೇಳಿಕೆಯನ್ನು. ಸ್ಕಿಸೋಫ್ರೇನಿಯಾ ಎಂಬುದು, ಚಿಕಿತ್ಸೆ ನೀಡಬಹುದಾದ ಮತ್ತು ಔಷಧಗಳ ಸೇವನೆಯಿಂದ ನಿಯಂತ್ರಣದಲ್ಲಿಡಬಹುದಾದ ಮಾನಸಿಕ ಖಾಯಿಲೆ- ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಂತೆ. ಬೆಂಗಳೂರಿನ ನಿಮ್ಹಾನ್ಸ್‍ನಲ್ಲಿ ಪತ್ನಿಯನ್ನು ಪರಿಕ್ಷೆಗೆ ಒಳಪಡಿಸಿದ ವೈದ್ಯರು, ಆಕೆ ಸ್ಕಿಸೋಫ್ರೇನಿಯಾದಿಂದ ನರಳುತ್ತಿದ್ದಳು ಎಂಬುದಕ್ಕೆ ಯಾವುದೇ ರೋಗಚಿನ್ಹೆಯೂ ಇಲ್ಲ, ಪರೀಕ್ಷಿಸಿದಾಗ ಆಕೆ ಸಂಪೂರ್ಣವಾಗಿ ಅರೋಗ್ಯದಿಂದ ಇದ್ದಳು ಮತ್ತು ಈ ಹಿಂದೆ ಅದೇ ಖಾಯಿಲೆಯಿಂದ ನರಳಿದ್ದಳು ಎಂಬುದಕ್ಕೂ ಯಾವುದೇ ಚಿನ್ಹೆಗಳು ಇಲ್ಲ ಎಂದು ಪ್ರಮಾಣ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೈದರಾಬಾದಿನ ವೈದ್ಯರು ಆಕೆ ಸ್ಕಿಸೋಫ್ರೇನಿಯಾದಿಂದ ನರಳುತ್ತಿದ್ದಳು ಎಂದು ನೀಡಿದ ಪ್ರಮಾಣ ಪತ್ರವನ್ನು ಪರಿಶೀಲಿಸಲಾಯಿತು. ಅವರು ನೀಡಿದ್ದ ಪ್ರಮಾಣ ಪತ್ರವನ್ನು ವಿಚಾರಣಾ ನ್ಯಾಯಾಲಯ ತಪ್ಪಾಗಿ ಅರ್ಥೈಸಿಕೊಂಡಿದೆ. ಹಾಗಾಗಿ ವಿಚ್ಛೇದನೆಯ ಅರ್ಜಿಯನ್ನು ಪುರಸ್ಕರಿಸಿ, ದಾಂಪತ್ಯ ಹಕ್ಕುಗಳ ಪೂರ್ವಸ್ಥಿತಿ ಸ್ಥಾಪನೆಯ ಆದೇಶವನ್ನು ಕೋರಿದ ಪತ್ನಿಯ ಮನವಿಯನ್ನು ತಿರಸ್ಕರಿಸಿದೆ. ವೈದ್ಯರ ಹೇಳಿಕೆಯಂತೆ, ಹೊಸ ಹೊಸ ಔಷಧಗಳ ಆವಿಷ್ಕಾರದಿಂದಾಗಿ, ಈಗ ಸ್ಕಿಸೋಫ್ರೇನಿಯಾ ವಾಸಿ ಮಾಡಬಹುದಾದ ಖಾಯಿಲೆಯಾಗಿದೆ. ಈ ಖಾಯಿಲೆಯಿಂದ ನರಳುವ ರೋಗಿಗಳೂ ಸಹ ನಿಯತವಾಗಿ ಸೂಕ್ತವಾದ ಔಷಧ ಸೇವನೆ ಮಾಡಿದಲ್ಲಿ ಮತ್ತು ಕುಟುಂಬದವರ ಸಹಕಾರವಿದ್ದಲ್ಲಿ ಎಲ್ಲರಂತೆ ಆರೋಗ್ಯಕರ ಜೀವನ ನಡೆಸಬಹುದು.
• ಎರಡನೆಯದಾಗಿ, ಪತ್ನಿ ವೈದ್ಯಕೀಯ ಪದವಿಯನ್ನು ಪಡೆದಿರುವುದಲ್ಲದೆ, ಔಷಧ ಶಾಸ್ತ್ರದಲ್ಲಿ ಡಿಪ್ಲೊಮಾ ಪದವಿಯನ್ನೂ ಪಡೆದಿದ್ದಾಳೆ. ಅಲ್ಲದೆ ಸರ್ಕಾರೀ ವೈದ್ಯಾಧಿಕಾರಿಯಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾಳೆ. ಆಕೆ ತೀವ್ರತರ ಗಂಭೀರ ಸ್ವರೂಪದ ಸ್ಕಿಸೋಫ್ರೇನಿಯಾದಿಂದ ನರಳುತ್ತಿದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನೂ ಉಚ್ಚ ನ್ಯಾಯಾಲಯ ಸರಿಯಾಗಿ ಗಮನಿಸಿದೆ. ಈ ಅಂಶ ಮತ್ತು ಪತ್ನಿ ಸಲ್ಲಿಸಿದ್ದ ವೈದ್ಯಕೀಯ ವರದಿ ಮತ್ತು ಸಾಕ್ಷ್ಯಗಳನ್ನು ಸರಿಯಾದ ರೀತಿಯಲ್ಲಿ ಗ್ರಹಿಸಿ ಉಚ್ಚ ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿ ನೀಡಿರುವ ತೀರ್ಪು ಸೂಕ್ತವಾಗಿದೆ ಎಂದಿದೆ.
• ಹಿಂದೂ ಧರ್ಮದ ಅಡಿಯಲ್ಲಿ ವಿವಾಹ ಎಂಬುದು ಕೇವಲ ಒಂದು ಕರಾರಲ್ಲ. ಅದು ಒಂದು ಸಂಸ್ಥೆ. ಎರಡು ಹೃದಯಗಳ, ಎರಡು ಮನಸ್ಸುಗಳ ಮಿಲನ. ಅದನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅನಾರೋಗ್ಯ ಪತಿ ಪತ್ನಿಯರನ್ನು ಬೇರ್ಪಡಿಸಲು ಕಾರಣವಾಗಬಾರದು. ಆದ್ದರಿಂದ, ಈ ಪ್ರಕರಣದಲ್ಲಿ ಪತಿ ಪತ್ನಿಯರು ರಾಜಿ ಮಾಡಿಕೊಳ್ಳಬೇಕು. ಪತ್ನಿಗೆ ಇನ್ನೂ ಅನಾರೋಗ್ಯವಿದೆ ಎಂದು ಭಾವಿಸಿದರೆ ಆಕೆಗೆ ಸೂಕ್ತ ಚಿಕಿತ್ಸೆ ನೀಡಬೇಕು, ಪತ್ನಿಯೂ ಔಷಧವನ್ನು ನಿಯತವಾಗಿ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪತ್ನಿಯ ದೃಷ್ಟಿಯಿಂದ ಮತ್ತು ಯೌವನಕ್ಕೆ ಕಾಲಿಡುತ್ತಿರುವ ಅವರ ಮಗಳ ದೃಷ್ಟಿಯಿಂದ ಗಂಡನ ವಿಚ್ಛೇದನೆಯ ಕೋರಿಕೆಯನ್ನು ಪುರಸ್ಕರಿಸುವುದು ಸಾಧ್ಯವಿಲ್ಲ. ಹಾಗಾಗಿ, ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯಲಾಗಿದೆ.
• ಗಂಡ ಸಲ್ಲಿಸಿದ್ದ ಅಪೀಲನ್ನು ರದ್ದುಗೊಳಿಸಲಾಗಿದೆ. ಪತ್ನಿ ಕೋರಿರುವಂತೆ, ದಾಂಪತ್ಯ ಹಕ್ಕುಗಳ ಪೂರ್ವಸ್ಥಿತಿ ಸ್ಥಾಪನೆಗೆ ಡಿಕ್ರಿ ಮಾಡಲಾಗಿದೆ.
ಸಹಜವಾದ ವೈವಾಹಿಕ ಜೀವನವನ್ನು ನಡೆಸಲು ಅಸಾಧ್ಯ ಎನ್ನುವಂಥ ಮತ್ತು ಔಷಧ ಸೇವನೆಯಿಂದಲೂ ವಾಸಿಯಾಗುವ ಯಾವುದೇ ಭರವಸೆಯಿಲ್ಲದಂಥ ಮಾನಸಿಕ ಅಸ್ವಸ್ಥತೆಯನ್ನು ಮತ್ತು ‘ವಾಸಿಯಾಗದ ಮಾನಸಿಕ ಅಸ್ವಸ್ಥತೆ’ ಎನ್ನಬಹುದು ಎಂದೂ ಅಭಿಪ್ರಾಯಪಟ್ಟು ಪ್ರಕರಣವನ್ನು ಇತ್ಯರ್ಥಗೊಳಿಸಿದೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *