ಕಾನೂನು ಕನ್ನಡಿ/ ಮಹಿಳೆಯರಿಗೆ ರಕ್ಷಣೆ: ಮಹತ್ವದ ನಿಲುವು – ಡಾ. ಗೀತಾ ಕೃಷ್ಣಮೂರ್ತಿ

ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯ ಪ್ರಕರಣಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ವರದಿಯಾಗುತ್ತಿವೆ. ಎಂತೆಂಥ ದೌರ್ಜನ್ಯಗಳು! ಎದೆ ತಲ್ಲಣಿಸುವ ದೌರ್ಜನ್ಯಗಳು. ದೌರ್ಜನ್ಯದ ಅತ್ಯಂತ ಹೇಯ ರೂಪ ಅವಳ ದೇಹದ ಮೇಲೆ ನಡೆಯುವ ದೌರ್ಜನ್ಯ- ಅತ್ಯಾಚಾರ. ಹೊಡೆತ, ಬಡಿತಗಳು ಅವಳ ಮೇಲೆ ನಡೆಯುವ ಸಾಮಾನ್ಯ ದೌರ್ಜನ್ಯಗಳು! ಅದನ್ನು ಸಹಜ ಎಂದು ಅವಳೇ ಒಪ್ಪಿಕೊಳ್ಳುವ ಮಟ್ಟಿಗೆ ಮತ್ತು ಹೊಡೆಯುವುದು ಗಂಡನ ಮತ್ತು ಗಂಡಸರ ಹಕ್ಕು ಎಂದು ಅವಳು ಭಾವಿಸುವ ಮಟ್ಟಿಗೆ ಅಂಥ ದೌರ್ಜನ್ಯಗಳು ಸಾಮಾನ್ಯವಾಗಿದ್ದವು.

ಅತ್ಯಾಚಾರದಂಥ ಹೇಯ ಕೃತ್ಯಗಳು ಹೊರಗಿನ ಅಪರಿಚಿತರಿಂದಷ್ಟೇ ಅಲ್ಲದೆ ಕುಟುಂಬದವರಿಂದಲೇ ನಡೆಯುತ್ತಿತ್ತು. ಕುಟುಂಬ ದೌರ್ಜನ್ಯದ ಬಗ್ಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಶೇಕಡಾ 65 ರಷ್ಟು ಮಹಿಳೆಯರು ಹೆಂಡತಿಯನ್ನು ಹೊಡೆಯಲು ಗಂಡನಿಗೆ ಹಕ್ಕಿದೆ ಎಂದು ಅಭಿಪ್ರಾಯ ಪಟ್ಟಿದ್ದರು. ಪಿತೃ ಪ್ರಧಾನ ಮತ್ತು ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ, ಮಹಿಳೆಗೆ ಎರಡನೇ ದರ್ಜೆಯ ಪ್ರಜೆಯ ಸ್ಥಾನ ಮಾನವಿತ್ತು ಎಂಬುದಷ್ಟೇ ಅಲ್ಲ, ಅದನ್ನು ಆಕೆಯೇ ಒಪ್ಪಿಕೊಂಡು ಪ್ರಶ್ನಿಸದಂಥ ಮನೋಭಾವವನ್ನು ಆಕೆಯಲ್ಲಿ ಬಿತ್ತಿದ್ದರು.

ಕೆಲವೇ ಜಾಗೃತ ಮಹಿಳೆಯರ ಕಾರಣದಿಂದಾಗಿ ಈ ಪರಿಸ್ಥಿತಿ ನಿಧಾನವಾಗಿ ಬದಲಾಯಿತು, ಮಹಿಳೆಯರಲ್ಲಿ ಪ್ರಶ್ನಿಸುವ ಮನೋಭಾವ ನಿಧಾನವಾಗಿ ಯಾದರೂ ಮೂಡತೊಡಗಿತು. ಶಾಸನ ರಚನಕಾರರು ಈ ಬದಲಾವಣೆಗೆ ಕುರುಡರಾಗಿರುವುದು ಸಾಧ್ಯವಾಗಲಿಲ್ಲ. ಈ ಬದಲಾವಣೆ ಚಾಲ್ತಿಯಲ್ಲಿದ್ದ ಶಾಸನಗಳಲ್ಲೂ ಕೆಲವೊಂದು ಬದಲಾವಣೆಗಳನ್ನು ತರಲು ಕಾರಣವಾಯಿತು.

ಭಾರತೀಯ ಸಮಾಜದಲ್ಲಿ ಆಚರಣೆಯಲ್ಲಿ ಇದ್ದ ಬಾಲ್ಯ ವಿವಾಹ, ಸತಿ ಸಹಗಮನ, ವಿಧವಾ ಪುನರ್ವಿವಾಹಕ್ಕೆ ಇದ್ದ ವಿರೋಧ ಇಂಥ ಹಲವಾರು ಪಿಡುಗುಗಳು ಮತ್ತು ಕಟ್ಟು ಕಟ್ಟಳೆಗಳು ಮಹಿಳೆಯರ ಜೀವನವನ್ನು ನರಕವನ್ನಾಗಿಸಿದ್ದವು. ಇವುಗಳ ಜೊತೆಗೆ ಸಮಾಜದಲ್ಲಿ ಅತ್ಯಂತ ವ್ಯಾಪಕವಾಗಿದ್ದ ಮತ್ತು ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರ ಸಾವು ನೋವುಗಳಿಗೆ ಕಾರಣವಾಗಿದ್ದ ಮತ್ತೊಂದು ಸಾಮಾಜಿಕ ಪಿಡುಗು ಎಂದರೆ ವರದಕ್ಷಿಣೆ. ಎಂಬತ್ತರ ದಶಕದಲ್ಲಿ ದಾಖಲಾದ ವರದಕ್ಷಿಣೆಯ ಕಿರುಕುಳದಿಂದಾಗಿ ಸತ್ತ ಹೆಣ್ಣು ಮಕ್ಕಳ ಸಂಖ್ಯೆ ಮತ್ತು ವರದಕ್ಷಿಣೆಯ ಕಾರಣಕ್ಕೆ ನಡೆದ ವಧೂದಹನಗಳ ಸಂಖ್ಯೆಗಳು ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿದ್ದವು. ಈ ಪಿಡುಗನ್ನು ಆದಷ್ಟು ಶೀಘ್ರವಾಗಿ ಕಡಿಮೆ ಮಾಡುವ ಪ್ರಯತ್ನಗಳಾಗಬೇಕಿತ್ತು. ವರದಕ್ಷಿಣೆಗಾಗಿ ಪೀಡಿಸುವವರಿಗೆ ಮತ್ತು ವರದಕ್ಷಿಣೆಗಾಗಿ ಹೆಣ್ಣು ಮಕ್ಕಳನ್ನು ಜೀವಂತ ಸುಡುತ್ತಿದ್ದ ರಾಕ್ಷಸರಿಗೆ ಕಾನೂನಿನ ಮೂಲಕ ಉತ್ತರ ಕೊಡುವ ಕ್ರಮವನ್ನು ಅತ್ಯಂತ ತುರ್ತಾಗಿ ಕೈಗೊಳ್ಳಬೇಕಾದ ಸಂದರ್ಭ ಉಂಟಾಗಿತ್ತು. ಆ ಸಂದರ್ಭದಲ್ಲಿ ಜಾರಿಗೆ ಬಂದದ್ದು ಭಾರತೀಯ ದಂಡ ಸಂಹಿತೆಗೆ ತಿದ್ದುಪಡಿ ಮಾಡಿ ಹೊಸದಾಗಿ ಸೇರಿಸಿದ 498ಎ ಪ್ರಕರಣ. ಅದುವರೆಗೆ ಗಂಡ ಹಾಗೂ ಗಂಡನ ಸಂಬಂಧಿಕರು ನೀಡುವ ಇಂಥ ಕಿರುಕುಳಗಳನ್ನು ಮೌನವಾಗಿ ಸಹಿಸುತ್ತಿದ್ದ ಮಹಿಳೆಗೆ ಈ ತಿದ್ದುಪಡಿಯಿಂದಾಗಿ ಕಾನೂನಿನ ಬೆಂಬಲ ದೊರೆಯಿತು. ಹಿಂದೂ ವಿವಾಹ ಅಧಿನಿಯಮದ ಅಡಿಯಲ್ಲಿ ಕ್ರೌರ್ಯದ ಅಥವಾ ಹಿಂಸೆಯ ಕಾರಣದ ಮೇಲೆ ವಿವಾಹ ವಿಚ್ಛೇದನೆ ಪಡೆಯಬಹುದಾಗಿತ್ತು. ಆದರೆ ಅದುವರೆಗೆ ಕ್ರೌರ್ಯ ಎಂದರೇನು, ಎಂಥ ಕೃತ್ಯಗಳು ಕ್ರೌರ್ಯ ಎಂಬುದರ ವ್ಯಾಪ್ತಿಯಲ್ಲಿ ಬರುತ್ತವೆ ಎಂಬುದನ್ನು ಯಾವುದೇ ಕಾನೂನಿನಲ್ಲಿಯೂ ಅರ್ಥೈಸಿರಲಿಲ್ಲ. 1986 ರಲ್ಲಿ ಜಾರಿಗೊಳಿಸಿದ ಭಾರತ ದಂಡ ಸಂಹಿತೆಯ 498ಎ ಪ್ರಕರಣದಲ್ಲಿ, ಮೊದಲ ಬಾರಿಗೆ, ಕ್ರೌರ್ಯ ಅಥವಾ ಹಿಂಸೆ ಎಂಬುದನ್ನು ಪರಿಭಾಷಿಸಲಾಯಿತು.
ಇದರ ಪ್ರಕಾರ ಹಿಂಸೆ ಎಂದರೆ,-

• ಮಹಿಳೆ ಆತ್ಯಹತ್ಯೆ ಮಾಡಿಕೊಳ್ಳುವಂತೆ ಮಾಡುವ ಗಂಡನ ಅಥವಾ ಅವನ ಬಂಧುಗಳ ಯಾವುದೇ ವರ್ತನೆ;
• ಮಹಿಳೆಯ ಜೀವಕ್ಕೆ, ಅಂಗಗಳಿಗೆ ಹಾನಿಯುಂಟು ಮಾಡುವ ಅಥವಾ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಹಾನಿ ಉಂಟು ಮಾಡುವಂಥ ವರ್ತನೆ;
• ಅವಳಿಂದ ಅಥವಾ ಅವಳ ಸಂಬಂಧಿಗಳಿಂದ ಆಸ್ತಿ ಪಡೆಯುವುದಕ್ಕಾಗಿ ನೀಡಿದ ಕಿರುಕುಳ;
• ಅವರ ಆಸ್ತಿಯ ಅಥವಾ ಹಣದ ಬೇಡಿಕೆಯನ್ನು ಈಡೇರಿಸಲಿಲ್ಲವೆಂದು ನೀಡುವ ಕಿರುಕುಳ.
ಇದು, ಮಹಿಳೆಗೆ ನೀಡುವ ಹಿಂಸೆಯನ್ನು ಅಪರಾಧವಾಗಿಸುವ ಪ್ರಕರಣ.
498ಎ ಪ್ರಕರಣದ ಅಡಿಯಲ್ಲಿ ಅಪರಾಧವೆನಿಸುವ ಇಂಥ ಕೃತ್ಯ ಜಾಮೀನೀಯವಲ್ಲದ, ರಾಜಿ ಮಾಡಿಕೊಳ್ಳಲಾಗದ ಸಂಜ್ಞೇಯ ಅಪರಾಧ. ಎಂದರೆ ವಾರೆಂಟಿಲ್ಲದೆ ಬಂಧಿಸಬಹುದಾದ, ದೂರು ಕೊಟ್ಟವರೇ ದೂರನ್ನು ಹಿಂತೆಗೆದುಕೊಂಡು ರಾಜಿ ಮಾಡಿಕೊಳ್ಳಲು ಬಯಸಿದರೂ ಹಿಂತೆಗೆದುಕೊಳ್ಳಲು ಅವಕಾಶವಿಲ್ಲದಂಥ ಅಪರಾಧ.
ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಜಾರಿಗೊಳಿಸಿದ್ದರೂ ಕುಟುಂಬದಲ್ಲಿ ಒಳಗಾಗುವ ಹಿಂಸೆಯ ಸಂದರ್ಭದಲ್ಲಿಯೂ ಈ ಕಾನೂನಿನ ನೆರವನ್ನು ಮಹಿಳೆ ಪಡೆಯಬಹುದು. ಇಂಥ ಹಿಂಸೆಯಿಂದ ಕೂಡಲೇ ರಕ್ಷಣೆ ಪಡೆಯಲು ಹತ್ತಿರದ ಪೊಲೀಸು ಠಾಣೆಯಲ್ಲಿ ದೂರು ನೀಡಬಹುದು.
• ಕಿರುಕುಳಕ್ಕೆ ಒಳಗಾದ ಮಹಿಳೆ ತಾನೇ ಸ್ವತಃ ದೂರು ನೀಡಬಹುದು ಇಲ್ಲವೇ ಹಿಂಸೆಗೆ ಒಳಗಾದ ಮಹಿಳೆಯ ತಂದೆ, ತಾಯಿ, ಸೋದರ, ಸೋದರಿ ಅಥವಾ ತಂದೆ ಅಥವಾ ತಾಯಿಯ ಸೋದರ ಅಥವಾ ಸೋದರಿ ದೂರನ್ನು ಸಲ್ಲಿಸಬಹುದು.
• ಹಿಂಸೆಗೊಳಗಾದ ಮಹಿಳೆಯ ಯಾರೇ ರಕ್ತ ಸಂಬಂಧಿ, ಅಥವಾ ವಿವಾಹ ಅಥವಾ ದತ್ತಕದ ಮೂಲಕ ಸಂಬಂಧಿಯಾದ ಯಾರೇ ವ್ಯಕ್ತಿ ದೂರು ನೀಡಬೇಕಾದರೆ ನ್ಯಾಯಾಲಯದ ಅನುಮತಿ ಪಡೆದು ನೀಡಬಹುದು.
ಇದು ರಾಜಿ ಮಾಡಿಕೊಳ್ಳಲಾಗದ ಅಪರಾಧವಾಗಿರುವುದರಿಂದ ಮತ್ತು ಸಂಜ್ಞೇಯ ಅಪರಾಧವಾದ್ದರಿಂದ ದೂರಿನಲ್ಲಿ ಹೆಸರಿಸಿದವರೆಲ್ಲರನ್ನೂ ಕೂಡಲೇ ದಸ್ತಗಿರಿ ಮಾಡಲಾಗುತ್ತಿತ್ತು. ಕೆಲವರು ಮಹಿಳೆಯರು, ತಮ್ಮ ದ್ವೇಷ ಸಾಧನೆಗೆ ಮತ್ತು ಪ್ರತೀಕಾರಕ್ಕೆ ಮಹಿಳೆಯರು ಈ ಕಾನೂನನ್ನು ಬಳಸಿಕೊಂಡರು. ಇದರ ಫಲವಾಗಿ ಕಾನೂನಿನ ಈ ಪ್ರಕರಣದ ವಿರುದ್ಧ ದೊಡ್ಡ ಆಂದೋಲನವೇ ಪ್ರಾರಂಭವಾಯಿತು. ಇದರ ಅಡಿಯಲ್ಲಿ ಕೈಗೊಳ್ಳುವ ಕ್ರಮವನ್ನು ‘ಕಾನೂನು ಭಯೋತ್ಪಾದನೆ’ ಎಂದು ಕರೆಯಲಾಯಿತು. ಇದರಿಂದ ತೊಂದರೆಗೊಳಗಾದ ಪುರುಷರೆಲ್ಲ ಸೇರಿ ‘ಸೇವ್ ಇಂಡಿಯಾ ಫ್ಯಾಮಿಲಿ ಫೌಂಡೇಷನ್’ ಎಂಬ ಸಂಘಟನೆಯನ್ನು ಕಟ್ಟಿಕೊಂಡರು. ಈ ಸಂಘಟನೆ ಹಾಗೂ ಇನ್ನತರ ಸಂಘಟನೆಗಳು ‘ಈ ಕಾನೂನನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ, ಆದ್ದರಿಂದ ಇದನ್ನು ಜಾಮೀನುರಹಿತವಾದ ಹಾಗೂ ಸಂಜ್ಞೇಯವಲ್ಲದ ಅಪರಾಧವನ್ನಾಗಿ ಮಾಡಬೇಕು’ ಎಂಬ ಬೇಡಿಕೆಯನ್ನು ಮುಂದಿಟ್ಟಿರು.

ರಾಜೇಶ್ ಶರ್ಮ ಮತ್ತು ಇತರರು- ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಹಾಕಿದ ಅಪೀಲಿನ ವಿಚಾರಣೆಯನ್ನು ನಡೆಸಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ನ್ಯಾಯಪೀಠ ಕೆಲವೊಂದು ಮಹತ್ವದ ಸೂಚನೆಗಳನ್ನು ನೀಡಿತು. ಅವುಗಳಲ್ಲಿ ಪ್ರಮುಖವಾದುದು, ‘ಪ್ರತಿಯೊಂದು ಜಿಲ್ಲೆಯಲ್ಲಿಯೂ ಒಂದು ಅಥವಾ ಅದಕ್ಕೂ ಹೆಚ್ಚಿನ ಕುಟುಂಬ ಕಲ್ಯಾಣ ಸಮಿತಿಗಳನ್ನು ರಚಿಸಬೇಕು ಮತ್ತು 498 ಎ ಪ್ರಕರಣದ ಅಡಿಯಲ್ಲಿ ದಾಖಲಾಗುವ ಎಲ್ಲ ದೂರುಗಳನ್ನೂ ಆ ಸಮಿತಿಗೆ ಕಳುಹಿಸಬೇಕು, ಆ ಸಮಿತಿ ದೂರುದಾರರನ್ನು ಮತ್ತು ಆರೋಪಿಗಳನ್ನು ಕರೆಸಿ, ವಿಚಾರಿಸಿ, ದೂರಿನ ಸತ್ಯಾಸತ್ಯತೆಯ ಬಗ್ಗೆ ವರದಿ ನೀಡಿದ ನಂತರವಷ್ಟೇ ಆರೋಪಿಗಳನ್ನು ದಸ್ತಗಿರಿ ಮಾಡಬೇಕು’ ಎಂಬುದಾಗಿತ್ತು. ಈ ಹಿನ್ನೆಲೆಯಲ್ಲಿ, ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದಂತೆ ಪೊಲೀಸು ಠಾಣೆಗಳಲ್ಲಿ ಮಹಿಳೆ ದೂರು ದಾಖಲು ಮಾಡಿದಾಗ, ಆ ಅಪರಾಧ ಸಂಜ್ಞೇಯ ಅಪರಾಧವಾಗಿದ್ದರೂ ಸಹ ಅಪರಾಧಿಗಳನ್ನು ಪ್ರಾಥಮಿಕ ವಿಚಾರಣೆಯಿಲ್ಲದೇ ಬಂಧಿಸಬಾರದು ಮತ್ತು ಆರೋಪಿಗಳನ್ನು ಎಂದರೆ ಅವಳ ಗಂಡನನ್ನು ಮತ್ತು ಅವನ ಬಂಧುಗಳನ್ನು ಕರೆಸಿ ಆಪ್ತ ಸಮಾಲೋಚನೆಯ ಮೂಲಕ ಅವರಲ್ಲಿ ಹೊಂದಾಣಿಕೆ ತರುವ ಪ್ರಯತ್ನ ಮಾಡಬೇಕು ಎಂಬ ನಿರ್ದೇಶನವನ್ನು ಸರ್ವೋಚ್ಚ ನ್ಯಾಯಾಲಯ ಹೊರಡಿಸಿತು.

ಅದರಂತೆ, ರಾಜ್ಯದ ಡೈರೆಕ್ಟರ್ ಜನರಲ್ ಮತ್ತು ಇನ್‍ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರು ಒಂದು ಅಧಿಕೃತ ಜ್ಞಾಪನವನ್ನು ಹೊರಡಿಸಿ ಇಂಥ ಪ್ರಕರಣಗಳಲ್ಲಿ, ತನಿಖಾಧಿಕಾರಿಗಳು ಸಂಗ್ರಹಿಸಿದ ನೈಜ ದಾಖಲಾತಿಗಳು ಮತ್ತು ಸಾಕ್ಷ್ಯಾಧಾರಗಳನ್ನು ಒಳಗೊಂಡ ಪ್ರಕರಣದ ಕಡತವನ್ನು ಸಂಬಂಧಪಟ್ಟ ಸೂಪರಿಂಟೆಂಡೆಂಟ್ ಆಫ್ ಪೊಲೀಸ್/ಡಿವೈಎಸ್‍ಪಿ ಅವರಿಗೆ ಪರಿಶೀಲನೆಗಾಗಿ ಕಳುಹಿಸಬೇಕು, ಅವರು ಪ್ರತಿಯೊಬ್ಬ ಆರೋಪಿಯ ವಿರುದ್ಧ ಇರುವ ಆಪಾದನೆಯ ತೀವ್ರತೆಯನ್ನು ತುಲನಾತ್ಮಕವಾಗಿ ಪರಿಶೀಲಿಸಿ ದಸ್ತಗಿರಿ ಮಾಡುವ ಅವಶ್ಯಕತೆಯಿದ್ದಲ್ಲಿ ಅನುಮತಿ ನೀಡಿದ ನಂತರವೇ ದಸ್ತಗಿರಿ ಮಾಡುವುದು ಸೂಕ್ತ ಎಂದು ಆದೇಶ ನೀಡಿದ್ದಾರೆ.(ಸಂಖ್ಯೆ:10/ಅಪರಾಧ/ಮಿಶ್ರ/(2)/2010)290). ಶೋಷಿತ ಮಹಿಳೆಯರ ರಕ್ಷಣೆಗಾಗಿ 498 ಎ ಮೂಲಕ ಕಲ್ಪಿಸಿದ್ದ ಅನೇಕ ಕ್ರಮಗಳು ಇದರಿಂದ ದುರ್ಬಲಗೊಂಡವು. ಹಿಂಸೆಗೊಳಗಾದ ಮಹಿಳೆ ಪೊಲೀಸು ಠಾಣೆಗೆ ಹೋಗಿ ದೂರು ನೀಡಿದರೆ ಕೂಡಲೇ ರಕ್ಷಣೆ ಸಿಗುತ್ತದೆಂಬ ನಿರೀಕ್ಷೆ ಹುಸಿಯಾಯಿತು.

ಮಹಿಳಾ ಪರವಾದ ಕಾನೂನೊಂದನ್ನು ಮಹಿಳೆಯರೇ ದುರುಪಯೋಗ ಪಡಿಸಿಕೊಂಡು, ಆ ಮೂಲಕ, ಶೋಷಣೆಯನ್ನು ತಡೆಗಟ್ಟಲು ಜಾರಿಯಾದ ಕಾನೂನು ದುರ್ಬಲಗೊಂಡ ಕಥೆ. ಇದರಿಂದಾಗಿ, ನಿಜವಾಗಿ ಅಗತ್ಯವಿರುವ ಮಹಿಳೆಯರಿಗೆ ಈ ಕಾನೂನಿನ ನೆರವು ಕೂಡಲೇ ದೊರೆಯದೇ ಹೋಯಿತು. ಹಾಗಾಗಿ ಸರ್ವೊಚ್ಚ ನ್ಯಾಯಾಲಯದ ಈ ಸೂಚನೆಗಳನ್ನು ಮರು ಪರಿಶೀಲಿಸಬೇಕೆಂದು ಅನೇಕ ಮಹಿಳಾ ಸಂಘಟನೆಗಳ ಪ್ರಮುಖ ಅಹವಾಲಾಗಿತ್ತು. ‘ನ್ಯಾಯಾಧಾರ್’ ಎಂಬ ಸ್ವಯಂ ಸೇವಾ ಸಂಸ್ಥೆ ಈ ಸಂಬಂಧ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತು. ‘ಈ ಸೂಚನೆಗಳು ಜಾರಿಗೆ ಬಂದದ್ದು, 2017 ರ ಜುಲೈನಿಂದ, ಅಲ್ಲಿಂದಾಚೆಗೆ 498 ಎ ಕೆಳಗೆ ಒಂದೇ ಒಂದು ದೂರು ದಾಖಲಾಗಿಲ್ಲ,’ ಎಂಬುದನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು. ಕೂಲಂಕುಷ ಪರಿಶಿಲನೆಯ ನಂತರ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಎ.ಎಂ.ಖಾನ್‍ವೀಲ್‍ಕರ್ ಮತ್ತು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹಿಂದೆ ನೀಡಿದ್ದ ತೀರ್ಪಿಗಿಂತ ಬದಲಾದ ನಿಲುವನ್ನು ತಳೆದಿದೆ. 498 ಎ ಅಡಿಯಲ್ಲಿ ದಾಖಲಾಗುವ ದೂರುಗಳನ್ನು ಕುಟುಂಬ ಕಲ್ಯಾಣ ಸಮಿತಿ ಮೊದಲು ಪರಿಶೀಲಿಸಬೇಕೆಂಬ ಹಿಂದಿನ ಆದೇಶವನ್ನು ರದ್ದುಗೊಳಿಸಿದೆ. 498 ಎ ಪ್ರಕರಣವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಪೀಠ ಒಪ್ಪಿಕೊಂಡರೂ ಅಂಥ ದುರುಪಯೋಗವನ್ನು ತಡೆಯಲು ಆಪರಾಧಿಕ ಕಾನೂನು ಪ್ರಕ್ರಿಯೆಯಲ್ಲಿಯೇ ಸಾಕಷ್ಟು ಅವಕಾಶಗಳಿವೆ ಎಂಬುದನ್ನು ಸಹ ಸ್ಪಷ್ಟಪಡಿಸಿದೆ. ಕಾನೂನನ್ನು ದುರ್ಬಲಗೊಳಿಸಿದರೆ, 1983 ರಲ್ಲಿ ಆಪರಾಧಿಕ ಕಾನೂನಿಗೆ ತಿದ್ದಪಡಿ ಮಾಡಿ 498ಎ ಪ್ರಕರಣವನ್ನು ಸೇರಿಸುವಾಗ ಪ್ರಕಟಿಸಿದ ‘ಉದ್ದೇಶಗಳು ಮತ್ತು ಕಾರಣಗಳ’ ಹೇಳಿಕೆಯಲ್ಲಿ ನಿರೂಪಿಸಲಾದ ಉದ್ದೇಶವೇ ವಿಫಲವಾಗುತ್ತದೆ ಎಂದು ಸಹ ಅಭಿಪ್ರಾಯ ಪಟ್ಟಿದೆ. ವರದಕ್ಷಿಣೆ ಕಿರುಕುಳದ ಅಪರಾಧದಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಇದ್ದ ಅವಕಾಶ ಮುಂದವರಿಯುತ್ತದೆ. ಅವರ ಪರವಾಗಿ ಇರುವ ಕಾನೂನನ್ನು ದುರುಪಯೋಗಪಡಿಸಿಕೊಂಡು, ಸಹಾನುಭೂತಿಯನ್ನು ಗಳಿಸಿ, ನಿರಪರಾಧಿಗಳನ್ನು ಹಿಂಸಿಸುವ ಕ್ರಮಕ್ಕೆ ಇದು ತಡೆಯೊಡ್ಡುತ್ತದೆ ಎಂದು ಸಹ ಸ್ಪಷ್ಟ ಪಡಿಸಿದೆ.

ಈಗ ಮಹಿಳೆಯರು ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ ಹಾಗೆಯೇ ತನಿಖಾಧಿಕಾರಿಗಳು ಸಹ ಹೆಚ್ಚು ಸಂವೇದನಾಶೀಲರಾಗಿ ಮತ್ತು ಹೆಚ್ಚು ಜವಾಬ್ದಾರಿಯಿಂದ ಅಂಥ ದೂರುಗಳನ್ನು ನಿಭಾಯಿಸಬೇಕಾಗಿದೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *