Latestಅಂಕಣ

ಕಾನೂನು ಕನ್ನಡಿ/ ಮಹಿಳೆಯರ ಹೋರಾಟದಿಂದ ಬದಲಾದ ಕಾನೂನು – ಡಾ. ಗೀತಾ ಕೃಷ್ಣಮೂರ್ತಿ

ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳದಿಂದ ರಕ್ಷಣೆ ನೀಡುವ ಕಾನೂನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದಂತಹ  ಕಾನೂನುಗಳು ಮಹಿಳೆಯರ ಹಲವು ವರ್ಷಗಳ ಹೋರಾಟದಿಂದಲೇ ಜಾರಿಗೆ ಬಂದಿವೆ

ಅದು ರಾಜಸ್ಥಾನದ ಒಂದು ಹಳ್ಳಿ. ರಾಜಸ್ಥಾನ ರಾಜ್ಯ ಸಾಮಾಜಿಕ ಪಿಡುಗಾಗಿದ್ದ ಬಾಲ್ಯ ವಿವಾಹಗಳು ಅತಿ ಹೆಚ್ಚಾಗಿ ನಡೆಯುತ್ತಿದ್ದ ರಾಜ್ಯ ಎಂದು ಕುಖ್ಯಾತಿ ಪಡೆದಿತ್ತು. ಸಮಾಜಕ್ಕೆ ಪಿಡುಗಾಗಿದ್ದ ಬಾಲ್ಯ ವಿವಾಹಗಳನ್ನು ತಡೆಯಬೇಕೆಂದು ರಾಜಸ್ಥಾನ ಸರ್ಕಾರ ಬಾಲ್ಯ ವಿವಾಹ ತಡೆಗಾಗಿ ಯೋಜನೆಯೊಂದನ್ನು ರೂಪಿಸಿತು. ಆ ಯೋಜನೆಯ ಅನುಷ್ಠಾನಕ್ಕಾಗಿ ಕಾರ್ಯಕರ್ತೆಯರನ್ನು ನಿಯೋಜಿಸಿಕೊಂಡಿತು. ಬನ್‍ವಾರಿ ದೇವಿ ಎಂಬಾಕೆ ಯೋಜನೆಯ ಅನುಷ್ಠಾನಕ್ಕಾಗಿ ಸಾಥಿನ್ ಆಗಿ ನಿಯೋಜಿತಗೊಂಡವಳು. ಆಕೆ ನಿಯೋಜಿತಗೊಂಡಿದ್ದ ಆ ಗ್ರಾಮದಲ್ಲಿ ಒಂದು ವರ್ಷದ ಹಸುಳೆಗೆ ವಿವಾಹ ಏರ್ಪಾಟಾಗಿತ್ತು. ಅದನ್ನು ನಿಲ್ಲಿಸುವಲ್ಲಿ ಆಕೆ ಯಶಸ್ವಿಯಾದಳು. ಬಾಲ್ಯ ವಿವಾಹವನ್ನು ಆಕೆ ತಡೆದದ್ದು ಆಕೆಯ ಕರ್ತವ್ಯ ನಿರ್ವಹಣೆಯ ಒಂದು ಭಾಗವಾಗಿತ್ತು. ಆದರೆ ಕರ್ತವ್ಯ ನಿರ್ವಹಣೆಗೆ ಅಗತ್ಯವಾಗಿ ದೊರೆಯಬೇಕಾಗಿದ್ದ ರಕ್ಷಣೆ ಆಕೆಗೆ ದೊರೆಯಲಿಲ್ಲ. ತನ್ನ ಕರ್ತವ್ಯವನ್ನು ಪ್ರಮಾಣಿಕವಾಗಿ ನಿರ್ವಹಿಸಿದುದಕ್ಕೆ ಆಕೆ ತೆತ್ತ ಬೆಲೆ ಮಾತ್ರ ಯಾರೂ ಊಹಿಸದಂಥದ್ದಾಗಿತ್ತು. ಅದಕ್ಕಾಗಿ ಆಕೆ ಇಡೀ ಸಮುದಾಯದ ಕೋಪಕ್ಕೆ ತುತ್ತಾದಳು. ಅಷ್ಟೇ ಅಲ್ಲ ಸಾಮಾಜಿಕ ಬಹಿಷ್ಕಾರಕ್ಕೂ ಒಳಗಾದಳು. ಬಾಲ್ಯ ವಿವಾಹವನ್ನು ತಡೆದಳು ಎಂಬ ಕೋಪಕ್ಕೆ ಆ ಕುಟುಂಬದ ಐದು ಮಂದಿ ಪುರುಷರು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದರು. ಆದರೆ ಇದರಿಂದ ಆಕೆಯ ಸ್ಥೈರ್ಯ ಕುಂದಲಿಲ್ಲ. ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದಳು.

ಮಹಿಳೆ ಮನೆಯಿಂದ ಹೊರಗೆ ಬಂದು, ಉದ್ಯೋಗದ ನಾನಾ ಸ್ತರಗಳಲ್ಲಿ ಪುರುಷರೊಡನೆ, ಅವರಿಗೆ ಸರಿಸಮನಾಗಿ ದುಡಿಯತೊಡಗಿದಂತೆ, ಉದ್ಯೋಗ ಸ್ಥಳಗಳಲ್ಲಿ ಆಕೆ ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಪ್ರಕರಣಗಳೂ ಹೆಚ್ಚಾಗಿವೆ. ಅದರೆ, ಈ ಹಿಂದೆ, ಅದನ್ನು ನೇರವಾಗಿ ಎದುರಿಸಲು ಮತ್ತು ಪ್ರಶ್ನಿಸಲು ಅಗತ್ಯವಾದ ಕಾನೂನಿನ ಬೆಂಬಲವಿರಲಿಲ್ಲ. ಬಹುಪಾಲು ಸಂದರ್ಭಗಳಲ್ಲಿ ಮಹಿಳೆಯರು ಅಸಹಾಯಕರಾಗಿ, ಯಾರಲ್ಲೂ ಹೇಳಿಕೊಳ್ಳಲಾಗದೆ ಅನುಭವಿಸುವ ಪರಿಸ್ಥಿತಿ ಇತ್ತು.

ಬನ್‍ವಾರಿ ದೇವಿ ತನಗಾದ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದಾಗ ಎದುರಿಸಿದ ಅಡೆತಡೆಗಳಿಗೆ ಲೆಕ್ಕವಿರಲಿಲ್ಲ. ರೂಢಿಗತ ಕಾನೂನಿನ ಪ್ರಕ್ರಿಯೆಯಲ್ಲಿ ನ್ಯಾಯ ಸಿಗುವ ಭರವಸೆ ಕಾಣಲಿಲ್ಲ. ಆಗ ವಿಶಾಖಾ ಎಂಬ ಸ್ವಯಂ ಸೇವಾ ಸಂಸ್ಥೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತು. ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರು ಲೈಂಗಿಕ ಕಿರುಕುಳವಿಲ್ಲದೆ ಕರ್ತವ್ಯ ನಿರ್ವಹಿಸಲು ಅಗತ್ಯವಾದ ಕಾನೂನು ರಕ್ಷಣೆಯನ್ನು ಒದಗಿಸಬೇಕು ಎಂಬುದು ಆ ಅರ್ಜಿಯ ಕೋರಿಕೆಯಾಗಿತ್ತು. ಇದರ ಫಲವಾಗಿ, ಇಂದು ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳದಿಂದ ರಕ್ಷಣೆ ನೀಡುವ ವಿಸ್ತೃತ ಕಾನೂನು ಜಾರಿಯಲ್ಲಿದೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ, ವ್ಯವಸ್ಥೆಯಿಂದ ಅನ್ಯಾಯವಾಗುತ್ತಿದ್ದರೆ, ವ್ಯವಸ್ಥೆಯ ವಿರುದ್ಧ ದನಿಯೆತ್ತಲು ಜನಸಾಮಾನ್ಯರಿಗೆ ಇರುವ ಶಕ್ತಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ. ಯಾವುದೇ ಕೃತ್ಯದಿಂದ, ಯಾವುದೇ ಅವ್ಯವಸ್ಥೆಯಿಂದ, ವ್ಯವಸ್ಥೆಯಲ್ಲಿನ ಯಾವುದೇ ಲೋಪದಿಂದ ಅಥವಾ ನಿಷ್ಕ್ರಿಯತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ, ಅದರ ವಿರುದ್ಧ ಯಾವುದೇ ವ್ಯಕ್ತಿ ದನಿಯೆತ್ತಬಹುದು, ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಬಹುದು, ನ್ಯಾಯ ಕೋರಬಹುದು. ಸರಳವಾಗಿ ಹೇಳಬೇಕೆಂದರೆ, ಸಾರ್ವಜನಿಕರ ಹಿತ ಕಾಯಲು, ರಾಜ್ಯ ಸರ್ಕಾರದ ವಿರುದ್ಧ ಅಥವಾ ಕೇಂದ್ರ ಸರ್ಕಾರದ ವಿರುದ್ಧ ಅಥವಾ ಮುನಿಸಿಪಲ್ ಪ್ರಾಧಿಕಾರಗಳ ಕಾರ್ಯ ಅಥವಾ ಅವುಗಳ ನಿಷ್ಕ್ರಿಯತೆ ಒಟ್ಟಾರೆ ಸಾರ್ವಜನಿಕರ ಹಿತಕ್ಕೆ ವಿರುದ್ಧವಾಗಿದ್ದರೆ, ಅದನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಯಾರೇ ಆಗಲಿ ದಾವೆ ಹೂಡಬಹುದು.

ಇಂಥದ್ದೇ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಫಲವಾಗಿ ಇಂದು ನಾವು ನೀವೆಲ್ಲ ಧೂಮ ರಹಿತವಾದ ಸ್ವಚ್ಛ ಗಾಳಿಯನ್ನು ಉಸಿರಾಡಲು ಸಾಧ್ಯವಾಗಿದೆ ಎಂದರೆ ಆಶ್ಚರ್ಯವಾಗುತ್ತದಲ್ಲವೇ? ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೂಡಿದ್ದು ಒಬ್ಬ ಸಾಮಾನ್ಯ ಮಹಿಳೆ! ಇಂಥ ಹಕ್ಕನ್ನು ಚಲಾಯಿಸುವುದು ಸಾಮಾನ್ಯವಾಗಿ ಪುರುಷರೇ ಎಂಬ ಭಾವನೆ ಪ್ರಚಲಿತವಿದೆ. ಆದರೆ, ಆ ಭಾವನೆ ತಪ್ಪು. ಜಾಗೃತ ಮಹಿಳೆ ಅನ್ಯಾಯದ ವಿರುದ್ಧ ಸಿಡಿದೆದ್ದು, ಸಹಸ್ರಾರು ಜನರ ಹಾಗೂ ಸಹಸ್ರಾರು ಮಹಿಳೆಯರ ಜೀವನವನ್ನು ಸಹನೀಯವನ್ನಾಗಿ ಮಾಡಿರುವ ಉದಾಹರಣೆಗಳಿವೆ.
ಇಂದು, ಬಸ್ಸು, ರೈಲು, ಉದ್ಯಾನವನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಿಗಳು ಬಿಡುವ ಹೊಗೆಯಿಂದ ಮುಕ್ತರಾಗಿ, ನಾವೆಲ್ಲ ಸ್ವಚ್ಛ ಗಾಳಿ ಸೇವಿಸುವುದು ಸಾಧ್ಯವಾಗಿರುವುದಕ್ಕೆ ಕಾರಣ ಕೇರಳದ ಈ ಜಾಗೃತ ಮಹಿಳೆ ನ್ಯಾಯಾಲಯದಲ್ಲಿ ಹಾಕಿದ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ.

1951-52 ರಲ್ಲಿ 2.1 ಕೋಟಿಗಳಷ್ಟಿದ್ದ  ಧೂಮಪಾನಿಗಳ ಸಂಖ್ಯೆ 1994-95 ರ ವೇಳೆಗೆ 5 ಕೋಟಿಗೆ ಏರಿತ್ತು. ಧೂಮಪಾನಿಗಳು ತಮ್ಮ ವ್ಯಸನದಿಂದಾಗಿ ಅವರ ಆರೋಗ್ಯವನ್ನು ಹಾಳು ಮಾಡಿಕೊಂಡರೆ, ಅವರು ಬಿಡುವ ಹೊಗೆಯಿಂದಾಗಿ ಧೂಮಪಾನವನ್ನೇ ಮಾಡದ ಲಕ್ಷಾಂತರ ಜನರ ಆರೋಗ್ಯ ಹಾಳಾಗುತ್ತಿತ್ತು. ಧೂಮಪಾನಿಗಳು, ಧೂಮಪಾನ ಮಾಡುವುದನ್ನು ತಮ್ಮ ಹಕ್ಕು ಎಂಬಂತೆ, ಉನ್ನತ ಜೀವನ ಶೈಲಿಯ ಪ್ರತೀಕ ಎಂಬಂತೆ, ಇತರರಿಗೆ ಆಗುವ ತೊಂದರೆಯನ್ನು ಪರಿಗಣಿಸದೆ ಇರುವುದೇ ಹೆಚ್ಚುಗಾರಿಕೆ ಎಂಬಂತೆ ವರ್ತಿಸುತ್ತಿದ್ದರು. ಆದರೆ ಈ ಚಿತ್ರಣವನ್ನೇ ಬದಲಿಸಿ, ಧೂಮ ರಹಿತ ಸ್ವಚ್ಛ ಗಾಳಿ ಸೇವಿಸುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕನ್ನಾಗಿಸಲು ಕಾರಣವಾದದ್ದು ಕೇರಳದ ಮಹಿಳೆಯೊಬ್ಬಳು ಕೇರಳದ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ!
ಪದೇ ಪದೇ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಈಕೆ ಧೂಮಪಾನಿಗಳು ಬಿಡುವ ಹೊಗೆಯಿಂದ ರೋಸಿ ಹೋಗಿದ್ದಳು ಮತ್ತು ಅದರಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಇದೇ ಅವಳನ್ನು ಈ ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಿತು. ಅವಳ ಕಾನೂನು ಹೋರಾಟಕ್ಕೆ ಫಲ ದೊರೆಯಿತು. ಧೂಮಪಾನಿಗಳು ಬಿಡುವ ಹೊಗೆ ಧೂಮಪಾನಗಳಲ್ಲದವರ ಆರೋಗ್ಯವನ್ನು ಹಾಳು ಮಾಡುತ್ತಿದೆ ಮತ್ತು ಸ್ವಚ್ಛ ಗಾಳಿಯನ್ನು ಸೇವಿಸಲು ಅವರಿಗಿರುವ ಮೂಲಭೂತ ಹಕ್ಕನ್ನು ಇದು ಉಲ್ಲಂಘಿಸುತ್ತದೆ, ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಬೇಕೆಂದು ಅಭಿಪ್ರಾಯಪಟ್ಟು ಅದರಂತೆ ಆದೇಶವನ್ನು ಹೊರಡಿಸಿತು. ಕೇರಳ ಉಚ್ಚ ನ್ಯಾಯಾಲಯದ ಈ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ
ಹಿಡಿಯಿತು.

ಆ ನಂತರದಲ್ಲಿ, ದೇಶದಲ್ಲಿ ಒಂದು ಪವಾಡವೇ ನಡೆದು ಹೋಯಿತು. ದೇಶದಾದ್ಯಂತ ಸಾರ್ವಜನಿಕ ಸ್ಥಳಗಳು ಧೂಮಪಾನಿಗಳು ಬಿಡುವ ಹೊಗೆಯಿಂದ ಮುಕ್ತಗೊಂಡಿತು!
ಇತ್ತೀಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯ ಪೋಸ್ಟರ್‌ಗಳ ಬಗ್ಗೆ ನೀಡಿದ ತೀರ್ಪು ಮತ್ತು ವಾಹನ ಸವಾರರ ಜೀವಕ್ಕೆ ಮಾರಕವಾಗಿದ್ದ ರಸ್ತೆ ಗುಂಡಿಗಳ ಬಗ್ಗೆ ನೀಡಿದ ತೀರ್ಪುಗಳೂ ಸಹ ಜಾಗೃತ ಪ್ರಜೆಗಳು ಹಾಕಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಫಲವೇ! ಈ ತೀರ್ಪುಗಳಿಂದಾಗಿ ಬೆಂಗಳೂರಿನ ಜನತೆ ಸ್ವಲ್ಪ ನಿರಾಳವಾಗಿ ಉಸಿರಾಡುತ್ತಿದ್ದಾರೆ, ಅಷ್ಟೇ ಅಲ್ಲ ತೀರ್ಪು ನೀಡಿದ ನ್ಯಾಯಮೂರ್ತಿಗಳ ಬಗ್ಗೆ ಮತ್ತು ಕಟು ನುಡಿಗಳಿಂದ, ಅಧಿಕಾರಯುತವಾಗಿ ನಿದ್ರಾವಸ್ಥೆಗೆ ಜಾರಿದ್ದ ಸಂಬಂಧಪಟ್ಟವರಿಂದ ಕೆಲಸ ಮಾಡಿಸುತ್ತಿರುವ ರೀತಿ ಭಾರೀ ಪ್ರಶಂಸೆಗೆ ಗುರಿಯಾಗಿದೆ. ಇದು ಸಾಮಾನ್ಯ ಪ್ರಜೆಯ ಕೈಯಲ್ಲಿರುವ ಅಸ್ತ್ರ! ಇದು ನ್ಯಾಯಾಂಗದ ಶಕ್ತಿ!

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *